ಅಂಕಣಗಳು

ಬಿಜೆಪಿ-ಬಿಎಸ್‌ವೈ ಅನಿವಾರ್ಯ ಬೆಸುಗೆಗೆ ಮೋದಿ ಮುನ್ನುಡಿ

ಗುಜರಾತ್‌ನ ನರೇಂದ್ರ ಮೋದಿ ಎಂಬ ಚಂಡಮಾರುತ ದಿಲ್ಲಿಯತ್ತ ನುಗ್ಗಿ ಧಾರಾಕಾರ...

ಗುಜರಾತ್‌ನ ನರೇಂದ್ರ ಮೋದಿ ಎಂಬ ಚಂಡಮಾರುತ ದಿಲ್ಲಿಯತ್ತ ನುಗ್ಗಿ ಧಾರಾಕಾರ ಮಳೆ ಸುರಿಸಿದೆ. ಈ ಮಳೆ  ದಿಲ್ಲಿಯಲ್ಲಿ ಸೃಷ್ಟಿಸಿದ ಪ್ರವಾಹದಲ್ಲಿ ಎಲ್.ಕೆ. ಆಡ್ವಾಣಿ, ಸುಷ್ಮಾ ಸ್ವರಾಜ್ ಅವರಂತಹ ಮೋದಿ ವಿರೋಧಿ ರಾಷ್ಟ್ರೀಯ ನಾಯಕರು ಕೊಚ್ಚಿಕೊಂಡು ಹೋಗುತ್ತಿದ್ದಾರೆ. ಆದರೆ ದಕ್ಷಿಣ ಭಾರತದತ್ತ ಬರುವಾಗ ಈ ಮಳೆಯ ಪ್ರಮಾಣ ಹದವಾಗಿದ್ದು, ಕರ್ನಾಟಕದಲ್ಲಿ ಮುರುಟಿರುವ ಬಿಜೆಪಿ ಮತ್ತೆ ಚಿಗುರೊಡೆಯಲು ಹವಣಿಸುತ್ತಿದೆ.
ಹೌದು. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಸಂಚಲನ ಉಂಟಾಗಿದೆ. ಆಡ್ವಾಣಿ ಅವರ ಪ್ರಬಲ ವಿರೋಧದ ನಡುವೆಯೂ ಮೋದಿ ಅವರು ಮೇಲುಗೈ ಸಾಧಿಸಿರುವುದು ದೇಶಾದ್ಯಂತ ಪಕ್ಷದಲ್ಲಿ ಸಾಕಷ್ಟು ಬೆಳವಣಿಗೆಗಳಿಗೆ ಕಾರಣವಾಗಿದೆ. ಅಂತೆಯೇ ರಾಜ್ಯ ಬಿಜೆಪಿಯಲ್ಲೂ ಒಂದಷ್ಟು ಅನಿನಾರ್ಯತೆಗಳನ್ನು ಸೃಷ್ಟಿಸಿದ್ದು, ಒಡೆದ ಮನಗಳ ಬೆಸುಗೆ ಪ್ರಕ್ರಿಯೆಗೆ ಮುನ್ನುಡಿ ಬರೆದಿದೆ.
ಬಿಜೆಪಿಯಿಂದ ಕಿತ್ತುಕೊಂಡು ಹೋಗಿ ಕರ್ನಾಟಕ ಜನತಾ ಪಾರ್ಟಿ (ಕೆಜೆಪಿ) ಕಟ್ಟಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾತೃಪಕ್ಷವನ್ನು ಕಾಲಿಗೆ ಕಟ್ಟಿಕೊಂಡೇ ಮುಳುಗಿದರು. ಅಂದರೆ ಬಿಜೆಪಿಯನ್ನು ಮುಳುಗಿಸಿದರು, ತಾವೂ ಮುಳುಗಿದರು. ಆ ಚುನಾವಣೆಯಿಂದೀಚೆಗೆ ಬಿಜೆಪಿ ಮತ್ತು ಯಡಿಯೂರಪ್ಪ ಎರಡೂ ಕಡೆ ಮನಮಂಥನ ನಡೆಯುತ್ತಿತ್ತು. 'ಯಡಿಯೂರಪ್ಪ ಇಲ್ಲದೇ ರಾಜ್ಯ ಬಿಜೆಪಿ ಇಲ್ಲ, ರಾಜ್ಯ ಬಿಜೆಪಿ ಇಲ್ಲದೇ ಯಡಿಯೂರಪ್ಪ ಇಲ್ಲ' ಎಂಬ ಸಹಜ ಘೋಷಣೆ ಎರಡೂ ಪಾಳೆಯದಲ್ಲೂ ಮೊಳಗುತ್ತಿತ್ತು. ಆದರೆ ಈ ಘೋಷಣೆ ನಿಜ ಮಾಡಲು ಸಂದರ್ಭಗಳ ಅನ್ವೇಷಣೆಯೂ ನಡೆಯುತ್ತಿತ್ತು. ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಘೋಷಣೆಯೇ ಇದೀಗ ರಾಜ್ಯ ಬಿಜೆಪಿ ಪಾಲಿಗೆ ಆ ಸಂದರ್ಭವಾಗಿ, ಆ ಸಂದರ್ಭ ಸ್ವರೂಪದ ವರದಾನವಾಗಿ ಒದಗಿ ಬಂದಿದೆ.
ವಿಧಾನಸಭೆ ಚುನಾವಣೆ ನಂತರ ಬಿಜೆಪಿಗೆ ಯಡಿಯೂರಪ್ಪ ಮರುಸೇರ್ಪಡೆ ವಿಚಾರ ಎರಡೂ ಪಾಳೆಯದಲ್ಲೂ ಹತ್ತಾರು ಬಾರಿ ಬಂದು ಹೋಗಿತ್ತು. ಆದರೆ ಪ್ರತಿಷ್ಠೆ ಎಂಬುದು ಅದನ್ನು ವಿಚಾರ ಹಂತಕ್ಕೇ ಸೀಮಿತಗೊಳಿಸಿ, ಅನುಷ್ಠಾನ ಎಂಬುದನ್ನು ಮುಂದಕ್ಕೆ ಹಾಕುತ್ತಲೇ ಬಂದಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಯಡಿಯೂರಪ್ಪ ಮಾತೃಪಕ್ಷಕ್ಕೆ ಮರಳಲು ಬಿಜೆಪಿಯಲ್ಲಿ ಲೈನ್ ಕ್ಲಿಯರ್ ಆಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಸೇರಿದಂತೆ ಯಡಿಯೂರಪ್ಪ ವಿರೋಧಿಗಳು ಎನಿಸಿಕೊಂಡಿದ್ದವರೆಲ್ಲ ಈಗ ತಮ್ಮ ನಿಲುವಿನಲ್ಲಿ 'ಯೂ ಟರ್ನ್‌' ತೆಗೆದುಕೊಂಡಿದ್ದಾರೆ. ತಾವು ಪಕ್ಷದಲ್ಲಿ ಅಧಿಕಾರ ಅನುಭವಿಸಬಹುದೇ ಹೊರತು ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ ಎಂಬುದು ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಮನನ ಆಗಿರುವುದೇ ಇದಕ್ಕೆ ಕಾರಣ.
ರಾಜ್ಯ ಬಿಜೆಪಿ ನಾಯಕರ ಮೇಲೆ ಮೋದಿ ಅಂಶ ಬೀರಿರುವ ಪ್ರಭಾವ ಅಂತಿಂಥದ್ದಲ್ಲ. ಮೊದಲಿಂದಲೂ ಆಡ್ವಾಣಿ ಪರ ನಿಂತಿದ್ದ, ಆಡ್ವಾಣಿಯವರ ಜತೆ ಗುರುತಿಸಿಕೊಂಡಿದ್ದ ಅನಂತಕುಮಾರ್ ಇತ್ತೀಚೆಗೆ ತಟಸ್ಥ ನಿಲುವಿಗೆ ಅಂಟಿಕೊಂಡರು. ಮೋದಿ-ಆಡ್ವಾಣಿ ನಡುವೆ ಸಂಘರ್ಷ ಸಂದರ್ಭದಲ್ಲಿ ಅಡ್ಡಗೋಡೆ ಮೇಲೆ ನಿಂತು ಮೌನ ವೀಕ್ಷಕರಾದರು. ರಾಜಕೀಯ ಅವಕಾಶಗಳನ್ನು ನಿಯಂತ್ರಿಸುವ ಅನಿವಾರ್ಯತೆಯ ಜತೆ ಷಾಮೀಲಾದರು. ತತ್ಪರಿಣಾಮವಾಗಿ ಈಗವರು ಗೆದ್ದೆತ್ತಿನ ಬಾಲ ಹಿಡಿದರು ಎಂಬಂತೆ ಮೋದಿ ಪರ ವಾಲಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು ಮೋದಿ ಪರವಾಗಿ ಅನಂತಕುಮಾರ್ ಅವರನ್ನು ಸುಷ್ಮಾ ಸ್ವರಾಜ್ ಮನೆಗೆ ಸಂಧಾನಕಾರರಾಗಿ ಕಳುಹಿಸಿದ್ದಾರೆ. ಸುಷ್ಮಾ ಸ್ವರಾಜ್ ಅವರನ್ನು ಸಮಾಧಾನಪಡಿಸುವ ಹೊಣೆಯನ್ನೂ ಅವರಿಗೇ ವಹಿಸಿದ್ದಾರೆ. ಈಗ ಅನಂತಕುಮಾರ್ ಅವರು ಮೋದಿ ಪಾಳೆಯದ ಪಾಳೆಗಾರರು.
ಇನ್ನೊಂದೆಡೆ ಮೋದಿ ಅವರ ಬಗ್ಗೆ ಯಡಿಯೂರಪ್ಪ ಅವರಿಗೆ ಮೊದಲಿಂದಲೂ ಗೌರವ. ಇದಕ್ಕೆ ಎರಡು ಕಾರಣ. ಮೋದಿ ವಿರೋಧಿ ಆಡ್ವಾಣಿ ಅವರ ಜತೆಯಲ್ಲಿ ತಮ್ಮ ವಿರೋಧಿ ಅನಂತಕುಮಾರ್ ಗುರುತಿಸಿಕೊಂಡಿದ್ದರು ಎಂಬುದು. ಜತೆಗೆ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ವಿರುದ್ಧ ಆಡ್ವಾಣಿ ಅವರು ಹಲವಾರು ಬಾರಿ ಅಡ್ಡಮಾತುಗಳನ್ನು ಅಡಿದ್ದರು ಎಂಬುದು. ಮೋದಿ ಅವರಿಗೂ ಯಡಿಯೂರಪ್ಪನವರ ಬಗ್ಗೆ ಮೃದುಧೋರಣೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಪ್ರಧಾನಿ ಅಭ್ಯರ್ಥಿಯಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಹೊಣೆ ಹೊತ್ತಿರುವ ಮೋದಿ ಅವರಿಗೆ ಈಗ ಪ್ರತಿಯೊಬ್ಬರೂ ಬೇಕು. ಹಾಗೆಯೇ ಅವರಿಗೆ ಕರ್ನಾಟಕದಲ್ಲಿ ಯಡಿಯೂರಪ್ಪನವರೂ ಬೇಕು, ಅನಂತಕುಮಾರ್ ಅವರೂ ಬೇಕು. ಅದೇ ರೀತಿ ಇವರಿಬ್ಬರಿಗೂ ಮೋದಿ ಬೇಕು. ಹೀಗಾಗಿ ಅನಂತಕುಮಾರ್ ಹಾಗೂ ಯಡಿಯೂರಪ್ಪ ಅವರು ಪಕ್ಷದ ಹಿತದೃಷ್ಯಿಯಿಂದ ತಮ್ಮ ನಡುವಣ ಬಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗುವ ಅನಿವಾರ್ಯತೆಗೆ ಸಿಕ್ಕಿದ್ದಾರೆ.
ಬಿಜೆಪಿ ಜತೆ ಸೇರುವ ಬಗ್ಗೆ ಡಿ. 19 ರಂದು ತೀರ್ಮಾನ ಪ್ರಕಟಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಸಂದರ್ಭ ಅವರ ಪ್ರತಿಕ್ರಿಯೆಯ ಉತ್ಸಾಹ ಹೇಗಿತ್ತು ಅಂದರೆ ಅವರು ಈಗಾಗಲೇ ಬಿಜೆಪಿಗೆ ಬಂದಾಯ್ತು ಎಂಬಂತಿತ್ತು. ದೇಶದ ಆಶೀರ್ವಾದ ಮೋದಿ ಅವರಿಗಿದೆ. ಆಟಲ್ ಬಿಹಾರಿ ವಾಜಪೇಯಿ ನಂತರ ಅತ್ಯಂತ ಜನಪ್ರಿಯ ವ್ಯಕ್ತಿ ಇವರು. ಇವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಅವರು ಹೇಳಿದ್ದರು. ಮೋದಿ ಅವರನ್ನು ಹೊಗಳುವುದರಲ್ಲಿ, ಅವರಿಗೆ ಹತ್ತಿರಾಗುವುದಕ್ಕೆ ಎಲ್ಲ ನಾಯಕರು ಹಾತೊರೆಯುತ್ತಿದ್ದಾರೆ. ಈ ವಿಚಾರದಲ್ಲಿ ಅನಂತಕುಮಾರ್ ಹಾಗೂ ಯಡಿಯೂರಪ್ಪ ಅವರ ನಡುವೆ ಸ್ಪರ್ಧೆ ಏರ್ಪಟ್ಟರೆ ಅಚ್ಚರಿ ಪಡಬೇಕಿಲ್ಲ. ಮೋದಿ ಪ್ರಧಾನಿ ಅಭ್ಯರ್ಥಿ ಘೋಷಣೆ ವೇದಿಕೆಯಲ್ಲಿ ಅನಂತಕುಮಾರ್ ಇದ್ದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅದು ಸಹಜವೇ. ಆದರೆ ಯಡಿಯೂರಪ್ಪನವರ ಹೇಳಿಕೆ ವೇದಿಕೆಯಲ್ಲಿ ಅನಂತಕುಮಾರ್ ಇರುವಿಕೆಗೆ ಸ್ಪರ್ಧೆ ಕೊಡುವ ರೀತಿಯಲ್ಲಿತ್ತು. ಬಿಜೆಪಿ ಸೇರಲು ಇದಕ್ಕಿಂತ ಸದವಕಾಶ ಬೇರೊಂದಿಲ್ಲ ಎಂಬುದನ್ನು ಸಾರುವುದೂ ಆಗಿತ್ತು.
ಮೋದಿ ಘೋಷಣೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಸದಾನಂದಗೌಡ, ಮಾಜಿ ಡಿಸಿಎಂ ಈಶ್ಪರಪ್ಪ ಮತ್ತಿತರರು ಯಡಿಯೂರಪ್ಪ ಹೆಸರು ಪ್ರಸ್ತಾಪಿಸಿದ್ದಾರೆ. ಯಡಿಯೂರಪ್ಪ ಬಿಜೆಪಿಗೆ ಬರುತ್ತಾರೆ, ನಾವೆಲ್ಲರೂ ಅವರ ಜತೆ ಇರುತ್ತೇವೆ, ಒಟ್ಟಿಗೆ ಕೆಲಸ ಮಾಡುತ್ತೇವೆ ಎಂಬ ಸಂದೇಶ ಅವರ ಪ್ರತಿಕ್ರಿಯೆಯ ಹಿಂದೆ ಅಡಗಿತ್ತು. ಸುಖಾಸುಮ್ಮನೆ ಅವರಿಂದ ಇಂಥಹ ಸಂದೇಶಗಳು ರವಾನೆ ಆಗುತ್ತಿಲ್ಲ. ಬಿಜೆಪಿ ಮಟ್ಟಿಗೆ ಜನರ ಮಧ್ಯೆ ನಿಂತು ಪಕ್ಷ ಬೆಳೆಸುವ ಸಾಮರ್ಥ್ಯ ಇರುವುದು ಯಡಿಯೂರಪ್ಪ ಅವರಿಗೆ ಮಾತ್ರ. ಉಳಿದವರು ತಮ್ಮ-ತಮ್ಮ ಭಾಗಗಳಿಗೆ ಮಾತ್ರ ಅರಸರು. ಹೀಗಾಗಿ ಅವರಿಗೆ ಯಡಿಯೂರಪ್ಪ ಅನಿವಾರ್ಯ.
ಇನ್ನು ವ್ಯಕ್ತಿಗತ ವಿಚಾರಗಳಿಗೆ ಬಂದರೂ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಯಡಿಯೂರಪ್ಪನವರ ಸ್ನೇಹ ಅನಂತಕುಮಾರ್ ಅವರಿಗೂ ಅನಿವಾರ್ಯ. 2009 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅನಂತಕುಮಾರ್ ಗೆಲ್ಲಲು ಮುಖ್ಯ ಕಾರಣ ವಿ. ಸೋಮಣ್ಣ. ಒಕ್ಕಲಿಗರ ಪ್ರಭಾವ ಸಮಪ್ರಮಾಣದಲ್ಲಿರುವ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಕೃಷ್ಣಬೈರೇಗೌಡ ಕಾಂಗ್ರೆಸ್ ಅಭ್ಯರ್ಥಿಯಾದಾಗ ಅನಂತಕುಮಾರ್ ಥರಗುಟ್ಟಿ ಹೋಗಿದ್ದರು. ಲಿಂಗಾಯತ ಸಮುದಾಯದ ಬೆಂಬಲ ಇಲ್ಲದೇ ಗೆಲ್ಲುವುದು ಅವರಿಗೆ ಸಾಧ್ಯವೇ ಇರಲಿಲ್ಲ. ಆಗ ಇದೇ ಯಡಿಯೂರಪ್ಪನವರು ಸೋಮಣ್ಣ ಅವರನ್ನು ಕಾಂಗ್ರೆಸ್‌ನಿಂದ ಬಿಜೆಪಿಗೆ ಕರೆತಂದು ಅನಂತಕುಮಾರ್ ಗೆಲುವು ಖಾತರಿ ಮಾಡಿದ್ದರು. ಈಗಲೂ ಅನಂತಕುಮಾರ್ ಅವರಿಗೆ ಅದೇ ಪರಿಸ್ಥಿತಿ. ಹಿಂದೆ ತಮಗೆ ಲಿಂಗಾಯತ ಮತಗಳನ್ನು ತಂದುಕೊಟ್ಟ ಸೋಮಣ್ಣ ಅವರೇ ಸೋತು ಸುಣ್ಣವಾಗಿದ್ದಾರೆ. ಅವರನ್ನು ಸೋಲಿಸಲು ಲಿಂಗಾಯತ ಸಮುದಾಯಕ್ಕೆ ಸುಪಾರಿ ಕೊಟ್ಟವರು ಇದೇ ಯಡಿಯೂರಪ್ಪ. ಸೋಮಣ್ಣನವರನ್ನೇ ಸೋಲಿಸಿದ ಯಡಿಯೂರಪ್ಪ ಈಗ ತಮಗೆ ಮುಳುಗುನೀರು ತೋರಿಸದೇ ಬಿಡರು ಎಂಬ ಭೀತಿ ಅನಂತಕುಮಾರ್ ಅವರಿಗಿದ್ದು, ಅವರ ಜತೆ ಹೊಂದಾಣಿಕೆ ಅನಿವಾರ್ಯವಾಗಿದೆ.
ಅದೇ ರೀತಿ ಯಡಿಯೂರಪ್ಪ ಅವರಿಗೂ ಬಿಜೆಪಿ ಅನಿವಾರ್ಯ. ಫುಟ್‌ಬಾಲ್ ಆಟಗಾರನಿಗೆ ವಿಶಾಲ ಮೈದಾನ ಇರಬೇಕು. ಅದು ಬಿಟ್ಟು ಮನೆಯೊಳಗೆ ಆಡಲು ಸಾಧ್ಯವಿಲ್ಲ ಎಂಬುದು ಅವರಿಗೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮನದಟ್ಟಾಗಿದೆ. ಹೀಗಾಗಿ ಅವರು ಕೂಡ ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ. ಅವರ ಉತ್ಸಾಹಕ್ಕೆ ಮೋದಿ ಅಂಶ ವರವಾಗಿ ಪರಿಣಮಿಸಿದೆ. ಬಿಜೆಪಿ ವಿಭಜನೆ, ಕೆಜೆಪಿ ಸೃಜನೆ ಒಂದೆಡೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು, ಇನ್ನೊಂದೆಡೆ ಜೆಡಿಎಸ್ ಪ್ರತಿಪಕ್ಷ ಸ್ಥಾನಕ್ಕೇರಲು ಅನುಕೂಲ ಮಾಡಿಕೊಟ್ಟಿತೇ ಹೊರತು ಆ ಎರಡೂ ಪಕ್ಷಗಳಿಗೆ ಆದ ಲಾಭ ಏನೂ ಇಲ್ಲ. ನೇಣುಗಂಬ ಹಂಚಿಕೊಂಡ ದುಃಖದಲ್ಲಿರುವ ಬಿಜೆಪಿ ಹಾಗೂ ಕೆಜೆಪಿಗೆ ಈಗ ಮೋದಿ ಅಂಶವೇ ಸೇತುಬಂಧ.
ವಿಧಾನಸಭೆ ಚುನಾವಣೆಯಲ್ಲಿ ಜನನಾಯಕನ ನೇತೃತ್ವ ಇಲ್ಲದೇ ಬಿಜೆಪಿ ಸೋತಿತು. ಮೋದಿ ಅವರು ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದಾಗ ರಾಜ್ಯ ನಾಯಕರು ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟನೆಗೆ ಮುಂದಾದರು. ಅವರು ಎಷ್ಟೇ ಮೈ ಕೊಡವಿಕೊಂಡರೂ ಅಂಗಿಯಲ್ಲಿದ್ದ ಧೂಳು ಉದುರಿತೇ ಹೊರತು ಪಕ್ಷಕ್ಕಂಟಿರುವ ನಿಷ್ಕ್ರಿಯತೆ ನಿವಾರಣೆ ಆಗಲಿಲ್ಲ. ಪ್ರತಿ ಹಂತದಲ್ಲೂ ನಾಯಕತ್ವದ ಕೊರತೆ ಎದ್ದು ಕಾಣುತ್ತಿತ್ತು. ನರೇಂದ್ರ ಮೋದಿ ಗುಣವನ್ನು ಪಕ್ಷಕ್ಕೆ ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳಲು ರಾಜ್ಯದಲ್ಲೂ ಪ್ರಬಲ ನಾಯಕತ್ವ ಬೇಕೇ ಬೇಕು. ಅದು ಇರುವುದು ಯಡಿಯೂರಪ್ಪ ಅವರಿಗೆ ಮಾತ್ರ ಎಂಬುದನ್ನು ಬಿಜೆಪಿಯ ಉಳಿದ ನಾಯಕರೇ ಒಪ್ಪಿಕೊಂಡಿದ್ದಾರೆ.
ಕಳೆದ ವಾರ ಇದ್ದ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಇದ್ದಕ್ಕಿದ್ದಂತೆ ರದ್ದುಪಡಿಸಲಾಯಿತು. ಅದಕ್ಕೆ ಕೊಟ್ಟ ನೆಪ ಸವಣೂರು ಪುರಸಭೆ ಚುನಾವಣೆ. ವಾಸ್ತವವಾಗಿ ಈ ಸಭೆಯ ಕಾರ್ಯಸೂಚಿ ಮೋದಿ ಪ್ರಧಾನಿ ಅಭ್ಯರ್ಥಿ ಬಗ್ಗೆ ತಳೆಯಬೇಕಾದ ನಿಲುವು, ನವಭಾರತ ಜಯುಭೇರಿ ರ್ಯಾಲಿ ಸಿದ್ಧತೆ, ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ. ಆದರೆ ವಾಸ್ತವವಾಗಿ ಇವೆಲ್ಲಕ್ಕಿಂತ ಮಿಗಿಲಾಗಿ ಇದ್ದದ್ದು ಯಡಿಯೂರಪ್ಪ ಬಿಜೆಪಿ ಸೇರ್ಪಡೆ ವಿಚಾರ. ಅವರನ್ನು ಆದಷ್ಟು ಬೇಗ ಪಕ್ಷಕ್ಕೆ ಕರೆಯಿಸಿಕೊಳ್ಳುವ ಬಗ್ಗೆ ದಿಲ್ಲಿ ನಾಯಕರ ಮನವೊಲಿಸಲು ರಾಜ್ಯ ನಾಯಕರೊಬ್ಬರನ್ನು ಅಲ್ಲಿಗೆ ಕಳುಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿತ್ತು. ಆದರೆ ಸಭೆ ರದ್ದಾಯಿತು. ಇದೀಗ ಮೋದಿ ನೆಪದಲ್ಲಿ ಯಡಿಯೂರಪ್ಪ ಅವರೇ ಎಲ್ಲರಿಗಿಂತ ಮಿಗಿಲಾಗಿ ಉತ್ಸಾಹ ತೋರಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ತೀರ್ಮಾನ ಮಾಡಿ ಎಂದೋ ಆಗಿದೆ. ಈಗೇನಿದ್ದರೂ ಅದು ಕಾರ್ಯರೂಪಕ್ಕೆ ಬರಬೇಕು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುರಿಯಲು, ಬಿಜೆಪಿ ಲೋಕಸಭೆ ಯಶೋಗಾಥೆ ಮುಂದುವರಿಸಲು ಇದು ಅನಿವಾರ್ಯ ಎಂಬ ನಿಲುವಿಗೆ ಅವರೆಲ್ಲರೂ ಬಂದಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಾರಮ್ಯ ಮೆರೆಯಬೇಕು ಎಂಬುದು ಅವರ ಒಳಮಂತ್ರ. ನರೇಂದ್ರ ಮೋದಿ ಅಂಶ ಅದಕ್ಕೊಂದು ಸಂದರ್ಭ ಒದಗಿಸಿದೆ. ಯಡಿಯೂರಪ್ಪ ಬಿಜೆಪಿಗೆ ಮರಳುವುದು ಬಹುತೇಕ ಖಚಿತವಾಗಿದೆ. ಪ್ರತಿಷ್ಠೆ ಅದರ ಹಿಂದೆ ನಿಂತಿದೆ.

ಲಗೋರಿ: ಅನಿವಾರ್ಯತೆ ಹಲವರನ್ನು ಬೆಸೆಯುತ್ತದೆ. ಆದರೆ ಆಪ್ತತೆ ಎಂಬುದು ತನ್ನೊಳಗಿಂದಲೇ ಬರಬೇಕು.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!