ಮನೆಗೆ ಹೋದ ತಕ್ಷಣ ಮಗುವಿನ ಹೋಂವರ್ಕ್ ಮಾಡಿಸಬೇಕು. ನಂತರ ಬೆಳಗ್ಗೆಯೇ ನೆನೆಯಲು ಹಾಕಿದ ಬಟ್ಟೆಗಳನ್ನು ಒಗೆದು ಹಾಕಬೇಕು. ಆಮೇಲೆ ಯಶವಂತನಿಗೆ ಇಷ್ಟವಾಗುವ ಅಡುಗೆ ಮಾಡಬೇಕು. ನಂತರ ಮಗಳಿಗೆ ಊಟ ಮಾಡಿಸಬೇಕು. ರಾತ್ರಿ ಒಂಭತ್ತೂವರೆಗೆ ಸರಿಯಾಗಿ ಕಾರ್ಪೋರೇಷನ್‌ನವರು ಕುಡಿಯುವ ನೀರು ಬಿಡ್ತಾರೆ. ನೀರು ತುಂಬಿಸಿದ ನಂತರ ಮಗುವಿಗೆ ಊಟ ಮಾಡಿಸಿ, ಯಶವಂತನೊಟ್ಟಿಗೆ ಊಟ ಮುಗಿಸುವ ವೇಳೆಗೆ ರಾತ್ರಿ ಹನ್ನೊಂದು ದಾಟಬಹುದು. ಬೆಳಗ್ಗೆ ಆರು ಗಂಟೆಗೇ ಎದ್ದು ತಿಂಡಿ ಮಾಡಿ, ಗಂಡ, ಮಗಳ ಜೊತೆ ತನಗೂ ಒಂದು ಬಾಕ್ಸ್ ರೆಡಿ ಮಾಡಿಕೊಂಡು... ಹೀಗೆಲ್ಲಾ ಯೋಚಿಸುತ್ತ ಸ್ಕೂಟಿ ಓಡಿಸುತ್ತಿದ್ದಳು ಭಾರತಿ. ಆಗಲೇ, ಏನೋ ಅದ್ಭುತವೊಂದನ್ನು ಕಂಡಂತೆ, ಹಿಂದಿನ ಸೀಟಿನಲ್ಲಿದ್ದ ಮಗಳು ಚೀರಿದಳು: 'ಅಮ್ಮಾ, ಒಂದ್ ನಿಮಿಷ ಆ ಕಡೆ ನೋಡು, ರಣಹದ್ದು ಹಾರಿ ಹೋಗ್ತಾ ಇದೆ...'
ಮಗಳು ಏರು ದನಿಯಲ್ಲಿ ಹೀಗೆಂದಾಗ ಬೇರೇನೋ ಯೋಚಿಸುತ್ತಿದ್ದ ಭಾರತಿಗೆ ಕ್ಷಣಕಾಲ ಗಾಬರಿಯಾಯಿತು. ಆ ಗಡಿಬಿಡಿಯಲ್ಲಿ ಗಕ್ಕನೆ ಬ್ರೇಕ್ ಹಾಕಿದಳು. ಇವಳ ದಿಢೀರ್ ವರ್ತನೆಯಿಂದ ಹಿಂದೆ ಬರುತ್ತಿದ್ದ ಸವಾರರೂ ಕಕ್ಕಾಬಿಕ್ಕಿಯಾದರು. ನಂತರ, ಅದು ಹೇಗೋ ಡಿಕ್ಕಿ ಹೊಡೆಯುವಂತೆ ಮಾಡಿ, ಅಡ್ಡಾದಿಡ್ಡಿ ಚಾಲನೆಗೆ ಭಾರತಿಯನ್ನು ಬೈದು ಹೋಗಿ ಬಿಟ್ಟರು. ಇದಕ್ಕೆಲ್ಲ ಮಗಳ ಕೂಗಾಟವೇ ಕಾರಣವಾಯ್ತು ಎಂದು ಭಾವಿಸಿದ ಭಾರತಿ-'ಕತ್ತೆ, ನಿನ್ನಿಂದಲೇ ಎಲ್ಲಾ ಅನಾಹುತವೂ ಆಗೋದು. ತೆಪ್ಪಗೆ ಕೂತುಕೊಳ್ಳಲು ನಿಂಗೆ ಏನು ರೋಗ?' ಎಂದು ಜೋರು ಮಾಡಿದಳು.
ಅಮ್ಮನ ಗುಡುಗಾಟ ಕೇಳಿ ಮಗುವಿನ ಮುಖ ಬಾಡಿ ಹೋಯಿತು. ಅದನ್ನು ಭಾರತಿ ಗಮನಿಸಿದಳು ನಿಜ. ಆದರೆ ಸಮಾಧಾನದ ಮಾತು ಹೇಳಲಿಲ್ಲ. ರಾತ್ರಿ ಊಟ ಮುಗೀತಿದ್ದಂತೆಯೇ-ತುಂಬ ಸಡಗರದಿಂದ ಬಂದ ಮಗು-'ಮಮ್ಮಿ, ಮಮ್ಮಿ, ನಿಂಗೇನೋ ಸ್ಪೆಶಲ್ ಗಿಫ್ಟ್ ಕೊಡಬೇಕು ಅಂತಿದೀನಿ. ಕಣ್ಣು ಮುಚ್ಕೋ ಪ್ಲೀಸ್' ಎಂದಿತು. ಇನ್ನೂ ಸಂಜೆ ನಡೆದ ಅನಾಹುತದ ಗುಂಗಿನಲ್ಲಿಯೇ ಇದ್ದ ಭಾರತಿ-'ಊಹುಂ, ಈಗ ಏನೂ ಕೊಡೋದು ಬೇಡ. ನಾನು ಬೆಳಗ್ಗೆ ಈಸ್ಕೋತೀನಿ ಹೋಗು' ಎಂದು ಕಟುವಾಗಿಯೇ ಹೇಳಿದಳು. 'ಅಮ್ಮಾ, ಪ್ಲೀಸ್ ಕಣಮ್ಮಾ, ಒಂದೇ ನಿಮಿಷದಲ್ಲಿ ಕೊಟ್ಟು ಬಿಡ್ತೀನಿ. ಬೆಳಗ್ಗೆ ನೀನು ತುಂಬಾ ಬ್ಯುಸಿ ಇರ್ತೀಯ..' ಮಗು ಮತ್ತೆ ಗೋಗರೆಯಿತು.
'ಒಂದ್ಸಲ ಹೇಳಿದ್ರೆ ನಿಂಗೆ ಅರ್ಥ ಆಗಲ್ವ? ಬೆಳಗ್ಗೆ ನಾನು ಟೈಂ ಅಡ್ಜೆಸ್ಟ್ ಮಾಡಿಕೊಂಡು ಈಸ್ಕೋತೇನೆ. ಈಗ ಹೋಗಿ ತೆಪ್ಪಗೆ ಮಲಗಿದ್ರೆ ಸರಿ. ಇಲ್ಲಾಂದ್ರೆ ನಾಲ್ಕು ಬಾರಿಸ್ತೀನಿ ನೋಡು. ಎಷ್ಟು ನಿಂದು ಹಠ?' ಎಂದು ಮತ್ತೆ ರೇಗಿದಳು ಭಾರತಿ. ಈ ನಿಷ್ಠುರ ಮಾತುಗಳನ್ನು ಕೇಳಿ, ಕಣ್ಣೀರು ಸುರಿಸುತ್ತಲೇ ಮಗು ತನಗಾಗಿ ಮೀಸಲಾಗಿದ್ದ ರೂಂಗೆ ಹೋಗಿ ಬಿಟ್ಟಿತು. ಆಗಲೂ ಭಾರತಿ ಮಗಳನ್ನು ಸಮಾಧಾನಿಸಲು ಹೋಗಲಿಲ್ಲ. ಬದಲಿಗೆ, ಮಕ್ಕಳಲ್ಲಿ ಶಿಸ್ತು ಬರಬೇಕಾದರೆ ಹೀಗೆ ಮಾಡಲೇಬೇಕು ಎಂದುಕೊಂಡಳು.
ನಂತರದ ಹತ್ತಿಪ್ಪತ್ತು ನಿಮಿಷಕ್ಕೇ ಯಶವಂತ ಬಂದ. ಗಂಡನಿಗೆ ಊಟ ಬಡಿಸಿ, ತಾನೂ ಬಡಿಸಿಕೊಂಡು ಮಗಳ ತುಂಟಾಟ, ಅದರಿಂದ ಉಂಟಾಗುವ ಕಿರಿಕಿರಿಯ ಬಗ್ಗೆ ಹೇಳಿದಳು ಭಾರತಿ. ಅವರು ಊಟ ಮುಗಿಸಿ ಮಲಗುವ ಕೋಣೆಗೆ ಹೋಗಬೇಕು ಎನ್ನುವಷ್ಟರಲ್ಲಿಯೇ-'ಮಮ್ಮಿ, ನಾನು ಒಂದು ಗಿಫ್ಟ್ ಕೊಡಬೇಕು ಅಂತಿದೀನಿ ಕಣ್ಣು ಮುಚ್ಕೋ, ಪ್ಲೀಸ್...' ಎಂಬ ಕನವರಿಕೆ ಕೇಳಿಸಿತು. 'ಭಾರ್ತೀ, ಮಗು ನಿದ್ರೆಯಲ್ಲೂ ಕನವರಿಸ್ತಾ ಇದೆ. ಮಗು ನಿಜವಾಗ್ಲೂ ಮಲಗಿದೆಯೋ ಇಲ್ವೋ ಎಂದು ಚೆಕ್ ಮಾಡಿಕೊಂಡು ಬಾ' ಎಂದ ಯಶವಂತ.
ಮಗಳ ರೂಂಗೆ ಬಂದು ಲೈಟ್ ಹಾಕಿದ ಭಾರತಿ ಒಂದರೆಕ್ಷಣ ಮಾತೇ ಹೊರಡದೇ ನಿಂತು ಬಿಟ್ಟಳು. ಕಾರಣ, ಟೆಡ್ಡಿ ಬೇರನ್ನು ತಬ್ಬಿಕೊಂಡು ಮಲಗಿದ್ದ ಮಗುವಿನ ಎರಡೂ ಕೆನ್ನೆಯ ಮೇಲೆ ಕಂಬನಿಯ ಬಿಂದುಗಳು ಹಾಗೇ ನಿಂತು ಹೋಗಿದ್ದವು. ಮಗುವಿನ ಕೈಯಲ್ಲಿ ಪುಟ್ಟದೊಂದು ಗ್ರೀಟಿಂಗ್ ಕಾರ್ಡ್ ಇತ್ತು. ಏನಿದು ಕಾರ್ಡು? 9 ವರ್ಷದ ಮಗಳು ಏನು ಬರೆದಿರಬಹುದು ಎಂಬ ಕುತೂಹಲದಿಂದಲೇ ನಿಧಾನವಾಗಿ ಕಾರ್ಡ್ ಎತ್ತಿಕೊಂಡು ಬಿಡಿಸಿ ನೋಡಿದಳು ಭಾರತಿ. ಆ ಪುಟ್ಟ ಮಗು, ತನ್ನದೇ ಭಾಷೆಯಲ್ಲಿ ಹೀಗೆ ಬರೆದಿತ್ತು: 'ಮಮ್ಮಿ, ಮಮ್ಮೀ, ನೀನು ಅಂದ್ರೆ ನಂಗೆ ಬಹಳ ಇಷ್ಟ. ಯಾಕೆ ಗೊತ್ತಾ? ಎಷ್ಟೆಲ್ಲಾ ಕೆಲಸ ಇದ್ರೂ ನನ್ನ ಬಗ್ಗೆ ಸ್ಪೆಷಲ್ ಕೇರ್ ತಗೊಳ್ತೀಯಾ, ಅದಕ್ಕೆ. ನಾನು ಕೇಳಿದ ತಿಂಡಿಯನ್ನೆಲ್ಲ ಮಾಡಿಕೊಡ್ತೀಯಲ್ಲ, ಅದಕ್ಕೆ. ಎಷ್ಟೇ ಆಯಾಸ ಆಗಿದ್ರೂ ತೋರಿಸಿಕೊಳ್ದೇ ದಿನಾಲು ಸಂಜೆ ನನ್ನನ್ನು ಸ್ಕೂಲ್‌ನಿಂದ ಕರ್ಕೊಂಡ್ ಬರ್ತೀಯಲ್ಲ ಅದಕ್ಕೆ. ನಮ್ಮ ಅಮ್ಮನಿಗೆ ಜಾಸ್ತಿ ಶಕ್ತಿ ಕೊಡಪ್ಪಾ, ಕಷ್ಟಗಳನ್ನು ಕಡಿಮೆ ಮಾಡಪ್ಪಾ ಎಂದು ದೇವರಲ್ಲಿ ದಿನಾಲೂ ಪ್ರಾರ್ಥಿಸ್ತಾ ಇರ್ತೇನೆ. ಹೌದು ಅಮ್ಮಾ, ನೀನಂದ್ರೆ ನಂಗೆ ತುಂಬಾ ಇಷ್ಟ...'
ಪತ್ರ ಓದಿ ಮುಗಿಸುತ್ತಿದ್ದಂತೆಯೇ ಭಾರತಿಗೆ ಕಣ್ತುಂಬಿ ಬಂತು. ಇಂಥ ಮುಗ್ಧ, ಮುದ್ದು ಮನಸ್ಸಿನ ಮಗುವಿನ ಮೇಲೆ ರೇಗಾಡಿದ್ದಕ್ಕೆ ಪಶ್ಚಾತ್ತಾಪವಾಯಿತು. ತಪ್ಪಾಯ್ತು ಮಗಳೇ ಎನ್ನುತ್ತಾ, ಆರಾಮಾಗಿ ನಿದ್ರಿಸುತ್ತಿದ್ದ ಮಗುವಿಗೆ ಒಂದು ಹೂ ಮುತ್ತು ಕೊಟ್ಟಳು. ಈ ದಿಢೀರ್ ಸ್ಪರ್ಷದಿಂದ ಗಾಬರಿಯಾದ ಮಗು -'ಅಮ್ಮನಿಗೆ ನನ್ಮೇಲಿರೋ ಸಿಟ್ಟು ಕಡಿಮೆಯಾಗೋ ಹಾಗೇ ಮಾಡು ದೇವರೇ' ಎಂದು ಬಿಕ್ಕಳಿಸುತ್ತಾ ಮಗ್ಗಲು ಬದಲಿಸಿತು. ತನ್ನ ಸಿಡಿಮಿಡಿಯ ವರ್ತನೆಗೆ ಸಂಕಟ ಪಡುತ್ತಾ ಮಗುವನ್ನು ಎದೆಗವಚಿಕೊಂಡು ಅಲ್ಲೇ ಮಲಗಿಬಿಟ್ಟಳು ಭಾರತಿ...
----
ಮಕ್ಕಳ ಮನಸ್ಸು ಸೂಕ್ಷ್ಮ. ಮಕ್ಕಳು ತುಂಬಾ ಸಾಫ್ಟ್. ಅವರೊಂದಿಗೆ ಬಹಳ ಎಚ್ಚರದಿಂದ ವರ್ತಿಸಬೇಕು. ತಾವು ಮಾಡಿದ ತಪ್ಪಿಗೆ ದೊಡ್ಡವರೇನೋ ಪಶ್ಚಾತ್ತಾಪ ಪಡಬಹುದು. ಆದರೆ ಎಳೆಯ ಮಕ್ಕಳ ಮನಸ್ಸಿಗೆ ಆಗುವ ಗಾಯ ಬೇಗ ಮಾಯುವುದಿಲ್ಲ ಎನ್ನುತ್ತಲೇ ಹೈಸ್ಕೂಲ್‌ನ ಕನ್ನಡ ಟೀಚರ್ ಹೇಳಿದ್ದ ಕಥೆ ಇದು, ಇವತ್ತು ಇದ್ದಕ್ಕಿದ್ದಂತೆ ನೆನಪಾಗಿ ಬಿಟ್ಟಿತು...
ಹೇಳಲು ಮರೆತಿದ್ದೆ: ಗೌರಿ ಮತ್ತು ಗಣೇಶ ಎಲ್ಲರ ಮನೆಗೂ ಬರಲಿ. ಮನಸ್ಸಿಗೂ! ಎಲ್ಲರಿಗೂ ಹಬ್ಬದ ಶುಭಾಶಯಗಳು.
- ನಾನು ಪ್ರಣತಿ