ಅಂಕಣಗಳು

10ನೇ ಕ್ಲಾಸಿನವಳಿಂದ ಹೀಗೊಂದು ಪತ್ರ

'ಸಾರ್, ನನಗೆ ಮತದಾನದ ಹಕ್ಕಿಲ್ಲ. ಕಾರಣ ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ..

ಭಾರತ ಯಾವ್ಯಾವ ರೀತಿಯಿಂದ ವಿಶಿಷ್ಟ ಅನ್ನಿಸುವಂಥ ದೇಶ ಹಾಗೂ ಅಲ್ಲಿ ಐದು ವರ್ಷಕ್ಕೊಮ್ಮೆ ನಡೆದ ಲೋಕಸಭಾ ಚುನಾವಣೆಗೆ ಯಾಕೆ ಅಷ್ಟೊಂದು ಮಹತ್ವವಿದೆ ಎಂಬುದನ್ನು ವಿವರಿಸಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಒಂದು ಅಪರೂಪದ, ಆಪ್ತ ಬರಹವೊಂದನ್ನು ಪ್ರಕಟಿಸಿದೆ. ಆ ಬರಹದ ಭಾವಾನುವಾದ ಇಲ್ಲಿದೆ.

'ಸಾರ್, ನನಗೆ ಮತದಾನದ ಹಕ್ಕಿಲ್ಲ. ಕಾರಣ ನಾನು ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ಆದರೆ ಪ್ರತಿದಿನ ಪತ್ರಿಕೆ ಓದಿ, ನಮ್ಮ ದೇಶದ ಪರಿಸ್ಥಿತಿಯೇನೆಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಮೂರು ವರ್ಷಗಳ ಹಿಂದೆ, ಮಕ್ಕಳ ದಿನಾಚರಣೆ ದಿನದಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಿರಿ ಎಂದು ನೀವು ಹೇಳಿದಾಗ ಅದಕ್ಕೆ ಸ್ಪಂದಿಸಿ ನಾನೂ ಬರೆದಿದ್ದೆ. ಅದನ್ನು ನೀವು ಪತ್ರಿಕೆಯಲ್ಲಿ ಪ್ರಿಂಟ್ ಮಾಡಿದ್ದೀರಿ. ಅಂದಿನಿಂದ ನಾನು ಚಾಚೂ ತಪ್ಪದೇ ಪತ್ರಿಕೆಯನ್ನು ಓದುತ್ತಿದ್ದೇನೆ. ನನ್ನ ತಂದೆ-ತಾಯಿ ಬಳಿ ಅರ್ಥವಾಗದ ಸಂಗತಿಗಳನ್ನು ಚರ್ಚಿಸುತ್ತೇನೆ. ಇತ್ತೀಚೆಗೆ ನಾನು ಬರೆದ ಪುಟ್ಟ ಅನಿಸಿಕೆಯನ್ನು ಕಳಿಸುತ್ತಿದ್ದೇನೆ. ಮೋದಿಯರ ಪರವಾಗಿ ಬರೆದಿದ್ದು. ದಯವಿಟ್ಟು ಇದನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ. ಫೇಸ್‌ಬುಕ್‌ನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನ ಇದನ್ನು ಲೈಕ್ ಮಾಡಿದ್ದಾರೆ. ಒಬ್ಬ ರಾಜಕೀಯ ವ್ಯಕ್ತಿ ಅಥವಾ ಪಕ್ಷದ ನಾಯಕನ ಪರವಾಗಿ ಬರೆದಿದ್ದು ಎಂದು ಕಸದಬುಟ್ಟಿಗೆ ಎಸೆದು ಬಿಡಬೇಡಿ. ಎಳೆ ಮಗುವಿನ ಬರಹ ಎಂದು ಲಘುವಾಗಿ ಭಾವಿಸಬೇಡಿ. ನಾನು ಬರೆದಿದ್ದನ್ನು ನೀವು ಒಪ್ಪಬಹುದು, ತಿರಸ್ಕರಿಸಲೂಬಹುದು. ಏನೇ ಆಗಲಿ, ಪ್ರಕಟಿಸಿ ದಯಮಾಡಿ.' ಧನ್ಯವಾದಗಳು-ಎಂ. ಶ್ವೇತಾ. ತುಮಕೂರು.
ಮೋದಿಯನ್ನು ನಾನೇಕೆ ಇಷ್ಟಪಡುತ್ತೇನೆಂದರೆ...
1. ಅವರು ಅಂಬಾನಿ ಏಜೆಂಟ್ ಆಗಿರಲಿ ಅಥವಾ ಅದಾನಿ ಏಜೆಂಟ್ ಆಗಿರಲಿ, ಅವರು ಪಾಕಿಸ್ತಾನದ ಏಜೆಂಟ್ ಅಲ್ಲ ಎನ್ನುವ ವಿಶ್ವಾಸ ನನಗಿದೆ.
2. ಮೋದಿಗೆ ವೋಟು ಕೊಡಲು ನನಗೆ ಸರಿಯಾದ ಕಾರಣ ಗೊತ್ತಿಲ್ಲದಿರಬಹುದು, ಆದರೆ ಕಾಂಗ್ರೆಸ್ ಅಥವಾ ಆಪ್‌ಗೆ ವೋಟು ಕೊಡದಿರಲು ಇರುವ ಕಾರಣ ಚೆನ್ನಾಗಿ ಅರಿತಿದ್ದೇನೆ.
3. ಮೋದಿಯವರು, ಗುಜರಾತ್ ಮಾದರಿಯಲ್ಲಿ ದೇಶವನ್ನು ಆಳುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ 49 ದಿನಗಳ ನಂತರ ಅವರು ಓಡಿ ಹೋಗಲಾರರು ಎಂಬ ಪೂರ್ಣ ವಿಶ್ವಾಸ ನನಗಿದೆ.
4. ಮೋದಿಯವರು ದೇಶದಲ್ಲಿ ಹಿಂದುತ್ವವನ್ನು ಪ್ರತಿಪಾದಿಸುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಅವರು, ಇಮಾಂ ಬುಖಾರಿ ಅಥವಾ ತೊಖಿರ್ ರಾಜಾ ಅಂತಹವರ ಜೊತೆ ಕೈ ಜೋಡಿಸುವುದಿಲ್ಲ ಎನ್ನುವ ಪೂರ್ಣ ವಿಶ್ವಾಸ ನನಗಿದೆ.
5. ಕಾಂಗ್ರೆಸ್ ಸರಕಾರ ಇಲ್ಲಿಯವರೆಗೆ ನೀಡಿದ ಆಶ್ವಾಸನೆಗಳಲ್ಲಿ ಎಷ್ಟನ್ನು ಈಡೇರಿಸಿದೆ ಎನ್ನುವ ಅಂಕಿಸಂಖ್ಯೆ ನನಗೆ ತಿಳಿದಿಲ್ಲ, ಆದರೆ, ಮೋದಿಯವರು ಗುಜರಾತಿನ ಜನತೆಗೆ ನೀಡಿದ ಭರವಸೆಗಳನ್ನು ಈಡೆಸಿರಿದ್ದಾರೆ ಎನ್ನುವ ಜ್ಞಾನ ನನಗಿದೆ.
6. ಈ ದೇಶ ಈಗಾಗಲೇ ಕಳೆದುಕೊಂಡಿರುವ ತನ್ನ ಭೂಭಾಗಗಳನ್ನು (ಕಿಕಓ ಮತ್ತು ಅರ್ಧ ಲಧಾಕ್) ಮೋದಿ ಭಾರತಕ್ಕೆ ಪುನಃ ತರುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ನಮ್ಮ ಕಾಶ್ಮೀರ ಸಹಿತ ಉಳಿದಿರುವ ಗಡಿಭಾಗಗಳನ್ನು ಯಾರಿಗೂ ಬಿಟ್ಟು ಕೊಡಲಾರರು ಎನ್ನುವ ವಿಶ್ವಾಸ ನನಗಿದೆ.
7. ಬಿಜೆಪಿಯ ಹಿರಿಯ ಧುರೀಣರು ಮೋದಿಯವರೊಂದಿಗೆ ಸಂತುಷ್ಟರೋ, ಅಸಂತುಷ್ಟರೋ ನನಗೆ ಗೊತ್ತಿಲ್ಲ.
ಆದರೆ, ಭಾರತದ ಪ್ರಜ್ಞಾವಂತ ಯುವಜನತೆಯ ಬೆಂಬಲ ಮೋದಿಯವರಿಗಿದೆ ಎನ್ನುವ ಅರಿವು ನನಗಿದೆ.
ಕೊನೆಯದಾಗಿ,
8. ಮೋದಿಯವರಿಗೆ ಭಾರತದ ಇತಿಹಾಸದ ಬಗ್ಗೆ ಗೊತ್ತಿದೆಯೋ ಇಲ್ಲವೋ ನನಗೆ ತಿಳಿಯದು. ಆದರೆ, ಭಾರತದ ಭವಿಷ್ಯದ ಬಗ್ಗೆ ಅವರಿಗೆ ಸರಿಯಾದ ದೃಷ್ಟಿಕೋನವಿದೆ ಎನ್ನುವುದು ನನಗೆ ತಿಳಿದಿದೆ.
ಲೋಕಸಭಾ ಚುನಾವಣೆ ಕುರಿತು ನ್ಯೂಯಾರ್ಕ್ ಟೈಮ್ಸ್...
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಅನ್ನಿಸಿಕೊಂಡಿರುವ ಭಾರತದಲ್ಲಿ ಲೋಕಸಭಾ ಚುನಾವಣೆ ಎಂಬ ಮಹಾಯುದ್ಧ ಆರಂಭವಾಗಿ ಹೋಗಿದೆ. ಕೆಲವು ರಾಜ್ಯಗಳಲ್ಲಿ ಮತದಾನವೂ ಮುಗಿದಿದೆ. ಇಂಥ ಸಂದರ್ಭದಲ್ಲಿಯೇ ನಮ್ಮ ಕೆಲವು ರಾಷ್ಟ್ರೀಯ ದೈನಿಕಗಳು ಹಾಗೂ ಟಿ.ವಿ. ಚಾನೆಲ್‌ಗಳು-'ಅಯ್ಯೋ, ಚುನಾವಣೆಯ ನೆಪದಲ್ಲಿ ವಿಪರೀತ ಗದ್ದಲ ಆಗ್ತಾ ಇದೆಯಲ್ರೀ, ಇದೆಲ್ಲಾ ಬೇಕೇನ್ರೀ ನಮಗೆ? ಏನ್ರೀ ಈ ದೇಶದ ಕರ್ಮ, ಮುಂದೆ ಭವಿಷ್ಯ ಏನಾಗ್ತದೋ ಗೊತ್ತಿಲ್ಲಾರೀ...' ಎಂದೆಲ್ಲಾ ವಟಗುಡುತ್ತ ಕೊಂಕು ಮಾತಾಡುತ್ತಿರುವ ಸಂದರ್ಭದಲ್ಲಿಯೇ, ಭಾರತ ಯಾವ್ಯಾವ ರೀತಿಯಿಂದ ವಿಶಿಷ್ಟ ಅನ್ನಿಸುವಂಥ ದೇಶ ಹಾಗೂ ಅಲ್ಲಿ ಐದು ವರ್ಷಕ್ಕೊಮ್ಮೆ ನಡೆದ ಲೋಕಸಭಾ ಚುನಾವಣೆಗೆ ಯಾಕೆ ಅಷ್ಟೊಂದು ಮಹತ್ವವಿದೆ ಎಂಬುದನ್ನು ವಿವರಿಸಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಒಂದು ಅಪರೂಪದ, ಆಪ್ತ ಬರಹವೊಂದನ್ನು ಪ್ರಕಟಿಸಿದೆ. ಆ ಬರಹದ ಭಾವಾನುವಾದ ಇಲ್ಲಿದೆ:
    ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ  ನಡೆವ ಮಹಾ ಚುನಾವಣೆ, ಎಲ್ಲ ರೀತಿಯಿಂದಲೂ ಬಹು ದೊಡ್ಡ ಪ್ರದರ್ಶನವೆಂದೇ ಹೇಳಬೇಕು. ಭವಿಷ್ಯದ ದಿನಗಳಲ್ಲಿ ತಮ್ಮ ನಾಯಕರು ಯಾರಾಗಬೇಕು ಎಂದು ಆಯ್ಕೆ ಮಾಡಲು 70 ಕೋಟಿಗೂ ಹೆಚ್ಚು ನಾಗರೀಕರು ಮತದಾನದ ಮೂಲಕ ತಮ್ಮ ಹಕ್ಕು ಪ್ರದರ್ಶಿಸುವ ಈ ಸಂದರ್ಭವನ್ನು ಮಹಾಪ್ರದರ್ಶನವೆಂದೇ ಕರೆಯಬೇಕು.
    ವರ್ಷವಿಡೀ ಅಸ್ಥಿರತೆ ಹಾಗೂ ಹಿಂಸಾಚಾರದ ನಡುವೆಯೇ ನರಳುವ ಚೀನಾ, ಪಾಕಿಸ್ತಾನ ಹಾಗೂ ಬರ್ಮಾಗಳನ್ನು ನೆರೆಹೊರೆಯ ರಾಷ್ಟ್ರಗಳಾಗಿ ಹೊಂದಿದ್ದರೂ, ಭಾರತವು ಸದೃಢತೆಯನ್ನು ಕಾಯ್ದುಕೊಂಡಿರುವುದು ಸಣ್ಣ ಸಂಗತಿಯಲ್ಲ.
    ಈ ದೇಶದಲ್ಲಿ ನೂರಾರು ಭಾಷೆ - ಸಂಸ್ಕೃತಿಗಳಿವೆ. ಎಲ್ಲ ಧರ್ಮದವರೂ ವಾಸವಿದ್ದಾರೆ. ಶಾಂತಿಯ ಜೊತೆಯಲ್ಲಿ ಭಯೋತ್ಪಾದನೆಯ ಕರಿ ನೆರಳೂ ಇದೆ. ದೇಶದೊಳಗೂ ಸಮಸ್ಯೆಗಳಿವೆ. ನೆರೆಹೊರೆಯ ರಾಷ್ಟ್ರಗಳಿಂದಲೂ ಸಮಸ್ಯೆಗಳು ಎದುರಾಗುತ್ತಿವೆ. ಅಭಿವೃದ್ಧಿ ಕೆಲಸಗಳು ನಾಲ್ಕು ಹೆಜ್ಜೆ ಮುಂದಕ್ಕೂ -ಆರು ಹೆಜ್ಜೆ ಹಿಂದಕ್ಕೂ ಸಾಗಿ ಆಗಿಂದ್ದಾಗೆ ತಾಳಮೇಳ ತಪ್ಪುತ್ತಿದೆ. ಆದರೂ, ಎಲ್ಲ ಸವಾಲುಗಳನ್ನು ಭಾರತ ದಿಟ್ಟವಾಗಿ ಎದುರಿಸುತ್ತಿದೆ, ಹೆದರಿಸುತ್ತಿದೆ!
    ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ ಧರ್ಮಗಳು ಜನ್ಮ ತಾಳಿದ ನಾಡು ಹಾಗೂ ಅತಿ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮರು ವಾಸಿಸುತ್ತಿರುವ ಜಗತ್ತಿನ ಎರಡನೇ ಅತಿ ದೊಡ್ಡ ದೇಶ ಎಂಬ ಹೆಗ್ಗಳಿಕೆಗೆ,
    ರೋಮನ್ನರು ಆಕ್ರಮಣ ನಡೆಸಿದ ಸಂದರ್ಭದಲ್ಲಿ ಪ್ರಾಣ ಭಯದಿಂದ ದೇಶ ತೊರೆದು ಬಂದ ಯಹೂದಿಗಳಿಗೆ ಆಶ್ರಯ ನೀಡಿದ ನಾಡು ಎಂಬ ಹಿರಿಮೆಗೆ,
    ಟಿಬೆಟ್ಟಿಯನ್ನರ ಧರ್ಮಗುರು ದಲೈಲಾಮಾ ಹಾಗೂ ಸಾವಿರಾರು ಮಂದಿ ಟಿಬೆಟಿಯನ್ ಜನರಿಗೆ ವಾಸಿಸಲು ನೆಲೆ ನೀಡಿದ ಹೆಮ್ಮೆಗೆ,
    2000 ವರ್ಷಗಳ ಹಿಂದೆಯೇ, ಕ್ರೈಸ್ತ ಮತಕ್ಕೂ ತನ್ನ ನೆಲಕ್ಕೆ ಕಾಲಿಡಲು ಅವಕಾಶ ಮಾಡಿಕೊಟ್ಟ ದಿಟ್ಟತನಕ್ಕೆ ಭಾರತ ಹೆಸರಾಗಿದೆ.
    ಅಷ್ಟೇ ಅಲ್ಲ; ಅಮೆರಿಕ, ಸಿರಿಯಾ ಹಾಗೂ ಹಲವು ದೇಶಗಳ ನಾಗರೀಕರು, ಭಾರತವೇ ನಮ್ಮ ಅಚ್ಚುಮೆಚ್ಚಿನ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
    ಹಿಂದೂ ರಾಷ್ಟ್ರ ಎಂಬ ಹಿರಿಮೆಯ ಈ ದೇಶ, ರಾಷ್ಟ್ರಪತಿಯಂಥ ಮಹೋನ್ನತ ಹುದ್ದೆಗೆ ಮುಸ್ಲಿಮ್ ನಾಯಕರನ್ನು ಒಂದಲ್ಲ ಎರಡಲ್ಲ, ಮೂರು ಬಾರಿ ಆಯ್ಕೆ ಮಾಡಿದೆ.
    ಸಿಖ್ ಜನಾಂಗದ ಒಬ್ಬ ವ್ಯಕ್ತಿಯನ್ನು ಪ್ರಧಾನಮಂತ್ರಿಯನ್ನಾಗಿಯೂ, ಅದೇ ಆಡಳಿತ ಪಕ್ಷದ ನಾಯಕಿಯ ಸ್ಥಾನಮಾನವನ್ನು ವಿದೇಶಿ ಮಹಿಳೆಗೆ ಬಿಟ್ಟು ಕೊಡುವ ಔದಾರ್ಯವನ್ನು ಈ ದೇಶ ಮೆರೆದಿದೆ.
    ರಾಷ್ಟ್ರಪತಿಯಂಥ ಅತಿ ಮುಖ್ಯ ಹುದ್ದೆಯಲ್ಲಿ ಓರ್ವ ಮಹಿಳೆಯನ್ನು ಕೂರಿಸುವಂಥ ದಿಟ್ಟತನ ಹಾಗೂ ರಾಕೆಟ್ ತಂತ್ರಜ್ಞರೊಬ್ಬರಿಗೆ ಅದೇ ಮಹತ್ವದ ಸ್ಥಾನ ನೀಡುವಂಥ ರಿಸ್ಕ್ ಅನ್ನೂ ಈ ದೇಶ ಯಶಸ್ವಿಯಾಗಿ ನಿಭಾಯಿಸಿದೆ.
    ಆರ್ಥಿಕ ಸ್ವಾವಲಂಬನೆಯ ಹಾಗೂ ಐಟಿಐ ತಂತ್ರಜ್ಞಾನದ ವಿಷಯದಲ್ಲಿ ಅಮೆರಿಕಕ್ಕೆ ಸರಿಸಮನಾದ ಪೈಪೋಟಿ ನೀಡುವ ಹಂತಕ್ಕೂ ಮುಂದಿನ ಐದು ವರ್ಷಗಳಲ್ಲಿ ಭಾರತ ತಲುಪಲಿದೆ ಎಂಬ ಅನಿಸಿಕೆ ಹಲವರಿಗಿದೆ.
    ಹಲವು ವಿಷಯಗಳಲ್ಲಿ ಇರಬಹುದಾದ ಸ್ಪಂದನೆ ಮತ್ತು ಆಶಾವಾದವನ್ನು ತನ್ನ ನೆಲದ ಸಿನಿಮಾ, ಕಲೆ, ಆರ್ಥಿಕ ಸ್ಥಿರತೆ, ಮತದಾನದಂಥ ಪ್ರಕ್ರಿಯೆಗಳ ಮೂಲಕ ಸಮರ್ಥವಾಗಿ ವ್ಯಕ್ತಪಡಿಸುತ್ತಾ, ಸವಾಲುಗಳನ್ನು ಸ್ವೀಕರಿಸಲು ನಾನು ಸದಾ ಸಿದ್ಧ ಎಂದು ಈ ದೇಶ ಸುಸ್ಪಷ್ಟವಾಗಿ ಆಗಿಂದ್ದಾಗ್ಗೆ ಹೇಳುತ್ತಲೇ ಇದೆ.
    ಉಳಿದೆಲ್ಲ ರಾಷ್ಟ್ರಗಳೂ ತಮ್ಮ ಅಸ್ತಿತ್ವ ತೋರ್ಪಡಿಸಲು ಬಗೆಬಗೆಯ ಸರ್ಕಸ್ ಮಾಡುವ ಸಂದರ್ಭದಲ್ಲಿಯೇ ತನ್ನ ಪ್ರಾದೇಶಿಕ ವೈವಿಧ್ಯತೆಯ ಮೂಲಕವೇ ವಿಶ್ವಭೂಪಟದಲ್ಲಿ ಭಾರತವು ವಿಶಿಷ್ಟ ಸ್ಥಾನ ಪಡೆದುಕೊಂಡಿದೆ.
    ಇಷ್ಟೆಲ್ಲಾ ವಿಶಿಷ್ಟ ಹಿನ್ನೆಲೆ ಹೊಂದಿರುವ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಅನ್ನಿಸಿಕೊಂಡಿರುವ ಭಾರತದಲ್ಲಿ ಐದು ವರ್ಷಗಳ ಕಾಲ ಅಧಿಕಾರ ನಡೆಸುವ ಹಕ್ಕು ಯಾರಿಗೆ ಎಂದು ನಿರ್ಣಯಿಸಲು ಮತದಾನ ನಡೆಯುತ್ತಿದೆ. ಈ ಬೆಳವಣಿಗೆ, ಇಡೀ ಜಗತ್ತಿಗೆ ಕುತೂಹಲದ ಸಂಗತಿಯೂ ಹೌದು. ಸ್ಫೂರ್ತಿ ನೀಡುವ ಸುದ್ದಿಯೂ ಹೌದು.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!