ಅಂಕಣಗಳು

ಕತ್ತಲಾಪುರದ ಜನಕ್ಕೆ ಕರುಣೆಯ ಬೆಳಕಾದ ಚಾಲಕ!

ಕಿತ್ತಳೇಪುರ ಎಂಬುದು ಆ ಊರಿನ ನಿಜವಾದ ಹೆಸರಂತೆ. ಅದಕ್ಕೊಂದು ಹಿನ್ನೆಲೆಯೂ ಇದೆ.

ಹಿರಿಯೂರು-ಹೊಸಪೇಟೆ ಹೈವೇಯಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಎದುರಾಗುವ ನೂರಾರು ಹಳ್ಳಿಗಳ ಪೈಕಿ ಕತ್ತಲಾಪುರವೂ ಒಂದು.  ವಾಸ್ತವವಾಗಿ, ಕಿತ್ತಳೇಪುರ ಎಂಬುದು ಆ ಊರಿನ ನಿಜವಾದ ಹೆಸರಂತೆ. ಅದಕ್ಕೊಂದು ಹಿನ್ನೆಲೆಯೂ ಇದೆ. ಏನೆಂದರೆ, ಚಿತ್ರದುರ್ಗದ ಮೇಲೆ ಹೈದರಾಲಿ ದೆಂಡೆತ್ತಿ ಬಂದಿದ್ದಾಗ, ಶ್ರೀರಂಗಪಟ್ಟಣದ ಸೈನ್ಯ ಇಲ್ಲಿ ಬೀಡು ಬಿಟ್ಟಿತ್ತಂತೆ. ಆ ಸಂದರ್ಭದಲ್ಲಿಯೇ, ಈ ಊರಿನ ಜನರಿಗೆ ಕಿತ್ತಳೆ ಹಣ್ಣಿನ ಬೀಜಗಳನ್ನು ಸ್ವತಃ ಹೈದರಾಲಿಯೇ ಕೊಟ್ಟು ಹೋದನಂತೆ. ಆನಂತರದಲ್ಲಿ ಐದಾರು ದಶಕದವರೆಗೂ ಎಲ್ಲರೂ ಕಿತ್ತಳೆಯನ್ನೇ ಬೆಳೆದ ಕಾರಣದಿಂದ ಈ ಊರಿಗೆ ಕಿತ್ತಳೇಪುರ ಎಂಬ ಹೆಸರು ಬಂತಂತೆ. ವರ್ಷ ವರ್ಷವೂ ಒಂದೇ ಬೆಳೆ ತೆಗೆದ ಕಾರಣದಿಂದಾಗಿ ಭೂಮಿಯ ಫಲವತ್ತತೆ ಕಡಿಮೆಯಾಗಿ, ಕ್ರಮೇಣ ಅದು ಬಂಜರು ಭೂಮಿ ಆಯಿತಂತೆ. ಮುಂದೆ, ಬದಲಾವಣೆಯ ಗಾಳಿ ಎಲ್ಲೆಡೆಯೂ ಬೀಸಿದಂತೆ ಕಿತ್ತಳೇಪುರಕ್ಕೂ ಬೀದಿ ದೀಪಗಳು ಬಂದರೂ, ಹೆಚ್ಚಿನ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವೇ ಇರುತ್ತಿರಲಿಲ್ಲವಂತೆ. ಪರಿಣಾಮವಾಗಿ, ಕಿತ್ತಳೇಪುರವು ಕತ್ತಲಾಪುರವೆಂದು ಬದಲಾಗಿ ಹೋಯಿತಂತೆ.
ತಮ್ಮ ಜಮೀನುಗಳಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ ಎಂಬುದು ಅರ್ಥವಾದಾಗ ಕತ್ತಲಾಪುರದ ಜನ ಅಕ್ಕಪಕ್ಕದ ಗ್ರಾಮಗಳಲ್ಲಿ ಕೂಲಿಗೆ ಹೋದರು. ಹೊಟ್ಟೆಪಾಡಿಗೆ ಹೇಗೋ ಒಂದು ದಾರಿಯಾಯಿತು ಎಂದು ಅವರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾಗಲೇ ಅನಾಹುತವಾಗಿ ಹೋಯಿತು. ಕೂಲಿಗೆ ಬಂದಿದ್ದ ಕತ್ತಲಾಪುರದ ಹೆಣ್ಣುಗಳನ್ನು ಜಮೀನ್ದಾರನ ಮಕ್ಕಳು ಚುಡಾಯಿಸಿಬಿಟ್ಟರು. ಆಗ ಕತ್ತಲಾಪುರದ ಎಲ್ಲರೂ ಒಟ್ಟಾಗಿ ತಿರುಗಿ ಬಿದ್ದರು. ಕೂಲಿಗೆ ಬಂದವರಿಂದ ಇಂಥ ಪ್ರತಿಭಟನೆಯನ್ನು ನಿರೀಕ್ಷಿಸದಿದ್ದ ಭೂ ಮಾಲೀಕರು, ತಮ್ಮ ಪ್ರಭಾವ ಬಳಸಿ, ಸುತ್ತಲಿನ ಐದಾರು ಹಳ್ಳಿಗಳಲ್ಲೂ ಕತ್ತಲಾಪುರದ ಜನರಿಗೆ ಕೂಲಿ ಕೆಲಸವೇ ಸಿಗದಂತೆ ನೋಡಿಕೊಂಡರು. ಆನಂತರದಲ್ಲಿ, ಕತ್ತಲಾಪುರದವರನ್ನು ಪರಕೀಯರಂತೆ ಕಾಣುವ ಒಂದು ರಿವಾಜೇ ಹುಟ್ಟಿಕೊಂಡಿತು. ಕ್ರಮೇಣ, ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾದವರಂತೆ ಬದುಕುವುದು, ಕತ್ತಲಾಪುರದ ಜನರಿಗೂ ಅಭ್ಯಾಸವಾಗಿ ಹೋಯಿತು.
ಕತ್ತಲಾಪುರದಲ್ಲಿದ್ದವರೆಲ್ಲ ಅನಕ್ಷರಸ್ಥರೇ. 'ಸಾಮಾಜಿಕ ಬಹಿಷ್ಕಾರ'ದ ನಂತರ ಪಕ್ಕದೂರಲ್ಲಿದ್ದ ಶಾಲೆಗೆ ಮಕ್ಕಳನ್ನು ಕಳಿಸಲು ಯಾರೂ ಮುಂದಾಗಲಿಲ್ಲ. ಒಂದು ಕಡೆ, ಕೂಲಿಗೆ ಕರೆಯುವವರಿಲ್ಲ. ಮತ್ತೊಂದು ಕಡೆ ಬೆಳೆಯೂ ಸಿಗುತ್ತಿಲ್ಲ. ಈ ಕಾರಣದಿಂದ ಊರಿನ ಜನರೆಲ್ಲ ಹಸಿವಿನಿಂದ ತತ್ತರಿಸಿ ಹೋದರು. ಹೀಗಿರುವಾಗಲೇ ಅದೊಂದು ರಾತ್ರಿ ಏನಾಯಿತೆಂದರೆ, ಹಿರಿಯೂರಿನ ಕಡೆಯಿಂದ ಕೊಬ್ಬರಿಯನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಡ್ರೈವರ್‌ನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಉರುಳಿ ಒಂದು ಹೊಲದೊಳಗೆ ಬಿದ್ದು ಹೋಯಿತು. ನಡುರಾತ್ರಿಯಲ್ಲಿ ನಡೆದ ಈ ಆಕ್ಸಿಡೆಂಟಿನಿಂದ ಹೆದರಿ ಕಂಗಾಲಾದ ಲಾರಿ ಡ್ರೈವರ್, ಸತ್ತನೋ ಕೆಟ್ಟೆನೋ ಎಂದು ಚೀರುತ್ತಾ, ಅದೇ ದಾರಿಯಲ್ಲಿ ಬಂದ ಮತ್ತೊಂದು ಲಾರಿ ಹತ್ತಿ ಪರಾರಿಯಾಗಿ ಬಿಟ್ಟ. ಯಾವುದೋ ವಾಹನ ಬಿದ್ದ ಸದ್ದು ಕೇಳಿಸಿಕೊಂಡ ಕತ್ತಲಾಪುರದ ಜನ, ಸ್ವಲ್ಪ ಹೊತ್ತಿನ ನಂತರ  ಅಲ್ಲಿಗೆ ಬಂದರಲ್ಲ; ಆಗ, ಹೊಲದ ತುಂಬ ಚೆಲ್ಲಾಡಿದ್ದ ಕೊಬ್ಬರಿಯನ್ನು ಕಂಡು ಕುಣಿದಾಡಿದರು. ಐದೇ ನಿಮಿಷದಲ್ಲಿ ಓಡಿ ಹೋಗಿ ಚೀಲಗಳೊಂದಿಗೆ ಹಿಂದಿರುಗಿ, ತಮ್ಮ ಶಕ್ತ್ಯಾನುಸಾರ, ಕೊಬ್ಬರಿಗಳನ್ನು ಹೊತ್ತೊಯ್ದರು. ಅದೇನು ಕಾರಣವೋ; ಈ ಸಂಬಂಧವಾಗಿ ಯಾರೂ ತನಿಖೆಗೆ ಬರಲಿಲ್ಲ. ನಾಲ್ಕು ದಿನಗಳ ನಂತರ ಕ್ರೇನ್‌ನ ಸಹಾಯದ ಲಾರಿಯನ್ನು ಮೇಲೆತ್ತಿದ ಪೊಲೀಸರು ಅದನ್ನು ಹಿರಿಯೂರಿನ ಕಡೆಗೆ ಸಾಗಿಸಿಬಿಟ್ಟರು. ಲಾರಿಯಲ್ಲಿದ್ದುದು ಕಳ್ಳಮಾಲೆಂದೂ, ಆ ಕಾರಣದಿಂದಲೇ ಕೇಸ್ ದಾಖಲಾಗಲಿಲ್ಲವೆಂದೂ ಜನ ಮಾತಾಡಿಕೊಂಡರು.
ಮರುದಿನದಿಂದಲೇ ಸುಲಭ ಸಂಪಾದನೆಯ ರಾಜಮಾರ್ಗವೊಂದು ಕತ್ತಲಾಪುರದ ಜನರಿಗೆ ಗೋಚರಿಸಿತು. ರಾತ್ರಿ ಹೊತ್ತು ಲಾರಿಗಳನ್ನು ರಸ್ತೆ  ಮಧ್ಯೆ ಬೀಳಿಸಿದರೆ, ದರೋಡೆ ಮಾಡಿದರೆ ಹೆಚ್ಚು ಹಣ ಸಿಗುತ್ತದೆ ಎಂಬುದು ಖಚಿತವಾದ ನಂತರ ಆ ಊರ ಜನ ಗುಂಪಾಗಿ ಹೋಗಿ ಹೈವೇಯಲ್ಲಿ ಗುಂಡಿಗಳನ್ನು ತೋಡಿದರು. ಲಾರಿಯ ಟೈರ್‌ಗಳು ಪಂಕ್ಚರ್ ಆಗುವಂತೆ ಮಾಡಲು ರಸ್ತೆಯ ಮಧ್ಯೆ ಮೊಳೆಗಳನ್ನು ನೆಟ್ಟರು. ಡ್ರೈವರ್‌ಗಳನ್ನು ಹೆದರಿಸಲು ಮರಗಳ ಮೇಲಿಂದ ಬಿಳಿಯ ಸೀರೆಗಳನ್ನು ಇಳಿಬಿಟ್ಟರು. ಮರದ ಇನ್ನೊಂದು ಕೊಂಬೆಯಲ್ಲಿ ಅಡಗಿ ಕೂತು, ಹೆಂಗಸಿನಂತೆ ಕೂಗಲು, ಅಳಲು ಶುರು ಮಾಡಿದರು. ಲಾರಿಗಳು ಪಂಕ್ಚರ್ ಆದರೆ, ಗುಂಡಿಗಳ ಕಾರಣದಿಂದ ಪಲ್ಟಿ ಹೊಡೆದರೆ, ಮರುಕ್ಷಣವೇ ನಾಲ್ಕು ದಿಕ್ಕಿನಿಂದಲೂ ಹತ್ತಾರು ಮಂದಿ ನುಗ್ಗಿ ಬಂದು ಕೈಗೆ ಸಿಕ್ಕಷ್ಟನ್ನು ದೋಚಿಕೊಂಡು ಹೋಗಿ ಬಿಡುತ್ತಿದ್ದರು. ಹೀಗೆ ದೋಚಿದ ವಸ್ತುಗಳನ್ನು ಹತ್ತಿರದ ಸಂತೆಗಳಲ್ಲಿ ಕಡಿಮೆ ಬೆಲೆಗೆ ಮಾರಿ, ಏನೂ ಗೊತ್ತಿಲ್ಲದವರಂತೆ ಊರಿಗೆ ವಾಪಸಾಗುತ್ತಿದ್ದರು. ದರೋಡೆಗೆ ಸಂಬಂಧಿಸಿದಂತೆ ಲಾರಿ ಡ್ರೈವರ್‌ಗಳು ಚಿತ್ರವಿಚಿತ್ರ ಹೇಳಿಕೆ ನೀಡುತ್ತಿದ್ದ ಕಾರಣದಿಂದಾಗಿ, ಕಳ್ಳರನ್ನು ಹಿಡಿಯುವ ದಾರಿ ತಿಳಿಯದೆ ಪೊಲೀಸರೂ ಕೈ ಚೆಲ್ಲಿ ಕೂತಿದ್ದರು.
ಕತ್ತಲಾಪುರದ ಹೈವೇಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಲಾರಿ ದರೋಡೆಯ ವಿಷಯ ಟಿ.ವಿ. ಚಾನೆಲ್‌ನ ಮುಖ್ಯಸ್ಥರ ಕಿವಿಗೂ ಬಿತ್ತು. ಇಂಥ ಬಿಸಿ ಬಿಸಿ ಸುದ್ದಿಯನ್ನು ಹಾಗೇ ಬಿಡುವುದುಂಟೆ?  ಕೂಡಲೇ ಕ್ರೈಂ ರಿಪೋರ್ಟರ್‌ನನ್ನು ಕರೆದು, -'ಈಗಲೇ ಹೋಗಿ ಕತ್ತಲಾಪುರದಿಂದ ನ್ಯೂಸ್ ತಗೊಂಡು ಬಾ. ನಾಳೆ  ಅದನ್ನೇ ವಿಶೇಷ ವರದಿ ಎಂದು ಪ್ರಕಟಿಸೋಣ. ಆ ಸುದ್ದಿ ನೋಡ್ತಿದ್ದ ಹಾಗೇ ಜನ ಬೆಪ್ಪಾಗಿ ಹೋಗಬೇಕು. ಅಂಥಾ ಸುದ್ದಿ ತಗೊಂಡ್ಬಾ' ಎಂದು ತಾಕೀತು ಮಾಡಿದರು.
ಕ್ರೈಂ ರಿಪೋರ್ಟರ್ರು ತುಂಬಾ ಉತ್ಸಾಹದಿಂದಲೇ ಕತ್ತಲಾಪುರಕ್ಕೆ ಬಂದ. ಈ ವಿಶೇಷ ಸುದ್ದಿಯನ್ನು ಬಾಸ್‌ಗೆ ತಲುಪಿಸಿ ಒಂದು ಪ್ರಮೋಷನ್ ಗಿಟ್ಟಿಸುವ ಉದ್ದೇಶ ಅವನದಿತ್ತು. ಆದರೆ, ಬೆಳಗಿನಿಂದ ಸಂಜೆಯವರೆಗೆ ಊರಿನ ತುಂಬ ಅಲೆದಾಡಿದರೂ ಅವನಿಗೆ ಒಂದೇ ಒಂದು ಪಾಯಿಂಟೂ ಸಿಗಲಿಲ್ಲ. ಹಾಗಂತ ಬರಿಗೈಲಿ ವಾಪಸ್ ಹೋಗುವಂತೆಯೂ ಇರಲಿಲ್ಲ. ಮುಂದೇನು ಮಾಡಬೇಕೋ ತೋಚದೆ ಅವನು ಕ್ಯಾಮರಾಮನ್ ಜೊತೆ ಹೈವೇಗೇ ಬರುವುದಕ್ಕೂ, ಅದೇ ಸಮಯಕ್ಕೆ ಒಂದು ಲಾರಿ ಬಂದು ನಿಲ್ಲುವುದಕ್ಕೂ ಸರಿ ಹೋಯಿತು. ಚಾನೆಲ್‌ನ ಹುಡುಗರನ್ನು ಕಂಡು ಲಾರಿ ಡ್ರೈವರ್‌ಗೆ ಕುತೂಹಲವಾಯಿತು. ಅದನ್ನು ತಕ್ಷಣ ಗಮನಿಸಿದ ಕ್ರೈಂ ರಿಪೋರ್ಟರ್- 'ಏನ್ರೀ, ಈ ಹೈವೇನಲ್ಲಿ ರಾತ್ರಿ ಹೊತ್ತು ದರೋಡೆಗಳಾಗ್ತವಂತೆ? ಕಳ್ಳರು ಸಿಕ್ಕುವುದೇ ಇಲ್ಲವಂತೆ? ಈ ಬಗ್ಗೆ ನಿಮಗೇನಾದ್ರೂ ಗೊತ್ತಾ' ಎಂದು ಪ್ರಶ್ನೆ ಹಾಕಿದ.
ಈಗ ಬಣ್ಣ ಬಣ್ಣದ ಉತ್ತರ ಹೇಳಿದರೆ ನಾಳೆ ಚಾನೆಲ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಗೊತ್ತಾಗುತ್ತಿದ್ದಂತೆ ಲಾರಿ ಡ್ರೈವರ್ ಎಲ್ಲವನ್ನೂ ಪ್ರತ್ಯಕ್ಷ ಕಂಡವನಂತೆ - 'ಅಯ್ಯೋ, ಅದೇನು ಹೇಳ್ತೀರಾ ಸಾರ್? ದರೋಡೆಕೋರರು ಮನೆದೇವರಿಗೆ ಪೂಜೆ ಮಾಡಿ, ಬಲಿ ಕೊಟ್ಟು ಬರ್ತಾರಂತೆ. ಹಂಗಾಗಿ ಅವರನ್ನು ಯಾರೂ ಹಿಡಿಯಲು ಆಗಲ್ವಂತೆ. ಒಮ್ಮೆ ಭಿಕ್ಷುಕನಂತೆ, ಇನ್ನೊಮ್ಮೆ ಮೋಹಿನಿಯಂತೆ, ಮತ್ತೊಮ್ಮೆ ಊರಿನ ಪಟೇಲರಂತೆ ಡ್ರೆಸ್ ಮಾಡಿಕೊಂಡು ಅವರು ಬರೋದುಂಟು! ಹಾಗೆ ಬಂದವರು ರಸ್ತೆ ಮಧ್ಯೆ ನಿಂತು ಎಂಥದೋ ಬೂದಿಯನ್ನು ಲಾರಿಯ ಮೇಲೆ ಎರಚುತ್ತಾರೆ. ಅಷ್ಟೆ. ಆನಂತರದ ಒಂದು ಗಂಟೆ ಕಾಲ ಲಾರಿಯ ಒಳಗಿದ್ದವರು ಗೊಂಬೆಗಳ ಥರ ಕೂತಿರ್ತಾರೆ. ಈ ಸಮಯದಲ್ಲೇ ದರೋಡೆಗಳಾಗ್ತವೆ. ಮಾಟ-ಮಂತ್ರದ ಮುಂದೆ ಮನುಷ್ಯರು ಯಾವ ಲೆಕ್ಕ ಸಾರ್...' ಎಂದುಬಿಟ್ಟ. ಮರುದಿನ, ಲಾರಿ ಡ್ರೈವರ್‌ನ ಸುಳ್ಳು ಮಾತುಗಳೇ ಮೇಲಿಂದ ಮೇಲೆ ಪ್ರಸಾರವಾಗಿದ್ದರಿಂದ ಕತ್ತಲಾಪುರದ ಕಳ್ಳರಿಗೆ ರಾಜ್ಯಮಟ್ಟದಲ್ಲಿ ಪ್ರಚಾರ ಸಿಕ್ಕಿಬಿಟ್ಟಿತು.
ಟಿ.ವಿ.ಯಲ್ಲಿ ಸುದ್ದಿ ಪ್ರಸಾರವಾದ ಮರುದಿನದಿಂದಲೇ ಹೈವೇಯಲ್ಲಿ ದರೋಡೆ ತಡೆಯುವ ಉದ್ದೇಶದಿಂದ ಸರ್ಕಾರವೂ ರಾತ್ರಿ ಗಸ್ತಿಗೆ ಪೊಲೀಸರನ್ನು ನೇಮಿಸಿತು. ಅಷ್ಟಕ್ಕೇ ಸುಮ್ಮನಾಗದೆ ರಾತ್ರಿ ಹತ್ತುಗಂಟೆಯ ನಂತರ ಬೇರೊಂದು ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿತು. ಅಕಸ್ಮಾತ್ ಯಾರಾದರೂ ದರೋಡೆಕೋರರು ಕಾಣಿಸಿದರೆ, ಅವರಿಗೆ ಗುಂಡು ಹಾರಿಸಬಹುದೆಂದೂ ಆದೇಶ ಹೊರಡಿಸಿತು. ಪರಿಣಾಮವಾಗಿ, ಕತ್ತಲಾಪುರದ ಹೈವೇಯಲ್ಲಿ ದರೋಡೆಯಾಗುವುದು ಏಕ್‌ದಂ ನಿಂತು ಹೋಯಿತು. ಈ ದಿಢೀರ್ ಬೆಳವಣಿಗೆಯಿಂದ ತೊಂದರೆಯಾದದ್ದು ಕತ್ತಲಾಪುರದ ಜನರಿಗೇ. ಏಕೆಂದರೆ, ಪದೇ ಪದೆ ದರೋಡೆ ಮಾಡುತ್ತಾ ಮೋಜಿನ ಜೀವನ ನಡೆಸುತ್ತಿದ್ದ ಅವರು, ಆಪತ್ಕಾಲಕ್ಕೆಂದು ಏನನ್ನೂ ಸಂಗ್ರಹಿಸಿಕೊಂಡಿರಲಿಲ್ಲ. ಪೊಲೀಸರ ಸರ್ಪಗಾವಲಿನ ಕಣ್ತಪ್ಪಿಸಿ ದರೋಡೆ ಮಾಡುವುದು ಬದಲಾದ ಪರಿಸ್ಥಿತಿಯಲ್ಲಿ ಸಾಧ್ಯವೂ ಇರಲಿಲ್ಲ.
ಹೀಗೆಯೇ ತಿಂಗಳು ಕಳೆಯಿತು. ಅಷ್ಟೂ ದಿನದಲ್ಲಿ ಒಂದೂ ದರೋಡೆ ನಡೆಯದ ಕಾರಣ, ಪೊಲೀಸ್ ಕಾವಲನ್ನು ಹಿಂತೆಗೆದುಕೊಳ್ಳಲಾಯಿತು. ಈ ವೇಳೆಗೆ, ಕತ್ತಲಾಪುರದ ಮನೆಮನೆಯಲ್ಲೂ ಹಸಿವು ತಾಂಡವವಾಡುತ್ತಿತ್ತು. ಪೌಷ್ಠಿಕ ಆಹಾರ ಸಿಗದಿದ್ದರಿಂದ ಮಕ್ಕಳು ಬಿದಿರು ಕಡ್ಡಿಗಳಂತೆ ಕಾಣತೊಡಗಿದ್ದವು. ಕೆಲವರು, ಜೋರಾಗಿ ಅಳುವುದಕ್ಕೂ ಆಗದಷ್ಟು ನಿತ್ರಾಣರಾಗಿದ್ದರು. ಈ ಕಾರಣದಿಂದ, ಮಕ್ಕಳಿಗೆ ಊಟ ಹಾಕುವುದಕ್ಕಾದರೂ ಕತ್ತಲಾಪುರದ ಜನ ಏನನ್ನಾದರೂ ಕದಿಯಲೇ ಬೇಕಿತ್ತು. ಅವರ ಅದೃಷ್ಟಕ್ಕೆ ಅದೇ ಸಮಯದಲ್ಲಿ ಹೈವೇಯಲ್ಲಿದ್ದ ಪೊಲೀಸ್ ಕಾವಲನ್ನು ತೆಗೆದು ಹಾಕಲಾಗಿತ್ತು.
ಇಂಥಾ ಅವಕಾಶ  ಮತ್ತೆ ಸಿಗುವುದಿಲ್ಲ ಎಂದು ಭಾವಿಸಿದ ಕತ್ತಲಾಪುರದ ಜನ, ಅವತ್ತು ಬೆಳ್ಳಂಬೆಳಗ್ಗೆಯೇ ಹೈವೇಗೆ ಬಂದು ಹೊಂಚು ಹಾಕಿ ನಿಂತರು. ಸ್ವಲ್ಪ ಹೊತ್ತಿನ ನಂತರ, ಚಿಕ್ಕ ಚಿಕ್ಕ ಪಾಲಿಥಿನ್ ಬ್ಯಾಗ್‌ಗಳನ್ನು ತುಂಬಿಕೊಂಡಿದ್ದ ಲಾರಿಯೊಂದು ಬಂತು. ಮೊದಲೇ ನಿರ್ಧರಿಸಿದ್ದಂತೆ ಲಾರಿಗೆ ಕಲ್ಲು ಹೊಡೆದು ನಿಲ್ಲಿಸಿ, ಡ್ರೈವರ್ ಮಾತಾಡುವ ಮೊದಲೇ ಮೂಟೆಗಳನ್ನು ಇಳಿಸಿಕೊಂಡು ಓಡಿಬಿಟ್ಟರು. ಎಲ್ಲವನ್ನೂ ಗಮನಿಸಿದ ಡ್ರೈವರ್, ಲಾರಿಯನ್ನು ರಸ್ತೆ ಬದಿಗೆ ತಂದು ನಿಲ್ಲಿಸಿ, ಓಡುವ ನಡಿಗೆಯಲ್ಲಿ ಕತ್ತಲಾಪುರದ ಜನರನ್ನು ಹಿಂಬಾಲಿಸುತ್ತಾ ಅವರ ಊರಿಗೇ ಬಂದುಬಿಟ್ಟ. ನಂತರ, ಒಂದೊಂದೇ ಮನೆಯ ಬಾಗಿಲು ಬಡಿಯುತ್ತಾ, ಆ ಚೀಲದಲ್ಲಿರೋದು ವಿಷ. ವಾಪಸ್ ಕೊಟ್ಟು ಬಿಡಿ ಎಂದು ಗೋಗರೆಯತೊಡಗಿದ.
ಆ ವೇಳೆಗೆ ಐದಾರು ಮನೆಗಳಲ್ಲಿ ಚೀಲಗಳನ್ನು ಬಿಚ್ಚಿದ್ದರು. ಅದರೊಳಗೆ ಗಂಜಿ ತಯಾರಿಸಲು ಬೇಕಾಗುವ ಹಿಟ್ಟು ಕಾಣಿಸಿತ್ತು. ಮಕ್ಕಳನ್ನು ಸಂಭಾಳಿಸಿದರೆ ಸಾಕು ಎಂಬ ಅವಸರದಲ್ಲಿದ್ದ ಹೆಂಗಸರು ಅವಸರದಲ್ಲಿ ಒಲೆ ಹಚ್ಚಿದ್ದರು. ಈ ಮಧ್ಯೆ ಊರಿಗೆ ಬಂದಿರುವ ಲಾರಿ ಡ್ರೈವರ್ ಪೊಲೀಸರ ಕಡೆಯವನಿರಬೇಕೆಂದೂ, ತಮ್ಮನ್ನು ಹಿಡಿಯಲೆಂದೇ ಏನೋ ಪ್ಲಾನ್ ಮಾಡಿ ಬಂದಿರಬಹುದೆಂದೂ, ಅದೇ ಕಾರಣದಿಂದ ಮನೆಮನೆಯ ಬಾಗಿಲು ತಟ್ಟುತ್ತಿರಬಹುದೆಂದೂ ಊಹಿಸಿದ ಕತ್ತಲಾಪುರದ ಜನ, ಅವನನ್ನು  ಕಂಬಕ್ಕೆ ಕಟ್ಟಿ ಹಾಕಿ ಧರ್ಮದೇಟನ್ನೂ ಹಾಕಿದ್ದರು. ಇದಾಗಿ ಒಂದೆರಡು ಗಂಟೆಗಳ ನಂತರ ಒಂದೆರಡು ಮನೆಯ ಹೆಂಗಸರು, ಮಕ್ಕಳಿಗೆ ಊಟ ಹಾಕುವ ಸಲುವಾಗಿ ತಟ್ಟೆಗಳನ್ನು ತೊಳೆಯುವುದೂ ಈ ಲಾರಿ ಡ್ರೈವರ್‌ಗೆ ಕಾಣಿಸಿತು. ಆತ ತಕ್ಷಣವೇ ಗಟ್ಟಿಯಾಗಿ ಚೀರಿದ: 'ಅದು ವಿಷ. ಅದು ತಿನ್ನಲು ಬಳಸುವ ಪದಾರ್ಥವಲ್ಲ. ಅದನ್ನೇನಾದ್ರೂ ತಿಂದ್ರೆ ಎಲ್ರೂ ಸತ್ತು ಹೋಗ್ತೀರ. ಬೇಕಾದ್ರೆ ಮೊದಲು ಅದನ್ನು ಕೋಳಿಗೆ ಹಾಕಿ ನೋಡಿ. ಆಮೇಲೆ ಮಾತಾಡಿ. ಅನ್ಯಾಯವಾಗಿ ಜೀವ ಕಳ್ಕೋಬೇಡಿ...'
ಕತ್ತಲಾಪುರದ ಜನರಿಗೆ ಈ ಮಾತು 'ವಿಚಿತ್ರ'ವೆಂಬಂತೆ ಕಾಣಿಸಿತು. ಆಗ, ಅದೇ ಊರಿನ ಹಿರಿಯನೊಬ್ಬ ಹೇಳಿದ: 'ಅವನ ಮಾತನ್ನು ಒಮ್ಮೆ ಪರೀಕ್ಷೆ ಮಾಡೇ ಬಿಡೋಣ...'
ಮರುಕ್ಷಣವೇ, ಪಾಯಸದಂತೆ, ಗಂಜಿಯಂತೆ ಕಾಣುತ್ತಿದ್ದ; ಒಂಥರಾ ಸುವಾಸನೆಯನ್ನೂ ಹೊಂದಿದ್ದ ಆ ಪದಾರ್ಥವನ್ನು ಮನೆಯ ಮುಂದಿದ್ದ ಕೋಳಿ ಹಾಗೂ ಬೆಕ್ಕುಗಳಿಗೆ ಹಾಕಲಾಯಿತು. ಅರ್ಧ ಗಂಟೆಯ ನಂತರ ಆ ಪ್ರಾಣಿಗಳು ವಿಚಿತ್ರವಾಗಿ ಚೀರುತ್ತಾ, ನೆಲದ ಮೇಲೆ ಹೊರಳಾಡುತ್ತಾ ಮುಂದಿನ ಕೆಲವೇ ಕ್ಷಣದಲ್ಲಿ ಸತ್ತೇ ಹೋದವು. ಈ ದೃಶ್ಯವನ್ನು ಕಂಡ ಕತ್ತಲಾಪುರದ ಜನ ತತ್ತರಿಸಿ ಹೋದರು. ಒಂದು ವೇಳೆ ಲಾರಿ ಡ್ರೈವರ್‌ನ ಮಾತು ಕೇಳದೆ ಗಂಜಿಯನ್ನು ಮಕ್ಕಳಿಗೆ ಕೊಟ್ಟು ಬಿಟ್ಟಿದ್ದರೆ ಆಗುತ್ತಿದ್ದ ಅನಾಹುತವನ್ನು ನೆನೆದು ಅವರ ಕಲ್ಲೆದೆಯೂ  ಕರಗಿ ಹೋಗಿತ್ತು. ಒಂದೆರಡು ನಿಮಿಷದ ನಂತರ, ಆ ಡ್ರೈವರ್‌ಗೆ ಹಾಕಿದ್ದ ಕಟ್ಟುಗಳನ್ನು ಬಿಚ್ಚಿದರು. ಆತ-'ಇದು ಫ್ಯಾಕ್ಟರಿಗಳಲ್ಲಿ ಬಳಸುವ ಪಾಸ್ಫೇಟ್ ಸ್ಟಾರ್ಚ್ ಎಂಬ ವಸ್ತು. ಇದನ್ನು ತಿಂದ್ರೆ ಸತ್ತು ಹೋಗ್ತಾರೆ. ಅದೇನೂ ಗೊತ್ತಿಲ್ದೆ ಎಂಥಾ ತೊಂದ್ರೆ ಮಾಡ್ಕೋತಿದ್ರಿ ನೋಡಿ' ಎಂದು ಹೇಳಿ ಮೌನವಾಗಿ ಲಾರಿಯ ಕಡೆಗೆ ನಡೆದ. ಅವನ ಹಿಂದೆಯೇ ಬಂದ ಜನ, ತಾವು ಕದ್ದಿದ್ದ ಮೂಟೆಗಳನ್ನು ಒಪ್ಪವಾಗಿ ಲಾರಿಯಲ್ಲಿ ಜೋಡಿಸಿಟ್ಟು, ಮನೆಗಳಿಗೆ ಹಿಂತಿರುಗಿದರು.
ಮರುದಿನ, ಕತ್ತಲಾಪುರದ ಹಿರಿಯನೊಬ್ಬ ಎಲ್ಲರನ್ನೂ ಉದ್ದೇಶಿಸಿ ಹೇಳಿದ: 'ದೇವರು ಕೆಲವೊಮ್ಮೆ ಮಾರುವೇಷದಲ್ಲಿ ಬಂದು ಜನರ ಜೀವ ಉಳಿಸ್ತಾನಂತೆ. ಕಾಪಾಡ್ತಾನಂತೆ. ನಮ್ಮ ಪಾಲಿಗೆ ಅಂಥದೊಂದು ಅನುಭವ ನಿನ್ನೆ ಆಯ್ತು. ನಾವೆಲ್ಲಾ ಲಾರಿ ದರೋಡೆ ಮಾಡಿದಾಗ, ಇವರೆಲ್ಲಾ ಸಾಯ್ಲಿ ಅಂದ್ಕೊಂಡು ಆ ಡ್ರೈವರ್ ಸುಮ್ಮನಿರಬಹುದಿತ್ತು. ಆತ ಹಾಗೆ ಮಾಡಲಿಲ್ಲ. ದೇವರ ಥರ ಹಿಂದೆಯೇ ನಡೆದು ಬಂದ. ಕ್ಷಣಕ್ಕೊಮ್ಮೆ ಎಚ್ಚರಿಸಿದ. ನಾವು ಕೊಟ್ಟ ಹಿಂಸೆಯನ್ನು ಮರೆತು ಎಲ್ಲರ  ಜೀವ ಉಳಿಸಿದ. ಆ ಮೂಲಕ ಕ್ಷಮೆಗಿಂತ ದೊಡ್ಡದು ಬೇರೇನೂ ಇಲ್ಲ ಎಂದು ತೋರಿಸಿಕೊಟ್ಟ. ಇನ್ನು ಮುಂದಾದರೂ ನಾವು ಹತ್ತು ಮಂದಿ ಮೆಚ್ಚುವಂತೆ ಬದುಕೋಣ. ಕೆಟ್ಟ ಕೆಲಸಕ್ಕೆ ಹೋಗೋದನ್ನು ಈಗಿನಿಂದಲೇ ನಿಲ್ಲಿಸಿ ಬಿಡೋಣ...'
ಆನಂತರದಲ್ಲಿ ಕತ್ತಲಾಪುರದ ಜನ ಕರುಣಾಳುಗಳಾದರಂತೆ. ಅಷ್ಟೇ ಅಲ್ಲ; ತಮ್ಮ ಊರಿನ ಹೆಸರನ್ನೂ 'ಕರುಣಾಪುರ' ಎಂದು ಬದಲಿಸಿಕೊಂಡರಂತೆ!

(ಇಲ್ಲಿ ಬರುವ ಕಥೆ ಹಾಗೂ ಪಾತ್ರಗಳು ಕಾಲ್ಪನಿಕ)

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ