ಗುರುತಿಸಿಕೊಳ್ಳಬೇಕಾದುದು ಸಾಧನೆಗಳ ಮೂಲಕ, ಜಾತಿ ಬಲದಿಂದಲ್ಲ
ಸಾವಿರಾರು ವರ್ಷಗಳ ಹಿಂದೆ ಅವರವರ ಸಾಧನೆಗೆ ತಕ್ಕುದಾದ ಕೆಲಸವನ್ನು ಹಂಚುವ ದೃಷ್ಟಿಯಿಂದ ಅನಿವಾರ್ಯವಾಗಿ ಜಾತಿ ವ್ಯವಸ್ಥೆ ಹುಟ್ಟಿತು. ಅಜ್ಞಾನದ ವಿರುದ್ಧ ಕೆಲಸ ಮಾಡುವವರನ್ನು ಬ್ರಾಹ್ಮಣರೆಂದೂ, ಅನ್ಯಾಯದ ವಿರುದ್ಧ ಹೋರಾಡುವವರನ್ನು ಕ್ಷತ್ರಿಯರೆಂದೂ, ಅಭಾವದ ವಿರುದ್ಧ ದುಡಿಯುವವರನ್ನು ವೈಶ್ಯರೆಂದೂ, ಆಲಸ್ಯದ ವಿರುದ್ಧ ಶ್ರಮಿಸುವವರನ್ನು ಶೂದ್ರರೆಂದು ಕರೆಯಲಾಯಿತು.
ಹೌದು, ಈ ಜಗತ್ತಿನಲ್ಲಿ ನಾವ್ಯಾರೂ ಉದ್ಭವ ಮೂರ್ತಿಗಳಲ್ಲ. ನಮಗೂ ಒಂದು ದೇಶ ಇದೆ, ಧರ್ಮ ಇದೆ. ಜಾತಿ ಇದೆ. ಆದರೆ ಯಾವ ದೇಶದಲ್ಲಿ, ಯಾವ ತಂದೆ ತಾಯಿಗಳಿಗೆ ಮಕ್ಕಳಾಗಿ ಹುಟ್ಟಬೇಕು, ಯಾವ ಜಾತಿ-ಮತಕ್ಕೆ ಸೇರಿದವರಾಗಿರಬೇಕು-ಎಂಬುದರ ಬಗ್ಗೆ ನಾವ್ಯಾರೂ ಅರ್ಜಿ ಹಾಕಿಕೊಂಡಿಲ್ಲ. ಯಾವುದೋ ಒಂದು ದೇಶದವರಾಗಿ ಹುಟ್ಟುತ್ತೇವೆ ಮತ್ತೆ ಆ ದೇಶವಾಸಿಗಳಾಗಿ ಬಾಳಿ ಬದುಕುತ್ತೇವೆ. ಅಂತೆಯೇ, ಹುಟ್ಟಿನಿಂದಲೇ ನಮ್ಮ ಹೆತ್ತವರು ಸೇರಿದ್ದ ಜಾತಿಮತಗಳು ನಮ್ಮ ಬೆನ್ನಿಗೂ ಅಂಟಿಕೊಂಡೇ ಬರುತ್ತದೆ. ಬದುಕಿದ್ದಾಗ ಮಾತ್ರವಲ್ಲ, ಸತ್ತಾಗ ಕೂಡಾ ಜಾತಿಯ ಭೂತ ಬಿಡೋದಿಲ್ಲ. ಆದರೆ ನಮ್ಮ ಜಾತಿ-ಮತ್ತೆ ನಮ್ಮ ಆಯ್ಕೆ ಅಲ್ಲದ ವಿಚಾರ. ಅಂದ ಮೇಲೆ ಜಾತಿ ಆಧಾರದ ಮೇಲೆ ನಡೆಯುವ ಎಲ್ಲ ಲೆಕ್ಕಾಚಾರಗಳು ಅಸಮಂಜಸ ಹಾಗೂ ಅವೈಜ್ಞಾನಿಕವಲ್ಲವೇ? ನಿಜ. ಸಾವಿರಾರು ವರ್ಷಗಳ ಹಿಂದೆ ಅವರವರ ಸಾಧನೆಗೆ ತಕ್ಕುದಾದ ಕೆಲಸವನ್ನು ಹಂಚುವ ದೃಷ್ಟಿಯಿಂದ ಅನಿವಾರ್ಯವಾಗಿ ಜಾತಿ ವ್ಯವಸ್ಥೆ ಹುಟ್ಟಿತು. ಅಜ್ಞಾನದ ವಿರುದ್ಧ ಕೆಲಸ ಮಾಡುವವರನ್ನು ಬ್ರಾಹ್ಮಣರೆಂದೂ, ಅನ್ಯಾಯದ ವಿರುದ್ಧ ಹೋರಾಡುವವರನ್ನು ಕ್ಷತ್ರಿಯರೆಂದೂ, ಅಭಾವದ ವಿರುದ್ಧ ದುಡಿಯುವವರನ್ನು ವೈಶ್ಯರೆಂದೂ, ಆಲಸ್ಯದ ವಿರುದ್ಧ ಶ್ರಮಿಸುವವರನ್ನು ಶೂದ್ರರೆಂದು ಕರೆಯಲಾಯಿತು. ಅಂದರೆ ಈ ವಿಂಗಡನೆ ವ್ಯಕ್ತಿಗಳ ಗುಣ-ಸ್ವಭಾವ ಮತ್ತು ಶಕ್ತಿ-ಸಾಮರ್ಥ್ಯಗಳಿಗನುಸಾರವಾಗಿಯೇ ಸೃಷ್ಟಿಯಾಯಿತು ವಿನಾ ಅವರ ಹುಟ್ಟಿನಿಂದಲ್ಲ. ಮೇಲಾಗಿ ಈ ವ್ಯವಸ್ಥೆ ಜನರ ಹುಟ್ಟಿಗೂ ಮೀರಿ, ಎಲ್ಲ ವರ್ಗದವರನ್ನೂ ಆವರಿಸಿತು. ಪರಿಣಾಮವಾಗಿ ಮುಂದುವರಿಯುತ್ತಾ ಎಲ್ಲ ವರ್ಗದವರೂ ಎಲ್ಲಾ ಕೆಲಸಗಳನ್ನು ಮಾಡುವಂತಾಯಿತು. ಅಜ್ಞಾನದ ವಿರುದ್ಧ ಕೆಲಸ ಮಾಡುವ ಬ್ರಾಹ್ಮಣ್ಯ ಕೇವಲ ಬ್ರಾಹ್ಮಣರ ಸೊತ್ತಾಗಿ ಉಳಿಯದೆ, ಅನ್ಯ ವರ್ಗದವರಿಗೂ ಲಭ್ಯವಾಯಿತು. ಅಂತೆಯೇ ಶೂದ್ರತ್ವ. ಇತರ ವರ್ಗದವರಲ್ಲೂ ಕಾಣುವಂತಾಯಿತು. ಇದು ಒಂದು ಸುಶಿಕ್ಷಿತ- ಸುಸಂಸ್ಕೃತ ವಿಚಾರಧಾರೆಯೇ ಸರಿ. ಆದರೆ ದುರಂತದ ಹಾಗೂ ದುರದೃಷ್ಟಕರವಾದ ವಿಷಯವೆಂದರೆ, ಈ 21ನೆಯ ಶತಮಾನದಲ್ಲಿ ಜನ್ಮಾಧಾರಿತ ಜಾತಿ ವ್ಯವಸ್ಥೆ ನಮ್ಮನ್ನು ಇನ್ನೂ ಬಿಟ್ಟಿಲ್ಲವೆನ್ನುವುದು. ಬಾಯಿಯಲ್ಲಿ ಮಾತ್ರ 'ನಾನು ಜಾತ್ಯತೀತ' ಒಳಗೊಳಗೆ ಜಾತಿಯ ಲೆಕ್ಕಾಚಾರ. ಕಾರಣ, ಇದರಿಂದ ನನಗೆ ಲಾಭವಿದೆ.
ಈ ಪ್ರಕ್ರಿಯೆಯಲ್ಲಿ ವ್ಯಕ್ತಿಯೋರ್ವನ ಸಾಧನೆಗಳು, ಪ್ರತಿಭೆಗಳು, ಯೋಗ್ಯತೆಗಳು ನಗಣ್ಯವಾಗಿ ಮೂಲೆಗುಂಪಾಗಿ ಬಿಟ್ಟಿವೆ. ವಿಪರ್ಯಾಸವೆಂದರೆ, ಎಲ್ಲಿ ತಮಗೆ ಅವಶ್ಯಕವಾದ ಪ್ರತಿಭೆಯ ಅಗತ್ಯವಿದೆಯೋ, ಅಲ್ಲಿ ಜನರು, ವ್ಯಕ್ತಿಯ ಜಾತಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ ಇದು, ಅವರ ಹಿತಾಸಕ್ತಿಯ ಪ್ರಶ್ನೆ. ಉದಾಹರಣೆಗೆ ತಮಗೆ ಒಂದು ಮೇಜರ್ ಆಪರೇಷನ್ ಮಾಡಿಸಿಕೊಳ್ಳಬೇಕಾದರೆ, ಯಾವ ಜಾತಿಯವರೇ ಆಗಲಿ, ಜನ, ಪ್ರತಿಭಾವಂತ ನುರಿತ ವೈದ್ಯರನ್ನೇ ಹುಡುಕುತ್ತಾರೆ ವಿನಾ ತಮ್ಮ ಜಾತಿಯವರೇ ಬೇಕೆಂಬ ಹಠ ಹಿಡಿಯೋದಿಲ್ಲ ಹಾಗೂ ಜಾತಿ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ. ಕಾರಣ, ಅವರಿಗೆ ಜಾತಿಗಿಂತ ತಮ್ಮ ಜೀವ ಮುಖ್ಯವಲ್ಲವೇ? ಆದುದರಿಂದಲೇ ತುರ್ತು ಪರಿಸ್ಥಿತಿಯಲ್ಲಿ, ಭಟ್ರ ರಕ್ತ ಶೆಟ್ರಿಗೂ ಆಗುತ್ತೆ; ಶೆಟ್ರ ರಕ್ತ ಭಟ್ರಿಗೂ ನಡೆಯುತ್ತೆ! ಅಂತೆಯೇ ನಮ್ಮ ಮಕ್ಕಳಿಗೆ ಟ್ಯೂಷನ್ ಕೊಡಿಸಲು, ಒಳ್ಳೆಯ ಗುರುಗಳು ಬೇಕು; ನಮ್ಮ ಮನೆ ಕಟ್ಟಲು ಒಳ್ಳೆಯ ಇಂಜಿನಿಯರ್ ಬೇಕು; ಕೋರ್ಟಲ್ಲಿ ನಮ್ಮ ಪರ ವಾದಿಸಲು ಒಳ್ಳೆಯ ಲಾಯರು ಬೇಕು. ಈ ಒಳ್ಳೆಯವರೆಲ್ಲಾ ಯಾವ ಜಾತಿಯವರಾದರೂ ಪರವಾಗಿಲ್ಲ; ಸಾಧಕರ ಬಳಿಯೇ ಹೋಗುತ್ತೇವೆ. ಒಟ್ಟಿನಲ್ಲಿ ನಮ್ಮ ಕೆಲಸ ಸುಗಮವಾಗಿ ನಡೆದು ಯಶಸ್ವಿಯಾಗಬೇಕು. ಅದಕ್ಕೆ ಇಂತಹ ಸಂದರ್ಭಗಳಲ್ಲಿ ಜನ ಯಾವುದೇ ಚರ್ಚೆ ಇಲ್ಲದೆ, ಬೇಸರವಿಲ್ಲದೆ, ತಕ್ಷಣ ಜಾತ್ಯತೀತರಾಗಿ ಬಿಡುತ್ತಾರೆ. ಆದರೆ ಜಾತಿ ಲೆಕ್ಕಾಚಾರದಿಂದ ತಮಗೇನಾದರೂ ಲಾಭ-ಅನುಕೂಲವಾಗುವಂತಿದ್ದರೆ, ಸೌಕರ್ಯ-ಸೌಲಭ್ಯಗಳು ಸಿಗುವಂತಿದ್ದರೆ, ಕೂಡಲೇ ನಮ್ಮ ಜಾತಿ ಪ್ರಮಾಣ ಪತ್ರವನ್ನು ತಪ್ಪದೇ ಸಲ್ಲಿಸುತ್ತೇವೆ. ಒಂದು ರೀತಿಯಲ್ಲಿ ನೋಡಿದರೆ ಇದು ಆತ್ಮವಂಚನೆ ಯಾ ಬೂಟಾಟಿಕೆಯಲ್ಲವೇ? ನಿಜವಾದ ಸ್ವಾಭಿಮಾನವಿದ್ದವರು, ತನ್ನ ಸಾಧನೆಗಳ ಮೂಲಕ ತನ್ನನ್ನು ಸಮಾಜಕ್ಕೆ ಪರಿಚಯಿಸಿಕೊಳ್ಳುತ್ತಾರೆ ವಿನಾ ಏನೂ ಕಷ್ಟವಿಲ್ಲದೆ ಹುಟ್ಟಿನಿಂದಲೇ ದೊರಕಿದ ತನ್ನ ಜಾತಿ ಬಲದಿಂದ ಅಲ್ಲ. ಯಾವುದೇ ಒಂದು ಸಮಾಜ/ದೇಶ ಪ್ರಗತಿಯತ್ತ ಸಾಗಬೇಕಾದರೆ, ಪ್ರತಿಭೆಗಳಿಗೆ ಮಣೆ ಹಾಕಬೇಕೇ ಹೊರತು ಜಾತಿ ವ್ಯವಸ್ಥೆಗಲ್ಲ. ಜನರ ಜಾತಿ ಮತಗಳನ್ನು ಮರೆತು, ಅವರವರ ಅರ್ಹತೆ-ಯೋಗ್ಯತೆ ಮತ್ತು ಸಾಧನೆಗಳಿಗನುಸಾರವಾಗಿ, ಸರಿಯಾದ ಜಾಗದಲ್ಲಿ ಸರಿಯಾದ ವ್ಯಕ್ತಿಯನ್ನು Right man in the right Place ಕೆಲಸ ಮಾಡಲು ಅವಕಾಶ ಮಾಡಿಕೊಡುವುದರಿಂದ ಮಾತ್ರ ಪ್ರಗತಿ ಸಾಧ್ಯ. ಅನರ್ಹರು, ಅಯೋಗ್ಯರು ಎಲ್ಲೆಂದರಲ್ಲಿ ಸೇರಿಕೊಂಡರೆ, ತೂರಿಕೊಂಡರೆ ದೇಶದ ಉದ್ಧಾರ ಬರೀ ಕನಸಿನ ಮಾತಾದೀತು.
ಜಾತಿ ಆಧಾರದ ಮೇಲೆ ಮತ ಯಾಚಿಸುವ ಹಾಗೂ ಮತ ಚಲಾಯಿಸುವ ಮತಾಂಧರಿಗೂ ನಮ್ಮಲ್ಲಿ ಕೊರತೆ ಇಲ್ಲ. ಇದು ಸುಸಂಸ್ಕೃತರಿಗೆ ಶೋಭೆ ತರುವ ವಿಚಾರವಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಸಾಧನೆಗಳ ಪಟ್ಟಿಯನ್ನು ಮುಂದಿಡಬೇಕೇ ಹೊರತು ತಮ್ಮ ಜಾತಿ ಗುರುತನ್ನಲ್ಲ. ಅಂತೆಯೇ ಮತದಾರರು, ಅಭ್ಯರ್ಥಿ ಯಾವ ರಾಜಕೀಯ ಪಕ್ಷದವನೇ ಆಗಿರಲಿ, ಯಾವ ಜಾತಿಗೆ ಸೇರಿದವನೇ ಆಗಿರಲಿ, ಅರ್ಹತೆ-ಯೋಗ್ಯತೆ ಇರುವ ಹಾಗೂ ಸಾಧಿಸಿರುವ ಮತ್ತು ಸಾಧಿಸಿ ತೋರಿಸಬಲ್ಲವರನ್ನೇ ಚುನಾಯಿಸಬೇಕು. ಈ ಜಾತಿ ಭಿಕ್ಷೆ, ಸುಶಿಕ್ಷಿತ ಸುಸಂಸ್ಕೃತ ಸಮಾಜಕ್ಕೆ ಒಂದು ಅಪಚಾರವಲ್ಲವೇ? ಅವಮಾನವಲ್ಲವೇ? ಮೇಲಾಗಿ ಯಾವುದೇ ಒಂದು ಜಾತಿಗೆ ಸೇರಿದ ಅಭ್ಯರ್ಥಿ ಆ ಜಾತಿಯವರ ಮತಗಳ ಬಲದಿಂದ ಮಾತ್ರ ಗೆಲ್ಲಲು ಸಾಧ್ಯ. ಎಲ್ಲ ಜಾತಿಗಳಿಗೆ ಸೇರಿದವರ ಸಹಕಾರವೂ ಅನಿವಾರ್ಯ. ಅಭ್ಯರ್ಥಿಯ ಗೆಲುವಿಗೆ ಎಲ್ಲಾ ಜಾತಿಯವರು ಕಾರಣರಾಗುತ್ತಾರೆ. ಅಂದ ಮೇಲೆ ಯಾವುದೇ ಒಂದು ಜಾತಿಗೆ ಸೇರಿದ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದು, ಸಚಿವನಾದ ಮೇಲೆ ಬರೀ ಅವನ ಜಾತಿಯವರ ಹಿತಾಸಕ್ತಿಯನ್ನು ಮಾತ್ರ ನೋಡಿಕೊಂಡಾನು. ನೋಡಿಕೊಳ್ಳಲು ಸಾಧ್ಯವೆಂಬುದೂ ಸತ್ಯಕ್ಕೆ ದೂರವಾದ ಮಾತು. ಕಾರಣ, ಮಂತ್ರಿಯಾದ ಮೇಲೆ ಆತ ಇಡೀ ರಾಜ್ಯಕ್ಕೆ ಮಂತ್ರಿ ಹಾಗೂ ಎಲ್ಲಾ ಸಮುದಾಯದವರಿಗೂ ಮಂತ್ರಿ. ಹಾಗಾಗಿ ಜಾತಿ ವ್ಯಾಮೋಹವನ್ನು ಆಚೆಗಿಟ್ಟು ಅನ್ಯ ಜಾತಿಯವರೂ ಸೇರಿದಂತೆ, ಎಲ್ಲರ ಹಿತ ರಕ್ಷಣೆ ಅವರಿಗೆ ಜವಾಬ್ದಾರಿ ಮಾತ್ರವಲ್ಲ, ಅನಿವಾರ್ಯ.
ಒಟ್ಟಿನಲ್ಲಿ ಸಮಾರೋಪ ಇಚ್ಛೆ. ನಮಗೊಂದು ಜಾತಿ ಇದೆ. ಇರಲಿ ಬಿಡಿ. ಆದರೆ ಅದು ನಮ್ಮ ಮನೆಯ ಒಳಗಿರಲಿ. ಮನೆಯಿಂದ ಆಚೆಗೆ ಬಂದಾಗ ನಾವೆಲ್ಲ ಜಾತ್ಯತೀತರಾಗಲೇಬೇಕಾಗಿದೆ. ಕಾರಣ ನಾವು ದಿನನಿತ್ಯದ ನಮ್ಮ ಬದುಕನ್ನು ನಡೆಸಬೇಕಾದುದು ಎಲ್ಲ ವರ್ಗದ ಜನರೊಂದಿಗೆ. ನಮ್ಮ ಜಾತಿಯವರೊಂದಿಗೆ ಇಲ್ಲವೇ ನಿಮ್ಮ ಜಾತಿಯೊಂದಿಗೆ ಅಲ್ಲ. ಜಾತಿ ಎಂಬ ಕೋಟೆ ಕಟ್ಟಳೆಯಿಂದ ನಾವೆಲ್ಲ ಹೊರಬರದಿದ್ದರೆ, ಸಾಮಾಜಿಕ ಸಾಮರಸ್ಯ, ಸುಧಾರಣೆ ಹಾಗೂ ದೇಶದ ಐಕ್ಯತೆ ಅಸಾಧ್ಯ. ಒಂದಲ್ಲ ಒಂದು ದಿನ ಜಾತೀಯತೆ ಈ ದೇಶದಿಂದ ನಿರ್ನಾಮವಾಗಲೇಬೇಕು. ಈ ನಿಟ್ಟಿನಲ್ಲಿ
ಎ) ನಮ್ಮ ಮಕ್ಕಳ ಹೆಸರಿನ ಮುಂದೆ ನಮ್ಮ ಜಾತಿ ಸೂಚಕ ಪದ ನಾಮಗಳು ಸೇರಿಸೋದನ್ನ ನಿಲ್ಲಿಸೋಣ.
ಬಿ) ಅಂತರ್ ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸೋಣ.
ಸಿ)ಜಾತಿ ಲೆಕ್ಕಾಚಾರಗಳನ್ನು ಬಿಟ್ಟು ಸಾಧನೆಗಳಿಗೆ ಮಾತ್ರ ಮಣೆ ಹಾಕೋಣ.
ಈ ಹಿನ್ನೆಲೆಯಲ್ಲಿ ಏನಾದರೂ ಒಂದಿಷ್ಟು ಒಳ್ಳೆಯದನ್ನು ಸಾಧಿಸೋಣ. ಸಾಧಿಸಿ, ನಮ್ಮ ಪ್ರತಿಭೆ-ಪರಿಶ್ರಮ-ಪ್ರಾಮಾಣಿಕತೆಗಳ ಮೂಲಕ ಜನ ನಮ್ಮನ್ನು ಗುರುತಿಸುವಂತೆ ಮಾಡೋಣ. ಇದರಿಂದ ನಮ್ಮ ಮೇಲಿನ ಗೌರವ ಹಾಗೂ ನಮ್ಮೊಳಗಿನ ಆತ್ಮಾಭಿಮಾನ ಹೆಚ್ಚಾಗುತ್ತೆ. ಇದುವೇ ನಿಜವಾದ ಆತ್ಮಾನಂದ. ಜಾತಿ ಜಾತಿಗಳಲ್ಲಿ ಈ ಜಾಗೃತೀಕರಣ ನಡೆಯಲಿ. ನಾವು ನಿಮ್ಮವರಾಗಿ, ನೀವು ನಮ್ಮವರಾಗಿ, ಎಲ್ಲರೂ ಎಲ್ಲರಿಗಾಗಿ ಜಾತಿ ಮರೆತು, ನೀತಿ ಬೆರೆತು ದುಡಿಯುವಂತಾದರೆ, ಈ ದೇಶ ಸ್ವರ್ಗವಾಗದೇ?
-ಡಾ. ಕೆ.ಪಿ. ಪುತ್ತೂರಾಯ