ಕಮಲಾಕರಕಸಬರಿಗೆ, ವೋಟು ಯಾರಿಗೆ?
ಮತದಾನಕ್ಕೆ ನಾಲ್ಕು ದಿನ ಬಾಕಿ ಇದೆ ಅನ್ನುವಾಗ 'ಯಂನಾಸೀ ಮಿತ್ರ ಬಳಗ'ದಲ್ಲಿ ಜಿಜ್ಞಾಸೆ ಗರಿಗೆದರಿತು. ಯಾರಿಗೆ ವೋಟು ಹಾಕಬೇಕು ಎಂಬ ಪ್ರಶ್ನೆಯು ತಳಮಳದ ರೂಪ ಪಡೆದು ಯಂನಾಸೀಗಳಲ್ಲಿ ಕೇಜ್ರಿವಾಲನಂತಹ ಚಡಪಡಿಕೆಗೆ ಕಾರಣೀ'ಭೂತ'ವಾಯಿತು. ಆದರೆ ರಾಹುಲ್ನಂತೆ ಸದಾ ಕೂಲ್ ಆಗಿರುವ ಯಂಕನು, 'ನಾಣೀದು ನೋಟಾ', ಎಂದು ಸೀನನ ಮುಖ ನೋಡುತ್ತ ವದರಿದನು. ಇದನ್ನು ಪ್ರಶ್ನೆಯೆಂದು ತಪ್ಪು ತಿಳಿದ ನಾಣಿಯು ಮೋದಿ ಸ್ಟೈಲ್ನಲ್ಲಿ 'ಭಾರತ್ಮಾತೆಯ ಸುಪುತ್ತರ್ ಆಗಿರುವ ನಾನು ನೋಟಿಗಾಗಿ ವೋಟು ಮಾರಿಕೊಳ್ಳುವ ಭ್ರಷ್ಟ ಎಂದಿಗೂ ಅಲ್ಲ, ಮಿಸ್ಟರ್ ಯಂಕಾ! 'ನೋಟಾ?' ಎಂದು ಕೇಳಲು ನಿನಗೆಷ್ಟು ಧೈರ್ಯ?' ಎಂದು ಯಂಕನತ್ತ ಒಂದು ಕೈತಿರುವಿ ಸೀನನ ಕಡೆಗೆ ಮೈ ತಿರುವಿ ನಿಂತನು.
ನಾಣಿಗೆ ವಿಷಯ ಬಿಡಿಸಿ ಹೇಳಲು ಯಂಕನು (ರಾಹುಲನಂತೆ) ತೋಳೇರಿಸಿಕೊಳ್ಳುತ್ತ ಒದ್ದಾಡುತ್ತಿರುವಷ್ಟರಲ್ಲಿ ಸೀನನು, 'ಯಂಕ ಹೇಳಿದ್ದು ಎನ್ಓಟಿಎ ನೋಟಾ. ಅರ್ಥಾತ್ 'ನನ್ ಆಫ್ ದ ಎಬೊವ್ ಎಂಬ ಬಟನ್ನು', ಎಂದು ನುಡಿದು ಅಪಾರ್ಥವನ್ನು ದೂರಮಾಡಿದನು. ಆಗ ನಾಣಿಯು 'ಹೀಗಾ ಸಮಾಚಾರ?' ಮೊನ್ನೆ ಮೊನ್ನೆವರೆಗೂ, ನೋಟಾ ಬಟನ್ನೇ ಒತ್ತೋವಾ ಅಂದ್ಕೊಂಡಿದ್ದೆ. ಆದರೆ, ನರೇಂದ್ರ ಮತ್ತು ಶೆಹಜಾದೇ ಬೆಂಗೂರಿಗೆ ಬಂದು ಹೋದ ನಂತರ ಕಮಲವಾ, ಕರವಾ, ಕಸಬರಿಗೆಯಾ ಅಂತ ಕನ್ಫ್ಯೂಶನ್ ಶುರುವಾಗಿದೆ,' ಎಂದು ಹೊಸ ಫ್ಯೂಷನ್ ಬಾಂಬ್ ಎಸೆದನು!
'ಏನು ಅಂತಹ ಕನ್ಫ್ಯೂಷನ್?' ಅಂತ ಯಂಕನು ಕೇಳಲಾಗಿ ನಾಣಿಯು ವಿವರಿಸಿದ್ದು ಹೀಗೆ. 'ನರೇಂದ್ರ ಅವರು ಹೋಲೋಗ್ರಾಂನಲ್ಲಿ ಕಾಣಸಿಕೊಂಡು ನಿಜ ಎಂಬ ಭ್ರಮೆ ಹುಟ್ಟಸಿದರು. ಶೆಹ್ಜಾದೇ ರಾಂಪಣ್ಣನು ಭಾಷಣದಲ್ಲಿ ಹೇಳಿದ್ದು ಏನೆಂದು ಸ್ವತಃ ಅವನಿಗೇ ಅರ್ಥವಾಗಿಲ್ಲವೆಂಬುದು ಅವನ ಮುಖ ನೋಡಿದರೇ ಗೊತ್ತಾಗುತ್ತಿತ್ತು. ಇನ್ನು, ಕಸಬರಿಗೆಯವರು, ಮಾವಿನ ಹಣ್ಣಿನ ಸೀಸನ್ ಆರಂಭವಾಗುತ್ತಿರುವುದರಿಂದ, ಆಮ್ಫಲ್ ಹುಡುಕಿಕೊಂಡು ಯತ್ಲಾಗೆ ಒಂಟೋದ್ರೋ ಪತ್ತೆಯೇ ಇಲ್ಲ. ಆದಾಗ್ಯೂ ಕೂಡ, ಇವರೆಲ್ಲರ ಕಠಿಣ ಪರಿಶ್ರಮಗಳನ್ನು ನೋಡಿದರೆ ಇವರಲ್ಲೇ ಒಬ್ಬರಿಗೆ ಬಟನ್ ಅಮುಕಬೇಕು ಅನ್ಸುತ್ತೆ. ಇವರೆಲ್ಲರೂ ನಿಜವಾ, ಭ್ರಮೆಯಾ ಎಂಬುದೇ ಕನ್ಫ್ಯೂಷನ್ನು.'
'ಐ ಅಬ್ಜಕ್ಟ್ ಯುವರ್ ಡಿಸಾನರ್! ಆಬ್ಜಕ್ಟಿವ್ ಆಗಿ ಮಾತಾಡು ಮಿಸ್ಟರ್ ನಾರ್!' ಎಂದು ಸೀನನು ನಾರ್ ಉರಫ್ ನಾರಾಯಣ ಉರಫ್ ನಾಣಿಯು ಕನ್ಫ್ಯೂಶನ್ನಿಗೆ ಪ್ರತಿಯಾಗಿ ವಾಸ್ತವವನ್ನು ಇನ್-ಫ್ಯೂಷನ್ ಮಾಡಲು ಯತ್ನಿಸುತ್ತ ಹೀಗೆಂದನು, 'ಕರಕಮಲಕಸಬರಿಗೆಯವರ ಉಪಸ್ಥಿತಿಯ ಮೇಲೆ ನಿರ್ಧಾರ ತೆಗೆದುಕೊಳ್ಳಲು ಹೋಗಿ ಕನ್ಫ್ಯೂಶನ್ನಿಗೊಳಗಾಗಬೇಡ. ಅವರ ಆಬ್ಜೆಕ್ಟ್ಗಳನ್ನು ಸಬ್ಜೆಕ್ಟ್ ಮಾಡಿಕೋ, ಕ್ಲಿಯರೈಡಿಯಾ ಬರುತ್ತೆ. ಕರವೀರಕುವರರು ಕರುನಾಡಿನಲ್ಲಿ ಸಂಚರಿಸಿ, ಕಮಲಿಗರ ಮೊಬೈಲು ಹರತಾಳಗಳನ್ನೇ ದೊಡ್ಡದು ಮಾಡಿ, ಗಡ್ಡ (ಇದೆಯಾ ಎಂದು ತಿಳಿದುಕೊಳ್ಳಲು) ನೀವಿಕೊಳ್ಳಲಿಲ್ಲವಾ? ನರೇಂದ್ರರು, ಹಾಲೋಗ್ರಾಂ ಎಂದು ಭ್ರಮೆ ಹುಟ್ಟಿಸುವ ಮುನ್ನವೇ, ಬೆಂಗೂರಿನಲ್ಲಿ ಅವತರಿಸಿ, 'ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ' ಎಂಬಂಥ ಅದ್ಭುತಭಾಷಣ ಬಿಗಿಯಲಿಲ್ಲವಾ?' ಏಕ್ ಭಾರತ್ ಅನ್ನಲಿಲ್ಲವಾ? ಕಸಬರಿಗೆಯವರು, 'ಸೀಯೆಂ ನೈ ಬನ್ನಾ ಹೈ, ಪೀಯೆಂ ನೈ ಬನ್ನಾ ಹೈ, ಕೇವಲ್ ಬನಾನಾ ಬನ್ನಾ ಹೈ' ಎಂದಂಥ ಅವರ ಲೀಡ್ರು ರೋಡ್ ಶೋ ಹೊಂಟಿದ್ದಾಗ, ರಸ್ತೆಬದಿ ಸುಮ್ಕೆ ನಿಂತಿದ್ದ ನಿನ್ನ ತಲೆಗೂ ಟೋಪಿ ಹಾಕಿ ಹಲ್ಕಿರಿಯಲಿಲ್ವಾ? ಕರದ ಪ್ರಧಾನಿ ಆರಾಮವಾಗಿರುವುದನ್ನು ನೋಡು. ಕಮಲದ ಪ್ರಣಾಳಿಕೆಯಲ್ಲಿ ರಾಮ ರಹೀಮ ಇರುವುದನ್ನು ನೋಡು. ಕಸಬರಿಗೆಯವರು ಹರಾಮರನ್ನು ಗುಡಿಸಿಹಾಕಲು ಗುಡುಗುತ್ತ ಹೊರಟಿರುವುದನ್ನು ನೋಡು. ಮೂವರಲ್ಲಿ ಯಾರಿಗೆ ಎಂದು ಡಿಸೈಡ್ ಮಾಡು. ಸುಮ್ ಸುಮ್ಕೆ ಕನ್ಫ್ಯೂಸ್ ಆಗಬೇಡ.
ಸೀನನ ಈ ಅದ್ಭುತ ವಿವರಣೆಯು ಅರ್ಥವಾಗದೆ ಈಗ ನಾಣಿಯ ಜೊತೆಗೆ ಯಂಕನೂ ಕನ್ಫ್ಯೂಷನ್ನಿಗೆ ಈಡಾಗಿಬಿಟ್ಟ! ಯೋಗ್ರಾಜ್ ಭಟ್ಟರ ಮಟ್ಟು ರೂಢಿಸಿಕೊಂಡಿದ್ದ ಸೀನನ ವ್ಯಾಖ್ಯಾನವು, ವೇದೋಪನಿಷತ್ತುಗಳನ್ನು (ಯೋಗ್ರಾಜರಂತೆ) ಅರೆದು ಕುಡಿದಿರದ ಯಂಕ ನಾಣಿಗಳಿಗೆಲ್ಲಿ ಅರ್ಥವಾಗಬೇಕು? ಆದರೆ, ಇಬ್ಬರೂ ಅರ್ಥವಾದವರಂತೆ ತಲೆಯಲ್ಲಾಡಿಸಿದರು. ಸೀನನ ಬಾಯಿಂದ ಇನ್ನೊಂದು ಯೋಗ್ರಾಜ್ ಭಟ್ ಮಟ್ಟು ಕೇಳಿ ಅರಗಿಸಿಕೊಳ್ಳುವ ತಾಕತ್ತು ಅವರಿಬ್ಬರಲ್ಲೂ ಇರಲಿಲ್ಲ. ಆದ್ದರಿಂದ ಈ ವಿಷಯಕ್ಕೆ ಫುಲ್ಸ್ಟಾಪ್ ಹಾಕುವ ಸದುದ್ದೇಶ ಅವರಿಬ್ಬರದ್ದಾಗಿತ್ತು. ಮಾತು ಮುಂದುವರಿಸಲೆಂದೋ ಅಥವಾ ನಿಜಕ್ಕೂ ಅವನೊಳಗೆ ಜಿಜ್ಞಾಸೆಯ ಪೈರು ಬೆಳೆದಿತ್ತೋ, ಯಂಕನು ವಿಷಯಾಂತರ ಮಾಡಿ ಪೈರಿನ ವಿಷಯ ಎತ್ತಿದ.
'ಪೈರಿನ ತೆನೆ ಎತ್ಕೊಂಡು ಹೊಂಟಿರುವ ಒಂಟಿ ಮಹಿಳೆಯೂ ಉಂಟು ಕಣ(ಜ)ದಲ್ಲಿ. ಈಗೀಗ, ಹೆಣ್ಣು ವೇಶದ ಗಂಡಸರು, ಪುಟ್ಟ ಪುಟಾಣಿಗಳೂ ತೆನೆ ಹೊತ್ಕೊಂಡು ತೊನೆದಾಡ್ಲಿಕ್ಕತ್ತ್ಯಾರೆ, ಆ ಮಾತು ಬ್ಯಾರೆ. ನಮ್ಮ ಮಣ್ಣಿನ ಮಗ ಬೆಳೆದು ನಮ್ಮ ಅನ್ನದ ಮಣ್ಣಿನ ತೆನೆ ಅದು. ತೆನೆಗೌಡ್ರಿಗೆ ಬಟನ್ ಒತ್ತೋದು ಬ್ಯಾಡ್ವಾ?'
ಯಂಕನ ಈ ನ್ಯೂ-ಸೆನ್ಸ್ ಕ್ವೆಶ್ಚನ್ ಕೇಳಿ ನಾಣಿಗೆ ನಗುವೋ ನಗು!
ಅಲ್ಲಾ ಯಂಕ್ನನ್ಮಗ್ನೇ, ಅಪ್ಪಾ ಮಗ ಗೆಲ್ಲಾದೇ ಅನುಮಾನ್ವಾಗಿರವಾಗ ಅದ್ಯಾವ ಭಂಡ ಧೈರ್ಯದಿಂದ ನೀನು ತೆನೆಗೌಡ್ರ ಗದ್ಲವ ಗೆಲ್ಸೋ ಕೆಲ್ಸದ ಯೋಚ್ನೆ ಮಾಡ್ತಿದೀ, ಅರ್ಥವಾಗಲ್ಲ ಬಿಡು ನಮ್ಗೆ. ಗೌಡ್ರ ಗದ್ಲ ಏನಿದ್ರೂ ಎರಡು ಡಿಸ್ಟ್ರಿಕ್ಟ್ಗಳಿಗೇ ರಿಸ್ಟ್ರಿಕ್ಟ್. ವೋಟ್ಯಾಕೆ ವೇಸ್ಟ್ ಮಾಡ್ಕತಿದೀ? ಎಂದು ನಾಣಿ ಮತ್ತಷ್ಟು ನಕ್ಕು ಸುಮ್ಮನಾದ.
'ಹಾಗೆಲ್ಲ ನಮ್ಮ ಮಾಜಿ ಪ್ರಧಾನಿಯವರಿಗೆ ಅವಮಾನ ಮಾಡಬ್ಯಾಡ. ನಾಳೆ ದಿನ ಏನಾರ, ಅವರ ಎರಡು ಸೀಟಿಲ್ದೇ ದಿಲ್ಲೀಲಿ ಸರ್ಕಾರ ಫಾರಮ್ ಆಗಲ್ಲ ಅನ್ನುವಂಥ ಸ್ಥಿತಿ ಬಂತೆಂದರೆ ಆಗ ದ್ಯಾವೇಗೌಡ್ರೇ (ಮತ್ತೆ) ಪ್ರಧಾನ ಮಂತ್ರಿ ಆದ್ರೂ ಆಶ್ಚರ್ಯವಿಲ್ಲ. ಅವರಂಥಾ ಮುತ್ಸದ್ದಿ ಈ ದೇಶದಲ್ಲಿ ಯಾರಿದ್ದಾರೆ, ಹೇಳು? ಯಂಕ (ಹುಸಿ) ಕೋಪದಿಂದ ಬುಸುಗುಟ್ಟಿದ. 'ಇಲ್ಲ ಇಲ್ಲ, ದ್ಯಾವೇಗೌಡ್ರು ಪ್ರಧಾನಿ ಪದವಿಯ ಆಕಾಂಕ್ಷಿ ಅಲ್ಲ. ಅವರ ಕುಮಾರ ಆಕಾಂಕ್ಷಿ. ದೆಹಲಿಯಲ್ಲಿ ಯಾವ ರೀತಿ 'ಕೂ' (ಬೆಂಗೂರಿನಲ್ಲಿ ಮಾಡಿದಂತೆ ಕ್ಷಿಪ್ರಕ್ರಾಂತಿ) ಮಾಡಬಹುದೆಂದು ಕುಮಾರ ಈಗಾಗಲೇ ಕ್ಯಾಲ್ಕುಲೇಟ್ ಮಾಡುತ್ತ 'ಕೂ'ತಿರಬಹುದು. ದ್ಯಾವೇಗೌಡ್ರು ಪಾಪ, ಒಂದ್ರೀತಿ, ವಿರಾಗಿ ಅವರೀಗ. ದೇಶಕ್ಕೋಸ್ಕರ ಎಲೆಕ್ಷನ್ಗೆ ನಿಂತಿದ್ದಾರೆ. ಅಷ್ಟೆ. ವಿರಾಗಿ ಮುತ್ಸದ್ದಿ ಅವರು,' ಸೀನ ಸೀನ್ ಬದಲಾಯಿಸಲು ಯತ್ನಿಸಿದ.
ನಾಣಿಗೆ ನಗಲು ಇನ್ನೊಂದು ಅವಕಾಶ ಸಿಕ್ಕಿತು!
ವಿರಾಗಿಯೋ, ಮುತ್ಸದ್ದಿಯೋ, ಮತ್ತೇನೋ, ಅದು ಮೇ ಹದಿನಾರರ ನಂತರ ಗೊತ್ತಾಗುತ್ತೆ. ಸದ್ಯಕ್ಕಂತೂ ನಮ್ದ್ಯಾವೇಗೌಡ್ರು, 'ವಿ-ತ್ಸ' ಎರಡೂ ತೆಗೆದು ರಾಗಿಮುದ್ದಿ ಗೌಡ್ರು ಅಷ್ಟೇಯ,' ಎನ್ನುತ್ತ ನಾಣಿ ಮತ್ತೆ ನಗತೊಡಗಿದ. 'ನೀತಿ ಸಂಹಿತೆ ಉಲ್ಲಂಘನೆ ಅಂತ ನಿನ್ನ ವಿರುದ್ಧ ದ್ಯಾವೇಗೌಡ್ರಿಗೆ ಕಂಪ್ಲೇಂಟ್ ಕೊಡಬೇಕಾಗುತ್ತೆ, ಉಷಾರ್!' ಅಂತ ಯಂಕ, ಸೀನ ಇಬ್ಬರೂ ಯೆಚ್ಚರಿಕೆ ನೀಡಿದಾಗ ನಾಣಿ ಹೆದರಿ ಸುಮ್ಮನಾದ.
ಕಮಲಾಕರಕಸಬರಿಗೆಯ ಜೊತೆಗೆ ತೆನೆಯಾಕೆಯೂ ಸೇರಿಕೊಂಡು,'ಯಂನಾಸೀ ಮಿತ್ರಬಳಗ'ದ ಸಮಸ್ಯೆಯು ಇನ್ನಷ್ಟು ಜಟಿಲವಾಯಿತು! ಯಾರಿಗೆ ವೋಟು? ವೋಟು ಯಾರಿಗೆ?
ಕೊನೆಗೂ ಸಮಸ್ಯೆ ಬಗೆಹರಿಯಲೇ ಇಲ್ಲ ಅಂದರೆ?
ಇದ್ದೇ ಇದೆಯಲ್ಲ, ನೋಟಾ!
(ಆ.ರಾಮ ಶಾಸನ ವಿಧಿಸಿದ ಎಚ್ಚರಿಕೆ: ನೋಟಾ ಬಳಕೆ ದೇಶದ ಆರೋಗ್ಯಕ್ಕೆ ಹಾನಿಕರ)
(ಕೊನೆ ಕುಟುಕು: ಕಮಲ: ಏಕ್ ಭಾರತ್. ಕರ: ಶೇಖ್ ಭಾರತ್. ಕಸಬರಿಗೆ: ಷೇಕ್ ಭಾರತ್. ತೆನೆ: ಶೋಕ್ ಭಾರತ್)
-ಎಚ್. ಆನಂದರಾಮಶಾಸ್ತ್ರೀ