ರಜನೀ ರಾಜಕೀಯ ಚಿತ್ರಕತೆ
'ಇದು ಒಂದು ಸೌಹಾರ್ದದ ಭೇಟಿ ಅಷ್ಟೇ. ರಾಜಕೀಯಕ್ಕೂ ಈ ಭೇಟಿಗೂ ಸಂಬಂಧವೇ ಇಲ್ಲ.' ತಮಿಳುನಾಡಿನ ಖ್ಯಾತ ನಟ ರಜನೀಕಾಂತ್, ಮೋದಿ ಭೇಟಿಯನ್ನು ಹಾಗೆ ವ್ಯಾಖ್ಯಾನಿಸಿದರು.
ಅಲ್ಲಿ ಫೋಟೊಕ್ಕೆ ಪೋಸ್ ನೀಡಿ, ರಜನಿ ಜತೆ ಉಭಯ ಕುಶಲೋಪರಿ ಸಾಂಪ್ರತಗಳನ್ನೆಲ್ಲ ಮುಗಿಸಿಕೊಂಡು ನರೇಂದ್ರ ಮೋದಿ ಚುನಾವಣಾ ರ್ಯಾಲಿ ತಲುಪುತ್ತಾರೆ. ಅಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಪೊನ್ ರಾಧಾಕೃಷ್ಣ ನೆರೆದ ಜನರೆದುರು ರಜನಿ ಸಂದೇಶವನ್ನು ಓದುತ್ತಾರೆ. 'ನಮಗೆ ಕೇಂದ್ರದಲ್ಲಿ ಬಲಿಷ್ಠ ಸರ್ಕಾರವೊಂದು ಬೇಕು. ಮೋದಿ ಒಬ್ಬ ಬಲಿಷ್ಠ ನಾಯಕ ಹಾಗೂ ಸಮರ್ಥ ಆಡಳಿತಗಾರನೆಂಬುದನ್ನು ನಾನು ಬಲ್ಲೆ. ಈ ಚುನಾವಣೆಯ ಕುರಿತು ಅವರು ಏನನ್ನು ನಿರೀಕ್ಷೆ ಇರಿಸಿಕೊಂಡಿದ್ದಾರೋ ಅದು ನಿಜವಾಗಲಿ.'
ಈ ಮಾತಿಗೆ ಚಪ್ಪಾಳೆ ತಟ್ಟಿದವರು, ಇಡೀ ವಿದ್ಯಮಾನದ ಬಗ್ಗೆ ಪುಳಕಿತರಾದವರು ಬಹಳಷ್ಟು ಮಂದಿಯಿರಬಹುದು. ಆದರೆ ದಶಕಗಳಿಂದ ಕೇಳುತ್ತ ಬಂದ ಪ್ರಶ್ನೆಯೇನೂ ಅಲ್ಲಿ ಅನುರಣಿಸಲಿಲ್ಲ. ಬಹುಶಃ ಆ ಪ್ರಶ್ನೆ ಕೇಳುತ್ತಿದ್ದವರಿಗೂ ಪಕ್ಕಾ ಆಗಿದ್ದಿರಬೇಕು, 'ಅಂಥದ್ದೇನೂ ಘಟಿಸುವುದಿಲ್ಲ' ಅಂತ. ಅಂದಹಾಗೆ ಈ ಮೊದಲು ಪದೇ ಪದೆ ಕೇಳಲಾಗುತ್ತಿದ್ದ ಪ್ರಶ್ನೆ, ಎಲ್ಲರೂ ಕಾತರದಿಂದ ಇರುವ ಸಂಗತಿ ಯಾವುದಾಗಿತ್ತೆಂದರೆ- ರಜನೀಕಾಂತ್ ರಾಜಕೀಯ ಪ್ರವೇಶ ಯಾವಾಗ ಅನ್ನೋದು. ಈ ಪ್ರಶ್ನೆ ಹಲವು ಬೆರಗುಗಳನ್ನು ಹುಟ್ಟುಹಾಕುತ್ತಿತ್ತು. ರಜನೀ ರಾಜಕೀಯಕ್ಕೆ ಬಂದರೆ ಅವರ ಅಗಾಧ ಅಭಿಮಾನಿ ವರ್ಗದ ಬೆಂಬಲವು ಭಾರೀ ಗೆಲವನ್ನೇ ದಯಪಾಲಿಸುತ್ತದೆ ಎಂದು ವಿಶ್ಲೇಷಣೆಗಳಾಗುತ್ತಿದ್ದವು. ಅವರು ನಿರಾಯಾಸವಾಗಿ ತ.ನಾಡಿನ ಮುಖ್ಯಮಂತ್ರಿ ಆಗಿಬಿಡುತ್ತಾರೆ ಅಂತೆಲ್ಲ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು. ರಾಜಕೀಯ ಸೇರುವ, ತನ್ನದೇ ಪಕ್ಷ ಹುಟ್ಟುಹಾಕುವ ಬಗ್ಗೆ ರಜನೀಕಾಂತ್ ಯಾವತ್ತೂ ಹೇಳಿಕೆಗಳನ್ನು ನೀಡದಿದ್ದರೂ ಅವರು ಆಗಾಗ ತಮ್ಮ ಪ್ರಖರ ರಾಜಕೀಯ ನಿಲವುಗಳನ್ನು ಪ್ರಕಟಿಸಿದ್ದಿದೆ.
'ಎಐಎಡಿಎಂಕೆ ಏನಾದರೂ ಅಧಿಕಾರಕ್ಕೆ ಮರಳಿದರೆ ಆ ದೇವರಿಂದಲೂ ಈ ರಾಜ್ಯವನ್ನು ರಕ್ಷಿಸುವುದಕ್ಕೆ ಅಸಾಧ್ಯ' ಅಂತ 1996ರಲ್ಲಿ ಅಬ್ಬರಿಸಿದ್ದರು ರಜನೀಕಾಂತ್. ಆ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಮತ್ತು ತಮಿಳು ಮನಿಲಾ ಕಾಂಗ್ರೆಸ್ ಮೈತ್ರಿಕೂಟವನ್ನು ಬೆಂಬಲಿಸಿದ್ದ ರಜನಿ, ತಮ್ಮ ಅಭಿಮಾನಿಗಳೆಲ್ಲ ಅವರಿಗೇ ಮತ ಹಾಕುವಂತೆ ಕೇಳಿಕೊಂಡಿದ್ದರು. ಆಗ ಡಿಎಂಕೆ ಅಧಿಕಾರಕ್ಕೂ ಬಂತು. 1998ರಲ್ಲಿ ಮತ್ತೆ ಚುನಾವಣೆ ನಡೆಯಿತು. ಆಗಲೂ ರಜನೀಕಾಂತ್ ಡಿಎಂಕೆ ಮೈತ್ರಿಕೂಟಕ್ಕೆ ಮತ ನೀಡುವಂತೆ ಪ್ರಚಾರ ಮಾಡಿದರು. ಆದರೆ ಕೋಯಮತ್ತೂರು ಬಾಂಬ್ ಸ್ಫೋಟದ ನೆನಪಿನಲ್ಲಿದ್ದ ಜನ ಆ ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನೇ ಆರಿಸಿದರು. 2004ರ ಲೋಕಸಭೆ ಚುನಾವಣೆಯಲ್ಲಿ ರಜನಿ ಎಐಎಡಿಎಂಕೆ ಬಗ್ಗೆ ತುಸು ಮೆತ್ತಗಾದಂತಿತ್ತು. ಆಗವರು ಎಐಎಡಿಎಂಕೆ ಜತೆ ಮೈತ್ರಿ ಹೊಂದಿದ್ದ ಬಿಜೆಪಿಯನ್ನು ಬೆಂಬಲಿಸಿದರು. ಆದರೆ ಅತಿ ಬಿರುಸಿನ ಬೆಂಬಲವೇನೂ ಅದಾಗಿರಲಿಲ್ಲ. 'ವೈಯಕ್ತಿಕವಾಗಿ ಬಿಜೆಪಿಗೆ ಮತ ಹಾಕಲಿದ್ದೇನೆ. ಆದರೆ, ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿ ಎಂದು ಕೇಳಿಕೊಳ್ಳುವುದಿಲ್ಲ' ಎಂಬುದು ಅವರ ನಿಲವಾಗಿತ್ತು. ಆ ಚುನಾವಣೆಯಲ್ಲಿ ಎಐಎಡಿಎಂಕೆ- ಬಿಜೆಪಿ ಮೈತ್ರಿ ಅದೆಂಥ ಹೀನಾಯವಾಗಿ ಸೋತಿತೆಂದರೆ, ನಲ್ವತ್ತರಲ್ಲಿ ಒಂದೇ ಒಂದು ಸೀಟನ್ನೂ ಗೆಲ್ಲಲಾಗಲಿಲ್ಲ.
ವಾಸ್ತವದಲ್ಲಿ ರಜನೀಕಾಂತರ ರಾಜಕೀಯ ಬೆಂಬಲ ಮೊದಲು ವ್ಯಕ್ತವಾಗಿದ್ದು, 1995ರಲ್ಲಿ ಕಾಂಗ್ರೆಸ್ಗೇ ಆಗಿತ್ತು. ಪ್ರಧಾನಿ ನರಸಿಂಹರಾವ್ ಅವರನ್ನು ಭೇಟಿಯಾದ ನಂತರ, ತಮ್ಮ ಬೆಂಬಲವನ್ನು ಕಾಂಗ್ರೆಸ್ಗೆ ಸೂಚಿಸಿದ್ದರು ರಜನೀಕಾಂತ್. ಅದೇ ಮೊದಲ ಸಾರಿಯಾದ್ದರಿಂದ ರಜನೀಕಾಂತರ ಈ ಬೆಂಬಲ ಭಾರೀ ಹವಾವನ್ನೇ ಸೃಷ್ಟಿಸಿತು. ರಜನೀ ಬೆಂಬಲ ಪಡೆದುಕೊಂಡಿರುವ ಕಾಂಗ್ರೆಸ್, ತಮಿಳುನಾಡು ವಿಧಾನಸಭೆಯಲ್ಲಿ 130 ಸ್ಥಾನ ಗೆಲ್ಲಲಿದೆ ಅಂತ ಪತ್ರಿಕೆಯೊಂದು ಸಮೀಕ್ಷೆಯನ್ನೂ ಮಾಡಿತ್ತು. ಆದರೆ 1996ರಲ್ಲಿ ಕಾಂಗ್ರೆಸ್ ಪಕ್ಷ ಎಐಎಡಿಎಂಕೆ ಜತೆಗೆ ಮೈತ್ರಿಗೆ ಮುಂದಾಗುತ್ತಲೇ ತಮ್ಮ ಬೆಂಬಲ ಹಿಂಪಡೆದ ರಜನೀ, ಡಿಎಂಕೆ- ತಮಿಳು ಮನಿಲಾ ಕಾಂಗ್ರೆಸ್ಗೆ ಬೆಂಬಲ ನೀಡಿದರು. ಮುಂದಿನದನ್ನೆಲ್ಲ ಈ ಮೇಲಿನಂತೆ ವಿವರಿಸಲಾಗಿದೆ. ಅದಿರಲಿ. ರಜನೀಕಾಂತ್ ಎಐಎಡಿಎಂಕೆಯನ್ನು ಆ ಪರಿ ವಿರೋಧಿಸಿಕೊಂಡು ಬಂದಿದ್ದೇಕೆ? ಹಾಗೆ ನೋಡಿದರೆ ರಜನೀಕಾಂತ್ ತಮ್ಮ ರಾಜಕೀಯ ನಿಲವುಗಳನ್ನು ಸಾರ್ವಜನಿಕವಾಗಿಸುವುದಕ್ಕೆ ಒತ್ತಡ ಶುರುವಾಗಿದ್ದೇ ಎಐಎಡಿಎಂಕೆಯ ವರ್ತನೆಯಿಂದ. ಅದುವೇ ಸ್ವಾರಸ್ಯದ ಕತೆ. ರಾಜಕೀಯದ ರಗಳೆಗಳಿಂದ ದೂರವೇ ಉಳಿಯಬಹುದಾಗಿದ್ದ ರಜನೀಕಾಂತ್ ಹಾಗೇಕಾದರು ಅಂತ ಕೇಳಿದರೆ ಅವರು ಬೆರಳು ತೋರಿಸುವುದು ಜಯಲಲಿತಾರತ್ತ!
ಜಯಲಲಿತಾ ಮತ್ತು ರಜನೀಕಾಂತರ ಮನೆಗಳಿರುವುದು ಪೊ ಗಾರ್ಡನ್ನಲ್ಲಿ. ನೆರೆಹೊರೆ ಎಂದರೂ ನಡೆದೀತು. 1991ರಲ್ಲಿ ರಜನೀ ಅವರ ಮನ್ನನ್ ಚಿತ್ರ ಬಿಡುಗಡೆಯಾಯಿತು. ಅದರಲ್ಲಿ ಬಜಾರಿ ಹೆಂಗಸೊಬ್ಬಳನ್ನು ಹಾದಿಗೆ ತರುವ ಪಾತ್ರ ಅವರದ್ದು. ಜಯಲಲಿತಾಳ ಹೊಗಳುಭಟರು ಕಿವಿ ಊದಿಯೇ ಬಿಟ್ಟರು. ಆ ಚಿತ್ರದಲ್ಲಿ ಬರುವ ಹೆಂಗಸಿನ ಪಾತ್ರವನ್ನು ನಿಮ್ಮನ್ನು ಅನುಕರಿಸಿಯೇ ಮಾಡಲಾಗಿದೆ ಅಂತ! ಎಐಎಡಿಎಂಕೆ ಕಾರ್ಯಕರ್ತರಿಗೂ ರಜನಿ ಅಭಿಮಾನಿಗಳಿಗೂ ಹೊತ್ತಿಕೊಂಡಿತು. ಪೊ ಗಾರ್ಡನ್ನ ರಜನಿ ಮನೆಗೆ ಭೇಟಿಗೆ ಬಂದವರನ್ನು ತಡೆಯುವಂತೆ ಅಧಿಕಾರ ಚಲಾಯಿಸಿ ಕಿರಿಕಿರಿ ಹುಟ್ಟಿಸಿದರು ಜಯಾ. 'ಕಾರಣವಿಲ್ಲದೇ ನನ್ನನ್ನು ದ್ವೇಷಕ್ಕೆ ಗುರಿಮಾಡಿ ಏಕೆ ದೊಡ್ಡವ್ಯಕ್ತಿಯನ್ನಾಗಿ ಮಾಡುತ್ತಿದ್ದೀರಿ' ಅಂತ ಸಾರ್ವಜನಿಕ ಸಮಾರಂಭಗಳಲ್ಲಿ ರಜನಿ ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು. ವರ್ಷದ ನಂತರ ಅಣ್ಣಾಮಲೈ ಚಿತ್ರ ಬಿಡುಗಡೆಯಾದಾಗ, ಅದರಲ್ಲಿ ರಜನೀಕಾಂತ್ ಹೊಡೆದಿರುವ ಕೆಲವು ಡೈಲಾಗ್ಗಳು ಜಯಲಲಿತಾ ಅವರನ್ನೇ ಗುರಿಯಾಗಿಸಿಕೊಂಡಿವೆ ಅಂತ ಮತ್ತೊಂದು ಬೊಬ್ಬೆ ಶುರುವಾಯಿತು. ಎಐಎಡಿಎಂಕೆ ಕಾರ್ಯಕರ್ತರಿಗೂ ರಜನೀ ಅಭಿಮಾನಿಗಳಿಗೂ ಹೊಯ್-ಕೈಗಳೇ ನಡೆದುಹೋದವು. ಎಲ್ಲವೂ ಕ್ಲೈಮ್ಯಾಕ್ಸ್ಗೆ ತಲುಪಿದ್ದು 1995ರಲ್ಲಿ. ಬಾದ್ಶಹ ಚಿತ್ರದ ಸಿಲ್ವರ್ ಜ್ಯುಬಿಲಿ ಸಮಾರಂಭದಲ್ಲಿ ಮಾತನಾಡುತ್ತ ರಜನೀ, 'ತಮಿಳುನಾಡಿನಲ್ಲಿ ಬಾಂಬ್ ಸಂಸ್ಕೃತಿ ಹೆಚ್ಚುತ್ತಿದೆ. ಮುಖ್ಯಮಂತ್ರಿ ಜಯಲಲಿತಾ ಈ ಬಗ್ಗೆ ಏನೂ ಮಾತಾಡುತ್ತಿಲ್ಲ' ಅಂತ ಆಕ್ರೋಶ ಹೊರಹಾಕಿದರು. ಆ ಚಿತ್ರದ ನಿರ್ಮಾಪಕ ಆರ್. ಎಂ. ವೀರಪ್ಪನ್ ಜಯಾ ಸಂಪುಟದಲ್ಲಿದ್ದರು. ತಡಮಾಡದೇ ಅವರನ್ನು ಕಿತ್ತೆಸೆದರು ಜಯಾ. ಅಂದಿಗೂ- ಇಂದಿಗೂ ತಮ್ಮ ಸಿನಿಮಾ ಇಮೇಜ್ ಬಳಸಿಕೊಂಡು ರಾಜಕೀಯದಲ್ಲಿ ವೃತ್ತಿ ಕಟ್ಟಿಕೊಳ್ಳುವ ಬಗ್ಗೆ ಯೋಚಿಸಿದವರಲ್ಲ ರಜನಿ. ಆದರೆ ಜಯಾಲಲಿತಾ ವರ್ತನೆಗಳೇ ಅವರನ್ನು ರಾಜಕೀಯ ನಿಲವುಗಳನ್ನು ಅಪ್ಪಿಕೊಳ್ಳುವಂತೆ ಪ್ರೇರೇಪಿಸಿ, ಜಯಾಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಏನಾದರೂ ಮಾಡಲು ಸಾಧ್ಯವಾ ಅಂತ ತುಡಿಯುವಂತೆ ಮಾಡಿತು ಅಷ್ಟೆ ಎನ್ನುತ್ತಾರೆ ವಿಶ್ಲೇಷಕರು.
ಸದ್ಯಕ್ಕೆ ತಮಿಳುನಾಡು ಕಣದಲ್ಲಿ ಎದುರಾಳಿಯಾಗಿದ್ದರೂ ಚುನಾವಣೆ ನಂತರ ಅಗತ್ಯಕ್ಕೆ ತಕ್ಕಂತೆ ಕೈಜೋಡಿಸುವ ಸಾಧ್ಯತೆಯನ್ನು ಮೋದಿ- ಜಯಾ ಇಬ್ಬರೂ ಮುಕ್ತವಾಗಿರಿಸಿಕೊಂಡಿದ್ದಾರೆ ಎನ್ನುವ ಸೂಕ್ಷ್ಮವೇನೂ ರಜನೀಕಾಂತರಿಗೆ ಅರ್ಥವಾಗದೇ ಇರುವುದಲ್ಲ. ಆದರೆ ತೆರೆಯ ಮೇಲೆ ಸೂಪರ್ಸ್ಟಾರ್ ಆಗಿ ಅಬ್ಬರಿಸಿದರೂ ದೈನಂದಿನ ಜೀವನದಲ್ಲಿ ತುಂಬ ಸರಳ- ವಿನಮ್ರರಾಗಿರುವ ರಜನಿಗೆ ಜಯಾ ಬಗ್ಗೆ ಇನ್ನೂ ಕಹಿ ಭಾವನೆ ಮಾಯವಾಗಿದೆ. ಹಲವು ಬಾರಿ ಅವರಿಬ್ಬರ ಭೇಟಿಯೂ ಆಗಿದೆ. ಇದೀಗ, ಪೋ ಗಾರ್ಡನ್ನ ಜಯಾ ಮನೆಯೆದುರ ರಸ್ತೆಯಿಂದಲೇ ತಮ್ಮನ್ನು ಭೇಟಿ ಮಾಡಲು ಬಂದ ಮೋದಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.