ಅಂಕಣಗಳು

ಕಾಡುಹಕ್ಕಿ ಸಮಸ್ಯೆಯೂ ಕಾಡುವ ಸಂಗತಿಯಾಗಲಿ!

ಬಡಾವಣೆ, ಮೇಲ್ಸೇತುವೆ, ಮೆಟ್ರೋ ರೈಲು, ಅಪಾರ್ಟ್‌ಮೆಂಟ್, ಐಟಿ ಪಾರ್ಕ್‌ಗಳ ಹಾಗೆ..

ಬೆಂಗಳೂರು, ಬಡಾವಣೆ, ಮೇಲ್ಸೇತುವೆ, ಮೆಟ್ರೋ ರೈಲು, ಅಪಾರ್ಟ್‌ಮೆಂಟ್, ಐಟಿ ಪಾರ್ಕ್‌ಗಳ ಹಾಗೆ ಪ್ರಾಣಿ, ಪಕ್ಷಿ, ಕಾಡು, ಕೀಟಗಳೂ ಮುಖ್ಯ ಎಂಬ ಭಾವನೆ ವಿಧಾನಸೌಧದಲ್ಲಿ ಹಾಗೂ ಅಲ್ಲಿ ಕುಳಿತಿರುವವರಲ್ಲಿ ಆವರಿಸಿದರೆ ಗುಣಾತ್ಮಕ ಹಾಗೂ ಅಸಾಧಾರಣ ಬದಲಾವಣೆ ಸಾಧ್ಯ.

ಮೊನ್ನೆಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಕುತೂಹಲದಿಂದ ಓದುತ್ತಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆಲವು ನಿರ್ಧಾರಗಳು ಗಮನ ಸೆಳೆದವು. ರಾಮನಗರದಲ್ಲಿ ರಾಮದೇವರ ಬೆಟ್ಟ ಪ್ರದೇಶದಲ್ಲಿ ರಣಹದ್ದುಗಳ ವನ್ಯಧಾಮ, ಬೆಳಗಾವಿ ಜಿಲ್ಲೆ ಭೀಮಗಢದಲ್ಲಿ ಬಾವುಲಿಗಳ ವನ್ಯಧಾಮ, ಗುಲ್ಬರ್ಗದ ಚಿಂಚೋಳಿಯಲ್ಲಿ ಕೃಷ್ಣಮೃಗ ವನ್ಯಸಂರಕ್ಷಣಾಧಾಮಗಳನ್ನು ನಿರ್ಮಿಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಹಾಲಿ ಅಭಯಾರಣ್ಯಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಇನ್ನೂ ಹೆಚ್ಚಿನ ಪ್ರದೇಶಗಳನ್ನು ಸೇರಿಸಿಕೊಂಡು ಅದಕ್ಕಾಗಿ ಏಳು ಕೋಟಿ ರು. ಮೀಸಲಿಡಲು ಸಹ ಸರ್ಕಾರ ನಿರ್ಧರಿಸಿದೆ. ಇವುಗಳ ಜತೆಗೆ ಸರ್ಕಾರ ಇನ್ನೂ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ದಾಂಡೇಲಿ ಅಭಯಾರಣ್ಯ ಪ್ರದೇಶದ ವ್ಯಾಪ್ತಿಗೆ ಒಳಗೊಳ್ಳುವ ಅರಣ್ಯ ಹಾಗೂ ಅಘನಾಶಿನಿ ಕೊಳ್ಳದ ಕಾಡನ್ನು ಹಾರ್ನ್‌ಬಿಲ್ ಪಕ್ಷಿಗಳ ಸಂರಕ್ಷಣಾ ಪ್ರದೇಶ ಎಂದು ಘೋಷಿಸಿ ಅಭಿವೃದ್ಧಿಪಡಿಸಲು ಸಹ ಮುಖ್ಯಮಂತ್ರಿಯವರ ನೇತೃತ್ವದ ಸಂಪುಟಸಭೆ ತೀರ್ಮಾನಿಸಿದೆ.
ಹಾಗೆ ನೋಡಿದರೆ ಈ ಎಲ್ಲ ನಿರ್ಧಾರಗಳನ್ನು ಮೂರ್ನಾಲ್ಕು ವರ್ಷಗಳ ಹಿಂದೆಯೇ, ಅಂದಿನ ಬಿಜೆಪಿ ಸರ್ಕಾರ ತೆಗೆದುಕೊಳ್ಳಬೇಕಿತ್ತು. ಆದರೆ ಬಿಜೆಪಿ ಮುಖ್ಯಮಂತ್ರಿಗಳಿಗೆ, ಅದರಲ್ಲೂ ಮುಖ್ಯವಾಗಿ ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಅವರಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ಕೀಟ, ಕಾಡಿನ ಬಗ್ಗೆ ಯೋಚಿಸಲು, ಚಿಂತಿಸಲು ಸಮಯವೂ ಇರಲಿಲ್ಲ, ವ್ಯವಧಾನವೂ ಇರಲಿಲ್ಲ. ಒಂದು ವೇಳೆ ಇವೆರಡು ಇದ್ದಿದ್ದರೆ, ಈ ಎಲ್ಲ ಯೋಜನೆಗಳು ಅಂದೇ ಜಾರಿಗೆ ಬರುತ್ತಿದ್ದವು. ಸಿದ್ದರಾಮಯ್ಯನವರು ಈ ಎಲ್ಲ ಕಡತಗಳನ್ನು ತರಿಸಿಕೊಂಡು, ಈ ಯೋಜನೆಗಳಲ್ಲಿ ಅಡಕವಾಗಿರುವ ಮಹತ್ವ ಹಾಗೂ ಸೂಕ್ಷ್ಮ ಅಂಶಗಳನ್ನು ಪರಿಗಣಿಸಿ, ಸಚಿವ ಸಂಪುಟದ ಸಭೆ ಮುಂದೆ ಇಟ್ಟು ಮುಕ್ತಿ ಕೊಡಿಸಿದ್ದಾರೆ. ಕಾಡಿನಲ್ಲಿರುವ ಅಸಂಖ್ಯ ಮೂಕ ಪ್ರಾಣಿ, ಪಕ್ಷಿಗಳ ಪರವಾಗಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಇಲ್ಲಿ ಒಂದು ಪ್ರಸಂಗವನ್ನು ನೆನಪಿಸಲು ಬಯಸುತ್ತೇನೆ. ನಾಲ್ಕು ವರ್ಷಗಳ ಹಿಂದೆ, ನಾನು 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿದ್ದಾಗ ಹಾರ್ನ್‌ಬಿಲ್ (ಮಂಗಟ್ಟೆ) ಪಕ್ಷಿಗಳ ಕುರಿತು ಬರೆದಿದ್ದೆ. ನಿಮಗೆ ಗೊತ್ತಿರಬಹುದು, ಹಾರ್ನ್‌ಬಿಲ್ ತೀರಾ ಅಪರೂಪದ ಪಕ್ಷಿ. ಮುನ್ನೂರ ಅರವತ್ತೈದು ದಿನ ಹಣ್ಣು ಬಿಡುವ ಕಾಡುಗಳಲ್ಲಿ ಮಾತ್ರ ಇದನ್ನು ಕಾಣಬಹುದು. ಯಾವುದಾದರೂ ಊರಿನಲ್ಲಿ ಹಾರ್ನ್‌ಬಿಲ್ ಕಂಡರೆ, ನಿಸ್ಸಂದೇಹವಾಗಿ ಹೇಳಬಹುದು, ಅದು ಜೀವವೈವಿಧ್ಯಗಳಿಂದ ಕೂಡಿರುವ, ಗಿಡ, ಮರ, ನದಿ, ನೀರು, ಕಾಡುಗಳಿರುವ ಪ್ರದೇಶವೆಂದು. ಹಾರ್ನ್‌ಬಿಲ್ ಇದ್ದರೆ ಯಾವುದೇ ಅರಣ್ಯಕ್ಕೆ ಭೂಷಣ. ಅವು ಸಹ ಬೇರೆಲ್ಲೂ ಇರುವುದಿಲ್ಲ. ಜೀವವೈವಿಧ್ಯತೆ ಶ್ರೀಮಂತವಾಗಿರುವ ಕಾಡಿನಲ್ಲಿಯೇ ಇರುತ್ತವೆ.
ಈ ಪಕ್ಷಿಯ ಲೈಫ್‌ಸ್ಟೈಲ್ ತೀರಾ ಆಸಕ್ತಿದಾಯಕ. ಒಮ್ಮೆ ಗಂಡು ಹಾರ್ನ್‌ಬಿಲ್ ತನಗೆ ಇಷ್ಟವಾದ ಹೆಣ್ಣು ಹಾರ್ನ್‌ಬಿಲ್‌ನ್ನು ಬಯಸಿದರೆ, ಅವೆರಡರ ನಡುವೆ ಪ್ರೇಮಾಂಕುರವಾದರೆ ಮುಗಿಯಿತು, ಜೀವನದುದ್ದಕ್ಕೂ ಒಟ್ಟಿಗೆ ಗಂಡ-ಹೆಂಡತಿಯರಂತೆ ಸಂಸಾರ ಮಾಡುತ್ತವೆ. ಒಂದು ವೇಳೆ ಈ ಪೈಕಿ ಒಂದು ಸತ್ತು ಹೋದರೆ, ಸಂಗಾತಿಯೂ ಸಹ ವಿರಹ ವೇದನೆ, ಕೊರಗಿನಲ್ಲಿ ಉಪವಾಸ ಬಿದ್ದು ಸತ್ತು ಹೋಗುತ್ತದೆ.
ಹಾರ್ನ್‌ಬಿಲ್ ಮಹಾ ತಿಂಡಿಪೋತ. ಹಾಗಂತ ಅದು ತಿನ್ನೋದು ಹಣ್ಣುಗಳನ್ನು ಮಾತ್ರ. ತಾನುಳಿದ ಅರಣ್ಯದಲ್ಲಿ ಹಣ್ಣುಗಳು ಸಿಗದಿದ್ದರೆ, ಹದಿನೈದಿಪ್ಪತ್ತು ಕಿ.ಮೀ. ದೂರ ಹಾರಿ ಹೋಗಿ ಹಣ್ಣುಗಳನ್ನು ತಿಂದು, ಮರಿಗಳಿಗೂ ತರುತ್ತವೆ.
ಹಾರ್ನ್‌ಬಿಲ್ ಇರುವ ಕಡೆ ಅರಣ್ಯ, ಅರಣ್ಯವಿರುವ ಕಡೆ ಹಾರ್ನ್‌ಬಿಲ್ ಸಾಮಾನ್ಯ. ಕಾರಣ ಇಷ್ಟೆ. ಹಾರ್ನ್‌ಬಿಲ್ ತಾನು ತಿಂದ ಹಣ್ಣಿನ ಬೀಜವನ್ನು ಕಂಡ ಕಂಡಲ್ಲಿ ಬಿಸಾಡುವುದರಿಂದ, ಅವೇ ಗಿಡ, ಮರಗಳಾಗಿ ಕಾಡಿನ ಬೆಳವಣಿಗೆಗೆ ಸಹಾಯಕವಾಗಿದೆ.
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಗೆ ಹೋದಾಗ ಅಲ್ಲಿ ಹಾರ್ನ್‌ಬಿಲ್ ಎಂಬ ಹೆಸರಿನ ರೆಸಾರ್ಟ್‌ನಲ್ಲಿ ಉಳಿದುಕೊಂಡಾಗ, ಆ ಪಕ್ಷಿಯ ಛಾಯಾಗ್ರಹಣ ಮಾಡುವಾಗ, ಹಾರ್ನ್‌ಬಿಲ್ ಜಾಡು ಹಿಡಿದು ಅರಣ್ಯದಲ್ಲಿ ಚಾರಣ ಕೈಗೊಂಡಾಗ, ಅದರ ಬಗ್ಗೆ ರೋಚಕವಾದ ಸಂಗತಿಗಳು ಗೊತ್ತಾಗುತ್ತಾ ಹೋದವು. ಅದರ ಜತೆಗೆ ಹಣ್ಣುಗಳು ಬಿಡುವ ಮರಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದುದರಿಂದ ಹಾರ್ನ್‌ಬಿಲ್ ಸಂಖ್ಯೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಲಾರಂಭಿಸಿತ್ತು. ಹಾರ್ನ್‌ಬಿಲ್‌ನ್ನು ಸಂರಕ್ಷಿಸಿದರೆ ಕಾಡನ್ನು ಸಂರಕ್ಷಿಸಿದಂತೆ. ಹಾರ್ನ್‌ಬಿಲ್ ಸಂತತಿ ಬೆಳವಣಿಗೆಗೆ ನೆರವಾದರೆ ಕಾಡಿನ ಅಭಿವೃದ್ಧಿಗೆ ನೆರವಾದಂತೆ.
ದಾಂಡೇಲಿಯಿಂದ ಬೆಂಗಳೂರಿಗೆ ಬಂದ ನಂತರ ಈ ಎಲ್ಲ ಸಂಗತಿಗಳನ್ನು 'ವಿಜಯ ಕರ್ನಾಟಕ'ದಲ್ಲಿ ಬರೆದೆ. 'ಹಾರ್ನ್‌ಬಿಲ್ ಆರ್ತನಾದ ನಮ್ಮ ಮುಖ್ಯಮಂತ್ರಿಗಳಿಗೆ ಕೇಳಿಸುವುದಾ?' ಎಂದು ಹಾರ್ನ್‌ಬಿಲ್ ಪಕ್ಷಿಯ ಬೇಡಿಕೆಗಳನ್ನೆಲ್ಲ ಮುಖ್ಯಮಂತ್ರಿಯವರ ಮುಂದಿಟ್ಟೆ. ಆಗ ಯಡಿಯೂರಪ್ಪನವರು ಅಧಿಕಾರದಲ್ಲಿದ್ದರು. ನನ್ನ ಬರಹಗಳನ್ನು ಬೆಳಗ್ಗೆ ಓದಿದವರೇ ದೂರವಾಣಿ ಮೂಲಕ ಸಂಪರ್ಕಿಸಿದರು. ಹಾರ್ನ್‌ಬಿಲ್ ಕುರಿತು ನಾನು ಬರೆದಿರುವ ಮೊದಲ ಎರಡು ಬರಹಗಳನ್ನು ಅವರು ಓದಿರಲಿಲ್ಲ. ಮೂರನೇ ಬರಹವನ್ನಷ್ಟೇ ಓದಿ ಅವರು ಫೋನಾಯಿಸಿದ್ದರು.
'ನಿಮಗೆ ಐದು ನಿಮಿಷ ಸಮಯವಿದ್ದರೆ ಹೇಳುತ್ತೇನೆ ಆ ಪಕ್ಷಿಯ ಬಗ್ಗೆ' ಎಂದೆ. ಅವರಿಗೆ ನಿಜಕ್ಕೂ ಕಳಕಳಿಯಿದೆಯಾ, ಹಕ್ಕಿಯ ಕುರಿತು ಕೇಳುವ ವ್ಯವಧಾನವಿದೆಯಾ ಎಂಬುದನ್ನು ತಿಳಿಯಬೇಕಿತ್ತು.
'ಅದಕ್ಕೇನಂತೆ, ಧಾರಾಳ ಸಮಯವಿದೆ. ಹೇಳಿ ಹೇಳಿ' ಎಂದರು. ನಾನು ಸಂಕ್ಷಿಪ್ತವಾಗಿ ವಿವರಿಸಿದೆ. ಏಳೆಂಟು ನಿಮಿಷಗಳ ಕಾಲ ಗಮನವಿಟ್ಟು ಕೇಳಿದರು. 'ಕ್ಷೀಣಿಸುತ್ತಿರುವ ಕಾಡುಗಳಿಂದ ಅವನತಿಯ ಅಪಾಯ ಎದುರಿಸುತ್ತಿರುವ ಹಾರ್ನ್‌ಬಿಲ್ ಸಂತತಿ ಹೆಚ್ಚಿಸಲು ನಾನು ಸೂಕ್ತ ಕ್ರಮ ಕೈಗೊಳ್ಳುತ್ತೇನೆ' ಎಂದರು. 'ಹಾರ್ನ್‌ಬಿಲ್ ಆರ್ತನಾದಕ್ಕೆ ಮಿಡಿದ ಮುಖ್ಯಮಂತ್ರಿ' ಎಂದು ಪತ್ರಿಕೆ ಮರುದಿನ ವರದಿ ಮಾಡಿತ್ತು.
ಅದಾಗಿ ಒಂದು ತಿಂಗಳ ಬಳಿಕ ಯಡಿಯೂರಪ್ಪನವರು ಖಾಸಗಿ ಸಮಾರಂಭವೊಂದರಲ್ಲಿ ಸಿಕ್ಕಾಗ, ಗರಿಗಟ್ಟಿದ ರಾಜಕೀಯದ ಬಂಡಾಯದ ನಡುವೆಯೂ ಹಾರ್ನ್‌ಬಿಲ್ ಬಗ್ಗೆ ಕೇಳಿದಾಗ ಅಚ್ಚರಿಯಾಗಿತ್ತು. ಅದಕ್ಕಿಂತ ನನಗೆ ಅಚ್ಚರಿ ಹಾಗೂ ಸಂತಸವಾಗಿದ್ದು ಯಡಿಯೂರಪ್ಪನವರು ಬಜೆಟ್ ಮಂಡಿಸಿದಾಗ. 'ಹಾರ್ನ್‌ಬಿಲ್ ಸಂತತಿ ಉಳಿವಿಗಾಗಿ ಹಣ್ಣು ಬಿಡುವ ಮರಗಳನ್ನು ನೆಡಲು ಹಾಗೂ ಆ ಕಾಡನ್ನು ಸಂರಕ್ಷಿತ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲು ಪ್ರತಿವರ್ಷ ತಲಾ ಮೂರು ಕೋಟಿ ರೂ. (ಮೂರು ವರ್ಷಗಳ ಕಾಲ)ಯನ್ನು ತೆಗೆದಿರಿಸಿದ್ದರು. ಹಾರ್ನ್‌ಬಿಲ್ ಪ್ರಾಜೆಕ್ಟ್ ಸಿದ್ಧಪಡಿಸುವಂತೆ ತಮಗೆ ಸೂಚನೆ ಬಂದಿದ್ದಾಗಿ ಆಗ ಶಿರಸಿಯಲ್ಲಿ ಡೆಪ್ಯುಟಿ ಕನ್ಸರ್ವೇಟರ್ (ಉಈಋ) ಆಗಿದ್ದ ಸ್ನೇಹಿತರಾದ ಮನೋಜ್‌ಕುಮಾರ್ ತಿಳಿಸಿದ್ದರು. ಅಂದರೆ ಯಡಿಯೂರಪ್ಪ ಆ ಪುಟ್ಟಹಕ್ಕಿಯ ಬೇಡಿಕೆಗಳಿಗೆ ಸಕಾರಾತ್ಮಕವಾಗಿ, ಸಂವೇದನಾಶೀಲರಾಗಿ ಸ್ಪಂದಿಸಿದ್ದು ಸಾಮಾನ್ಯ ಸಂಗತಿಯಾಗಿರಲಿಲ್ಲ. ನಾನಂತೂ ಅವರಿಂದ ಇವನ್ನೆಲ್ಲ ನಿರೀಕ್ಷಿಸಿರಲಿಲ್ಲ.
'ಯಡಿಯೂರಪ್ಪನವರೇ, ಹಾರ್ನ್‌ಬಿಲ್ ಪಕ್ಷಿಗಳು ನಿಮ್ಮ ಕಟೌಟ್ ಹಾಕಿ ಅಭಿನಂದನೆ ಹೇಳೊಲ್ಲ ಹಾಗೂ ಚುನಾವಣೆಯಲ್ಲಿ ವೋಟು ಹಾಕೊಲ್ಲ ಎಂಬುದು ಗೊತ್ತಿದ್ದೂ ಅವುಗಳ ಬೇಡಿಕೆ ಈಡೇರಿಸಿದ್ದಕ್ಕೆ ಥ್ಯಾಂಕ್ಸ್‌' ಎಂದಾಗ ಅವರು ಜೋರಾಗಿ ನಕ್ಕಿದ್ದರು.
ವಿಧಾನಸೌಧದಲ್ಲಿ ಕುಳಿತವರಿಗೆ ಈ ಸಂಗತಿಗಳೂ ಮುಖ್ಯವಾಗಬೇಕು. ಕಾಡುಹಕ್ಕಿ ಸಮಸ್ಯೆಯೂ ಕಾಡುವ ಸಂಗತಿಯಾಗಬೇಕು. ಅಂದು ಯಡಿಯೂರಪ್ಪ ಸ್ಪಂದಿಸಿದ ರೀತಿ ಅಪರೂಪದ್ದಾಗಿತ್ತು. ಅದರ ಮುಂದಿನ ಹೆಜ್ಜೆಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ದಾಂಡೇಲಿ ಹಾಗೂ ಅಘನಾಶಿನಿಕೊಳ್ಳದ ಅರಣ್ಯ ಪ್ರದೇಶವನ್ನು ಹಾರ್ನ್‌ಬಿಲ್ ಸಂರಕ್ಷಣಾ ಪ್ರದೇಶವೆಂದು ಘೋಷಿಸಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲ, ಬೆಳಗಾವಿಯ ಭೀಮಗಢದಲ್ಲಿ ಬಾವಲಿ ವನ್ಯಧಾಮ ನಿರ್ಮಿಸಲು ಮುಂದಾಗಿರುವುದು ಶ್ಲಾಘನೀಯ.
ಸಂಪುಟ ಸಭೆಯಲ್ಲಿ ಕುಳಿತು ಮುಖ್ಯಮಂತ್ರಿಗಳು ಹಾಗೂ ಸಚಿವರೆಲ್ಲ ಹಾರ್ನ್‌ಬಿಲ್, ಬಾವಲಿ, ಸಿಂಹದಬಾಲದ ಸಿಂಗಳೀಕ, ರಣಹದ್ದು, ಕೃಷ್ಣಮೃಗ, ಸಿಂಹ, ಹುಲಿಗಳ ಬಗ್ಗೆ ಚರ್ಚಿಸಿದ್ದೇ ದೊಡ್ಡ ವಿಷಯ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯನವರು ಅಭಿನಂದನಾರ್ಹರು.
ಬೆಂಗಳೂರು, ಬಡಾವಣೆ, ಮೇಲ್ಸೇತುವೆ, ಮೆಟ್ರೋ ರೈಲು, ಅಪಾರ್ಟ್‌ಮೆಂಟ್, ಐಟಿ ಪಾರ್ಕ್‌ಗಳ ಹಾಗೆ ಪ್ರಾಣಿ, ಪಕ್ಷಿ, ಕಾಡು, ಕೀಟಗಳೂ ಮುಖ್ಯ ಎಂಬ ಭಾವನೆ ವಿಧಾನಸೌಧದಲ್ಲಿ ಹಾಗೂ ಅಲ್ಲಿ ಕುಳಿತಿರುವವರಲ್ಲಿ ಆವರಿಸಿದರೆ ಗುಣಾತ್ಮಕ ಹಾಗೂ ಅಸಾಧಾರಣ ಬದಲಾವಣೆ ಸಾಧ್ಯ. ಮುಖ್ಯಮಂತ್ರಿಗಳು ಯೋಚಿಸಲಿ.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!