ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಾಟ ಮಂತ್ರವೋ, ಕುತಂತ್ರವೋ?

Srinivasa Murthy VN
Updated On : 23 Sept 2013, 1:01 am

ಪತ್ರಪ್ರಭದಲ್ಲಿ 'ಮಾಟವೇ, ಮನೋವ್ಯಾದಿಯೇ' ಎಂದು ಎಂ.ಎನ್. ಸುಧೀಂದ್ರ ಎತ್ತಿರುವ ಪ್ರಶ್ನೆಗೆ ಪ್ರತಿಕ್ರಿಯೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಸಮಾಜದಲ್ಲಿ ಅನೇಕ ಕಲ್ಪನೆಗಳಿದ್ದವು. ಮನಸ್ಸು ಅಮೂರ್ತ ರೂಪವಾದ್ದರಿಂದ ಅದರ ಕುರಿತು ಆಧ್ಯಾತ್ಮಿಕ ವ್ಯಾಖ್ಯಾನಗಳು ನಡೆದವೇ ವಿನಃ ಆಳವಾದ ಸಂಶೋಧನೆಗಳು ಇತ್ತೀಚಿನವರೆಗೂ ನಡೆದಿರಲಿಲ್ಲ. ಕ್ರಿ.ಶ. ಹನ್ನೆರಡನೇ ಶತಮಾನದವರೆಗೆ ಮಾನಸಿಕ ಆರೋಗ್ಯವು ಒಂದು ಆರೋಗ್ಯ ಕ್ಷೇತ್ರ ಎನ್ನುವುದಕ್ಕಿಂತ ಅದು ಆಧ್ಯಾತ್ಮಿಕ ಕ್ಷೇತ್ರದಲ್ಲೇ ಇತ್ತು. ಅದನ್ನು ಆರೋಗ್ಯ ಕ್ಷೇತ್ರ ಎಂದು ಯಾರೂ ಪರಿಗಣಿಸಿರಲಿಲ್ಲ. ಈ ಎರಡು ಮುಖ್ಯವಾದ ಕಾರಣಗಳಿಂದ ಮಾನಸಿಕ ರೋಗದ ಕುರಿತು ಇರುವ ತಪ್ಪು ಕಲ್ಪನೆಗಳು ಹಾಗೇ ಉಳಿದವು. ಯಾರಾದರೂ ಹೆಚ್ಚು ಹೆಚ್ಚು ವ್ಯಾಖ್ಯಾನ ಮಾಡಿದರೆ, ಹೆಚ್ಚು ಸಮರ್ಥವಾಗಿ ತಮ್ಮ ವಾದವನ್ನು ಮಂಡಿಸಿದರೆ, ಅದೇ ನಿಜವೆಂದು ಜನರು ನಂಬಿದರು. ಅದೇ ಕಾರಣದಿಂದ ಮನಸ್ಸಿಗೆ ಕಾಯಿಲೆ ಎಂದರೆ ಅದು ಹುಚ್ಚು ಮಾತ್ರ ಎಂಬ ಕಲ್ಪನೆ ಇತ್ತು. ಬುದ್ಧಿಭ್ರಮಣೆ ಎಂಬುದು ಪೂರ್ವಜನ್ಮದ ಪಾಪ ಎಂದೆನ್ನಲಾಗುತ್ತಿತ್ತು.
ಅಮೂರ್ತರೂಪದ ಮನಸ್ಸಿಗೆ ಆಕಾರ ಕೊಟ್ಟು ಮೂರ್ತರೂಪದಲ್ಲಿ ಸರಳವಾಗಿ ವಿವರಿಸಿದವನು ಮನೋವೈದ್ಯಕೀಯ ಪಿತಾಮಹ 'ಸಿಗ್ಮಂಡ್ ಫ್ರಾಯ್ಡ್‌'. ತದನಂತರದಲ್ಲಿ ಮಾನಸಿಕ ಕಾಯಿಲೆಗಳಿಗೆ ಮೂಲವಾದ ಮಿದುಳಿನ ಕುರಿತಾದ ಸಂಶೋಧನೆಗಳು ನಡೆದವು. ಕಾರಣಗಳು ಮತ್ತು ಚಿಕಿತ್ಸೆ ಏನು ಎಂಬ ಬಗ್ಗೆಯೂ ತಜ್ಞರು ಬೆಳಕು ಚೆಲ್ಲಿದರು. ದೈಹಿಕ ಕಾಯಿಲೆಯಲ್ಲಿ ಹೇಗೆ ಬೇರೆ ಬೇರೆ ವಿಧಗಳಿವೆಯೋ ಹಾಗೆಯೇ ಮಾನಸಿಕ ಕಾಯಿಲೆಗಳಲ್ಲಿಯೂ ಬೇರೆ ಬೇರೆ ವಿಧಗಳಿವೆ. ಕಾಯಿಲೆಯ ಆದಿಯಲ್ಲೇ ಮನೋವೈದ್ಯರಿಂದ ಸರಿಯಾದ ಚಿಕಿತ್ಸೆ ಪಡೆದು, ಅವರ ಸಲಹೆಗಳನ್ನು  ಪಾಲಿಸಿದರೆ ಪ್ರತಿಶತ ಎಂಭತ್ತು ಮಾನಸಿಕ ರೋಗಿಗಳು ಗುಣಮುಖರಾಗುತ್ತಾರೆ. ವಿಪರ್ಯಾಸವೆಂದರೆ ನೂರಕ್ಕೆ ಎಂಭತ್ತು ಜನ ಮನೋರೋಗಿಗಳು ತಮ್ಮ ಮನೋರೋಗ ಕುರಿತಾದ ಅಜ್ಞಾನದಿಂದ ವೈಜ್ಞಾನಿಕ ಚಿಕಿತ್ಸೆಗೆ ಹೋಗುವುದಿಲ್ಲ. ಹಾಗಾಗಿ 'ಮನೋರೋಗಕ್ಕೆ ಮದ್ದಿಲ್ಲ' ಎನ್ನುವ ಗಾದೆ ಇನ್ನೂ ರಾರಾಜಿಸುತ್ತಿದೆ.
ದೈಹಿಕ ಕಾಯಿಲೆ ಬಂದರೆ ಜನರು ಯಾವ ಮುಜುಗರವೂ ಇಲ್ಲದೇ ವೈದ್ಯರತ್ತ ಓಡುತ್ತಾರೆ. ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಆದರೆ ಮಾನಸಿಕ ಕಾಯಿಲೆ ಬಂದರೆ ಅದು ಒಂದು ಕಳಂಕ, ಅವಮಾನ ಎಂದು ಭಾವಿಸಿ, ತಮ್ಮವರಿಗೆ ಕಾಯಿಲೆ ಇದೆ ಎಂದಾಗಲೀ, ತನಗೆ ಕಾಯಿಲೆ ಇದೆ ಎಂದಾಗಲೀ ಒಪ್ಪಿಕೊಳ್ಳುವ ಸ್ಥಿತಿ ಹೆಚ್ಚಿನವರಿಗೆ ಇರುವುದಿಲ್ಲ. ನಂತರದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಮಾಟ, ಮಂತ್ರ, ಶಾಂತಿ, ಹೋಮ, ಹವನ ಮುಂತಾದ ಕ್ರಮಗಳಿಗೆ ಮುಂದಾಗುತ್ತಾರೆ.
ನಂಬಿಕೆ ಎನ್ನುವ ಮಾನವನ ಗುಣವು ಧರ್ಮಗಳಲ್ಲಿ ಅತ್ಯುತ್ತಮ ಧನಾತ್ಮಕ ಅಂಶ. ಮಾಟ, ಮಂತ್ರ, ಶಾಂತಿ, ಹೋಮ ಹವನ ಮುಂತಾದ ತಂತ್ರಗಳನ್ನು ವೃತ್ತಿ ಜೀವನವನ್ನಾಗಿ ತೊಡಗಿಸಿಕೊಂಡವರು ತಮ್ಮ ಸಲಹೆ ನೀಡುವುದು ಅವರ ವೃತ್ತಿ ಕುಶಲತೆ. ಅದು ಜನರ ನಂಬಿಕೆಯ ವಿಚಾರವಾದ್ದರಿಂದ ಅದನ್ನು ಅಲ್ಲಗಳೆಯುವುದು ಅಷ್ಟು ಸಮಂಜಸವಲ್ಲ. ಆದರೆ ತಮ್ಮಲ್ಲಿ ಬರುವ ಮನೋರೋಗಿಗಳಿಗೆ ಸಲಹೆ ನೀಡಿ, ವೈಜ್ಞಾನಿಕ ಚಿಕಿತ್ಸೆ ತೆಗೆದುಕೊಳ್ಳಲು ಸೂಚಿಸಿದರೆ ಅದರಿಂದ ರೋಗಿಗಳಿಗೆ ಅನುಕೂಲವಾಗುತ್ತದೆ. ರೋಗಿಗಳ ನಂಬಿಕೆಗೂ ಬೆಲೆ ನೀಡಿದಂತಾಗುತ್ತದೆ. ನಮ್ಮಲ್ಲಿ ಬರುವ ಎಷ್ಟೋ ಮಂದಿ ಮನೋರೋಗಿಗಳು "ಸಾರ್, ನಾವು ಆ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವರಿಗೆ ಪೂಜೆ ಮಾಡಿಸಿಕೊಂಡು ಬರುತ್ತೇವೆ" ಎಂದಾಗ  ಅಂಥವರಿಗೆ 'ಖಂಡಿತವಾಗಿಯೂ ಹೋಗಿಬನ್ನಿ, ನಿಮ್ಮ ನಂಬಿಕೆಗೆ ಅಡ್ಡ ಬರುವುದಿಲ್ಲ. ಆದರೆ ಈ ಚಿಕಿತ್ಸೆ ಮಾತ್ರ ನಿಲ್ಲಿಸಬೇಡಿ' ಎನ್ನುತ್ತೇವೆ. ಅದರಿಂದ ರೋಗಿಗೆ ಮಾನಸಿಕ ನೆಮ್ಮದಿ ದೊರಕಿದರೆ ಅದು ಚಿಕಿತ್ಸೆಯ ಒಂದು ಭಾಗವೆಂದು ಹೇಳಬಹುದು.  ಆದರೆ ರೋಗಿಗೆ ಕಾಯಿಲೆಯಿಂದ ಬಿಡುಗಡೆಯಾಗಲು ವೈಜ್ಞಾನಿಕ ಮಾರ್ಗಗಳಿದ್ದಾಗ, ಆ ಮಾರ್ಗವನ್ನು ತೋರಿಸದೇ ರೋಗಿಯು ನಿರಂತರವಾಗಿ ತಮ್ಮಲ್ಲೇ ಬರಲಿ ಎಂದಾಗಲೀ ಅಥವಾ ಬೇರೆ ವಿಧದ ಚಿಕಿತ್ಸೆ ಬೇಡ ಎಂದು ಹೇಳುವುದಾಗಲೀ ಸಮಾಜ ಘಾತುಕತನ ಎಂಬುದು ನನ್ನ ಅನಿಸಿಕೆ.

- ಡಾ. ಕೆ.ಆರ್.ಶ್ರೀಧರ್
ಮನೋವೈದ್ಯರು, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement