ಮೋದಿಯನ್ನು ತಡೆಯಬೇಕೆನ್ನುವುದೇ ಪಶ್ಚಿಮದ ಹೊಸ ಆದ್ಯತೆಯೇ?
ನರೇಂದ್ರ ಮೋದಿಯವರನ್ನು ಬಿಟ್ಟು ಬೇರೆ ಯಾರಾದರೂ ಅಧಿಕಾರಕ್ಕೆ ಬಂದರೆ ಒಳಿತು ಎಂದು ಅದು ಆಶಿಸುತ್ತಿದೆ.
ಭಾರತದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿರುವ ವೇಳೆಯಲ್ಲೇ, ಭಾರತದ ಬದಲಾವಣೆಯ ತುಡಿತವನ್ನು ಪಶ್ಚಿಮ ಒಪ್ಪಿಕೊಂಡಿದೆ ಎನ್ನುವುದಂತೂ ಸತ್ಯ. ಆದರೂ ನರೇಂದ್ರ ಮೋದಿಯವರನ್ನು ಬಿಟ್ಟು ಬೇರೆ ಯಾರಾದರೂ ಅಧಿಕಾರಕ್ಕೆ ಬಂದರೆ ಒಳಿತು ಎಂದು ಅದು ಆಶಿಸುತ್ತಿದೆ.
ಬ್ರಿಟನ್ನ 'ಎಕನಾಮಿಸ್ಟ್' ನಿಯತಕಾಲಿಕ ತನ್ನ ಪಾಶ್ಚಿಮಾತ್ಯ ಅಹಂಕಾರದ ಚೌಕಟ್ಟಿನಲ್ಲಿ, ಬಣ್ಣಬಣ್ಣದ ದೃಷ್ಟಿಕೋನದಿಂದ ಇತ್ತೀಚೆಗೆ ಮೋದಿ ಕುರಿತು ವರದಿಯೊಂದನ್ನು ಪ್ರಕಟಿಸಿತ್ತು. ಅದು ಹೇಳುತ್ತದೆ- "ಒಂದು ವೇಳೆ ಗೆಲುವು ಭಾರತೀಯ ಜನತಾ ಪಾರ್ಟಿಗೆ ದೊರೆತರೆ, ಅದರ ಮಿತ್ರ ಪಕ್ಷಗಳು ಪ್ರಧಾನಿ ಹುದ್ದೆಗೆ ಮೋದಿ ಬದಲು ಬೇರೆ ಯಾರನ್ನಾದರೂ ಕೂಡಿಸಲು ಪಟ್ಟುಹಿಡಿಯಬೇಕು" ಎಂದು!
ಯಾವ ಹಳೆಯ ಪಶ್ಚಿಮ ವಸಾಹತು ನಮ್ಮನ್ನು "ಬೈಬಲ್ನ ಮೂಲಕ ಗುಣಪಡಿಸಬೇಕಾದ ಕ್ರಿಶ್ಚಿಯನೇತರ ಸಾಂಪ್ರದಾಯಿಕ ರೋಗಿಗಳು" ಎಂದು ಬಣ್ಣಿಸಿತ್ತೋ, ಆ ವಸಾಹತು ಇಂದಿಗೂ ಕೆಲವು ಪಶ್ಚಿಮದ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಜೀವಂತವಾಗಿದೆಯೆಂದೆನಿಸುತ್ತಿದೆ.
ಆರ್ಥಿಕತೆ ಕುಸಿದಾಗ ಮತ್ತು ಭ್ರಷ್ಟಾಚಾರ ಹೆಚ್ಚಿರುವಾಗ ಒಂದು ರಾಷ್ಟ್ರಕ್ಕೆ ಜನಾದೇಶದ ಬೆಂಬಲದಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕನ ಅಗತ್ಯವಿರುತ್ತದೆ. ಇಂಥ ಬದಲಾವಣೆ 'ಆರ್ಥಿಕ ಅಧೋಗತಿಗಿಳಿದಿರುವ' ಪಶ್ಚಿಮದ ಸರ್ಕಾರಗಳಿಗೆ ಹೊಸ ಭರವಸೆ ಮತ್ತು ಸಂತೋಷವನ್ನು ಮೂಡಿಸಬೇಕು.
ಆದರೆ, ಬಲಿಷ್ಠ ಪ್ರಜಾಪ್ರಭುತ್ವ ಭಾರತದಿಂದ ಪ್ರಾದೇಶಿಕ ಶಾಂತಿ ಮತ್ತು ಅಧಿಕಾರ ಸಮತೋಲನ ಸಾಧ್ಯವಾಗುತ್ತದೆ ಎನ್ನುವುದು ತಿಳಿದಿದ್ದರೂ, ಭಾರತೀಯ ಮತದಾರರ ಒಲವಿಗೆ ತಲೆಬಾಗದ ಅಮೆರಿಕದ ಮಾಧ್ಯಮಗಳು ಮತ್ತು ಕೆಲವು ಕಟ್ಟರ್ಪಂಥಿ ಕ್ರಿಶ್ಚಿಯನ್ ಲಾಬಿಗಳು, ಏನಕೇನ ಮೋದಿಯನ್ನು ತಡೆಯಬೇಕೆಂದು ಪ್ರಯತ್ನಿಸುತ್ತಲೇ ಇವೆ. ಭಾರತದ ಅಭ್ಯುದಯವನ್ನು ತಡೆಯುವುದಕ್ಕೆ ಕೆಲವು ಕ್ಷುದ್ರ ಶಕ್ತಿಗಳು ಏನಾದರೂ ಅಶುಭ ತಂತ್ರಗಳನ್ನು ಹೆಣೆಯಬಹುದು ಎನ್ನುವ ಭಯವಿದೆಯಾದರೂ, ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾವ ದುಷ್ಟ ಶಕ್ತಿಗಳಿಂದಲೂ ಸಾಧ್ಯವಿಲ್ಲ.
ಸ್ವತಂತ್ರ ಭಾರತದಲ್ಲಿ ಈವರೆಗೂ ಇಂಥ ಅಭೂತಪೂರ್ವ ಘಟನೆ ನಡೆದಿರಲೇ ಇಲ್ಲ. ಭಾರತೀಯರು ತಮ್ಮ ನಿರ್ಣಾಯಕ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತಿದ್ದಾರೆ. ಆದರೆ ಪಶ್ಚಿಮಕ್ಕೆ ಇಂಥ ಭಾರತ ಬೇಕಿಲ್ಲ, ಅದಕ್ಕೇನಿದ್ದರೂ ಅಂಜುಬುರುಕ, ಪರಾಧೀನ ಭಾರತವೇ ಇಷ್ಟ! ಬಿಜೆಪಿಯೇ ಅಧಿಕಾರದಲ್ಲಿರಲಿ ಅಥವಾ ಕಾಂಗ್ರೆಸ್. ಪಶ್ಚಿಮ ಬಯಸುವುದು, ಅದಕ್ಕೆ ಬೇಕಿರುವುದು ತನಗೆ ವಿಧೇಯನಾಗಿರುವ ನಾಯಕತ್ವವೊಂದೇ.
ಆದರೆ ಮೋದಿ ಭಿನ್ನ ಜಗತ್ತಿನವರು, ಆ ಜಗತ್ತನ್ನು ಅರ್ಥಮಾಡಿಕೊಳ್ಳಲು ಪಶ್ಚಿಮಕ್ಕೆ ಸಾಧ್ಯವಾಗುತ್ತಿಲ್ಲ. ಭಾರತವನ್ನು ಸೋಕಾಲ್ಡ್ ಪ್ರಗತಿಪರರು, ಆಂಗ್ಲರ ಗುಲಾಮರಾದ ಬುದ್ಧಿಜೀವಿಗಳ ಮೂಲಕ ನೋಡುತ್ತಿದ್ದ ಪಶ್ಚಿಮದ ಮಾಧ್ಯಮಗಳಿಗೆ ಮತ್ತು ಅವುಗಳ ಭಾರತದ ವಾರ್ತಾ ಸಂಗ್ರಾಹಕರಿಗೆ, ಮೋದಿಯೆನ್ನುವ ಈ ಅಸಾಧಾರಣ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಕೇವಲ ಎಡಪಂಥೀಯ ದ್ವೇಷಮಯ ಸಾಹಿತ್ಯದ ಮೂಲಕವಷ್ಟೇ ತಿಳಿದುಕೊಂಡಿರುವ ಅವರುಗಳೆಲ್ಲ; ಮೋದಿ ಎನ್ನುವ ವ್ಯಕ್ತಿಯನ್ನು ಕೂಡ, ಕೇಂಬ್ರಿಜ್ಗೆ ಆಗಾಗಿ ಹಾರಿಹೋಗಿ ಸುದ್ದಿ ಮುಟ್ಟಿಸುವ ಅಂತಾರಾಷ್ಟ್ರೀಯ ಮಟ್ಟದ ಬುದ್ಧಿಜೀವಿಗಳ ದೃಷ್ಟಿಯಿಂದ ನೋಡಿದ್ದಾರೆ.
ಗುಜರಾತ್ನ ಹಳ್ಳಿಯೊಂದರ ಶಾಲೆಯಲ್ಲಿ ಮತ್ತು ಮೂರು ವರ್ಷಗಳು ಕಠಿಣ ಆರ್ಎಸ್ಎಸ್ ತರಬೇತಿಯೊಂದಿಗೆ ಬೆಳೆದಿರುವ ಈ ಹೊಸ ನಾಯಕನೊಂದಿಗೆ ಮುಂದೆ ಹೇಗೆ ವ್ಯವಹರಿಸಬೇಕೋ ಎನ್ನುವು ಗೊಂದಲ ಅವರಿಗಿದೆ. ಈ ಹೊಸ ಯೋಚನೆಯ ಬಗ್ಗೆ ಇರುವ ತಮ್ಮ ಅಜ್ಞಾನ ಮತ್ತು ನಿರ್ಲಕ್ಷ್ಯದಿಂದಾಗಿ ಅವರ ಮನಸ್ಸಿನಲ್ಲಿ ಹೆದರಿಕೆಯೊಂದು ಹುಟ್ಟಿಕೊಂಡುಬಿಟ್ಟಿದೆ. ಅದಕ್ಕಾಗೇ ಅವರು ಹೇಳುತ್ತಿರುವುದಿಷ್ಟೆ- "ಇದೇನೋ ಹೊಸತು, ಹಾಗಾಗಿ ಇದು ಕೆಟ್ಟದ್ದು!'
ಮೋದಿ ಈ ಮಣ್ಣಿನ ಮಗ. ಇಂಗ್ಲಿಷ್ ಅನ್ನೂ ಕೂಡ ಅವರು ಭಾರತೀಯ ಶೈಲಿಯಲ್ಲೇ ಮಾತನಾಡುತ್ತಾರೆ. ಆಕ್ಸಬ್ರಿಡ್ಜ್ ಧಾಟಿಯಲ್ಲಲ್ಲ. ನೆಹರು ಕುಲದ ಪಾಶ್ಚಿಮಾತ್ಯ ಅನುಕರಣೆಯನ್ನು ಮೊದಲಿನಿಂದಲೂ ಮೆಚ್ಚಿಕೊಂಡು ಬಂದಿದ್ದ ಪಶ್ಚಿಮದ ಮಾಧ್ಯಮಗಳಿಗೆ ಮೋದಿ ಯಾರು ಎನ್ನುವುದು ಅರ್ಥವಾಗುತ್ತಲೇ ಇಲ್ಲ. ಭಾರತದ ಇತಿಹಾಸದ ಬಗ್ಗೆ ಅರೆಬೆಂದ ತಿಳಿವಳಿಕೆ ಹೊಂದಿರುವ ಮತ್ತು ಚರ್ಚಿಲ್ ಕನ್ನಡಕವನ್ನು ಧರಿಸಿ ಎಲ್ಲವನ್ನೂ ನೋಡುವ ಅವರಿಗೆ, ಭಾರತೀಯರೊಂದಿಗೆ ಭಾರತೀಯ ಭಾಷೆಯಲ್ಲೇ ವ್ಯವಹರಿಸುವ, ತಾವು ತಿರಸ್ಕರಿಸುತ್ತಾ ಬಂದ ಸಂಸ್ಕೃತಿಯಿಂದಲೇ ರೂಪ ತಾಳಿದ ವ್ಯಕ್ತಿಯ ಬೆಳವಣಿಗೆ ಅಷ್ಟೊಂದು ಹಿತಕರವೆನಿಸುತ್ತಿಲ್ಲ. ಇದೆಲ್ಲ ಅವರಿಗೆ ಹೊಸದು. ಪಾಶ್ಚಿಮಾತ್ಯರಿಗೆ ಅರ್ಧ ಬ್ರಿಟಿಷ್ ಮತ್ತರ್ಧ ನೆಹರೂವಿಯನ್ ಗುಣದೊಂದಿಗೆ ರೂಪುಗೊಂಡಿದ್ದ ಭಾರತದ ಮಾದರಿಯ ಪರಿಚಯವಿತ್ತು. ಆದರೆ ಅದಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿರುವ ಮೋದಿ ಮಾದರಿ ಅವರಿಗೆ ಗೊಂದಲ, ಗಾಬರಿ ಹುಟ್ಟಿಸುತ್ತಿದೆ.
ಹೇಗೆ ಅಂದಿನ ವೈಸ್ರಾಯ್ ಭಾರತೀಯರನ್ನು ನೋಡುತ್ತಿದ್ದನೋ, ಅದೇ ರೀತಿಯಲ್ಲೇ ಈಗಲೂ ಭಾರತ ತನ್ನ ಕಣ್ಣಿಗೆ ಕಾಣಿಸಬೇಕು ಎಂದು ಬಯಸುತ್ತಾರವರು. ಹೊಗಳಲು- ಸುಟ್ಟ ಕೆಂಜೇಡಿ ಮಣ್ಣಿನಿಂದ ಮಾಡಿದ ಗಣಪತಿ, ಬುಡಕಟ್ಟು ಕುಂಬಾರಿಕೆ, ಬಸ್ತಾರ್ ಅಥವಾ ಜೋಧ್ಪುರದ ಜಾನಪದ...ಅನುಕಂಪ ಸೂಚಿಸಲು- ಮಾವೋವಾದಿ ಗೆರಿಲ್ಲಾಗಳು, ಬೆಂಬಲ ಕೊಡಲು- ಕಾಶ್ಮೀರದ ಪ್ರತ್ಯೇಕತಾವಾದಿಗಳು ಅವರಿಗೆ ಬೇಕು. ಆದರೆ ಅವರಿಗೆ ಅಯೋಧ್ಯೆ ಬೇಡ, ಹಿಂದುಗಳ ಮಾರಣಹೋಮವನ್ನು ನೋಡುವ ದೃಷ್ಟಿಯೂ ಬೇಡ!
ಅವರ ಕನ್ನಡಕಕ್ಕೆ ಕಾಣಿಸುವ ಒಟ್ಟಾರೆ ಭಾರತವೇ ಇಷ್ಟು. ಪಾಕಿಸ್ತಾನದೊಂದಿಗೆ ಭಾರತ ಮಾತುಕತೆಯಾಡಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸುವವರು ಅವರೇ. ಕಾಮನ್ವೆಲ್ತ್ ಕ್ರೀಡಾಕೂಟವನ್ನು ಶುರುಮಾಡಲು ಬ್ರಿಟನ್ ರಾಣಿಯಿಂದ ಬ್ಯಾಟನ್ ತೆಗೆದುಕೊಂಡು ಬಂದದ್ದು, ಬಕಿಂಗ್ಹ್ಯಾಮ್ ಅರಮನೆಗೆ ಕಾಲಕಾಲಕ್ಕೆ ತೆರಳಿ 'ಪರೋಪಕಾರಿ' ರಾಣಿಯನ್ನು ನೋಡಿ ವಿನೀತ ಭಾವನೆ ಅನುಭವಿಸುವುದು ನಮ್ಮವರಲ್ಲಿ ಕೆಲವರಿಗೆ ಅಭ್ಯಾಸವಾಗಿಬಿಟ್ಟಿದೆ.
ಆದರೆ ಪಶ್ಚಿಮದ ಮುಂದೆ ಬೆನ್ನುಬಾಗಿಸುವ ಗುಣವನ್ನು ಮೊದಲ ಬಾರಿಗೆ ಬದಲಿಸಿ ಅವರಿಗೆಲ್ಲ ಆಘಾತವುಂಟುಮಾಡಿದ್ದು ಅಟಲ್ ಬಿಹಾರಿ ವಾಜಪೇಯಿಯವರ ಸರ್ಕಾರ. ಹಿಂದಿನಿಂದಲೂ ಬ್ರಿಟಿಷರ ಗಡಿಯಾರಕ್ಕೆ ಸರಿಹೊಂದುವ ಸಮಯದಲ್ಲೇ ನಮ್ಮಲ್ಲಿ ಬಜೆಟ್ ಮಂಡಿಸಲಾಗುತ್ತಿತ್ತು. ಭಾರತೀಯರ ಅನುಕೂಲಕ್ಕಿಂತ, ಲಂಡನ್ನಲ್ಲಿನ ಲಾರ್ಡ್ಗಳ ಆರಾಮಕ್ಕೆ ತಕ್ಕ ಸಮಯದಲ್ಲಿ ಬಜೆಟ್ ಮಂಡಿಸಬೇಕು ಎನ್ನುವುದು ನಮ್ಮ ಅಘೋಷಿತ ನಿಯಮವಾಗಿತ್ತು. ಆದರೆ ಈ ನಿಯಮವನ್ನು ಕಾಲಲ್ಲಿ ತುಳಿದು, ಭಾರತೀಯರಿಗೆ ಅನುವಾದ ಸಮಯದಲ್ಲೇ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದ್ದು ವಾಜಪೇಯಿ ಸರ್ಕಾರ!
ಮೋದಿಯವರ ಅಭ್ಯುದಯದೊಂದಿಗೆ, 'ಬ್ರಿಟನ್ ಸೇವಕ' ಭಾರತೀಯರ ವಸಾಹತು ನಾಶವಾಗುತ್ತದೆ ಎನ್ನುವ ಭಯದ ವಾತಾವರಣ ಸೃಷ್ಟಿಯಾಗಿದೆ. ವಾಜಪೇಯಿಯವರ ನೇತೃತ್ವದಲ್ಲಿ ಪೋಕ್ರಾನ್-2 ಪರೀಕ್ಷೆ ನಡೆದಾಗ, ಭಾರತದ ಮೇಲೆ ಮೊದಲು ರೊಚ್ಚಿಗೆದ್ದು ಹರಿಹಾಯ್ದದ್ದೇ ಈ ಪಾಶ್ಚಿಮಾತ್ಯ ರಾಷ್ಟ್ರಗಳು. ಅವು ವಾಜಪೇಯಿ ಸರ್ಕಾರದ ಧೈರ್ಯವನ್ನು ನೋಡಿ ಎಷ್ಟು ಬೆಚ್ಚಿಬಿದ್ದವೆಂದರೆ, ಭಾರತವನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕವಾಗಿಟ್ಟು, ಅನೇಕ ನಿರ್ಬಂಧಗಳನ್ನು ಹೇರಿಬಿಟ್ಟವು! ಇದೆಲ್ಲದರ ಹೊರತಾಗಿಯೂ, ಇಂದಿಗೂ ಭಾರತದ ವಿದೇಶಾಂಗ ನೀತಿಯ ಪ್ರಮುಖ ಸ್ತಂಭವಾಗಿ ನಿಂತಿದೆ ಭಾರತ ಮತ್ತು ಅಮೆರಿಕದ ಸಂಬಂಧ. ಅಮೆರಿಕದಲ್ಲಿ ಸುಮಾರು 40 ಲಕ್ಷ ವೃತ್ತಿಪರ ಭಾರತೀಯರಿದ್ದಾರೆ ಮತ್ತು ಅವರ ಯೋಗದಾನವನ್ನು ಗುರುತಿಸಿದ ಬರಾಕ್ ಒಬಾಮಾ ಅವರ ಆಡಳಿತ ವೈಖರಿ ಇಂದಿಗೂ ನಮ್ಮ ಮತ್ತು ಅಮೆರಿಕದ ನಡುವಿನ ಗಟ್ಟಿ ಸಂಬಂಧವನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಒಬಾಮಾರ ಗೆಲುವನ್ನು, ಏಳ್ಗೆಯನ್ನು ನೋಡಿ ವಾಶಿಂಗ್ಟನ್ ಎಷ್ಟು ಖುಷಿಪಟ್ಟಿತೋ, ಅಷ್ಟೇ ಖುಷಿಯನ್ನು ಸಾಮಾನ್ಯ ಭಾರತೀಯರೂ ಅನುಭವಿಸಿದರು ಎನ್ನುವುದು ಸುಳ್ಳಲ್ಲ.
ಮುಂಬರುವ ಸರ್ಕಾರ ಇತಿಹಾಸದ ವೈಷಮ್ಯದ ಚೀಲವನ್ನು ಬೆನ್ನಿಗೇರಿಸಿಕೊಳ್ಳಬಾರದು. ಹಾಗಾಗೇ, ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಬದಲಾದ ಸಂಗೀತವನ್ನು ಕೇಳಿಸಿಕೊಳ್ಳಲು ಸಿದ್ಧವಾಗಿವೆಯೇ ಎನ್ನುವುದನ್ನು ತಿಳಿದುಕೊಳ್ಳುವ ಅತ್ಯಗತ್ಯವಂತೂ ಈಗ ಎದುರಾಗಿದೆ. ಇದು ಕೇವಲ ವ್ಯಾಪಾರ ಅಥವಾ ಉದ್ದಿಮೆಗಳಿಗೆ ಸಂಬಂಧಪಟ್ಟ ವಿಷಯವಲ್ಲ. ಸಮಕಾಲೀನ ರಾಜಕೀಯದಲ್ಲಿ ಭಾರತ, ಜಪಾನ್ ಮತ್ತು ಅಮೆರಿಕದ ತಾಂತ್ರಿಕ ಸಂಬಂಧವೂ ಅಷ್ಟೇ ಅವಶ್ಯಕವಾದದ್ದು.
ಮೋದಿ ಬೆಳವಣಿಗೆಯಿಂದ ಹೆದರಿರುವ ಎಕನಾಮಿಸ್ಟ್ ಮತ್ತು ಅಂಥದ್ದೇ ದುರ್ಗುಣದ ಅಮೆರಿಕದ ಮಾಧ್ಯಮಗಳ ಆರ್ತನಾದ ಸರಿಯಾದ ಸಮಯಕ್ಕೇ ಹೊರಬಂದಿದೆ.
ಅಮೆರಿಕದ ಕ್ಯಾಪಿಟಲ್ ಹಿಲ್ ಭಾರತದ ಕುರಿತ ತನ್ನ ಸ್ವಭಾವವನ್ನು ತಡವಾಗಿಯಾದರೂ ಬದಲಾಯಿಸಿಕೊಂಡಿದೆ. ಅಮೆರಿಕದ ರಾಯಭಾರಿ ನ್ಯಾನ್ಸಿ ಪೋವೆಲ್ ತಮ್ಮ ಸ್ಥಾನದಿಂದ ಕೆಳಕ್ಕಿಳಿದಿದ್ದಾರೆ. ಏಕೆಂದರೆ ಇವರು ಮೊದಲಿನಿಂದಲೂ ಭಾರತದ ಎಡಪಂಥೀಯ, ಪಾಶ್ಚಿಮಾತ್ಯ ಮನಸ್ಥಿತಿಯ ಬುದ್ಧಿಜೀವಿಗಳೊಂದಿಗೇ ಹೆಚ್ಚು ಕಾಲಕಳೆದವರು. ಈಗ ಅವರ ರಾಜೀನಾಮೆಯನ್ನು ಪಡೆದಿರುವ ಅಮೆರಿಕ ಸರ್ಕಾರ ಅವರ ಜಾಗದಲ್ಲಿ ಸ್ವೀಕಾರಾರ್ಹ ವ್ಯಕ್ತಿಯನ್ನು ಕೂರಿಸಿ ಭಾರತಕ್ಕೆ ಕಳುಹಿಸಲಿದೆ ಎನ್ನಲಾಗುತ್ತಿದೆ. ಆದರೆ ನಮ್ಮಲ್ಲಿ ಚುನಾವಣೆ ಹತ್ತಿರವಾಗುತ್ತಿರುವ ವೇಳೆಯಲ್ಲೇ ಅಮೆರಿಕ ಕಾಂಗ್ರೆಸ್ನಲ್ಲಿನ ಕೆಲವು ಗದ್ದಲಗಳು ನಡೆದು, ಅಮೆರಿಕದ ಕೆಲವು ರಾಜಕಾರಣಿಗಳ ನಿಜಸ್ವರೂಪ ಬೆತ್ತಲಾಗಿದೆ.
ಏಪ್ರಿಲ್ 4ರಂದು ಅಮೆರಿಕ ಸೆನೆಟ್ನ ಮಾನವ ಹಕ್ಕು ಆಯೋಗ, "ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ" ಬಗ್ಗೆ ನ್ಯಾಯವಿಚಾರಣೆ ನಡೆಸಿತು. ಆದರೆ ಅದರ ಒಟ್ಟಾರೆ ಉದ್ದೇಶ ಮೋದಿಯವರನ್ನು ಟೀಕಿಸುವುದೇ ಆಗಿತ್ತು! ಆಘಾತಕರ ಅಂಶವೆಂದರೆ, "ಭಾರತದಲ್ಲಿ ಅಲ್ಪಸಂಖ್ಯಾತರ ನ್ಯಾಯಾಲಯಗಳನ್ನು(ಇಸ್ಲಾಮಿಕ್ ಕೋರ್ಟ್ಗಳನ್ನು) ಬಲಪಡಿಸುವ ಅವಶ್ಯಕತೆಯಿದೆ" ಎಂಬುದು ಅದರ ಅಭಿಮತವಾಗಿತ್ತು!
ಅದರ ಮಾತನ್ನು ಕೇಳಿದ್ದೇ, ಅಮೆರಿಕದಲ್ಲಿನ ಕೆಲವು ಹಿಂದು ಸಂಘಟನೆಗಳು ಮತ್ತು ಪ್ರತಿನಿಧಿಗಳು ತಿರುಗಿಬಿದ್ದರು. ತುಲ್ಸಿ ಗಬ್ಬಾರ್ಡ್ ಮತ್ತು ಬ್ರಾಡ್ ಶೆರ್ಮೆನ್ರಂಥ ನಾಯಕರು, ಮಾನವಹಕ್ಕು ಆಯೋಗದ ವಿಚಾರಣೆಯನ್ನು ತೀವ್ರವಾಗಿ ಖಂಡಿಸಿ ಕಳವಳ ವ್ಯಕ್ತಪಡಿಸಿದರು. "ಭಾರತದಲ್ಲಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ಅಮೆರಿಕದ ಮಾನವ ಹಕ್ಕು ಆಯೋಗ ಈ ಹೆಜ್ಜೆಯಿಟ್ಟಿದೆ. ಒಂದು ವೇಳೆ ಆ ಚುನಾವಣೆಯಲ್ಲಿ ಮೂಗು ತೂರಿಸಲು ಅಮೆರಿಕ ಪ್ರಯತ್ನಿಸಿತೆಂದರೆ, ಆ ನಡೆ ನಮಗೇ ಉಲ್ಟಾಹೊಡೆಯಲಿದೆ" ಎಂದು ಶೆರ್ಮೆನ್ ಹೇಳಿದ್ದಾರೆ. ಅಮೆರಿಕ ಮತ್ತು ಬ್ರಿಟನ್ಗೆ ನಿಜವಾಗಲೂ ಬೇಕಿರುವುದು ತಮ್ಮ ಉದ್ದೇಶಗಳನ್ನು ಈಡೇರಿಸಬಲ್ಲ, ತಾವು ಹೇಳಿದಂತೆ ಕೇಳಬಲ್ಲ ಭಾರತ. ಆದರೆ ಭಾರತೀಯರೆಲ್ಲರೂ ಒಟ್ಟಾಗಿ ತಮ್ಮ ಕನಸಿನ ಭಾರತವನ್ನು ನಿರ್ಮಿಸಲು ಮುಂದಾಗಿದ್ದಾರೆ. ಭಾರತದ ಭವಿಷ್ಯವನ್ನು ಭಾರತೀಯರೇ ಬರೆದುಕೊಳ್ಳಲಿದ್ದಾರೆ ಎನ್ನುವುದು ನಿಶ್ಚಿತ.
ನಮ್ಮ ಏಳ್ಗೆಯನ್ನು ತಡೆಯಲು ಪಶ್ಚಿಮಕ್ಕೆ ಸಾಧ್ಯವಿಲ್ಲ. ಇದರ ಅರಿವು ಅವರಿಗೂ ಆಗಿದೆ. ಆದರೆ ಒಂದು ವೇಳೆ, ಪಾಶ್ಚಾತ್ಯ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಲಾಮು ಹಾಕುವ ನಮ್ಮವರು ಬದಲಾವಣೆಯತ್ತ ನೋಡಲು ಮನಸ್ಸು ಮಾಡುವುದಿಲ್ಲವೆಂದರೆ, ಅದಕ್ಕಿಂತ ದುರ್ದೈವದ ಸಂಗತಿ ಮತ್ತೊಂದಿರಲಾರದು.
-ತರುಣ್ ವಿಜಯ್
tarunvijay2@yahoo.com