ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮೋದಿಗೆ ನಡುಗುತ್ತಿರುವ 'ನೆಹ್ರೂವಿಯನ್‌' ಸಿದ್ಧಾಂತ

ನೆಹರು ಅವರ ಯೋಚನೆಗಳು ಅವರ ಸಾವಿನವರೆಗೂ ಭಾರತದಲ್ಲಿ ಸೈದ್ಧಾಂತಿಕ...

Srinivasa Murthy VN
Updated On : 26 Sept 2013, 12:02 pm

ಪಟೇಲ್ ಮತ್ತು ವಿವೇಕಾನಂದರಂಥ ಶೇಷ್ಠ ವ್ಯಕ್ತಿಗಳ ಪ್ರಗತಿಪರ ದೃಷ್ಟಿಕೋನವನ್ನು, ತಮ್ಮ 'ಪ್ರಗತಿಪರ' (ಎಂದು ಕರೆದುಕೊಳ್ಳುವ) ಸಿದ್ಧಾಂತದೊಂದಿಗೆ ಸಮನ್ವಯಗೊಳಿಸಲು ಎಡಪಂಥೀಯ ಬುದ್ಧಿಜೀವಿಗಳು ಪ್ರಯತ್ನಿಸುತ್ತಿದ್ದಾರಾದರೂ ಅವರಿಗೆ ಅದು ಸಾಧ್ಯವಾಗುತ್ತಿಲ್ಲ.

ನರೇಂದ್ರ ಮೋದಿಯವರ ಮೇಲೆ ಈ ಪರಿ ವಾಗ್ಬಾಣಗಳು ಏಕೆ? ಅವರು ಉತ್ತಮ ಆಡಳಿತಗಾರನಾದರೂ 'ನಿರಂಕುಶ' ವ್ಯಕ್ತಿ ಎಂದೆಲ್ಲ ಜರೆಯುತ್ತಿರುವುದರ ಹಿಂದಿನ ಪ್ರಚೋದನೆ ಏನು ಎಂಬುದನ್ನು ವಿವರಿಸಿದ್ದಾರೆ ರಾಜೀವ್ ಮಂತ್ರಿ ಮತ್ತು ಹರ್ಷ ಗುಪ್ತ...
ನೆಹರು ಅವರ ಯೋಚನೆಗಳು ಅವರ ಸಾವಿನವರೆಗೂ ಭಾರತದಲ್ಲಿ ಸೈದ್ಧಾಂತಿಕ ಚರ್ಚೆಗಳಿಗೆ ದಾರಿಮಾಡಿಕೊಟ್ಟಿದ್ದವು. 'ನೆಹ್ರೂವಿಯನ್‌' ಎಂದು ಕರೆಸಿಕೊಂಡ ಅವರ ಸಿದ್ಧಾಂತದಲ್ಲಿ, ಆರ್ಥಿಕತೆಯ ಮೇಲೆ ಸರ್ಕಾರದ ಹಿಡಿತ, ವಿದೇಶಾಂಗ ವ್ಯವಹಾರಗಳಲ್ಲಿ ಆದರ್ಶವಾದಿ ನಿಲುವು ಮತ್ತು ದೇಶೀಯ ನೀತಿಗಳಲ್ಲಿ ಆಯ್ದ ಕೋಮುಗಳಿಗೆ ವಿಶೇಷ ಮನ್ನಣೆ ಕೊಡುವುದನ್ನು ಒಳಗೊಂಡಿತ್ತು.
ಹಾಗಂತ 1950ರ ಸಮಯದಲ್ಲಿ ಕಾಂಗ್ರೆಸ್ ಏಕವ್ಯಕ್ತಿಯ ಅಥವಾ ಏಕ ಸಿದ್ಧಾಂತದ ಪಕ್ಷವಾಗೇನೂ ಇರಲಿಲ್ಲ. ಅದರಲ್ಲಿ ಪ್ರಬಲ ಬಲಪಂಥೀಯ ವಿಚಾರಧಾರೆಯುಳ್ಳ ವ್ಯಕ್ತಿಗಳೂ ಇದ್ದರು. ಆದರೆ ರಾಜಕೀಯ ವ್ಯವಸ್ಥೆಯಾಗಿ ಅದರ ಅವಸಾನ ಶುರುವಾಗಿದ್ದು, 1959ರಲ್ಲಿ ನೆಹರು ಅವರು ಪರಿಚ್ಛೇದ 356ರನ್ನು ಕಾಲಲ್ಲಿ ತುಳಿದು ಕೇರಳದ ಚುನಾಯಿತ ಸರ್ಕಾರವನ್ನು  ಅನೂರ್ಜಿತಗೊಳಿಸಿದಾಗ. ಒಂದು ವೇಳೆ ನೆಹರು ಅಂಥ ನಿಲುವನ್ನು ತಾಳಿರಲಿಕ್ಕಿಲ್ಲ ಎಂದು ವಾದಿಸಿದರೂ, ಅವರ ಮಗಳು ಅಂದರೆ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾಗಾಂಧಿ ಈ ಕೆಲಸಕ್ಕೆ ಮುಂದಾಗಿರಬಹುದು. ಇಂಥ ಸ್ಟಾಲಿನ್ ಪ್ರಣೀತ ಸಂಸ್ಕೃತಿಗೆ ಶುರುವಾತು ಕೊಟ್ಟದ್ದು ನೆಹರು. ಅವರ ನಂತರ ಬಂದ ಪ್ರಧಾನಿಗಳೆಲ್ಲಾ ಇದನ್ನು ಮುಂದುವರಿಸಿದರು. ಅದರಲ್ಲೂ ಮನಮೋಹನ್ ಸಿಂಗ್ ಈ ಸಂಸ್ಕೃತಿಯನ್ನೂ ಉತ್ತುಂಗಕ್ಕೊಯ್ದು ನಿಲ್ಲಿಸಿದ್ದಾರೆ. ಆಂತರಿಕ ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುವ ಇಂದಿರಾರ ಕೆಲಸವನ್ನು ಮುಂದೆ ರಾಜೀವ್ ಗಾಂಧಿ ಮುಂದುವರಿಸಿಕೊಂಡು ಹೋದರು. ಈಗ ಅವರ ಪತ್ನಿ ಸೋನಿಯಾ ಗಾಂಧಿ ಅಷ್ಟೇ  ನಿಷ್ಠೆಯಿಂದ ಆ ಕೆಲಸವನ್ನು ಮಾಡುತ್ತಿದ್ದಾರೆ.
1955ರಲ್ಲಿ ನೆಹರು ಮುಸಲ್ಮಾನರಿಗಾಗಿಯೇ ಪ್ರತ್ಯೇಕ ಖಾಸಗಿ ಕಾನೂನುಗಳನ್ನು ತರಬೇಕು ಎಂದು ಹೇಳಿದಾಗ ಅದನ್ನು ಆಚಾರ್ಯ ಕೃಪಲಾನಿ ಪ್ರಬಲವಾಗಿ ಖಂಡಿಸಿ "ನೆಹರೂ ಕೋಮುವಾದಿ" ಎಂದು ಸಂಸತ್ತಿನಲ್ಲಿಯೇ ಜರಿದಿದ್ದರು. ಇನ್ನು 1959ರಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ಸಿ. ರಾಜಗೋಪಾಲಾಚಾರಿ ಅವರು 'ಸ್ವತಂತ್ರ ಪಾರ್ಟಿ'ಯನ್ನು ಹುಟ್ಟುಹಾಕಿದರು. ಎಡಪಂಥೀಯ ವಿಚಾರಧಾರೆಯನ್ನು ಮೈಗೂಡಿಸಿಕೊಂಡ ಕಾಂಗ್ರೆಸ್ ಅನ್ನು ಅವರು ತೀವ್ರವಾಗಿ ಖಂಡಿಸತೊಡಗಿದರು. ಇದೇ ಕಾರಣಕ್ಕಾಗಿ 'ಸ್ವತಂತ್ರ ಪಾರ್ಟಿ'ಯನ್ನು ದುರ್ಬಲಗೊಳಿಸಲು ಇಂದಿರಾ, ಉದ್ಯಮಗಳನ್ನು ರಾಷ್ಟ್ರೀಕರಣಗೊಳಿಸಿದರು.  ಆ ಮೂಲಕ ಆ ಪಕ್ಷಕ್ಕೆ ಆರ್ಥಿಕ ಬೆಂಬಲ ತಗ್ಗಿಹೋಗುವಂತೆ ನೋಡಿಕೊಂಡರು.  
ನೆಹರು ಅವರ ಪ್ರಬಲ ಸೈದ್ಧಾಂತಿಕ ವಿರೋಧಿಯಾಗಿದ್ದವರು ಸರ್ದಾರ್ ವಲ್ಲಭಭಾಯಿ ಪಟೇಲರು. ಅವರ ಮರಣಾನಂತರ ಭಾರತ ವೇಗವಾಗಿ 'ಎಡ' ಮಗ್ಗುಲಿಗೆ ಹೊಳ್ಳತೊಡಗಿತು. ಪ್ರಮುಖ ಕ್ಷೇತ್ರಗಳ ವಿಚಾರದಲ್ಲಿ ನೆಹರು ಮತ್ತು ಪಟೇಲರ ನಡುವೆ ಬಹಳ ಭಿನ್ನತೆಯಿತ್ತು. ನೆಹರೂರ ತೀಕ್ಷ್ಣ ವಿರೋಧದ ನಡುವೆಯೂ ಪಟೇಲರು, ಮುಸ್ಲಿಂ ದಾಳಿಕೋರರಿಂದ ಶತಮಾನಗಳವರೆಗೆ ದಾಳಿಗೊಳಗಾಗಿದ್ದ ಸೋಮನಾಥ ಮಂದಿರವನ್ನು ನಿರ್ಮಿಸಿದರು. ಇದಕ್ಕಾಗಿ ಅವರು ಆ ಜಾಗದಲ್ಲಿದ್ದ ಮಸೀದಿಯೊಂದನ್ನು ಸ್ಥಳಾಂತರಿಸಿದರು. ಮಹಾತ್ಮಾ ಗಾಂಧಿ ಪಟೇಲರ ಈ ನಡೆಗೆ ಪ್ರೋತ್ಸಾಹ ನೀಡಿದರಾದರೂ, ಮಂದಿರ ನಿರ್ಮಾಣಕ್ಕೆ ಸಾರ್ವಜನಿಕರ ಹಣ ಖರ್ಚು ಮಾಡಬಾರದೆಂದು ತಾಕೀತು ಮಾಡಿದರು. ಇನ್ನು ವಿದೇಶಾಂಗ ವ್ಯವಹಾರಗಳ ವಿಷಯದಲ್ಲೂ ಈ ಭಿನ್ನತೆ ಸ್ಪಷ್ಟವಾಗಿ ಅನಾವರಣಗೊಂಡಿತ್ತು. ಚೀನಾ ಟಿಬೆಟ್ ಅನ್ನು ಆಕ್ರಮಿಸಿದಾಗ, ಟಿಬೆಟ್‌ಗೆ ಸಹಾಯಮಾಡಬೇಕು ಎಂಬುದು ಪಟೇಲರ ಇಚ್ಛೆಯಾಗಿತ್ತು. ಆದರೆ ನೆಹರೂ ಸುಮ್ಮನಾಗಿಬಿಟ್ಟರು. ಕಾಶ್ಮೀರದ ವಿಷಯದಲ್ಲೂ ಅಷ್ಟೆ, ಪಟೇಲರ ಮಾತನ್ನು ಕೇಳದ ನೆಹರು ಅನವಶ್ಯಕವಾಗಿ ವಿಶ್ವಸಂಸ್ಥೆಯನ್ನು ಮಧ್ಯೆ ಎಳೆದುತಂದು ಅದನ್ನು ಅಂತಾರಾಷ್ಟ್ರೀಯ ವಿವಾದ ಮಾಡಿಬಿಟ್ಟರು.  
ಯೋಜನಾ ಆಯೋಗವನ್ನು ಸ್ಥಾಪಿಸಬೇಕು ಎಂಬ ನೆಹರುರ ಯೋಚನೆಗೆ ಪಟೇಲರ ಆಕ್ಷೇಪಣೆಯಿತ್ತು. ಕೊನೆಗೂ ಅದು ಅಸ್ತಿತ್ವಕ್ಕೆ ಬಂದಿತಾದರೂ, ಪಟೇಲರ ಒತ್ತಾಯದಿಂದಲೇ ಅದರ ಪಾತ್ರವನ್ನು ಕೇವಲ 'ಸಲಹೆ' ಕೊಡುವುದಕ್ಕಷ್ಟೇ ಸೀಮಿತಗೊಳಿಸಲಾಯಿತು. ಆ ಆಯೋಗದ ಮುಖ್ಯ ಉದ್ದೇಶ "ಆರ್ಥಿಕ ಚಟುವಟಿಕೆ ಅಥವಾ ಉತ್ಪಾದನೆಯಲ್ಲಿ ಖಾಸಗಿ ವ್ಯಕ್ತಿ ಅಥವಾ ಉದ್ಯಮಕ್ಕೆ ಲಾಭವಾಗುವುದನ್ನು ತಡೆಯುವುದು" ಎಂಬುದು ನೆಹರೂ ತರ್ಕವಾಗಿತ್ತಾದರೂ, ಪಟೇಲರು ಆ ನಿಯಮಗಳನ್ನೆಲ್ಲ ತೆಗೆದುಹಾಕಿದರು.   
ಇನ್ನು ಜಮೀನ್ದಾರಿ ಪದ್ಧತಿಯ ನಿರ್ಮೂಲನೆಯ ವಿಚಾರದಲ್ಲೂ ಅವರಿಬ್ಬರ ನಡುವೆ ಭೇದಗಳಿದ್ದವು. ಸರ್ಕಾರ ವಶಪಡಿಸಿಕೊಂಡ ಭೂಮಿಗೆ ಪ್ರತಿಯಾಗಿ, ಮಾರುಕಟ್ಟೆಯ ಬೆಲೆ ಮತ್ತು ಹೆಚ್ಚುವರಿ 15 ಪ್ರತಿಶತ ಪರಿಹಾರವನ್ನು ಫಲಾನುಭವಿಗಳಿಗೆ ಕೊಡಬೇಕು ಎಂದು ಪಟೇಲ್ ಹೇಳಿದರೆ, ನೆಹರೂ ಅವರು ಪರಿಹಾರ ಕೊಡುವ ವಿಚಾರಕ್ಕೇ ವಿರೋಧಿಯಾಗಿದ್ದರು. 1950ರಲ್ಲಿ ಪಟೇಲ್, ರಾಜೇಂದ್ರ ಪ್ರಸಾದ್ ಅವರನ್ನು ಭಾರತದ ರಾಷ್ಟ್ರಪತಿಯಾಗಿ ಮತ್ತು ಪುರುಷೋತ್ತಮ ದಾಸ್ ಟಂಡನ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಬೆಂಬಲಿಸಿದ್ದು ಕೇವಲ ಸೈದ್ಧಾಂತಿಕ ಕಾರಣದಿಂದಲ್ಲ, ಬದಲಾಗಿ ಪ್ರತಿಬಾರಿಯೂ ನೆಹರೂರ ತಾಳಕ್ಕೆ ಪಕ್ಷ ಕುಣಿಯುವುದಿಲ್ಲ ಎನ್ನುವುದನ್ನು ತೋರಿಸುವುದಕ್ಕಾಗಿ! ನೆಹರೂರ ಸಿದ್ಧಾಂತಗಳಿಗೆ ರಾಜಕೀಯ ಶಕ್ತಿಯನ್ನು ಬಳಸಿ ಸರಿಯಾದ ಉತ್ತರ ನೀಡಿದ್ದು ಪಟೇಲರು ಮಾತ್ರ. ಅವರ ನಿಧನದಿಂದಾಗಿ ಕಾಂಗ್ರೆಸ್ ತನ್ನ ಪ್ರಬಲ ಬಲಪಂಥೀಯ ಸ್ತಂಭವೊಂದನ್ನು ಕಳೆದುಕೊಂಡಿತು.   
ಸ್ವಾಮಿ ವಿವೇಕಾನಂದ ಅವರ ವಿಷಯದಲ್ಲಿ ಹೇಗೆ ಈ ಎಡಪಂಥೀಯ ಬುದ್ಧಿಜೀವಿಗಳು ಗೊಂದಲದಲ್ಲಿದ್ದಾರೋ ಅದೇ ರೀತಿಯಲ್ಲೇ ಪಟೇಲರ ವಿಷಯದಲ್ಲೂ ಅವರಿಗೆ ಗೊಂದಲವಿದೆ. ಪಟೇಲರ ವಿಚಾರಗಳನ್ನು ತಮ್ಮದೇ ಆದ ರೀತಿಯಲ್ಲಿ ಬಣ್ಣಿಸಬೇಕೋ ಅಥವಾ ತಮ್ಮ ದಾಳಿಯನ್ನು ಇನ್ನಷ್ಟು ತೀಕ್ಷ್ಣಗೊಳಿಸಿ ಬಲಪಂಥೀಯರ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಬೇಕೋ ಎಂಬುದು ಅವರಿಗೆ ತಿಳಿಯುತ್ತಿಲ್ಲ. ಪಟೇಲ್ ಮತ್ತು ವಿವೇಕಾನಂದರಂಥ ಶೇಷ್ಠ ವ್ಯಕ್ತಿತ್ವಗಳನ್ನು ತಮ್ಮ ರೀತಿಯಲ್ಲಿ ಬಣ್ಣಿಸಬೇಕು ಎಂಬ ತೀರದ ತುಡಿತ ಅವರಲ್ಲಿದ್ದೇ ಇದೆ. ಆದರೆ ಇದೇ ಸಮಯದಲ್ಲಿ  ಪಟೇಲ್ ಮತ್ತು ವಿವೇಕಾನಂದರ ಪ್ರಗತಿಪರ ದೃಷ್ಟಿಕೋನವನ್ನು, ತಮ್ಮ  'ಪ್ರಗತಿಪರ'(ಎಂದು ಕರೆದುಕೊಳ್ಳುವ) ಸಿದ್ಧಾಂತದೊಂದಿಗೆ ಸಮನ್ವಯಗೊಳಿಸಲು ಅವರುಗಳಿಗೆ ಸಾಧ್ಯವಾಗುತ್ತಿಲ್ಲ.
ಇಂಥ ರಾಜಕೀಯ-ಐತಿಹಾಸಿಕ ತಿಕ್ಕಾಟದ ಸಮಯದಲ್ಲೇ ಮೋದಿಯವರ ಆಗಮನವಾಗಿದೆ. ಅವರ ಆಡಳಿತದ ಆರ್ಥಿಕ ಫಲಿತಾಂಶಗಳ ಬಗ್ಗೆ ಅತಿ ಎನಿಸುವಷ್ಟು ಚರ್ಚೆಮಾಡಲಾಗಿದೆ. ಕೆಲವು ಪತ್ರಿಕೆಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಅವರ ಯಶಸ್ಸನ್ನು ಅಲ್ಲಗಳೆಯುವ ಪ್ರಯತ್ನ ಮಾಡಿ, ಕೊನೆಗೆ ಹೇಳಿಕೆಯಿಂದ ಹಿಂದೆ ಸರಿದ ಉದಾಹರಣೆಗಳಿವೆ. ಗುಜರಾತ್‌ನ ಆರ್ಥಿಕ ಪ್ರಗತಿಗೆ ಮೋದಿ ಆಡಳಿತ ಗಟ್ಟಿ ಮೆಟ್ಟಿಲಾಗಿದೆ ಎನ್ನುವುದನ್ನು ಬುದ್ಧಿವಂತರ್ಯಾರೂ ಅಲ್ಲಗಳೆಯಲಾರರು.
"ಮೋದಿ ಉತ್ತಮ ಆಡಳಿತಗಾರರಿರಬಹುದು. ಆದರೆ ಅವರದ್ದು 'ನಿರಂಕುಶ' ಆಡಳಿತ" ಎನ್ನುವುದು ಟೀಕಾಕಾರ ವಾದ. ಎಲ್ಲದಕ್ಕಿಂತಲೂ ಹೆಚ್ಚಾಗಿ- ಮೋದಿ 'ಜಾತ್ಯತೀತ' ನಾಯಕನಲ್ಲ, ಅವರು ಐಃಈಔ್ಖಖಐಗಊ ವ್ಯಕ್ತಿಯಲ್ಲ (ಎಲ್ಲರನ್ನೂ ಒಳಗೊಂಡ) ಎಂದು ಬಿಂಬಿಸಲಾಗುತ್ತಿದೆ.
ಇದು ನಿಜಕ್ಕೂ ಅರ್ಥಹೀನ ವಾದ. ಈ INCLUSIVE ಎಂಬ ರೋಗ ತಗುಲಿರುವ ಕೇಂದ್ರ ಸರ್ಕಾರ ನಿರ್ದಿಷ್ಟ ಕೋಮಿನ ಹೆಸರಿನಲ್ಲಿ ಬೇಜವಾಬ್ದಾರಿಯುತವಾಗಿ ಹಣ ಖರ್ಚು ಮಾಡುತ್ತಿದೆ. ಮತ್ತು ಇದೇ ಪದವನ್ನು, ಸಮಾಜವಾದದ ಬೆಂಬಲಿಗರೂ ಗಿಳಿಗಳಂತೆ ಅನುಕರಿಸುತ್ತಿದ್ದಾರೆ. ಇನ್ನು ತಮ್ಮನ್ನು ತಾವು "ಜಾತ್ಯತೀತ ಚಿಂತಾಮಣಿ" ಎಂದು ಕರೆದುಕೊಳ್ಳುವ ನಿತೀಶ್ ಕುಮಾರ್ ಕೂಡ ರಾಮ್‌ಮನೋಹರ್ ಲೋಹಿಯಾರ ಇದೇ ಸಮಾಜವಾದಿ ಸಿದ್ಧಾಂತದ ಗಿಣಿಯೇ!
ನಿತೀಶ್ ಕುಮಾರ್ ಅವರ ಸರ್ಕಾರದ 75 ಪ್ರತಿಶತ ಆದಾಯ ಬರುವುದು ದೆಹಲಿಯಿಂದ. ಇಷ್ಟು ಸಿಕ್ಕರೂ 'ಇನ್ನಷ್ಟು ಬೇಕು' ಎನ್ನುವ ಆಸೆ ಅವರಿಗೆ. ಅವರ 'ಬಿಹಾರ ಮಾದರಿ' ಆಡಳಿತ ಉಳಿದುಕೊಂಡು ಬಂದಿದ್ದು ಭಾರತದ ವಿವಿಧ ರಾಜ್ಯದ ಜನರ ತೆರಿಗೆ ಹಣದಿಂದ!  ದೆಹಲಿಯಿಂದ ಇನ್ನಷ್ಟು ಹಣ ಗಿಟ್ಟಿಸಿಕೊಳ್ಳಲು ನಿತೀಶ್ ಯುಪಿಎಗೆ ರಾಜಕೀಯ ಬೆಂಬಲ ಕೊಡುವುದಕ್ಕೆ ಮುಂದಾಗುತ್ತಿದ್ದಾರೆ. ಇಂಥ ಅನಿಷ್ಠ ರಾಜಕೀಯ ಅತಂತ್ರವಾದದ್ದು ಮತ್ತು ಅನಗತ್ಯವಾದದ್ದು. ಇದರಿಂದಾಗಿ ಬಡವರು ಇನ್ನಷ್ಟು ಹೊಡೆತ ತಿನ್ನುವುದರ ಜೊತೆಗೆ ರಾಜ್ಯ ಸರ್ಕಾರಗಳೆಲ್ಲವೂ ಕೇಂದ್ರದ ಅಧೀನದಲ್ಲಿರುವಂತಾಗುತ್ತದೆ, ಭಾರತದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ನಿತೀಶ್ ಕುಮಾರ್, 'ಎಲ್ಲರ ಹಣದಲ್ಲಿ ಎಲ್ಲರೂ ಸುಖವಾಗಿರಬಹುದು' ಎಂಬ ಭ್ರಮೆಗೆ ಬಿದ್ದಂತಿದೆ.
ಇನ್ನೊಂದೆಡೆ ನರೇಂದ್ರ ಮೋದಿಯವರು ಅಟಲ್ ಬಿಹಾರಿ ವಾಜಪೇಯಿಯವರಂತೆ "ಬಿಸಿನೆಸ್‌ಗಳಲ್ಲಿ ಮೂಗು
ತೂರಿಸುವ ಕೆಲಸವನ್ನು ಸರ್ಕಾರ ಮಾಡಬಾರದು" ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಸರ್ಕಾರದ ಕಾರ್ಯವೈಖರಿಯ ಬಗ್ಗೆ ಈ ರೀತಿ ಬಹಿರಂಗವಾಗಿ ಮಾತನಾಡುತ್ತಿರುವ ನಾಯಕ ನರೇಂದ್ರ ಮೋದಿಯೊಬ್ಬರೆ.  ಭಾರತದಲ್ಲಿ ಆರ್ಥಿಕ ಏಳಿಗೆ ಜೋರಾಗಿದ್ದು 1991ರಿಂದ. ಏಕೆಂದರೆ ಆಗ ಸರ್ಕಾರ ಕೆಲವು ಖಾಸಗಿ ಉದ್ಯಮಗಳಲ್ಲಿ ಮೂಗು ತೂರಿಸುವ ತನ್ನ ಕೆಲಸವನ್ನು ನಿಲ್ಲಿಸಿತ್ತು. ಭಾರತದ ಆರ್ಥಿಕತೆಗೆ ಹೊಸ ದಿಕ್ಕು ತೋರಿಸಿದ್ದೇ ಆರ್ಥಿಕ ಉದಾರೀಕರಣ. ಈ ಸಮಯದಲ್ಲಿ ನಮಗೆ ಹೆಚ್ಚು ಅಗತ್ಯವಿರುವುದೂ ಅದರದ್ದೇ. ಸಂಯುಕ್ತ ಸಂಸ್ಥಾನ ಮತ್ತು ವಿಕೇಂದ್ರೀಕರಣದ ಪರವಾಗಿ ಮೋದಿ ಸ್ಪಷ್ಟವಾಗಿ ಮಾತನಾಡುತ್ತಿದ್ದಾರೆ. ಕಲ್ಯಾಣ ಯೋಜನೆಗಳನ್ನು ರೂಪಿಸುವಲ್ಲಿ ರಾಜ್ಯ ಸರ್ಕಾರಗಳಿಗೆ ಸ್ವಾತಂತ್ರ್ಯವಿರಬೇಕು ಎಂದವರು ಹೇಳುತ್ತಿದ್ದಾರೆ.
ದುರ್ದೈವವೆಂದರೆ ಭಾರತದಲ್ಲಿ ಧಾರ್ಮಿಕ ಆಧಾರದ ಮೇಲೆ ರೂಪಿಸಲಾದ ಯೋಜನೆಗಳನ್ನು ಬೆಂಬಲಿಸದ ವ್ಯಕ್ತಿಯನ್ನು ಕೋಮುವಾದಿ ಎಂದು ಜರಿಯಲಾಗುತ್ತದೆ. ಇದು ಜಾತ್ಯತೀತತೆಗೆ ಕೊಡಲಾಗಿರುವ ವಿಕೃತ ರೂಪ. ಒಂದು ವೇಳೆ ಬ್ರಿಟನ್ ಅಥವಾ ಅಮೆರಿಕದ ಪ್ರಧಾನಿಗಳು, ತಮ್ಮ ರಾಷ್ಟ್ರೀಯ ಸಂಪತ್ತಿನಲ್ಲಿ ನಿರ್ದಿಷ್ಟ ಕೋಮಿಗೇ ಮೊದಲ ಆದ್ಯತೆ ಎಂದರೆ ಅವರ ಪರಿಸ್ಥಿತಿಯೇನಾಗಬಹುದು? ಆದರೂ ನಮ್ಮ ಭಾರತದಲ್ಲಿ ಹೀಗೆ ಹೇಳಲಿಕ್ಕೆ ಸಾಧ್ಯ. ಮನಮೋಹನ್ ಸಿಂಗ್ ಅವರು ಮುಸಲ್ಮಾನರಿಗೆ ಈ ರಾಷ್ಟ್ರದ ಸಂಪತ್ತಿನಲ್ಲಿ ಮೊದಲ ಹಕ್ಕಿದೆ ಎಂದು ಹೇಳುತ್ತಾರೆ!  ಈ ಸೆಕ್ಯುಲರ್ ರಾಜಕಾರಣದ ಅಸಹ್ಯ ಮುಖ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕಾಣಿಸಿಕೊಳ್ಳತೊಡಗಿದೆ. "ಬಾಟ್ಲಾ ಹೌಸ್ ಎನ್ಕೌಂಟರ್‌ನಲ್ಲಿ ಮೃತಪಟ್ಟವರ(ಉಗ್ರರ) ಫೋಟೋ ನೋಡಿ ಸೋನಿಯಾ ಗಾಂಧಿ ಬಿಕ್ಕಿ ಬಿಕ್ಕಿ ಅತ್ತರು" ಎಂದು ಸಲ್ಮಾನ್ ಖುರ್ಷಿದ್ ಹೇಳಿದರೆ, ಕೋರ್ಟ್ ತೀರ್ಪು ಬರುವುದಕ್ಕಿಂತ ಮುಂಚೆಯೇ ದಿಗ್ವಿಜಯ್ ಸಿಂಗ್ "ಅಲ್ಲಿ ನಡೆದದ್ದೇ ಹುಸಿ ಎನ್ಕೌಂಟರ್‌" ಎನ್ನುತ್ತಾರೆ! ಇವರೆಲ್ಲ ಉಗ್ರರಿಗಾಗಿ ಕಣ್ಣೀರುಹಾಕಿದರೇ ಹೊರತು ಅವರಿಂದ ಹತರಾದ ಪೊಲೀಸ್ ಅಧಿಕಾರಿ ಮೋಹನ್ ಚಾಂದ್ ಶರ್ಮಾರಿಗಲ್ಲ. ಇಷ್ಟಕ್ಕೆ ನಿಲ್ಲದ ಕಾಂಗ್ರೆಸ್ ಮುಸ್ಲಿಂ ಯುವಕರಿಗಾಗಿಯೇ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದೂ ಬಡಬಡಿಸತೊಡಗಿದೆ.
ದೇಶದ ವಿಭಜನೆಯ ನಂತರ ದೆಹಲಿಯ ಹಲವು ಮುಸಲ್ಮಾನರು ಪಾಕಿಸ್ತಾನಕ್ಕೆ ಹೊರಟುಹೋದಾಗ ನೆಹರು ಮತ್ತು ಮೌಲಾನಾ ಆಜಾದ್ ಖಾಲಿಯಾದ ಆ ಮನೆಗಳನ್ನೆಲ್ಲ ಕೇವಲ ಮುಸ್ಲಿಮರಿಗೆ ಕೊಡಬೇಕು ಎನ್ನತೊಡಗಿದರು. ಆಗ ಪಟೇಲರು,"ಯಾವ ಜಾತ್ಯತೀತ ಸರ್ಕಾರವೂ ಕೂಡ ಈ ರೀತಿಯ ಕೆಲಸಕ್ಕೆ ಮುಂದಾಗುವುದಿಲ್ಲ" ಎಂದು ಅವರಿಬ್ಬರನ್ನೂ ಜಾಡಿಸಿದ್ದರು. ಒಂದು ವೇಳೆ ಸರ್ದಾರ್ ವಲ್ಲಭಭಾಯಿ ಪಟೇಲ್ ಬದುಕಿದ್ದಿದ್ದರೆ, ಈ ಜಾತ್ಯತೀತತೆಯ ಕಾವಲುಗಾರರು ನರೇಂದ್ರ ಮೋದಿಯವರಂತೆ ಅವರನ್ನೂ ಕೂಡ ಕೋಮುವಾದಿ ಎಂದು ಹೆಸರಿಸುತ್ತಿದ್ದರೇನೋ? ಪಟೇಲರಂತೆ, ಮೋದಿಗೂ ಕೂಡ ಈಗ ಫ್ಯಾಸಿಸ್ಟ್, ಕಮ್ಯುನಿಸ್ಟ್ ಮತ್ತು ಬಂಡವಾಳಶಾಹೀ ಎಂಬ ಟ್ಯಾಗ್ ಹಚ್ಚಲಾಗಿದೆ. 'ನೆಹರೂವಿಯನ್ ಮನಸ್ಥಿತಿ'ಯಿಂದಾಗಿ ಭಾರತಕ್ಕೆ ಹಿಂದೆಂದೂ ಇಷ್ಟೊಂದು ಅಪಾಯ ಎದುರಾಗಿರಲಿಲ್ಲ. ಇಂಥ ಮನಸ್ಥಿತಿಯನ್ನು ಬದುಕುಳಿಸಲು ಕೆಲವರು ಯಾವ ಮಟ್ಟಕ್ಕಾದರೂ ಇಳಿಯಬಲ್ಲರು ಎನ್ನುವುದು ನೆನಪಿರಲಿ.

(ರಾಜೀವ್ ಮಂತ್ರಿ ಮತ್ತು ಹರ್ಷ್ ಗುಪ್ತ, ಇಂಡಿಯಾ ಎಂಟರ್‌ಪ್ರೈಸ್ ಕೌನ್ಸಿಲ್‌ನ ಸಹ ಸಂಸ್ಥಾಪಕರು)

- ರಾಜೀವ್ ಮಂತ್ರಿ, ಲೇಖಕ
rajeev.mantri@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement