ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬುದ್ಧಿ ಹೇಳುವ ನೈತಿಕತೆ ಈ ಬುದ್ಧಿಜೀವಿಗಳಿಗಿದೆಯೇ?

Srinivasa Murthy VN
Updated On : 23 Sept 2013, 1:01 am

ಇದ್ದಕ್ಕಿದ್ದಂತೆ ಕರ್ನಾಟಕದ ಕೆಲ ತಥಾಕಥಿತ ಎಡಪಂಥೀಯ ಬುದ್ಧಿಜೀವಿಗಳಿಗೆ ಜ್ಞಾನೋದಯವಾದಂತಿದೆ. ಒಂದೆರಡು ದಶಕಗಳಿಂದ ಇವರು ಹೇಳಿದ್ದೇ ಅಮೃತವಚನ, ಇವರು ಮಾತಾಡಿದ್ದೇ ದೈವವಾಣಿಯಾಗಿರುತ್ತಿತ್ತು. ಕನ್ನಡದ ಕೆಲ ಪತ್ರಿಕೆಗಳು ಇದೇ ಅಂತಿಮ ಸತ್ಯವೆನ್ನುವಂತೆ ವರದಿ ಮಾಡುವುದು ಮಾತ್ರವಲ್ಲ, ಅದರ ರಂಜಿತ ವ್ಯಾಖ್ಯಾನ ಕೂಡ ಮಾಡುತ್ತಿದ್ದವು.  ಪತ್ರಿಕೆಗಳಲ್ಲಿ ಈ ಬುದ್ಧಿಜೀವಿಗಳ ವಿಚಾರಧಾರೆ ಯಾವುತ್ತೂ ಹಿಂದು-ಹಿಂದುತ್ವದ ವಿಚಾರಗಳನ್ನು ಹೀಗಳೆಯುವ, ಈ ನೆಲದ ಋಷಿಗಳ ಸಾಧನೆಗಳನ್ನು ಎಡಪಂಥೀಯ ಬಣ್ಣದ ಕನ್ನಡಕಗಳಿಂದ ನೋಡುತ್ತಾ ಅದರಲ್ಲಿ ಮೌಢ್ಯತೆಯನ್ನು ಹುಡುಕುತ್ತಾ ಅದನ್ನು ವಿಮರ್ಶಿಸದೇ ಸಾರಾಸಗಟಾಗಿ ತಿಸ್ಕರಿಸುವ ಪರಿಪಾಠ ನಿರಂತರವಾಗಿ ನಡೆದುಕೊಂಡು ಬಂದಿತ್ತು. ಅನೇಕ ಬುದ್ಧಿಜೀವಿಗಳು ಆಸ್ಥಾನ ಪಂಡಿತರಂತೆ ಆಳುವ ಸರ್ಕಾರದ ಬಿರುದು-ಬಾವಲಿಗಳ ಮರ್ಜಿಗೆ ತಮ್ಮ ಬುದ್ಧಿಯನ್ನು ಒತ್ತೆ ಇಡುವುದು ನಡೆದು ಬರುತ್ತಿತ್ತು. ಈಗಲೂ ಹಾಗೇ ನಡೆಯುತ್ತಿದೆ.  ಈ ಬುದ್ಧಿಜೀವಿಗಳು ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ ಅರ್ಧಸತ್ಯವನ್ನು  ಪೂರ್ಣಸತ್ಯವೆಂಬಂತೆ ಪತ್ರಿಕೆಗಳಲ್ಲಿ ಬರೆಯುವ ಒಂದು ವರ್ಗ ಸೃಷ್ಟಿಮಾಡಿದ್ದರು. ಅದು ಈಗಲೂ ಮುಂದುವರೆದಿದೆ.
ಉದಾಹರಣೆಗೆ ಇತ್ತೀಚಿನ ಕರ್ನಾಟಕ ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿ ರಚಿಸಿರುವ ಪಠ್ಯಪುಸ್ತಕ ಕೇಸರೀಕರಣಗೊಂಡಿದೆ ಎಂದು ಈ ರಾಜ್ಯದ ಬುದ್ಧಿಜೀವಿ ತಂಡವೊಂದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಗೆ ದೂರು ಸಲ್ಲಿಸಿದ್ದು. ಇವರ ಅರ್ಥ ಇಷ್ಟೇ, ಇವರು ಇದುವರೆಗೆ ಹೇಳಿಕೊಂಡು ಬಂದಂತೆ ಇದ್ದ ಇತಿಹಾಸ ಈಗ ಇಲ್ಲವಲ್ಲ ಎನ್ನುವ ವ್ಯಥೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭಾರತದ ಎಲ್ಲ ಕ್ಷೇತ್ರಗಳಲ್ಲಿ ಅಂದರೆ ಅದು ಮಾಧ್ಯಮ, ರಾಜಕೀಯ, ಇತಿಹಾಸ ರಚನೆ, ಸಾಂಸ್ಕೃತಿಕ ಹೀಗೆ ಯಾವುದೇ ಕ್ಷೇತ್ರಗಳಲ್ಲಿ ಇವರದೇ ಪಾರುಪತ್ಯ. ಹಾಗಾಗಿ ಇವರು ಹೇಳಿದ್ದೇ ಚಿಂತನೆ, ಇವರು ಬರೆದದ್ದೇ ಇತಿಹಾಸವಾಗಿತ್ತು. ಆದರೆ ಕಾಲ ಬದಲಾಗಿದೆ. ಈಗ ಇವರು ಹೇಳುವ ಮಿಥ್ಯೆಗಳನ್ನು ನಂಬುವ ಸ್ಥಿತಿಯಲ್ಲಿ ಇಲ್ಲದ, ರಾಷ್ಟ್ರೀಯ ಚಂತನೆಗಳನ್ನು ತಮ್ಮ ನೀತಿಯನ್ನಾಗಿಸಿಕೊಂಡಿರುವ, ಅದರಲ್ಲೂ ಒಂದು ವಿಚಾರದ ಮೂಲ ನೆಲೆಯನ್ನು ಶೋಧಿಸುವ ಅದನ್ನು ಅಧ್ಯಯನ ಮಾಡಿ, ಅದರ ವಸ್ತುನಿಷ್ಠ ವಿಚಾರವನ್ನು ತಿಳಿಸುವ ಕಾರ್ಯ ಮಾಡುತ್ತಿರುವ ವಿಚಾರವಂತ ಪತ್ರಕರ್ತರು ಅಲ್ಲದೇ ಸಾಮಾಜಿಕ ಕಳಕಳಿಯಿರುವ, ತನ್ನ ಪರಂಪರೆಯ ನಂಬಿಕೆಗಳನ್ನು ಉಳಿಸಿಕೊಳ್ಳುವ ಗುಂಪೊಂದು ಸೃಷ್ಟಿಯಾಗಿದೆ. ಈ ಬುದ್ಧಿಜೀವಿಗಳು ಹೇಳುತ್ತಿರುವುದೆಲ್ಲ ದಿಟವೆ ಅಥವಾ ಇವರು ಪ್ರತಿಪಾದಿಸುತ್ತಿರುವ ಈ ವಿಚಾರಗಳ ಹಿಂದೆ ಯಾವುದಾದರೂ ದುರುದ್ದೇಶವಿದೆಯೇ ಎಂದು ಚಿಂತಿಸುವ ಕೆಲಸವನ್ನು ಅದು ಮಾಡುತ್ತಿದೆ. ಇಂದು ಆ ರಾಷ್ಟ್ರೀಯ ಚಿಂತನೆಯಿಂದ ಪ್ರೇರಣೆ ಪಡೆದ ವರ್ಗ ಈ ರಾಷ್ಟ್ರದಲ್ಲಿ ಇಲ್ಲಿನ ಮೂಲ ಚಿಂತನೆಗಳನ್ನು ಭಾರತೀಯ ಮನಸ್ಸಿನಿಂದ ನೋಡುವ ಕಾರ್ಯ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಇವತ್ತು ಯಾವ ಬುದ್ಧಿಜೀವಿಯು ಈ ವರೆಗೆ ಮಿಥ್ಯೆಯನ್ನೇ ಸತ್ಯವೆಂದು ಹೇಳುತ್ತಾ ಬಂದಿದ್ದರೋ ಅವರು ಹೇಳುವ ಈ ಮಿಥ್ಯೆಯನ್ನು, ಅವರ ಚಿಂತನೆಯನ್ನು ್ಛ್ಟ್ಡಟಿಡಿಜ್ಠ ಮಾಡುವುದು ಎಲ್ಲೆಡೆ ಗೋಚರವಾಗುತ್ತಿರುವುದು, ಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಗಳಲ್ಲಿ ನಾವು ಕಾಣಬಹುದು. ಇದು ಈ ಬುದ್ಧಿಜೀವಿಗಳ ಸಂಕಟಕ್ಕೆ ಕಾರಣವಾಗಿದೆ. ಅದಕ್ಕೆ 'ಕನ್ನಡ ಪ್ರಭ'ದಂಥ ಪತ್ರಿಕೆಯ ಮುಂದೆ ತಮ್ಮ ವ್ಯಕ್ತಿಗತ ನಿಂದನೆಯಾಗುತ್ತಿದೆಯೆಂದು ಈ ವರ್ಗ ಅವಲತ್ತುಕೊಂಡಿದೆ. ಇದೂ ಒಂದು ಅರ್ಥದಲ್ಲಿ ಬೌದ್ಧಿಕ ದಿವಾಳಿತನವೇ. ಇವರು ಈವರೆಗೆ ನಡೆಸಿಕೊಂಡು ಬಂದಿದ್ದ ಅವಾಂತರಗಳು ಒಂದೇ ಎರಡೇ? ಈ ದೇಶದ ಅಧಿಕಾರಸ್ಥರೊಂದಿಗೆ ಸೇರಿ ಇಂದಿಗೂ ಇವರು ಅಲ್ಪಸಂಖ್ಯಾತ-ಬಹುಸಂಖ್ಯಾತ, ಜಾತ್ಯತೀತತೆಯ ಹೆಸರಿನಲ್ಲಿ ಈ ದೇಶವನ್ನು ಸ್ಪಷ್ಟವಾಗಿ ಒಡೆಯುತ್ತಿರುವುದು ಈ ದೇಶವನ್ನು ಒಂದು ರಾಷ್ಟ್ರವಾಗಿ ಪ್ರೀತಿಸುವ ನನ್ನಂಥವರಿಗೆ ಅತ್ಯಂತ ನೋವಿನ ಸಂಗತಿ. ಇವರು ಪ್ರತಿಪಾದಿಸುವ ಜಾತ್ಯತೀತ ವಿಚಾರಗಳು ಸ್ಪಷ್ಟತೆ ಇದ್ದಿದ್ದರೆ, ಅದರಲ್ಲಿ ಸರ್ವಸಮಾನತೆಯ ಆಶಯ ಅವರ ಚಿಂತನೆಯಲ್ಲಿ ಒಡಮೂಡಿದ್ದಿದ್ದರೆ ಖಂಡಿತ ಈ ದೇಶದಲ್ಲಿ ಕೋಮುಗಲಭೆಗಳು ನಡೆಯಲು ಸಾಧ್ಯವಿರುತ್ತಿರಲಿಲ್ಲ. ಇಂದು ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯ ಸಮಯದಲ್ಲಿ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳ ಮುಂದೆ ವಾದ್ಯಗಳೊಂದಿಗೆ ಮೆರವಣಿಗೆ ಹೋಗುವುದು ಅಪರಾಧ ಎನ್ನುವಂಥಹ ಸ್ಥಿತಿ ನಿರ್ಮಾಣವಾಗಿರುವುದು ಈ ದೇಶದ ಜಾತ್ಯತೀತತೆಯ ವಿಡಂಬನೆ! ಅದರ ವ್ಯಾಖ್ಯಾನದಲ್ಲಿರುವ ಗೊಜಲು ಎಲ್ಲೆಡೆ ಗೋಚರಿಸುತ್ತಿದೆ. ಇದಕ್ಕೆ ರಾಜಕಾರಣದಷ್ಟೇ ತಥಾಕಥಿತ ಬುದ್ಧಿಜೀವಿಗಳ ಬುದ್ಧಿ ಒಂದಾಗಿರುವುದೇ ಕಾರಣ.  ಇವರು ತಮ್ಮ ಸಾಮಾಜಿಕ ನಿಲುವುಗಳನ್ನು ಸ್ಪಷ್ಟಪಡಿಸಲು ಮಾಧ್ಯಮಗಳನ್ನು ಅವಲಂಬಿಸುವುದು ಅನಿವಾರ್ಯ, ಮಾಧ್ಯಮಗಳು ಏಕಮುಖ ಪ್ರಚಾರದಲ್ಲಿ ತೊಡಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಂದಿಗೂ ಅಂಗ್ಲ ಭಾಷೆಯ ಮಾಧ್ಯಮಗಳು ಹಿಂದು-ಹಿಂದುತ್ವ, ಹಿಂದು ಸಂಘಟನೆಗಳ ಬಗ್ಗೆ ಅಪಪ್ರಚಾರದಲ್ಲೇ ತೊಡಗಿವೆ. ಬುದ್ಧಿಜೀವಿಗಳಂತೂ ಸುಪ್ರೀಂಕೋರ್ಟ್ ಹಿಂದುತ್ವ ಎನ್ನುವುದು ಜೀವನ ಮಾರ್ಗ, ಹಿಂದುತ್ವದ ಪ್ರತಿಪಾದನೆ ಜಾತೀಯ ಅಥವಾ ಕೋಮುವಾದ ಎನಿಸುವುದಿಲ್ಲವೆಂದು ಸ್ಪಷ್ಟವಾಗಿ ಸಾರಿದೆ. ಅದಾಗ್ಯೂ ಈ ಬುದ್ದಿಜೀವಿ ವರ್ಗ ಇಂಗ್ಲಿಷ್ ಮಾಧ್ಯಮಗಳನ್ನು ಬಳಸಿ ಹಿಂದುತ್ವದ ಪ್ರತಿಪಾದಕರನ್ನು ಕೋಮುವಾದಿ ಎಂಬ ಹಣೆಪಟ್ಟಿ ಕಟ್ಟಿರುವುದು, ಹಿಂದು ಚಿಂತನೆಗಳ ಪ್ರತಿಪಾದನೆಯನ್ನು ಕೇಸರೀಕರಣ ಎಂದು ಹುಯಿಲೆಬ್ಬಿಸುವ ಕಾರ್ಯ ಇಂದು ಹಿಂದು ಶ್ರದ್ಧಾವಂತರ ಮೇಲೆ ಪಾಶ್ಚಾತ್ಯರ ನೆರವಿನೊಂದಿಗೆ ನಡೆಯುತ್ತಿದೆ. ಇದು ಏಕಮುಖಿ ಚಿಂತನೆಯಲ್ಲವೆ? ಕೆಲ ವರ್ಷಗಳ ಹಿಂದೆ ಭಾರತಮಾತೆಯ ಭಾವ ಚಿತ್ರಕ್ಕೆ ಚಪ್ಪಲಿಹಾರ ಹಾಕಿ ಅವಮಾನಿಸಿದ್ದು ಇದೇ ಬುದ್ಧಿಜೀವಿಗಳ ದುರ್ಬೋಧನೆಯ ಪ್ರಭಾವದಿಂದಲ್ಲವೇ? ಇಂದಿಗೂ ಈ ವರ್ಗ ಹಿಂದುತ್ವ-ಹಿಂದುವಾದಿಗಳನ್ನೂ ಕೋಮುವಾದಿಗಳು ಎಂದೇ ಸಂಬೋಧಿಸುತ್ತದೆ. ಆದರೆ ಈ ದೇಶದ ಯಾವುದೇ ಶ್ರದ್ಧಾವಂತ ಹಿಂದುವೂ ಈ ದೇಶದ ತಥಾಕಥಿತ ಬುದ್ಧಿಜೀವಿ ವರ್ಗ ಮತ್ತು ಇದೇ ಚಿಂತನೆಗಳಿಂದ ಕೂಡಿದ ಮಾದ್ಯಮಗಳ ವಿರುದ್ಧ ತಿರುಗಿಬಿದ್ದಿರುವುದುಂಟೇ?
ಇಲ್ಲಿನ ಹಿಂದುಗಳು ಅರ್ವಾಚೀನ ಕಾಲದಿಂದ ಚಾರ್ವಾಕನಿಂದ ಹಿಡಿದು ಎಡಪಂಥೀಯ ಬುದ್ಧಿಜೀವಿಗಳನ್ನು ಎದುರಿಸಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಂಡಿರುವುದು ತಮ್ಮ ವೈಚಾರಿಕ ಚಿಂತನೆಯಿಂದಲೇ. ಹಾಗಾಗಿ ಈ ದೇಶ ಇಂದಿಗೂ ತನ್ನ ಮೂಲ ನೆಲೆ ಉಳಿಸಿಕೊಳ್ಳಲು ಕಾರಣವಾಗಿದ್ದು. ಇಲ್ಲವಾದಲ್ಲಿ ಈ ದೇಶ ಗ್ರೀಕ್ ರೋಮ್‌ನಂತೆ ಎಂದೋ ಇತಿಹಾಸದ ಕಾಲಗರ್ಭಕ್ಕೆ ಸೇರುತ್ತಿತ್ತು. ಕೆಲವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಮಹಮದ್ ಎಂಬ ಪದ ಬಳಸಿದ್ದೇ ಪತ್ರಿಕಾಲಯದ ಮೇಲೆ ದಾಳಿಗೆ, ದೊಂಭಿಗೆ ಕಾರಣವಾಯಿತು. ಅದನ್ನು ಬಳಸಿದ ಹಿನ್ನೆಲೆ ಏನು ಎಂಬ ಬಗ್ಗೆ ದೊಂಬಿಕೋರರು ಒಂದಿನಿತೂ ಯೋಚಿಸಲಿಲ್ಲ.  
ದುರಾದೃಷ್ಟವೆಂದರೆ ಇಂದಿನ ಈ ಎಲ್ಲ ಬುದ್ಧಿಜೀವಿಗಳು ಅಂದೂ ಕೂಡ ಇದ್ದವರೇ. ಆದರೆ ಇವರ್ಯಾರೂ ಅಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದ ಸಂಗತಿ ಯಾರ ನೆನಪಲ್ಲೂ ಇಲ್ಲ. ಆದರೆ ಕೋಟ್ಯಂತರ ಜನರ ಆರಾಧ್ಯ ಮೂರ್ತಿ ಗಣೇಶನ ಬಗ್ಗೆ ಅವಹೇಳನ ಮಾಡಿ ಗ್ರಂಥ ರಚನೆ ಮಾಡಿದವರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಿದರೆ ಅದು ಅಭಿವ್ಯಕ್ತಿಯ ಹರಣವಾಗುತ್ತದೆ ಎನ್ನುವುದು ಈ ಬುದ್ಧಿಜೀವಿಗಳ ವಾದ! ಇವರು ಸಾರ್ವಜನಿಕವಾಗಿ ಬೆತ್ತಲಾಗುವುದೇ ಇಂಥ ವೈರುದ್ಧ್ಯಗಳಿಂದ ಎನ್ನುವುದು ಇವರಿಗೇಕೆ ಅರ್ಥವಾಗುವುದಿಲ್ಲ? ನಿಜವಾದ ಬುದ್ಧಿಜೀವಿ ಅಲ್ಪಸಂಖ್ಯಾತ- ಬಹುಸಂಖ್ಯಾತ, ಪರ-ವಿರೋಧಿ ವಿಚಾರಗಳ ಸಂಕೀರ್ಣತೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆತ ಎಂದೆಂದೂ ರಾಷ್ಟ್ರೀಯ ಚಿಂತನೆಗಳ ಪರವಾಗಿರುತ್ತಾನೆ. ಮತ್ತೊಂದು ವಿಷಯ- ಈ ಬುದ್ದೀಜೀವಿ ವರ್ಗ ವೈಯಕ್ತಿಕ ಟೀಕೆ-ಟಿಪ್ಪಣಿಗಳ ಬಗ್ಗೆ, ಅವರ ತೇಜೋವಧೆ ಬಗ್ಗೆ ಆತಂಕಿತರಾಗಿದ್ದಾರಂತೆ, ವಿಷಯವಿರುವುದೇ ಅಲ್ಲಿ. ಸಾರ್ವಜನಿಕ ಜೀವನದಲ್ಲಿರುವವರು, ಸಮಾಜದ ಓರೆ-ಕೋರೆಗಳನ್ನು ತಿದ್ದಲು ಹೊರಟವರು, ವ್ಯಕ್ತಿಗತ ಜೀವನದಲ್ಲಿಯೂ ಶುದ್ಧವಾಗಿರಬೇಕಾಗುತ್ತದೆ. ಅಂತಹ ಶುದ್ಧ-ಸಾತ್ವಿಕ ಜೀವನ ಅವರದ್ದಾಗಿದ್ದಾಗ ಮತ್ತೊಬ್ಬರಿಗೆ ಅಂಥವರ ತೋಜೋವಧೆ ಮಾಡುವ ಅಥವಾ ಮಾಡಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಅಂತಹ ಬುದ್ಧಿಜೀವಿಯ ಜೀವನ ತೆರೆದ ಪುಸ್ತಕದಂತೆ, ಆತ 'ಇಸಂ'ಗಳ ದಾಸನಾಗಿರುವುದಿಲ್ಲ. ಅಂಥಹ ವ್ಯಕ್ತಿ ಮಾತ್ರ ಸಮಾಜಕ್ಕೆ ಬುದ್ಧಿ ಹೇಳುವ ನೈತಿಕತೆ ಹೊಂದಿರುತ್ತಾನೆ. ಈ ನಿಟ್ಟಿನಲ್ಲಿ ಈ ಬುದ್ಧಿಜೀವಿ ವರ್ಗ ಯೋಚಿಸುವುದಾದರೆ ನಮ್ಮ ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತದೆ ಅಲ್ಲವೇ?

- ಡ್ಯಾನಿ ಪಿರೇರಾ
danyperra27@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement