ಅಂಬೇಡ್ಕರ್ ವಿರೋಧಿಸಿದ ಹಾದಿ ದಲಿತ ಸಾಹಿತಿಗೆ ಬೇಕೆ?
"ಕಾಂಗ್ರೆಸ್ ಎಂಬುದು ಉರಿಯುವ ಮನೆ. ಅದನ್ನು ಹೊಕ್ಕಿರಾದರೇ ಸುಟ್ಟು ಭಸ್ಮವಾಗುವಿರಿ" ಇದು ಬಾಬಾ ಸಾಹೇಬ್ ಅಂಬೇಡ್ಕರರ ಜನಪ್ರಿಯ ಹಾಗೂ ಜನಜನಿತ ಹೇಳಿಕೆ. ಅಂದಹಾಗೆ ಇದನ್ನು ಅಂಬೇಡ್ಕರ್ ಅವರು ಸುಮ್ಮನೇ ಹೇಳಿರಲಿಲ್ಲ. ಹಾಗೆ ಹೇಳಲು ಕಾಂಗ್ರೆಸ್ ಅಂಬೇಡ್ಕರರಿಗೆ ಅವರ ಜೀವಿತಾವಧಿಯಲ್ಲಿ ಅವರಿಗೆ ಕೊಟ್ಟ ಕಿರುಕುಳವೇ ಕಾರಣ. 1952, 1954ರಲ್ಲಿ ನಡೆದ ಲೋಕಸಭಾ ಚುನಾವಣೆ ಮತ್ತು ಉಪಚುನಾವಣೆಗಳೆರಡರಲ್ಲಿಯೂ ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ತಂತ್ರಗೈದು ಸೋಲಿಸಿತು. 1952ರಲ್ಲಿ ಅಂಬೇಡ್ಕರ್ ಕಾಂಗ್ರೆಸ್ ಅಭ್ಯರ್ಥಿಯ ಎದುರು ಸೋತಾಗ ಅವರ ಸೋಲಿನ ಅಂತರ ಸುಮಾರು 20000ಕ್ಕಿಂತ ಕಡಿಮೆ ಮತಗಳಾಗಿದ್ದವಷ್ಟೆ. ಅಂದಹಾಗೆ ಅಂಬೇಡ್ಕರರು ಸ್ಪರ್ಧಿಸಿದ್ದ ಆ ಚುನಾವಣೆಯಲ್ಲಿ ಸುಮಾರು 50000 ಮತಗಳು ಕುಲಗೆಟ್ಟಿದವು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆ ಕಾಲದಲ್ಲಿ ಅನಕ್ಷರಸ್ಥ ದಲಿತರಲ್ಲಿ ಗೊಂದಲ ಮೂಡಿಸಿ ಬೇಕೆಂದೇ 50ಸಾವಿರ ಮತಗಳು ಬೇರೆಯಾಗುವಂತೆ ಮಾಡಿ ಅಂಬೇಡ್ಕರರ ಸೋಲಿಗೆ ಕಾರಣರಾಗಿದ್ದರು.
ಇನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗುವಾಗಲೂ ಅಂಬೇಡ್ಕರರು ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ತಮ್ಮದೇ ಸ್ವಂತ ಪಕ್ಷದಿಂದ ಸ್ಪರ್ಧಿಸಿ ಬಂಗಾಳದ ಜಯಸೂರ್ ಮತ್ತು ಕುಲ್ನ ಎಂಬ ಕ್ಷೇತ್ರದಿಂದ ಗೆದ್ದಾಗ ಅವರು ಎಲ್ಲಿ ಸಂವಿಧಾನ ಸಭೆಗೆ ಬಂದುಬಿಡುತ್ತಾರೊ ಎಂದು ಅಸಹನೆಗೊಂಡ ಕಾಂಗ್ರೆಸ್ ದೇಶ ವಿಭಜನೆಯ ಸಂದರ್ಭದಲ್ಲಿ ಬಹುತೇಕ ಹಿಂದೂಗಳೇ ಇದ್ದರೂ ಅಂಬೇಡ್ಕರ್ ಗೆದ್ದಿದ್ದ ಆ ಕ್ಷೇತ್ರವನ್ನು ಅಂದಿನ ಪಾಕಿಸ್ತಾನಕ್ಕೆ (ಪೂರ್ವ ಪಾಕಿಸ್ತಾನ, ಇಂದಿನ ಬಾಂಗ್ಲಾದೇಶ) ನೀಡಿತು. ತತ್ಪರಿಣಾಮ ಅಂಬೇಡ್ಕರರು ಪಾಕಿಸ್ತಾನಕ್ಕೆ ಹೋಗುವಂತಹ ಪರಿಸ್ಥಿತಿ ಉಂಟಾಗಿತ್ತು! ಆದರೆ ಹೆದರದ ಅಂಬೇಡ್ಕರ್ ಅವರು ಕಾಂಗ್ರೆಸ್ನ ಕುತಂತ್ರವನ್ನು ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟ ಫಲವಾಗಿ ಅವರಂದು ಭಾರತದ ಸಂವಿಧಾನದ ಸಭೆಗೆ ಆಯ್ಕೆಯಾಗುವಂತಾಯಿತು. ಅಂಬೇಡ್ಕರರಿಗೆ ಕಾಂಗ್ರೆಸ್ ಕಿರುಕುಳ ಕೊಟ್ಟದ್ದು ಸ್ವಾತಂತ್ರ್ಯ ಸಮಯದಲ್ಲಷ್ಟೆ ಅಲ್ಲ, 1932ರ 'ಪೂನಾ ಒಪ್ಪಂದ'ದ ಸಂದರ್ಭದಲ್ಲಿ ದಲಿತರ ಪ್ರತ್ಯೇಕ ಮತದಾನ ಪದ್ಧತಿ ಮತ್ತು ಇತರ ಅನೂಕೂಲಗಳ ವಿರುದ್ಧ ಇದೇ ಕಾಂಗ್ರೆಸ್ ಗಾಂಧೀಜಿಯವರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿಸಿ ಅದು ರದ್ದಾಗುವಂತೆ ನೋಡಿಕೊಂಡಿತ್ತು! ಈ ಸಂದರ್ಭದಲ್ಲಿ ಗಾಂಧೀಜಿ ಮತ್ತು ಕಾಂಗ್ರೆಸ್ನ ಎಲ್ಲಾ ನಡವಳಿಕೆಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿದ ಅಂಬೇಡ್ಕರ್ ಅವರು ಕಾಂಗ್ರೆಸ್ ವಿರುದ್ಧ "ವಾಟ್ ಕಾಂಗ್ರೆಸ್ ಆ್ಯಂಡ್ ಗಾಂಧಿ ಹ್ಯಾವ್ ಡನ್ ಟು ಅನ್ಟಚಬಲ್ಸ್" ಎಂಬ ಕೃತಿಯನ್ನೇಬರೆದರು. ಆಸಕ್ತರು ಈಗಲೂ ಲಭ್ಯವಿರುವ ಅಂಬೇಡ್ಕರರ ಆ ಕೃತಿಯನ್ನು ಓದಿದರೆ ಅವರಿಗೆ ಕಾಂಗ್ರೆಸ್ ಪಕ್ಷ ಅಡಿಗಡಿಗೂ ಯಾವ ಪರಿ ಕಾಟ ಕೊಟ್ಟಿತ್ತು ಎನ್ನುವುದು ಅರ್ಥವಾಗುತ್ತದೆ. ಒಟ್ಟಾರೆ ಕಾಂಗ್ರೆಸ್ನ ಇಂತಹ ದಲಿತವಿರೋಧಿ ನಿಲುವಿನ ಕಾರಣಕ್ಕಾಗಿಯೇ ಅಂಬೇಡ್ಕರರು ಅದನ್ನು "ಉರಿಯುವ ಮನೆ" ಎಂದದ್ದು, ತಮ್ಮ ಜನರಿಗೆ "ಅಲ್ಲಿ ಪ್ರವೇಶಿಸಿದರೆ ಸುಟ್ಟು ಭಸ್ಮವಾಗುವಿರಿ" ಎಂದದ್ದು.
ದುರಂತವೆಂದರೆ ಮೊನ್ನೆ ರಾಜ್ಯದ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು "7 ಕ್ಷೇತ್ರಗಳಲ್ಲಿ ಎಎಪಿಗೆ, ಇನ್ನುಳಿದ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ" ತಮ್ಮ ಬೆಂಬಲ ಎಂದು ಘೋಷಿಸಿದ್ದಾರೆ. 21 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಅಂದರೆ ಅವರ ಒಟ್ಟಾರೆ ಬೆಂಬಲ ಆ ಪಕ್ಷಕ್ಕೇ ಎಂದಾಯಿತು. ಪ್ರಶ್ನೆ ಏನೆಂದರೆ "ಅಂಬೇಡ್ಕರ್ ದಲಿತರಿಂದ, ಪ್ರಜ್ಞಾವಂತ ದಲಿತ ಸಾಹಿತಿಗಳಿಂದ ಇಂತಹದ್ದನ್ನು ನಿರೀಕ್ಷಿಸಿದ್ದರೇ?" ಎಂಬುದು. ಏಕೆಂದರೆ ಯಾವ ಮನೆಯನ್ನು ಅಂಬೇಡ್ಕರ್ ಉರಿಯುವ ಮನೆ ಎಂದರೊ ಅದೇ ಮನೆಗೆ ದೇವನೂರರು ಬೆಂಬಲ ಘೋಷಿಸಿದ್ದಾರೆ. ನಿಜ, ದೇವನೂರರು ಈ ಸಂದರ್ಭದಲ್ಲಿ ಬಿಡುವ ಗುಮ್ಮ ನರೇಂದ್ರ ಮೋದಿಯವರದ್ದು. "ನರೇಂದ್ರ ಮೋದಿ ಭ್ರಷ್ಟಾಚಾರ ಮಾಡಿದರಂತೆ, ಜಮೀನು ಕಡಿಮೆ ದರಕ್ಕೆ ಮಾರಿದರಂತೆ, ಗೋಧ್ರೋತ್ತರ ಹಿಂಸೆಗೆ ಕಾರಣರಾದರಂತೆ. ವಾದಸರಣಿ ಹೀಗೇ ಸಾಗುತ್ತದೆ... "
ಇದನ್ನೆಲ್ಲ ಕಾಂಗ್ರೆಸ್ ಪಕ್ಷದವರು ನೋಡಿಕೊಳ್ಳುತ್ತಾರೆ ಅಥವಾ ಇನ್ನಾವುದಾದರೂ ಪಕ್ಷದವರು ನೋಡಿಕೊಳ್ಳುತ್ತಾರೆ. ಇಲ್ಲಿ ದೇವನೂರರಿಗೇನು ಕೆಲಸ ಎಂಬುದು? ಇರಲಿ, "ನರೇಂದ್ರಮೋದಿ ಅದು ಮಾಡಿದರು, ಇದು ಮಾಡಿದರು" ಎನ್ನುತ್ತಾರಲ್ಲ. ಹಾಗಿದ್ದರೆ ಕಾಂಗ್ರೆಸ್ನವರು ಏನು ಮಾಡಿದರು? ಯಾಕೆ ಅವರು ದಲಿತನೋರ್ವನನ್ನು ಕಳೆದ ಬಾರಿ ಮುಖ್ಯಮಂತ್ರಿ ಮಾಡಲಿಲ್ಲ? ಕೇಂದ್ರ ಸರ್ಕಾರದಲ್ಲಿ ಯಾಕೆ ಇದೇ ಪಕ್ಷ ದಲಿತರ ಮೀಸಲು ಮಸೂದೆಯನ್ನು ಅಂಗೀಕರಿಸಲಿಲ್ಲ? ದಲಿತ ಮಂತ್ರಿ ಎ. ರಾಜಾರನ್ನೇಕೆ ಕಾಂಗ್ರೆಸ್ 2-ಜಿ ತರಂಗ ಹಗರಣದಲ್ಲಿ ಬಲಿಪಶು ಮಾಡಿತು? ಖಂಡಿತ, ಕಾಂಗ್ರೆಸ್ನಲ್ಲಿನ ದಲಿತರಿಗೆ ಸಂಬಂಧಪಟ್ಟ ಇಂತಹ ಪ್ರಶ್ನೆಗಳಿಗೆ ದೇವನೂರರು ಉತ್ತರ ಕೊಡುವುದಿಲ್ಲ! ಸುಮ್ಮನೆ ಮೋದಿ... ಮೋದಿ... ಮೋದಿ!!
ಅರೇ ಮೋದಿ ಕಥೆ ಇರಲಿ. ಕಾಂಗ್ರೆಸ್ ಕಥೆ? ದಲಿತರನ್ನು ಕಾಂಗ್ರೆಸ್ ಯಾಕೆ ಮುಖ್ಯಮಂತ್ರಿ ಮಾಡಲಿಲ್ಲ ಎಂದು ದೇವನೂರರು ಯಾಕೆ ಪ್ರಶ್ನಿಸುವುದಿಲ್ಲ?
ಖಂಡಿತ, ಕಾಂಗ್ರೆಸ್ ಅನ್ನು ನಮಗೆ ಸಿಎಂ ಸ್ಥಾನವನ್ನು ನೀಡಿ ಎಂದು ದಲಿತರು ಕೇಳಲೇಬೇಕಾಗಿದೆ. ಯಾಕೆಂದರೆ ಕಳೆದ 65 ವರ್ಷಗಳಿಂದ ದಲಿತರ ಮತಗಳನ್ನು ಹೋಲ್ಸೇಲ್ ಆಗಿ ನುಂಗಿದೆ ಆ ಪಕ್ಷ. ನಿರಂತರವಾಗಿ ಮತಬ್ಯಾಂಕ್ ಆಗಿ ಬಳಸಿಕೊಂಡಿದೆ. ಹೀಗಿರುವಾಗ ಅವರಿಗೆ ಆಯಾ ಕಾಲಮಾನದಲ್ಲಿ ಸೂಕ್ತ ಸ್ಥಾನಮಾನ ಬೇಡವೇ? ದುರಂತವೆಂದರೆ ದೇವನೂರರಲ್ಲಿ ಇಂಥದ್ದೊಂದು ಕಾಳಜಿಯ ಪ್ರಶ್ನೆಯೇ ಇಲ್ಲ. ಮೋದಿ ಕೋಮುವಾದಿಯಂತೆ, ಅದಕ್ಕೆ ದಲಿತರು ಕಾಂಗ್ರೆಸ್ ಅನ್ನು ಬೆಂಬಲಿಸಬೇಕಂತೆ! ಹಾಗಿದ್ದರೆ ಕಾಂಗ್ರೆಸ್ ಯಾವ 'ವಾದಿ' ಎಂದು ದೇವನೂರರು ಹೇಳಬೇಕಲ್ಲವೇ?
ನಿಜಕ್ಕೂ ದೇವನೂರರಿಗೆ ದಲಿತರಿಗೆ ಏನಾದರೂ ಮಾಡಬೇಕೆಂದಿದ್ದರೆ, ಏನಾದರೂ ನೀಡಬೇಕೆಂದಿದ್ದರೆ ಅವರು ಉತ್ತರ ಭಾರತದ ಕಾನ್ಶಿರಾಮ್ರನ್ನು ಗಮನಿಸಬೇಕು. ಕಾನ್ಶಿರಾಮ್ ಅವರು 1984 ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯಂದು ಬಿಎಸ್ಪಿಯನ್ನು ಸ್ಥಾಪಿಸಿದರು. ಅಂದಹಾಗೆ ಹಾಗೆ ಪಕ್ಷ ಸ್ಥಾಪಿಸಿದ ಕಾನ್ಶಿರಾಮ್ ದೇವನೂರರ ಹಾಗೆ ತಮ್ಮ ಬೆಂಬಲ ಕಾಂಗ್ರೆಸ್ಗೆ ಎಂದು ಘೋಷಿಸಲಿಲ್ಲ. ಬದಲಿಗೆ ಆ ಪಕ್ಷದ ಮತ ಬ್ಯಾಂಕ್ ಅನ್ನು ಕುಗ್ಗಿಸುತ್ತಾ, ಬಿಎಸ್ಪಿಯ ಮತ ಬ್ಯಾಂಕ್ ಏರಿಸುತ್ತಾ ಉತ್ತರ ಪ್ರದೇಶದಂತಹ ಬೃಹತ್ ರಾಜ್ಯದಲ್ಲಿ ಒಂದಲ್ಲ ಎರಡಲ್ಲ, ನಾಲ್ಕು ಬಾರಿ ರಾಜ್ಯವಾಳಿದರು. ಅಂದಹಾಗೆ ನಮ್ಮ ದೇವನೂರರ ಹಾಗೆ ಸರ್ವೋದಯ ಕರ್ನಾಟಕ ಪಕ್ಷದಂಥ ಪಕ್ಷ ಕಟ್ಟಿಯೂ "ನಮ್ಮ ಬೆಂಬಲ ಕಾಂಗ್ರೆಸ್ಗೆ" ಎಂದು ಕಾನ್ಶಿರಾಮ್ ಅವರು ಕುಳಿತಿದ್ದರೆ ದಲಿತರು ಆ ರಾಜ್ಯವಾಳಲು ಸಾಧ್ಯವಿತ್ತೇ? ಮಾಯಾವತಿ ಪ್ರಧಾನಿ ಸ್ಥಾನಕ್ಕೆ ಬಿಂಬಿತವಾಗಲು ಸಾಧ್ಯವಿತ್ತೇ? ಯಾರಿಗೆ ಗೊತ್ತು ಅತಂತ್ರ ಲೋಕಸಭೆಯಾದರೆ ಮುಂದೊಂದು ದಿನ ಮಾಯಾವತಿ ಪ್ರಧಾನಿಯಾದರೂ ಆಗಬಹುದು. "ನನ್ನ ಜನ ಈ ದೇಶದ ಆಳುವ ವರ್ಗವಾಗಬೇಕು" ಎಂಬ ಅಂಬೇಡ್ಕರರ ಕನಸು ಕೂಡ ನನಸಾಗಬಹುದು. ಈ ನಿಟ್ಟಿನಲ್ಲಿ ಹೇಳುವುದಾದರೆ ದೇವನೂರ ಮಹಾದೇವರಿಗೆ ಕಾನ್ಶಿರಾಮ್ರ ರಾಜಕೀಯ ಮಾದರಿ ಅನುಕರಣೀಯವಾಗಿದೆ. ರಾಜ್ಯದ ಇಡೀ ದಲಿತರನ್ನು ಅವರು ಸಂಘಟಿಸಿ ಬಿಎಸ್ಪಿಯ ರೀತಿ ತಮ್ಮ ಪಕ್ಷ ಬೆಳೆಸಿ ಮಾಯಾವತಿಯಂತೆ ಅವರು ಕೂಡ ಅಧಿಕಾರ ಹಿಡಿಯಬಹುದಾಗಿದೆ. ಅದು ಬಿಟ್ಟು ಮೋದಿಗೆ ಓಟ್ ಹಾಕ್ಬೇಡಿ, ಬಿಜೆಪಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ, ಕಾಂಗ್ರೆಸ್ ಬೆಂಬಲಿಸಿ ಎಂಬ ದುರ್ಬಲ ಹೇಳಿಕೆ ಕೊಟ್ಟರೆ ದಲಿತರು ಸಬಲರಾಗುವುದು ಯಾವಾಗ? ಸಿಎಂ, ಡಿಸಿಎಂ ಆಗುವುದು ಯಾವಾಗ? "ಅಲ್ರೀ, 65 ವರ್ಷಗಳಿಂದ ಕಾಂಗ್ರೆಸ್ಗೆ ದಲಿತರು ಬೆಂಬಲ ಕೊಟ್ಟು ಕೊಟ್ಟು ಸಾಕ್ಸಾಕಾಗಿ ಹೋಗಿದೆ. ಆದರೆ ಕಾಂಗ್ರೆಸ್ ದಲಿತರಿಗೇನು ನೀಡಿದೆ?" ಅಂತ ದೇವನೂರರು ಪ್ರಶ್ನಿಸಬಾರದೇ? ಹಾಗೆ ಮಾಡುವುದನ್ನು ಬಿಟ್ಟು ಕಾಂಗ್ರೆಸ್ ವಕ್ತಾರರಂತೆ ವರ್ತಿಸುತ್ತಿರುವುದೇಕೆ?
ಖಂಡಿತ, ಬೇರೆ ಸಾಹಿತಿಗಳು ಹೀಗೆ "ಕಾಂಗ್ರೆಸ್ ಬೆಂಬಲಿಸಿ" ಎಂದಾಗ ಅದರಲ್ಲಿ ಯಾವ ದೋಷವೂ ಇರುವುದಿಲ್ಲ. ಯಾಕೆಂದರೆ ಮುಂದುವರಿದ ಜಾತಿಗಳ ಸಾಹಿತಿಗಳಿಗೆ ಅಂತಹ ಸಾಮಾಜಿಕ ಜವಾಬ್ದಾರಿಗಳಾವುವೂ ಇರುವುದಿಲ್ಲ. ಆದರೆ ದೇವನೂರ ಮಹದೇವರಂತಹ ದಲಿತ ಸಾಹಿತಿಗೆ ಅನ್ಯಾಯಕ್ಕೊಳಗಾಗುತ್ತಿರುವ, ಅಸ್ಪೃಶ್ಯತೆಯ ನೋವನ್ನು ಅನುಭವಿಸುತ್ತಿರುವ ದಮನಿತ ಸಹೋದರರನ್ನು ಮೇಲೆತ್ತುವ ಜವಾಬ್ದಾರಿ ಇದೆ. ಎಷ್ಟೋ ಜನ ದಲಿತ ವಿದ್ಯಾವಂತರು "ಎಲ್ಲವನ್ನು ನಮ್ಮ ಮಹಾದೇವಣ್ಣ ನೋಡ್ಕತಾನೆ" ಎನ್ನುತ್ತಾರೆ. ಆದರೆ ಅದೇ ಮಹಾದೇವಣ್ಣ ವಿನಾಕಾರಣ ಸಮುದಾಯಕ್ಕೇನೂ ಲಾಭವಿಲ್ಲದೆ ಕಾಂಗ್ರೆಸ್ ಬೆಂಬಲಿಸಿ ಎಂದರೆ? ಈ ನಿಟ್ಟಿನಲ್ಲಿ ಹೇಳುವುದಾದರೆ ದೇವನೂರರೇ ಇರಲಿ, ಮತ್ಯಾರೇ ದಲಿತ ಕವಿಗಳಾಗಲಿ, ಕಾಂಗ್ರೆಸ್ ಬೆಂಬಲಿಸಿ ಎಂದರೆ ಅಂತಹವರು ದಲಿತ ಸಮುದಾಯದ ಗೌರವಾನ್ವಿತ ಸಾಹಿತಿಗಳಾಗುವುದಿಲ್ಲ.
ಖಂಡಿತ, ಬೇರೆ ಸಾಹಿತಿಗಳು ಹೀಗೆ "ಕಾಂಗ್ರೆಸ್ ಬೆಂಬಲಿಸಿ" ಎಂದಾಗ ಅದರಲ್ಲಿ ಯಾವ ದೋಷವೂ ಇರುವುದಿಲ್ಲ. ಯಾಕೆಂದರೆ ಮುಂದುವರಿದ ಜಾತಿಗಳ ಸಾಹಿತಿಗಳಿಗೆ ಅಂತಹ ಸಾಮಾಜಿಕ ಜವಾಬ್ದಾರಿಗಳಾವುವೂ ಇರುವುದಿಲ್ಲ. ಆದರೆ ದೇವನೂರ ಮಹದೇವರಂತಹ ದಲಿತ ಸಾಹಿತಿಗೆ ಅನ್ಯಾಯಕ್ಕೊಳಗಾಗುತ್ತಿರುವ, ಅಸ್ಪೃಶ್ಯತೆಯ ನೋವನ್ನು ಅನುಭವಿಸುತ್ತಿರುವ ದಮನಿತ ಸಹೋದರರನ್ನು ಮೇಲೆತ್ತುವ ಜವಾಬ್ದಾರಿ ಇದೆ.
-ಪ್ರಬುದ್ಧ ಹೊಬ. ಚಾಮರಾಜನಗರ