ಮಾಧ್ಯಮಗಳಿಗೆ ಪತ್ರ ಬರೆದು ಗಂಭೀರ ಚರ್ಚೆಗೆ ಆಹ್ವಾನಿಸಿದ ಸನ್ಮಾನ್ಯ ಸಾಹಿತಿಗಳೇ,
ಎನ್‌ಕೌಂಟರ್‌ನಲ್ಲಿ ನಕ್ಸಲೀಯರು ಸತ್ತರೆ ಸಂತಾಪ. ಪೊಲೀಸರು ಸತ್ತಾಗ ನಿಮಗೆ ಖಂಡಿಸಲು ಧ್ವನಿಯೇ ಇರಲ್ಲ ಪಾಪ!
ಹಿಂದು ದೇವರುಗಳನ್ನು ಕೆಟ್ಟದಾಗಿ ಚಿತ್ರಿಸಿದರೆ ಅದು ಕಲೆ. ಬೇರೆ ಧರ್ಮದ ವಿಷಯದಲ್ಲಿ ಹೀಗಾದರೆ ಅದಕ್ಕೆ ನೀವು ಕೊಡಲ್ಲ ಬೆಲೆ! ಬಹುಸಂಖ್ಯಾತರಿಗೆ ಅನ್ಯಾಯವಾದರೆ, ತೊಂದರೆಯಾದರೆ ಅದನ್ನು ಸಹಿಸಿಕೊಳ್ಳಬೇಕು. ಸಹನಶೀಲರಾಗಬೇಕು. ಅದು ಆಕಸ್ಮಿಕ. ಅದೇ ಅಲ್ಪಸಂಖ್ಯಾತರಿಗೆ ಏನಾದರೂ ಆದರೆ ಅದು ದೌರ್ಜನ್ಯ! ಪೂರ್ವಯೋಜಿತ!
ನಿಮ್ಮದೇ ಪಂಗಡದ ಸಾಹಿತಿಗಳು ಬರೆದರೆ ಅದು ಮಹಾಕಾವ್ಯ. ಬೇರೆ ಸಾಹಿತಿಗಳು ಉತ್ತಮವಾದದ್ದನ್ನೇ ಬರೆದರೂ ಅದು ನಿಮಗೆ ಅಪಸವ್ಯ! ಭಾಷಣದಲ್ಲಿ ಮಹಿಳೆಯರ ಬಗ್ಗೆ ಅಪಾರ ಕನಿಕರ. ಅದೇ ನಿಮ್ಮದೇ 'ಪಟ್ಟ' ಶಿಷ್ಯ ಹೆಂಡತಿಗೆ ಹೊಡೆದು, ಮನೆಯಿಂದ ಹೊರಹಾಕಿದರೆ ಆಕೆಗೆ ಏನೂ ಕೊಡಬೇಡ, ಏನು ಮಾಡ್ತಾಳೋ ನೋಡೋಣ ಎಂದು ಧಮಕಿ ಹಾಕುತ್ತೀರಿ!
ಕಾಂಗ್ರೆಸ್ ಸರ್ಕಾರ ಇದ್ದಾಗ ಒಂದು ಘಟನೆ ನಡೆದಾಗ ನಿಷ್ಕಾಳಜಿ. ಬಿಜೆಪಿ ಸರ್ಕಾರ ಇದ್ದಾಗ ಅದೇ ಘಟನೆ ನಡೆದರೆ ಅಪಾರ ಕಾಳಜಿ!
ವಿವೇಕಾನಂದರು ಯಾವುದೇ ಧರ್ಮವನ್ನು ಟೀಕಿಸದೇ ಇದ್ದರೂ, ಬಿಜೆಪಿ ಸರ್ಕಾರ ಇದ್ದಾಗ ಶಾಲೆಗಳಲ್ಲಿ ವಿವೇಕಾನಂದರ 150ನೇ ಜಯಂತಿ ಆಚರಿಸಲು ಮುಂದಾದಾಗ ವಿರೋಧಿಸಿದಿರಿ. ಚುನಾವಣೆ ಬಂದಾಗ ವಿವೇಕಾನಂದರ ಮೂರ್ತಿಗೆ ಹಾರ ಹಾಕಿ ಮತಯಾಚನೆ ಆರಂಭಿಸಿದಿರಿ!
ಸಾಕಾ? ಇನ್ನೂ ಬೇಕಾ?
ಎಷ್ಟು ದಿನ ನಿಮ್ಮ ಈ ದ್ವಿಮುಖ ನೀತಿಯನ್ನು ಜನ ಅಥವಾ ಮಾಧ್ಯಮದವರು ಸಹಿಸಿಕೊಳ್ಳಬೇಕು? ಜನರಿಗೆ ಏನೂ ಅರ್ಥವಾಗುವುದೇ ಇಲ್ಲ ಎಂದೇನಾದರೂ ನೀವು ಭಾವಿಸಿಕೊಂಡಿದ್ದರೆ, ಅದಕ್ಕೆ ಮಾಧ್ಯಮದವರನ್ನು ಹೊಣೆಯನ್ನಾಗಿ ಮಾಡಬೇಡಿ. ನಾವು ಕೊಟ್ಟ ಪ್ರತಿಕ್ರಿಯೆ ನಿಮಗೆ ಕ್ರೌರ್ಯ ಎನಿಸುತ್ತದೆ. ಆದರೆ ಜನ ನಿಮ್ಮವರೊಬ್ಬರ ಹೇಳಿಕೆಗೆ ಇಷ್ಟು ಖಾರವಾಗಿ ಪ್ರತಿಕ್ರಿಸಬೇಕಾದರೆ, ಅವರೆಷ್ಟು ದಿನಗಳಿಂದ ನಿಮ್ಮ ದ್ವಿಮುಖ ನೀತಿಯನ್ನು ಸಹಿಸಿಕೊಂಡಿರಬಹುದು ಎಂಬುದನ್ನು ಊಹಿಸಬಲ್ಲಿರಾ?
ನೀವು ಮಾಧ್ಯಮಗಳ ಮೇಲೆ ಆರೋಪ ಹೊರಿಸಿ ಬರೆದ ಪತ್ರ ಕೂಡ ಇಂತಹ ದ್ವಿಮುಖ ನೀತಿಗೆ ಇನ್ನೊಂದು ಸಾಕ್ಷಿ ಎಂದು ನಿಮಗೆ ಅನ್ನಿಸಲಿಲ್ಲವೇ? ನೀವು ಮಾತನಾಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ. ಅದೇ ನಾವು ಬರೆದರೆ ಅದು ತೇಜೋವಧೆ! ನಿಮಗೊಂದು ನ್ಯಾಯ ನಮಗೊಂದು ನ್ಯಾಯವಾ? ಯಾವ ಮನಸ್ಥಿತಿಯಲ್ಲಿ ನೀವಿದ್ದೀರಿ ಎಂಬುದಕ್ಕೆ ಇಷ್ಟು ಸಾಕ್ಷ್ಯ ಸಾಕು ಅಂತ ನಿಮಗನ್ನಿಸುವುದಿಲ್ಲವೇ?
'ನುಡಿದಂತೆ ನಡೆ' ಎಂಬ ಮಾತಿರುವುದು ನಿಮಗೆ ಗೊತ್ತಿರಬೇಕು. ಸಮಾಜದ ಉನ್ನತ ಸ್ಥಾನದಲ್ಲಿರುವವರು, ನಾಯಕ ಅನ್ನಿಸಿಕೊಂಡವರು ನುಡಿದಂತೆ ನಡೆಯಬೇಕು. ಬೇಕೋ ಬೇಡವೊ ಸಾರ್ವಜನಿಕ ವ್ಯಕ್ತಿಗಳ ಖಾಸಗಿ ಜೀವನ ಕೂಡ ಸಾರ್ವಜನಿಕರ ಪರೀಕ್ಷೆಗೆ ಒಳಪಡುತ್ತದೆ. ಮಾತನಾಡುವುದೇ ಬೇರೆ, ನನ್ನ ಖಾಸಗಿ ಜೀವನವೇ ಬೇರೆ ಅಂದರೆ ನಮ್ಮ ಸಮಾಜ ಅದನ್ನು ಒಪ್ಪಲು ಸಾಧ್ಯವಿಲ್ಲ. ನೀವು ನುಡಿದಂತೆ ನಡೆದಿಲ್ಲ ಅಂತ ಯಾವತ್ತೂ ನಿಮಗೆ ಅನ್ನಿಸಿಲ್ಲವೇ? ಒಂದೊಮ್ಮೆ ಹಾಗೆ ನಡೆದುಕೊಂಡಿದ್ದರೆ ಜನ ನಿಮ್ಮನ್ನು ಗೌರವಿಸುತ್ತಿದ್ದರು ಅಂತ ಅನಿಸುವುದಿಲ್ಲವೇ?
ಎಸ್.ಎಲ್. ಭೈರಪ್ಪ ಅವರನ್ನು ಕೋಮುವಾದಿ ಎಂದು ಕರೆಯಬಹುದು. ಅವರು ಬರೆಯುವುದೆಲ್ಲ ಕೋಮುವಾದಿ ಸಾಹಿತ್ಯ ಎಂದು ನೀವು ಜರಿಯಬಹುದು. ಆದರೆ ಯಾರೂ ಅವರನ್ನು ದ್ವಿಮುಖನೀತಿಯ ಸಾಹಿತಿ ಎಂದು ಟೀಕಿಸಲು ಸಾಧ್ಯವಿಲ್ಲ. ಆದರೆ ಅನಂತಮೂರ್ತಿ ಅವರನ್ನು ಹಾಗೇ ಅಂದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಹೊಸದಾಗಿ ಸಾಕ್ಷ್ಯಗಳು ಬೇಡ ಅಂದುಕೊಳ್ಳುತ್ತೇನೆ.
ನೀವು ಪತ್ರದ ಆರಂಭದಲ್ಲಿ ಏನು ಹೇಳಿದ್ದೀರಿ? 'ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಜೆಪಿ ಬಿಂಬಿಸುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ಪರ ವಿರೋಧಿ ಪ್ರತಿಕ್ರಿಯೆಗಳು ಬರುತ್ತಿವೆ. ಈ ಪ್ರತಿಕ್ರಿಯೆಗಳ ಬಗ್ಗೆ ಮಾಧ್ಯಮಗಳು ನೀಡುತ್ತಿರುವ ಪ್ರಚಾರದ ಧಾಟಿ ಹಾಗೂ ಶೈಲಿಯ ಬಗೆಗೆ ಗಂಭೀರವಾದ ಚರ್ಚೆಯಾಗುವುದು ಅನಿವಾರ್ಯವಾಗಿದೆ' ಎಂದು ಹೇಳಿದ್ದೀರಿ ತಾನೇ?
ಭಯಂಕರ ಚಾಲಾಕಿಗಳು ನೀವು. ಇಡೀ ಚರ್ಚೆಯನ್ನು ಮಾಧ್ಯಮಗಳ ಮೇಲೆ ತಿರುಗಿಸಲು ಹವಣಿಸುತ್ತಿದ್ದೀರಿ. ನಿಮ್ಮ ಗುಂಪಿನವರೊಬ್ಬರ ಹೇಳಿಕೆ ಬಗ್ಗೆ ಚರ್ಚೆಯಾಗುವುದನ್ನು ಸಹಿಸಲಾಗದ ನೀವು, ಅದಕ್ಕೆ ಪ್ರತಿಕ್ರಿಯಿಸಿದ ಮಾಧ್ಯಮಗಳನ್ನೇ ಚರ್ಚೆಗೆ ಗುರಿಯಾಗಿಸಲು ಬಹಳ ನಯವಾಗಿ ಹವಣಿಸಿದ್ದೀರಿ. ನರೇಂದ್ರ ಮೋದಿ ಬಗ್ಗೆ ಚರ್ಚಿಸಲೇ ಬೇಡಿ ಅಂತ ಯಾರೂ ಹೇಳಿಲ್ಲ. ಆದರೆ ಚರ್ಚೆಯ ರೀತಿಯಷ್ಟೇ ವಿವಾದಕ್ಕೀಡಾಗಿರುವುದು ಎಂಬುದು ನಿಮಗೆ ಅರ್ಥವಾಗಲಿಲ್ಲವೇ?
ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಮಾಧ್ಯಮಗಳ ಪಾಲಿಗೆ ವಿಶೇಷ ಹಕ್ಕಿನಂತಾಗಿರುವುದು ದುರದೃಷ್ಟಕರ ಎಂದು ಹೇಳಿದ್ದೀರಲ್ಲ. ಅದು ನಿಮಗೂ ಅನ್ವಯವಾಗುವುದಿಲ್ಲವೇ? ಸಾಹಿತಿಗಳು ಎಂದಾಕ್ಷಣ ಯಾವುದರ ಬಗ್ಗೆ ಏನು ಬೇಕಾದರೂ ಮಾತನಾಡಬಹುದು ಎಂದು ನೀವು ಭಾವಿಸಿದ್ದರೆ, ಅದು ಕೂಡ ನಿಮಗೆ ದತ್ತವಾದ ವಿಶೇಷ ಹಕ್ಕು ಎಂದು ನಿಮಗನ್ನಿಸುವುದಿಲ್ಲವೇ?
ಸಾಹಿತಿಗಳು ಎಂದಾಕ್ಷಣ ಜನ ನಿಮ್ಮನ್ನು ಗೌರವಿಸುತ್ತಾರೆ. ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ಅಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡುವುದು ಬಿಟ್ಟು, ಊರ ಉಸಾಬರಿಗೆಲ್ಲ ಹೋಗುತ್ತೀರಲ್ಲ. ಇದನ್ನು ನೀವೇ ಪಡೆದುಕೊಂಡ ವಿಶೇಷ ಹಕ್ಕು ಎಂದು ನಿಮಗೆ ಅನ್ನಿಸುವುದಿಲ್ಲವೇ? ನಿಮ್ಮ ಹೇಳಿಕೆಯನ್ನು ವಿರೋಧಿಸಿ ಬರೆದರೆ ಅದು ನಿಮ್ಮ ವಿಚಾರವನ್ನು ಹತ್ತಿಕ್ಕಿದಂತೆ ಎಂದು ಹೇಳುತ್ತೀರಿ. ಹಾಗಾದರೆ ಜನರು ಒಬ್ಬರನ್ನು ಪ್ರಧಾನಿಯಾಗಿ ಆಯ್ಕೆ ಮಾಡುವುದು ಹಕ್ಕು. ಅವರು ಪ್ರಧಾನಿಯಾದರೆ ನಾನು ದೇಶದಲ್ಲಿರಲು ಇಷ್ಟಪಡುವುದಿಲ್ಲ ಎಂದು ಹೇಳುವುದು ಜನರ ವಿಚಾರ ಅಥವಾ ಅಭಿಪ್ರಾಯ, ಹಕ್ಕನ್ನು ಹತ್ತಿಕ್ಕಿದಂತೆ ಆಗುವುದಿಲ್ಲವೇ?
ಚರ್ಚೆಯ ಗಾಂಭೀರ್ಯ ಕಾಪಾಡಿಕೊಳ್ಳಲು ಎಲ್ಲ ಮಾಧ್ಯಮದವರೂ ಚಿಂತನೆ ನಡೆಸಬೇಕು ಎಂದು ಹೇಳಿದ್ದೀರಿ. ಹೇಳಿಕೆ ನೀಡುವಾಗಲೇ ನೀವೇ ಏಕೆ ಆ ಗಾಂಭೀರ್ಯ ಮರೆಯುತ್ತೀರಿ? ನೀವು ಗಂಭೀರವಾಗಿ ಹೇಳಿಕೆ ನೀಡಿದರೆ, ಅದರ ಬಗ್ಗೆ ಸೂಕ್ತವಾಗೇ ಚರ್ಚೆ ನಡೆಯಬಹುದು. ನಿಮ್ಮ ಮತ್ತು ನಿಮಗೆ ಸಂದ ಗೌರವದ ಗಾಂಭೀರ್ಯ ಮರೆತು ನೀವು ವರ್ತಿಸಿ, ನಂತರ ಉಳಿದವರಿಂದ ಆ ಗಾಂಭೀರ್ಯ ನಿರೀಕ್ಷಿಸುವುದು ಸರಿಯೇ?
ನೀವು ಹೇಳುವುದೆಲ್ಲ ಸಮಷ್ಠಿ ದೃಷ್ಟಿಯಿಂದ. ನಾವು ಬರೆದದ್ದೆಲ್ಲ ವಯಕ್ತಿಕ ತೇಜೋವಧೆ. ಇದು ಹೇಗೆ? ನೀವು ಕನ್ನಡ ಶಾಲೆಗಳ ಉಳಿವಿಗೆ ಹೋರಾಟ ನಡೆಸುತ್ತಲೇ ನಿಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸಬಹುದು. ಅದರ ಬಗ್ಗೆ ಪ್ರಶ್ನಿಸಿದರೆ ಅದು ವೈಯಕ್ತಿಕ ತೇಜೋವಧೆ ಆಗಿಬಿಡುತ್ತದೆ! ಲೇಖನದಲ್ಲಿ ಎಲ್ಲೂ ಅನಂತಮೂರ್ತಿ ಅವರ ಖಾಸಗಿ ವಿಷಯಗಳನ್ನು ಪ್ರಸ್ತಾಪಿಸಲಾಗಿಲ್ಲ. ನಾವು ಅವರು ವಿಶ್ವವಿದ್ಯಾಲಯಗಳಲ್ಲಿದ್ದಾಗ ನಡೆದ ಸಂಗತಿಗಳು ಸೇರಿದಂತೆ ಅವರ ಯಾವುದಾದರೂ ಖಾಸಗಿ ಸಂಗತಿ, ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರೆ ನಿಮ್ಮ ತಕರಾರಿಗೆ ಬೆಲೆ ಇರುತ್ತಿತ್ತು. ಆದ್ದರಿಂದ ವೈಯಕ್ತಿಕ ತೇಜೋವಧೆ ಎಂದು ನೀವು ಬಿಂಬಿಸುವ ಅಗತ್ಯವೇ ಇಲ್ಲ. ಅದರಲ್ಲಿ ಹುರುಳೂ ಇಲ್ಲ. ಸರ್ಕಾರದಿಂದ ಪಡೆದ ಸೌಲಭ್ಯಗಳು ಖಾಸಗಿಯೇ? ಸಾರ್ವಜನಿಕರ ಹಣದಿಂದ ನಡೆಯುವ ಸರ್ಕಾರದಿಂದ ಪಡೆದಿದ್ದು ಖಾಸಗಿಯಾಗಲು ಹೇಗೆ ಸಾಧ್ಯ?
ಇನ್ನು ಅವರು ನೀಡಿದ ಹೇಳಿಕೆಗಳು. ಅವು ಕೂಡ ಸಾರ್ವಜನಿಕವಾದದ್ದೇ. ಸಾರ್ವಜನಿಕ ಸ್ಥಳ, ಕಾರ್ಯಕ್ರಮಗಳಲ್ಲಿ ಹೇಳಿದ್ದನ್ನಷ್ಟೇ ಉದಾಹರಣೆಯಾಗಿ ಬಳಸಲಾಗಿದೆಯೇ ಹೊರತು ಆಪ್ತವಲಯದಲ್ಲಿ ಹೇಳಿದ ಮಾತುಗಳನ್ನೇನು ನಾವು ಉದಾಹರಿಸಿಲ್ಲ. ಹಾಗಿದ್ದರೂ ಅದು ವೈಯಕ್ತಿಕ ಟೀಕೆ ಹೇಗಾದೀತು? ಇದನ್ನೆಲ್ಲ ಗಮನಿಸಿದರೆ ಇಡೀ ಪತ್ರವೇ ದ್ವಿಮುಖ ನೀತಿಯಿಂದ ಕೂಡಿದೆ ಎಂದು ನಿಮಗೆ ಅನ್ನಿಸುವುದಿಲ್ಲವೇ?
ಪತ್ರ ಬರೆದ ಸಾಹಿತಿಗಳೇ ನಿಮಗೆ ಒಂದು ವಿಷಯ ಸ್ಪಷ್ಟಪಡಿಸಲು ಬಯಸುತ್ತೇನೆ. ನೀವು ಗೌರವಯುತವಾಗಿ ನಡೆದುಕೊಂಡರೆ ಸಮಾಜವೂ ನಿಮ್ಮನ್ನು ಗೌರವದಿಂದಲೇ ನಡೆಸಿಕೊಳ್ಳುತ್ತದೆ. ನೀವು ಗಾಂಭೀರ್ಯದಿಂದ ಟೀಕೆ ಮಾಡಿದರೆ ಅದಕ್ಕೆ ಬರುವ ಪ್ರತಿಕ್ರಿಯೆಗಳೂ ಗಂಭೀರವಾಗೇ ಇರುತ್ತವೆ.
ಅಷ್ಟು ಗಾಂಭೀರ್ಯ ಹೇಳಿಕೆ ನೀಡಿದವರಿಗೆ ಇದೆ ಎಂದಾಗಿದ್ದರೆ, 'ನಾನು ಮಾತಿನ ಭರದಲ್ಲಿ ಹಾಗಂದೆ', 'ನನ್ನ ಹೇಳಿಕೆಯನ್ನು ತಿರುಚಲಾಗಿದೆ' ಎಂದೆಲ್ಲ ಸ್ಪಷ್ಟೀಕರಣ ಕೊಡುವ ಅಗತ್ಯವಿತ್ತೇ?
ಪತ್ರದಲ್ಲಿ ಮಾಧ್ಯಮಗಳು ಅಪಪ್ರಚಾರದಲ್ಲಿ ತೊಡಗಿವೆ ಎಂದು ಆರೋಪಿಸಿದ್ದೀರಿ. 'ಅಪಪ್ರಚಾರ' ಎಂದರೆ ಇಲ್ಲದ್ದನ್ನು ಹಬ್ಬಿಸುವುದು ಎಂದರ್ಥ ಎಂಬುದನ್ನು ಸಾಹಿತಿಗಳಾದ ನಿಮಗೆ ನಾನು ಹೇಳಬೇಕಿಲ್ಲ. ಲೇಖನದಲ್ಲಿ ಒಂದಾದರೂ ಅಸತ್ಯ ಸಂಗತಿಗಳಿದ್ದವೇ? ಸತ್ಯ ಸಂಗತಿಗಳು 'ಅಪಪ್ರಚಾರ'ವಾಗಲು ಹೇಗೆ ಸಾಧ್ಯ? 2002ರ ಗಲಭೆಯನ್ನೇ ಮುಂದಿಟ್ಟುಕೊಂಡು ಒಬ್ಬರನ್ನು ಕೋಮುವಾದಿ ಎಂದು ಕರೆಯುವುದು ಅಪಪ್ರಚಾರವಲ್ಲ. ಬದಲಾಗಿ 2013ರಲ್ಲಿ ನೀಡಿದ ಹೇಳಿಕೆಯನ್ನೇ ವಿರೋಧಿಸುವುದು ಅಪಪ್ರಚಾರವಾಗಿಬಿಡುತ್ತದೆ!
ನಿಮ್ಮ ಇನ್ನೆಷ್ಟು ದ್ವಿಮುಖ ನೀತಿಗಳನ್ನು ಸಹಿಸಿಕೊಳ್ಳಬೇಕು? ಇಂತಹ ದ್ವಿಮುಖ ನೀತಿಯ ಬಗೆಗಷ್ಟೇ ನಮ್ಮ ತಕರಾರು. ನೀವು ನಿಷ್ಪಕ್ಷಪಾತವಾಗಿ, ನಿರ್ಭಿಡೆಯಿಂದ ಅಭಿಪ್ರಾಯಗಳನ್ನು ಹೇಳಿ. ಖಂಡಿತ ಸ್ವಾಗತಿಸುತ್ತೇವೆ. ಭಾಷೆ, ನೆಲ, ಜಲ, ಸಂಸ್ಕೃತಿ, ದೇಶದ ಕುರಿತು ಮಾತನಾಡಿ. ಸ್ವಾಗತಿಸುತ್ತೇವೆ. ಅದಕ್ಕೆ ಪ್ರಚಾರವನ್ನೂ ಕೊಡುತ್ತೇವೆ.
ಅದು ಬಿಟ್ಟು ನೀವು ಹೇಳಿದ್ದೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ, ನೀವು ಬರೆದದ್ದೆಲ್ಲ ಸಮಾಜದ ತುಮುಲ, ಬೇರೆಯವರದ್ದೆಲ್ಲ ತೇಜೋವಧೆ, ವೈಯಕ್ತಿಕ ನಿಂದನೆ ಎಂದರೆ ಅದು ಸರ್ವಾಧಿಕಾರಿ ನಿಲುವಾಗುತ್ತದೆ ಎಂಬುದು ನಿಮ್ಮಂತಹ ಪ್ರಾಜ್ಞರಿಗೆ ತಿಳಿಯದೇ ಇರುವ ಸಂಗತಿಯಲ್ಲ ಎಂದು ಭಾವಿಸುತ್ತೇನೆ. ನೀವು ನಿಮ್ಮ ಗಾಂಭೀರ್ಯ ಇರಿಸಿಕೊಳ್ಳಿ. ನಾವು ನಮ್ಮ ಗಾಂಭೀರ್ಯ ಕಾಪಾಡಿಕೊಳ್ಳುತ್ತೇವೆ. ನೀವು ಮಾಡುವುದನ್ನೆಲ್ಲ ಮಾಡಿ, ನಮ್ಮ ಬಳಿ ಸುಮ್ಮನಿರಿ ಅಂದರೆ, ಅದನ್ನು ಒಪ್ಪಿಕೊಳ್ಳಲು ಸುತಾರಾಂ ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ನಿಮಗಿದೆಯಾದರೆ ನಮಗೂ ಇದೆ. ಅದರ ಮಿತಿ ನಿಮಗೆ ಗೊತ್ತಿದೆ ಎಂದಾದರೆ, ನಮಗೂ ಗೊತ್ತಿದೆ. ನೀವು ಅದರ ಮಿತಿ ಮೀರಿದರೆ, ಮಿತಿ ಮೀರಲು ನಮಗೂ ಅವಕಾಶ ಸಿಕ್ಕಂತಾಗುತ್ತದೆ.
ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ ಇರಬೇಕು ಎಂಬುದರ ಪರ ಎಂದು ಹೇಳಿದ್ದೀರಲ್ಲ. ನಾನೂ ಅಷ್ಟೇ ಸಾಹಿತಿಗಳಿಗೂ ಸ್ವಯಂ ನಿಯಂತ್ರಣವೇ ಒಳ್ಳೆಯದು ಎಂಬುದರ ಪರ. ಇನ್ನೊಬ್ಬರ ಸ್ವಾತಂತ್ರ್ಯ ಹರಣಕ್ಕೆ ನನ್ನ ಬೆಂಬಲವೂ ಇಲ್ಲ ಎಂಬುದನ್ನು ತಿಳಿಸಬಯಸುತ್ತೇನೆ.
ಪತ್ರಕ್ಕೆ ಸಹಿಹಾಕಿದ ಎಲ್ಲ ಸಾಹಿತಿಗಳೂ ಗಮನಿಸಬೇಕಾದ ಒಂದು ಅಂಶವೆಂದರೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು ಕೇವಲ ಲೇಖಕರ ವೈಯಕ್ತಿಕ ಅಭಿಪ್ರಾಯವಲ್ಲ. ಬದಲಾಗಿ ಅದು ಸಾರ್ವಜನಿಕ ಅಭಿಪ್ರಾಯದ ಪ್ರತಿಫಲನವಷ್ಟೇ. ನಿಮ್ಮಂತಹ ಒಬ್ಬ ಸಾಹಿತಿ ಬರೆದಿದ್ದು ಆಯಾ ಕಾಲದ ಸಮಾಜದ ತುಮುಲಗಳನ್ನು ಪ್ರತಿಬಿಂಬಿಸುವುದಾದರೆ, ನಾವು ಪತ್ರಕರ್ತರು ಬರೆದಿದ್ದು ಸಮಾಜದ ಪ್ರತಿಬಿಂಬವಾಗಲು ಏಕೆ ಸಾಧ್ಯವಿಲ್ಲ?
ಇಂತಹ ದ್ವಿಮುಖ ನೀತಿ ಮತ್ತು ಪ್ರತಿಪಾದನೆಗಳ ಬಗ್ಗೆಯಷ್ಟೇ ನಮ್ಮ ತಕರಾರು ಹೊರತು ನೀವು ಯಾರನ್ನು ಟೀಕಿಸಿದ್ದೀರಿ, ಏನನ್ನು ಟೀಕಿಸಿದ್ದೀರಿ ಎಂಬುದರ ಬಗ್ಗೆಯಲ್ಲ.
ಬಿ.ಕೆ. ಚಂದ್ರಶೇಖರ್ ಅವರೇ, ನಿಮ್ಮ ಮೇಲೆ ಗೌರವ ಇರಿಸಿಕೊಂಡೇ ಒಂದು ಮಾತನ್ನು ಹೇಳಬೇಕಿದೆ. ಬಿಜೆಪಿ ಸರ್ಕಾರ ಇದ್ದಾಗ ವಿವೇಕಾನಂದರ 150ನೇ ಜನ್ಮವನ್ನು ಶಾಲೆಗಳಲ್ಲಿ ನಡೆಸುವಂತೆ ಸೂಚಿಸಿತ್ತು. ನೀವು ಮುಂದಾಳತ್ವ ವಹಿಸಿ ವಿರೋಧಿಸಿದ್ದು ನಿಜ ತಾನೇ? ಅದೇ ತಾವು ಬಸವನಗುಡಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ರಾಮಕೃಷ್ಣ ಆಶ್ರಮ ಬಳಿ ಇರುವ ವಿವೇಕಾನಂದ ಮೂರ್ತಿಗೆ ಹಾರ ಹಾಕುವ ಮೂಲಕ ಮತ ಯಾಚನೆ ಆರಂಭಿಸಿದಿರಿ! ಹೀಗೆಂದಾಕ್ಷಣ ಅದು ವೈಯಕ್ತಿಕ ಎಂದು ಬೊಬ್ಬೆಹೊಡೆಯುತ್ತೀರಿ. ಸಾರ್ವಜನಿಕವಾಗಿ ನೀವು ತೋರಿದ ವರ್ತನೆಯನ್ನು ಜನರ ಮುಂದಿಡುವುದು ವೈಯಕ್ತಿಕ ತೇಜೋವಧೆಯಾಗಲು ಹೇಗೆ ಸಾಧ್ಯ?
ಇಂತಹ ದ್ವಿಮುಖ ನೀತಿಗಳನ್ನು ಜನರ ಮುಂದಿಡುವುದಷ್ಟೇ ನಮ್ಮ ಕರ್ತವ್ಯ. ನಿರ್ಧಾರ ಅವರೇ ತೆಗೆದುಕೊಳ್ಳುತ್ತಾರೆ ಬಿಡಿ.
- ವಿನಾಯಕ ಭಟ್ಟ ಮೂರೂರು,
ಕನ್ನಡಪ್ರಭ