ಅಂಕಣಗಳು

ವಿರೋಧಿಗಳು ಎಸೆದ ಕಲ್ಲಿನಿಂದಲೇ ಮನೆಕಟ್ಟೋದು ಹೀಗೆ ನೋಡಿ

ವಿರೋಧಿಗಳು ಎಸೆದ ಕಲ್ಲಿನಿಂದಲೇ ಮನೆಕಟ್ಟೋದು ಹೀಗೆ ನೋಡಿ

ಮೋದಿಗೆ ಟೀಕೆ ಹೊಸದಲ್ಲ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದಲೂ ಒಂದಲ್ಲ ಒಂದು ಟೀಕೆ ಎದುರಿಸಿಕೊಂಡೇ ಬಂದಿದ್ದಾರೆ.  2002ರ ಗುಜರಾತ್ ಗಲಭೆಯನ್ನೇ ಮುಂದಿಟ್ಟುಕೊಂಡು ಸತತ 12 ವರ್ಷಗಳ ಕಾಲ ಅವರನ್ನು ಟೀಕಿಸಲಾಯಿತು. ಅದರ ನಂತರ ಅವರು 2 ಬಾರಿ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾದರು. ಆದರೂ ಸಾಕಷ್ಟು ಜನ 2002ನ್ನು ದಾಟಿ ಮುಂದೆ ಬರಲೇ ಇಲ್ಲ.

ದೇಶದ ಇತಿಹಾಸದಲ್ಲೇ ಅತ್ಯಂತ ಕೀಳುಮಟ್ಟದ ಬೈಗುಳಗಳನ್ನು ಕಂಡಿದ್ದು ಈ ಚುನಾವಣೆ. ಹೇಸಿಗೆ ಹುಟ್ಟುವಷ್ಟು ಕೀಳುಮಟ್ಟದ ಟೀಕೆಗಳು ಬಂದುಹೋಗಿವೆ.
ಮಹಿಳೆಯರ ವಿಷಯದಲ್ಲಿ, ಕೋಮುಗಳ ವಿಷಯದಲ್ಲಿ, ಜಾತಿಗಳ ವಿಷಯದಲ್ಲಿ, ಖಾಸಗಿ ವಿಷಯದಲ್ಲಿ, ಕೊನೆಗೆ ಸೈನಿಕರ ವಿಷಯದಲ್ಲಿ ಹೀಗೆ ಈ ಚುನಾವಣೆ ಯಾರನ್ನೂ ಬಿಟ್ಟಿಲ್ಲ. ಇಷ್ಟು ವರ್ಷಗಳ ಚುನಾವಣೆಯಲ್ಲಿ ಸೈನಿಕರನ್ನು ಯಾರೂ ಮಧ್ಯ ಎಳೆದುತಂದಿರಲಿಲ್ಲ. ಸೈನಿಕರನ್ನು ಚುನಾವಣೆ ಸಂಗತಿಯಾಗಿ ಬಳಸಿಕೊಂಡಿರಲಿಲ್ಲ. ಆದರೆ ಈ ಬಾರಿ ಮೂರ್ಖ ರಾಜಕಾರಣಿಯೊಬ್ಬ 'ಕಾರ್ಗಿಲ್ ಯುದ್ಧದಲ್ಲಿ ಗೆಲ್ಲಲು ಮುಸ್ಲಿಂ ಸೈನಿಕರ ಕೊಡುಗೆ ದೊಡ್ಡದು' ಎಂದುಬಿಟ್ಟ. ಆದರೆ ಆ ಮೂರ್ಖ ಹಾಗೆ ಹೇಳುವವರೆಗೆ ಯಾರೂ ಕೂಡ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಲ್ಲಿ ಹಿಂದುಗಳೆಷ್ಟು? ಮುಸ್ಲಿಮರೆಷ್ಟು? ಕ್ರಿಶ್ಚಿಯನ್ನರೆಷ್ಟು ಎಂದು ವಿಚಾರ ಕೂಡ ಮಾಡಿರಲಿಲ್ಲ.
ಹೀಗೆ ಈ ಬಾರಿಯ ಚುನಾವಣೆಯಲ್ಲಿ ಮಾಡಬಾರದ್ದನ್ನೆಲ್ಲ ನಮ್ಮ ರಾಜಕಾರಣಿಗಳು ಮಾಡಿದ್ದಾರೆ. ಪರಸ್ಪರ ಬೈದಾಡಿಕೊಂಡಿದ್ದಾರೆ. ನನಗದು ವಿಶೇಷವಾಗಿ ಕಾಣುವುದಿಲ್ಲ. ಯಾಕೆಂದರೆ ಚುನಾವಣೆ ಸಮಯದಲ್ಲಿ ಇವೆಲ್ಲ ಸಾಮಾನ್ಯ. ಈ ಬಾರಿ ಗುಣಮಟ್ಟ ಕುಸಿದಿರಬಹುದು. ಆದರೆ ಹೊಸದಂತೂ ಖಂಡಿತ ಅಲ್ಲ.
ಆದರೆ ಇಡೀ ಪ್ರಕ್ರಿಯೆಯಲ್ಲಿ ಕೊಂಚ ಡಿಫರೆಂಟಾಗಿ ನಿಲ್ಲುವವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ. ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಆದಾಗಿನಿಂದ ಮತ್ತು ಅದಕ್ಕಿಂತ ಮೊದಲು ಅತ್ಯಂತ ಹೆಚ್ಚು ಟೀಕೆ ಮತ್ತು ಕೀಳು ಟೀಕೆಗಳನ್ನು ಎದುರಿಸಿದ ಏಕೈಕ ವ್ಯಕ್ತಿ ನರೇಂದ್ರ ಮೋದಿ!
ಇದು ಬಹುಶಃ ನಿರ್ವಿವಾದದ ಸಂಗತಿ. ಬಹುಶಃ ದೇಶದ ರಾಜಕೀಯ ಇತಿಹಾಸದಲ್ಲಿ ಈವರೆಗೆ ಯಾವುದೇ ಒಬ್ಬ ವ್ಯಕ್ತಿ ಇಷ್ಟು ಟೀಕೆಗೆ ಗುರಿಯಾಗಿರಲಿಕ್ಕಿಲ್ಲ. ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಯನ್ನು ಕೂಡ ಯಾರೂ ಇಷ್ಟು ಕೀಳಾಗಿ ಟೀಕಿಸಿರಲಿಲ್ಲ. ಮೋದಿ ಅಷ್ಟು ಟೀಕೆಗೆ ಗುರಿಯಾಗಿದ್ದಾರೆ.
ಮೋದಿಗೆ ಟೀಕೆ ಹೊಸದಲ್ಲ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದಲೂ ಒಂದಲ್ಲ ಒಂದು ಟೀಕೆ ಎದುರಿಸಿಕೊಂಡೇ ಬಂದಿದ್ದಾರೆ.  2002ರ ಗುಜರಾತ್ ಗಲಭೆಯನ್ನೇ ಮುಂದಿಟ್ಟುಕೊಂಡು ಸತತ 12 ವರ್ಷಗಳ ಕಾಲ ಅವರನ್ನು ಟೀಕಿಸಲಾಯಿತು. ಅದರ ನಂತರ ಅವರು 2 ಬಾರಿ ಮುಖ್ಯಮಂತ್ರಿಯಾಗಿ ಮರು ಆಯ್ಕೆಯಾದರು. ಆದರೂ ಸಾಕಷ್ಟು ಜನ 2002ನ್ನು ದಾಟಿ ಮುಂದೆ ಬರಲೇ ಇಲ್ಲ. ಬರುವ ಮನಸ್ಸೂ ಇಲ್ಲ. ಅದನ್ನೇ ಮುಂದಿಟ್ಟುಕೊಂಡು 'ಸಾವಿನ ವ್ಯಾಪಾರಿ' ಎಂದೂ ಜರೆಯಲಾಯಿತು. ಆದರೆ ಗುಜರಾತ್ ಜನ ಅವರನ್ನು ಮರು ಆಯ್ಕೆ ಮಾಡಿದರು.
ಯಾವಾಗ ಮೋದಿಯ ಜನಪ್ರಿಯತೆ ಗುಜರಾತ್ ಆಚೆಗೂ ವ್ಯಾಪಿಸಿತೋ ಆಗ ಕಾಂಗ್ರೆಸ್‌ನಿಂದ ಆರಂಭಿಸಿ ದೇವೇಗೌಡರವರೆಗೆ ಎಲ್ಲರೂ ಮೋದಿಯವರನ್ನು ಟೀಕಿಸುವವರೇ. ಮೋದಿ ತಮಗೇನೂ ಅನ್ನದಿದ್ದರೂ ಸಿದ್ದರಾಮಯ್ಯ ದಿನ ಬೆಳಗಾದರೆ ಮೋದಿಗೆ ಬಯ್ಯುತ್ತಾರೆ. 'ನರಹರ ಮೋದಿ' ಎಂದರು. ಸುಳ್ಳುಗಾರ ಅನ್ನುತ್ತಾರೆ. ಇಷ್ಟೆಲ್ಲ ಬೈದು ರಾಜ್ಯದಲ್ಲೆಲ್ಲೂ ಮೋದಿ ಅಲೆ ಇಲ್ಲ ಎನ್ನುತ್ತಾರೆ. ಮೋದಿ ಅಲೆ ಇಲ್ಲವೆಂದಾದರೆ ಅವರನ್ನು ಬಯ್ಯುವ ಅಗತ್ಯವೇನಿದೆ ಎಂಬುದೇ ಅರ್ಥವಾಗುವುದಿಲ್ಲ!
ಜನಾರ್ದನ ಪೂಜಾರಿ ಅವರಂತೂ ಸ್ವಂತ ಹೆಂಡತಿಗಿಂತ ಹೆಚ್ಚಾಗಿ ಮೋದಿ ಹೆಂಡತಿ ಬಗ್ಗೆ ಕಾಳಜಿ ತೋರುತ್ತ, ಮೋದಿಯನ್ನು ಟೀಕಿಸುತ್ತಾರೆ. ನಳಿನ್ ಕುಮಾರ್ ವಿರುದ್ಧ ಗೆಲ್ಲಲಾಗದಿದ್ದರೂ ತಾಕತ್ತಿದ್ದರೆ ಮೋದಿ ನನ್ನ ವಿರುದ್ಧ ಬಂದು ನಿಲ್ಲಲಿ ಎನ್ನುತ್ತಾರೆ! ಅದು ಸಾಲದೆಂಬಂತೆ 'ಮೋದಿ ದೇವೇಗೌಡರ ಬಗ್ಗೆ ಕಾಳಜಿ ತೋರುವುದು ಬೇಡ. ಬದಲಾಗಿ ಸ್ವಂತ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳಲಿ. ದೇವೇಗೌಡರಿಗೆ ಹಾಗೆ ಹೇಳುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ' ಎಂದು ಹೊಸ ರಾಗ ತೆಗೆದಿದ್ದಾರೆ.
 2005-06ರಲ್ಲಿ ಇರಬೇಕು. ಜನಾರ್ದನ ಪೂಜಾರಿ ಅವರ ಮನೆಯಲ್ಲೇ ಒಂದು ಘಟನೆ ನಡೆದಿತ್ತು. ಈ ಬಗ್ಗೆ ಎಲ್ಲೂ ಪ್ರಕರಣ ದಾಖಲಾಗಿಲ್ಲ. ಸಾಕಷ್ಟು ಜನರಿಗೆ ಗೊತ್ತೂ ಇಲ್ಲ. ಪೊಲೀಸರ ಸಹಾಯದಿಂದ 4-5 ದಿನದ ನಂತರ ಸಮಸ್ಯೆ ಪರಿಹರಿಸಲಾಗಿತ್ತು. ಈ ಸಂಗತಿ ಮೊದಲ ದಿನವೇ ಗೊತ್ತಾಗಿದ್ದರೂ ಮಂಗಳೂರಿನಲ್ಲಿದ್ದ ನಾನು ಪತ್ರಿಕೆಯಲ್ಲಿ ವರದಿ ಮಾಡಿರಲಿಲ್ಲ. ಅದೇ ಘಟನೆ ಇಟ್ಟುಕೊಂಡು ಜನಾರ್ದನ ಪೂಜಾರಿ ಅವರನ್ನು ಟೀಕಿಸಿದರೆ ಹೇಗಿರುತ್ತದೆ? ಮನೆಯನ್ನೇ ಸರಿಯಾಗಿ ನೋಡಿಕೊಳ್ಳಲಾಗದವರು ಕ್ಷೇತ್ರವನ್ನೇನು ನೋಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರೆ ಅದರಂಥ ಮೂರ್ಖತನ ಬೇರಿಲ್ಲ. ಇದೇ ಮಾತು ಪೂಜಾರಿ ಅವರಿಗೂ ಅನ್ವಯವಾಗುತ್ತದೆ. ಮೋದಿಯನ್ನು ಟೀಕಿಸುವ ಭರದಲ್ಲಾದರೂ ಜನಾರ್ದನ ಪೂಜಾರಿ ಅವರಿಗೆ ಕನ್ನಡಿಗರ ಮೇಲೆ ಪ್ರೀತಿಬಂತಲ್ಲ ಎಂಬುದು ಸಮಾಧಾನದ ಸಂಗತಿ. ಯಾಕೆಂದರೆ ಇದಕ್ಕೂ ಮೊದಲು ಅವರು ಕನ್ನಡ, ಕನ್ನಡಿಗರ ಬಗ್ಗೆ ಈ ರೀತಿಯ ಅಭಿಮಾನ, ಪ್ರೀತಿ ತೋರಿದ್ದು ನೆನಪಿಲ್ಲ.
ದೇಶದಲ್ಲೆಲ್ಲೂ ಮೋದಿ ಅಲೆ ಇಲ್ಲ ಎಂದು ಕಾಂಗ್ರೆಸ್ಸಿಗರು ದಿನ ಬೆಳಗಾದರೆ ಹೇಳುತ್ತಾರೆ. ಅಲೆ ಇಲ್ಲ ಎಂದಾದರೆ ದಿನಾ ಅದರ ಬಗ್ಗೆ ಹೇಳುವ ಅಗತ್ಯವಾದರೂ ಏನಿದೆ ಎಂಬ ಸಾಮಾನ್ಯ ಪ್ರಶ್ನೆ ಅವರಿಗಿನ್ನೂ ಹೊಳೆದಂತಿಲ್ಲ. ಬಿಜೆಪಿಯಲ್ಲಿ ಎಷ್ಟೆಲ್ಲ ಹಿರಿಯ ನಾಯಕರಿದ್ದಾರೆ. ಉತ್ತಮರಿದ್ದಾರೆ. ಅವರನ್ನೆಲ್ಲ ಕಡೆಗಣಿಸಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಮಾಡಲಾಗಿದೆ ಎಂದು ಬಿಜೆಪಿಯ ಇತರ ನಾಯಕರನ್ನು ಹೊಗಳಲಾಗುತ್ತದೆ. ಅಲ್ಲಿಗೆ  ಪರೋಕ್ಷವಾಗಿ ಮೋದಿಯೇ ನಮ್ಮ ಎದುರಾಳಿ ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ಅರಿವು ಕೂಡ ಕಾಂಗ್ರೆಸ್ ನಾಯಕರಿಗೆ ಇಲ್ಲವಾಯಿತು.
ಮೋದಿಯೊಬ್ಬರೇ ಅಲ್ಲ ಅವರನ್ನು ಬೆಂಬಲಿಸುವವರೆಲ್ಲ ಕೋಮುವಾದಿಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಜ್ಞಾನಪೀಠಿಗಳು ಕೂಡ ಈ ಅಜ್ಞಾನ ಮೆರೆಯುವವರ ಪಟ್ಟಿಯಲ್ಲಿದ್ದಾರೆ. ಇರಲಿ ಬಿಡಿ. ಸ್ವತಂತ್ರ ದೇಶದ ಸ್ವತಂತ್ರ ಪ್ರಜೆಗಳು ಅವರು. ಒಬ್ಬರು ವಾರಾಣಸಿಗೆ ಬೇರೆ ಹೊರಟಿದ್ದಾರೆ. ರಾಷ್ಟ್ರಮಟ್ಟದ ಚಾನಲ್‌ನಲ್ಲಿ ಒಂದಷ್ಟು ಪ್ರಚಾರ ಸಿಕ್ಕೀತು. ತುಂಬ ದಿನವಾಯಿತು ಪ್ರಚಾರವಿಲ್ಲದೆ.
ಕಳೆದ 12 ವರ್ಷಗಳಲ್ಲಿ ಮೋದಿ ಹೇಳಿದ್ದು, ಹೇಳದಿದ್ದುದು ಎಲ್ಲಾ ವಿವಾದವಾಗಿದೆ ಅಥವಾ ವಿವಾದವನ್ನಾಗಿ ಮಾಡಲಾಗಿದೆ. ಕೇಂದ್ರ ಸಚಿವರೊಬ್ಬರು ನಾಯಿಮರಿಯ ಅಣ್ಣ ಎಂದರು. ಮೋದಿ ಅದಕ್ಕೆ, 'ಥ್ಯಾಂಕ್ಸ್. ನಾಯಿಗಿಂತ ನಿಯತ್ತಾದ ಪ್ರಾಣಿ ಬೇರಿಲ್ಲ. ಜನತೆಗೆ ನಿಯತ್ತಾಗಿರುವ ವಿಷಯದಲ್ಲಿ ನಾನು ನಾಯಿಯೇ' ಅಂದುಬಿಟ್ಟರು.
ಇಡೀ ಚುನಾವಣೆ ಅಖಾಡದಲ್ಲಿ ಉಳಿದವರಿಗಿಂತ ಮೋದಿ ಪ್ರತ್ಯೇಕವಾಗಿ ಕಂಡಿದ್ದೇ ಇಲ್ಲಿ. ಯಾರೇ ಟೀಕೆ ಮಾಡಿದರೂ ಅವರು ನೇರವಾಗಿ ಅದಕ್ಕೆ ಪ್ರತಿಕ್ರಿಯಿಸುವ ಗೋಜಿಗೂ ಹೋಗುವುದಿಲ್ಲ. ಎಷ್ಟೋ ಟೀಕೆಗಳಿಗೆ ಅವರು ಈವರೆಗೆ ಪ್ರತಿಕ್ರಿಯೆಯನ್ನೇ ನೀಡಿಲ್ಲ. ಬದಲಾಗಿ ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದಾರೆ.
ಚಾಯ್ ಪೆ ಚರ್ಚಾ (ಚಹಾದೊಂದಿಗೆ ಚರ್ಚೆ) ಎಂಬ ಕಾರ್ಯಕ್ರಮಕ್ಕೆ ಇದಕ್ಕೊಂದು ಸ್ಪಷ್ಟ ಉದಾಹರಣೆ. ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು 'ಮೋದಿ ಚಾಯ್ ಮಾರೋದಕ್ಕೆ ಲಾಯಕ್ಕು. ಕಾಂಗ್ರೆಸ್ ಕಚೇರೀಲಿ ಚಾಯ್ ಮಾರೋ ಕೆಲಸ ಅವರಿಗೇ ಕೊಡೋಣ' ಎಂದು ಹೇಳಿದ್ದೇ ನೆಪವಾಯಿತು. ದೇಶಾದ್ಯಂತ ಚಾಹಾ ಹಂಚಿಕೆ ಆರಂಭವಾಯಿತು. ದೊಡ್ಡ ಆಂದೋಲನದ ರೀತಿಯಲ್ಲಿ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಚಹಾ ಹಂಚಿದರು.
ಅದು ಅಷ್ಟಕ್ಕೇ ನಿಲ್ಲಲಿಲ್ಲ. 'ಚಾಯ್ ಪೇ ಚರ್ಚಾ' ಆರಂಭವಾಯಿತು. ಇದು ದೇಶಾದ್ಯಂತ ಹೊಸ ಅಲೆಯನ್ನೇ ಸೃಷ್ಟಿಸಿತು. ಫೆ.12ರಂದು 'ಉತ್ತಮ ಆಡಳಿತ' ಎಂಬ ವಿಷಯದಲ್ಲಿ ದೇಶದ 300 ನಗರದಲ್ಲಿ 1000 ಸ್ಥಳಗಳಲ್ಲಿ 'ಚಾಯ್ ಪೆ ಚರ್ಚಾ' ಕಾರ್ಯಕ್ರಮ ನಡೆಯಿತು. ಅದಾದ ನಂತರ ಮಾರ್ಚ್ 8ರಂದು ಮಹಿಳಾ ದಿನಾಚರಣೆಯಂದು ದೇಶದ 500 ನಗರದ ಒಟ್ಟು 1500 ಸ್ಥಳಗಳಲ್ಲಿ ಮಹಿಳೆಯರೊಂದಿಗೆ 'ಚಾಯ್ ಪೆ ಚರ್ಚಾ' ನಡೆಯಿತು. ಮಾರ್ಚ್ 20ರಂದು ದೇಶದ 500ನಗರಗಳ 1500 ಸ್ಥಳಗಳಲ್ಲಿ 3ನೇ ಮತ್ತು ಕೊನೆಯ ಹಂತದ ಚಾಯ್ ಪೇ ಚರ್ಚಾ ಕಾರ್ಯಕ್ರಮ ನಡೆಯಿತು. ಅದಾದ ನಂತರ ಚುನಾವಣಾ ಆಯೋಗ ತಡೆ ಹಾಕಿತು.
'ಚಾಯ್ ಪೆ ಚರ್ಚಾ'ಕ್ಕೆಂದೇ ಒಂದು ವೆಬ್‌ಸೈಟ್. ಅದಕ್ಕೊಂದು ಮೊಬೈಲ್ ಅಪ್ಲಿಕೇಷನ್ ಎಲ್ಲ ಸೃಷ್ಟಿಯಾಗಿದೆ. ಅಲ್ಲಿ ಜನಕ್ಕೆ ಪ್ರಶ್ನೆ ಕಳುಹಿಸಲು ಅವಕಾಶವಿದೆ. ಸಲಹೆ ನೀಡುವ ಅವಕಾಶವೂ ಇದೆ. ಚರ್ಚೆ ಬಗ್ಗೆ ಪ್ರತಿಕ್ರಿಯಿಸುವ ಅನುಕೂಲವಿದೆ. ಇಷ್ಟೆಲ್ಲ ಹುಟ್ಟಿಕೊಂಡಿದ್ದು ಕೇವಲ ಒಂದು ಟೀಕೆಯ ನಂತರ.
ಈ ಹಿಂದೆ ಇಂತಹ ಪ್ರಯೋಗವೊಂದು ನಮ್ಮ ದೇಶದ ಚುನಾವಣೆ ಬಿಡಿ, ಭಾರೀ ಮುಂದುವರಿದ ದೇಶಗಳಲ್ಲೂ ಇಂತಹ ಕಲ್ಪನೆಯೊಂದು ಟಿಸಿಲೊಡೆದಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಪ್ರತಿಪಕ್ಷದ ನಾಯಕರೊಬ್ಬರ ಟೀಕೆಗೆ ಈ ರೀತಿಯಲ್ಲಿ, ಗುಣಾತ್ಮಕವಾಗಿ ಯಾರೂ ಉತ್ತರಿಸಿರಲಿಲ್ಲ. ಪ್ರತಿಪಕ್ಷದ ನಾಯಕರ ಟೀಕೆಯೊಂದನ್ನೇ ಆಧಾರವಾಗಿಟ್ಟುಕೊಂಡು ದೊಡ್ಡಮಟ್ಟದ ಆಂದೋಲನ ರೂಪದ ಕಾರ್ಯಕ್ರಮ ರೂಪಿಸಿ, ಆ ಮೂಲಕವೂ ಜನರನ್ನು ಸೆಳೆದ ರೀತಿಯಿದೆಯಲ್ಲ ಅದು ಅತ್ಯಂತ ಅದ್ಭುತವಾದದ್ದು. 'ಚಾಯ್ ವಾಲಾ' ಎಂದು ಟೀಕೆ ಮಾಡಿದವರು ಯಾಕಾದರೂ ಹಾಗೆ ಟೀಕೆ ಮಾಡಿದೆನಪ್ಪಾ ಎಂದು ಮೈ ಪರಚಿಕೊಳ್ಳುವಂತಾಯಿತು.
'ನಿಂದಕರಿರಬೇಕಯ್ಯ' ಎಂಬ ಮಾತನ್ನು ಅವರು ಅತ್ಯಂತ ಪರಿಣಾಮಕಾರಿಯಾಗಿ ಜಾರಿ ಮಾಡಿದ್ದಾರೆ. ಟೀಕೆಗಳನ್ನು ಎದುರಿಸುವ, ಟೀಕೆಗಳನ್ನೇ ತನ್ನ ಯಶಸ್ಸಿಗೆ ಬಳಸಿಕೊಳ್ಳುವ ಸಂಗತಿಯಲ್ಲಿ ಮೋದಿ ಖಂಡಿತವಾಗಿಯೂ ಬೇರೆಲ್ಲರನ್ನೂ ಮೀರಿ ನಿಲ್ಲುತ್ತಾರೆ. ಅದು ಅಪರೂಪದ ಕಲೆ ಕೂಡ. ಅದು ನರೇಂದ್ರ ಮೋದಿ ಅವರಿಗೆ ಚೆನ್ನಾಗಿ ಕರಗತವಾಗಿದೆ.
ವಿರೋಧಿಗಳು ಸಿಟ್ಟಿನಿಂದ ಇವನನ್ನು ನಾಶ ಮಾಡಬೇಕು ಎಂದ ಎಸೆದ ಕಲ್ಲಿನಿಂದಲೇ ಮನೆ ಕಟ್ಟಿ, ಛೇ ಕಲ್ಲೆಸೆದು ಮನೆಕಟ್ಟಲು ಸಹಾಯ ಮಾಡಿಬಿಟ್ಟೆವಲ್ಲ ಎಂದು ವಿರೋಧಿಗಳೇ ಪರಿತಪಿಸುವಂತಾಯಿತು!

= ವಿನಾಯಕ ಭಟ್ಟ ಮೂರೂರು
vakradanta@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!