ಅಂಕಣಗಳು

ಎಡವಟ್ಟು ಸಹಜವೆಂದು ಎಡವುತ್ತಲೇ ಇರಬಾರದು

ಟಿವಿ ಚಾನೆಲ್‌ಗಳು ಬಂದ ಬಳಿಕ ಸಾವು- ನೋವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುತ್ತವೆ..

ಟಿವಿ ಚಾನೆಲ್‌ಗಳು ಬಂದ ಬಳಿಕ ಸಾವು-ನೋವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುತ್ತವೆ ಇಳಿಯುತ್ತಿರುತ್ತವೆ. ಟಿವಿಯಲ್ಲಿ ಒಂದು ಅಡ್ವಾಂಟೇಜ್ ಇದೆ. ಸತ್ತವರ ಸಂಖ್ಯೆ ಸಾವಿರ ಎಂದು ಬರೆದು, ಮರುಕ್ಷಣವೇ ಅದನ್ನು ಐವತ್ತಕ್ಕೋ, ಅರವತ್ತಕ್ಕೋ ಇಳಿಸಿಬಿಡಬಹುದು

ಇದು ನಾವು ನಿತ್ಯವೂ ಎದುರಿಸುವ ಸಮಸ್ಯೆ. ಆಗಾಗ ನಮ್ಮ ಓದುಗರು ಕೇಳುವ ಪ್ರಶ್ನೆ ಕೂಡ ಹೌದು. 'ನಿಮ್ಮ ಪತ್ರಿಕೆಯಲ್ಲಿ ನೀಡಿದ ಸತ್ತವರ ಸಂಖ್ಯೆಗೂ, ಬೇರೆ ಪತ್ರಿಕೆಗಳಲ್ಲಿ ನೀಡಿದ ಸಂಖ್ಯೆಗೂ ವ್ಯತ್ಯಾಸವೇಕೆ? ನೀವು ನೀಡಿದ ಸಂಖ್ಯೆ ಸರಿಯೋ? ಅವು ನೀಡಿದ್ದು ಸರಿಯೋ? ಅಂತೂ ಯಾರನ್ನು ನಂಬಬೇಕು?' ಎಂದು ನಮ್ಮ ಓದುಗರು ಆಗಾಗ ಕೇಳುತ್ತಾರೆ. ನಾವು ನೀಡಿದ ಸಂಖ್ಯೆ ತಪ್ಪು ಎಂದು ಯಾರೂ ಹೇಳುವುದಿಲ್ಲ. ಆದರೆ ಅದೇ ಸರಿ ಎಂದು ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ನಾವು ಇರುವುದಿಲ್ಲ. ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ದೊಡ್ಡ ದುರಂತ ಘಟಿಸಿದಾಗ, ಎಲ್ಲ ಪತ್ರಕರ್ತರಿಗೂ ಎದುರಾಗುವ ಸಮಸ್ಯೆ ಅಂದ್ರೆ ಸಾವಿನ ಸಂಖ್ಯೆ. ಎಲ್ಲರೂ ಎಡವುದು ಸಹ ಇಲ್ಲಿಯೇ. ಭೂಕಂಪ, ಸುನಾಮಿಯಂಥ ದುರಂತಗಳು ಸಂಭವಿಸಿದಾಗ ಸತ್ತವರ ಸಂಖ್ಯೆಯನ್ನು, ಆಸ್ತಿ-ಪಾಸ್ತಿ ನಷ್ಟದ ಮೊತ್ತವನ್ನು ನಿಖರವಾಗಿ ಹೇಳುವುದು ಬಹಳ ಕಷ್ಟ.
1923ರಲ್ಲಿ ಜಪಾನಿನ ಟೋಕಿಯೋದಲ್ಲಿ ಭಾರೀ ಭೂಕಂಪ ಸಂಭವಿಸಿತು. ಆ ಘಟನೆಯನ್ನು ಅಂದಿನ ಪತ್ರಿಕೆಗಳು ಹೇಗೆ ವರದಿ ಮಾಡಿದ್ದವು ಎಂಬುದನ್ನು ಕೆಲ ತಿಂಗಳ ಹಿಂದೆ ಅಮೆರಿಕದ 'ದಿ ನ್ಯೂಯಾರ್ಕ್ ಟೈಮ್ಸ್‌' ಪತ್ರಿಕೆ ವಿಶ್ಲೇಷಣಾತ್ಮಕವಾಗಿ ಚರ್ಚಿಸಿತು. ಪತ್ರಿಕೆಗಳು ಪ್ರಕಟಿಸಿದ ಸಾವಿನ ಸಂಖ್ಯೆ ಭೀತಿ ಹುಟ್ಟಿಸುವಂತಿದ್ದವು. ಎಷ್ಟು ಜನ ಸತ್ತಿದ್ದಾರೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲದಂಥ ದುರಂತ ಅದಾಗಿತ್ತು. ಆದರೆ ಒಂದೊಂದು ಪತ್ರಿಕೆಯಲ್ಲಿ ಒಂದೊಂದು ಅಂಕಿ-ಸಂಖ್ಯೆ. ವಿಚಿತ್ರ ಅಂದರೆ, ಒಂದು ಪತ್ರಿಕೆ ಸತ್ತವರ ಸಂಖ್ಯೆ ಹತ್ತು ಸಾವಿರ ಅಂದ್ರೆ, ಮತ್ತೊಂದು ಪತ್ರಿಕೆ ಎರಡು ಲಕ್ಷ ಎಂದು ಪ್ರಕಟಿಸಿತ್ತು. ಇನ್ನೊಂದು ಪತ್ರಿಕೆ ಐದು ಲಕ್ಷ ಎಂದಿತ್ತು. ಅಮೆರಿಕದ ಹಲವು ಪತ್ರಿಕೆಗಳು ಎಂಟು ಲಕ್ಷ, ಹತ್ತು ಲಕ್ಷ ಎಂದೆಲ್ಲ ಮನಸೋ ಇಚ್ಛೆ ಬರೆದವು.
ಸಾವಿನ ಸಂಖ್ಯೆಗಷ್ಟೇ ಗೊಂದಲ ಸೀಮಿತವಾಗಿರಲಿಲ್ಲ. ಟೋಕಿಯೋದಲ್ಲಿ ಸಂಭವಿಸಿದ ಭೂಕಂಪದಿಂದ ಮೌಂಟ್ ಫುಜಿಯಲ್ಲಿ ಜ್ವಾಲಾಮುಖಿ ಉಕ್ಕಿದೆಯೆಂದೂ, ಸಗಾಮಿ ದ್ವೀಪ ಸಂಪೂರ್ಣ ಮುಳುಗಿ ಹೋಗಿದೆಯೆಂದೂ, ಭೂಕಂಪ ಸಂತ್ರಸ್ತರು ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಿಭಟನೆ ನಡೆಸಿದರೆಂದೂ, ಪರಿಣಾಮ, ಜಪಾನಿ ಪ್ರಧಾನಿ ಹತ್ಯೆಯಾಗಿದೆಯೆಂದೂ ಪತ್ರಿಕೆಗಳು ವರದಿ ಮಾಡಿದವು. ವಾಸ್ತವವೆಂದರೆ, ಈ ಪೈಕಿ ಯಾವುದೂ ನಿಜವಾಗಿರಲಿಲ್ಲ.
ಹಾಗೆಂದು ಆಗ ಇಪ್ಪತ್ನಾಲ್ಕು ಗಂಟೆ ಅರಚುವ ಟಿವಿ ಚಾನೆಲ್‌ಗಳಿರಲಿಲ್ಲ. ಕ್ಷಣಕ್ಷಣದ ಸುದ್ದಿ ಬಿತ್ತರಿಸುವ ಬ್ರೇಕಿಂಗ್ ನ್ಯೂಸ್ ಭರಾಟೆಯೂ ಇರಲಿಲ್ಲ. ಆದರೂ ಪತ್ರಿಕೆಗಳಲ್ಲಿ ಸುಳ್ಳು ಸುದ್ದಿ ನಿರಂತರವಾಗಿ ಪ್ರಕಟವಾದವು.
ಆದರೆ ಆ ದುರಂತದಲ್ಲಿ ವಾಸ್ತವವಾಗಿ ಸತ್ತವರ ಸಂಖ್ಯೆ ಒಂದೂವರೆ ಲಕ್ಷ. ಇಂಥ ಘಟನೆಗಳು ಸಂಭವಿಸಿದಾಗ ಸಾವು-ನೋವಿನ ಸಂಖ್ಯೆ ಹೆಚ್ಚಾಗಿರಬಹುದು, ಕಮ್ಮಿಯಾಗಿರಬಹುದು ಆದರೆ ನಿಖರವಾಗಿರಲು ಸಾಧ್ಯವಿಲ್ಲ. ಅಧಿಕಾರಿಗಳಿಗಾಗಲಿ, ಪೊಲೀಸರಿಗಾಗಲಿ ಸರಿಯಾದ ಸಂಖ್ಯೆ ಗೊತ್ತಿರುವುದಿಲ್ಲ. ಆದರೂ ಅಧಿಕೃತ ಮಾಹಿತಿಗಾಗಿ ಇವರು ಹೇಳಿದ ಸಂಖ್ಯೆಯನ್ನೇ ಪ್ರಕಟಿಸುವುದು ವಾಡಿಕೆ.
1974ರ ಜನವರಿಯಲ್ಲಿ ಪ್ಯಾಗೋ ಪ್ಯಾಗೋ ದ್ವೀಪದಲ್ಲಿ ವಿಮಾನ ಅಪಘಾತಕ್ಕೀಡಾಯಿತು. ಸಾಮಾನ್ಯವಾಗಿ ವಿಮಾನ ದುರಂತವಾದಾಗ ಬದುಕಿ ಉಳಿಯುವವರ ಸಂಖ್ಯೆ ತೀರಾ ಕಡಿಮೆ. ವಿಮಾನದಲ್ಲಿರುವ ಪ್ರಯಾಣಿಕರ ಸಂಖ್ಯೆ ಹಾಗೂ ವಿವರಗಳು ಲಭ್ಯವಿರುವುದರಿಂದ ಸಾವಿನ ಸಂಖ್ಯೆಯನ್ನು ನಿಖರವಾಗಿ ಹೇಳಬಹುದು. ಪ್ಯಾಗೋ ಪ್ಯಾಗೋ ವಿಮಾನ ದುರಂತದಲ್ಲಿ ತೊಂಬತ್ತೊಂದು ಜನ ಸತ್ತಿದ್ದರು. ಹನ್ನೊಂದು ಮಂದಿ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದರು. ಆದರೆ ವಿಚಿತ್ರವೆಂದರೆ, ಯಾವ ಪತ್ರಿಕೆಯೂ ಮೊದಲ ವರದಿಯಲ್ಲಿ ನಿಖರ ಸಾವಿನ ಸಂಖ್ಯೆ ಬರೆದಿರಲಿಲ್ಲ. 'ರೋಮ್ ನ್ಯೂಸ್ ಟ್ರಿಬ್ಯೂನ್‌' ಪತ್ರಿಕೆ ಈ ದುರಂತದಲ್ಲಿ 348 ಮಂದಿ ಸತ್ತಿದ್ದಾರೆಂದು ವರದಿ ಮಾಡಿತ್ತು. ಮರುದಿನ ಸತ್ತವರ ಸಂಖ್ಯೆಯನ್ನು ಸರಿಯಾಗಿ ಪ್ರಕಟಿಸಿತ್ತು.
ಟಿವಿ ಚಾನೆಲ್‌ಗಳು ಬಂದ ಬಳಿಕ ಸಾವು-ನೋವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಿರುತ್ತವೆ ಇಳಿಯುತ್ತಿರುತ್ತವೆ. ಟಿವಿಯಲ್ಲಿ ಒಂದು ಅಡ್ವಾಂಟೇಜ್ ಇದೆ. ಸತ್ತವರ ಸಂಖ್ಯೆ ಸಾವಿರ ಎಂದು ಬರೆದು, ಮರುಕ್ಷಣವೇ ಅದನ್ನು ಐವತ್ತಕ್ಕೋ, ಅರವತ್ತಕ್ಕೋ ಇಳಿಸಿಬಿಡಬಹುದು. ಹೀಗಾಗಿ ಟಿವಿಯಲ್ಲಿ ಸುದ್ದಿ ಸ್ಫೋಟವಾದಾಗ ಪ್ರಸಾರವಾಗುವ ಮೊದಲ ವರದಿಯನ್ನು ಒಂದು ಗುಮಾನಿಯಿಟ್ಟುಕೊಂಡೇ ವೀಕ್ಷಿಸಬೇಕಾಗುತ್ತದೆ.
ಟಿವಿ ನ್ಯೂಸ್ ರೂಮ್‌ನಲ್ಲಿ ಹತ್ತಾರು ಟಿವಿಗಳನ್ನಿಟ್ಟಿರುತ್ತಾರೆ. ಯಾವುದಾದರೂ ಒಂದು ಚಾನೆಲ್‌ನಲ್ಲಿ ಗಣ್ಯ ವ್ಯಕ್ತಿಯೊಬ್ಬ ನಿಧನರಾದರು ಎಂದು ಸುದ್ದಿ ಬ್ರೇಕ್ ಮಾಡಿದರೆ, ಆ ಚಾನೆಲ್‌ನ್ನು ನೋಡಿ ಉಳಿದವರೂ ಆ ಸುದ್ದಿಯನ್ನು ಬಿತ್ತರಿಸಿಬಿಡುತ್ತಾರೆ. ನಿಜಕ್ಕೂ ಸತ್ತಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಸುದ್ದಿಯನ್ನು ಶೀಘ್ರ ಬಿತ್ತರಿಸುವ ಪೈಪೋಟಿಯಿಂದಾಗಿ ಎಲ್ಲ ಸುದ್ದಿಯನ್ನು ಕ್ರಾಸ್‌ಚೆಕ್ ಮಾಡಿಕೊಳ್ಳುವಷ್ಟು ಸಮಯವಾಗಲಿ, ವ್ಯವಧಾನವಾಗಲಿ ಇರುವುದಿಲ್ಲ. ಒಂದು ವೇಳೆ ಸತ್ತಿಲ್ಲ ಎಂಬುದು ಗೊತ್ತಾಗುವ ವೇಳೆಗೆ, ಮೊದಲು ಬಿತ್ತರಿಸಿದ ಚಾನೆಲ್ ಒಂದೇ ಅಲ್ಲ, ಅದನ್ನು ನೋಡಿ ಸುದ್ದಿಯನ್ನು ಪ್ರಸಾರ ಮಾಡಿದ ಎಲ್ಲ ಚಾನೆಲ್‌ಗಳು ಮುಖಕಳೆದುಕೊಂಡಿರುತ್ತವೆ. ಹಾಗಂತ ಸುಳ್ಳು ಸುದ್ದಿ ಪ್ರಸಾರ ಮಾಡಬೇಕೆಂಬ ಇರಾದೆ ಯಾರಿಗೂ ಇರುವುದಿಲ್ಲ.
ಕೆಲ ತಿಂಗಳ ಹಿಂದೆ, ಕನ್ನಡದ ಟಿವಿ ಚಾನೆಲ್ಲೊಂದು ದಕ್ಷಿಣ ಆಫ್ರಿಕಾದ ಮುಖಂಡ ನೆಲ್ಸನ್ ಮಂಡೇಲ ಅವರ ನಿಧನವಾರ್ತೆಯನ್ನು (ಈಗಲೂ ಅವರು ಜೀವಂತವಾಗಿದ್ದಾರೆ.) ಪ್ರಸಾರ ಮಾಡಿತು. ಈ ಸುದ್ದಿಯನ್ನು ರಾಷ್ಟ್ರೀಯ ಚಾನೆಲ್‌ಗಳೂ ಬ್ರೇಕ್ ಮಾಡಿರಲಿಲ್ಲ. ಅವುಗಳಿಗೆ ಸಿಗದ ಸುದ್ದಿ ಕನ್ನಡ ಚಾನೆಲ್‌ಗೆ ಹೇಗೆ ಸಿಕ್ಕಿತು?
ಕನ್ನಡದ ಖ್ಯಾತ ಜ್ಯೋತಿಷಿಯೊಬ್ಬರು ಅದೇ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದರು. ಅವರಿಗೆ ಈ ಮಾಹಿತಿಯನ್ನು ಅಲ್ಲಿ ಯಾರು ಹೇಳಿದರೋ ಏನೋ. ಅಲ್ಲಿಂದ ಟಿವಿ ಚಾನೆಲ್‌ಗಳಿಗೆ ಫೋನ್ ಮಾಡಿ ಈ (ಸುಳ್ಳು) ಸುದ್ದಿಯನ್ನು ನೀಡಿದರು. ಅವರಿಗೆ ಸುಳ್ಳು ಸುದ್ದಿ ನೀಡಬೇಕೆಂಬುದಾಗಲಿ, ಕಿತಾಪತಿ ಮಾಡಬೇಕೆಂಬುದಾಗಲಿ, ಯಾವ ಇರಾದೆಯೂ ಇರಲಿಲ್ಲ. ಕನ್ನಡದ ಚಾನೆಲ್‌ಗಳು ಈ ಸುದ್ದಿಯನ್ನು ಶೀಘ್ರ ಪ್ರಸಾರ ಮಾಡಲಿ, ಆ ಸುದ್ದಿಯನ್ನು ಮೊದಲು ನೀಡಿದವನು ತಾನೇ ಆಗಲಿ ಎಂಬುದಷ್ಟೇ ಅವರ ಕಾಳಜಿಯಾಗಿತ್ತು. ಆದರೆ ಒಂದು ಗಂಟೆಯ ತರುವಾಯ, ತಾವು ನೀಡಿದ ಸುದ್ದಿ ಸುಳ್ಳು ಎಂಬುದು ಅವರಿಗೆ ಗೊತ್ತಾಗಿರಬೇಕು. ಪುನಃ ಫೋನ್ ಮಾಡಿ ಮಂಡೇಲ ಸತ್ತಿಲ್ಲ ಎಂದು ಎಲ್ಲರಿಗೂ ತಿಳಿಸಿದರು. ಆದರೆ ಅಷ್ಟು ಹೊತ್ತಿಗೆ ಅಧ್ವಾನ ಆಗಿ ಹೋಗಿತ್ತು.
ಈ ರೀತಿಯ ಪ್ರಸಂಗಗಳು ಪತ್ರಿಕೆಯಲ್ಲಾದರೆ (ಬದುಕಿದ್ದರೂ ಸತ್ತಿದ್ದಾರೆಂದು ಪ್ರಕಟಿಸಿದಾಗ) ಮರುದಿನ ಕ್ಷಮೆ, ವಿಷಾದ ಯಾಚಿಸಲಾಗುತ್ತದೆ. ಆದರೆ ಟಿವಿಯಲ್ಲಿ ಈ ಸಂಪ್ರದಾಯವೇ ಇಲ್ಲ. ಕಾರಣ ದಿನದಲ್ಲಿ ಹಲವು ಸಲ ಈ ರೀತಿಯ ಪ್ರಮಾದಗಳಾಗುತ್ತಿರುವುದರಿಂದ ಪದೇ ಪದೆ ಕ್ಷಮೆ ಯಾಚಿಸಬೇಕಾಗುತ್ತದೆಂದು ಯಾರೂ ಆ ಸಂಪ್ರದಾಯವನ್ನು ಪಾಲಿಸುತ್ತಿಲ್ಲ.
ಸುದ್ದಿಯನ್ನು ಬೇಗ ನೀಡಬೇಕು ಸರಿ, ಆದರೆ ನಿಖರವಾದ ಸುದ್ದಿಯನ್ನು ಬೇಗ ನೀಡಬೇಕು ಎಂಬುದು ಇನ್ನೂ ಸರಿ. ಕಾರಣ ಇದು ಸುದ್ದಿಸಂಸ್ಥೆಯ ವಿಶ್ವಾಸಾರ್ಹತೆಯ ಪ್ರಶ್ನೆ. ವಿಶ್ವಾಸಾರ್ಹತೆಗಿಂತ ಮಿಗಿಲಾದುದು ಯಾವುದೂ ಇಲ್ಲ. ಅದೇ ನಮ್ಮನ್ನು ಮುನ್ನಡೆಸುವ ಮಾರ್ಗದರ್ಶಿ ಸೂತ್ರ.
ಆದರೂ ನಾವು ತಪ್ಪು ಮಾಡುತ್ತೇವೆ. ನನಗೆ ಇಲ್ಲಿ ಖ್ಯಾತಪತ್ರಕರ್ತ ಟಿ.ಎಸ್. ರಾಮಚಂದ್ರರಾಯರ ಆತ್ಮಕತೆಯ ಶೀರ್ಷಿಕೆ-'ಎಡವಿ ನಡೆದು ಬಂದ ದಾರಿ' ನೆನಪಾಗುತ್ತದೆ. ದಿನವೂ ಎಡವುತ್ತಲೇ, ಎದ್ದು ನಡೆಯುತ್ತಾ ಮುನ್ನಡೆಯಬೇಕಾದ ಕಾಯಕದಲ್ಲಿರುವ ನಮಗೆ ಎಷ್ಟು ಕಡಿಮೆ ಸಲ ಎಡವುತ್ತೇವೆ ಎಂಬುದು ಅದಕ್ಕಿಂತ ಮುಂದಿನ ಹಂತವಾದ 'ಇನ್ನು ಎಡವಬಾರದು' ಎಂಬುದಕ್ಕೆ ಪ್ರೇರಣೆ ನೀಡುವಂತಾಗಬೇಕು. ಈ ಎಚ್ಚರ ನಮ್ಮದಾಗಿದ್ದರೆ, ಪತ್ರಿಕೆಯಾಗಲಿ, ಚಾನೆಲ್ ಆಗಲಿ ಇನ್ನಷ್ಟು ಸಹ್ಯವಾಗುತ್ತದೆ.
ಇನ್ನಾದರೂ ಗಂಡಸಿನಂತೆ ವರ್ತಿಸು
ಸುಹೇಲ್ ಸೇಠ್‌ನ ನೇರಾನೇರ ಉತ್ತರಗಳನ್ನು ಕೇಳದೇ ಬಹಳ ದಿನಗಳಾಗಿದ್ದವು. ಆತನ Survival strategies ಅಂಕಣವನ್ನು ನಾನು ತಪ್ಪಿಸುವುದಿಲ್ಲ. ಇತ್ತೀಚೆಗೆ ಓದುಗನೊಬ್ಬ ಸುಹೇಲ್ ಸೇಠ್‌ಗೆ ಪ್ರಶ್ನೆ ಕೇಳಿದ್ದ. 'ನನ್ನ ಜತೆ ಎರಡು ವರ್ಷಗಳ ಸಂಬಂಧವಿರಿಸಿಕೊಂಡಿದ್ದ ಗರ್ಲ್‌ಫ್ರೆಂಡ್ ವಿನಾಕಾರಣ ನನ್ನಿಂದ ದೂರವಾಗಲು ನಿರ್ಧರಿಸಿದ್ದಾಳೆ. ನನಗಿಂತ ಉತ್ತಮ ಹುಡುಗಿ ನಿನಗೆ ಬೇಕು ಅಂತಾಳೆ. ಇದಕ್ಕಿಂತ ಬೇರೆ ಕಾರಣಗಳಿದ್ದಿದ್ದರೆ ನಾನು ನಂಬಬಹುದಿತ್ತು. ಆದರೆ ಆಕೆ ಪದೇ ಪದೆ ಇದೇ ಕಾರಣವನ್ನು ನೀಡುತ್ತಿದ್ದಾಳೆ. ನನ್ನ ಜತೆ ಸಂಬಂಧ ಕಡಿದುಕೊಳ್ಳಲು ಇದಕ್ಕಿಂತ ಬಲವಾದ ಕಾರಣ ಇದ್ದಿರಬಹುದಾ?
ಇದಕ್ಕೆ ಸೇಠ್ ನೀಡಿದ ಉತ್ತರ- "ಬೇರೆ ಕಾರಣ ಇರದೇ ಇರುತ್ತಾ ಹೇಳು. ಇದೊಂಥರಾ ಆಹಾರ ಭದ್ರತಾ ಮಸೂದೆಯಿದ್ದ ಹಾಗೆ. ನಿನಗೆ ಊಟವೂ ಸಿಗಬೇಕು ಹಾಗೂ ನೀನು ನಿರಂತರ ಹಸಿವಿನಿಂದಲೂ ಇರಬೇಕು ಎಂಬಂತಿದೆ. ನೀನು ಮಾಯಾವತಿಯಂಥ ಹೆಣ್ಣಿನ ಜತೆಗಿರಬೇಕು. ಆಕೆ ನಿನ್ನನ್ನು ಊಟಕ್ಕೆ ಕರೆಯುತ್ತಾಳೆ. ನಿನ್ನೊಂದಿಗೆ ಚೆನ್ನಾಗಿ ಊಟವನ್ನೂ ಮಾಡುತ್ತಾಳೆ. ಆದರೆ ಯಾವಾಗ ತೇಗುತ್ತಾಳೆಂಬುದು ನಿನಗೆ ಗೊತ್ತಾಗುವುದಿಲ್ಲ. ನೀನೀಗ ಮಾಡಬೇಕಾದುದಿಷ್ಟೆ- ಅವಳಿಗೆ ಆದಷ್ಟು ಬೇಗ ವಿದಾಯ ಹೇಳು. ಹೋಗುವ ಮೊದಲು ನಿನ್ನ ಕ್ರೆಡಿಟ್ ಕಾರ್ಡನ್ನು ವಾಪಸ್ ಪಡೆದುಕೊಳ್ಳಲು ಮರೆಯಬೇಡ. ಅವಳ ಮೊಬೈಲ್‌ನಲ್ಲಿ ನೀನು ಕಳುಹಿಸಿದ ಎಸ್‌ಎಮ್‌ಎಸ್‌ಗಳನ್ನು ಇಂದೇ ಅಳಿಸಿಹಾಕು. ಪೀಡೆ ತೊಲಗಿತು ಎಂದು ಖುಷಿಯಿಂದ ಎರಡು ಪೆಗ್ ಕುಡಿದು ನಿದ್ದೆ ಮಾಡು. ನಿನ್ನನ್ನು ಬಕರಾ ಮಾಡಲು ಮತ್ತೊಬ್ಬಳು ರೆಡಿಯಾಗಿರುತ್ತಾಳೆ. ಇನ್ನಾದರೂ ಗಂಡಸಿನಂತೆ ವರ್ತಿಸುವುದನ್ನು ಕಲಿ ಮಚ್ಚಾ!"



- ವಿಶ್ವೇಶ್ವರ ಭಟ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!