ಅಂಕಣಗಳು

ಆದಿ ಬಣಜಿಗರಿಗೆ ಬೇಕಿದೆ ಮತ್ತಷ್ಟು ಆದ್ಯತೆ

ಬಾಣಂತನ ಬೇಗ ಮುಗಿಯದಿದ್ದರೆ ಊರ ಮುಂದೆ ಇರುವ ಬಾಣಂತಿ ಕಲ್ಲು ಮುಟ್ಟಿ..

ಬಾಣಂತನ ಬೇಗ ಮುಗಿಯದಿದ್ದರೆ ಊರ ಮುಂದೆ ಇರುವ ಬಾಣಂತಿ ಕಲ್ಲು ಮುಟ್ಟಿ ಬರಬೇಕು. ಇಲ್ಲವೇ ಅದನ್ನು ಅತ್ತಿತ್ತ ಸರಿದಾಡಿಸಬೇಕು. ಇವೆರಡೂ ಅಗದಿದ್ದರೆ ಮನೆಯಲ್ಲಿ ಲಜ್ಜೆಗೌರಿಯ ಮೂರ್ತಿಯನ್ನು ಪೂಜೆ ಮಾಡಬೇಕು...

ಇದೇನಿದು ? ಎಂದು ಇಂದಿನ ಹೆಣ್ಣು ಮಕ್ಕಳು ಪ್ರಶ್ನೆ ಮಾಡಬಹುದು. ಅದರೆ, ಹಿಂದೆಲ್ಲಾ ಇಂತಹ ನಂಬಿಕೆ ಮತ್ತು ಅಚರಣೆಗಳು ಬಹಳಷ್ಟಿದ್ದವು. ಹಿರಿಯರು ಹೇಳಿದ್ದನ್ನು ಕಿರಿಯರು ಚಾಚೂತಪ್ಪದೆ ಪಾಲಿಸುತ್ತಿದ್ದರು. ಅಂದಹಾಗೆ ಬಾಣಂತಿ ಕಲ್ಲು ಮುಟ್ಟಿ ಬರುವ ಪದ್ಧತಿ ಹೆಚ್ಚಾಗಿ ಆಚರಣೆಯಲ್ಲಿ ಇದ್ದದ್ದು ಅದಿ ಬಣಜಿಗ ಸಮುದಾಯದಲ್ಲಿ. ಬಾಣಂತನ ಮುಗಿದ ಬಳಿಕ ಹೆರಿಗೆಗೆ ಸಹಾಯ ಮಾಡಿದ ಹಿರಿಯರಿಗೆ ಉಡಿ ಅಕ್ಕಿ ನೀಡುವುದು, ಬಾಣಂತನವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟವರಿಗೆ ಆಹಾರ ಧಾನ್ಯ, ಸೀರೆ ಮತ್ತಿತರ ವಸ್ತುಗಳನ್ನು ಕಾಣಿಕೆಯಾಗಿ ನೀಡುವ ಪದ್ಧತಿ ಸಹ ಆದಿ ಬಣಜಿಗರಲ್ಲಿ ಇತ್ತು ಎನ್ನುತ್ತಾರೆ ಪ್ರೊ. ಮಲ್ಲಿಕಾರ್ಜುನ ಜೀವರ್ಗಿ. ಇವರು ಆದಿ ಬಣಜಿಗರ ಕುರಿತು ಅಧ್ಯಯನ ನಡೆಸಿ ಪುಸ್ತಕವನ್ನೂ ಬರೆದಿದ್ದಾರೆ.

ಪ್ರಮುಖ ಪಾತ್ರ ವಹಿಸುತ್ತಿದ್ದರು : ಮಲ್ಲಿಕಾರ್ಜುನ ಅವರು ವಿವರಿಸಿರುವ ಪ್ರಕಾರ, ವೀರಶೈವಕ್ಕೂ ಮೊದಲು ಶೈವ ಬಣಜಿಗರಿದ್ದರಂತೆ. 12ನೇ ಶತಮಾನದ ಬಳಿಕ ವೀರಶೈವರಲ್ಲಿ ದೀಕ್ಷೆ ಪಡೆದ ಬಣಜಿಗರ ಸಂಖ್ಯೆ ಹೆಚ್ಚಾದಾಗ ಶೈವ ಬಣಜಿಗರನ್ನು ಅದಿ ಬಣಜಿಗ ಎಂದು ಕರೆಯಲಾಯಿತು. ಶೈವ ಬಣಜಿಗರು ಮೂಲತ: ವ್ಯಾಪಾರಿಗಳು. ಅದರಲ್ಲೂ ಬದಾಮಿಯ ಚಾಲುಕ್ಯರು, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಕಲಚೂರ್ಯ ಮತ್ತಿತರ ಶೈವ ಅರಸರಿಂದ ಪ್ರೋತ್ಸಾಹ ಪಡೆದಿದ್ದರಂತೆ. ವ್ಯಾಪಾರದ ಜೊತೆ ಜೊತೆಗೆ ಆಡಳಿದಲ್ಲೂ ಈ ಶೈವ ಬಣಜಿಗರು ಪ್ರಮುಖ ಪಾತ್ರ ವಹಿಸುತ್ತಿದ್ದರು. ಶೈವ ಅಧಿಕಾರಿ, ಮಾಂಡಲೀಕ, ಪ್ರಭುಗಾವುಂಡ, ಗಾವುಂಡ ಮತ್ತು ಅರವತ್ತು ಒಕ್ಕಲುಗಳ ಪ್ರಮುಖರಾಗಿ ಕೆಲಸ ಮಾಡುತ್ತಿದ್ದರು. ಶ್ರೀಮಂತರು ಹೀಗೆ ಆಡಳಿತ ಚುಕ್ಕಾಣಿ ಹಿಡಿದರೆ, ಮಧ್ಯಮ ವರ್ಗದವರು ಬೇಸಾಯದಲ್ಲಿ ನಿರತರಾಗುತ್ತಿದ್ದರು. ಆದರೆ, ಧರ್ಮದ ವಿಚಾರ ಬಂದಾಗ ಮಾತ್ರ ಎಲ್ಲರೂ ಒಂದೇ ಆಗಿರುತ್ತಿದ್ದರು.
ಪುಲಿಗೆರೆಯ ಸೌರಾಷ್ಟ್ರ ಸೋಮೇಶ್ವರನಂತೆ ಸಮುದಾಯದವರಿಗೆ ಸವದತ್ತಿಯ ಎಲ್ಲಮ್ಮ ಸಹ ಕುಲದೇವತೆ. ಇನ್ನು ಪುಲಿಗೆರೆಯ ಆದಯ್ಯ ಜನಾಂಗದವರ ಮೂಲ ಮಹಾಶರಣರಲ್ಲಿ ಒಬ್ಬನಾಗಿದ್ದ. ಪ್ರತಿವರ್ಷ ಸೋಮೇಶ್ವರನ ರಥೋತ್ಸವ ಚೈತ್ರ ಹುಣ್ಣಿಮೆಯ ದಿನದಂದು ನಡೆಯುತ್ತದೆ. ಈಗ ಸೋಮೇಶ್ವರ ದೇಗುಲದಲ್ಲಿ ಪೂಜೆ ಮಾಡುವ ಹಕ್ಕನ್ನು ಬ್ರಾಹ್ಮಣರು ಹೊಂದಿದ್ದಾರಾದರೂ ರಥೋತ್ಸದ ಹಿಂದಿನ ದಿನ ರಾತ್ರಿ ಮಾತ್ರ ಆದಿ ಬಣಜಿಗರೇ ಪೂಜೆ ಮಾಡುವ ಸಂಪ್ರದಾಯವಿದೆ.

ದೇವಾಲಯದಲ್ಲಿ ಪೂಜೆ : ಚೈತ್ರ ಶುದ್ಧ ಹುಣ್ಣಿಮೆಯ ದಿನದ ಹಿಂದಿನ ದಿನವೇ ಆದಿ ಬಣಜಿಗರು ದೇವಾಲಯವನ್ನು ಶೃಂಗರಿಸುತ್ತಾರೆ. ದೇವರನ್ನು ಅದ್ದೂರಿಯಾಗಿ ಪೂಜಿಸಿ ಧನ್ಯತಾಭಾವ ಹೊಂದುತ್ತಾರೆ. ಅಂದು ಸೋಮೇಶ್ವರ ಪುಲಿಗೆರೆಗೆ ಬಂದ ದಿನ ಎಂಬ ನಂಬಿಕೆ ಇದೆ. ಪುಲಿಗೆರೆ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಸೋಮೇಶ್ವರನ ಭಕ್ತ ಪರಂಪರೆ ಪೈಕಿ ಆದಿ ಬಣಜಿಗರಿಗೆ ಪ್ರಮುಖ ಸ್ಥಾನವಿದೆ.
ಆದಿ ಬಣಜಿಗ ಎಂಬುದು ವೀರಶೈವ ಸಮುದಾಯದ ಉಪ ಪಂಗಡ. ಜನಸಂಖ್ಯೆ ಅಂದಾಜು 25ರಿಂದ 30 ಲಕ್ಷ ಇರಬಹುದು. ಆದರೆ, ವೀರಶೈವರ ಉಪ ಪಂಗಡಗಳ ಹೆಸರು ಹೇಳುವಾಗ ಜಂಗಮ, ಪಂಚಮಸಾಲಿ, ಬಣಜಿಗರು, ಸಾದರು, ನೊಣಬರ ಹೆಸರು ಕೇಳಿ ಬರುತ್ತದೆ. ಆದರೆ, ಆದಿ ಬಣಜಿಗರ ಹೆಸರನ್ನು ಯಾರೂ ಹೇಳುವುದಿಲ್ಲ. ಇದು ಸಮುದಾಯದ ಮುಖಂಡರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ.
ಮದುವೆ ವಿಚಾರದಲ್ಲಿ ಆದಿ ಬಣಜಿಗರು ಅನುಸರಿಸುತ್ತಿದ್ದ ಸಂಪ್ರದಾಯದ ಪ್ರಕಾರ, ಈ ಜಾತಿಯಲ್ಲಿ ಮದುವೆಗಳು ಹಿರಿಯರ ಸಮ್ಮುಖದಲ್ಲಿ ನಿರ್ಧರಿಸಲ್ಪಡುತ್ತಿದ್ದವಂತೆ. ಅಂದರೆ, ಮೊದಲಿಗೆ ಕನ್ಯೆ ತೋರಿಸುವ ಶಾಸ್ತ್ರ ನಡೆಯುತ್ತದೆ. ಅದೂ ಗಂಡಿನ ತಂದೆ ಮತ್ತು ತಾಯಿ ಬಂದು ಹೆಣ್ಣು ನೋಡಿ ಹೋಗಬೇಕು. ಅವರಿಗೆ ಕನ್ಯೆ ಒಪ್ಪಿಗೆಯಾದರೆ ವರ ಮರು ಮಾತಿಲ್ಲದೆ ತಾಳಿ ಕಟ್ಟಬೇಕು. ತಂದೆ-ತಾಯಿಯ ನಿರ್ಧಾರವೇ ಆಗ ಅಂತಿಮ ಆಗುತ್ತಿತ್ತು.

ಸಂಬಂಧಿಕರಲ್ಲೇ ಮದುವೆ: ಆದಿ ಬಣಜಿಗರು ಹೆಚ್ಚಾಗಿ ಸಂಬಂಧಿಕರಲ್ಲೇ ಹೆಣ್ಣು ಹುಡುಕುತ್ತಿದ್ದರು. ಅತ್ತೆ, ಅಕ್ಕ, ಸೋದರತ್ತೆ, ಸೋದರ ಮಾವನ ಮಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ದೂರದ ಸಂಬಂಧ ಬಂದಾಗ ಹಲವು ವಿಚಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು. ಕೆಲವೆಡೆ ಮೈಲಾರ ಲಿಂಗನನ್ನು ಮನೆ ದೇವರಾಗಿ ಮಾಡಿಕೊಂಡವರು ವೀರಭದ್ರನನ್ನು ಮನೆ ದೇವರಾಗಿ ಮಾಡಿಕೊಂಡವರ ಸಂಬಂಧ ಬೆಳೆಸುತ್ತಿರಲಿಲ್ಲ. ಅದೇ ರೀತಿ ಕರಿ ಲಕ್ಷ್ಮಿ, ಕೆಂಪು ಲಕ್ಷ್ಮಿ ಇದ್ದವರ ಮನೆಯಿಂದೆ ಹೆಣ್ಣು ತರುವುದು ನಿಷಿದ್ಧವಾಗಿತ್ತು. ಆದರೆ, ಆ ಮನೆಗೆ ಹೆಣ್ಣು ಕೊಡಬಹುದಾಗಿತ್ತಂತೆ.
ಮತ್ತೊಂದು ವಿಶೇಷ ಎಂದರೆ ಗಂಡನಿಗೆ ಮೊದಲು ಹೆಂಡತಿ ಸತ್ತರೆ ಆತ ಎರಡನೇ ಮದುವೆಯಾಗಲು ಅವಕಾಶ ಇತ್ತು. ಆದರೆ, ಅದನ್ನು ಮೊದಲ ವಿವಾಹ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ, ಗಂಡ ಸತ್ತು ಹೆಂಡತಿ ಮರು ಮದುವೆಯಾದರೆ ಆದು ಎರಡನೇ ವಿವಾಹ ಆಗುತ್ತಿತ್ತು.
ಗಂಡು ಎರಡು, ಮೂರು ಮತ್ತು ನಾಲ್ಕನೇ ವಿವಾಹವಾಗಲೂ ಅವಕಾಶ ಇತ್ತು. ಆದರೆ, ಮೂರನೇ ಮದುವೆಯನ್ನು ಗುಟ್ಟಾಗಿ ಹೊಲದಲ್ಲಿ ಎಕ್ಕೆಯ ಮರದೊಂದಿಗೆ ನೆರವೇರಿಸಲಾಗುತ್ತಿತ್ತು. ಪೂಜೆ, ಪುನಸ್ಕಾರ ಆದ ಬಳಿಕ ವರನಿಂದ ಎಕ್ಕೆ ಮರಕ್ಕೆ ತಾಳಿ ಕಟ್ಟಿಸಲಾಗುತ್ತಿತ್ತಂತೆ. ಆದಾದ ಬಳಿಕ ನಾಲ್ಕನೇ ಮದುವೆಯನ್ನು ಹೆಣ್ಣಿನೊಂದಿಗೆ ನಡೆಸುವ ಸಂಪ್ರದಾಯ ಇತ್ತು.

ಕಿವಿಯಲ್ಲಿ ಹೆಸರು ಕೂಗುತ್ತಾರೆ : ಇನ್ನು ಈ ಸಮುದಾಯದಲ್ಲಿ ಮೊದಲ ಹೆರಿಗೆಯಾದರೆ ತವರಿನವರು ಮಗುವಿಗೆ ಬೆಳ್ಳಿ ಕಾಲ್ಗೆಜ್ಜೆ, ಕೈಗಳಿಗೆ ಕಡಗ ಹಾಕುತ್ತಾರೆ. ರಾತ್ರಿ ಮುತ್ತೈದೆಯರಿಂದ ಮಗುವಿಗೆ ನಾಮಕರಣ ಮಾಡಿಸಿ ತೊಟ್ಟಿಲಿಗೆ ಹಾಕುತ್ತಿದ್ದರು. ಆಯ್ದ ಐದು ಹೆಸರುಗಳನ್ನು ಆ ಮುತ್ತೈದೆಯರು ಮಗುವಿನ ಕಿವಿಯಲ್ಲಿ ಕೂಗುತ್ತಿದ್ದರು. ಬಳಿಕ ಎಲ್ಲರಿಗೂ ಗುಗ್ಗರಿ ಹಂಚುತ್ತಿದ್ದರು. ಈ ಸಮುದಾಯದಲ್ಲೂ ತಂಟೆ, ತಕರಾರು ಎದುರಾದಾಗ ಹಿರಿಯರೇ ಕುಳಿತು ಬಗೆಹರಿಸುತ್ತಿದ್ದರು. ವೈವಾಹಿಕ ಜೀವನ ಮುರಿದು ಬಿದ್ದಾಗ ವಿಚ್ಛೇದನಕ್ಕೂ ದಾರಿ ಮಾಡಿಕೊಡುತ್ತಿದ್ದರು. ಹೆಣ್ಣು ಮರು ಮದುವೆಯಾಗದಿದ್ದರೆ ಜೀವನಾಂಶ ಕೊಡಿಸುತ್ತಿದ್ದರು. ಯಾವುದೇ ವಿಚಾರದಲ್ಲಿ ಹೆಣ್ಣಾದವಳು ನ್ಯಾಯಾಲಯದ ಮೆಟ್ಟಿಲು ಏರುವುದನ್ನು ಕಳಂಕ ಎಂದು ಭಾವಿಸುವಂತಹ ಸನ್ನಿವೇಶ ಸಮುದಾಯದಲ್ಲಿತ್ತು.
ಆದಿ ಬಣಜಿಗರು ಆದಿಶಕ್ತಿಯನ್ನು ವಿಭಿನ್ನ ರೂಪಗಳಲ್ಲಿ ಪೂಜಿಸುತ್ತಾರೆ. ಗೌರಿ, ಸೀಗೆ, ಎಲ್ಲಮ್ಮ, ಬನದಮ್ಮ, ಅಂಬಾ ಭವಾನಿ, ಚಾಮುಂಡಿಯನ್ನು ಆರಾಧಿಸುತ್ತಾರೆ. ಬಹ ಮನೆತನಗಳು ಕುಲದೇವತೆಯಾಗಿ ಪೂಜಿಸುತ್ತಿರುವುದು ಮಾತ್ರ ಸವದತ್ತಿಯ ಎಲ್ಲಮ್ಮ.

ಸ್ಥಿತಿಗತಿ ಏನು ?: ಸಮುದಾಯದಲ್ಲಿ ಈಗ ಬೆರಳೆಣಿಕೆಯಷ್ಟು ಮಂದಿ ಮಾತ್ರ ಈಗ ವ್ಯಾಪಾರಿಗಳಾಗಿದ್ದಾರೆ. ಇನ್ನೂ ಕೆಲವರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಉಳಿದವರು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎನ್ನುತ್ತಾರೆ ರಾಜ್ಯ ವೀರಶೈವ ಆದಿ ಬಣಜಿಗ ಸಂಘದ ಉಪಾಧ್ಯಕ್ಷ ಮತ್ತು ಸಮುದಾಯದ ಹಿರಿಯರಾದ ಗುರುಬಸಪ್ಪಗೌಡ ಪಾಟೀಲ್ ಅವರು. ಆದಿ ಬಣಜಿಗ ಎಂಬುದು ವೀರಶೈವ ಸಮುದಾಯದ ಉಪ ಪಂಗಡ. ವೀರಶೈವ ಮತ್ತು ಲಿಂಗಾಯತ ಮತ್ತು ಅದಕ್ಕೂ ಪೂರ್ವದಿಂದಲೇ ಇರುವ ನಮ್ಮ ಸಮಾಜ ಮಾತ್ರ ಇದ್ದೂ ಇಲ್ಲದಂತೆ ಆಗಿದೆ ಎಂಬ ಕೊರಗು ಗುರುಬಸಪ್ಪಗೌಡ ಪಾಟೀಲ್ ಅವರನ್ನು ಕಾಡುತ್ತಿದೆ.
ಗುಲ್ಬರ್ಗ, ಬಿಜಾಪುರ, ಬೆಳಗಾವಿ ಮತ್ತು ಚಿಕ್ಕೋಡಿ ಭಾಗದಲ್ಲಿ ಆದಿ ಬಣಜಿಗರ ಸಂಖ್ಯೆ ಹೆಚ್ಚಾಗಿದೆ. ಇನ್ನು ಹಾವೇರಿ, ಕೊಪ್ಪಳ, ಗದಗ, ಬೀದರ್ ಮತ್ತು ರಾಯಚೂರಿನಲ್ಲಿ ಜನಾಂಗದ ಕುಟುಂಬಗಳಿವೆ. ಶೈಕ್ಷಣಿಕ ಪರಿಸ್ಥಿತಿ ಕೊಂಚ ಸುಧಾರಿಸಿದ್ದರೂ ಸರ್ಕಾರಿ ನೌಕರಿ ಪಡೆಯುವ ಮಟ್ಟಕ್ಕೇನೂ ಬೆಳೆದಿಲ್ಲ. ರಾಜಕೀಯದಲ್ಲೂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಹಿಂದೆ ಬಸವರಾಜ ಪಾಟೀಲ್ ಅಟ್ಟೂರು ಮತ್ತು ಜಿ.ಎಸ್.ಬಾಗಲಕೋಟ ಅವರು ಮಂತ್ರಿಗಳಾಗಿದ್ದರು. ಈಗ ದತ್ತಾತ್ರೇಯ ಪಾಟೀಲ ಅವರು ಶಾಸಕರಾಗಿದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿಗಳಂತೂ ಇಲ್ಲವೇ ಇಲ್ಲ.

- ಕೆ.ವಿ.ಪ್ರಭಾಕರ
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡುವುದಿಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!