'ದಡ್‌ಬಡ್ಡಿ ಮುಂಡೇವಾ, ದೇವ್ರುಗೆ ನೈವೇದ್ಯ ಮಡುಗ್ದೆ ಯಾರರ ಪ್ರಸಾದ ಹಂಚ್ತಾರೇನ್ಲ. ಇದೂವೆ ಹಂಗೇಯ. ಮೇಡಮ್ನೋರು ಬರ್ಬೇಕು. ನೈವೇದ್ಯ ಮಡುಗ್ಬೇಕು' ಅಂದ್ರು ಪರಮೇಸ್ವರಪ್ಪ.
ಮೈಲಾರಿ ಬೆಳ್ಳಂಬೆಳ್ಗೆ ಎದ್ದು ಕೈನಾಗೆ ದೊಡ್ ಚೀಲ ಹಿಡ್ಕಂಡು ವೊಂಟ. ದಾರಿನಾಗೆ ಆಮಾಸೆ ಸಿಕ್ಬುಟ್ಟು 'ಏನ್ಲಾ ಮೈಲಾರಿ ಎಲ್ಲಿಗ್ಲಾ ವೊಂಟೆ ಬ್ಯಾಗು ಹಿಡ್ಕಂಡು' ಅಂತ ಕೇಳ್ದ.
'ಬೇಲೆಕೇರಿಗೆ ವೋಗಿ ಅದಿರು ತುಂಬ್ಕಂಡು ಬತ್ತೀನಿ. ಅದನ್ನ ನಮ್ಮೂರು ಸಂತೆನಾಗೆ ಮಾರ್ಬುಟ್ಟು ನಾಲ್ಕು ಕಾಸು ಮಾಡ್ಕಂತೀನಿ. ನೀನೂವೆ ಬತ್ತೀಯ?' ಅಂದ ಮೈಲಾರಿ.
'ನೀನೇನರ ಹಂಗೆ ಮಾಡುದ್ರೆ ಸಿಬಿಐದೋರು ಎತ್ತಾಕ್ಕಂಡೋಗಿ ನುಣ್ಗೆ ರುಬ್ಬಾಕ್ತಾರೆ. ಮೈಮ್ಯಾಲಿರೋ ಬಟ್ಟೆ ಬಿಚ್ಚಾಕಿ ಪುಟಗೋಸಿನಾಗೆ ವೂರ್ಗೆ ಕಳುಸ್ತರೆ' ಅಂತೇಳ್ದ ಅಮಾಸೆ.
'ಇನ್ನೇನ್ಲ, ಎಲ್ಗೆ ವೋಯ್ತಾಯಿರಾದು ಅಂತ ಕೇಳುದ್ರೆ ಏನಂತ ಯೋಳಾದು. ಸೋನ್ಯಾಗಾಂಧಿ ಮಂಡ್ಯಕ್ಕೆ ಬತ್ತರಂತೆ. ಅಲ್ಲಿ ನಮ್ ಕೈ ಪಕ್ಸದ ಲೀಡ್ರು ಪರಮೇಸ್ವರಪ್ಪ ಎಲ್ಲಾರ್ಗೂ ಲಾಡು ಕೊಡ್ತರಂತೆ. ಕೈನಾಗೆ ಹಿಡ್ಕಂಡು ಬಂದ್ರೆ ಪುಡಿ ಆಗೋಯ್ತದೆ. ಅದುಕ್ಕೆ ಚೀಲ ಹಿಡ್ಕಂಡು ವೋಯ್ತಾಯಿರಾದು. ಸೋನ್ಯ ಮೇಡಮ್ಮು ಬರಾಗಂಟ ಯಾಕೆ ಕಾಯಾದು. ಸೀದಾ ಪರಮೇಸ್ವರಪ್ನೋರು ಮನೆತವ ವೋಗಿ ಲಾಡು ಗಂಟಾಕ್ಕಂಡು ಬಂದ್ಬುಡ್ತೀನಿ. ಹೆಂಗೂ ಆಯುಧಪೂಜೆ ಬತ್ತಾ ಐತೆ. ಮನ್ಯಾಗೆ ಪೂಜೆ ಮಾಡಿ ವೂರ್ನೋರ್ಗೆ ಅದುನ್ನೇ ಹಂಚುದ್ರೆ ಆಯ್ತು ನೀನೂವೆ ಬತ್ತೀಯ?' ಅಂತ ಮೈಲಾರಿ ಕೇಳ್ದ.
'ಬತ್ತೀನಿ ಕಣ್ಲಾ, ನಂಗೂವೆ ಲಡ್ಡು ತಿನ್ನಂಗೆ ಆಗೋಗದೆ. ಇತ್ತಿತ್ನಾಗೆ ಮದ್ವೆನಾಗೂ ಲಡ್ಡು ಹಾಕೋದ್ನ ಬುಟ್ಟವ್ರೆ. ಅದೆಂಥದ್ದೋ ಸ್ವೀಟು, ಸುಡುಗಾಡು ಅಂತೇಳಿ ಮಾಡಿ ಹಾಕ್ತರೆ. ಇರು ನಾನೂವೆ ಚೀಲ ತಕ್ಕಂಡು ಬತ್ತೀನಿ' ಅಂತೇಳಿ ಅಮಾಸೆ ಹಂಗೋಗಿ ಹಿಂಗೆ ಬಂದ. ಇಬ್ರೂವೆ ಬಸ್ ಹತ್ಕಂಡು ಬೆಂಗ್ಳೂರ್ನಾಗೆ ಇಳ್ದು ಸೀದಾ ಪರಮೇಸ್ವರಪ್ನೋರು ಮನೆತವ ವೋದ್ರು.
'ನಾವು ಬಂದೇವ ನಾವು ಬಂದೇವ ನಾವು ಬಂದೇವ ಲಡ್ಡು ತಿನ್ನಲಿಕ್ಕ' ಅಂತೇಳಿ ಮನೆ ಮುಂದ್ಲಾಗಡೆ ಹಾಡಕ್ಕೆ ಸುರು ಮಾಡುದ್ರು. ಕೈ ಪಕ್ಸದ ಮೀಡಿಯಾ ಆಪೀಸರ್ರು ಗೂಳಿಗೌಡ್ರು ತಿವ್ಯಂಗೆ ವೋಡೋಡಿ ಬಂದು ಮುಂಡೇವ ಸಾಹೇಬ್ರುಗೆ ಕಿರ್ಕಿರಿ ಆಯ್ತದೆ ವಸಿ ತೆಪ್ಗಿರ್ರಿ' ಅಂದ್ರು.
'ಸುಮ್ಕಿರಿ ಗೌಡ್ರೆ, ಲಡ್ಡು ತಿನ್ನಕ್ಕೆ ಅಂತೇಳಿ ಕೆಂಪು ಬಸ್ಗೆ ಚಾರ್ಜು ಹಾಕ್ಕಂಡು ಅಲ್ಲಿಂದ ಇಲ್ಲೀಗಂಟ ಬಂದಿದ್ದೀವಿ. ಕರೀರಿ ನಮ್ ಸಾಹೇಬ್ರುನ್ನ' ಅಂದ ಮೈಲಾರಿ. 'ಸಾಹೇಬ್ರು ಬಿಜಿ ಅವ್ರೆ ಕಣ್ರಲೇ' ಅಂದ್ರು ಗೌಡ್ರು. 'ವೊಳ್ಗೆ ಏನರ ಲಾಡು ಕಟ್ತಾವ್ರ?' ಅಂತ ಅಮಾಸೆ ಕೇಳ್ದ.
'ಅಷ್ಟ್ರಾಗೆ ಪರಮೇಸ್ವರಪ್ನೋರು ಬಂದೇಬುಟ್ರು. ಏನ್ರಲಾ ಇದು ಕಿಲಾಡಿ ಜೋಡಿ ವೊಟ್ಗೆ. ಯಾರ್ಮನೆ ಹಾಳು ಮಾಡಕ್ಕೆ ಬಂದಿದ್ದೀರಿ' ಅಂತ ಅವ್ರು ಕೇಳುದ್ರು. 'ನಿವು ಕಟ್ತಾಯಿರೋ ಲಾಡು ವಾಸ್ನೆ ನಮ್ ವೂರ್ಗಂಟು ಬಂದದೆ ಸಾ. ತಡ್ಕಳಕ್ಕೆ ಆಗ್ದೆ ಬಂದೋದ್ವಿ. ಚೀಲ ತನ್ಕಂಡಿದ್ದೀವಿ. ಇದ್ರು ತುಂಬಾ ಹಾಕ್ಬುಟ್ರೆ ತಿನ್ಕಂಡು ಹಂಗೇ ವೂರ್ಕಡೀಕೆ ವೊಂಟೋಯ್ತೀವಿ' ಅಂತ ಯೋಳ್ದ ಮೈಲಾರಿ.
'ವುಗೀಲಾ ಮುಖುಕ್ಕೆ. ಅಲ್ಲಲೇ, ಸೋನ್ಯಾ ಮೇಡಮ್ಮು ಬಂದ್ಮೇಕೆ ತಾನೆ ಲಡ್ಡು ಕೊಡಾದು. ಈವಾಗೆಲ್ಲಿಂದ ತರಾದು. ನಾನೇರ ಮನೆಯೋಳ್ಗೆ ಕೂತ್ಕಂಡು ಲಡ್ಡು ಕಟ್ತಾಯಿದ್ದೀನ ತಂದು ನಿನ್ ಚೀಲುಕ್ಕೆ ಸುರ್ಯಕ್ಕೆ' ಅಂತೇಳಿ ಪರಮೇಸ್ವರಪ್ಪ ವಸಿ ಗರಂ ಆದ್ರು. ಮೇಡಮ್ಮು ಬರೋಗಂಟ ಕಾದ್ಕಂಡು ಕೂತಿದ್ದು, ಕ್ಯೂನಾಗೆ ನಿತ್ಕಂಡಿದ್ದು ಲಡ್ಡು ತಕ್ಕಳಕ್ಕೆ ಆಯ್ತದಾ? ಈವಾಗ್ಲೇ ಕೊಟ್ಟಾಕಿ ಸ್ವಾಮಿ' ಅಂದ ಅಮಾಸೆ.
'ದಡ್‌ಬಡ್ಡಿ ಮುಂಡೇವಾ, ದೇವ್ರುಗೆ ನೈವೇದ್ಯ ಮಡುಗ್ದೆ ಯಾರರ ಪ್ರಸಾದ ಹಂಚ್ತಾರೇನ್ಲ. ಇದೂವೆ ಹಂಗೇಯ. ಮೇಡಮ್ನೋರು ಬರ್ಬೇಕು. ನೈವೇದ್ಯ ಮಡುಗ್ಬೇಕು. ಆಮ್ಯಾಲೆ ಎಲ್ಲಾರ್ಗೂ ಹಂಚ್ಬೇಕು ತಿಳೀತಾ? ವೋಗೋಗಿ' ಅಂದ್ರು ಪರಮೇಸ್ವರಪ್ಪ.
'ವೋ, ತಿಳೀತು ಬುಡಿ. ನೀವು ಲಡ್ಡು ಹಂಚೋದ್ನ ಮೇಡಮ್ಮು ನೋಡ್ಬೇಕು. ಪಾಪ ಪರಮೇಸ್ವರ್ರು ನಂಗೋಸ್ಕರ ಲಡ್ಡು ಮಾಡ್ಸವ್ರೆ. ನಾನು ಅಂದ್ರೆ ಅದೇನು ಪ್ರೀತಿ. ಪಾಪ ಡಿಸಿಎಂ ಪೋಸ್ಟು ಕೊಟ್ಟಾಕಿ ಅಂತ ಯೋಳ್ಬೇಕು. ಇದೇ ಅಲ್ವಾ ನಿಮ್ ಐಡಿಯಾ? ಟ ಅಂತ ಮೈಲಾರಿ ಕೇಳ್ದ.
'ಬುಡ್ಲ, ಸಾಹೇಬ್ರು ಮಂತ್ರಿ ಆಗೋದು ಹೆಚ್ಚಾ? ನಮ್ಗೆ ಲಾಡು ಕೊಡಾದು ಹೆಚ್ಚಾ? ಆಮ್ಯಾಕೆ ಬರಾಣ ನಡೀಲಾ' ಅಂತೇಳಿ ಮೈಲಾರಿನ ಕರ್ಕಂಡು ಆಮಾಸೆ ವೊಂಟ.
- ಕೆ.ವಿ.ಪ್ರಭಾಕರ್
prabhukolar@yahoo.com