ಆರ್ಥಿಕ ನೀತಿಗಳನ್ನು ವಿದೇಶಿ ಅಗತ್ಯಕ್ಕೆ ರೂಪಿಸುವ ದರ್ದೇನು?
ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಧಾನಿಯವರು ಜಿ-20 ಶೃಂಗಸಭೆಗೆ ತೆರಳಿದರು ಎಂಬ ವಿದ್ಯಮಾನವು ಬಹಳ ಗಂಭೀರವಾಗಿ ಪತ್ರಿಕೆ ಓದುವ ಕೆಲವರಿಗೆ ತಿಳಿಯಿತೇನೋ. ಅವರು ಜಿ-20ಗೆ ಹೊರಟು ನಿಂತಾಗ ಭಾರತದಲ್ಲಿ ಸಂಸತ್ ಅಧಿವೇಶನ ನಡೆಯುತ್ತಿತ್ತು. ಆದರೆ ಸಂಸತ್ತಿನ ಒಳಗಾಗಲೀ, ಹೊರಗಾಗಲೀ ಪ್ರಧಾನಿಯವರನ್ನು ಮಿಸ್ ಮಾಡಿಕೊಂಡಂತೆ ಯಾರಿಗೂ ಅನ್ನಿಸಲಿಲ್ಲ. ಅದು ಯಾವತ್ತೂ ಅನ್ನಿಸುತ್ತಿರಲಿಲ್ಲ ಎಂಬುದು ಬೇರೆ ಮಾತು.
ಜಿ-20ಯಲ್ಲಿ ಏನೆಲ್ಲ ನಿರ್ಣಯಗಳು ಹೊರಬಿದ್ದವು ಎಂಬುದನ್ನು ಓದಿಕೊಂಡ ದೇಶವಾಸಿಗಳು ಕೆಲವೇ ಮಂದಿ. ಆ ಗುಂಪಿನಲ್ಲೂ ಬೆರಳೆಣಿಕೆಯ ಜನಕ್ಕೆ ಮಾತ್ರ ಭಾರತವು ಎಚ್ಎಫ್ಸಿ (ಹೈಡ್ರೋಫ್ಲೋರೊಕಾರ್ಬನ್)ಯನ್ನು ಕಡಿತಗೊಳಿಸಿ ಅದನ್ನು ಮಾಂಟ್ರೀಲ್ ಪ್ರೊಟೊಕಾಲ್ನ ಪರಿಮಿತಿಗೆ ತರುವುದಕ್ಕೆ ಒಪ್ಪಿಕೊಂಡಿತು ಎಂಬ ಸತ್ಯ ಗೊತ್ತಾಯಿತು. ವಾಸ್ತವದಲ್ಲಿ ಜಿ20 ಎಂಬುದು ಆರ್ಥಿಕ ಬಲಾಢ್ಯ ದೇಶಗಳಾದ ಜಿ7ರ ವಿಸ್ತರಿತ ರೂಪ. ವಾರ್ಷಿಕ ಸಭೆಯಲ್ಲಿ ಇನ್ನೊಂದಿಷ್ಟು ರಾಷ್ಟ್ರಗಳನ್ನು ಸೇರಿಸಿಕೊಳ್ಳೋಣ ಎಂಬಂತೆ. ಐದು ಹುಲಿಗಳು ಇನ್ನೈದು ಕರಡಿಗಳು ಒಟ್ಟಿಗೆ ಕುಳಿತು ಆ ದಿನದ ಭೋಜನ ಏನಿದ್ದರೆ ಚೆನ್ನ ಎಂಬಂತೆ ನಡೆಯುವ ಚರ್ಚೆ ಇದು.
ಈ ಎಚ್ಎಫ್ಸಿಯ ವಿಷಯ ತೀರ ತಾಂತ್ರಿಕವಾದದ್ದು. ಹಾಗೆಂದೇ ಭಾರತದಲ್ಲಿ ಹಾಗೂ ವಿದೇಶದಲ್ಲಿ ಸಹ ಇದರ ವಿವರಗಳ ಬಗ್ಗೆ ತಿಳಿದಿರುವವರ ಸಂಖ್ಯೆ ವಿರಳ. ಮಾಮೂಲಿ ಪರಿಕಲ್ಪನೆಯನ್ನು ವಿವರಿಸುವುದಾದರೆ ದಶಕಗಳ ಹಿಂದೆ ಸಿಎಫ್ಸಿ (ಕ್ಲೋರೊಫ್ಲೊರೊಕಾರ್ಬನ್ಸ್) ನಿಯಂತ್ರಿಸುವ ಒಪ್ಪಂದಗಳಿಗೆ ಬಂದ ನಂತರದ ಪ್ರಕ್ರಿಯೆಯೇ ಎಚ್ಎಫ್ಸಿ ನಿಯಂತ್ರಣಕ್ಕೆ ತರುವ ಪ್ರಸ್ತಾವ. ಸದ್ಯಕ್ಕೆ ಈ ವಿಷಯವು ವಿಶ್ವಸಂಸ್ಥೆಯ ಪರಾಮರ್ಶೆಯಲ್ಲಿದೆ.
ಈ ಬಗ್ಗೆ ನಮ್ಮಲ್ಲಿನ ಅನೇಕ ಸಚಿವಾಲಯಗಳಲ್ಲಿ ವಿಚಾರ ಮಂಥನ ನಡೆದು ನಿರ್ಧರಿತವಾದ ರಾಷ್ಟ್ರೀಯ ಹಿತಾಸಕ್ತಿ ಯಾವುದಾಗಿತ್ತೆಂದರೆ, ಎಚ್ಎಫ್ಸಿ ಕಡಿಮೆಗೊಳಿಸುವ ರೇಸ್ನಲ್ಲಿ ನಾವು ಬೀಳಬೇಕಾಗಿದ್ದಿಲ್ಲ ಹಾಗೂ ಇದನ್ನು ಮಾಂಟ್ರಿಲ್ ಶಿಷ್ಟಾಚಾರದ ವ್ಯಾಪ್ತಿಗೆ ತರಬೇಕಾಗಿದ್ದಿಲ್ಲ ಎಂಬುದು. ಆದರೆ ಜಿ20ಯಲ್ಲಿ ನಮ್ಮ ಮಾತುಕತೆಯ ಪ್ರಧಾನ ವ್ಯಕ್ತಿಯಾಗಿ ತೆರಳಿದ್ದ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಭಾರತದ ಈ ನಿಲವಿನಿಂದ ದೂರ ಸರಿದು ಯಾವುದೇ ಷರತ್ತುಗಳನ್ನು ವಿಧಿಸದೆ ಸಮ್ಮತಿ ನೀಡಿದರು. ಅಂದರೆ ಭಾರತದ ಕೈಯನ್ನು ಯಾರೂ ಬೇಕಾದರೂ ತಿರುಚಬಹುದು ಹಾಗೂ ಅದು ತನಗೇನೂ ಪ್ರತಿಯಾಗಿ ಸಲ್ಲಿಕೆಯಾಗದಿದ್ದ ಪಕ್ಷದಲ್ಲೂ ಯಾವ ಷರತ್ತಿಗಾದರೂ ಒಪ್ಪಿಕೊಳ್ಳುತ್ತದೆ ಎಂದ ಹಾಗಾಯಿತು. ಆಯಕಟ್ಟಿನ ಜಾಗದಲ್ಲಿರುವವರು ಇಂಥ ವಿಷಯಗಳಲ್ಲಿ ರಾಷ್ಟ್ರದ ಅಭಿಪ್ರಾಯವೇನಿದೆ ಎಂಬುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಬಹುಶಃ ಜಗತ್ತಿನ ಅತಿ ಉದಾರ ಸಂಧಾನಕಾರರೆಂದರೆ ನಾವೇ ಆಗಿರಬೇಕು.
ಕಳದ ಕೆಲ ವರ್ಷಗಳಿಂದ ಭಾರತದ ಸಂಬಂಧಿತ ಸಚಿವಾಲಯಗಳ ಮೇಲೆ ಇರುವ ಒತ್ತಡ ಎಂದರೆ ಐರೋಪ್ಯ ಒಕ್ಕೂಟದ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂದೆನ್ನುವುದು. ವಾಣಿಜ್ಯ ಖಾತೆಯ ಸಂಸದೀಯ ಸಮಿತಿಯು ಈ ಬಗ್ಗೆ ಎಚ್ಚರಿಕೆಯ ಟಿಪ್ಪಣಿಗಳನ್ನು ಮಾಡಿದೆ. ಮುಕ್ತ ವ್ಯಾಪಾರದ ಒಪ್ಪಂದಕ್ಕೆ ಪ್ರತಿಯಾಗಿ ಐರೋಪ್ಯ ಒಕ್ಕೂಟದಿಂದ ನಮಗೇನು ಲಭಿಸಲಿದೆ ಎಂಬುದನ್ನು ಪ್ರಶ್ನಿಸಿಕೊಂಡಾಗ ಒಕ್ಕೂಟದ ಹಲವು ಬೇಡಿಕೆಗಳು ತಾರ್ಕಿಕವೇ ಅಲ್ಲ ಎಂಬುದು ಮನದಟ್ಟಾಗುತ್ತದೆ. ಯುರೋಪಿನ ಮಾರುಕಟ್ಟೆಯಲ್ಲಿ ಜವಳಿ ಹಾಗೂ ಚರ್ಮದ ಉತ್ಪನ್ನಗಳ ಮಾರಾಟಕ್ಕೆ ಸಣ್ಣ ಪ್ರಮಾಣದ ಅವಕಾಶವನ್ನು ಕಲ್ಪಿಸಿರುವುದು ಹೌದಾದರೂ ಭಾರತದ ಅನೇಕ ನಿಯಮಗಳಲ್ಲಿ ಭಾರಿ ಪ್ರಮಾಣದ ಬದಲಾವಣೆಗಳಾಗಬೇಕೆಂದು ಐರೋಪ್ಯ ಒಕ್ಕೂಟವು ಇಟ್ಟಿರುವ ಒತ್ತಾಯ ಯಾವ ರೀತಿಯಲ್ಲೂ ಸ್ವೀಕಾರಾರ್ಹವಲ್ಲ. ಬೌದ್ಧಿಕ ಆಸ್ತಿ, ಭೌಗೋಳಿಕ ಸೂಚಿ, ಸರ್ಕಾರಿ ದಾಸ್ತಾನು ಮತ್ತು ಕೃಷಿಗೆ ಸಂಬಂಧಿಸಿ ಅದು ಮಾಡುತ್ತಿರುವ ಚೌಕಾಶಿ ನಮ್ಮ ಹಿತಾಸಕ್ತಿಗಳಿಗೆ ಒಂದಿನಿತೂ ಪೂರಕವಾಗಿಲ್ಲ. ಸಂಬಂಧಿತ ಸಚಿವಾಲಯಗಳು ಈ ಬಗ್ಗೆ ಅಂತಿಮ ನಿರ್ಧಾರವೇನನ್ನೂ ತಾಳದೇ ಐರೋಪ್ಯ ಒಕ್ಕೂಟದ ಷರತ್ತುಗಳನ್ನು ಪ್ರಶ್ನಿಸಿರುವುದು ನಮ್ಮ ಭಾಗ್ಯವೆಂದೇ ಹೇಳಬೇಕು. ವ್ಯವಸ್ಥೆ ಅಷ್ಟರಮಟ್ಟಿಗಾದರೂ ಜೀವಂತವಿದೆ ಎಂದು ನಾವು ಸಮಾಧಾನಪಟ್ಟುಕೊಳ್ಳಬಹುದು. 'ಇಬ್ಬರಿಗೂ ಲಾಭವಾಗುವ ಒಪ್ಪಂದ' ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಇದು ತೀರ ಅಸಂಬದ್ಧವಾಗಿದೆ ಎಂದೇ ಸಚಿವಾಲಯ ನಿಲವು ತಾಳಿದೆ. ಆದರೆ ಗಮನಿಸಬೇಕಾದ ವಿಷಯ ಎಂದರೆ ಈ ವಿಷಯದಲ್ಲಿ ಹೇಗಾದರೂ ಸಮ್ಮತಿಯನ್ನು ರೂಪಿಸುವಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಬಲಿಷ್ಠ ಶಕ್ತಿಗಳು ಕಾರ್ಯನಿರತವಾಗಿವೆ.
ಇದು ಮತ್ತೆ ಮತ್ತೆ ನಮ್ಮ ಅನುಭವಕ್ಕೆ ಬರುತ್ತಿದೆ. ನಮ್ಮ ಪರಿಣತ ನೀತಿ ನಿರೂಪಕರಿಗೆ ಕಾಳಜಿ ಇರುವುದು ನಮ್ಮ ದೇಶದ ಅರ್ಥವ್ಯವಸ್ಥೆ ಬಲಪಡಿಸುವುದರಲ್ಲಲ್ಲ ಬದಲಿಗೆ ಬೇರೆ ದೇಶಗಳ ವಾಣಿಜ್ಯ ಅಗತ್ಯಗಳನ್ನು ಪೂರೈಸುವುದು ಎಂಬ ಅನುಮಾನಕ್ಕೆ ಕಾರಣವಾಗುವ ಹಲವು ಒತ್ತಡಗಳು ಕಣ್ಣಿಗೆ ಕಾಣುತ್ತಿವೆ. ಉದಾಹರಣೆಗೆ ಮುಂದಿನ 20 ವರ್ಷಗಳಲ್ಲಿ ರಾಷ್ಟ್ರದ ವಿದ್ಯುತ್ ಅವಶ್ಯಕತೆಯ ಪೂರೈಕೆಯಲ್ಲಿ ಅಣುಶಕ್ತಿ ಪಾಲನ್ನು ಶೇ.4ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ನೀತಿ ನಿರೂಪಣೆಗಳು ಆಗುತ್ತಿವೆ. ಜಾಗತಿಕ ಜೈತ್ಯ ಕಂಪನಿಗಳಾದ ಬೆಕೆಲ್, ಜಿಇಗಳ ವಾಣಿಜ್ಯದಾಹ ತಣಿಸುವ ಅವಕಾಶವನ್ನು ಈ ಮೂಲಕ ನಿರ್ಮಿಸಲಾಗುತ್ತಿದೆ ಎಂಬ ಅನುಮಾನ ನಮ್ಮನ್ನು ಕಾಡದಿರದೇ? ಏಕೆಂದರೆ ನಮ್ಮ ವಿದ್ಯುತ್ ಪೂರೈಕೆಯ ಶೇ.90 ಭಾಗವನ್ನು ನಿಭಾಯಿಸುತ್ತಿರುವ ಅಂಶಗಳಾದ ಉಷ್ಣ ವಿದ್ಯುತ್, ಸೋಲಾರ್, ಪವನ ಶಕ್ತಿ ಇವೆಲ್ಲದರ ಸುಧಾರಣೆಗೆ ಒತ್ತು ಕೊಡುವ ನೀತಿಗಳ ಪ್ರಸ್ತಾವವಿಲ್ಲ. ಈ ನಿಟ್ಟಿನಲ್ಲಿ ಇವರ ಉತ್ಸುಕತೆ ಕಾಣುವುದು ಕಲ್ಲಿದ್ದಲು ಹಗರಣದಲ್ಲಿ ಮಾತ್ರ! ಕುಲಾಂತರಿ ತಂತ್ರಜ್ಞಾನದಲ್ಲಿ ಮಾನ್ಸಾಂಟೊ ಹಿತಾಸಕ್ತಿಯನ್ನು ತಣಿಸುವುದಕ್ಕೂ ನೀತಿ ನಿರೂಪಣೆಯ ಉನ್ನತ ವಲಯದಲ್ಲಿ ಇಂಥದೇ ಒತ್ತಡವನ್ನು ಅನುಸರಿಸಲಾಗುತ್ತಿದೆಯೇ? ಅಂಕಣದ ಪ್ರಾರಂಭದಲ್ಲಿ ಪ್ರಸ್ತಾಪಿಸಿದ ಎಚ್ಎಫ್ಸಿ ನಿಯಂತ್ರಣದ ವಿಷಯವು ಹನಿವೆಲ್ ಹಾಗೂ ಡುಪಾಂಟ್ನಂಥ ಕಂಪನಿಗಳ ಹಿತಾಸಕ್ತಿಗೆ ತಕ್ಕುದಾಗಿದೆ. ಸಂಸತ್ತಿನಲ್ಲಿ ಇತ್ತೀಚೆಗೆ ಪಾಸಾದ ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು ವಾಲ್ಮಾರ್ಟ್ ಹಾಗೂ ಟೆಸ್ಕೊಗಳ ಹಿತಾಸಕ್ತಿಗೆ ಪೂರಕವಾದದ್ದು.
ಇತ್ತೀಚೆಗೆ ನಮ್ಮ ವಿತ್ತಮಂತ್ರಿಗಳು ಅಮೆರಿಕದಲ್ಲಿದ್ದರು. ಒಂದರ್ಥದಲ್ಲಿ ಅವರು ಭಿಕ್ಷೆ ಬೇಡುತ್ತಿದ್ದರು. ಅಮೆರಿಕದಿಂದ ಭಾರತಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿಸಿ ಎಂದು. ಭಾರತದ ಪ್ರತಿ ವಿಭಾಗದಲ್ಲೂ ವಿದೇಶಿ ನೇರ ಬಂಡವಾಳ ಹೂಡುವ ಅವಕಾಶ ಸಿಗಲಿದೆ ಎಂದು ಅವರು ಅಮೆರಿಕದ ಹೂಡಿಕೆದಾರರಿಗೆ ಭರವಸೆಯನ್ನೂ ಕೊಟ್ಟು ಬಂದಿದ್ದಾರೆ. ಈ ಭರವಸೆಯನ್ನು ನೀಡುವುದಕ್ಕೆ ಅವರಿಗೆ ಈ ದೇಶ ಯಾವಾಗ ಒಪ್ಪಿಗೆ ಕೊಟ್ಟಿತು ಎಂದು ಕೇಳಬೇಕಾಗುತ್ತದೆ. ಈ ಬಗ್ಗೆ ಜನತೆಗೆ ತಿಳಿಯದಂತೆ ರಹಸ್ಯ ಒಪ್ಪಂದಗಳೇನಾದರೂ ಆಗಿವೆಯೇ? ಭಾರತೀಯರ ಕಿವಿಗೆ ಬೀಳುವುದಕ್ಕೂ ಮುಂಚೆ ನ್ಯೂಯಾರ್ಕ್ನಲ್ಲಿ ನಿಂತು ಹೀಗೆಲ್ಲ ಘೋಷಣೆ ಹೊರಡಿಸುತ್ತಾರಲ್ಲ, ಇದಕ್ಕೇನು ಹೇಳುವುದು?
ಜಿ20ಯಲ್ಲಿ ಎಚ್ಎಫ್ಸಿ ಒಪ್ಪಂದವನ್ನೇ ತೆಗೆದುಕೊಂಡರೆ ನಮ್ಮ ಪ್ರಧಾನ ಸಂಧಾನಕಾರರು ಏನನ್ನು ಒಪ್ಪಿಕೊಂಡು ಬಂದಿದ್ದಾರೆ ಎಂಬುದು ಸಚಿವಾಲಯಗಳಿಗೇ ಸ್ಪಷ್ಟವಿದ್ದಂತಿಲ್ಲ! ಚೀನಾ ಮತ್ತು ಅಮೆರಿಕದ ನಡುವೆ ಈ ಸಂಬಂಧ ಇತ್ತೀಚೆಗೆ ದ್ವಿಪಕ್ಷೀಯ ಒಪ್ಪಂದವಾಗಿದೆ. ಅವರಿಗೆ ಏನು ಹಿತವೋ ಅದು ನಮಗೂ ಅನ್ವಯಿಸುತ್ತದೆ ಎಂಬ ಮೂಕ ಪ್ರೇಕ್ಷಕ, ಮಹಾ ಸ್ನೇಹಿತನ ಪಾತ್ರವನ್ನು ಭಾರತ ನಿಭಾಯಿಸುವುದಕ್ಕೆ ಹೊರಟಿತೇ?
ಸಾಮಾನ್ಯರ ಜೀವನಮಟ್ಟವನ್ನು ಪರಾಮರ್ಶಿಸಿದರೆ ಭಾರತವು ಜಗತ್ತಿನ ಬಡರಾಷ್ಟ್ರವೇ. ಜಿ20 ಎಂಬ ಶ್ರೀಮಂತರ ಕ್ಲಬ್ಬಿನಲ್ಲಿ ಸುತ್ತಿಬರುವ ಉಮೇದು ಇದಕ್ಕೇಕೆ ಬಂತು? ಈ ಬಗ್ಗೆ ನಾವು 'ಬ್ರಿಕ್' ಸದಸ್ಯರ ಅಭಿಪ್ರಾಯವನ್ನು ಕೇಳಿದೆವಾ? ಅಥವಾ ಅಭಿವೃದ್ಧಿ ಪಥದಲ್ಲಿರುವ ನಮ್ಮ ಸಹೋದರ ದೇಶಗಳ ಗುಂಪು ಜಿ77 ಅನ್ನು ಈ ವಿಷಯದಲ್ಲಿ ಸಂಪರ್ಕಿಸಿದೆವಾ? ಜನಸಂಖ್ಯೆಯ ಶೇ. 75 ಮಂದಿಗೆ ಸಬ್ಸಿಡಿ ಆಹಾರವನ್ನು ಪೂರೈಸುವ ನಿರ್ಧಾರಕ್ಕೆ ಬಂದಿರುವ ನಾವು ರಾತ್ರೋರಾತ್ರಿ ನಮ್ಮನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಹೇಗೆ ಸೇರಿಸಿಕೊಂಡೆವು?
ಸರ್ಕಾರದ ನೀತಿ ನಿರ್ಧಾರಗಳ ರೂಪುರೇಷೆ ಜಾಗದಲ್ಲಿ ಆಗುತ್ತಿರುವುದಾದರೂ ಏನು? ಈ ನೀತಿ ನಿರೂಪಕರಿಂದ ನಮ್ಮನ್ನು ಕಾಪಾಡುವವರ್ಯಾರು?
- ಟಿಎಸ್ಆರ್ ಸುಬ್ರಮಣಿಯನ್
ಮಾಜಿ ಸಂಪುಟ ಕಾರ್ಯದರ್ಶಿ
anisikeprabha@gmail.com