ಇದ್ಯಾವ ಪರಿ ಚಳಿ ಅಂತೀರಿ!?
ರಷ್ಯಾದ ವಾಯುವ್ಯ ಮೂಲೆಯಲ್ಲಿರುವ ಸೇಂಟ್ ಪೀಟರ್ಸ್‌ಬರ್ಗ್‌ನ ಪುಲ್ಕೋವೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಚಳಿ ಕೆನ್ನೆ ಸವರಿಕೊಂಡು ಹೋದಾಗ ನರನಾಡಿಗಳಲ್ಲೆಲ್ಲ ಒಂದು ಕ್ಷಣ ತಂಡಿ ತಂಡಿ. ಬೆಂಗಳೂರಿನ ಮಳೆ, ದಿಲ್ಲಿಯ ಸೆಖೆಯನ್ನು ದಾಟಿ ರಷ್ಯಾದ ಚಳಿಗೆ ಮೈಯೊಡ್ಡಿದಾಗ ಎರಡು ದಿನಗಳಲ್ಲಿ ಮೂರೂ ಕಾಲ (ಮಳೆ, ಬೇಸಗೆ, ಚಳಿ) ಗಳನ್ನು ನೋಡಿದ ಅನುಭವವಾಯಿತು. ವಿಮಾನ ಇಳಿಯುವುದಕ್ಕೆ ಮೊದಲೇ ಪೈಲಟ್ ಚಳಿಯ ತೀಕ್ಷ್ಣತೆಯ ಸುಳಿವನ್ನು ನೀಡಿದ್ದ. ಆದರೆ ಅದು ಮೂಳೆಗಳನ್ನೂ ಅಟಕಾಯಿಸುವ ಚಳಿ ಎಂಬುದು ಕೆಲ ಕ್ಷಣಗಳಲ್ಲೇ ಮನವರಿಕೆಯಾಯಿತು.
ಸಾಮಾನ್ಯವಾಗಿ ಯಾವುದೇ ದೇಶಕ್ಕೆ ಹೋದಾಗ ಹೂವು, ಹೂಗುಚ್ಛ ಅಥವಾ ಹೂ ಮಾಲೆಗಳಿಂದ ಬರಮಾಡಿಕೊಳ್ಳುವುದು ಸಂಪ್ರದಾಯ. ಸೇಂಟ್ ಪೀಟರ್ಸ್‌ಬರ್ಗ್ ವಿಮಾನ ನಿಲ್ದಾಣದಲ್ಲಿ ಸ್ವಾಗತಕಾರ್ತಿ ಹೂವಿನೊಂದಿಗೆ ಬಿಸಿ ನೀರಿನ ಬಾಟಲಿಯನ್ನೂ ಕೈಗಿತ್ತಳು. 'ಇದು ಕುಡಿಯುವುದಕ್ಕಲ್ಲ. ಎರಡು ನಿಮಿಷ ಕೈಯಲ್ಲಿ ಹಿಡಿದುಕೊಳ್ಳಿ. ಚಳಿಯಿಂದ ರಿಲೀಫ್ ಸಿಗುತ್ತದೆ' ಅಂದಳು. ಆ ಬಿಸಿ ಬಾಟಲಿಯನ್ನು ಎರಡೂ ಕೈಗಳಿಂದ ಮೂರ್ನಾಲ್ಕು ನಿಮಿಷ ಮುದ್ದಾಡಿದೆ. ನನ್ನಂತೆ ಉಳಿದವರೂ ಅದೇ ರೀತಿ ಬಾಟಲಿಯ ಮೈಸವರುತ್ತಿದ್ದರು. ಆಕೆ ಹೇಳಿದಂತೆ ತುಸು ರಿಲೀಫ್ ಸಿಕ್ಕಿತು.
ಪ್ರಧಾನ ಮಂತ್ರಿಯವರ ವಿಶೇಷ ವಿಮಾನದಲ್ಲಿ ದಿಲ್ಲಿಯಿಂದ ಬೆಳಗ್ಗೆ ಹತ್ತು ಗಂಟೆಗೆ ಹೊರಟು ಸೇಂಟ್ ಪೀಟರ್ಸ್‌ಬರ್ಗ್ ತಲುಪಿದಾಗ ಸ್ಥಳೀಯ ಕಾಲಮಾನದಂತೆ ರಾತ್ರಿ ಎಂಟೂಕಾಲು ಗಂಟೆಯಾಗಿತ್ತು. ರಾತ್ರಿ ಒಂಭತ್ತುಮುಕ್ಕಾಲು ಎಂದು ನನ್ನ ವಾಚು ಭಾರತದ ಟೈಮ್‌ನ್ನೇ ತೋರಿಸುತ್ತಿತ್ತು. ನಮಗೂ ಇಲ್ಲಿಗೂ ಒಂದೂವರೆ ಗಂಟೆ ವ್ಯತ್ಯಾಸ. ದಿಲ್ಲಿಯಿಂದ ವಿಮಾನದಲ್ಲಿ ಸುಮಾರು ಏಳು ತಾಸು ದೂರ. ಜಿ-20 ಶೃಂಗಸಭೆಗೆ ಇಡೀ ನಗರ ತೆರೆದುಕೊಂಡಿದೆಯೆಂಬುದನ್ನು ವಿಮಾನ ನಿಲ್ದಾಣದಲ್ಲೇ ನೋಡಬಹುದಾಗಿತ್ತು. ಬೇರೆ ಬೇರೆ ದೇಶಗಳ ನಾಯಕರು ಆಗಮಿಸಲಾರಂಭಿಸಿದ್ದರು.
ಸೇಂಟ್ ಪೀಟರ್ಸ್‌ಬರ್ಗ್ ಬಹಳ ಸುಂದರವಾದ ನಗರ. ರಷ್ಯಾದ ಸೊಗಡನ್ನು ನೋಡಬೇಕೆಂದರೆ ಈ ಊರನ್ನು ನೋಡಬೇಕು. ಯುರೋಪಿಗೆ ತಾಗಿಕೊಂಡಿರುವ ಈ ನಗರ ಭೌಗೋಳಿಕವಾಗಿಯೂ ಅತಿ ವಿಶಿಷ್ಟವಾಗಿದೆ. ಮಗ್ಗುಲಲ್ಲಿ ಫಿನ್‌ಲ್ಯಾಂಡ್ ಹಾಗೂ ಎಸ್ತೋನಿಯಾ, ಸ್ಕ್ಯಾಂಡಿನೇವಿಯಾ ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಚಳಿಗೆ ಕೊರತೆಯಿಲ್ಲ. ಒಂದೆಡೆ ನೆವಾ ನದಿ. ಇನ್ನೊಂದೆಡೆ ಬಾಲ್ಟಿಕ್ ಸಮುದ್ರ. ಎಲ್ಲಿ ನೋಡಿದರಲ್ಲಿ ಪ್ರಾಚೀನ, ಆಕರ್ಷಕ ಕಟ್ಟಡಗಳು. ಇದನ್ನು ಮ್ಯೂಸಿಯಮ್ಮುಗಳ ನಗರಿ ಅಂತಾನೂ ಕರೆಯುತ್ತಾರೆ. ಈ ಊರಲ್ಲಿ ಜಗತ್ತಿನಲ್ಲಿ ಬೇರ್ಯಾವ ದೇಶಗಳಲ್ಲೂ ಇಲ್ಲದಷ್ಟು ಮ್ಯೂಸಿಯಮ್ಮುಗಳಿವೆ. ಇಲ್ಲಿನ ಎರಡು ನೂರು ಮ್ಯೂಸಿಯಮ್ಮುಗಳನ್ನು ನೋಡಲು ಒಂದು ವರ್ಷವಾದರೂ ಬೇಕು. ರಷ್ಯಾದಲ್ಲಿಯೇ ಸೇಂಟ್ ಪೀಟರ್ಸ್‌ಬರ್ಗ್‌ಗೆ ಅತ್ಯಂತ ಮಹತ್ವದ ಸ್ಥಾನ. ಇದನ್ನು ಸಾಂಸ್ಕೃತಿಕ ನಗರಿ, ಬುದ್ಧಿಜೀವಿಗಳ ತವರೂರು, ಕಲಾವಿದರ ಬೀಡು, ಸಾಹಿತಿ, ಬರಹಗಾರರು, ಚಿಂತಕರ ಚಾವಡಿ ಎಂದೆಲ್ಲಾ ಕರೆಯುತ್ತಾರೆ. ಖ್ಯಾತ ಸಾಹಿತಿ, ದಾರ್ಶನಿಕ ದಾಸ್ತೊಯೆವ್‌ಸ್ಕಿ ಈ ಊರನ್ನು The most abstract and intentional city in the world ಎಂದು ಬಣ್ಣಿಸಿದ್ದಾನೆ. ಮೂಲತಃ ಸೇಂಟ್ ಪೀಟರ್ಸ್‌ಬರ್ಗ್ ರಷ್ಯಾದ ರಾಜಧಾನಿಯಾಗಿತ್ತು. ಆದರೆ ಭೌಗೋಳಿಕ ಕಾರಣಗಳಿಂದ ರಾಜಧಾನಿಯನ್ನು ಮಾಸ್ಕೋಗೆ ವರ್ಗಾಯಿಸಲಾಯಿತು. ರಷ್ಯಾದಲ್ಲಿ ಮಾಸ್ಕೋ ನಂತರ ಅತ್ಯಂತ ದೊಡ್ಡ ನಗರವೆಂದರೆ ಇದೇ. ಈಗಲೂ ಪಶ್ಚಿಮದ ಬುದ್ಧಿಜೀವಿಗಳು ಸೇಂಟ್ ಪೀಟರ್ಸ್‌ಬರ್ಗ್‌ನ್ನು 'ಯೂರೋಪಿನ ಸಾಂಸ್ಕೃತಿಕ ಕೇಂದ್ರ' ಎಂದು ಕರೆಯುತ್ತಾ ಈ ಊರನ್ನು ಭಾವನಾತ್ಮಕವಾಗಿ ತಮ್ಮದಾಗಿ ಮಾಡಿಕೊಳ್ಳುವ, ಈ ಊರಿನೊಂದಿಗೆ ಥಳಕು ಹಾಕಿಕೊಂಡು ಭುಜ ಕುಣಿಸಿ ಹೆಮ್ಮೆ ಪಡುತ್ತಾರೆ. ರಷಿಯನ್ನರು ಈ ಊರನ್ನು most western, truly European city ಎಂದು ಅರ್ಧಗೇಲಿ, ಅರ್ಧ ಅಭಿಮಾನದಿಂದ ಹೇಳುವುದುಂಟು. ಈ ಊರು ಲೆನಿನ್‌ಗ್ರಾಡ್, ಪೆಟ್ರೋಗ್ರಾಡ್ ಎಂದೂ ಕರೆಯಿಸಿಕೊಂಡಿತ್ತು.
ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ವೈಜ್ಞಾನಿಕವಾಗಿ, ಸಾಹಿತ್ಯಿಕವಾಗಿ ಹೀಗೆ ಯಾವುದೇ ಕ್ಷೇತ್ರವಿರಬಹುದು. ಆ ಎಲ್ಲ ಕ್ಷೇತ್ರಗಳಲ್ಲಿ ರಷ್ಯಾವನ್ನು ಶ್ರೀಮಂತಗೊಳಿಸಿದ, ಅಂತಾರಾಷ್ಟ್ರೀಯ ಸ್ತರಗಳಲ್ಲಿ ಹೆಸರು ಮಾಡಿದ ದಿಗ್ಗಜರ ಪೈಕಿ ಹಲವರ ಊರು ಈ ಸೇಂಟ್ ಪೀಟರ್ಸ್‌ಬರ್ಗ್ ಎಂಬುದು ಗಮನಾರ್ಹ. ರಷ್ಯಾದ ಕ್ರಾಂತಿಕಾರಿ ನಾಯಕ ಲೆನಿನ್, ಸದ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಹಾಲಿ ಪ್ರಧಾನ ಮಂತ್ರಿ ಡಿಮಿಟ್ರಿ ಮೆಡ್ವಡೆವ್, ಖ್ಯಾತ ಕವಿ, ಸಾಹಿತಿಗಳಾದ ಮಯಕೋನ್‌ಸ್ಕಿ, ದಾಸ್ತೊಯೆವ್‌ಸ್ಕಿ, ಅಲೆಕ್ಸಾಂಡರ್ ಬ್ಲೋಕ್, ಅನ್ನಾ ಅಕ್ಮಾತೋವ್, ವ್ಲಾದಿಮಿರ್ ನಚೋಕೋವ್, ನಿಕೋಲಾಯ್ ಗೊಗೊಲ್, ಜೋಸೆಫ್ ಬ್ರಾಡ್‌ಸ್ಕಿ, ಅಲೆಕ್ಸಾಂಡರ್ ಪುಷ್ಕಿನ್, ಆಲ್‌ಫ್ರೆಡ್ ನೊಬೆಲ್, ನಿಕೋಲಾಯ್ ಲೆಸ್ಕೋವ್ ಮುಂತಾದ ಧೀಮಂತರೆಲ್ಲ ಸೇಂಟ್ ಪೀಟರ್ಸ್‌ಬರ್ಗ್‌ನವರೇ. ನಮ್ಮ ಧಾರವಾಡದಂತೆ ಈ ಊರಲ್ಲಿ ಎಲ್ಲಿಯೇ ಕಲ್ಲು ತೂರಿದರೂ, ಅದು ಸಾಹಿತಿ, ಕವಿ, ಕಲಾವಿದ, ಶಿಲ್ಪಿ, ಬಡಗಿ, ಕಾದಂಬರಿಕಾರ, ಬುದ್ಧಿಜೀವಿ, ಚಿಂತಕನಿಗೆ ತಾಕುತ್ತದೆ. ಕ್ರೀಡೆ, ಕಲೆ, ಬಾಹ್ಯಾಕಾಶ, ಪ್ರಾಣಿಶಾಸ್ತ್ರ, ಉದ್ಯಮ... ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ. ಜಗತ್ತಿನಲ್ಲಿ ಹೆಸರು ಮಾಡಿದವರು ಈ ಊರಿನ ಜತೆ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧವನ್ನು ಹೊಂದಿದ್ದಾರೆ.
'ಇನ್ನೂ ಊರೊಳಗೆ ಕಾಲಿಟ್ಟಿಲ್ಲ, ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸೇಂಟ್ ಪೀಟರ್ಸ್‌ಬರ್ಗ್ ಬಗ್ಗೆ ಬರೆಯಲಾರಂಭಿಸಿದನಲ್ಲ' ಎಂದು ನೀವು ಅಂದುಕೊಳ್ಳುವ ಅಪಾಯವಿರುವುದರಿಂದ, ಮೊದಲೇ ಒಂದು ಸಂಗತಿಯನ್ನು ಸ್ಪಷ್ಟಪಡಿಸುವುದು ಒಳ್ಳೆಯದು. ಅದೇನೆಂದರೆ ನಾನು ಈ ಊರಿಗೆ ಬರುತ್ತಿರುವುದು ಇದು ಮೂರನೇ ಬಾರಿಗೆ. ಎಂಟು ವರ್ಷಗಳ ಹಿಂದೆ ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಜತೆ ಸೇಂಟ್ ಪೀಟರ್ಸ್‌ಬರ್ಗ್‌ಗೆ ಬಂದಿದ್ದೆ. ಅದಾದ ಮೂರು ವರ್ಷಗಳ ನಂತರ ಫಿನ್‌ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಗೆ ಹೋಗುವಾಗ ಸಹ ಬಂದಿದ್ದೆ. ರಷ್ಯಾದ ಮಾಸ್ಕೋಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ. ಕಲಾಂ ಅವರು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಎರಡು ದಿನಗಳ ಕಾಲ ತಂಗಿದ್ದರು. ಅಲ್ಲಿ ಅವರಿಗೆ ಯಾವುದೇ ಅಧಿಕೃತ ಕಾರ್ಯಕ್ರಮವಿರಲಿಲ್ಲ. ದ್ವಿಪಕ್ಷೀಯ ಮಾತುಕತೆ, ಒಪ್ಪಂದಕ್ಕೆ ಸಹಿ, ರಾಷ್ಟ್ರಾಧ್ಯಕ್ಷ, ಪ್ರಧಾನಿ ಜತೆ ಮಾತುಕತೆ, ಔತಣಕೂಟ... ಇತ್ಯಾದಿ ಯಾವ ಕಾರ್ಯಕ್ರಮಗಳೂ ಇರಲಿಲ್ಲ. ಮ್ಯೂಸಿಯಮ್ಮು, ಸ್ಮಾರಕಗಳಿಗೆ ಭೇಟಿ ಕೊಡುವುದಕ್ಕಷ್ಟೇ ತಮ್ಮ ಭೇಟಿಯನ್ನು ಮಿತಿಗೊಳಿಸಿಕೊಂಡಿದ್ದರು. ಅದು ಅವರ ಅದಮ್ಯ ಬಯಕೆಗಳಲ್ಲೊಂದಾಗಿತ್ತು. ಎರಡು ದಿನಗಳ ಅವಧಿಯಲ್ಲಿ ಅವರಿಗೆ ನೋಡಲು ಸಾಧ್ಯವಾಗಿದ್ದು ಬರೀ ಮೂರು ಮ್ಯೂಸಿಯಮ್ಮುಗಳು ಮಾತ್ರ. ಒಂದು ಕಟ್ಟಡದೊಳಗೆ ಐದಾರು ಕಿ.ಮೀ ನಡೆದರೂ ನೋಡಿ ಮುಗಿಯುವುದಿಲ್ಲ. ಪ್ರತಿಯೊಂದು ಕಲಾಕೃತಿಯೂ ಅಮೂಲ್ಯ, ಬೆಲೆ ಕಟ್ಟಲು ಆಗದಂಥವು. ಯಾವ ಕಲಾಕೃತಿಯನ್ನೂ ಸುಮ್ಮನೆ ನೋಡಿ ಹೋಗಲಾಗುವುದಿಲ್ಲ. ಕನಿಷ್ಠ ಐದು ನಿಮಿಷಗಳಾದರೂ ನೋಡಬೇಕು. ಗೈಡ್‌ಗಳು ಹೇಳಿದ್ದಕ್ಕೆ ಕಿವಿಯಾಗಬೇಕು. ಆದರೆ ಅದು ಎಷ್ಟು ನೋಡಿದರೂ ಮುಗಿಯದ ಕಲಾ ಸಮುದ್ರ! ದಾಸ್ತೊಯೆವ್‌ಸ್ಕಿಯಂಥವರೇ 'ಈ ಜೀವಮಾನವನ್ನು ಅದಕ್ಕೆಂದೇ ಮೀಸಲಿಟ್ಟರೂ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಕಲಾಕೃತಿಗಳನ್ನು ಸಂಪೂರ್ಣ ನೋಡಲು, ನೋಡಿದರೂ ಆಸ್ವಾದಿಸಲು, ಅರ್ಥಮಾಡಿಕೊಳ್ಳಲು ಅಸಾಧ್ಯ' ಎಂದು ಹೇಳಿದ್ದಾರೆ. ಈ ಮಾತನ್ನು ಡಾ. ಕಲಾಂ ಅವರ ಗಮನಕ್ಕೆ ತಂದಾಗ, 'ದಾಸ್ತೊಯೆವ್‌ಸ್ಕಿ ಈ ಹೇಳಿಕೆಯನ್ನು ಬೆಂಬಲಿಸುವುದನ್ನು ಬಿಟ್ಟು, ನನಗೆ ಈ ಕ್ಷಣದಲ್ಲಿ ಬೇರೇನೂ ತೋಚುತ್ತಿಲ್ಲ' ಎಂದು ಉದ್ಗಾರ ತೆಗೆದಿದ್ದರು. ಆಗ ಮ್ಯೂಸಿಯಮ್ಮ್‌ನ ಕ್ಯುರೇಟರ್, 'ಇಲ್ಲಿರುವ ಕೆಲವು ಕಲಾಕೃತಿಗಳ ರಚನೆಗಾಗಿ ಕಲಾವಿದರು ತಮ್ಮ ಜೀವಮಾನವನ್ನೇ ಸವೆಸಿದ್ದಾರೆ. ಅಂಥ ಕೃತಿಗಳನ್ನು ಐದು-ಹತ್ತು ನಿಮಿಷಗಳಲ್ಲಿ ಹೇಗೆ ನೋಡುತ್ತೀರಿ. ಇಂಪಾಸಿಬಲ್' ಎಂದು ಹೇಳಿದ್ದು ಈಗಲೂ ಕಿವಿ ತಮಟೆ ಮೇಲೆ ಹಾಗೇ ಕುಳಿತಿದೆ.
ಯಾವುದೇ ಪತ್ರಕರ್ತನಿಗೆ ಪ್ರವಾಸವಿದೆಯಲ್ಲ, ಅದು ಅಮೋಘ ಅನುಭವ ಕೊಡುವಂಥದ್ದು. ಅದರಲ್ಲೂ ವಿದೇಶ ಪ್ರವಾಸ, ಅದರಲ್ಲೂ ವಿಶೇಷವಾಗಿ ಪ್ರಧಾನಿ, ರಾಷ್ಟ್ರಪತಿಯವರೊಂದಿಗೆ ವಿದೇಶಗಳಿಗೆ ಭೇಟಿ ನೀಡುವುದು ಜೀವನದಲ್ಲಿ ಸದಾ ನೆನಪಿಟ್ಟುಕೊಳ್ಳಬಹುದಾದ ಅಪರೂಪದ ಅನಭವ. ಈ ವಿಷಯದಲ್ಲಿ ನಾನು ಅದೃಷ್ಟಶಾಲಿ. ಅಂದರೆ ನನ್ನನ್ನು ಹೊಗಳಿಕೊಂಡಂತೆ ಅಲ್ಲ. ವಾಜಪೇಯಿ ಅವರ ಜತೆ ಅಮೆರಿಕಕ್ಕೆ, ಡಾ. ಅಬ್ದುಲ್ ಕಲಾಂ ಜತೆ ರಷ್ಯಾ, ಯುಕ್ರೇನ್, ಸ್ವಿಜರ್‌ಲ್ಯಾಂಡ್, ಐಸ್‌ಲ್ಯಾಂಡ್‌ಗೆ, ಡಾ. ಮನಮೋಹನಸಿಂಗ್ ಜತೆ ಜರ್ಮನಿ, ಮೆಕ್ಸಿಕೋ, ರಿಯೋ ಡಿ ಜನೈರೋ, ಪ್ರಿಟೋರಿಯಾಕ್ಕೆ, ಈಗ ಅವರೊಂದಿಗೆ ರಷ್ಯಾಕ್ಕೆ ಹಾಗೂ ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಜತೆಗೆ ಚೀನಾ, ಜೋರ್ಡಾನ್, ಇಸ್ರೇಲ್, ಪಾಕಿಸ್ತಾನ, ಟರ್ಕಿಗಳಿಗೆ ಭೇಟಿ ನೀಡಿದ್ದನ್ನು ನನ್ನ ವೃತ್ತಿ ಜೀವನದಲ್ಲಿ ಎಂದೆಂದೂ ಮರೆಯಲು ಅಸಾಧ್ಯ.
ಹದಿನೈದು ದಿನಗಳ ಕಾಲ ಭಾರತದ ರಾಷ್ಟ್ರಪತಿಗಳ ಜತೆ, ಅದರಲ್ಲೂ ಡಾ. ಕಲಾಂ ಅವರಂಥವರ ಜತೆ ನಾಲ್ಕು ದೇಶಗಳನ್ನು ಸುತ್ತುವುದೇ ಅದ್ಭುತ ಅನುಭವ. ಹಾಗೇ ಡಾ. ಮನಮೋಹನಸಿಂಗ್ ಜತೆ ಆರು ದಿನ ಐವತ್ನಾಲ್ಕು ಸಾವಿರ ಕಿ.ಮೀ. ಕ್ರಮಿಸಿ ನಾಲ್ಕು ದೇಶಗಳನ್ನು ತಿರುಗಿ ಬಂದಿದ್ದು ಸಹ. ವಿಮಾನ ಟೇಕ್ ಆಫ್ ಆಗಿ ಅರ್ಧಗಂಟೆಯ ಬಳಿಕ ವಾಜಪೇಯಿ ಪತ್ರಕರ್ತರು ಕುಳಿತಲ್ಲಿಗೆ ಬಂದು ಹರಟೆ ಕೊಚ್ಚಲು ಶುರು ಮಾಡುತ್ತಿದ್ದರು. ಪತ್ರಕರ್ತರೊಂದಿಗೆ ತೀರಾ ಆಪ್ತರಾಗಿ ಅವರು ತೆರೆದುಕೊಳ್ಳುತ್ತಿದ್ದರು. ತಾವು ವಿದೇಶಾಂಗ ಸಚಿವರಾಗಿದ್ದಾಗ ಬೇರೆ ಬೇರೆ ದೇಶಗಳಿಗೆ ಹೋದಾಗಿನ ಅನುಭವಗಳನ್ನು ರಸವತ್ತಾಗಿ ಬಣ್ಣಿಸಿ, ಪ್ರಯಾಣವನ್ನು ಸ್ಮರಣೀಯಗೊಳಿಸುತ್ತಿದ್ದರು. ಪ್ರಧಾನಿಯೊಬ್ಬರು ಅದಕ್ಕಿಂತ ಹತ್ತಿರ ಪತ್ರಕರ್ತರಿಗೆ ಸಿಗುವುದು ಸಾಧ್ಯವೇ ಇರಲಿಲ್ಲ. (ನೆಹರು ಸಹ ಹೀಗೆ ಇದ್ದರೆಂದು ಪತ್ರಕರ್ತ ಕುಲದೀಪ ನಯ್ಯರ್ ಬರೆದಿದ್ದರು.) ಅದರಲ್ಲೂ ಪತ್ರಕರ್ತರು ಅವರನ್ನು ಸುತ್ತುವರಿದರೆ, ಯಾರೂ ರೆಕಾರ್ಡ್ ಹಾಗೂ ನೋಟ್ಸ್ ಮಾಡಿಕೊಳ್ಳುತ್ತಿಲ್ಲವೆಂಬುದು ಖಾತ್ರಿಯಾದರೆ, ಮತ್ತಷ್ಟು ಮುಕ್ತವಾಗಿ, ಲಹರಿಯಿಂದ ಮಾತಿಗಿಳಿಯುತ್ತಿದ್ದರು. ಅವರಲ್ಲಿ ಬೇರೆ ಬೇರೆ ದೇಶಗಳ ನಾಯಕರುಗಳಿಗೆ ಸಂಬಂಧಿಸಿದ ಸ್ವಾರಸ್ಯಕರ ಕತೆಗಳಿದ್ದವು. ಗಗನಸಖಿಯರನ್ನು ಕರೆದು, 'ಪತ್ರಕರ್ತರನ್ನು ಚೆನ್ನಾಗಿ ನೋಡಿಕೊಳ್ಳಿ, ನಿಮ್ಮ ಬಗ್ಗೆ ಬರೆಯುತ್ತಾರೆ, ಒಂದು ವೇಳೆ ಚೆನ್ನಾಗಿ ನೋಡಿಕೊಳ್ಳದಿದ್ದರೆ, ಆಗಲೂ ನಿಮ್ಮ ಬಗ್ಗೆ ಬರೆಯುತ್ತಾರೆ' ಎಂದು ಚಟಾಕಿ ಹಾರಿಸುತ್ತಿದ್ದರು.
ಡಾ. ಕಲಾಂ ಅವರಂತೂ ತಾವು ರಾಷ್ಟ್ರಪತಿ ಎಂಬುದನ್ನು ಸಹ ಮರೆತು ವಿಮಾನದಲ್ಲಿ ತೀರಾ ಸಹಜವಾಗಿ ಪತ್ರಕರ್ತರೊಂದಿಗೆ ಬೆರೆಯುತ್ತಿದ್ದರು. ಬೇರೆ ಬೇರೆ ದೇಶಗಳಿಗೆ ಹೋಗುವಾಗ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವಾಗ ವಿಮಾನ ಟೇಕಾಫ್ ಆಗಿ, ಉಪಹಾರ ಅಥವಾ ಊಟ ಮುಗಿದ ನಂತರ ಪತ್ರಕರ್ತರು ಇರುವೆಡೆ ಬಂದು ಬಿಡುತ್ತಿದ್ದರು. ವಿಮಾನದಲ್ಲಿ ರಾಷ್ಟ್ರಪತಿಯವರು ಪತ್ರಕರ್ತರೊಂದಿಗೆ ಮಾತಾಡುವಾಗ ಅವರಿಗೇ ಮೀಸಲಾದ, ಭಾರತ ಸರ್ಕಾರದ ಲಾಂಛನದ ಹೊದಿಕೆಯಿರುವ ಆಸನವಿರುತ್ತದೆ. ಶಿಷ್ಟಾಚಾರದ ಪ್ರಕಾರ, ರಾಷ್ಟ್ರಪತಿಯಾದವರು ಬೇರೆ ಆಸನಗಳಲ್ಲಿ ಕುಳಿತುಕೊಳ್ಳುವಂತಿಲ್ಲ. ಆ ಲಾಂಛನವಿರುವ ಆಸನದಲ್ಲಿಯೇ ಕುಳಿತುಕೊಳ್ಳಬೇಕು. ಡಾ. ಕಲಾಂ ಆ ಶಿಷ್ಟಾಚಾರಗಳಿಗೆಲ್ಲ ಸೊಪ್ಪು ಹಾಕುತ್ತಿರಲಿಲ್ಲ. ತಮಗೆ ಇಷ್ಟವಾದೆಡೆ ಹೋಗಿ ಕುಳಿತು ಬಿಡುತ್ತಿದ್ದರು. ಇದರಿಂದ ಅಧಿಕಾರಿಗಳು ಕಕ್ಕಾಬಿಕ್ಕಿಯಾಗುತ್ತಿದ್ದರು. ಡಾ. ಕಲಾಂ ಮೇಷ್ಟ್ರು ತಮ್ಮ ಸುತ್ತಲೂ ಪತ್ರಕರ್ತರನ್ನು ಕುಳ್ಳಿರಿಸಿಕೊಂಡು ಆ ವಿಮಾನವೇ ಕ್ಲಾಸ್‌ರೂಮು, ಪತ್ರಕರ್ತರೇ ವಿದ್ಯಾರ್ಥಿಗಳು ಎಂದು ಭಾವಿಸಿಕೊಂಡು ಪಾಠ ಶುರು ಮಾಡುತ್ತಿದ್ದರು. ಭಾರತದ ಯಾವ ರಾಷ್ಟ್ರಪತಿಯೂ ಇಷ್ಟು ಸಹಜವಾಗಿ, ಸಮೀಪದಿಂದ, ಸಾಮಾನ್ಯನಂತೆ ವಿಮಾನದಲ್ಲಿ ಪತ್ರಕರ್ತರೊಂದಿಗೆ ಬೆರೆತಿದ್ದಾಗಲಿ, ಮುಖಾಮುಖಿಯಾಗಿದ್ದಾಗಲಿ ಇಲ್ಲವೇ ಇಲ್ಲ. ಅಷ್ಟೇ ಅಲ್ಲ, ಆ ದೇಶದಲ್ಲಿ ಏನು ನೋಡಿದೀರಿ, ನಿಮಗೆ ಯಾವ ಸಂಗತಿ ಇಷ್ಟವಾಯಿತು, ಹಾಗೆಂದರೇನು, ಹೀಗೆಂದರೇನು ಎಂದು ಪತ್ರಕರ್ತರಿಗೆ ಪ್ರಶ್ನೆ ಕೇಳಿ ತಬ್ಬಿಬ್ಬುಗೊಳಿಸುತ್ತಿದ್ದರು.
'ನ್ಯಾನೋ ಟೆಕ್ನಾಲಜಿಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ನೀವೆಲ್ಲ ನೋಡಿದ್ದೀರಿ ತಾನೆ? ನ್ಯಾನೋ ಟೆಕ್ನಾಲಜಿ ಅಂದ್ರೆ ಏನು?' ಎಂದು ಎಲ್ಲರನ್ನೂ ಕೇಳಿ ನಮ್ಮೊಳಗೆ ಪೇಚು, ಪೈಪೋಟಿಯನ್ನುಂಟು ಮಾಡಿದ್ದರು. ನ್ಯಾನೋ ಟೆಕ್ನಾಲಜಿ ಅಂದ್ರೆ ಏನೆಂದು ಎಲ್ಲರೂ ಅವರಿಗೆ ತೋಚಿದ, ತಿಳಿದ ಉತ್ತರ ಹೇಳಿದಾಗ ಸಂತೃಪ್ತರಾಗದ ಡಾ. ಕಲಾಂ, ಆಗಸದಲ್ಲಿ, ಮೂವತ್ತೈದು ಸಾವಿರ ಅಡಿ ಎತ್ತರದಲ್ಲಿ, ಅದರ ಬಗ್ಗೆ ಪುಟ್ಟ ಉಪನ್ಯಾಸವನ್ನೇ ನೀಡಿದ್ದರು. ವಿಮಾನವೇರಿದ ಬಳಿಕ ಎಲ್ಲಿ ಡಾ. ಕಲಾಂ ಪ್ರಶ್ನೆ ಕೇಳಿ ಪೇಚಿಗೆ ಸಿಕ್ಕಿಸಬಹುದೆಂದು ಪತ್ರಕರ್ತರೆಲ್ಲ ಓತ್ಲಾ ಹೊಡೆಯದೇ ಜಾಗೃತರಾಗಿರುತ್ತಿದ್ದರು. ಹದಿನೈದು ದಿನಗಳ ಪ್ರವಾಸ ಮುಗಿಸಿ ವಾಪಸ್ ಬರುವಾಗ, ಪ್ರತಿ ಪತ್ರಕರ್ತನಿಗೂ ಫೋಟೋ, ಪ್ರತ್ಯೇಕ ಫೋಸ್ ಕೊಟ್ಟಿದ್ದರು. 'ನನ್ನ ಮಗನಿಗೆ ನಿಮ್ಮ ಸಂದೇಶ ಬರೆದು ಕೊಡಿ' ಎಂದು ಕೇಳಿದಾಗ, ಮಗನ ಹೆಸರೇನು ಎಂದು ಕೇಳಿ, ಹೆಸರನ್ನೇ ಬರೆದು, ಒಂದು ಸಾಲಿನ ಸಂದೇಶದೊಂದಿಗೆ ಆಟೋಗ್ರಾಫ್ ಹಾಕಿಕೊಟ್ಟಿದ್ದರು!
ನಮ್ಮ ಹಾಲಿ ಪ್ರಧಾನಿ ಡಾ. ಮನಮೋಹನಸಿಂಗ್ ಜತೆ ಇದು ನನ್ನ ಐದನೇ ದೇಶ ಸಂಚಾರ. ಹಿಂದಿನ ವರ್ಷದ ಜಿ-20 ಶೃಂಗಸಭೆಗೂ ಅವರೊಂದಿಗೆ ಹೋಗಿದ್ದೆ. ಡಾ. ಸಿಂಗ್ ಅಪ್ಪಿತಪ್ಪಿಯೂ ಪತ್ರಕರ್ತರು ಬರುವ ಕಡೆ ಸುಳಿಯುವುದಿಲ್ಲ, ಮಾತಂತೂ ಬಿಡಿ, ದೂರವೇ ಉಳಿಯಿತು. ಎಲ್ಲ ದೇಶಗಳ ಪ್ರವಾಸ ಮುಗಿಸಿ ವಾಪಸ್ ಅಲ್ಲಿಗೆ ಬರುವಾಗ, ವಿಮಾನದಲ್ಲಿ ಹದಿನೈದು ನಿಮಿಷ ಮಾತಾಡುತ್ತಾರೆ. ಐದಾರು ಪ್ರಶ್ನೆಗಳನ್ನು ಕೇಳಲು ಮಾತ್ರ ಆಸ್ಪದವಿರುತ್ತದೆ. ವಿಮಾನ ಹಾರಾಟದ ಸದ್ದು ಹಾಗೂ ಅವರ ಕ್ಷೀಣ ದನಿಯಿಂದಾಗಿ ಅವರು ಹೇಳಿದ್ದು ಯಾರಿಗೂ ಕೇಳುವುದಿಲ್ಲ. ಅದರಿಂದ ಯಾರಿಗೂ ಏನೂ ನಷ್ಟವಿಲ್ಲ ಬಿಡಿ!
ಡಾ. ಸಿಂಗ್ ಆಪ್ತವಾಗಿ ಮಾತಿಗೆ ಸಿಕ್ಕರೆ ತಮಾಷೆಯಿಂದ 'ಮಾತು ಮನೆ ಕೆಡಿಸಿತು, ಮೌನ ದೇಶವನ್ನೇ ಕೆಡಿಸೀತು' ಎಂಬ ಗಾದೆಯನ್ನು ಅವರ ಗಮನಕ್ಕೆ ತಂದರೆ ಹೇಗೆ?
ನೋಡೋಣ.
- ವಿಶ್ವೇಶ್ವರ ಭಟ್
vbhat@me.com