ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಾಚಸ್ಪತಿ ಮಿಶ್ರಾ-ಭಾಮತಿಯನ್ನು ನೆನಪಿಸುವ ಮೋದಿ ವಿವಾಹ

Srinivasa Murthy VN
Updated On : 11 Apr 2014, 11:14 am

ಇತ್ತೀಚೆಗೆ ಪ್ರಕಾಶಕ್ಕೆ ಬಂದಿರುವ ಸುದ್ದಿಯೆಂದರೆ ಐದು ದಶಕಗಳ ಹಿಂದೆ ನರೇಂದ್ರ ಮೋದಿ ಹಾಗೂ ಅವರ ಪತ್ನಿ ಜಶೋದಾಬೆನ್‌ರವರು ಬಾಲ್ಯ ವಿವಾಹವಾಗಿದ್ದರೆಂಬುದು. ಇದರ ಹಿಂದಿರುವ ಅವರೀರ್ವರ ಭಾವನಾತ್ಮಕ ಸಂಬಂಧ, ಸ್ವಭಾವ, ತ್ಯಾಗಮಯ ಜೀವನ, ಆದರ್ಶಪೂರ್ಣ ಮತ್ತು ಸ್ಫೂರ್ತಿದಾಯಕವಾದದ್ದು.
ಇದು ಐದು ದಶಕಗಳ ಹಿಂದಿನ ಘಟನಾವಳಿ. ಭಾರತದಲ್ಲಿ ಬಹುಪುರಾತನ ಕಾಲದಿಂದ ನಡೆದು ಬಂದಿದ್ದ ಬಾಲ್ಯವಿವಾಹ ಪದ್ಧತಿ ಆ ಕಾಲದಲ್ಲಿ ಸಹಜವಾಗಿತ್ತು. ಮುಖ್ಯವಾಗಿ ರಾಜಸ್ಥಾನ, ಗುಜರಾತ್ ಭಾಗದಲ್ಲಿ ಈ ಪದ್ಧತಿ ಮುಂದುವರಿದೇ ಇತ್ತು. ಕಾರಣ ಹೆಣ್ಣು ಮಗುವಿನ ತಂದೆ ತಾಯಂದಿರ, "ಆದಷ್ಟು ಬೇಗ ತಮ್ಮ ಮಗಳಿಗೆ ವಿವಾಹ ಮಾಡಿ ಅವಳನ್ನು ಪತಿಗೆ ವಹಿಸಿ ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸಬೇಕು" ಎನ್ನುವ ಹಂಬಲ. ಇದು ಎಲ್ಲ ತಂದೆ ತಾಯಿಯರಲ್ಲೂ ಸಹಜವಾಗಿತ್ತು. ನರೇಂದ್ರ ಮೋದಿ ಮತ್ತು ಜಶೋದಾಬೆನ್‌ಗೆ ಮದುವೆಯಾದಾಗ, ಮೋದಿಯವರಿಗೆ ಕೇವಲ 17 ವರ್ಷ ಮತ್ತು ಜಶೋದಾಬೆನ್‌ರಿಗೆ ಹತ್ತು ವರ್ಷದ ಪ್ರಾಯ. ವಿವಾಹವೆಂದರೇನು ಎನ್ನುವುದೇ ಗೊತ್ತಿಲ್ಲದಿರುವಾಗಲೇ ಅವರ ಮದುವೆ ನಡೆದುಹೋಯಿತು. ಅದಕ್ಕೆ ಮೊದಲೇ, ಅಂದರೆ ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘ ನೀಡಿದ್ದ ದೇಶಪ್ರೇಮದ ಪಾಠ ಮತ್ತು ಮಾತೃಭೂಮಿಯ ಸೇವೆಗಾಗಿ ತನು, ಮನ, ಧನ ಸಮರ್ಪಣೆ ಮಾಡುವ ಸಂಸ್ಕಾರವನ್ನು ನರೇಂದ್ರ ಮೋದಿ ಪಡೆದಿದ್ದರು. ಪ್ರತಿನಿತ್ಯ ಸಂಘದ ಶಾಖೆಯಲ್ಲಿ ಮಾಡುತ್ತಿದ್ದ ಪ್ರಾರ್ಥನೆಯ ಈ ಸಾಲುಗಳು ಅವರನ್ನು ಮಂತ್ರಮುಗ್ಧಗೊಳಿಸಿತ್ತು- "ನಮಸ್ತೇ ಸದಾವತ್ಸಲೇ ಮಾತೃಭೂಮೇ, ಮಹಾಮಂಗಲೇ ಪುಣ್ಯಭೂಮೆ, ತ್ವದರ್ಥಿ ಪತತ್ವೇಷ ಕಾಯೋ ನಮಸ್ತೇ ನಮಸ್ತೇ (ವಾತ್ಸಲ್ಯಪೂರ್ಣ, ಮಹಾಮಂಗಳಕರಳಾದ ಮಾತೃಭೂಮಿಯೇ ನಿನಗೆ ನಮಸ್ಕಾರ, ನಿನಗಾಗಿ ನನ್ನ ದೇಹ ತ್ಯಾಗವಾಗಲಿ.) ಈ ಸಾಲುಗಳ ಅಚ್ಚಳಿಯದ ಸಂಸ್ಕಾರವನ್ನು ಅವರ ಕಣ ಕಣದಲ್ಲಿ ಸೇರಿಸಿದ್ದವು.  
ಮಾತೃಭೂಮಿಯ ಸೇವೆಯ ಪ್ರೇರಣೆಯೇ ಅವರನ್ನು ದಾಂಪತ್ಯ ಜೀವನಕ್ಕೆ ಧುಮುಕಲು ಬಿಡಲಿಲ್ಲ. ಅವರು ತಮ್ಮ ಸಂಪೂರ್ಣ ಜೀವನವನ್ನು ಭಾರತ ಮಾತೆಯ ಸೇವೆಗಾಗಿಯೇ ಸಮರ್ಪಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದರು. ಸಂಘದ ಪ್ರಚಾರಕರದ್ದು ಅತಿ ಕಷ್ಟದ ಹಾಗೂ ತ್ಯಾಗಮಯೀ ಜೀವನ. ಹಾಗಾಗಿ ವೈವಾಹಿಕ ಜೀವನವನ್ನು ತ್ಯಾಗಮಾಡಿ ಕಳೆದು ಐದು ದಶಕಗಳಿಂದ ದೇಶಕ್ಕಾಗಿ ಅವಿಶ್ರಾಂತರಾಗಿ ದುಡಿಯುತ್ತಿದ್ದಾರೆ ಮೋದಿಯವರು. ಅವರ ಪತ್ನಿ ಜಶೋದಾಬೆನ್, ಪತಿಯ ಭಾವನೆಯನ್ನು ಅರ್ಥಮಾಡಿಕೊಂಡು ದಾಂಪತ್ಯ ಜೀವನದಿಂದ ವಂಚಿತರಾದರೂ ಪತಿಯ ಕೈಂಕರ್ಯಕ್ಕೆ ಯಾವುದೇ ರೀತಿಯಲ್ಲಿ ಅಡ್ಡಬರದೆ, ಸಂಯಮಪೂರ್ಣ ಜೀವನ ನಡೆಸುತ್ತಾ, ನಾಲ್ಕು ದಶಕಗಳ ಕಾಲ ಶಾಲಾ ಶಿಕ್ಷಕಿಯಾಗಿ ದುಡಿದು, ಈಗ ನಿವೃತ್ತಿಯಾಗಿದ್ದಾರೆ. ಈಗಲೂ ಅವರು ಹೆಮ್ಮೆಯಿಂದ 'ಜಶೋದಾಬೆನ್ ನರೇಂದ್ರಮೋದಿ' ಎಂದೇ ಸಹಿ ಮಾಡುತ್ತಾರೆ. ಸದಾ ತಮ್ಮ ಪತಿಯ ಅಭ್ಯುದಯವನ್ನೇ ಬಯಸುತ್ತಿರುವ ಜಶೋದಾಬೆನ್ ನಿಜವಾಗಿಯೂ ವಂದನೀಯಳು.
ದಾಂಪತ್ಯ ಜೀವನದಿಂದ ವಂಚಿತಳಾದ ಒಬ್ಬ ಮಹಿಳೆ ತನ್ನ ಪತಿಯ ಬಗ್ಗೆ ಕೋಪ ಹಾಗೂ ತಾತ್ಸಾರದ ಭಾವನೆ ಹೊಂದುವುದು ಹಾಗೂ "ಅವನು ಹಾಳಾಗಿ ಹೋಗಲಿ" ಎಂದು ಶಪಿಸುವಂಥ ಸಾಕಷ್ಟು ನಿದರ್ಶನಗಳಿವೆ.  ಆದರೆ, ಏಕಾಂಗಿಯಾಗಿ ವಿರಹ ವೇದನೆಯಿಂದ ನರಳುತ್ತಿದ್ದರೂ ತನ್ನ ಪತಿಯ ಅಭ್ಯುದಯವನ್ನೇ ಬಯಸುವ ಜಶೋದಾಬೆನ್ ಅಪರೂಪದ ಅತಿಶ್ರೇಷ್ಠ ಉದಾಹರಣೆಯಾಗಿದ್ದಾರೆ. ಶ್ರೀರಾಮನನ್ನು ರಕ್ಷಿಸಲು, ಆತನ  ಸೇವೆ ಮಾಡಲು ತನ್ನ ಪತಿಯನ್ನು(ಲಕ್ಷ್ಮಣನನ್ನು) ಹದಿನಾಲ್ಕು ವರ್ಷಗಳು ವನವಾಸಕ್ಕೆ ಹೋಗಲು ಸಂತೋಷದಿಂದಲೇ ಅನುಮತಿ ನೀಡಿದ ಊರ್ಮಿಳೆಗೆ ಹೋಲಿಸಬಹುದಾದ ಗುಣಗಳನ್ನು, ಸಂಯಮವನ್ನು ಜಶೋದಾಬೆನ್ ಪ್ರದರ್ಶಿಸಿದ್ದಾರೆ.  
ನರೇಂದ್ರ ಮೋದಿಯವರು ಬಯಸಿದ್ದರೆ ಅರಮನೆಯಂತಹ ಮನೆಯಲ್ಲಿ ಪತ್ನಿಯೊಂದಿಗೆ ಸುಖವಾಗಿ ಜೀವನ ನಡೆಸಬಹುದಿತ್ತು. ಆದರೆ "ಮಾತೃಭೂಮಿಯೇ, ನಿನ್ನನ್ನು ಪರಮ ವೈಭವಕ್ಕೆ ಕೊಂಡೊಯ್ಯಲು ನಾವು ಸಮರ್ಥರಾಗುವಂತೆ ಆಶೀರ್ವದಿಸು" ಎಂಬ ಸಂಘದ ಪ್ರಾರ್ಥನೆ ಅವರನ್ನು ಬದಲಿಸಿತ್ತು.
ಮೋದಿ ಎಂತಹ ತ್ಯಾಗಮೂರ್ತಿ ಎಂದರೆ, ಒಮ್ಮೆ ಅವರು ತಮಗೆ ವಿವಿಧ ಸ್ಥಳಗಳಲ್ಲಿ ನೀಡಲಾಗಿದ್ದ ಉಡುಗೊರೆಗಳನ್ನೆಲ್ಲ ಹರಾಜು ಹಾಕಿ ಅದರಿಂದ ಬಂದ ಹದಿನೈದು ಲಕ್ಷ ರುಪಾಯಿಗಳನ್ನು ಸರ್ಕಾರದ ಬೊಕ್ಕಸಕ್ಕೆ ತುಂಬಿದ್ದರು. "ಸರ್ವೇಷಾಮೇವ ಶೌಚಾನಾಂ ಅರ್ಥಶೌಚಂ ಪರಂ ಸ್ಮೃತಂ" ಎನ್ನುವ ಸಂಸ್ಕೃತ ಸುಭಾಷಿತವೊಂದರಂತೆ, ಎಲ್ಲ ಶುದ್ಧತೆಗಳಲ್ಲೂ, ಹಣಕಾಸಿನ ವಿಷಯದಲ್ಲಿನ ಶುದ್ಧತೆ ಶ್ರೇಷ್ಠ. ಇದನ್ನು ಅಕ್ಷರಶಃ ಪಾಲಿಸುತ್ತಿರುವ ಶ್ರೇಷ್ಠ ರಾಜಕಾರಣಿ ನರೇಂದ್ರ ಮೋದಿ. ಅವರ ಅಭ್ಯುದಯವನ್ನು ಸಹಿಸದೆ, ಅವರನ್ನು ನಾನಾ ರೀತಿಯ ಸುಳ್ಳು ಆಪಾದನೆಗಳಿಗೆ ಒಳಮಾಡಿ, ಅವರ ಪ್ರಭಾವಕ್ಕೆ ಕುಂದು ತರುವ ಎಲ್ಲಾ ಪ್ರಯತ್ನಗಳೂ ಅಸಫಲವಾಗಿರುವುದು ಸತ್ಯ. ಅವರು ತಾವು ಪಕ್ಷಕ್ಕಿಂತ ದೊಡ್ಡವರೆಂದು ತಿಳಿದು ವರ್ತಿಸುತ್ತಿದ್ದಾರೆ ಎಂಬುದು ಸಹ ಅಪ್ಪಟ ಸುಳ್ಳು. ಅವರ ನಿಸ್ವಾರ್ಥ ಸೇವೆ, ನೇತೃತ್ವದ ಗುಣ, ಆರ್ಥಿಕ ವ್ಯವಹಾರದಲ್ಲಿನ ಶುದ್ಧಹಸ್ತತೆ, ಕಾರ್ಯಕರ್ತರ ವಿಶ್ವಾಸ ಪಡೆಯುವ ಗುಣ, ಅನುಶಾಸನಪೂರ್ಣ ಜೀವನ ಇವುಗಳಿಂದಾಗಿ ಬಹುಜನರ ಆಣತಿಗೆ ತಕ್ಕಂತೆ ಪ್ರಧಾನಮಂತ್ರಿ ಸ್ಥಾನಕ್ಕೆ ಸ್ಪರ್ಧಿಸಲು ಅವರನ್ನು ಆರಿಸಲಾಗಿದೆ. ಆದರೂ ಅವರನ್ನು ಸರ್ವಾಧಿಕಾರಿ ಎನ್ನುತ್ತಾ, ಆ ಕಾರಣಕ್ಕಾಗಿಯೇ ಅವರನ್ನು ಆಯ್ಕೆಮಾಡಲಾಗಿದೆ ಎಂದು ಹುಸಿ ಪ್ರಚಾರ ಮಾಡಲಾಗುತ್ತಿದೆ.  
 ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತಿರುವುದು ಬಾದರಾಯಣರ ಬ್ರಹ್ಮಸೂತ್ರಕ್ಕೆ ಅತ್ಯಂತ ಮಹತ್ವವಾದುದೆಂದು ಪ್ರಖ್ಯಾತವಾದ, 'ವಾಚಸ್ಪತಿ ಮಿಶ್ರಾ' ಬರೆದ ವ್ಯಾಖ್ಯಾನ. ಅದನ್ನು ಬರೆಯಲು ಅವರು ಹದಿನೈದು ವರ್ಷ ತೆಗೆದುಕೊಂಡರು. ಈ ದೀರ್ಘ ಕಾಲದಲ್ಲಿ ಅವರ ದಿನ ನಿತ್ಯದ ಅವಶ್ಯಕತೆಗಳನ್ನು ಪೂರೈಸುತ್ತಿದ್ದವರು ಅವರ ಪತ್ನಿ.  ಅವರು ತಮ್ಮ ವ್ಯಾಖ್ಯಾನವನ್ನು ಬರೆದು ಮುಗಿಸಿದ ನಂತರ, ತಮಗೆ ದಿನವೂ ಭೋಜನ ನೀಡುತ್ತಿದ್ದ ಮಹಿಳೆಯನ್ನು ಕೇಳಿದರಂತೆ "ನೀನು ಯಾರು?" ಎಂದು. ಆಗ ಆ ಮಹಿಳೆಯಿಂದ ಬಂದ ಉತ್ತರ "ನಾನು ನಿಮ್ಮ ಪತ್ನಿ ಭಾಮತಿ"! ಆಗಲೇ ಅವರಿಗೆ ನೆನಪಿಗೆ ಬಂತಂತೆ, ಆ ಮಹಿಳೆ ತನ್ನ ಪತ್ನಿ ಎನ್ನುವುದು. ಸುದೀರ್ಘಕಾಲ ಬ್ರಹ್ಮಸೂತ್ರಕ್ಕೆ ವ್ಯಾಖ್ಯಾನವನ್ನು ಬರೆಯಲು ಸಹಕರಿಸಿದ ಭಾಮತಿ ತಾನು ಧನ್ಯಳೆಂದಳು. ವಾಚಸ್ಪತಿ ಮಿಶ್ರಾ ಆಕೆಯ ಹೆಸರನ್ನೇ ಗ್ರಂಥಕ್ಕೆ ಇಟ್ಟರು.
ಇದೇ ರೀತಿ ಐದು ದಶಕಗಳ ಕಾಲ ತಮ್ಮ ಪತಿಯ ಸಹವಾಸದಿಂದ ವಂಚಿತರಾಗಿದ್ದರೂ, "ಪತಿಯು ಮಾತೃಭೂಮಿಯ ಸೇವೆಗಾಗಿಯೇ ತಮ್ಮ ಸರ್ವಸ್ವವನ್ನು ಸಮರ್ಪಣೆ ಮಾಡುತ್ತಿದ್ದಾರೆ" ಎಂಬುದರಲ್ಲೇ ತೃಪ್ತಿಪಟ್ಟುಕೊಂಡು ಅವರ ಅಭ್ಯುದಯಕ್ಕಾಗಿಯೇ ಪ್ರಾರ್ಥನೆ ಮಾಡುತ್ತಾ, ತೀರ್ಥಯಾತ್ರೆಯಲ್ಲಿ ತೊಡಗಿರುವ ಜಶೋದಾಬೆನ್ ಆಧುನಿಕ ಭಾಮತಿಯಾಗಿದ್ದಾರೆ. ಮೋದಿಯವರ ಬಗ್ಗೆ ಜಶೋದಾಬೆನ್ ಹೇಳುತ್ತಾರೆ: "ಮೋದಿಯೇ ನನ್ನ ಪತಿ. ದೇಶಸೇವೆಯ ಆಸೆ ಹೊತ್ತು ಮನೆ ಬಿಟ್ಟ ಕಾರಣ ಅವರೆಂದೂ ತನ್ನ ಜತೆ ಸಂಸಾರ ಮಾಡಲಿಲ್ಲ. ಆದರೆ, ಅವರು ಪ್ರಧಾನಿಯಾಗುವುದು ಖಚಿತ. ಅವರ ಬಗ್ಗೆ ನನಗೇನೂ ಬೇಸರವಿಲ್ಲ."
ನರೇಂದ್ರ ಮೋದಿಯವರ ಬಗ್ಗೆ ಅವರ ಅಣ್ಣ ಸೋಮಭಾಯಿಯವರು ಈ ರೀತಿ ಹೇಳಿದ್ದಾರೆ: ವಿವಾಹದ ನಂತರ ಮನೆಯನ್ನು ತೊರೆದ. ಬಳಿಕ ಆತ ಕುಟುಂಬದ ಸದಸ್ಯರೊಂದಿಗೆ ಯಾವುದೇ ನಂಟು ಹೊಂದಿರಲಿಲ್ಲ. ದೇಶ ಸೇವೆ ಆತನ ಏಕೈಕ ಉದ್ದೇಶವಾಗಿತ್ತು. ಇನ್ನು ಜಶೋದಾಬೆನ್ ಕೂಡಾ ತಂದೆಯ ಮನೆಯಲ್ಲಿ ವಾಸವಿದ್ದು, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.  
ಇಂತಹ ವ್ಯಕ್ತಿ ರಾಷ್ಟ್ರದ ಪ್ರಧಾನಮಂತ್ರಿಯಾದರೆ ಭಾರತವನ್ನು ಸರ್ವತೋಮುಖ ಪ್ರಗತಿಯತ್ತ ಮತ್ತು ಪರಮವೈಭವಕ್ಕೆ ಕೊಂಡೊಯ್ಯಬಲ್ಲರು. ಜಶೋದಾಬೆನ್‌ರಂತೆಯೇ ಮೋದಿಯವರ ಗೆಲುವಿಗಾಗಿ ಕೋಟ್ಯಂತರ ಅಭಿಮಾನಿಗಳೂ ಇಂದು ಪಾರ್ಥನೆ ಮಾಡುತ್ತಿದ್ದಾರೆ.

=  ನ್ಯಾ. ಡಾ. ಮ. ರಾಮಾ ಜೋಯಿಸ್, ರಾಜ್ಯಸಭಾ ಸದಸ್ಯರು, ವಿಶ್ರಾಂತ ರಾಜ್ಯಪಾಲರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement