ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಚುನಾವಣಾ ಸಿಬ್ಬಂದಿಗೆ ಎದುರಾಗುವ ಸವಾಲುಗಳೇನು?

Srinivasa Murthy VN
Updated On : 12 Apr 2014, 11:29 am

2014ನೇ ಮಹಾಚುನಾವಣೆಯನ್ನು ಟ್ಟಝಿಜ್ಠ ್ಟಜಿ ಛಟಟ ಢಿಛ್ಠಡ ಎಂದು ಕೆಲವರು ಕರೆದರೆ, ಮತ್ತೆ ಕೆಲವರು ಮಹಾಯಾಗ ಅಥವಾ ಯಜ್ಞ ಎನ್ನುತ್ತಿದ್ದಾರೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಜಾತ್ರೆ ಆರಂಭವಾಗಿದ್ದು, ಚುನಾವಣೆ ಆಯೋಗದಿಂದ ಹಿಡಿದು ತಳಮಟ್ಟದ ಮತಗಟ್ಟೆ ಅಧಿಕಾರಿ (ಬಿಎಲ್‌ಒ)ಗಳ ವರೆಗಿನ ಬಹುದೊಡ್ಡ ಕೈಂಕರ್ಯ ಇದಾಗಿದೆ.
ಬಹುತೇಕ ಸರ್ಕಾರಿ ನೌಕರರು ಭಾಗವಹಿಸುವ, ಅತಿ ಜಾಗ್ರತೆ ತೋರುವ ಲೋಕಸಭಾ ಚುನಾವಣೆ, ಸ್ವಲ್ಪ ನಿರ್ಲಕ್ಷ್ಯಿಸಿದರೆ ದೊಡ್ಡ ಬೆಲೆ ತೆರಬೇಕಾದ ಪ್ರಸಂಗವನ್ನು ಒಡ್ಡಬಹುದು.
1952ರಲ್ಲಿ ದೇಶದ ಮೊದಲ ಚುನಾವಣೆಯಲ್ಲಿ ನಮ್ಮಂಥ 10 ಲಕ್ಷ ಸರ್ಕಾರಿ ನೌಕರರು 2.24 ಲಕ್ಷ ಮತಗಟ್ಟೆಗಳಲ್ಲಿ ಎರಡು ದಿನ ಕಾರ್ಯ ನಿರ್ವಹಿಸಿದ್ದರು. ಆದರೆ, ಈ ಸಲದ 16ನೇ ಸಂಸತ್ ರಚನೆಗೆ ಒಟ್ಟು 55 ಲಕ್ಷ ನೌಕರರು 10 ಲಕ್ಷ ವಿದ್ಯುನ್ಮಾನ ಯಂತ್ರಗಳೊಂದಿಗೆ 9.30 ಲಕ್ಷ ಮತಗಟ್ಟೆಗಳಲ್ಲಿ ತಮ್ಮ ತಾಳ್ಮೆ, ಸಹನೆ ಮತ್ತು ಬುದ್ಧಿವಂತಿಕೆ ಸಾಬೀತುಪಡಿಸಲಿದ್ದಾರೆ. ಒಟ್ಟು 72 ದಿನಗಳ ಅವಧಿಯ ಸಂಪೂರ್ಣ ಪ್ರಕ್ರಿಯೆಗೆ ಸಾಕ್ಷಿಯಾಗಲಿದ್ದಾರೆ. 84 ಕೋಟಿ ಮತದಾರ ಮತದಾನಕ್ಕೆ ಅನುವು ಮಾಡಿಕೊಡಲಿದ್ದಾರೆ.
90ರ ದಶಕದ ಕಾಶ್ಮೀರ ಚುನಾವಣೆಯಲ್ಲಿ ನೌಕರರಿಗೆ ವಿಮೆ, ವಿಮಾನಯಾನ ಸೌಲಭ್ಯಗಳನ್ನು ನೀಡಲಾಗಿತ್ತು. ಇಂದು ನಕ್ಸಲ್‌ಪೀಡಿತ ಸೂಕ್ಷ್ಮ ಮತಗಟ್ಟೆಗಳಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ಆಕಸ್ಮಿಕ ಅವಘಡಗಳಿಗೆ ತುತ್ತಾದರೆ # 10 ರಿಂದ # 20 ಲಕ್ಷವನ್ನು ಎಕ್ಸ್ ಗ್ರೆಶಿಯಾ ಎಂದು ಚುನಾವಣೆ ಆಯೋಗವೇ ಘೋಷಿಸುತ್ತದೆ. ಕೆಲವು ರಾಜ್ಯಗಳಿಗೆ ಸಿಆರ್‌ಪಿಎಫ್, ಐಟಿಬಿಪಿ ಮತ್ತು ಬಿಎಸ್‌ಎಫ್‌ನ 60 ತುಕಡಿಗಳನ್ನು ನೌಕರರ ಸುಕ್ಷರತೆಗಾಗಿ ಮತ್ತು ಚುನಾವಣೆ ಕಾರ್ಯ ಸುಗಮವಾಗಿ ನಡೆಯಲು ನಿಯೋಜಿಸಿದೆ. ನೌಕರರಲ್ಲಿ ಚುನಾವಣೆ ಆಯೋಗದ ಬಗ್ಗೆ ಧನ್ಯತಾ ಭಾವನೆ ಇದ್ದರೆ ಆಯೋಗಕ್ಕೆ ನೌಕರರ ಬಗ್ಗೆ ಹೆಮ್ಮೆ ಮತ್ತು ಕಾಳಜಿ ವ್ಯಕ್ತವಾಗಿದೆ.
ಮಹತ್ತರ ಚುನಾವಣೆಯಲ್ಲಿ ಎಲ್ಲ ವರ್ಗದ ನೌಕರರು ಭಾಗವಹಿಸಲಿದ್ದಾರೆ. 2004ರ ಚುನಾವಣೆಯಿಂದ ವಿದ್ಯುನ್ಮಾನ ಯಂತ್ರ ಬಳಕೆಗೆ ಅತಿ ಬೇಗನೆ ಹೊಂದಿಕೊಂಡ ಕೀರ್ತಿ ನೌಕರರಿಗೆ ಸಲ್ಲುತ್ತದೆ. ಪ್ರಸ್ತುತ ಚುನಾವಣೆಯಲ್ಲಿ 15 ಕೋಟಿ ನವ ಮತದಾರರಿದ್ದಾರೆ. ನಾನು ಚುನಾವಣೆ ಅಧಿಕಾರಿಯಾಗಿ (ಆರ್‌ಒ) ವಲಯ ಅಧಿಕಾರಿಯಾಗಿ (ಎಸ್‌ಒ) ಅಧ್ಯಕ್ಷೀಯ ಅಧಿಕಾರಿಯಾಗಿ (ಪಿಆರ್‌ಒ) 10 ಚುನಾವಣೆಗಳಲ್ಲಿ ಭಾಗವಹಿಸಿದ್ದೇನೆ, ನನ್ನಂತೆ ಅನೇಕ ನೌಕರರು ಇನ್ನೂ ಹೆಚ್ಚು ಚುನಾವಣೆಯಲ್ಲಿ ಶ್ರಮಿಸಿದ್ದಾರೆ.
ಬಹುತೇಕ ನೌಕರರು ಚುನಾವಣೆ ಕರ್ತವ್ಯದ ಒತ್ತಡದಲ್ಲಿ ತಮ್ಮ ಮತ ಹಾಕುವುದನ್ನೇ ಮರೆಯುತ್ತಾರೆ. ಮತಗಟ್ಟೆ ಅಧಿಕಾರಿಗಳಿಗೆ, ತಾಂತ್ರಿಕವಾಗಿ ಹೇಳುವುದಾದರೆ ತಮ್ಮ ಇವಿಎಂನಲ್ಲಿ ಮತದಾನ ಚಲಾಯಿಸಲು ಸಾಧ್ಯವಾಗುವುದಿಲ್ಲ. ತಮ್ಮ ಕ್ಷೇತ್ರ ಬೇರೆ, ಚುನಾವಣೆ ಕರ್ತವ್ಯದ ಕ್ಷೇತ್ರ ಬೇರೆಯೇ ಆಗಿರುತ್ತದೆ. ತಮ್ಮ ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪೋಸ್ಟಲ್ ಬ್ಯಾಲೆಟ್‌ಗೆ ಮೊರೆ ಹೋಗಬಹುದು. ಬಹುತೇಕರು ಇದರಲ್ಲಿ ಆಸಕ್ತಿ ತೋರುವುದಿಲ್ಲ. ಇದು ಮತದಾನ ಪ್ರಕ್ರಿಯೆಯಲ್ಲಿ ದೊಡ್ಡ ಕರ್ತವ್ಯ ಲೋಪ. ಮತ್ತೊಬ್ಬರ ಮತ ಹಾಕಿಸುವ ಭರದಲ್ಲಿ ತಮ್ಮ ಮತ ಕಳೆದುಕೊಳ್ಳುವುದು ದುರದೃಷ್ಟಕರ ಸಂಗತಿ.
2009ರ ಒಂದು ಅಧ್ಯಯನದ ಪ್ರಕಾರ ರಾಜಸ್ಥಾನದ ಒಟ್ಟು ಮತಗಟ್ಟೆ ಅಧಿಕಾರಿಗಳ ಸಂಖ್ಯೆ ಪೈಕಿ ಶೇ. 45ರಷ್ಟು ಮಾತ್ರ ಪೋಸ್ಟಲ್ ಬ್ಯಾಲೆಟ್ ಉಪಯೋಗಿಸಿದ್ದಾರೆ. ಅದರಲ್ಲಿ ಶೇ. 18ರಷ್ಟು ಮತಗಳು ತಿರಸ್ಕೃತವಾಗಿವೆ. ಮಾರ್ಕ್ ಇಲ್ಲ ಅಥವಾ ಗೌಪ್ಯ ಕಾಪಾಡಿಲ್ಲ ಎಂಬುದು ಇನ್ನೂ ಆಶ್ಚರ್ಯಕರ ಸಂಗತಿ. ಇದು ರಾಜಸ್ಥಾನ ವಿಧಾನಸಭೆ- 2003ರ ಒಟ್ಟು ತಿರಸ್ಕೃತ ಮತಕ್ಕಿಂತ ಶೇ. 2ರಷ್ಟು ಹೆಚ್ಚು ಎಂಬುದು ಆತಂಕದ ವಿಷಯ. ಪೋಸ್ಟರ್ ಬ್ಯಾಲೆಟ್‌ನಲ್ಲಿ ಎಚ್ಚರದಿಂದ ಗೌಪ್ಯವಾಗಿ ಹಾಗೂ ಮಾರ್ಕ್‌ನೊಂದಿಗೆ ಮತ ಹಾಕುವುದು ಅಗತ್ಯ.
ಸಿಬ್ಬಂದಿ ಮತದಾನ ಮಾಡಲು, ಚುನಾವಣೆ ಕರ್ತವ್ಯ ಪ್ರಮಾಣಪತ್ರ ಪಡೆಯಲು ಕೆಲವು ಅನಾವಶ್ಯಕ ಜೆರಾಕ್ಸ್ ದಾಖಲೆ ಪ್ರತಿ ಕೇಳುವುದು ವಾಡಿಕೆ. ಇದನ್ನು ಸರಳಗೊಳಿಸುವಲ್ಲಿ ಸ್ಥಳೀಯ ಆಡಳಿತ ನಿಗಾ ವಹಿಸುವುದು ಸಮಂಜಸ. ಕರ್ನಾಟಕದಿಂದ ಪ್ರತಿದಿನ 1,700 ಸಾರಿಗೆ ನೌಕರರು ನೌಕರಿ ನಿಮಿತ್ತ ಹೊರ ರಾಜ್ಯಗಳಿಗೆ ಹೊರಡುತ್ತಾರೆ. ಅವರು ಮತದಾನದ ಬಗ್ಗೆ ಯೋಚಿಸುವುದು ಅಗತ್ಯ.
ತರಬೇತಿಯಲ್ಲಿ ನೌಕರರನ್ನು ವಿವಿಧ ಗುಂಪುಗಳನ್ನಾಗಿ ವಿಂಗಡಿಸಿ ಪಿಪಿಟಿ ಹಾಗೂ ಪ್ರಾತ್ಯಕ್ಷಿಕೆ ತರಬೇತಿ ನೀಡಿದರೆ ಇನ್ನೂ ಉತ್ತಮ. ತರಬೇತಿಯಲ್ಲಿ ನಾವು ತೋರಿದ ನಿರ್ಲಕ್ಷ್ಯ ಮುಂದೆ ದೊಡ್ಡ ಪ್ರಮಾದವೆನಿಸಬಹುದು. ಚುನಾವಣೆ ಸಮಯ 4-5 ನೌಕರರಿರುವ ತಂಡ ರಚಿಸುತ್ತಾರೆ. ಟೀಂ ಸ್ಪಿರಿಟ್‌ನಿಂದ ಚುನಾವಣೆ ಕಾರ್ಯ ಸುಗಮಗೊಳ್ಳುತ್ತದೆ. ಚುನಾವಣೆ ಕಾರ್ಯದ ನೀತಿ-ನಿರ್ದೇಶನಗಳ ಕೈಪಿಡಿಯನ್ನು ಓದಬೇಕು. ಗೊತ್ತಿರುವ ವಿಷಯ, ಅದನ್ನು ಏಕೆ ಮತ್ತೆ ಓದುವುದು ಎನ್ನುವ ಸ್ನೇಹಿತರಿದ್ದಾರೆ. ಓದದೇ ಚುನಾವಣೆ ಕಾರ್ಯ ಮುಗಿಸುವವರೂ ಇದ್ದಾರೆ. ಸಮಸ್ಯೆ ಎದುರಾದಾಗ, ಓದಬೇಕಿತ್ತು ಎಂದು ಪೇಚಾಡಿದವರೂ ಇದ್ದಾರೆ. ಆಗಾಗ ಚುನಾವಣೆ ಕಾರ್ಯದಲ್ಲಿ ಭಾಗಿಯಾಗುತ್ತಿದ್ದರೆ ವಿಷಯ ಗೊತ್ತಿರುತ್ತದೆ. ಆದರೆ, ಸ್ಪಷ್ಟತೆ ಇರುವುದಿಲ್ಲ. ಸ್ಪಷ್ಟತೆಗಾಗಿ ಓದುವುದು ತಪ್ಪಲ್ಲ. ಮತದಾನದ ದಿನ ಕ್ಲಾರಿಫಿಕೇಷನ್‌ಗೆ ಅವಕಾಶ ಕಡಿಮೆ. ಸಹೋದ್ಯೋಗಿಗಳೊಂದಿಗೆ ಕಳೆದ ಚುನಾವಣೆಯಲ್ಲಿ ಎದುರಿಸಿದ ಸಮಸ್ಯೆಗಳ ಚರ್ಚೆ ಇನ್ನಷ್ಟು ಸಹಾಯಕಾರಿ. ಚುನಾವಣೆ ಹಿಂದಿನ ದಿನ ಮತ್ತು ಮತದಾನದ ದಿನವೂ ಮಾರ್ಪಾಡು ಅಥವಾ ನಿರ್ದೇಶನಗಳನ್ನು ಹೊತ್ತು ತರುತ್ತಾರೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಸೂಕ್ತ.
ಪಿಆರ್‌ಒ ಆದವರೂ ತುಂಬಾ ಆತ್ಮೀಯತೆಯಿಂದ ಮಾತನಾಡಿ, ತನ್ನ ಚುನಾವಣೆ ಜವಾಬ್ದಾರಿ ಸುಗಮಗೊಳಿಸಬೇಕು. ತೀರಾ ಸಲುಗೆಯಿಂದ ವರ್ತಿಸಿದರೆ, ಅದು ವಾತಾವರಣದ ಗಂಭೀರತೆ ಹಾಳು ಮಾಡಬಹುದು. ಎಲ್ಲರನ್ನು ಗೌರವಿಸುವುದರ ಜತೆಗೆ ಚುನಾವಣೆ ಕೆಲಸದ ತೀಕ್ಷ್ಣತೆಯನ್ನು ಮನವರಿಕೆ ಮಾಡಬೇಕು.
ಸಾಮಾನ್ಯವಾಗಿ ಎದುರಾಗಬಹುದಾದ ಮತ್ತೊಂದು ಸಮಸ್ಯೆ ಎಂದರೆ ಕೆಲವರು ಕುಡಿಯುವ ಚಟದಿಂದ ಬಳಲುತ್ತಿರುತ್ತಾರೆ. ಅವರಿಗೆ ಮದ್ಯಪಾನದ ಹಂಬಲ ಹೆಚ್ಚಾಗುತ್ತದೆ. ಪರಿಸ್ಥಿತಿ ವಿವರಿಸುತ್ತ, ಈ ವಿಷಯದಲ್ಲಿ ಪಿಆರ್‌ಒ ಸ್ವಲ್ಪ ಕಠೋರವಾಗಿ ವರ್ತಿಸುವುದು ಉತ್ತಮ. ಏಜೆಂಟರೊಂದಿಗೆ ಸಲುಗೆಯಿಂದ ವರ್ತಿಸಬಾರದು. ಅವರು ತರಿಸುವ ಒಂದು ಊಟ ಅಥವಾ ತಿಂಡಿ ಇರುಸು-ಮುರುಸಿಗೆ ಕಾರಣವಾಗುತ್ತದೆ. ಆದರೂ ಒಮ್ಮೆ 2009ರ ಚುನಾವಣೆಯಲ್ಲಿ ಸೌಲಭ್ಯಗಳಿಲ್ಲದ, ಹೋಟೆಲ್ ಇಲ್ಲದ ಬಹು ದೂರದ ಹಟ್ಟಿಗೆ ನಿಯೋಜಿಸಿದ್ದರು. ಎಲ್ಲರಂತೆ ನನಗೂ ಹಸಿವು ಬಾಧಿಸಿತ್ತು, ದ್ವಂದ್ವ ಎದುರಾಗಿತ್ತು. ಏಜೆಂಟ್ ತರಿಸಿದ ಒಂದು ಹೊತ್ತಿನ ಉಪ್ಪಿಟ್ಟು ನಮ್ಮ ಎಲ್ಲ ಪೋಲಿಂಗ್ ಸಿಬ್ಬಂದಿಗೆ ಆಧಾರವಾಗಿತ್ತು. ಪದೇ ಪದೇ ಉಪ್ಪಿಟ್ಟಿನ ಹಣ ಪಡೆಯಲು ಏಜೆಂಟರನ್ನು ಒತ್ತಾಯಿಸುತ್ತಿದ್ದೆ. ತಿನ್ನುವ ಆಸೆಗಿಂತ ಪರಿಣಾಮದ ಆತಂಕ ಹೆಚ್ಚು ಬಾಧಿಸುತ್ತಿತ್ತು. ಅವರಿಗೆ ನನ್ನ ನಿಲುವು ಅರ್ಥವಾಗಿತ್ತು. ಅವರೇ ನೇರವಾಗಿ 'ನಿಮ್ಮ ಫೇವರ್ ಕೇಳುವುದಿಲ್ಲ, ದಯಮಾಡಿ ಉಪ್ಪಿಟ್ಟು ತಿನ್ನಿ' ಎಂದರು. 'ನೀವು ನಮ್ಮೂರಿಗೆ ಬಂದ ಅತಿಥಿಗಳು' ಎಂದು ಹೇಳಿದಾಗ ನಮ್ಮ ಸಂಸ್ಕೃತಿ ಬಗ್ಗೆ ನನಗೆ ಹೆಮ್ಮೆ ಅನಿಸಿದರೂ ತೋರ್ಪಡಿಸಲಿಲ್ಲ. ಹಟ್ಟಿ ಸಂಸ್ಕೃತಿ ದೇಶದ ನೈಜ ಸಂಸ್ಕೃತಿ ಎನಿಸಿತು.
ಮೊದಲ ಬಾರಿಗೆ ಚುನಾವಣೆಗೆ ಹೊರಟಾಗ ನಮ್ಮ ತಂದೆಯವರು ತಾವು ಚುನಾವಣಾಧಿಕಾರಿಯಾಗಿ ಪಡೆದ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. 'ಚುನಾವಣೆ ಕೆಲಸದಲ್ಲಿ ನಿಷ್ಪಕ್ಷಪಾತವಾಗಿರು ಮತ್ತು ಹಾಗೆಯೇ ಇರುವೆ ಎಂಬುದನ್ನು ನಿನ್ನ ಮಾತು ಕೆಲಸದಲ್ಲಿ ಸಾಬೀತು ಮಾಡುತ್ತಿರು' ಎಂದಿದ್ದರು. ದೂರದ ಊರಿಗೆ ಹಾಕಿದಾಗ ಮೊದಲೇ ವಿಚಾರಿಸಿ ಮುಂಜಾಗ್ರತೆಯಿಂದ ಬಾಳೆಹಣ್ಣು, ಬಿಸ್ಕತ್ತು ಇತ್ಯಾದಿ ಒಯ್ಯುವುದು ಉತ್ತಮ. ಯಾವುದು ಅನಿವಾರ್ಯವಲ್ಲ ಎನ್ನುವ ನಮ್ಮ ನಡೆ, ನುಡಿ, ಸಂದೇಶ ಹಾಗೂ ನಿಲುವುಗಳು ಮಹತ್ತರ ಪರಿಣಾಮ ಬೀರುತ್ತವೆ.
ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಕೆಲಸ ಮಾಡಿ ಬರುವ ನೌಕರರನ್ನು ಸೂಕ್ತ ಪ್ರಮಾಣಪತ್ರದೊಂದಿಗೆ ಗೌರವಿಸಿದರೆ, ಪರಿಣಾಮಕಾರಿ. ಚುನಾವಣೆ ಕೆಲಸಕ್ಕೆ ಭತ್ಯೆ ಹೆಚ್ಚಾದಷ್ಟೂ ಮತ್ತು ಶೀಘ್ರ ಪಾವತಿಯಾದಷ್ಟು ಉತ್ತಮ. ಸಾರಿಗೆ ಚಾಲಕರಿಗೆ ನೀಡುವ ಭತ್ಯೆ ಯಾರಿಂದ ಮತ್ತು ಎಷ್ಟು ಎಂಬುದು ಸ್ಪಷ್ಟವಾಗಬೇಕು. ಚುನಾವಣೆ ಸಿಬ್ಬಂದಿಯನ್ನು ಸಾಗಿಸುವ ಸಾರಿಗೆ ಹಾಗೂ ಪೊಲೀಸ್ ನೌಕರರ ಮತದಾನದ ಬಗ್ಗೆ ಸ್ಥಳೀಯ ಆಡಳಿತ ಗಮನ ನೀಡಿದರೆ, ಹೆಚ್ಚು ಸಾರ್ಥಕ.
ಪ್ರಜಾಪ್ರಭುತ್ವದ ರಥವನ್ನು ಎಲ್ಲರೂ ಒಟ್ಟಾಗಿ ಎಳೆಯುವುದು ಇಂದಿನ ಅಗತ್ಯ.

-ಡಾ೤ ಎಸ್.ಪಿ. ನಾಗನಗೌಡ
ಸಹ-ಪ್ರಾಧ್ಯಾಪಕರು, ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಕಾಲೇಜು, ಬಳ್ಳಾರಿ,
spnaganagouda@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement