ಕನಕಪುರ ರಸ್ತೆಯ ಅಪಾಯಕಾರಿ ತಿರುವುಗಳಲ್ಲಿ ಸಾಗುತ್ತ ಕಾರು ಆ ಕಟ್ಟಡದ ಎದುರು ನಿಂತಿತು. 'ಇದ್ಯಾವುದಪ್ಪಾ ಇಷ್ಟು ದೂರದಲ್ಲಿದೆ ಸಾಫ್ಟ್‌ವೇರ್ ಕಂಪೆನಿ' ಎಂದುಕೊಂಡೆ. 'ಇದೇ ಸಾರ್ ಮೈಯ್ಯಾಸ್ ಫ್ಯಾಕ್ಟರಿ' ಎಂದು ಡ್ರೈವರ್ ಹೇಳಿದಾಗ ನಂಬಲು ಸಾಧ್ಯವಾಗಲಿಲ್ಲ. ವಿಶಾಲ ಜಾಗದಲ್ಲಿ ಸಾಫ್ಟ್‌ವೇರ್ ಕಂಪೆನಿಯನ್ನೂ ಮೀರಿಸುವಂತಹ ಸುಂದರ ಕಟ್ಟಡಗಳು. ಎದುರಲ್ಲಿ ಅಚ್ಚಹಸಿರ ಹುಲ್ಲುಗಾವಲು. ಗೇಟ್ ತೆರೆದು ಒಳಗೆ ಕಾಲಿಡುತ್ತಿರುವಂತೆ ಪ್ರಯಾಣದ ಆಯಾಸ ಮರೆಸಿಬಿಡುವಂತಹ ತಂಪಿನ ಸಿಂಚನ. ತುಸು ಹೊತ್ತು ಹಾಗೆಯೇ ನಿಂತಿದ್ದರೆ ಮೈಮೇಲೆ ಬೀಳುವ ನೀರಹನಿಗಳ ತುಂತುರು. 'ಇದೆಲ್ಲವೂ ಮರುಬಳಕೆಯಾಗುತ್ತಿರುವ ನೀರು ನೋಡಿ' ಎನ್ನುತ್ತ ಹೊರಬಂದರು ಡಾ.ಪಿ.ಸದಾನಂದ ಮೈಯ್ಯ. ಮೈಯ್ಯಾಸ್ ಫುಡ್ಸ್ ಅಂಡ್ ಬೆವರೇಜಸ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅವರು.
ಆಹಾರೋದ್ಯಮದಲ್ಲಿ ಮೈಯ್ಯ ಅವರಿಗಿರುವ ಘನತೆ, ಮಾರುಕಟ್ಟೆಯಲ್ಲಿ ಮೈಯ್ಯಾಸ್ ಉತ್ಪನ್ನಗಳಿಗೆ ಇರುವ ಬೇಡಿಕೆ ಮತ್ತು ಗುಣಮಟ್ಟದ ವಿಚಾರದಲ್ಲಿ ಅದು ಕಾಪಾಡಿಕೊಂಡಿರುವ ಶ್ರೇಷ್ಠತೆ ಕುರಿತಾಗಿ ಹೇಳಬೇಕಾಗಿಯೇ ಇಲ್ಲ. ಮೈಯ್ಯ ಅವರು ವ್ಯಾವಹಾರಿಕವಾಗಿ ಎಷ್ಟು ದೂರದೃಷ್ಟಿ ಉಳ್ಳವರೋ, ಅದಕ್ಕಿಂತಲೂ ಮಿಗಿಲಾಗಿ ಒಬ್ಬ ಪರಿಸರಪ್ರೇಮಿ. ಎಷ್ಟೋ ಕಂಪೆನಿಗಳು ಸಿಎಸ್‌ಆರ್ (ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ) ಹೆಸರಿನಲ್ಲಿ ಯಾವ ರೀತಿ ಹಣ ಪೋಲು ಮಾಡುತ್ತವೆ, ಒಂದೆರಡು ಗಿಡ ನೆಟ್ಟಿದ್ದನ್ನೇ ದೊಡ್ಡದಾಗಿ ಬಿಂಬಿಸಿ ಹೇಗೆ ಪ್ರಚಾರ ಗಿಟ್ಟಿಸಿಕೊಳ್ಳುತ್ತವೆ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಆದರೆ ಮೈಯ್ಯ ಆ ರೀತಿಯ ಪಬ್ಲಿಸಿಟಿಗಳಿಂದ ದೂರ. 'ಆಡದೇ ಮಾಡುವವನು ರೂಢಿಯೊಳಗುತ್ತಮನು' ಎಂಬ ಧೋರಣೆ. ಬೇರೆಯವರಿಗೆ ಏನಾದರೂ ಹೇಳುವ ಮುನ್ನ ಮೊದಲು ನಾವು ಮಾಡಿ ತೋರಿಸಬೇಕು ಎನ್ನುವ ಮನೋಭಾವ. ಕಟ್ಟಡಕ್ಕಿಂತ ಹೆಚ್ಚಿನ ಮೊತ್ತವನ್ನು ನೀರು ಸಂಸ್ಕರಣಾ ಸ್ಥಾವರಗಳಿಗೆ ವ್ಯಯಿಸಿದ್ದಾರೆ ಎಂದರೆ ಅವರ ಕಾಳಜಿ ಅರ್ಥವಾದೀತು.
ಜಗತ್ತಿನ ಯಾವುದೇ ಭಾಗಕ್ಕೆ ಹೋಗಿ. ನೀರು ಸಂಸ್ಕರಣೆಯಲ್ಲಿ ಬಳಸುವುದು ಎರಡೇ ತಂತ್ರಜ್ಞಾನ. ಇಟಿಪಿ (ಎಫ್ಲ್ಯುಯೆಂಟ್ ಟ್ರೀಟ್‌ಮೆಂಟ್ ಪ್ಲಾಂಟ್) ಮತ್ತು ಎಸ್‌ಟಿಪಿ (ಸೀವೇಜ್ ಟ್ರೀಟ್‌ಮೆಂಟ್ ಪ್ಲಾಂಟ್). ಕಾರ್ಖಾನೆಗಳಲ್ಲಿ ಬಳಸುವುದು ಇಟಿಪಿ. ಅಂದರೆ ಕಾರ್ಖಾನೆಗಳಿಂದ ಹೊರಹೋಗುವ ನೀರನ್ನು ಶುದ್ಧೀಕರಿಸಲು ಬಳಸುವ ತಂತ್ರಜ್ಞಾನ. ಈ ತಂತ್ರಜ್ಞಾನದ ಮೂಲಕ ನೀರಿನಲ್ಲಿನ ತೈಲ, ಜಿಡ್ಡಿನ ಅಂಶವನ್ನು ತೆಗೆಯಲಾಗುತ್ತದೆ. ಎಸ್‌ಟಿಪಿಯನ್ನು ಕೊಳಚೆ ನೀರು ಸಂಸ್ಕರಣೆಗಾಗಿ ಬಳಸಲಾಗುತ್ತದೆ. ಬೆಂಗಳೂರು ಜಲಮಂಡಳಿ ಸೇರಿದಂತೆ ಬಹಳಷ್ಟು ಸ್ಥಳೀಯ ಆಡಳಿತಗಳು ಅಳವಡಿಸಿಕೊಂಡಿರುವುದು ಈ ತಾಂತ್ರಿಕತೆಯನ್ನು. ಮೈಯ್ಯಾಸ್ ಕಾರ್ಖಾನೆಯಲ್ಲಿ ಇಟಿಪಿ, ಎಸ್‌ಟಿಪಿ ಎರಡೂ ಸ್ಥಾವರಗಳಿವೆ.
ಎರಡು ಹಂತಗಳಲ್ಲಿ ಸಂಸ್ಕರಣೆಯಾದ ನೀರನ್ನು ಪುನಃ ರಿವರ್ಸ್ ಒಸ್ಮೊಸಿಸ್ (ಆರ್‌ಒ) ತಂತ್ರಜ್ಞಾನದಲ್ಲಿ ಶುದ್ಧೀಕರಿಸಲಾಗುತ್ತದೆ. ಮನೆಗಳಲ್ಲಿ ಉಪಯೋಗಿಸುವ ಫಿಲ್ಟರ್‌ಗಳಲ್ಲಿ ಇರುವುದು ಆರ್‌ಒ ತಾಂತ್ರಿಕತೆ. ಆರ್‌ಒ ಬಳಸಿದ್ದೀರಿ ಎಂದಾದರೆ ಅದು ಕುಡಿಯಲು ಯೋಗ್ಯ ಎಂದೇ ಲೆಕ್ಕ. ಇಲ್ಲೂ ಅಷ್ಟೆ. ಎಲ್ಲ ರಾಸಾಯನಿಕ ಮುಕ್ತವಾಗಿರುವ ನೀರು ಕುಡಿಯಲು ಯೋಗ್ಯವಾಗಿದ್ದರೂ, ಅದನ್ನು ಭೂಮಿಗೇ ಬಿಡಲಾಗುತ್ತದೆ. ಇಟಿಪಿ, ಎಸ್‌ಟಿಪಿಗಳಲ್ಲಿ ಸಂಸ್ಕರಣೆಯಾಗಿ, ನಂತರ ಆರ್‌ಒ ಪ್ರಕ್ರಿಯೆಗೆ ಒಳಪಡುವುದರಿಂದ ರಾಸಾಯನಿಕಗಳು ಮತ್ತೆ ಭೂಮಿಯನ್ನೇ ಸೇರುವ ಸಂದರ್ಭ ಇಲ್ಲ. ನೀರು ಶುದ್ಧೀಕರಣ ಸ್ಥಾವರಗಳಿಗಾಗಿ ಆಗಿರುವ ವೆಚ್ಚ ಸುಮಾರು 80 ಲಕ್ಷ ರುಪಾಯಿ. ಅಂದಹಾಗೆ ಕಚೇರಿ ಮತ್ತು ಯಂತ್ರೋಪಕರಣಗಳಿರುವ ಕಟ್ಟಡ ನಿರ್ಮಾಣಕ್ಕೆ ವ್ಯಯಿಸಿದ್ದು ಎಷ್ಟು ಗೊತ್ತಾ? 60 ಲಕ್ಷ ರುಪಾಯಿ. ಒಂದರ್ಥದಲ್ಲಿ ಇದು ಮೈಯ್ಯ ಅವರ ಆದ್ಯತೆಯನ್ನೂ ಸೂಚಿಸುತ್ತದೆ.
'ಕೈಗಾರಿಕೆಗಳು ಮನಸ್ಸು ಮಾಡಿದರೆ ನೀರಿನ ಮರುಬಳಕೆ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಮಾತ್ರವಲ್ಲ, ನೀರಿನ ವಿಚಾರದಲ್ಲಿ ಸ್ವಾವಲಂಬನೆಯನ್ನೂ ಸಾಧಿಸಬಹುದು' ಎನ್ನುವ ಮೈಯ್ಯ, ತಮ್ಮ ಕಾರ್ಖಾನೆಯ ಲೆಕ್ಕಾಚಾರವನ್ನೇ ಮುಂದಿಡುತ್ತಾರೆ. ವಿವಿಧ ರೀತಿಯ ಸ್ನ್ಯಾಕ್ಸ್, ಫ್ರೋಜನ್ ಫುಡ್ಸ್, ಬಾದಾಮಿ ಹಾಲು ಮತ್ತಿತರ ಬೆವರೇಜಸ್‌ಗಳ ತಯಾರಿಕೆ ಇಲ್ಲಿ ಆಗುತ್ತದೆ. ನೀರಿನ ವಿಚಾರದಲ್ಲಿ ಆಹಾರೋದ್ಯಮ ಇತರ ಇಂಡಸ್ಟ್ರಿಗಳಂತಲ್ಲ. ಇಲ್ಲಿ ನೀರಿನ ಬಳಕೆ ವಿಪರೀತ. ಶುದ್ಧೀಕರಿಸಿದ ಅಕ್ಕಿ, ಬೇಳೆಕಾಳುಗಳನ್ನೇ ಅಂಗಡಿಯಿಂದ ತಂದರೂ ಅದನ್ನು ಕುಕ್ಕರ್‌ಗೆ ಇಡುವ ಮುನ್ನ ನಾವು ಒಮ್ಮೆ ನೀರಿನಿಂದ ತೊಳೆಯುವುದಿಲ್ಲವೆ? ಸ್ವಲ್ಪಮಟ್ಟಿಗೆ ಇಲ್ಲಿಯೂ ಹಾಗೆಯೇ. ಮೈಯ್ಯಾಸ್ ಫ್ಯಾಕ್ಟರಿಯ ದೈನಂದಿನ ನೀರಿನ ಬಳಕೆ 80 ಸಾವಿರ ಲೀಟರ್. ಎರಡು ಕೊಳವೆ ಬಾವಿಗಳಿಂದ ಆ ನೀರು ಲಭ್ಯವಾಗುತ್ತಿದೆ. (ಭೂಮಾತೆಯೂ ಎಷ್ಟು ಉದಾರಿ ನೋಡಿ. ಕೇವಲ 300 ಅಡಿ ಆಳದಲ್ಲಿ ಸಮೃದ್ಧ ನೀರು! ಇಲ್ಲಿನ ಶಿಲಾಸಂರಚನೆಯೂ ಅದಕ್ಕೆ ಸ್ವಲ್ಪಮಟ್ಟಿಗೆ ಕಾರಣ) ಅದರಲ್ಲಿ 70 ಸಾವಿರ ಲೀಟರ್ ತ್ಯಾಜ್ಯ ನೀರು ಸಂಸ್ಕರಣೆಗೆ ಒಳಗಾಗಿ ಪುನಃ ಭೂಮಿಯನ್ನು ಸೇರುತ್ತದೆ. ಕಾರ್ಖಾನೆ ಆವರಣದಲ್ಲಿರುವ ಹಸಿರು ಲಾನ್‌ಗಳಿಗೆ ಬಳಕೆಯಾಗುವುದು ಇದೇ ಸಂಸ್ಕರಿತ ನೀರು. ಬೋರ್‌ವೆಲ್‌ಗಳಿಗೆ ಜಲಪೂರಣಕ್ಕೆ ಬಳಕೆಯಾಗುವುದೂ ಇದೇ ನೀರು. ಹೀಗಾಗಿ ವಾಸ್ತವಿಕ ಬಳಕೆ ಕೇವಲ ಹತ್ತು ಸಾವಿರ ಲೀಟರ್. ಜಲಮಂಡಳಿ ಅತ್ಯಂತ ಕಡಿಮೆ ದರದಲ್ಲಿ ಸಂಸ್ಕರಿತ ನೀರು ಒದಗಿಸುವುದಾಗಿ ಸಾರಿಸಾರಿ ಹೇಳಿದರೂ ಕೈಗಾರಿಕೆ ಉದ್ದೇಶಗಳಿಗೆ ಆ ನೀರು ಖರೀದಿಸಲು, ಆ ಮೂಲಕ ಜಲಮೂಲದ ಮೇಲಿನ ಒತ್ತಡ ಕಡಿಮೆ ಮಾಡಲು ರಾಜಧಾನಿ ಬೆಂಗಳೂರಿನ ಎಷ್ಟೋ ಉದ್ಯಮಗಳು ಇನ್ನೂ ಮೀನಮೇಷ ಎಣಿಸುತ್ತಿವೆ. ಬಿಡಬ್ಲ್ಯೂಎಸ್‌ಎಸ್‌ಬಿ ಎಷ್ಟೇ ಜಾಗೃತಿ ಮೂಡಿಸಲು ಪ್ರಯತ್ನಿಸಿದರೂ 'ಸಂಸ್ಕರಿತ ನೀರು' ಕುರಿತು ನಮ್ಮ ಭಾವನೆ ಸುಲಭಕ್ಕೆ ಬದಲಾಗುವಂತೆ ತೋರುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಮೈಯ್ಯರಂಥ ಉದ್ಯಮಿಗಳು ನಮಗೆ ಆದರ್ಶಪ್ರಾಯರಾಗಿ ಕಂಡರೆ ತಪ್ಪೇನು?
ಮೈಯ್ಯಾಸ್ ಫುಡ್ಸ್ ಅಂಡ್ ಬೆವರೇಜಸ್ ಬೆಂಗಳೂರಿನಲ್ಲಿ ರೆಸ್ಟೊರೆಂಟ್ ನಡೆಸುತ್ತಿದೆ. ಹೋಟೆಲ್ ಎಂದ ಮೇಲೆ ಕೊತ್ತಂಬರಿ ಸೊಪ್ಪು ಬೇಕೇಬೇಕು. ಸೀಸನ್‌ನಲ್ಲಿ ಅತ್ಯಂತ ಕಡಿಮೆ ದರಕ್ಕೆ ಸೊಪ್ಪು ಸಿಕ್ಕರೆ, ಉಳಿದ ವೇಳೆಯಲ್ಲಿ ಕೇಳಿದಷ್ಟು ದುಡ್ಡು ಕೊಡುತ್ತೇನೆ ಎಂದರೂ ಗುಣಮಟ್ಟದ ಸೊಪ್ಪು ಸಿಗುವುದಿಲ್ಲ. ಅದಕ್ಕೆ ಮೈಯ್ಯ ಪರಿಹಾರ ಕಂಡುಕೊಂಡಿದ್ದಾರೆ. ಫ್ಯಾಕ್ಟರಿ ಆವರಣದಲ್ಲಿ ಎರಡೂವರೆ ಎಕರೆ ವಿಸ್ತೀರ್ಣದಲ್ಲಿ ಕೊತ್ತಂಬರಿ ಸೊಪ್ಪು ಬೆಳೆಸಿದ್ದಾರೆ. ಜಯನಗರದ ಹೋಟೆಲ್ ಮತ್ತು ಫ್ಯಾಕ್ಟರಿಗೆ ಅಗತ್ಯವಿರುವಷ್ಟು ಕೊತ್ತಂಬರಿ ಸೊಪ್ಪು ಇಲ್ಲಿಯೇ ಬೆಳೆಯುತ್ತದೆ. ಮುಂದೆ ಕೆಸುವಿನ ಸೊಪ್ಪು ಬೆಳೆಸುವ ಯೋಚನೆಯೂ ಮೈಯ್ಯ ಅವರಿಗಿದೆ. ಇದಕ್ಕೆಲ್ಲ ಪೂರೈಕೆಯಾಗುವುದು ಇದೇ ಸಂಸ್ಕರಿತ ನೀರು! ಆರ್‌ಒ ತಂತ್ರಜ್ಞಾನದಲ್ಲಿ ಶುದ್ಧೀಕರಿಸಿದ ನೀರನ್ನು ಕೊತ್ತಂಬರಿ ಸೊಪ್ಪಿನ 'ತೋಟ'ಕ್ಕೆ ಹಾಯಿಸಲಾಗುತ್ತದೆ. ನೀರಿನ ಸದ್ಬಳಕೆಯೂ ಆಯಿತು, ಕೊತ್ತಂಬರಿ ಸೊಪ್ಪಿಗಾಗಿ ಮಾರುಕಟ್ಟೆಯನ್ನು ಅವಲಂಬಿಸುವ ಅಗತ್ಯವೂ ಇಲ್ಲ.
ಕನಕಪುರ ಸುತ್ತಮುತ್ತ ಬೀಳುವ ವಾರ್ಷಿಕ ಸರಾಸರಿ ಮಳೆ ಪ್ರಮಾಣ 827.42 ಮಿ.ಮೀ. ಸದ್ಯಕ್ಕೆ ನೀರಿಗೆ ಬರ ಇಲ್ಲದಿದ್ದರೂ ಮೈಯ್ಯ ಮಳೆಕೊಯ್ಲು ಅಳವಡಿಕೆಯಲ್ಲೂ ಹಿಂದೆ ಬಿದ್ದಿಲ್ಲ. 1.80 ಲಕ್ಷ ಲೀಟರ್ ಸಾಮರ್ಥ್ಯದ ಮಳೆಕೊಯ್ಲು ಟ್ಯಾಂಕ್ ಇದೆ. ಆ ನೀರಿನ ಅಗತ್ಯ ಕಾಣದಿದ್ದರೆ ಅದನ್ನೂ ಬೋರ್‌ವೆಲ್‌ಗಳಿಗೆ ಹಾಯಿಸುವ ಚಿಂತನೆಯೂ ಇದೆ. ಕಾರ್ಖಾನೆಗೆ ದಿನವೂ 1.5 ಮೆಗಾವಾಟ್ ವಿದ್ಯುತ್‌ನ ಅಗತ್ಯವಿದೆ. ಭವಿಷ್ಯದಲ್ಲಿ ಇಷ್ಟೂ ವಿದ್ಯುತ್ ಅನ್ನು ಸೌರಶಕ್ತಿ ಮೂಲಕವೇ ಪಡೆಯುವ ಪ್ರಯತ್ನವೂ ಚಾಲ್ತಿಯಲ್ಲಿದೆ ಎನ್ನುತ್ತ ಹೊಸ ಯೋಜನೆಗಳನ್ನು ಬಿಚ್ಚಿಡುತ್ತಾರೆ ಡಾ.ಪಿ.ಸದಾನಂದ ಮೈಯ್ಯ. ಅಲ್ಲಿಗೆ ಪರೋಕ್ಷವಾಗಿ ಇನ್ನಷ್ಟು ನೀರಿನ ಉಳಿತಾಯ.
'ಮೇಡ್ ವಿತ್ ಲವ್' ಎನ್ನುವ ತನ್ನ ಧ್ಯೇಯವಾಕ್ಯವನ್ನು ಪರಿಸರ ಕಾಳಜಿಯಲ್ಲೂ ತೋರಿಸುತ್ತಿರುವ ಮೈಯ್ಯಾಸ್ ಫುಡ್ಸ್ ಅಂಡ್ ಬೆವರೇಜಸ್ 'ಪರಿಸರ ಸ್ನೇಹಿ ಕಾರ್ಖಾನೆ' ಹೇಗಿರಬೇಕು ಎನ್ನುವುದಕ್ಕೆ ನಮ್ಮೆದುರು ಇರುವ ಅತ್ಯುತ್ತಮ ಉದಾಹರಣೆ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in