ಮನೆ ಮುರುಕ ಕಾನೂನು ನಮಗೆ ಬೇಕಾ?
ನೀವು ನಿಮ್ಮ ಇಬ್ಬರು ಹೆಣ್ಣು ಮಕ್ಕಳಿಗೂ, ಬೇಕಾದ ಪಾತ್ರೆ, ಪಗಡ, ಬೆಳ್ಳಿ, ಬಂಗಾರ ಮಾಡಿಸಿಕೊಟ್ಟು ಸಂಭ್ರಮದಿಂದ ಮದುವೆ ಮಾಡಿಕೊಟ್ಟಿದ್ದೀರ. ಅವರ ಜೀವನಪಥ ಸುಗಮವಾಗಿರಲೆಂದು ಹೊಲ ಮಾರಿ, ಸಾಲ ಮಾಡಿದರೂ ಪರವಾಗಿಲ್ಲವೆಂದುಕೊಂಡು ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ ಅವರ ಸಂಸಾರಕ್ಕೆ ವ್ಯವಸ್ಥೆ ಮಾಡಿಕೊಟ್ಟು, ಕಾನೂನು ಬಾಹಿರವೆಂದು ಗೊತ್ತಿದ್ದರೂ ವರದಕ್ಷಿಣೆ ಕೊಟ್ಟು ಚೆಂದದಲ್ಲಿ ವಿವಾಹ ಮಾಡಿ ಮುಗಿಸಿದ್ದೀರ. ನಂತರ ಹಿರಿಯರಿಂದ ಬಂದಿದ್ದರಲ್ಲಿ ಉಳಿದ ಎರಡು ಎಕರೆ ಭತ್ತದ ಗದ್ದೆಯನ್ನು ಪಾಲಿಸಿಕೊಂಡು, ಅದರ ಅದಾಯದಲ್ಲಿ, ಇರುವ ಒಬ್ಬ ಮಗನೊಂದಿಗೆ ಹೇಗೋ ಮರ್ಯಾದೆಯಿಂದ ಬಾಳುವೆ ನಡೆಸುತ್ತಿದ್ದೀರ. ಕೆಲವೇ ತಿಂಗಳುಗಳು ಕಳೆದಿವೆ. ಬಾನಲ್ಲಿ ಮೋಡಗಳೇ ಇಲ್ಲದಿದ್ದರೂ ನಿಮ್ಮ ಮನೆಗೆ ಸಿಡಿಲೊಂದು ಅಪ್ಪಳಿಸುತ್ತದೆ!
ನಿಮ್ಮ ಒಬ್ಬ ಮಗಳು ಬಂದು "ಅಪ್ಪಾ, ನನಗೆ ಮನೆಯ ಆಸ್ತಿಯಲ್ಲಿ ಪಾಲು ಬೇಕು" ಎಂದು ಕೇಳುತ್ತಾಳೆ. ಈಗ ಏನು ಮಾಡುತ್ತೀರ?! ಇಂಥ ಸಂದರ್ಭವನ್ನೇ ಕಲ್ಪಿಸಿಕೊಳ್ಳದ ನೀವು ಗಲಿಬಿಲಿಗೊಂಡು ಸಾವರಿಸಿಕೊಳ್ಳುವಷ್ಟರಲ್ಲಿ ಅಷ್ಟು ವರ್ಷ ಅಣ್ಣ ತಂಗಿಯಂತಿದ್ದ ಮಗ-ಮಗಳು ಜಗಳ ಶುರು ಹಚ್ಚಿಕೊಂಡಿರುತ್ತಾರೆ. ವಿಷಯ ತಿಳಿದ ಇನ್ನೊಬ್ಬ ಮಗಳೂ "ಪಾಲು ಮಾಡಿದರೆ ತನಗೂ ಬೇಕು" ಎಂದು ತೌರಿಗೆ ಬಂದು ಕುಳಿತುಕೊಳ್ಳುತ್ತಾಳೆ. ನಿಜವಾದ ಸಿಡಿಲಿಗೇ ಹೆದರದ ಬಂದೋಬಸ್ತ್ ಸಂಸಾರದಲ್ಲಿ ಈಗ ಬಿರುಕು ಕಾಣಿಸಿಕೊಂಡಿತು. ಸರಿ, ಪಾಲು ಮಾಡಿದರೆ ಎಷ್ಟು ಭಾಗ ಮಾಡಬೇಕು? ಮೂರು ಮಕ್ಕಳಿಗೆ ಮೂರು ಪಾಲೇ? ತಂದೆ-ತಾಯಿಗೆ ಬೇಡವೇ? ಅವರು ಇರುವಾಗಲೇ ಆಸ್ತಿಗಾಗಿ ಕಚ್ಚಾಡುವ ಮಕ್ಕಳು, ಆಸ್ತಿ ತಮ್ಮ ಕೈ ಸೇರಿದ ಮೇಲೆ ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಏನು ಗ್ಯಾರಂಟಿ? ಹಾಗಾಗಿ ಎರಡು ಎಕರೆಯ ಗದ್ದೆಯಲ್ಲಿ ಐದು ಭಾಗ. ಎಷ್ಟು ಬರುತ್ತದೆ? ನಿಮಗೆ ಗೊತ್ತು.
ಆದರೆ ಈಗಿನ ಕಾನೂನು ಇಂಥ ಒಂದು ಸಂದರ್ಭಕ್ಕೆ ಅವಕಾಶ ಮಾಡಿಕೊಡುತ್ತಿದೆ. ಈ ಉದಾಹರಣೆ ಸಾಂಕೇತಿಕ ಮಾತ್ರ. ಇಂತಹುದು ನಿಮ್ಮ ಮನೆಯಲ್ಲೇ ಆಗಿರಬಹುದು ಅಥವಾ ನಾಳೆ ಆಗಲೂಬಹುದು!
ಈಗ ಅಂಗೀಕಾರವಾಗಿರುವ ಕಾನೂನು Hindu Succession (Amendment) Act 2005. ಸರಳವಾಗಿ ಹೇಳಬೇಕೆಂದರೆ, "ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಪಾಲು ಕೊಡಬೇಕು" ಎಂಬುದು. ಅವರೂ ರಕ್ತ ಹಂಚಿಕೊಂಡು ಹುಟ್ಟಿರುವ ಮಕ್ಕಳೇ ಅಲ್ಲವೇ ಎಂಬ ಸಹಜ ಸುಲಭ ಪ್ರಶ್ನೆಗಳು ನಮಗರಿವಾಗದೇ ಮೂಡುತ್ತವೆ. ನಗರ ಪ್ರದೇಶದ ಹಿರಿಯರು 'ಈ ಕಾನೂನು ಇಷ್ಟು ವರ್ಷಗಳಾದ ಮೇಲೆ ಈಗಲಾದರೂ ಬಂತಲ್ಲ ಅಂದುಕೊಳ್ಳುತ್ತಿರುವಾಗ, ಮಹಿಳಾ ಸಂಘಗಳು "ನಮ್ಮ ಹೋರಾಟಕ್ಕೆ ಸಂದ ಜಯ" ಎಂದು ಸಂತಸಪಡುತ್ತಿದ್ದಾರೆ.
ಹಿಂದುಗಳ ಸಾಮಾಜಿಕ ಕಟ್ಟಳೆಗಳನ್ನು ಹಿಂಡಿ ಹಿಪ್ಪೆ ಮಾಡಿರುವ ಅನೇಕ ಕಾನೂನುಗಳಲ್ಲಿ ಇದೂ ಒಂದು. ನಗರ ಪ್ರದೇಶದ ಚೌಕಟ್ಟಿನಲ್ಲಿ, ಈ ಕಾನೂನಿನ ಬಾಧ್ಯತೆಯಾಗಲಿ, ಆಳ-ತೀವ್ರತೆಯಾಗಲಿ ಅರ್ಥವಾಗುವುದಕ್ಕೆ ಸಾಧ್ಯವೇ ಇಲ್ಲ. ನಗರವೆಂದ ಕೂಡಲೇ ನೂರಕ್ಕೆ 80ರಷ್ಟು ಪೂರ್ವ ನಿಯೋಜಿತ ಕುಟುಂಬಗಳು, ತಮ್ಮ ಮಕ್ಕಳು ಮುಂದೆ ಏನಾಗಬೇಕು, ಏನಾಗುತ್ತಾರೆಂಬ ನಿರ್ದಿಷ್ಟ ಪಥದ ಅರಿವಿರುವ ತಂದೆ-ತಾಯಿ, ಗಂಡು-ಹೆಣ್ಣೆಂಬ ಭೇದವಿಲ್ಲದೇ ಅವರಿಗೆ ಬೇಕಾದ್ದನ್ನು ಯೋಜನೆಯಂತೆ ಮಾಡಿಟ್ಟಿರುತ್ತಾರೆ. ನಗರ ಪ್ರದೇಶದ ಜೀವನಶೈಲಿ ಪಾಶ್ಚಾತ್ಯವೆಂಬುದು ಯಾರು ಒಪ್ಪಲಿ ಬಿಡಲಿ ವಾಸ್ತವ ಸಂಗತಿ. ಇಲ್ಲಿ ನಾವು ನೆನಪಿಟ್ಟುಕೊಳ್ಳಲೇಬೇಕಾದ ಒಂದು ಅಂಶವೆಂದರೆ "ನಗರವೆಂಬುದು ನಮ್ಮ ದೇಶದ ಒಟ್ಟು ಜನಜೀವನವನ್ನು ಬಿಂಬಿಸುವುದಿಲ್ಲ ಅಥವ ನಮ್ಮ ದೇಶದ ಆತ್ಮ-ನಗರ ಪ್ರದೇಶದಲ್ಲಿ ಇಲ್ಲ" ಎಂಬುದು. ಹಳ್ಳಿಗೆ ಹೋಗಿ ಸಾಮಾನ್ಯ ರೈತಾಪೀ ಜನರನ್ನು ಕೇಳಿ, ನಿಮಗೆ ಇಂಥದ್ದೊಂದು ಕಾನೂನು ಬೇಕೇ? ಎಂದು. ಗಂಡಸರಿರಲಿ, ಈ ಕಾನೂನಿನ ಹೇಸಿಗೆ ಹುಟ್ಟಿಸುವ ಪರಿಣಾಮವನ್ನು ಹಳ್ಳಿಯ ಹೆಂಗಸರೇ ಬೈದುಕೊಳ್ಳುವುದನ್ನು ನೋಡಬಹುದು..
ನಮ್ಮ ದೇಶದ ಜೀವಾಳವಾಗಿರುವ ಕುಟುಂಬ ಕಲ್ಪನೆಯೇ ಇಡೀ ವಿಶ್ವಕ್ಕೆ ಮಾದರಿ. ಹಿಂದುಗಳಲ್ಲಿ ಅಪರೂಪದ ಒಂದು ಪದ್ಧತಿಯಿದೆ. ಅದೇ ಅವಿಭಕ್ತ ಕುಟುಂಬ. ಈಗಿನ ಪುರುಷರು ಅಂದುಕೊಳ್ಳುತ್ತಾರೆ, 'ತಾವು ಕಷ್ಟ ಪಟ್ಟು ಆಸ್ತಿ ಮಾಡುವುದು, ಮುಂದೆ ಹೆಣ್ಣು ಮಕ್ಕಳು ಬಂದು ಆಸ್ತಿ ಕೇಳಿದರೆ?' ಹಾಗಾಗೇ ಎಲ್ಲರೂ ಸ್ವತಂತ್ರರಾಗಿ ಮೈಕ್ರೋ ಕುಟುಂಬಗಳಾಗಿ ಬದಲಾಗಲು ಹಾತೊರೆಯುತ್ತಿದ್ದಾರೆ. ಅಲ್ಲದೆ ವರದಕ್ಷಿಣೆ ತರಬೇಕೆಂದು ಕಿರುಕುಳ ಕೊಡುವ ಗಂಡನ ಮನೆಯವರೂ ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳದೇ ಇರುತ್ತಾರೆಯೇ? ಹೆಣ್ಣು ಮಕ್ಕಳು ಇದರ ಬಗ್ಗೆ ವಿಶಾಲ ದೃಷ್ಟಿಯಿಂದ ಯೋಚಿಸುವ ಅಗತ್ಯವಿದೆ. 'ತಾವು ಮದುವೆಯಾಗಿ ಹೋಗುವ ಮನೆಯಲ್ಲೂ ಇದೇ ರೀತಿ ಆ ಮನೆಯ ಹೆಣ್ಣು ಮಕ್ಕಳು ಆಸ್ತಿ ಕೇಳಿದರೆ? ತುಂಡರಿಸಲ್ಪಟ್ಟ ಆಸ್ತಿಯಿಂದ ಯಾರಿಗೆ ಉಪಯೋಗವಿದೆ? ಯಾರಿಗೆ ಸುಖ-ನೆಮ್ಮದಿಯಿದೆ?
ಈ ಹಿಂದೆ ಹಿಂದು ಸಮಾಜದಲ್ಲಿ ಸ್ತ್ರೀಯರಿಗೆ ಹಣ, ಆಸ್ತಿಯನ್ನು ಹಂಚದೆ ಅನ್ಯಾಯ ಮಾಡುತ್ತಿದ್ದರೆಂಬ ಆಪಾದನೆಯಿದ್ದರೆ, ಅದು ತಪ್ಪು ಕಲ್ಪನೆ. ಮದುವೆ ಸಮಯದಲ್ಲಿ ಅಥವಾ ಅದಕ್ಕಿಂತ ಮೊದಲು ಹೆಣ್ಣುಮಗಳಿಗೆ ಬಂಗಾರ/ಬೆಳ್ಳಿ ಆಭರಣ ಮಾಡಿಸಿಟ್ಟಿರುತ್ತಾರೆ(ಗಂಡು ಮಕ್ಕಳಿಗೆ ಮಾಡಿಸುವುದು ವಿರಳ). ಅದೇ ರೀತಿ ಮರಣಾನಂತರ ತಂದೆ/ತಾಯಿಗೆ ಸೇರಿದ್ದ ಎಲ್ಲಾ ಹಣ ಮತ್ತು ಬಂಗಾರವನ್ನು ಹೆಣ್ಣುಮಕ್ಕಳಿಗೆ ಹಂಚಲಾಗುತ್ತಿತ್ತು. ಈಗ ಆಸ್ತಿಯಲ್ಲಿ ಪಾಲನ್ನೂ ತೆಗೆದುಕೊಂಡು, ತಾಯಿಯ ಬಂಗಾರಕ್ಕೂ ಕೈ ಹಾಕುವಾಗ ಈ ಬಗ್ಗೆ ಅವರ ಸೋದರರು ಆಕ್ಷೇಪವೆತ್ತುವುದರಲ್ಲಿ ತಪ್ಪಿಲ್ಲ ಅನ್ನಿಸಿಬಿಡುತ್ತದೆ.
ಇದೇ ರೀತಿಯದ್ದೇ ಇನ್ನೊಂದು ಮನೆ ಮುರುಕ ಕಾನೂನಿದೆ. ಅದೇ 'ಕೌಟುಂಬಿಕ ಕಲಹಗಳಿಂದ ಸ್ತ್ರೀಯರನ್ನು ರಕ್ಷಿಸುವ ಕಾನೂನು(ಐಪಿಸಿ-498ಎ)". ಈ ಕಾನೂನಿನ ಪ್ರಕಾರ ವರದಕ್ಷಿಣೆ ಕಿರುಕುಳದಿಂದ ನೊಂದ ಸೊಸೆ ಪರಿಹಾರ ಪಡೆಯಬಹುದು. ಏನು ಪರಿಹಾರ ಎಂದಿರಾ?
ಯಾವುದೋ ಚಿಕ್ಕ ಗಲಾಟೆಯಿಂದ ಮುನಿಸಿಕೊಂಡ ನಿಮ್ಮ ಸೊಸೆಗೆ ಸೇಡುತೀರಿಸಿಕೊಳ್ಳಲು ಒಂದು ಅವಕಾಶ! ಯಾವ ಸಂಸಾರದಲ್ಲಿ ಸಣ್ಣಪುಟ್ಟ ವೈಮನಸ್ಸಿರುವುದಿಲ್ಲ? ಅಂಥದ್ದೇನೂ ಗಂಭೀರವಾದದ್ದು ಆಗದಿದ್ದರೂ, ತನಗೆ ವರದಕ್ಷಿಣೆ ಕಿರುಕುಳ ಕೊಡಲಾಗುತ್ತಿದೆ ಎಂದು ಪೊಲೀಸ್ ಠಾಣೆಯಲ್ಲಿ ಒಂದು ದೂರು ಕೊಟ್ಟರೆ ಮುಗಿಯಿತು. ಗಂಡನ ಮನೆಯ ಎಲ್ಲರೂ ಕಂಬಿ ಎಣಿಸಬೇಕಾಗುತ್ತದೆ! ಇದಕ್ಕೆ ಜಾಮೀನಾಗಲಿ, ನಿರೀಕ್ಷಣಾ ಜಾಮೀನಾಗಲಿ ಇರುವುದಿಲ್ಲ. ಇದೇ ಕಾನೂನುನಿಂದಾಗಿ ಎಷ್ಟೋ ಕುಟುಂಬಗಳು ನಾಶವಾಗಿದ್ದು ನಮಗೆ ತಿಳಿಯದ ವಿಷಯವೇನಲ್ಲ. ಎಷ್ಟೋ ಗಂಡಂದಿರು ಅವಮಾನ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ದಿನವೂ ದೇಶಾದ್ಯಂತ ಇಂಥ ಹತ್ತಾರು ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಈ ಕಾನೂನುಗಳು ಒಂಥರಾ ಇಂಗ್ಲಿಷ್ ಔಷಧಗಳಿದ್ದ ಹಾಗೆ, ಖಾಯಿಲೆಯನ್ನು ಗುಣಪಡಿಸುತ್ತವೆ, ಆದರೆ ಸೈಡ್ಎಫೆಕ್ಟ್ಗಳು ಬಹಳ. ಇಷ್ಟಾದರೂ ಇವತ್ತಿಗೂ ಬಹುಪಾಲು ಸ್ತ್ರೀಯರು ಇಂತಹ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳದೇ ತಮ್ಮ ಕೌಟುಂಬಿಕ ಧರ್ಮದ ಚೌಕಟ್ಟಿನೊಳಗೇ ಇರುವುದು ಭಾರತೀಯ ಮಹಿಳೆಯರ ಶ್ರೇಷ್ಠತೆಗೆ ಹಿಡಿದ ಕನ್ನಡಿಯಾಗಿದೆ. ಹಾಗೆಂದು ಸ್ತ್ರೀಯರಿಗೆ ಕೊಟ್ಟ ಅಧಿಕಾರ ಹೆಚ್ಚಾಯಿತು ಎನ್ನುವ ವಾದವಿದಲ್ಲ. ಅಥವಾ ಗಂಡಸರೆಲ್ಲ ಸಂಭಾವಿತರು ಎಂದೂ ಅಲ್ಲ. ಮಹಿಳಾ ಕಾನೂನು ಹೇಗೆ ದುರ್ಬಳಕೆಯಾಗುತ್ತಿದೆ ಎಂದು ಹೇಳುವ ಪುಟ್ಟ ಚಿತ್ರಣವಿದು.
ಹಿಂದು ಪದ್ಧತಿಗಳನ್ನು ದೂಷಿಸುತ್ತಾ ಸಾಮಾಜಿಕ ನೆಮ್ಮದಿಯನ್ನು ಹಾಳುಮಾಡುವ ಕಮ್ಯುನಿಷ್ಟ್ ತಲೆಗಳೇನೂ ನಮ್ಮಲ್ಲಿ ಕಮ್ಮಿಯಿಲ್ಲ. ಇದರ ಜತೆ ಹಳ್ಳಿಗಳ ನಾಡಿಯನ್ನೇ ಅರಿಯದ, ವಿದೇಶದಲ್ಲಿ ವ್ಯಾಸಂಗ ಮಾಡಿಬಂದು, ಟಿ.ವಿ. ಚರ್ಚೆಗಳಲ್ಲಿ ಅರಳುಹುರಿದಂತೆ ಮಾತನಾಡುವ ಕೆಲವು ಪ್ರಚಂಡ ಸ್ತ್ರೀವಾದಿಗಳೂ ಇದ್ದಾರೆ. ಇಂಥವರೆಲ್ಲರ ಒತ್ತಾಯದಿಂದಲೇ ಈ ಕಾನೂನುಗಳು ಬರುತ್ತಿರುವುದು. ಅನ್ಯ ಧರ್ಮಗಳಲ್ಲಿ ಸ್ತ್ರೀಯರ ಸ್ಥಾನಮಾನದ ಬಗ್ಗೆ ತುಟಿ ಬಿಚ್ಚದ ಈ ಸ್ತ್ರೀವಾದಿಗಳು ಹಿಂದು ಧರ್ಮದ ಮೇಲೆ ಹರಿಹಾಯುವುದು ಎಷ್ಟು ಸರಿ? ಇಲ್ಲಿ ನ್ಯಾಯಾಲಯಗಳಾಗಲಿ, ಪೊಲೀಸ್ ಇಲಾಖೆಯಾಗಲಿ ಅಮಾಯಕರ ಸಹಾಯಕ್ಕೆ ಬರಲಾರವು. ಅವರು ಹೇಳುವುದು ಇಷ್ಟೆ-" ನಾನು ಕಾನೂನನ್ನು ಪಾಲಿಸುತ್ತಿದ್ದೇವೆ"! ನಮ್ಮ ದೇಶದಲ್ಲಿನ ವೈಚಿತ್ರ್ಯವೆಂದರೆ. ಒಂದೇ ಸೂರಿನಲ್ಲಿ ಎರಡು ರೀತಿಯ ಕಾನೂನುಗಳು. ಹಿಂದುಗಳಿಗೊಂದು ಕಾನೂನು, ಮುಸಲ್ಮಾನರಿಗೊಂದು ಕಾನೂನು. ಇದೇನೇ ಇರಲಿ, ಇಂಥ ಮನೆ ಮುರುಕ ಕಾನೂನುಗಳು ನಮಗೆ ಬೇಕಾ ಎಂಬುದು ನನ್ನ ಪ್ರಶ್ನೆಯಷ್ಟೆ.
- ವೆಂಕಟೇಶ್. ಆರ್. ದೊಡ್ಮನೆ
vakradanta@gmail.com