ಅಂಕಣಗಳು

ಕೃಷಿಗೂ ಖುಷಿಗೂ ನಮ್ಮ ಋಷಿಗಳೇ ವಿಜ್ಞಾನಿಗಳು

ಪ್ರಕೃತಿಯ ಪರಮಶಕ್ತಿ ಅದು. ಕೈಯಲ್ಲಿ ಹಿಡಿದರೆ ದಾಹವನ್ನು ತಣಿಸಬಹುದು. ಕೊಡಪಾನದಲ್ಲಿ...

ನೀರಿನ ಬಗ್ಗೆ ಸನಾತನ ಭಾರತದ ನೆಲದಲ್ಲಿ ನಡೆದಷ್ಟು ಜ್ಞಾನಮಥನ ಬೇರೆಲ್ಲೂ ನಡೆದಿರಲಾರದು, ಇದನ್ನು ಸಮರ್ಥಿಸುವಂತಹ ಸಾಕ್ಷ್ಯಗಳೂ ನಮ್ಮ ಮುಂದಿವೆ.

ಪ್ರಕೃತಿಯ ಪರಮಶಕ್ತಿ ಅದು. ಕೈಯಲ್ಲಿ ಹಿಡಿದರೆ ದಾಹವನ್ನು ತಣಿಸಬಹುದು. ಕೊಡಪಾನದಲ್ಲಿ ತುಂಬಿಕೊಂಡರೆ ಮನೆಕೆಲಸಗಳನ್ನಷ್ಟೂ ಪೂರೈಸಬಹುದು. ಬಾವಿಯಲ್ಲಿ ಹಿಡಿದುಕೊಂಡರೆ ಊರಿನ ಜನರ ಕೆಲಸಕ್ಕಷ್ಟೂ ಒದಗಬಹುದು. ಆದರೆ ನದಿಯ ಪಾತ್ರವನ್ನು ಮೀರಿ ಬಂದರೆ ಅದು ಮಾಡುವ ಅಲ್ಲೋಲಕಲ್ಲೋಲ, ಎಷ್ಟು ಆಳಕ್ಕೆ ತೋಡಿದರೂ ಸಿಗದೇ ಹೋದರೆ ಅದು ಉಂಟುಮಾಡುವ ಹಾಹಾಕಾರ ಊಹಿಸಲು ಅಸಾಧ್ಯವಾದ್ದು.
ಇಂಥ ನೀರಿನ ಬಗ್ಗೆ ನಾಗರಿಕತೆ ಆರಂಭವಾದ ಕಾಲದಿಂದಲೂ ಚಿಂತನೆ ನಡೆದೇ ಇದೆ. ಎಲ್ಲ ದೇಶಗಳ ಎಲ್ಲ ಜ್ಞಾನಿಗಳೂ ಅದರ ಕುರಿತು ಚಿಂತಿಸಿದ್ದಾರೆ. ಆದರೆ ಸನಾತನ ಭಾರತದ ನೆಲದಲ್ಲಿ ಇದರ ಕುರಿತು ನಡೆದಷ್ಟು ಜ್ಞಾನಮಥನ ಬೇರೆಲ್ಲೂ ನಡೆದಿರಲಾರದು. ನೀರನ್ನು ಸರಿಯಾದ ರೂಪದಲ್ಲಿ, ಸಾಕಷ್ಟು ಪ್ರಮಾಣದಲ್ಲಿ ಹಿಡಿದಿಡುವುದು ಹೇಗೆ, ಮೇರೆ ಮೀರದಂತೆ ನೋಡಿಕೊಳ್ಳುವ ಬಗೆಯೆಂತು, ಭೂಮಿಯ ಆಳದಲ್ಲಿ ಅದು ಹೇಗಿರುತ್ತದೆ, ಎಲ್ಲಿರುತ್ತದೆ ಎಂಬಿತ್ಯಾದಿ ತಿಳಿವಳಿಕೆಯನ್ನು ಕಂಡರಿಸಿದ ಋಷಿ-ವಿಜ್ಞಾನಿಗಳು ನಮ್ಮಲ್ಲಿದ್ದರು. ಇದನ್ನು ನಮ್ಮ ಸಂಸ್ಕೃತಿಯ ಕುರಿತಾದ ಭಕ್ತಿಯಿಂದಷ್ಟೇ ಹೇಳುತ್ತಿಲ್ಲ. ಇದನ್ನು ಸಮರ್ಥಿಸುವಂತಹ ಹಲವಾರು ಸಾಕ್ಷ್ಯಗಳೂ ನಮ್ಮ ಮುಂದಿವೆ.

ವರಾಹಮಿಹಿರನ ಬೃಹದ್‌ ಸಂಹಿತ
ವರಾಹಮಿಹಿರನ ಹೆಸರು ಕೇಳದವರಿಲ್ಲ. ಗಣಿತಶಾಸ್ತ್ರ ಹಾಗೂ ಜ್ಯೋತಿಷ್ಯದಲ್ಲಿ ಅವರ ಸಾಧನೆ ಅಗಾಧ. ಅದರ ಬಗ್ಗೆ ಹೇಳುವುದೇ ಬೇಡ. ಅವನು ಬರೆದ 'ಬೃಹದ್ ಸಂಹಿತ' ಇದೆಯಲ್ಲ, ಅದರ 106 ಅಧ್ಯಾಯಗಳ ಪೈಕಿ ಸುಮಾರು ಮೂರನೇ ಒಂದು ಭಾಗ ಬರೀ ಮೋಡಗಳು ಹಾಗೂ ಮಳೆಯ ಕುರಿತಾಗಿಯೇ ಮೀಸಲಾಗಿವೆ. ಇದು ರಚನೆಯಾಗಿದ್ದು ಸುಮಾರು ಕ್ರಿಸ್ತಶಕ 6ನೇ ಶತಮಾನದಲ್ಲಿ.
ಆಯಾ ತಿಂಗಳು, ಚಂದ್ರಮಾನಕ್ಕೆ ತಕ್ಕಂತೆ ಗ್ರಹಗಳು ಹಾಗೂ ನಕ್ಷತ್ರಗಳ ಚಲನೆಯನ್ನು ಆಧರಿಸಿ ಅವನು ಮಳೆಯನ್ನು ಅಂದಾಜಿಸುತ್ತಿದ್ದ. ಮೋಡ ಕಟ್ಟುವಿಕೆಯನ್ನು ಅವನು ಗರ್ಭಧಾರಣ ಎಂದೂ, ಮೋಡದ ಲಕ್ಷಣಗಳನ್ನು ಗರ್ಭಲಕ್ಷಣ ಎಂದೂ ಕರೆಯುತ್ತಾನೆ. ಸಮಯ ಹಾಗೂ ಮಳೆಯ ಪ್ರಮಾಣವನ್ನು ಆಧರಿಸಿ ಅವುಗಳನ್ನು ಅವನು ಅಧ್ಯಯನ ಮಾಡುತ್ತಾನೆ ಹಾಗೂ ಸಿದ್ಧಾಂತಗಳನ್ನು ರೂಪಿಸಿದ್ದಾನೆ. ಈ ಸಿದ್ಧಾಂತಗಳು ಸಹ ಜ್ಯೋತಿಷ್ಯಶಾಸ್ತ್ರದ ಭದ್ರ ಅಡಿಗಲ್ಲಿನ ಮೇಲೆಯೇ ನಿಂತಿವೆ. ಈ ವಿಚಾರದಲ್ಲಿ ಕೃಷಿ ವಿಜ್ಞಾನಕ್ಕೆ ರೂಪು ನೀಡಿದ ಗರ್ಗ, ಕಶ್ಯಪ ಹಾಗೂ ಪರಾಶರ ಇವರೆಲ್ಲ ಆತನ ಪೂರ್ವಾಕಾರಿಗಳು ಎನ್ನಬಹುದು.
ಅಧ್ಯಾಯ 54ರ 'ಉದಗರ್ಗಳ'ದಲ್ಲಿ ವರಾಹಮಿಹಿರನು ಅಂತರ್ಜಲ ಹಾಗೂ ಅದರ ಮೇಲ್ಮೈ ಲಕ್ಷಣಗಳ ಬಗ್ಗೆ ವರ್ಣಿಸಿದ್ದಾನೆ. ಇದನ್ನೇ ಆಧಾರವಾಗಿಟ್ಟುಕೊಂಡು ತೋಟಗಾರಿಕೆಯ ಕುರಿತು ಬರೆಯಲಾಗಿರುವ ವೃಕ್ಷಾಯುರ್ವೇದ, ವಿಶ್ವವಲ್ಲಭ ಹಾಗೂ ಉಪವನ ವಿನೋದ ಕೃತಿಗಳಲ್ಲಿ ಸಿದ್ಧಾಂತ ಮಂಡಿಸಲಾಗಿದೆ. ಇವುಗಳಲ್ಲಿ ಇನ್ನೂ ಸ್ವಲ್ಪ ಅಭಿವೃದ್ಧಿಗೊಂಡ ವಿಚಾರಗಳಿವೆ.
ನಕ್ಷತ್ರಗಳ ಚಲನೆಯೇ ಮೋಡ ಕಟ್ಟುವಿಕೆಗೆ ನೇರ ಕಾರಣ ಎಂದು ವರಾಹಮಿಹಿರ ದೃಢವಾಗಿ ನಂಬಿದ್ದ. ಇದಲ್ಲದೇ ಆತ ಇನ್ನೊಂದು ನೀರಿನ ಮೂಲದ ಬಗ್ಗೆಯೂ ಹೇಳುತ್ತಾನೆ. ಅದೆಂದರೆ ಅಂತರ್ಜಲ. ಅಂತರ್ಜಲದ ಮೂಲವನ್ನು ಗುರುತಿಸುವುದು ಹೇಗೆ ಎಂಬುದರ ಬಗ್ಗೆಯೂ ಆತ ಗಣನೀಯ ಮಾಹಿತಿ ನೀಡುತ್ತಾನೆ.

ಜಲಾಶಯಗಳು
ಕಾಶ್ಯಪೀಯ ಕೃಷಿ ಸೂಕ್ತಿ ಅಂದರೆ, ಕಾಶ್ಯಪನಿಂದ ರಚಿತವಾದ ಕೃಷಿ ಸೂತ್ರಗಳು. ಕ್ರಿಸ್ತಪೂರ್ವ 700-800 ಅವಧಿಯಲ್ಲಿ ರಚಿತವಾದ ಕೃತಿ ಇದು. ಕೃಷಿಯನ್ನು ನೀರಿನೊಂದಿಗೆ ಸಮೀಕರಿಸಿ ರಚಿಸಲಾದ ಮತ್ತೊಂದು ಮಹತ್ವದ ಕೃತಿ. ಅಚ್ಚರಿಯ ವಿಚಾರವೆಂದರೆ, ಇದರ ಲೇಖಕ ಮಳೆಯ ಬಗ್ಗೆ ಏನೂ ಹೇಳುವುದಿಲ್ಲ. 'ಅದು ಹೇಗೂ ಸುರಿಯುತ್ತದೆ, ಉಳಿದ ವಿಚಾರಗಳ ಬಗ್ಗೆ ಲಕ್ಷ್ಯ ನೀಡೋಣ' ಎಂಬ ವಿಚಾರವೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಕೃತಿಯಲ್ಲಿ ಮಳೆಯನ್ನು ಹೊರತುಪಡಿಸಿ ಉಳಿದೆಲ್ಲ ನೀರಿನ ಮೂಲ, ಅವುಗಳನ್ನು ಸಂಗ್ರಹಿಸುವ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗಿದೆ. ಇಲ್ಲಿ ಅವನ ಗಮನವೇನಿದ್ದರೂ ಮಳೆಯ ಹೊರತಾದ ಉಳಿದ ನೀರಿನ ಮೂಲಗಳ ಬಗ್ಗೆ.
ಅವನ ಕೃಷಿ ಸೂತ್ರಗಳನ್ನು ನೋಡಿದರೆ, ಜಲಾಶಯ ಕಾರ್ಯರಾಜ್ಯಕ್ಕೆ ಸೇರಿದ್ದ ವಿಚಾರವಾಗಿ ಕಾಣಿಸುತ್ತದೆ. ಅವನು ಹೀಗೆ ಹೇಳುತ್ತ ಹೋಗುತ್ತಾನೆ...
'ನೀರನ್ನು ಆಳವಾದ, ಸುತ್ತಲೂ ರಕ್ಷಣೆಯುಳ್ಳ ಬ್ಯಾರಿಯರ್‌ಗಳನ್ನು ಅಳವಡಿಸಿದ, ವೃತ್ತಾಕಾರದಲ್ಲಿರುವ ಜಲಾಶಯಗಳಲ್ಲಿ ಸಂಗ್ರಹಿಸಬೇಕು. ನೆಲದ ಸಮತಟ್ಟು ಭಾಗ ಹಾಗೂ ಅದರ ರಚನೆ ಮುಖ್ಯವಾಗಿರುತ್ತದೆ. ನೀರನ್ನು ತಲುಪಲು ದೃಢವಾದ ಹಾಗೂ ರಕ್ಷಣಾತ್ಮಕ ಮೆಟ್ಟಿಲುಗಳನ್ನು ನಿರ್ಮಿಸುವುದು ಅಗತ್ಯ. ಅದರಲ್ಲಿ ನೀರಿನ ಸಂಗ್ರಹ ಹೆಚ್ಚಾದಾಗ ಹೊರಹೋಗಲು ಖಾರಿಗಳು ಇರಬೇಕು. ಅಲ್ಲದೇ ದೊಡ್ಡ ಸರೋವರಗಳ ಅಥವಾ ಪರ್ವತಗಳಿಂದ ಧುಮ್ಮಿಕ್ಕುವ ನೀರು ಅದರೊಳಗೆ ನುಗ್ಗುವಂತೆಯೂ ಇರಬಾರದು.
ಸಾಕಷ್ಟು ನೀರು ಸಂಗ್ರಹವಾಗುವಂತಹ ದೊಡ್ಡ ಜಲಾಶಯಗಳನ್ನು ನಿರ್ಮಿಸಬೇಕು. ಅಲ್ಲದೇ ನಿರ್ಮಿಸುವ ನೆಲ ದೃಢವಾಗಿಯೂ ಇರಬೇಕು. ನೈಸರ್ಗಿಕ ನೀರನ್ನು ಹಿಡಿದಿಟ್ಟುಕೊಳ್ಳುವಂತಿರಬೇಕು. ಪ್ರವಾಹ ಉಂಟಾಗದಂತೆ ಸಾಕಷ್ಟು ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಬೇಕು. ಮಳೆಗಾಲದಲ್ಲಂತೂ ಸೂಕ್ತ ಮೇಲ್ವಿಚಾರಣೆಯನ್ನು ಆಗಾಗ್ಗೆ ನಡೆಸುವುದು ಮುಖ್ಯ. ನೀರು ಶುದ್ಧವಾಗಿರಲು ನಿಂಬ ಹಾಗೂ ಕದಂಬ ಮರಗಳನ್ನು ಹತ್ತಿರದಲ್ಲಿ ಬೆಳೆಸುವುದು ಉತ್ತಮ'.
'ನದಿಗಳಿಂದ ನೀರು ಹರಿಯುವಂತೆ ಕಾಲುವೆಗಳು ಹಾಗೂ ಆಳವಾದ ಕೆರೆಗಳನ್ನು ನಿರ್ಮಿಸಿದರೆ ಕೃಷಿಗೆ ನೀರನ್ನು ಉಣಿಸಬಹುದು. ಈ ಕಾಲುವೆಗಳ ಅಗಲ 4-10 ಕ್ಯೂಬಿಟ್ (1 ಕ್ಯೂಬಿಟ್ ಅಂದರೆ, 45.7 ಸೆಂ.ಮೀ.)ಇರಬೇಕು. ಆಳವನ್ನು ನೀರಿನ ಹರಿವಿಗೆ ತಕ್ಕಂತೆ ನಿರ್ಧರಿಸುವುದು ಉತ್ತಮ'.
ಹೀಗೆ ಹೇಳುತ್ತ ಆತ ನಾಲ್ಕು ರೀತಿಯ ಕಾಲುವೆಗಳನ್ನು ನಿರ್ಮಿಸುವುದಕ್ಕೆ ಒಲವು ತೋರುತ್ತಾನೆ. ಕಾಲುವೆಗಳು ಆಯಾ ಗ್ರಾಮ ಅಥವಾ ಹಳ್ಳಿಗಳ ಉದ್ಧಾರಕ್ಕೆ ಅಗತ್ಯ ಎಂದೂ ಸಹ ಆತ ಅಭಿಪ್ರಾಯಪಡುತ್ತಾನೆ.
ಬಾವಿಗಳ ನಿರ್ಮಾಣ, ಅವುಗಳ ಫೌಂಡೇಷನ್, ಗೋಡೆ, ತೆರೆಯುವ ಬಾಗಿಲು, ನೀರನ್ನು ಮೇಲೆತ್ತುವ ವಿಧಾನ ಮುಂತಾದ ಸಣ್ಣ ಸಣ್ಣ ವಿಚಾರಗಳ ಬಗ್ಗೆಯೂ ಆತ ವಿವರವಾದ ಮಾಹಿತಿ ನೀಡುತ್ತಾನೆ. ಅಂತರ್ಜಲ ಹರಿಯುವ ದಿಕ್ಕನ್ನು ಗುರುತಿಸುವುದು ಹೇಗೆ ಎಂಬುದರ ಬಗ್ಗೆಯೂ ಆತ ಸಲಹೆ ನೀಡುತ್ತಾನೆ.

ವಿಶ್ವವಲ್ಲಭ (ಜಲಾಶಯಗಳ ನಿರ್ಮಾಣ)
16ನೇ ಶತಮಾನದಲ್ಲಿ ಮಿಶ್ರ ಚಕ್ರಪಾಣಿ ಎಂಬುವವರು ಬರೆದ ಈ ಕೃತಿಯಲ್ಲಿ ನೀರು ಸಂಗ್ರಹಿಸಲು ಜಲಾಶಯ ನಿರ್ಮಾಣ ಮಾಡುವ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ. ಲೇಖಕರು ರಾಜಸ್ತಾನದವರಾಗಿರುವುದರಿಂದ ಅಲ್ಲಿನ ಹಿನ್ನೆಲೆ ಎಲ್ಲೆಡೆ ಬರುತ್ತದೆ. ಅವನದೇ ಮಾತಿನಲ್ಲಿ ಹೇಳುವುದಾದರೆ...
'ಒಣ ಹಾಗೂ ಅರೆ ಒಣಭೂಮಿ ಪ್ರದೇಶದಲ್ಲಿ ನೀರು ಸಂಗ್ರಹಿಸುವುದು ಅತಿ ಮುಖ್ಯ'. ಸರೋವರ, ಕೆರೆ, ಅಣೆಕಟ್ಟು, ಬಾವಿ... ಹೀಗೆ ವಿಭಿನ್ನ ಮಾದರಿಯ ಜಲಾಶಯಗಳನ್ನು ನಿರ್ಮಿಸಬೇಕು ಎಂದು ಆತ ಪ್ರತಿಪಾದಿಸುತ್ತಾನೆ. ಗ್ರಾಮಗಳಿಗೆ ಅಗತ್ಯವಾದ ಕುಡಿಯುವ ನೀರು, ಕೃಷಿ ಹಾಗೂ ರಾಜರ ಸಂತೋಷಕ್ಕೆ ಬೇಕಾದ ನೀರು ಸಂಗ್ರಹವನ್ನು ಆಯಾ ಪ್ರಾಂತ್ಯದ ಅಗತ್ಯಕ್ಕೆ ತಕ್ಕಂತೆ ಮಾಡಿಕೊಳ್ಳಬೇಕು.
ಕುಡಿಯುವ ನೀರಿಗೆ ಬಾವಿಯನ್ನು ನಿರ್ಮಿಸಿಕೊಳ್ಳುವುದು ಉತ್ತಮ ಎನ್ನುವ ಆತ, ಇದರ ನೆಲಗಟ್ಟು, ಮೆಟ್ಟಿಲುಗಳು, ನೀರು ಮೇಲೆತ್ತಲು ಬೇಕಾದ ಸಾಮಗ್ರಿಗಳ ಬಗ್ಗೆಯೂ ವಿವರಿಸಿದ್ದಾನೆ. ಬಾವಿಗಳಲ್ಲಿ ಏಳು ಹಾಗೂ ನಾಲ್ಕು ಮಾದರಿಯ ಕೆರೆಗಳನ್ನು ನಿರ್ಮಿಸಬೇಕು ಎನ್ನುವುದು ಚಕ್ರಪಾಣಿ ಪ್ರತಿಪಾದನೆ.
ಕುಡಿಯುವ ನೀರು ನಿರ್ಮಲವಾಗಿರಲು ಅನೇಕ ವಿಧದ ಸಸ್ಯಗಳು ಹಾಗೂ ನಾರು-ಬೇರುಗಳ ಬಳಕೆ ಮಾಡಬೇಕು. ಇದು ಬಹುತೇಕ ವರಾಹಮಿಹಿರನಿಗೆ ಹೋಲುತ್ತದೆ.
ರಾಜಸ್ತಾನದಂತಹ ಕಲ್ಲು ನೆಲದಲ್ಲಿ ಬಾವಿ ತೋಡುವುದು ಸಾಹಸವೇ ಸರಿ. ಅಂತಹ ಕಲ್ಲುಗಳ ಮಧ್ಯೆ, ಬಿರುಕು ಉಂಟು ಮಾಡದೇ ಬಾವಿ ತೋಡುವ ಬಗ್ಗೆಯೂ ಆತ ಸೂಕ್ತವಾಗಿ ವಿವರಿಸುವುದು ವಿಶೇಷ. ಅಂತಹ ಕಲ್ಲುಗಳ ಮಧ್ಯೆ ಗುಂಡಿ ಮಾಡಿದರೆ, ಮಳೆ ನೀರು ಸಂಗ್ರಹ ಮಾಡಲು ಸಹಕಾರಿ ಎಂದಿದ್ದಾನೆ.
- ನೀರು ಹರಿಯುವ ತಾಣ ಅಥವಾ ಸಲಿಲವಾಗಿ ನೀರು ಹರಿಯುವ ಮಧ್ಯದ ಭದ್ರ ಪ್ರದೇಶ ರಾಜರ ಸುಖಕ್ಕಾಗಿ ರೆಸಾರ್ಟ್ ನಿರ್ಮಾಣ ಮಾಡಲು ಸೂಕ್ತ ಜಾಗ.
- ನದಿಯು ಕಿರಿದಾಗಿ ಹರಿಯುವ ಕಡೆಗಳಲ್ಲಿ ಎರಡು ಭೂಭಾಗಗಳನ್ನು ಸೇರಿಸಿ ಆಣೆಕಟ್ಟು ನಿರ್ಮಾಣ ಮಾಡಬೇಕು. ಇದರಿಂದ ಸುಲಭವಾಗಿ ದೊಡ್ಡ ನೀರಿನ ಸಂಗ್ರಹ ಹೊಂದಬಹುದು.
ಭೂಜಲ ಸಿಗದೆ ಹೋದಾಗ ಅಂತರ್ಜಲಕ್ಕೆ ಕನ್ನ ಹಾಕಬಹುದೆಂದು ಸಾಧಿಸಿ ತೋರಿಸಿದವರು ವಿದೇಶೀಯರು. ಭೂಮಿಯ ಮೇಲಿನ ಸಕಲ ಜೀವಜಲಕ್ಕೂ ಮಳೆ ನೀರೇ ಸಾಕಷ್ಟು ಎಂಬುದು ನಮ್ಮ ದೇಸೀ ಚಿಂತನೆ.

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!