ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಆಯುರ್ವೇದ ಅವನತಿಗೆ ಯಾರು ಕಾರಣರು?

Srinivasa Murthy VN
Updated On : 18 Sept 2013, 11:51 am

ಆಯುರ್ವೇದ ಕೇಂದ್ರೀಯ ಪರಿಷತ್ (ಈಈಐಂ)ನವದೆಹಲಿ ನಮ್ಮ ರಾಜ್ಯದಲ್ಲಿಯ ಎಲ್ಲ ಆಯುರ್ವೇದ ಕಾಲೇಜುಗಳನ್ನು ನಿಯಂತ್ರಿಸುತ್ತದೆ. ನಮ್ಮ ರಾಜ್ಯದವರೇ ಆದ ಆರೇಳು ಜನ ಅನುಭವಿ ಶಿಕ್ಷಕರು /ಪ್ರಾಚಾರ್ಯರು ಈ ಪರಿಷತ್‌ಗೆ ಕರ್ನಾಟಕ ರಾಜ್ಯ ಪ್ರತಿನಿಧಿಯಾಗಿ ಆಯ್ಕೆ ಆಗಿದ್ದಾರೆ ಅಥವ  ನೇಮಕಾತಿ ಹೊಂದಿದ್ದಾರೆ. ಇವರ 'ಅನುಭವ' ಕೆಲಸ ಕಾರ್ಯಗಳೇನು? ಪರಿಷತ್ ಸದಸ್ಯರಾಗಿ ಸಭೆಗಳಿಗೆ ಹಾಜರಾಗಿ ಒಳ್ಳೆಯ ಗುಣಾತ್ಮಕ ಆಡಳಿತ ನೀಡಿ ಆಯುರ್ವೇದ ಸ್ಥಿತಿ-ಗತಿ ಸುಧಾರಿಸುವುದು ಅಂತ ನೀವು ತಿಳಿದಿರಬಹುದು. ಆದರೆ ಆಗುತ್ತಿರುವುದೇನು?
ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಸಿಸಿಐಎಂ (ಪರಿಷತ್‌ನಿಂದ) ಎಲ್ಲ ಆಯುರ್ವೇದ ಮಹಾವಿದ್ಯಾಲಯಗಳ ತಪಾಸಣೆ ಹಾಗೂ ಯೋಗ್ಯವಾದ ವಿದ್ಯಾಲಯಗಳಿಗೆ ಮುಂದುವರೆಯಲು ಅನುಮತಿ ನೀಡಿ ಅಂತಹ ವಿದ್ಯಾಲಯಗಳ ಪಟ್ಟಿಯನ್ನು ರಾಜ್ಯ ಸರ್ಕಾರಕ್ಕೆ ಯೋಗ್ಯ ಸಮಯದಲ್ಲಿ ಸಲ್ಲಿಸುವುದು ಹಾಗೂ ಆ ವರ್ಷ ನಡೆಯುವ ಸಿಇಟಿ ಆಯ್ಕೆ ಪ್ರಕ್ರಿಯೆ ಸರಿಯಾಗಿ ನಡೆಯುವಂತೆ ಆಧಾರವಾಗಿರುವುದು. ಆದರೆ ಪ್ರತಿ ವರ್ಷ ನಡೆಯುತ್ತಿರುವುದೇನು?
ಈಗ ಸೆಪ್ಟೆಂಬರ್ 15ನೇ ತಾರೀಖಾದರೂ ಮಾನ್ಯತೆ ಪಡೆದ ವಿದ್ಯಾಲಯಗಳ ಪಟ್ಟಿ ಸರ್ಕಾರದ ಕೈ ಸೇರಿಲ್ಲ. ಸಿಇಟಿಯಿಂದ ನಡೆದ ಕೌನ್ಸಿಲಿಂಗ್‌ನಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ದಂತ ವೈದ್ಯಕೀಯ ಇತ್ಯಾದಿ ಕೋರ್ಸ್‌ಗಳ ಸೀಟುಗಳು ಈಗಾಗಲೇ ಹಂಚಿಕೆ ಆಗಿದ್ದು, ಆಯಾ ಕಾಲೇಜುಗಳು ಭರ್ತಿಯಾಗಿ ಕಾಲೇಜು ಎರಡು ತಿಂಗಳು ಅವಧಿ ಮುಗಿಯುತ್ತ ಬಂದು ಪ್ರಥಮ ಆಂತರಿಕ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳು ತಯಾರಾಗುವುದರಲ್ಲಿದ್ದಾರೆ.
ಆದರೆ ಈ ಕೇಂದ್ರೀಯ ಮಂಡಳಿ (ಸಿಸಿಐಎಂ) ಯ ವಿಳಂಬ ಧೋರಣೆಯಿಂದಾಗಿ ಮಾನ್ಯತೆ ಪಡೆದ ಆಯುರ್ವೇದ ವಿದ್ಯಾಲಯಗಳ ಪಟ್ಟಿ ಇಲ್ಲದೇ, ಸಿಇಟಿ ಕೌನ್ಸೆಲಿಂಗ್, ಸೀಟು ಹಂಚಿಕೆ ಆಗಿಲ್ಲ. ಸ್ಪರ್ಧಾತ್ಮಕ ಮನೋಭಾವದ ರ್ಯಾಂಕ್ ಲಿಸ್ಟ್ ತಯಾರಾಗಿದ್ದರೂ ಸಹಿತ ಈ ವಿಳಂಬ ನೀತಿಯಿಂದ ಅವರು ಬೇರೆ ಕೋರ್ಸ್‌ಗಳಿಗೆ ಸೇರಿದ್ದಾರೆ. ಈಗ ಇವರು ಆಯ್ಕೆ ಮಾಡಿಕೊಂಡರೆ; ಬೇರೆ ಕಡೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಅಲ್ಲಿಯ ಪೂರ್ಣ ಫೀ ಸಂದಾಯ ಮಾಡಿ ಆರ್ಥಿಕ ನಷ್ಟ ಮಾಡಿಕೊಂಡು ಈ ಕೋರ್ಸ್‌ಗೆ ಬರಬೇಕು. ಆಯಾ ಕೋರ್ಸ್‌ಗಳಿಗೂ ವಿದ್ಯಾರ್ಥಿ ಅಭಾವ. ಇವರಾರೂ ಬರುವುದಿಲ್ಲ. ಇನ್ನು ಅಳಿದುಳಿದ ವಿದ್ಯಾರ್ಥಿಗಳು 'ವಿಧಿ" ಇಲ್ಲದೇ ಈ ಕೋರ್ಸ್‌ಗೆ ಬರುತ್ತಾರೆ. ಅಥವಾ ಸರ್ಕಾರಿ ಕೋಟಾ ಬಳಕೆ ಖಾಲಿ ಉಳಿಸಿ ಅವನ್ನೇ ಮ್ಯಾನೇಜ್‌ಮೆಂಟ್‌ನವರು ಮಾರಿಕೊಳ್ಳಬಹುದು ಹೊರಗಿನ ರಾಜ್ಯದ ವಿದ್ಯಾರ್ಥಿಗಳಿಗೆ. ಅನೇಕ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ.
ಅಲ್ಲದೇ ಈ ಆಯ್ಕೆ ಈಗ ನಡೆದುದಾದರೆ ಕನಿಷ್ಠ ಅಕ್ಟೋಬರ್ 15ಕ್ಕೆ ಕ್ಲಾಸುಗಳು ಆರಂಭಗೊಳ್ಳಬಹುದು. ಪ್ರಥಮ ವರ್ಷ ವಿದ್ಯಾರ್ಥಿಗಳಿಗೆ ಕೇಂದ್ರೀಯ ಪರಿಷತ್ ಅತ್ಯಂತ ಭಾರವೆನಿಸುವಂತಹ ಪಠ್ಯಕ್ರಮ ಸಂಯೋಜಿಸಿದ್ದು ಇವರಿಗೆ ವಾರ್ಷಿಕ ಪರೀಕ್ಷೆ ಬರುವ ವರ್ಷ ಜುಲೈ ಕೊನೆ ವಾರಕ್ಕೆ ನಡೆಯುತ್ತದೆ. ಆದರೆ ಸಮಯ ಎಂಟೂವರೆ ತಿಂಗಳು ಪಾಠ ನಡೆದರೂ ಸಾಕಾಗುವುದಿಲ್ಲ. ಹೀಗಾಗಿ ಇವರುಗಳೆಲ್ಲ "ಅರೆಬೆಂದ" ವಿದ್ಯಾರ್ಥಿಗಳಾಗುತ್ತಾರೆ. ಪ್ರಾರಂಭದಲ್ಲಿ ಉಂಟಾದ ಈ ವಿಳಂಬದ ಪರಿಣಾಮ ಪ್ರತಿ ವರ್ಷ ಬೆಳೆಯುತ್ತಾ ಹೋಗಿ ಅಂತಿಮ ವರ್ಷ ತುಂಬಾ ತೊಂದರೆ ಆಗುತ್ತದೆ. ಪರಿಣಾಮವಾಗಿ ಹೊರಬರುವ ಆಯುರ್ವೇದ ವೈದ್ಯರು ಅರ್ಧಂಬರ್ಧ ಬೆಂದವರಾಗಿ ಅಲೋಪತಿ ಜ್ಞಾನವಾಗಲಿ/ಆಯುರ್ವೇದ ಜ್ಞಾನವಾಗಲಿ ತಿಳಿಯದೇ ಕುವೈದ್ಯರಾಗುತ್ತಾರೆ. ಅಂತರ್ ರಾಜ್ಯ ಮಟ್ಟಕ್ಕೆ/ ಅಂತಾರಾಷ್ಟ್ರೀಯ ಮಟ್ಟಕ್ಕೆ ಕರ್ನಾಟಕದಿಂದ ಆಯರ್ವೇದ ತಜ್ಞರಾಗಿ ಹೊರಹೊಮ್ಮಿದವರು ಬಹು ಕಡಿಮೆ. ಮತ್ತೆ ಈ ಎಲ್ಲ ಪದವೀಧರರು ಇಂಟಿಗ್ರೇಟೆಡ್ ಎಂಬುದಾಗಿ ಬಡಿದಾಡುತ್ತಾರೆ.
ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಈ ಪರಿಷತ್ ಸದಸ್ಯರು ದೆಹಲಿಯ ಪರಿಷದ್ ಆಫೀಸಿಗೆ ತೆರಳಿ ಯೋಗ್ಯತಾ ವಿದ್ಯಾಲಯ ಲಿಸ್ಟನ್ನು ಜೂನ್‌ನಲ್ಲಿಯೇ ತರಲು ಆಗುವುದಿಲ್ಲವೇಕೆ? ಇಂತಹ ವ್ಯವಸ್ಥೆಗಳನ್ನು ಸುಧಾರಣೆಗೊಳಿಸಲು ಪ್ರಯತ್ನಿಸದ ಸದಸ್ಯರು ಇದ್ದು ಪ್ರಯೋಜನವೇನು? ಆಯುರ್ವೇದ ವೈದ್ಯಕೀಯಕ್ಕೆ ಕರ್ನಾಟಕ ವೈದ್ಯರ ಕೊಡುಗೆ ಹೇಗೆ ತಾನೆ ಸಾಧ್ಯವಾದೀತು? ಕೇವಲ ತನ್ನ ಸ್ವಂತ ಗಳಿಕೆಗೆ ಇನ್‌ಸ್ಪೆಕ್ಷನ್ ಮಾಡುತ್ತಾ ಓಡಾಡಿದರೆ, ವಿದ್ಯಾರ್ಥಿಗಳ ಇಂತಹ ಸಮಸ್ಯೆಗಳಿಗೆ ಯಾರು ಹೊಣೆ?
ಈಗ ಈ ಹಿನ್ನೆಲೆಯಲ್ಲಿ ಹೇಳಿ; ಏನೇನೋ ಹೇಳಿಕೆಗಳನ್ನು ನೀಡಿ ಆಯ್ಕೆಗೊಂಡ ಈ ಸದಸ್ಯರು ಅವನತಿಗೆ (ಕರ್ನಾಟಕದಲ್ಲಿ) ನೇರ ಕಾರಣರಲ್ಲವೇ?

- ಎಸ್.ಎಸ್. ಪಾಟೀಲ
ಗಜೇಂದ್ರಗಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement