ಆಗಷ್ಟೇ ನನ್ನ ಪಿಯುಸಿ ಮುಗಿದಿತ್ತು. ರಜೆಯನ್ನು ಮಜವಾಗಿ ಕಳೆಯಬೇಕು ಎಂಬ ಮಹದಾಸೆಯಿಂದಲೇ ಊರಿಗೆ ಹೋಗಿದ್ದೆ. ನನ್ನೂರು, ಮಲೆನಾಡು ಹಾಗೂ ಬಯಲುಸೀಮೆಯ ಮಧ್ಯೆ ಇರುವ ಒಂದು ಪುಟ್ಟಹಳ್ಳಿ. ಅಂದಮೇಲೆ ಕೇಳಬೇಕೆ? ಊರಲ್ಲಿದ್ದ ಎಲ್ಲರಿಗೂ, ಯಾವಾಗಲೂ ಏನಾದರೊಂದು ಕೆಲಸ ಇದ್ದೇ ಇರುತ್ತಿತ್ತು. ಎಲ್ಲರೂ ಮನೆಯಿಂದ ಹೋಗಿಬಿಡುತ್ತಿದ್ದರು. ಇಂಥ ಸಂದರ್ಭದಲ್ಲೆಲ್ಲ ಅಮ್ಮಾ, ನಾನೂ ಬರ್ತೇನೆ ಎಂದು ಹಠ ಹಿಡಿಯುತ್ತಿದ್ದೆ. ಆಗೆಲ್ಲ-'ಬೆಳೆಯೋ ಮಕ್ಕಳು ಹಾಗೆಲ್ಲ ಹೊರಗೆ ಬರಬಾರ್ದು ಮಗಳೇ' ಎಂದಿದ್ದ ಅಮ್ಮ ಕೊನೆಗೊಮ್ಮೆ ಮನಸ್ಸು ಬದಲಿಸಿ- ಬೇಸರ ಅನ್ನಿಸಿದಾಗೆಲ್ಲ ಚಂದ್ರಿಕಾಳ ಮನೆಗೆ ಹೋಗಿ ಬಾ. ಪಾಪ, ಬೆಳಗ್ಗಿಂದ ಸಂಜೆಯವರೆಗೂ ಅವಳು ಒಬ್ಬಳೇ ಇರ್ತಾಳೆ. ನೀನು ಹೋದ್ರೆ ಅವಳಿಗೂ ಖುಷಿಯಾಗುತ್ತೆ' ಅಂದಿದ್ದರು.
ನಮ್ಮ ಮನೆಯಿಂದ ಎಂಟು ಮನೆಗಳಾಚೆ ಇದ್ದಾಕೆ ಚಂದ್ರಿಕಾ. ಗರ್ಭಿಣಿಯಾಗಿದ್ದ ಕಾರಣದಿಂದ ಆಕೆ ಮನೆಯಲ್ಲೇ ಇದ್ದಳು. ಆಕೆಯನ್ನು ಒಂಟಿಯಾಗಿ ಬಿಟ್ಟು ಹೋಗುವ ಗಂಡ ಮತ್ತು ಅವನ ಹೆತ್ತವರು ಕೆಟ್ಟವರಂತೆ ಕಾಣಿಸಿದ್ದರು. ಮೊದಲ ದಿನದ ಮಾತುಕತೆಯ ಸಂದರ್ಭದಲ್ಲಿಯೇ ಅದನ್ನು ಚಂದ್ರಿಕಾಗೆ ಹೇಳಿಯೂ ಬಿಟ್ಟೆ. ನನ್ನ ಮಾತು ಕೇಳದ ಅವಳು ತಕ್ಷಣವೇ ತುಟಿಯ ಮೇಲೆ ಕೈ ಇಟ್ಟು- 'ಯಾರಾದ್ರೂ ಈ ಮಾತು ಕೇಳಿಸ್ಕೊಂಡು ನಮ್ಮ ಅತ್ತೆಗೆ ಹೇಳಿಬಿಟ್ರೆ ನನ್ನ ಕಥೆ ಮುಗಿಸಿ ಬಿಡ್ತಾರೆ ಅಷ್ಟೆ' ಅಂದಳು. ಎರಡು ನಿಮಿಷದ ನಂತರ - 'ಇದು ನನಗೆ 3ನೇ ಹೆರಿಗೆ. ಮೊದಲ ಎರಡೂ ಹೆಣ್ಣು ಮಕ್ಕಳು. ಅದೇ ಕಾರಣಕ್ಕೆ ಗಂಡ ಮತ್ತು ಅತ್ತೆ-ಮಾವ ಸಿಟ್ಟಾಗಿದ್ದಾರೆ. ಈ ಬಾರಿಯಾದ್ರೂ ಗಂಡಾಗಲಿ ಅಂತ ನಾನು ದಿನಾಲೂ ಪ್ರಾರ್ಥಿಸ್ತಾನೇ ಇದೀನಿ. ಆದರೆ ದೇವರು ಯಾಕೋ ನನ್ನ ವಿಷಯದಲ್ಲಿ ಕರುಣೆ ತೋರಿಸ್ತಾ ಇಲ್ಲ..' ಎಂದಳು.
ಪೆದ್ದಮ್ಮಾ, ಇಂಥ ಮಕ್ಕಳೇ ಹುಟ್ಟಲಿ ಎಂದು ನಿರ್ಧರಿಸುವಾತ ದೇವರಲ್ಲ. ಹುಟ್ಟುವ ಮಗುವಿನ ವಿಷಯದಲ್ಲಿ ಗಂಡ-ಹೆಂಡತಿ ಇಬ್ಬರೂ ಸಮಸಮ ಪಾಲುದಾರರು ಎಂದು ಆಕೆಗೆ ಹೇಳಬೇಕು ಅನ್ನಿಸಿತು. ಹಾಗೆ ಹೇಳಿದರೂ ಏನೂ ಪ್ರಯೋಜನವಿಲ್ಲ ಅನಿಸಿದ್ದರಿಂದ ತಕ್ಷಣ ಕೇಳಿಬಿಟ್ಟೆ: 'ಒಂದು ವೇಳೆ ಈ ಬಾರಿಯೂ ಹೆಣ್ಣೇ ಹುಟ್ಟಿದ್ರೆ ಏನಾಡ್ತೀರಿ? 'ನನ್ನ ಮಾತು ಕೇಳುತ್ತಿದ್ದಂತೆಯೇ ಕೆಂಡ ತುಳಿದವಳಂತೆ ಬೆಚ್ಚಿದ ಚಂದ್ರಿಕಾ ಹೇಳಿದಳು: 'ಹಂಗಾಗೋದು ಸಾಧ್ಯವೇ ಇಲ್ಲ. ಗಂಡು ಮಗುವೇ ಹುಟ್ಟಲಿ ಅಂತ ನಾನು ಹತ್ತಾರು ದೇವರಿಗೆ ಹರಕೆ ಕಟ್ಟಿಕೊಂಡಿದೀನಿ. ವಾರಕ್ಕೊಮ್ಮೆ ಉಪವಾಸ ಮಾಡಿದೀನಿ. ಈ ಸಲ ದೇವರು ನಂಗೆ ಮೋಸ ಮಾಡಲ್ಲ. ನನ್ನ ನಂಬಿಕೆಯೆಲ್ಲಾ ಉಲ್ಟಾ ಆಗಿ ಅಕಸ್ಮಾತ್ ಹೆಣ್ಣು ಮಗೂನೇ, ಆಗಿಬಿಟ್ರೆ, ನನ್ನನ್ನು ಕೊಂದು ಹಾಕಲಿಕ್ಕೂ, ನಮ್ಮ ಮನೆಯವರು ಹಿಂದೆ ಮುಂದೆ ನೋಡಲ್ಲ...'
ಮುಂದೆ ಒಂದೊಂದೇ ದಿನ ಕಳೆದಂತೆಲ್ಲಾ ಚಂದ್ರಿಕಾಗೆ ನೀಡಿದ್ದ ಡೇಟ್ ಹತ್ತಿರವಾಗುತ್ತಾ ಬಂತು. ಹೆರಿಗೆಯ ಸಂದರ್ಭದಲ್ಲಿ ನಾವೂ ಆಸ್ಪತ್ರೆಗೆ ಹೋಗಿ ಬರೋಣ ಕಣಮ್ಮಾ. ಪಾಪ, ಆಕೆ ತುಂಬಾ ಸಂಕಟಪಡ್ತಾಳೆ ಅಂದೆ. ಹೆರಿಗೆಯಂಥ ಸಂದರ್ಭದಲ್ಲಿ ಅಪರಿಚಿತ ಹೆಣ್ಣು ಮಕ್ಕಳಿಗೂ ಸಹಾಯ ಮಾಡಬೇಕು ಎಂಬ ಮನಸ್ಸು ಹೊಂದಿದ್ದ ಅಮ್ಮ, ಖಂಡಿತ ಹೋಗೋಣ ಎಂದಿದ್ದರು.
"ನೋಡಿ ಸ್ವಾಮೀ, ಹೆರಿಗೆ ಅಂದ್ಮೇಲೆ ಬಿಡಿಸಿ ಹೇಳಬೇಕಿಲ್ಲ ತಾನೆ? ತಾಯಿ-ಮಗು ಇಬ್ಬರನ್ನೂ ಕಾಪಾಡ್ಬೇಕು. ಹೆರಿಗೆ ಟೈಮಲ್ಲಿ ರಕ್ತ ಬರುತ್ತೆ, ಕೊಳೆ ಬರುತ್ತೆ. ಒಂದೊಂದ್ಸಲ ಇನ್ನೇನೋ ಹೊಲಸು ಬರುತ್ತೆ. ಅದನ್ನೂ ತೆಗೀಬೇಕು. ಅದಕ್ಕೆಲ್ಲಾ ಸರ್ಕಾರ ಸಂಬಳ ಕೊಡಲ್ಲ. ಹಂಗಾಗಿ ನೀವು ಏನ್ಮಾಡ್ಬೇಕು ಗೊತ್ತಾ? ಗಂಡು ಮಗು ಹುಟ್ಟಿದ್ರೆ 500 ರೂಪಾಯಿ, ಹೆಣ್ಣು ಮಗು ಆದ್ರೆ 300 ರೂಪಾಯಿ ಕೊಡಬೇಕು. ಆಸ್ಪತ್ರೆಗೆ ಬಂದವರೆಲ್ಲಾ ಇಷ್ಟು ದುಡ್ಡು ಕೊಡ್ತಾ ಇದಾರೆ. ಅದಕ್ಕಿಂತ, ಒಂದ್ರುಪಾಯಿ ಕಮ್ಮಿ ಬೇಡ, ಒಂದ್ರುಪಾಯಿ ಜಾಸ್ತಿನೂ ಬೇಡ" ಎಂದು ಹೇಳಿದ್ದಳು ಸರ್ಕಾರಿ ಆಸ್ಪತ್ರೆಯ ನರ್ಸ್. ಈ ವೇಳೆಗೆ ಚಂದ್ರಿಕಾಳನ್ನು ಹೆರಿಗೆ ವಾರ್ಡ್‌ಗೆ ಕರೆದೊಯ್ಯಲಾಗಿತ್ತು.
ಬಹುಶಃ ಈ ಬಾರಿ ಗಂಡು ಮಗುವೇ ಹುಟ್ಟುತ್ತದೆ ಎಂಬ ನಂಬಿಕೆ ಚಂದ್ರಿಕಾಳ ಗಂಡನಿಗೂ ಇತ್ತೇನೋ. ಅದೇ ಕಾರಣದಿಂದ, ಜೇಬಲ್ಲಿ 500 ರುಪಾಯಿನ ನೋಟುಗಳನ್ನು ಇಟ್ಟುಕೊಂಡೇ ಆತ ಅತ್ತಿಂದಿತ್ತ ತಿರುಗುತ್ತಿದ್ದ.
ಆನಂತರದಲ್ಲಿ ಒಂದೆರಡು ಗಂಟೆಗಳು ಕಳೆದವು. ಆಗಲೇ ಹೆರಿಗೆ ವಾರ್ಡ್‌ನಿಂದ ಪುಟ್ಟ ಮಗುವೊಂದು ಚೀರಿದಂತಾಯಿತು. ನಂತರದ ಎರಡೇ ನಿಮಿಷದಲ್ಲಿ ಬಿಳಿಯ ಬಟ್ಟೆಯಲ್ಲಿ ಮಗುವನ್ನಿಟ್ಟುಕೊಂಡು ಬಂದ ನರ್ಸ್, ಬೇಜಾರಿನಿಂದ ಹೇಳಿದಳು: ಹೆಣ್ಮಗು ಸ್ವಾಮೀ. 300 ರುಪಾಯಿ ಕೊಡಿ...' ಈ ಮಾತು ಕೇಳುತ್ತಿದ್ದಂತೆಯೇ ಚಂದ್ರಿಕಾಳ ಗಂಡನ ಮುಖ ವಿವರ್ಣವಾಯಿತು. ಅಷ್ಟು ದೂರದಲ್ಲಿ ಕೂತಿದ್ದ ಅವನ ತಾಯಿ, ಕಣ್ಸನೆಯಲ್ಲೇ ಏನೋ ಹೇಳಿದರು. ಅದನ್ನು ಅರ್ಥಮಾಡಿಕೊಂಡವನಂತೆ ಆತ, ನರ್ಸ್ ಇದ್ದ ವಾರ್ಡ್‌ಗೆ ನುಗ್ಗಿ ಹೋದ. ನಂತರದ ಒಂದು ಗಂಟೆ ಆತ ಹೊರಗೇ ಬರಲಿಲ್ಲ. ಕಡೆಗೊಮ್ಮೆ ಈ ಮೊದಲು ಹಣ ಕೇಳಿದ್ದ ನರ್ಸಮ್ಮನೇ ಒಂದು ರಟ್ಟಿನ ಬಾಕ್ಸ್ ಎತ್ತಿಕೊಂಡು ಹೊರಬಂದು ಹೇಳಿದಳು: ಮಗೂಗೆ ಉಸಿರಾಟದ ತೊಂದ್ರೆ ಆಯ್ತು. ಉಳಿಸಿಕೊಳ್ಳೋಕೆ ಬಹಳ ಕಷ್ಟಪಟ್ವಿ. ಆದರೆ ಆಗಲಿಲ್ಲ...' ಇಷ್ಟು ಹೇಳಿ, ಕಸವನ್ನು ಡಸ್ಟ್‌ಬಿನ್‌ಗೆ ಹಾಕಿಬರ್ತೀನಿ ಎನ್ನುತ್ತಾ ಆಕೆ ಹೋಗಿಯೇ ಬಿಟ್ಟಳು.
ಇದಾಗಿ ಒಂದು ಗಂಟೆಯ ನಂತರ ವಾರ್ಡ್‌ನಿಂದ ಚಂದ್ರಿಕಾ ಹೊರಬಂದಾಗಲೇ ನಮಗೆ ನಡೆದದ್ದೇನೆಂದು ಅರ್ಥವಾಯಿತು. ಹುಟ್ಟಿದ್ದು ಹೆಣ್ಣು ಮಗು ಎಂದು ತಿಳಿದೊಡನೆ, ಅದನ್ನು 'ಮುಗಿಸುವಂತೆ' ಚಂದ್ರಿಕಾಳ ಗಂಡನೇ ನರ್ಸ್‌ಗಳಿಗೆ ದುಂಬಾಲು ಬಿದ್ದಿದ್ದ. ದುಡ್ಡಿನ ಆಸೆಗೆ ಅವರು ತಕ್ಷಣವೇ ಒಪ್ಪಿಕೊಂಡು ಆ ಹಸುಳೆಯ ಕುತ್ತಿಗೆ ಹಿಸುಕಿದ್ದರು! ಇದಕ್ಕೆಲ್ಲ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಚಂದ್ರಿಕಾ-'ನನ್‌ಮಗು ತೋರ್ಸಿ. ನಂಗೆ ಮಗು ಕೊಡಿ. ನನ್ ಪಾಪು ಎಲ್ಲಿ?' ಎಂದೆಲ್ಲ ಚೀರುತ್ತಿದ್ದಳು. ಆಕೆಯ ಚೀರಾಟ ಹೆಚ್ಚಾದಾಗ ದಡಬಡಿಸಿ ಬಂದ ಚಂದ್ರಿಕಾಳ ಅತ್ತೆ, ಮೂರನೇ ಸರ್ತೀನೂ ಹೆಣ್ಣನ್ನೇ ಹೆತ್ತೆಯಲ್ಲೇ ಬೇವಾರ್ಸಿ...' ಎಂದು ಅಬ್ಬರಿಸಿದಳು. ಅಷ್ಟೆ: ಚಂದ್ರಿಕಾಳ ಚೀರಾಟ ನಿಂತು ಹೋಯಿತು.
ಅವತ್ತು ಮಾತ್ರ ಕಣ್ಣೆದುರೇ ನಡೆದ ಅನ್ಯಾಯವನ್ನೂ ಖಂಡಿಸಲಾಗದಷ್ಟು ಅಸಹಾಯಕತೆಯಿಂದ ಅಮ್ಮನೊಂದಿಗೆ ನಾನೂ ನಿಂತಿದ್ದೆ. ಇಂದು, ರಾಷ್ಟ್ರೀಯ ಮಗಳ ದಿನ ಅಂದುಕೊಂಡಾಗ ಇದ್ದಕ್ಕಿದ್ದಂತೆ ಹಳೆಯದೆಲ್ಲ ನೆನಪಾಗಿ ಸಂಕಟವಾಯಿತು...
-ನಾನು ಪ್ರಣತಿ