ಒಣಪ್ರತಿಷ್ಠೆಯ ಉಳಿವಿಗಾಗಿ ನಡೆಯುತ್ತಿದೆ ಒಣಚರ್ಚೆ!
ಭಾರತದಲ್ಲಿ ಚುನಾವಣಾ ಫಲಿತಾಂಶದ ಮುನ್ಸೂಚನೆ, ಅಭಿಪ್ರಾಯ ಸಂಗ್ರಹಗಳ ಮೇಲೆ ಹೆಚ್ಚು ಅವಲಂಬಿತವಾಗಿರುವುದಿಲ್ಲ. ಅದು ಹಿಟ್ ಆ್ಯಂಡ್ ಮಿಸ್ ಪ್ರಯತ್ನವಾಗಿದ್ದು, ನಿರೀಕ್ಷೆಗಳೇನಿದ್ದರೂ ವಿಶ್ವಾಸಾರ್ಹವಲ್ಲದ ಪುರಾವೆಗಳ ಮೇಲೆ ಮತ್ತು ವೈಯಕ್ತಿಕ ಮತದಾನದ ಆಸಕ್ತಿಯ ಮೇಲಷ್ಟೇ ನಿಂತಿರುತ್ತದೆ.
2014ರಲ್ಲಿ, ನರೇಂದ್ರ ಮೋದಿ ಮತ್ತು ಎನ್ಡಿಎ ಒಕ್ಕೂಟದ ಗೆಲುವನ್ನು ನಿರೀಕ್ಷಿಸುವವರನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯದ್ದು, ನರೇಂದ್ರ ಮೋದಿಯ ನಿಷ್ಠಾವಂತ ಅಭಿಮಾನಿಗಳ ಗುಂಪು. ಗುಜರಾತ್ನ ಈ ನಾಯಕ, ಕೇಂದ್ರದಲ್ಲೂ ಮಿಂಚುತ್ತಾರೆ ಎಂದು ಅಚಲ ಉತ್ಸಾಹದಲ್ಲಿರುವವರು ಇವರು. ಸಾಂಪ್ರದಾಯಿಕ ರಾಜಕೀಯ ಜಾಲದಲ್ಲಿ ಪರಿಣತಿಯಿಲ್ಲದ ಇವರು, ಈ ಅಭಾವವನ್ನು ಸಾಮಾಜಿಕ ಮಾಧ್ಯಮಗಳಲ್ಲಿನ ತಮ್ಮ ಬೃಹತ್ ಜಾಲದಿಂದ ಸರಿದೂಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೋದಿ ಗುಜರಾತ್ನ ಮುಖ್ಯಮಂತ್ರಿಯಿಂದ, ಭಾರತದ ಭಾವಿ ಪ್ರಧಾನಿ ಎಂದು ಬಿಂಬಿತವಾಗಿರುವುದರ ಹಿಂದೆ ಈ ಉತ್ಸಾಹಿ ಕಾಲಾಳುಗಳ ಶ್ರಮವೂ ಇದೆ.
ಇನ್ನು ಎರಡನೆಯ ಗುಂಪಿನಲ್ಲಿರುವವರು ಮೋದಿಯವರ ಕಟ್ಟರ್ ವಿರೋಧಿಗಳು. 'ಭಾರತ' ಎಂಬ ಮೂಲ ಯೋಚನೆಗೆ ವಿರುದ್ಧವಾಗಿದ್ದಾರೆ ಮೋದಿ ಎನ್ನುವವರಿವರು. ಮೋದಿ ಅಧಿಕಾರಕ್ಕೆ ಬರಬಹುದೆಂಬ ತಮ್ಮ ಭಯವನ್ನು ತಮ್ಮ ಸ್ನೇಹಿತರ ಮುಂದೆ, ನೆರೆಹೊರೆಯವರ ಮುಂದೆ ಮತ್ತು ಸಾರ್ವಜನಿಕವಾಗಿಯೇ ತೋರಿಸುತ್ತಿದ್ದಾರೆ. ತಮ್ಮ ಮೋದಿ ಫೋಬಿಯಾವನ್ನು ದೂರಮಾಡಿಕೊಳ್ಳಲು, ಕಡೆಯ ಪ್ರಯತ್ನವಾಗಿ 'ಜಾತ್ಯತೀತತೆ' ಎಂಬ ಅಸ್ತ್ರವನ್ನು ಕೇಸರಿ ಗುಂಪುಗಳ ಮೇಲೆ ಬಳಸುತ್ತಿದ್ದಾರೆ.
ಹಾಗಾಗಿ, ಅತಿ ಹೆಚ್ಚು ಸಂಖ್ಯೆಯಲ್ಲಿ ಬುದ್ಧಿಜೀವಿಗಳು(ಬಹುತೇಕ ಎಡಪಂಥೀಯ ವಿಚಾರಧಾರೆಯುಳ್ಳವರು), "ಹಿಂದು ರಾಷ್ಟ್ರವಾದಿಗಳೊಂದಿಗೆ ನಂಟುಹೊಂದಿರುವ ಪಕ್ಷವನ್ನು ಆಯ್ಕೆ ಮಾಡಿದರೆ ಎಷ್ಟು ಅನಾಚಾರವಾಗುತ್ತದೆ ಗೊತ್ತಾ?" ಎಂದು ಘೋಷಣೆ ಮೊಳಗಿಸುತ್ತಿದ್ದಾರೆ. ಅದರಂತೆಯೇ, ಹೊರದೇಶದಲ್ಲೂ ಕೂಡ, ಸಲ್ಮಾನ್ ರಶ್ದಿ ಮತ್ತು ಅನೀಶ್ ಕಪೂರ್ ನೇತೃತ್ವದ ಬ್ರಿಟನ್ನ ಗುಂಪೊಂದು ಗಾರ್ಡಿಯನ್ ಪತ್ರಿಕೆಗೆ ಪತ್ರ ಬರೆದು ಮೋದಿಯವರ ಸಂಭವನೀಯ ಗೆಲುವಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ.
ಪಾಪ ಇವರಿಗೆಲ್ಲ ನಿರಾಸೆ ಮೂಡಿಸಿರುವ ಮೋದಿ ಅಲೆ, ಒಂದು ರೀತಿಯ ವಿಚಿತ್ರ ಪ್ರೇರೇಪಣೆಯನ್ನಂತೂ ಇವರಿಗೆಲ್ಲ ನೀಡಿದೆ. ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಬರೆಯುತ್ತಾ ಅಶುತೋಷ್ ವಾರ್ಶ್ನೇ, ಎಲ್ಲವೂ ಮುಗಿದಿಲ್ಲ ಎಂದು ಸೂಚಿಸುತ್ತಾರೆ: "ಮುಸಲ್ಮಾನರು ಒಟ್ಟಾಗಿ ಮತದಾನ ಮಾಡಿದರೆ, ಮೋದಿಯವರು ಅಧಿಕಾರಕ್ಕೇರುವುದನ್ನು ತಡೆಯುವ ಸಾಧ್ಯತೆಯಿದೆ" ಎನ್ನುತ್ತಾರವರು. ಇನ್ನೊಂದು ಅದೇ ಧಾಟಿಯ ಲೇಖನದಲ್ಲಿ ವಾರ್ಶ್ನೇ, ಅಭಿಪ್ರಾಯ ಸಂಗ್ರಹಗಳ ವಿಶ್ವಾಸಾರ್ಹತೆಯ ಬಗ್ಗೆ ಸರಿಯಾಗಿಯೇ ಪ್ರಶ್ನಿಸಿದ್ದಾರೆ. ಆದರೆ ಮುಂದುವರಿಯುತ್ತಾ, "ಅಭಿಪ್ರಾಯ ಸಂಗ್ರಹಗಳು ಮೋದಿಯೇ ಗೆಲ್ಲಲಿದ್ದಾರೆ ಎಂದು ಹೇಳಿದಂತೆಲ್ಲ, ಮೋದಿಯವರನ್ನು ದ್ವೇಷಿಸುವ ಅಲ್ಪಸಂಖ್ಯಾತರು ಮತ್ತು ಹಿಂದುಗಳು ಎಚ್ಚರಿಕೆ ವಹಿಸಿ ಮತದಾನ ಮಾಡಲಿದ್ದಾರೆ. ಮೇ 16ರ ನಂತರ, ಸರ್ಕಾರ ರಚನೆಗಾಗಿ ತೀವ್ರ ಚೌಕಾಶಿ ನಡೆಯಿತೆಂದರೆ ಆಶ್ಚರ್ಯಪಡಬೇಕಿಲ್ಲ" ಎನ್ನುತ್ತಾರೆ.
ವಾರ್ಶ್ನೇ ಅವರ ವಿಶ್ಲೇಷಣೆ ವಿಶಿಷ್ಟವಾಗೇನೂ ಇಲ್ಲ. ಅಮೆರಿಕದ ಕಾಂಗ್ರೆಸ್ನವರೊಬ್ಬರು ಇತ್ತೀಚೆಗೆ ನನ್ನೊಂದಿಗೆ ಮಾತನಾಡುತ್ತಾ, "ಎನ್ಡಿಎ ಸುಮಾರು 180 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಬಿಜೆಪಿಯ ನೇತೃತ್ವ ಗೋವಾದ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹೆಗಲಿಗೇರಬಹುದು ಎಂದು ಹೇಳಲಾಗುತ್ತಿದೆ" ಎಂದರು.
ಹೀಗಾಗಬೇಕು ಎನ್ನುವುದು ಅವರ ಆಶಯವೋ ಅಥವಾ ಯಾರಿಗೂ ತಿಳಿಯದ ವಿಷಯ ಅವರಿಗೆ ತಿಳಿದಿದೆಯೋ ಗೊತ್ತಿಲ್ಲ. ಆದಾಗ್ಯೂ, ಇಂಥವರೆಲ್ಲ ಇಂದು ಗೊಂದಲಮಯ ನಿರಾಕರಣೆಯ ಮನಸ್ಥಿತಿಯಲ್ಲಿ ಸಿಲುಕಿದ್ದಾರೆ ಎನ್ನುವುದಂತೂ ಸತ್ಯ. ಒಂದು ಸ್ತರದಲ್ಲಿ ಇವರು, "ಮೋದಿಯನ್ನು ತಡೆಯುವುದಕ್ಕೆ ಸಾಧ್ಯವಿಲ್ಲ' ಎಂದು ಭಾವಿಸುತ್ತಾರೆ. ಅದೇ ಸಮಯದಲ್ಲೇ, "ತುಸು ಬುದ್ಧಿವಂತಿಕೆಯ ತಂತ್ರಗಳನ್ನು ಹೆಣೆದರೆ ಬಿಜೆಪಿಗೆ ಘಾಸಿ ಮಾಡುವುದಕ್ಕೆ ಸಾಧ್ಯ" ಎಂದು ಭಾವಿಸಲೂ ಇಷ್ಟಪಡುತ್ತಾರೆ.
ಈ ದ್ವಂದ್ವ ವಿಚಾರಗಳಿಗೆ ಅವರ ಒಳತೋಟಿಯೇ ಕಾರಣ. ಬಹಳಷ್ಟು ವರ್ಷಗಳವರೆಗೆ ಇವರೆಲ್ಲ ಮೋದಿಯವರ ಪ್ರಖ್ಯಾತಿಯನ್ನು ಅಲ್ಲಗಳೆಯುತ್ತಲೇ ಬಂದಿದ್ದರು, ಮೋದಿ ಮ್ಯಾಜಿಕ್ ಕೇವಲ ಗುಜರಾತ್ಗಷ್ಟೇ ಸೀಮಿತವಾಗಿರಲಿದೆ ಎನ್ನುತ್ತಿದ್ದರು. ಯಾವಾಗ 2012ರಲ್ಲಿ ಮೋದಿ ಮೂರನೆಯ ಬಾರಿಗೆ ಗುಜರಾತ್ನ ಮುಖ್ಯಮಂತ್ರಿಯಾಗಿ ಆಯ್ಕೆಯಾದರೋ, ಆಗ ಮತ್ತೆ ಇವರೆಲ್ಲ, "ಬಿಜೆಪಿಯ ಹಿರಿಯ ನಾಯಕರು ಮೋದಿಯ ರಾಷ್ಟ್ರೀಯ ಆಕಾಂಕ್ಷೆಗಳನ್ನು ತುಳಿದುಹಾಕುತ್ತಾರೆ" ಎಂದು ಸಮಾಧಾನಪಟ್ಟುಕೊಂಡರು. ಆದರೆ ಅದೂ ಸುಳ್ಳಾದ ನಂತರ, ಆಗ ಗೆಲುವಿನ ಸಾಧ್ಯತೆಯನ್ನು ಅಳುಕುತ್ತಾ ಒಪ್ಪಿಕೊಂಡು, "ಮೋದಿ ನೇತೃತ್ವದ ಬಿಜೆಪಿಗೆ 200 ಸ್ಥಾನಗಳು ಸಿಗಬಹುದು ಎಂದರು(ಅವರಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಸಿಗುವುದಿಲ್ಲ ಎನ್ನುವ ಒಳಾರ್ಥ ಆ ಒಪ್ಪಿಗೆಯ ಹಿಂದಿತ್ತು). ರಾಮ್ ವಿಲಾಸ್ ಪಾಸ್ವಾನ್ ಮತ್ತು ಚಂದ್ರಬಾಬು ನಾಯ್ಡು ಅವರು ಬಿಜೆಪಿಯ ಬಳಿ ಬಂದದ್ದು ನೋಡಿ, ಸ್ಥಾನಗಳ ಸಂಖ್ಯೆಯನ್ನು 220ಕ್ಕೆ ಏರಿಸಿದರು. ಈಗಿನ ಅಭಿಪ್ರಾಯ ಸಂಗ್ರಹಗಳು, ಎನ್ಡಿಎ 250 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳುತ್ತಿವೆ.
ಮೋದಿ ಗೆಲ್ಲುತ್ತಾರೋ, ಸೋಲುತ್ತಾರೋ ಅದು ಬೇರೆ ಮಾತು. ಆದರೆ 2014ರ ಚುನಾವಣೆಯನ್ನು ಸಂಪೂರ್ಣವಾಗಿ ತಮ್ಮತ್ತ ಕೇಂದ್ರೀಕರಿಸುವುದಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಎನ್ನುವುದು ನಿಜ. ಈಗ ಮತದಾರರ ಎದುರಿಗೆ ಕೇವಲ ಎರಡೇ ಆಯ್ಕೆಗಳನ್ನು ಇಡಲಾಗಿದೆ. ಒಂದೋ ಮೋದಿ ಸರ್ಕಾರ, ಇಲ್ಲವೇ ಅತಂತ್ರ ವ್ಯವಸ್ಥೆ.
ಒಂದು ವೇಳೆ ನಮ್ಮ ಅಕಾಡೆಮಿಕ್ ಪ್ರಭೃತಿಗಳು ಮೊದಲನೆಯ ಆಯ್ಕೆಯನ್ನು ತಾವು ಒಪ್ಪುವುದಿಲ್ಲ ಎಂದು ಎರಡನೆಯ ಆಯ್ಕೆಯತ್ತ ವಾಲುತ್ತಿರುವುದು ಕಂಡುಬರುತ್ತಿದೆಯೆಂದರೆ, ಅದರ ಹಿಂದಿರುವುದು, "ತಮಗೆ ಭಾರತದ ಬಗ್ಗೆ ಇನ್ನೂ ತಿಳಿವಳಿಕೆ ಇದೆ" ಎನ್ನುವುದನ್ನು ಪ್ರಪಂಚಕ್ಕೆ ತೋರಿಸುವ ಅವರ ಹಪಾಹಪಿಯಷ್ಟೆ. ಕೊನೆಯ ಕ್ಷಣದಲ್ಲಿ ತಂತ್ರ ರಚಿಸಿ ಮತದಾನ ಮಾಡಬೇಕು ಎನ್ನುವ ಅವರ ಕರೆಗಳೆಲ್ಲ, ತಮ್ಮ ಒಣಪ್ರತಿಷ್ಠೆಯ ಉಳಿವಿಗಾಗಿ ಮಾಡುತ್ತಿರುವ ಪ್ರಯತ್ನಗಳಷ್ಟೆ!
= ಸ್ವಪನ್ದಾಸ್ ಗುಪ್ತಾ