ಅಂಕಣಗಳು

ಬಂಗಾರದ ನೆಲದಲ್ಲಿ ರೈತರ ಪರಿಶ್ರಮಕ್ಕೆಲ್ಲಿಯ ಬರ?

ನೀರಿನ ವಿಚಾರವಾಗಿ ಯಾವುದೇ ಕಾರ್ಯಕ್ರಮ, ವಿಚಾರ ಸಂಕಿರಣ ಇರಲಿ. ಕೋಲಾರ...

ನೀರಿನ ವಿಚಾರವಾಗಿ ಯಾವುದೇ ಕಾರ್ಯಕ್ರಮ, ವಿಚಾರ ಸಂಕಿರಣ ಇರಲಿ. ಕೋಲಾರ ಜಿಲ್ಲೆಯನ್ನು ಉಲ್ಲೇಖಿಸದಿದ್ದರೆ ಅದು ಅಪೂರ್ಣ. ಹಿಂದೂ ಅಷ್ಟೇ, ಈಗಲೂ ಅಷ್ಟೇ. ಕಾರಣಗಳು ಬೇರೆಬೇರೆ. ಅವಿಭಜಿತ ಕೋಲಾರ ಜಿಲ್ಲೆ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಕೆರೆಗಳನ್ನು ಹೊಂದಿದ (2980) ಹಿರಿಮೆ ಹೊಂದಿತ್ತು. ಈಗಿನ ವಿಭಜಿತ ಕೋಲಾರ ರಾಜ್ಯದಲ್ಲಿಯೇ ಗರಿಷ್ಠ ಸಂಖ್ಯೆಯ ಕೊಳವೆ ಬಾವಿಗಳನ್ನು (29936) ಹೊಂದಿದ ಜಿಲ್ಲೆ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಅಷ್ಟು ಮಾತ್ರವಲ್ಲ, ಅಂತರ್ಜಲವನ್ನು ಇನ್ನಿಲ್ಲದಂತೆ ಬಳಸಿಕೊಂಡ ಜಿಲ್ಲೆಯೂ ಹೌದು. ಇವತ್ತು ಅಲ್ಲಿ ಸಾವಿರಾರು ಅಡಿ ಆಳ ಕೊರೆದರೂ ಒಂದು ಇಂಚು ನೀರು ಸಿಗುವುದೂ ದುಸ್ತರ. ಸಿಕ್ಕ ನೀರು ಬಳಕೆಗೆ ಯೋಗ್ಯ ಎನ್ನಲು ಬಾರದು, ಅದರಲ್ಲಿ ಫ್ಲೋರೈಡ್ ಅಂಶವೇ ಹೆಚ್ಚು. ಇದೆಲ್ಲ ಎರಡು ದಶಕಗಳಿಂದ ಆದ ಬೆಳವಣಿಗೆ. ಕೋಲಾರದ ಹೆಸರು ಕೇಳಿದಾಕ್ಷಣ ಕೆಪಿಟಿಸಿಎಲ್ ಅಧಿಕಾರಿಗಳೂ ಬೆಚ್ಚಿ ಬೀಳುತ್ತಾರೆ. ಕೃಷಿ ಬಳಕೆ ಕೊಳವೆ ಬಾವಿಗಳು ಜಾಸ್ತಿ ಇವೆ ಅಂತಾದಮೇಲೆ ನೀರಾವರಿ ಪಂಪ್‌ಸೆಟ್‌ಗಳೂ ಜಾಸ್ತಿ ಇರಲೇಬೇಕಲ್ಲ! ಕೊಳವೆ ಬಾವಿಯಲ್ಲಿ ನೀರು ಸಾವಿರಾರು ಅಡಿ ಕೆಳಗಡೆ ಇದೆ ಎಂದಮೇಲೆ ಆ ನೀರನ್ನು ಮೇಲಕ್ಕೆ ಎತ್ತಿ ಹೊಲಕ್ಕೆ ಹಾಯಿಸಲು ಭಾರಿ ಪ್ರಮಾಣದ ವಿದ್ಯುತ್ ಕೂಡ ಬೇಕಲ್ಲ. ಎಲ್ಲವೂ ಒಂದಕ್ಕೊಂದು ತಳಕು ಹಾಕಿಕೊಂಡಿರುವ ಸಂಗತಿಗಳೇ.
ಕೋಲಾರದ್ದು ಇನ್ನೊಂದು ವಿಶೇಷ ಇದೆ. ಐದು ತಾಲೂಕುಗಳನ್ನು ಒಳಗೊಂಡ ಈ ಜಿಲ್ಲೆಯಲ್ಲಿ ಯಾವ ನದಿಯೂ ಹರಿಯುವುದಿಲ್ಲ. ಆದರೂ ಪಾಲಾರ್ ಮತ್ತು ಪೆನ್ನಾರ್ (ಪಿನಾಕಿನಿ) ನದಿಗಳ ಅಚ್ಚುಕಟ್ಟು ಪ್ರದೇಶವನ್ನು ಜಿಲ್ಲೆ ಒಳಗೊಂಡಿದೆ. ಕೃಷಿಯೇ ಮುಖ್ಯ ಕಸುಬು. ಭತ್ತ, ಆಲೂಗಡ್ಡೆ, ತರಕಾರಿ, ದ್ರಾಕ್ಷಿ, ಕಬ್ಬು ಪ್ರಮುಖ ಬೆಳೆಗಳು. ಎಲ್ಲವೂ ನೀರನ್ನು ಬಹಳವಾಗಿ ಬೇಡುವಂಥವು. ಕೃಷಿ ಜಿಲ್ಲೆಯ ಜನರ ಬದುಕಾದರೆ ನೀರಾವರಿಯೇ ಕೃಷಿಯ ಜೀವಾಳ. ನದಿ ಹರಿಯದ ಜಿಲ್ಲೆಯಲ್ಲಿ, ವಾರ್ಷಿಕವಾಗಿ ಬೀಳುವ ಸರಾಸರಿ 748 ಮಿ.ಮೀ. ಮಳೆಯನ್ನೇ ನೆಚ್ಚಿಕೊಂಡ ಜಿಲ್ಲೆಯಲ್ಲಿ ಇದನ್ನು ಊಹಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಆದರೆ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಇದು. ಆವತ್ತು ಇಲ್ಲದ ನೀರಿನ ಸಮಸ್ಯೆ ಇವತ್ತು ಹುಟ್ಟಿಕೊಂಡಿದ್ದು ಹೇಗೆ? ಅದಕ್ಕೆ ಕಾರಣರು ಯಾರು? ಅಲ್ಲಿನ ಪ್ರಜ್ಞಾವಂತ ಜನರೇ ಒಪ್ಪಿಕೊಳ್ಳುತ್ತಾರೆ, 'ಇದು ನಮ್ಮದೇ ಸ್ವಯಂಕೃತ ಅಪರಾಧ'. ಅದರಲ್ಲಿ ಗುಲಗುಂಜಿಯಷ್ಟೂ ಅನುಮಾನವೇ ಇಲ್ಲ. ಅದು ಮನುಷ್ಯನ ದುರಾಸೆ ಅನ್ನುವುದಕ್ಕಿಂತ ಜಲ ಸಂರಕ್ಷಣೆಯ ಸಾಂಪ್ರದಾಯಿಕ ಪದ್ಧತಿಗಳನ್ನು ಕಡೆಗಣಿಸಿದ್ದು, ಪೃಥ್ವಿಯ ಒಡಲಿಗೆ ಹನಿ ನೀರು ಇಂಗಿಸುವ ಕುರಿತು ಚಿಂತಿಸದೇ ಭೂಗರ್ಭದಲ್ಲಿನ ಜಲವನ್ನೆಲ್ಲ ವಿವೇಚನೆ ಇಲ್ಲದೆ ಬಳಸಿಕೊಳ್ಳಲು ಮುಂದಾದದ್ದು ಇಂದಿನ ದುರಂತಕ್ಕೆ ಕಾರಣ. ಇದರ ಪರಿಣಾಮ ಏನಾಗಿದೆ ಎಂದರೆ ಜಿಲ್ಲೆಯಲ್ಲಿನ ನೈಸರ್ಗಿಕ ಜಲಚಕ್ರವೇ ಈಗ ಏರುಪೇರಾಗಿದೆ. ಜಿಲ್ಲೆಯ ಶೇ 80ರಷ್ಟು ಜಲಮೂಲ ಬರಿದಾಗಿದೆ.
ರಾಜ್ಯದ ಅಂತರ್ಜಲದ ಪ್ರಮಾಣ 485 ಟಿಎಂಸಿ ಎಂದು ಅಂದಾಜಿಸಲಾಗಿದೆ. ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಮಲೆನಾಡು ಮತ್ತು ಕರಾವಳಿಯಲ್ಲಿ ಬಳಸುತ್ತಿರುವ ಅಂತರ್ಜಲದ ಪ್ರಮಾಣ ಕಡಿಮೆ. ಉತ್ತರ ಮತ್ತು ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳ 72 ತಾಲೂಕುಗಳಲ್ಲಿ ಕೈಗಾರಿಕೆ, ಗೃಹ ಮತ್ತು ಕೃಷಿ ಬಳಕೆಗೆ ನೀರಿನ ಸಾಕಷ್ಟು ಕೊರತೆ ಇದೆ. 43 ತಾಲೂಕುಗಳಲ್ಲಿ ಅಂತರ್ಜಲ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ಬಳಕೆಯಾಗುತ್ತಿದೆ. ಉಳಿದ 23 ತಾಲೂಕುಗಳಲ್ಲಿ ಮಿತಿಮೀರಿ ಬಳಸುತ್ತಿದ್ದು, ಶೇ.50ರಷ್ಟು ಅಂತರ್ಜಲ ಖಾಲಿಯಾಗಿ ಕುಸಿತ ಕಂಡಿದೆ. ಈ 72 ತಾಲೂಕುಗಳಲ್ಲಿ ಅಂತರ್ಜಲ ಅಪಾಯದ ಮಟ್ಟ ಮುಟ್ಟಿದೆ. ಈ ತಾಲೂಕುಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದು, 7.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಇವೇ ಆಧಾರ. ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಕೊಳವೆಬಾವಿ ತೋಡಿರುವುದರಿಂದ 3 ಲಕ್ಷಕ್ಕೂ ಹೆಚ್ಚು ತೆರೆದ ಬಾವಿಗಳು ಒಣಗಿವೆ. ಈ ತಾಲೂಕುಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದಂತೆ ಹೆಚ್ಚೆಚ್ಚು ಆಳಕ್ಕೆ ಕೊಳವೆಬಾವಿ ತೋಡಲಾಗುತ್ತಿದೆ. ಫ್ಲೋರೈಡ್ ಮತ್ತಿತರ ಖನಿಜಯುಕ್ತ ನೀರು ಅನೇಕ ಕಡೆ ಹೊಸಹೊಸ ಸಮಸ್ಯೆಗಳನ್ನು ತಂದೊಡ್ಡಿದೆ.
ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಅದನ್ನು ಅವಲಂಬಿಸಿದ್ದ ಕೃಷಿ ಭೂಮಿ ಪ್ರಮಾಣವೂ ಇಳಿಮುಖಗೊಳ್ಳುತ್ತಿದೆ. ಕೊಳವೆಬಾವಿ ತೋಡಿಸುವುದು, ಮೋಟಾರ್ ಅಳವಡಿಕೆ, ವಿದ್ಯುತ್ ಸಂಪರ್ಕ ಇತ್ಯಾದಿ ವೆಚ್ಚ ಸೇರಿಸಿದರೆ ರಾಜ್ಯದ ರೈತರು ಲಭ್ಯ ಕೃಷಿ ಭೂಮಿಯಲ್ಲಿ ಅಗತ್ಯಕ್ಕಿಂತ 2 ಸಾವಿರ ಕೋಟಿ ರು.ಗಳಿಗೂ ಹೆಚ್ಚು ಹಣ ವಿನಿಯೋಗಿಸಿದ್ದಾರೆ. ಈ ಕಾರಣಕ್ಕೆ ನದಿ ಪಾತ್ರದ ನೀರಿನ ಸಮರ್ಥ ಬಳಕೆಗೆ ಹೆಚ್ಚು ಒತ್ತು ನೀಡುವ ಅನಿವಾರ್ಯತೆಯಿದೆ.
ದೇಶದ ಒಟ್ಟು ಭೌಗೋಳಿಕ ಪ್ರದೇಶದ ಶೇ. 5.81ರಷ್ಟು ಭೂ ಪ್ರದೇಶ ಹೊಂದಿರುವ ಕರ್ನಾಟಕ, 8ನೇ ದೊಡ್ಡ ರಾಜ್ಯ. ಇಲ್ಲಿನ ಇವೆಲ್ಲಕ್ಕಿಂತ ಮುಖ್ಯವಾಗಿ ಹಳೇ ಮೈಸೂರು ಪ್ರಾಂತ್ಯದಲ್ಲಿ 25 ಸಾವಿರ ಸಣ್ಣ ಕೆರೆಗಳಿವೆ. ಇದರಲ್ಲಿ ಕೋಲಾರದ ಪಾತ್ರವೇ ಹಿರಿದು. ಅವುಗಳ ಸಂರಕ್ಷಣೆ ಹಾಗೂ ಮುಂಬಯಿ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಇರುವ ಕೆರೆಗಳನ್ನು ತುಂಬಿಸಿಕೊಳ್ಳುವುದು ನಮ್ಮ ಆದ್ಯತೆಗಳಾಗಬೇಕು. ಅದಿಲ್ಲದಿದ್ದಲ್ಲಿ ನೀರಾವರಿಯ ವಿಷಯದಲ್ಲಿ ನಮ್ಮ ಭವಿಷ್ಯ ಖಂಡಿತಾ ಆತಂಕಕಾರಿ.
ಇನ್ನೊಂದು ದುರಂತದ ಬೆಳವಣಿಗೆ ಆ ಭಾಗದ ರೈತರದ್ದು. ಅನಾಯಾಸವಾಗಿ ದೊರೆಯುವ ಮಳೆ ನೀರಿನ ಕನಿಷ್ಠ ಬಳಕೆಗೂ ಯೋಚಿಸದೇ, ತಮ್ಮದೇ ನೆಲದಡಿಯ ಜಲಖಜಾನೆ ದಿವಾಳಿಯೆದ್ದು ಹೋಗುತ್ತಿದೆ ಎಂಬುದನ್ನೂ ಎಣಿಸದೇ, ರೈತರು ನೇರವಾಗಿ ಕೊಳವೆ ಬಾವಿಗಳ ರಕ್ಕಸ ಬಾಯಿಯಿಂದ ಅಂತರ್ಜಲವನ್ನು ಹೀರಿಸಿ ಹೀಗೆ ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಕೋಲಾರ, ತುಮಕೂರು ಜಿಲ್ಲೆಗಳ ಯಾವುದೇ ಹೊಲ, ಗದ್ದೆಗಳ ತಲೆಕಟ್ಟಿನಲ್ಲಿ ಪುಟ್ಟಪುಟ್ಟ ಕೃತಕ ಸರೋವರಗಳು ನಿಮ್ಮನ್ನು ಸೆಳೆಯುತ್ತವೆ. ಕೊಳವೆ ಬಾವಿಯ ಬಾಯಿಗೆ ಮೋಟಾರು ಜೋಡಿಸಿ, ಅಂತರ್ಜಲ ಹೀರಿ ಇಲ್ಲಿ ತುಂಬಿಸುತ್ತಿದ್ದಾರೆ.  
ಅರಿವಿನ ಕೊರತೆಯೋ, ಅಜ್ಞಾನವೋ, ಸಿಕ್ಕಷ್ಟನ್ನು ಬಾಚಿಕೊಂಡು ಬಿಡಬೇಕೆಂಬ ಹಪಹಪಿಯೋ, ಅಗತ್ಯಕ್ಕೆ ತಕ್ಕಷ್ಟು ನೀರು ಸಿಗದ ಅಸಹಾಯಕತೆಯೋ ಅಂತೂ ಕೃಷಿಯ ಹೆಸರಲ್ಲಿ ಅಮೂಲ್ಯ ನಿಧಿಯೊಂದರ ಕೊಳ್ಳೆಹೊಡೆಯುವ ಕೃತ್ಯ ನಿರಂತರ ನಡೆದೇ ಇದೆ. ಮುಗ್ಧ ರೈತನಿಗೆ ತನ್ನಿಂದ ಇಂಥದ್ದೊಂದು ಅಚಾತುರ್ಯ ನಡೆಯುತ್ತಿದೆ ಎಂಬುದು ಗೊತ್ತಿರದಿರಲೂ ಸಾಕು. ಆದರೆ ಮೊದಲೇ ಸೊರಗಿ ಸುಣ್ಣವಾಗಿರುವ ಈ ಜಿಲ್ಲೆಗಳ ಅಂತರ್ಜಲ ಇನ್ನಿಲ್ಲದಂತೆ ಬರಿದಾಗುತ್ತಿರುವುದು ವಾಸ್ತವ.
ಇಲ್ಲಿ ರೈತನೊಬ್ಬನನ್ನೇ ಆರೋಪಕ್ಕೆ ಗುರಿಮಾಡಲಾಗದು. ಅಗತ್ಯಕ್ಕೆ ತಕ್ಕ ನೀರು ಬೇಕೆಂದಾಗ ಸಿಗದಿದ್ದರೆ ಆತನಾದರೂ ಏನು ಮಾಡಿಯಾನು? ಕೊಳವೆಬಾವಿಗಳು ತಮ್ಮ ಆಳವನ್ನು ಹೆಚ್ಚಿಸಿಕೊಳ್ಳುತ್ತಿರುವಾಗಲೇ ವಿದ್ಯುತ್ ಎಂಬ ಮರೀಚಿಕೆ ರೈತರಿಂದ ದೂರದೂರ ಓಡುತ್ತಲೇ ಇದೆ. ಸರಕಾರಗಳು ಬದಲಾದಂತೆಲ್ಲ ಭರವಸೆಗಳ ವರಸೆ ಹೆಚ್ಚುತ್ತಿದೆಯೇ ವಿನಃ ಪರ್ಯಾಯ ಮಾರ್ಗಗಳ ದರ್ಶನವಂತೂ ರೈತರಿಗೆ ಆಗುತ್ತಿಲ್ಲ. ಪ್ರತಿ ಬಾರಿಯೂ ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್, ಸಾಲ ಮನ್ನಾದಂಥ ಆಮಿಷಗಳು ರೈತನ ದುಡಿಮೆಯ ಮನೋಭಾವವನ್ನು ಕಸಿಯುತ್ತಿವೆ. ಇದರ ಪರಿಣಾಮ ಪಾರಂಪರಿಕ ರೈತ ವರ್ಗದಲ್ಲಿದ್ದ ಕ್ರಿಯಾಶೀಲ ಕಸಬುದಾರಿಕೆ ಗಂಟುಮೂಟೆಯೊಂದಿಗೆ ಪಲಾಯನ ಮಾಡುತ್ತಿದೆ.
ಮೊದಲೆಲ್ಲ ನಿಯಮಿತ ವಿದ್ಯುತ್ ಸರಬರಾಜಿರುತ್ತಿತ್ತು. ಅಂತರ್ಜಲ ಮಟ್ಟವೂ ಸಾಕಷ್ಟಿತ್ತು. ಹೀಗಾಗಿ ಬೇಕೆಂದಾಗ ರೈತರು ಕೊಳವೆ ಬಾವಿಗಳಿಗೆ ಮೋಟಾರು ಹಚ್ಚಿ, ನೀರು ಮೇಲೆತ್ತಿ ಕೃಷಿ ಮಾಡುತ್ತಿದ್ದರು. ಈಗ ಆ ಪರಿಸ್ಥಿತಿ ಉಳಿದಿಲ್ಲ. ನೀರೂ ಇಲ್ಲ. ಕರೆಂಟಂತೂ ಮಾಯಾಜಿಂಕೆ. ಹೀಗಾಗಿ ಅವರು ಪರ್ಯಾಯ ಮಾರ್ಗವಾಗಿ ಇಂಥ ಕೃತಕ 'ಕಟ್ಟೆ'ಗಳ ಮೊರೆ ಹೋದರು. ಸಿಮೆಂಟ್, ಕಲ್ಲು, ಮಣ್ಣು ಬಳಸಿ ಕಟ್ಟುವ ಟ್ಯಾಂಕ್‌ಗಳಿಗೆ ಪೈಪ್ ಜೋಡಿಸಿದರು. ಮೋಟಾರ್ ಮೂಲಕ ಅಲ್ಲಿಗೆ ನೀರು ತುಂಬಿಸತೊಡಗಿದರು. ವಿದ್ಯುತ್ ಅನಿಶ್ಚಿತತೆ ಆರಂಭವಾಗುತ್ತಿದ್ದಂತೆ ಪುರುಸೊತ್ತಾದಾಗ ಪಂಪ್ ಆನ್ ಮಾಡಿ ಬಂದು ಬಿಡುವ ಅಭ್ಯಾಸ ರೂಢಿಸಿಕೊಂಡರು.
ರಾತ್ರಿ ಯಾವಾಗಲೋ ಕರೆಂಟ್ ಬಂದಾಗ, ವೋಲ್ಟೇಜ್ ಇದ್ದಾಗ ನೀರು ತುಂಬಿಕೊಳ್ಳುತ್ತದೆ. ಮಾತ್ರವಲ್ಲ ರೈತ ಪುನಃ ಹೊಲದತ್ತ ಬಂದು ಮೋಟಾರ್ ಬಂದ್ ಮಾಡುವವರೆಗೂ ನೀರು ಪೋಲಾಗುತ್ತಲೇ ಇರುತ್ತದೆ. ಎಷ್ಟು ಸಾಧ್ಯವೋ ಅಷ್ಟು ನೀರು ಹಿಡಿದಿಟ್ಟುಕೊಳ್ಳಬೇಕೆಂಬ ಆತುರದಲ್ಲಿ ಇಂಥ ಟ್ಯಾಂಕ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ನೀರನ್ನು ಹೀರುವ ಪ್ರವೃತ್ತಿ ಸಾಮೂಹಿಕವಾಗಿ ಮುಂದುವರಿಯುತ್ತಿದೆ. ಮೊದಮೊದಲು ಮಣ್ಣಿನಲ್ಲಿ ಕಟ್ಟುತ್ತಿದ್ದ ತಾತ್ಕಾಲಿಕ ತೊಟ್ಟಿಗಳಲ್ಲಿ ರಾತ್ರಿಯೆಲ್ಲ ತುಂಬಿದ್ದ ನೀರು ಬಿಸಿಲೇರುತ್ತಿದ್ದಂತೆ ಇಂಗಿಹೋಗುತ್ತಿತ್ತು. ಹೀಗಾಗಿ ಅವು ಶಾಶ್ವತ ಕಾಂಕ್ರೀಟ್ ಸ್ವರೂಪ ಪಡೆಯುತ್ತಿವೆ. ಪಾತಾಳದಿಂದ ನೀರೆತ್ತುವುದನ್ನು ಪರಂಪರೆಯಾಗಿಸಿಕೊಂಡಿರುವ ರೈತ ವರ್ಗ ಇದೀಗ ಸಾಕಷ್ಟು ಮಳೆ ಬಿದ್ದರೂ ಅದನ್ನು ಕೃಷಿ ಹೊಂಡಗಳ ಮೂಲಕ ಸಂರಕ್ಷಿಸುವುದನ್ನು ಮರೆತುಬಿಟ್ಟಿದೆ. 'ಹೇಗೂ ಕೊಳವೆಬಾವಿಗಳಿವೆ' ಎಂಬ ಉಡಾಫೆಯಲ್ಲಿ ಕೆರೆಗಳೂ ಅಸ್ತಿತ್ವ ಕಳೆದುಕೊಂಡಿವೆ. ಕೊಳವೆ ಬಾವಿಗಳ ಪಕ್ಕದಲ್ಲಿ ಇರುತ್ತಿದ್ದ ಇಂಗು ಗುಂಡಿಗಳ ಜಾಗವನ್ನು ಇಂಥ 'ಟ್ಯಾಂಕ್‌'ಗಳು ಆಕ್ರಮಿಸಿಕೊಂಡಿವೆ. ಹೀಗಾಗಿ ಜಮೀನಲ್ಲಿ ಹತ್ತು ಬೋರ್‌ಗಳಿದ್ದರೆ, ಹತ್ತು ಟ್ಯಾಂಕ್‌ಗಳೂ ಇರಲೇಬೇಕೆಂಬುದು ಕಡ್ಡಾಯವಾಗಿಬಿಟ್ಟಿದೆ.
ಎತ್ತರದ ಪ್ರದೇಶದಲ್ಲಿ ಕಟ್ಟುವ ಇಂಥ ತೊಟ್ಟಿಗಳಿಂದ ಹಗಲಿನ ವೇಳೆ ಬೆಳೆಗಳಿಗೆ ನೀರು ಹಾಯಿಸಲಾಗುತ್ತದೆ. ಕೆಲವೆಡೆ ಮತ್ತೆ ಅದಕ್ಕೆ ವಿದ್ಯುತ್ ಮೋಟಾರ್ ಜೋಡಿಸಿರುವುದೂ ಉಂಟು. ಒಟ್ಟಾರೆ ಬೆಳೆ ಪದ್ಧತಿ, ಪರ್ಯಾಯ ಕೃಷಿಗೆ ಬದಲಾಗಿ ರೈತ ತನ್ನ ಮೂಗಿನ ನೇರಕ್ಕೆ ಕಸುಬನ್ನು ರೂಢಿಸಿಕೊಳ್ಳುತ್ತಿದ್ದಾನೆ. ಸಾಧ್ಯವಾದಷ್ಟು ತನ್ನ ಜಮೀನಿನಲ್ಲಿ ನೀರಿಂಗಿಸಿಕೊಂಡು ಹಸನು ಮಾಡಿಕೊಳ್ಳಲು ಯೋಚಿಸುತ್ತಿದ್ದ ರೈತ ಅದಕ್ಕೆ ವಿರುದ್ಧವಾಗಿ ಸಾಧ್ಯವಾ ದಷ್ಟು ನೀರನ್ನು ಮೇಲೆತ್ತಿ ಒಣಗಿಸುತ್ತಿದ್ದಾನೆ. ಕೆರೆಗಳ ಮೂಲಕ ಅಂತರ್ಜಲ ಹೆಚ್ಚಿಸುತ್ತಿದ್ದ ಅದೇ ವರ್ಗ ಇದೀಗ ಇಂಥ ಕೃತಕ ಕೆರೆಗಳ ಮೂಲಕ ಅದನ್ನು ಬರಿದಾಗಿಸುತ್ತಿದೆ. ಅಗತ್ಯ ಸೇವೆಗಳ ಮೌಲ್ಯ ಅರಿಯ ದಾದಾಗ ಏನಾಗಬಹುದೋ ಅದಾಗುತ್ತಿದೆ. ಇಷ್ಟಾದರೂ ಸರಕಾರಗಳು ವಿದ್ಯುತ್ ರಿಯಾಯಿತಿ, ಸಾಲ ಮನ್ನಾದ ಮಾತು ಮುಗಿಸಿಲ್ಲ. ಜತೆಗೆ ದಿನಕ್ಕೊಬ್ಬ 'ತಜ್ಞರು' ಕೊಡುವ ನದಿ ತಿರುವಿನಂಥ ಸಲಹೆ ಜನರನ್ನು ದಿಕ್ಕು ತಪ್ಪಿಸುತ್ತಿವೆ.
ಹಿಂದೆ ಜನ ಮಳೆ ಆಧಾರಿತ ನೀರಾವರಿ ಅವಲಂಬಿಸಿದ್ದರು. ಕೆರೆ, ಕೊಳ, ತೆರೆದ ಬಾವಿಗಳಲ್ಲಿ ನೀರು ಇಂಗಿಸುತ್ತಿದ್ದರು. ಇದರಿಂದ ಅಂತರ್ಜಲ ಶ್ರೀಮಂತವಾಗಿತ್ತು. ಸಾಕಷ್ಟು ಪ್ರಮಾಣದಲ್ಲಿದ್ದ ತೊರೆಗಳೂ ಸಮೃದ್ಧಿಯಿಂದ ಕೂಡಿರುತ್ತಿದ್ದವು. ಮಳೆಯ ಚಕ್ರಕ್ಕೆ ಅನುಗುಣವಾಗಿ ಜಲಚಕ್ರವನ್ನು ಬಳಸಿಕೊಳ್ಳುವ ವಿಧಾನ ಜನರಿಗೆ ಗೊತ್ತಿತ್ತು. ಮಳೆಗಾಲದಲ್ಲಿ ತೊರೆಗಳ ನೀರನ್ನು ಧಾರಾಳವಾಗಿ ಬಳಸಿಕೊಂಡರೆ, ಉಳಿದ ಅವಧಿಯಲ್ಲಿ ತೆರೆದ ಬಾವಿ, ಕೊಳ, ಕೆರೆಗಳನ್ನು ನೀರಾವರಿ ಮೂಲವಾಗಿ ಬಳಸಿಕೊಳ್ಳುತ್ತಿದ್ದರು. ಮುಖ್ಯವಾಗಿ ನೀರಿನ ಲಭ್ಯತೆಗೆ ತಕ್ಕಂತೆ ಬೆಳೆ ಪದ್ಧತಿ ಇತ್ತು. ಹೀಗಾಗಿ ಪ್ರಕೃತಿಯಲ್ಲಿ ಯಾವುದೇ ತೆರನಾದ ಅಸಮತೋಲನ ಇರಲಿಲ್ಲ. ಕುಡಿಯುವ ಉದ್ದೇಶವಿರಲಿ, ನೀರಾವರಿಗೇ ಆಗಿರಲಿ. ನೀರಿನ ಲಭ್ಯತೆಯು ಅಗತ್ಯಕ್ಕಿಂತಲೂ ಹೆಚ್ಚೇ ಇತ್ತು. ಕಾಲಕಳೆದಂತೆ ಅರಣ್ಯ ಭೂಮಿಯೂ ಕೃಷಿ ಭೂಮಿಯಾಗಿ ಪರಿವರ್ತನೆಯಾಯಿತು. 1980ರ ದಶಕದಲ್ಲಿ ಕೊಳವೆಬಾವಿಗಳು ದಾಂಗುಡಿ ಇಟ್ಟವು. ಶುರುವಿನಲ್ಲಿ ಧಾರಾಳವಾಗಿ ನೀರೂ ಸಿಕ್ಕಿತು. ರಾಷ್ಟ್ರೀಕೃತ ಬ್ಯಾಂಕುಗಳೂ ಪಂಪ್‌ಸೆಟ್ ಖರೀದಿಸಲು ರೈತರನ್ನು ಕರೆದುಕರೆದು ಸಾಲ ಕೊಟ್ಟವು. ಅಧಿಕ ಇಳುವರಿ ಕನಸಿನ ಬೆನ್ನು ಹತ್ತಿದ ರೈತರು ಭೂಮಿಯ ದಾಹವನ್ನೂ ಇಂಗಿಸಬೇಕು ಎನ್ನುವ ಪ್ರಜ್ಞೆಯನ್ನೇ ಕಳೆದುಕೊಂಡುಬಿಟ್ಟರು. ತೆರೆದ ಬಾವಿಗಳು ಬತ್ತತೊಡಗಿದವು. ಅತ್ತ ಅರಣ್ಯ ಪ್ರಮಾಣ ಕಡಿಮೆಯಾದ್ದರಿಂದ ಮಳೆಯೂ ಕಡಿಮೆಯಾಗಿ ಬರದ ಛಾಯೆ ಆವರಿಸತೊಡಗಿತು. ಮಳೆ ನೀರು ಸಂಗ್ರಹಿಸುವ ಪರಿಕಲ್ಪನೆ ಹೆಚ್ಚೂಕಡಿಮೆ ಮರೆಯಾಗಿ ಹೋಯಿತು. ಮಳೆಯಿಂದ ಬೀಳುವ ಅಲ್ಪಪ್ರಮಾಣದ ಮಳೆ ನೀರನ್ನಾದರೂ ಇಂಗಿಸುವ, ಹಿಡಿದಿಟ್ಟುಕೊಳ್ಳುವ ಪ್ರಯತ್ನಗಳನ್ನೂ ಮಾಡಲಿಲ್ಲ.
ಹಾಗಂತ ಏನು ಮಾಡಲೂ ಸಾಧ್ಯವೇ ಇಲ್ಲ ಎನ್ನುವಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿಲ್ಲ. ಪ್ರಕೃತಿಯನ್ನು ಮಾತೆ ಎನ್ನುವುದು ಇದಕ್ಕೇ. ಎಷ್ಟೇ ಶೋಷಿಸಿದರೂ 'ಇವರೆಲ್ಲರೂ ನನ್ನ ಮಕ್ಕಳೇ' ಎನ್ನುವ ಮಮಕಾರ ಅವಳಿಗೆ. ಅರಣ್ಯೀಕರಣದತ್ತ ಗಮನ ಕೊಟ್ಟರೆ, ಮಳೆ ನೀರು ಕೊಯ್ಲಿನಂಥ ಸಾಂಪ್ರದಾಯಿಕ ವ್ಯವಸ್ಥೆಗೆ ಜೀವ ತುಂಬಿದರೆ(ಕಡೇಪಕ್ಷ ಒಂದು ಎಕರೆ ಜಮೀನಿನಲ್ಲಿ ಎರಡು ಗುಂಟೆಯನ್ನಾದರೂ ಇದಕ್ಕಾಗಿ ಮೀಸಲಿಡುವುದು ಸೂಕ್ತ), ಕೊಳವೆ ಬಾವಿ ಮೇಲಿನ ಅವಲಂಬನೆ ಕಡಿಮೆ ಮಾಡಿ ಕೆರೆ, ಕೊಳ, ತೆರೆದ ಬಾವಿಗಳನ್ನು ಆಶ್ರಯಿಸಿದರೆ ಅಂತರ್ಜಲ ಹೆಚ್ಚಿಸುವುದು ಕಷ್ಟವೇನಲ್ಲ. ಇದರ ಜತೆಯಲ್ಲೇ ರೈತರ ಮನೋಭಾವವೂ ಬದಲಾಗಬೇಕು. ವೈಯಕ್ತಿಕ ನೀರಾವರಿಗೆ ಬದಲಾಗಿ ಕೆರೆ, ಕೊಳಗಳ ಅಚ್ಚುಕಟ್ಟು ಪ್ರದೇಶದಲ್ಲಿ ಕೇಂದ್ರೀಕೃತ ಸಾಮೂಹಿಕ ನೀರಾವರಿ ವ್ಯವಸ್ಥೆಯತ್ತ ಒಲವು ತೋರಿದರೆ ಪರಿಸ್ಥಿತಿ ನಿಧಾನವಾಗಿಯಾದರೂ ಸುಧಾರಿಸಿಕೊಳ್ಳುತ್ತದೆ.
ಹಾಗಂತ ಉಳಿದ ಜಿಲ್ಲೆಗಳ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಅಂತಲ್ಲ. ಜಲಕೊಯ್ಲಿನ ಸಾಂಪ್ರದಾಯಿಕ ವಿಧಾನಗಳನ್ನು ಕಡೆಗಣಿಸುತ್ತಿರುವುದರಿಂದ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಅಭಾವ ಕಾಣಿಸಿಕೊಳ್ಳತೊಡಗಿದೆ. ಕೋಲಾರದ ಪರಿಸ್ಥಿತಿ ರಾಜ್ಯದ ಇತರ ಜಿಲ್ಲೆಗಳಿಗೆ ಎಚ್ಚರಿಕೆಯ ಗಂಟೆಯೂ ಹೌದು. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಇಡೀ ರಾಜ್ಯ ಜಲಕ್ಷಾಮಕ್ಕೆ ತುತ್ತಾಗುವುದರಲ್ಲಿ ಸಂದೇಹವೇ ಇಲ್ಲ.

-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!