ವಿಶ್ವಸಂಸ್ಥೆ ವೇದಿಕೆ ಪಕ್ಕ ನಡೆಯಲಿದೆಯೇ ಭಾರತ-ಪಾಕ್ ಮಾತುಕತೆ?
ಅಸಂಭವ ಎಂದೇ ಅನ್ನಿಸುತ್ತಿದ್ದ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ನಡುವಿನ ಮಾತುಕತೆ ಇದೀಗ ಬದಲಾದ ವಾತಾವರಣದಲ್ಲಿ ಸುಸೂತ್ರವಾಗಿ ನೆರವೇರುವಂತೆ ತೋರುತ್ತಿದೆ.
ಬಹುಶಃ ಸೆಪ್ಟೆಂಬರ್ 29ರಂದು ನ್ಯೂಯಾರ್ಕ್‌ನಲ್ಲಿ ಈ ಮಾತುಕತೆ ಸಂಪನ್ನವಾಗಬಹುದೇನೋ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವುದಕ್ಕೆ ಭಾರತದ ಪ್ರಧಾನಿ ಅಲ್ಲಿಗೆ ತೆರಳಲಿದ್ದಾರೆ. ಭಾರತದ ರಾಜತಾಂತ್ರಿಕ ವಲಯದಲ್ಲಿ ಹರಿದಾಡುತ್ತಿರುವ ಗಾಳಿಯನ್ನು ಅನುಭವಿಸಿ ಹೇಳುವುದಾದರೆ ಸಿಂಗ್ ಅವರಿಗೆ ನವಾಜ್ ಷರೀಫ್ ಅವರನ್ನು ಭೇಟಿ ಮಾಡುವುದರ ಹೊರತಾದ ಆಯ್ಕೆ ತೋರುತ್ತಿಲ್ಲ.
ಈ ಮಾತುಕತೆ ನಡೆದಿದ್ದೇ ಆದರೆ ಅದು ಕೇವಲ ಸೌಹಾರ್ದ ಸಂವಾದದ ಮಟ್ಟದ್ದಾಗಿರದೆ ರಚನಾತ್ಮಕ ಚರ್ಚೆಯ ಅಜೆಂಡಾವನ್ನು ಹೊಂದಿರುವ ಸಾಧ್ಯತೆಯೇ ಹೆಚ್ಚಿದೆ. ಸೆಪ್ಟೆಂಬರ್ 25ರಿಂದ ಅಕ್ಟೋಬರ್ 1ರವರೆಗೆ ಅಮೆರಿಕ ಪ್ರವಾಸ ಮಾಡಲಿರುವ ಪ್ರಧಾನಿಯವರ ಜತೆ ತೆರಳುವ ತಂಡದಲ್ಲಿ ಯಾರೆಲ್ಲ ಇದ್ದಾರೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತಿದ್ದಂತೆ ಮಾತುಕತೆಯ ವ್ಯಾಪ್ತಿ ತಂತಾನೇ ತಿಳಿದುಬಿಡುತ್ತದೆ. ಸೆಪ್ಟೆಂಬರ್ 28-30ರವರೆಗೆ ಪ್ರಧಾನಿ ನ್ಯೂಯಾರ್ಕ್‌ನಲ್ಲಿ ಇರಲಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಬಿಡುವಿನಲ್ಲಿ ಪ್ರಧಾನಿಯವರು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ತೊಡಗುವ ನಿರೀಕ್ಷೆ ಇದೆ.
ವಾಸ್ತವವಾಗಿ ಕೆಲದಿನಗಳ ಹಿಂದೆ ಇಂಥದೊಂದು ಮಾತುಕತೆ ಸಾಧ್ಯತೆಯನ್ನು ನಾನೇ ಲೇಖನವೊಂದರಲ್ಲಿ ತಳ್ಳಿಹಾಕಿದ್ದೆ. ಅದಕ್ಕೆ ನೀಡಲಾಗಿದ್ದ ಕಾರಣ- ಸೆಪ್ಟೆಂಬರ್ 6ರಂದು ಕೊನೆಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಏನಾದರೂ ಭಾರತ-ಬಾಂಗ್ಲಾಗಳ ಲ್ಯಾಂಡ್ ಬೌಂಡರಿ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದರೆ ಪ್ರತಿಯಾಗಿ ಪಾಕ್ ಜತೆ ಗಡಸು ಧೋರಣೆ ತೋರಿಸುವ ಸಹಾಯವು ಯುಪಿಎ ಕಡೆಯಿಂದ ಆಗುತ್ತಿತ್ತು. ಇದು ಯುಪಿಎ ಮತ್ತು ಬಿಜೆಪಿ ನಡುವಿನ ಸೂಕ್ಷ್ಮ ಒಳ ಒಪ್ಪಂದ. ಆದರೆ ಆ ಒಪ್ಪಂದಕ್ಕೆ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್‌ಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ನೆನೆಗುದಿಗೆ ಬಿತ್ತು. ಹೀಗಾಗಿ ಬಿಜೆಪಿಗೆ ಪ್ರತಿಯಾಗಿ ಸಹಕರಿಸುವ ಪ್ರಶ್ನೆ ಅಥವಾ ಒತ್ತಡ ಸರ್ಕಾರದ ಮೇಲೇನೂ ಇಲ್ಲವಾದ್ದರಿಂದ ಅದು ಪಾಕ್ ಪ್ರಧಾನಿ ಎದುರು ಮಾತುಕತೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದಕ್ಕೆ ನಿರಾಳವಾಗಿದೆ. ಇವೆಲ್ಲ ನೇಪಥ್ಯದ ಹಿಂದೆ ನಡೆಯುವ ರಾಜಕೀಯ ಸಂಧಾನಗಳು. 'ಬಾಂಗ್ಲಾ ವಿಷಯವನ್ನು ನಮ್ಮ ನಿಷ್ಕರ್ಷೆಗೆ ಬಿಡಿ, ಪಾಕ್ ವಿಷಯದಲ್ಲಿ ನಿಮ್ಮ ಧೋರಣೆಯನ್ನೇ ನಾವು ತಾಳುತ್ತೇವೆ' ಎಂಬರ್ಥದಲ್ಲಿ.
ಪಾಕಿಸ್ತಾನದ ಪಾಪದ ಕೊಡ ತುಳುಕುತ್ತಿರುವುದರಿಂದ ಸರ್ಕಾರ ಆ ದೇಶದೊಂದಿಗೆ ಯಾವುದೇ ಮಾತುಕತೆ ನಡೆಸುವ ಅಗತ್ಯವಿಲ್ಲ ಎಂಬುದು ಬಿಜೆಪಿಯ ನಿಲವು. ಕಳೆದ ಕೆಲ ತಿಂಗಳುಗಳಲ್ಲಿ ಲೈನ್ ಆಫ್ ಕಂಟ್ರೋಲ್ ಬಳಿಯ ಘಟನೆಗಳು ಈ ವಾದಕ್ಕೆ ಪುಷ್ಟಿ ಕೊಡುವಂತೆಯೇ ಇದ್ದವು. ಬಿಜೆಪಿ ಒತ್ತಾಯಿಸುತ್ತಿರುವಂತೆ ಪಾಕ್ ಬಗ್ಗೆ ತಾನು ಕಠಿಣ ಧೋರಣೆ ತಾಳುವುದಾದರೆ ಬಾಂಗ್ಲಾ ಲ್ಯಾಂಡ್ ಅಗ್ರಿಮೆಂಟ್ ವಿಷಯದಲ್ಲಿ ಆ ಪಕ್ಷವೂ ತನ್ನ ನಿಲವನ್ನು ಅನುಮೋದಿಸಬೇಕು ಎಂಬುದು ನೇಪಥ್ಯದಲ್ಲಿ ರೂಪುಗೊಂಡಿದ್ದ ತಿಳಿವಳಿಕೆ. ಬಿಜೆಪಿ ಇದಕ್ಕೇನೂ ಬದ್ಧವಾಗಲಿಲ್ಲವಾದ್ದರಿಂದ ಇದೀಗ ಪಾಕಿಸ್ತಾನದೊಂದಿಗೆ ಮಾತುಕತೆ ವಿಷಯದಲ್ಲೂ ತಾನು ತನ್ನದೇ ಧೋರಣೆ ತಾಳಬಹುದೆಂಬ ಉಮೇದು ಸರ್ಕಾರಕ್ಕೆ ಒಲಿದಿದೆ.
ಮನಮೋಹನ್ ಸಿಂಗ್ ಹಾಗೂ ನವಾಜ್ ಷರೀಫ್ ನಡುವೆ ಮಾತುಕತೆ ನಡೆಯಲಿ ಎಂಬ ನಿಲವಿಗೆ ಆತುಕೊಳ್ಳುವುದಕ್ಕೆ ಯುಪಿಎ ಸರ್ಕಾರದ ಬಳಿ ಹಲವು ಕಾರಣಗಳಿವೆ. ಮೊದಲನೆಯದಾಗಿ, ಪಾಕಿಸ್ತಾನದಲ್ಲಾಗುತ್ತಿರುವ ಕೆಲ ಕ್ರಮಬದ್ಧ ಬದಲಾವಣೆಗಳನ್ನು ಹಾಗೂ ಪ್ರಜಾಪ್ರಭುತ್ವದ ಬೇರಿಗೆ ಮರಳುವ ಹಾದಿಯನ್ನು ಭಾರತ ಸರ್ಕಾರ ನಿರ್ಲಕ್ಷಿಸುವುದಕ್ಕೆ ಆಗದು. 68 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕಿಸ್ತಾನವು ಬುಲೆಟ್ ಮೂಲಕವಲ್ಲದೇ ಬ್ಯಾಲಟ್ ಮೂಲಕ ಬದಲಾವಣೆಯನ್ನು ಕಂಡಿದೆ. ಪಾಕಿಸ್ತಾನಕ್ಕೆ ಮೂರನೇ ಬಾರಿ ಪ್ರಧಾನಿಯಾಗುವ ಮೂಲಕ ನವಾಜ್ ಷರೀಫ್ ದಾಖಲೆ ಮಾಡಿದಂತಾಗಿದೆ. ಆಡಳಿತಾರೂಢ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಆ ದೇಶದ ಪ್ರಧಾನಿಯಾಗಿದ್ದಾರೆ. ಹೀಗಾಗಿ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎನ್ನಿಸಿಕೊಂಡಿರುವ ಭಾರತವು ನವಾಜ್ ಷರೀಫ್ ಅವರನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುವುದಿಲ್ಲ ಎಂದಾದರೆ ಅದು ಸರ್ವಾಧಿಕಾರಿ ಏಕಚಕ್ರಾಧಿಪತ್ಯಕ್ಕೆ ಬೆಂಬಲಿಸಿದಂತಾಗುತ್ತದೆ ಎಂಬ ವಾದವೊಂದಿದೆ.
ಎರಡನೆಯದಾಗಿ, ಕಳೆದ ಕೆಲ ವಾರಗಳಿಂದ ನವಾಜ್ ಷರೀಫ್ ಅವರ ವಿದೇಶ ನೀತಿ ಸಲಹೆಗಾರ ಸರ್ತಾಜ್ ಅಜೀಜ್ ಅವರು ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆಯ ಅವಶ್ಯವನ್ನು ಪದೇ ಪದೆ ಒತ್ತಿ ಹೇಳುವ ಮೂಲಕ ಜಾಗತಿಕ ವೇದಿಕೆಯಲ್ಲಿ ಒಂದು ಹಂತದ ಸಕಾರಾತ್ಮಕತೆಯನ್ನು ಗಳಿಸಿಕೊಂಡಿದ್ದಾರೆ.
ಮೂರನೆಯದಾಗಿ, ಅದು ಹೇಗಾದರಿರಲಿ ಭಾರತವು ಪಾಕಿಸ್ತಾನದಲ್ಲಿ ಆಡಳಿತ ಪ್ರಮುಖರು ಯಾರಿದ್ದಾರೋ ಅವರೊಂದಿಗೆ ವ್ಯವಹರಿಸಲೇ ಬೇಕಾಗುತ್ತದೆ. ದ್ವಿಪಕ್ಷೀಯ ತೊಡರುಗಳು-ಕಂದಕಗಳು ಮಧ್ಯಾಂತರಗಳಲ್ಲಿ ನಿರ್ಮಾಣವಾದರೂ ವ್ಯವಹಾರವೆಂಬುದು ಒಂದು ನಿರಂತರ ಪ್ರಕ್ರಿಯೆ. ನಾವು ನಮ್ಮ ನೆರೆಹೊರೆಯನ್ನು ಬದಲಾಯಿಸಲಿಕ್ಕೆ ಆಗುವುದಿಲ್ಲ ಎಂದು ಅಟಲ್ ಬಿಹಾರಿ ವಾಜಪೇಯಿಯವರು ಹೇಳಿದ್ದರ ಮುಂದುವರಿಕೆ ಇದಾಗಿದೆಯೇ ಹೊರತು ಹೊಸತೇನೂ ಇಲ್ಲ. ಹಲವು ಪ್ರಚೋದನೆಗಳ ಹೊರತಾಗಿಯೂ ದ್ವಿಪಕ್ಷೀಯ ಬಾಂಧವ್ಯ ಎಂಬುದು ನಿರಂತರವಾಗಿಯೇ ಇರಬೇಕಾಗಿರುವುದು ಅವಶ್ಯವೇ.
ನಾಲ್ಕನೆಯದಾಗಿ, ಭಾರತ ಮತ್ತು ಪಾಕಿಸ್ತಾನಗಳು ಸಂಧಾನ ಪ್ರಕ್ರಿಯೆಯನ್ನು ಮುಕ್ಕಾಗದೇ ಇರಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಒತ್ತಡ ಜೋರಾಗಿಯೇ ಇದೆ. ಸಾಮಾನ್ಯ ಸಭೆಯ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಾತುಕತೆ ನಡೆಯುವ ನಿಟ್ಟಿನಲ್ಲಿ ಪ್ರೇರಕ ಕ್ರಮಗಳಿಗೆ ತಾವು ಸಿದ್ಧರಾಗಿರುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಬಹಿರಂಗವಾಗಿಯೇ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಅಮೆರಿಕವಂತೂ ಈ ಬಗ್ಗೆ ಅಬ್ಬರದ ಮಾತುಗಳನ್ನೇ ಆಡುತ್ತಿದೆ. ಇಬ್ಬರೂ ನೆರೆಹೊರೆಯವರು ಸಂಧಾನದ ಮೇಜಿಗೆ ಬರಬೇಕು ಎಂಬುದನ್ನು ಅದು ಆಗಾಗ ಹೇಳುತ್ತಿದೆ. ಸೆಪ್ಟೆಂಬರ್ 18ರಂದು ನವ ದೆಹಲಿಗೆ ಭೇಟಿ ಕೊಟ್ಟಿದ್ದ ಅಮೆರಿಕದ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಆ್ಯಸ್ಟನ್ ಕಾರ್ಟರ್, ಪಾಕಿಸ್ತಾನದ ಆರ್ಥಿಕ ಭವಿಷ್ಯ ನಿರ್ಧಾರವಾಗುವುದೇ ಅದು ತನ್ನ ನೆರೆದೇಶ ಭಾರತದೊಂದಿಗೆ ಹೇಗೆ ಶಾಂತಿ ವೃದ್ಧಿಸಿಕೊಳ್ಳುತ್ತದೆ ಎಂಬುದರ ಆಧಾರದಲ್ಲಿ ಎಂದು ಹೇಳಿದ್ದರು. 'ನಾವು (ಭಾರತ ಮತ್ತು ಅಮೆರಿಕ), ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳ ಬಗ್ಗೆ ಮಾತನಾಡಿದೆವು. ಈಗ ಪಾಕಿಸ್ತಾನದಲ್ಲಿ ಹೊಸ ಸರ್ಕಾರವಿದೆ. ನಾನು ದೃಢಪಡಿಸಿಕೊಂಡಿರುವ ಒಂದಂಶವೆಂದರೆ ಅದು ಆರ್ಥಿಕ ಪ್ರಗತಿಯನ್ನು ಸಾಧಿಸುವುದಕ್ಕೆ ಉತ್ಸುಕವಾಗಿದೆ. ಮೂಲಭೂತವಾಗಿ ಇವರ ಆರ್ಥಿಕ ಕನಸು ಭಾರತದೊಂದಿಗೆ ಶಾಂತಿ ಕಾಪಾಡಿಕೊಳ್ಳುವ ಮೂಲಕವಷ್ಟೇ ಪೂರ್ಣವಾಗುತ್ತದೆ' ಎಂಬುದು ಆ್ಯಸ್ಟನ್ ಉವಾಚ.
ತಟಸ್ಥ ದೇಶವೊಂದರ ನೆಲದಲ್ಲಿ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರೆ ಭಾರತ ಕಳೆದುಕೊಳ್ಳುವಂಥದ್ದೇನಿಲ್ಲ. ರಾಜಕೀಯ ವಿಮರ್ಶಕರಿಂದ ಪ್ರಶ್ನೆ ಎದುರಾಗಿಯೇ ಆಗುತ್ತದೆ. ಈಗೇಕೆ ಮಾತುಕತೆ ಎಂದು. ಯಾಕಾಗಬಾರದು ಎಂದು ಪ್ರತಿಯಾಗಿ ಹೇಳಬಹುದಷ್ಟೆ. ಗಡಿಯಲ್ಲಿ ನಡೆದ ಘಟನೆಗಳ ಕಾರಣದಿಂದ ಪಾಕ್ ಜತೆ ಮಾತನಾಡಬಾರದು ಎಂದಾದರೆ, ಇನ್ನೊಂದು ನಿಟ್ಟಿನಲ್ಲಿ ಯೋಚಿಸಿದಾಗ ಭಾರತದ ಆಕ್ರೋಶವನ್ನು ನೇರವಾಗಿ ಪಾಕ್ ಪ್ರಧಾನಿಗೆ ತಿಳಿಸುವುದಕ್ಕೆ ಮನಮೋಹನ್‌ಸಿಂಗ್ ಅವರಿಗೆ ಅದುವೇ ಅವಕಾಶ. ಶಾಂತಿಕಾಲದಲ್ಲಿ ಒಬ್ಬ ಪ್ರಧಾನಿ ಮಾಡಬಹುದಾದ ದೊಡ್ಡ ಕಾರ್ಯ ಎಂದರೆ ಇದೇ. ಭಯೋತ್ಪಾದನೆಯ ಬೀಜ ನಿಮ್ಮ ನೆಲದಲ್ಲೇ ಕಾಣುತ್ತಿದೆ ಎಂಬ ಕಟುಮಾತನ್ನು ಅಧಿಕೃತವಾಗಿ ತಿಳಿಸಬಹುದು. ಇಷ್ಟಾಗಿಯೂ ಭಾರತದ ಗಡಿಭಾಗದಲ್ಲಿ ಪಾಕಿಸ್ತಾನದ ಆಕ್ರಮಣಶೀಲತೆ ಹಾಗೂ ಭಯೋತ್ಪಾದನೆಯ ಪ್ರಚೋದನೆಗಳು ನಿಲ್ಲುವುದಿಲ್ಲ ಎಂಬುದು ಖರೆ. ಏಕೆಂದರೆ ಕೊನೆಗೂ ನೈಜ ಅಧಿಕಾರವಿದುವುದು ಆ ದೇಶದ ಮಿಲಿಟರಿ ವ್ಯವಸ್ಥೆ ಬಳಿ. ಆದರೂ ಭಾರತವು ಪಾಕಿಸ್ತಾನದಲ್ಲಿ ನೇಪಥ್ಯದಲ್ಲಿ ನಿಂತು ಆಡಳಿತ ರೂಪಿಸುತ್ತಿರುವ ಸೇನೆಯ ಜತೆ ಹಿಂಬಾಗಿಲಿನ ಮಾತುಕತೆ ನಡೆಸುವುದಕ್ಕಿಂತ ರಾಜಕೀಯ ನಾಯಕತ್ವದೊಂದಿಗೆ ಜಗತ್ತಿನೆದುರು ಸಂಭಾಷಿಸುವುದೇ ಒಳಿತು.
- ರಾಜೀವ್ ಶರ್ಮ
anisikeprabha@gmail.com