ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಜಾತ್ಯತೀತ ಜೋಳಿಗೆಯಲ್ಲಿ ಕೈ ಹಾಕಿದ ನಿತೀಶ್‌ಗೆ ಸಿಕ್ಕಿದ್ದೇನು?

'ಬಿಜೆಪಿ ಹೊಸ ದಿಕ್ಕಿನತ್ತ ಸಾಗುತ್ತಿದೆ. ಬಿಜೆಪಿ ಮತ್ತು ಜೆಡಿಯು ಬಿಹಾರದಲ್ಲಿ ಹೊಂದಿರುವ ಮೈತ್ರಿಗೆ ಹೊರಗಿನ..

Srinivasa Murthy VN
Updated On : 18 Apr 2014, 2:02 am

'ಬಿಜೆಪಿ ಹೊಸ ದಿಕ್ಕಿನತ್ತ ಸಾಗುತ್ತಿದೆ. ಬಿಜೆಪಿ ಮತ್ತು ಜೆಡಿಯು ಬಿಹಾರದಲ್ಲಿ ಹೊಂದಿರುವ ಮೈತ್ರಿಗೆ ಹೊರಗಿನ ಶಕ್ತಿಯಿಂದ ಯಾವುದೇ ತೊಂದರೆ ಇರಲಿಲ್ಲ. ಆದರೆ ಹೊರಗಿನ ಶಕ್ತಿಯ ಪ್ರವೇಶವಾದದ್ದೇ ಸಮಸ್ಯೆಗಳು ಆರಂಭವಾದವು'
-2013ರ ಜು.16ರಂದು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡ ಸಂದರ್ಭದಲ್ಲಿ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಹೇಳಿದ್ದ ಮಾತುಗಳಿವು. ಇಲ್ಲಿ ಹೊರಗಿನ ಶಕ್ತಿ ಎಂದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. ಜಾತ್ಯತೀತ ಶಕ್ತಿಗಳ ಹಿತಾಸಕ್ತಿ ಕಾಪಾಡುವ ನೆಪವನ್ನು ಮುಂದಿಟ್ಟುಕೊಂಡು ಹದಿನೈದು ವರ್ಷಗಳ ಹಿಂದೆ ಬಿಜೆಪಿ ಜತೆಗೆ ಮಾಡಿಕೊಂಡಿದ್ದ ಮೈತ್ರಿಯನ್ನು ಮುರಿದುಕೊಂಡದ್ದು ಹಳೆಯ ಕತೆ. ಆದರೆ 'ಜಾತ್ಯತೀತ ಹಿತಾಸಕ್ತಿ'ಯನ್ನು ಮುಂದಿಟ್ಟುಕೊಂಡು ನಿತೀಶ್‌ಕುಮಾರ್ ಬಿಜೆಪಿಯಿಂದ ದೂರವಾದರು. ಆದರೆ ಅದರಿಂದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ಗೆ ಏನಾದರೂ ಲಾಭವಾಯಿತೇ ಎಂಬ ಪ್ರಶ್ನೆ ಏಳದಿರದು.
ವಿವಿಧ ರಾಷ್ಟ್ರೀಯ ಸುದ್ದಿವಾಹಿನಿಗಳು ನಡೆಸಿದ ಸಮೀಕ್ಷೆ ಪ್ರಕಾರ ಬಿಹಾರದಲ್ಲಿ ಜೆಡಿಯು ಪ್ರಾಬಲ್ಯ ಮುರಿಯುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ. ನಿತೀಶ್ ಕುಮಾರ್ ಅವರ ಜೆಡಿಯುಗೆ ಸೆಡ್ಡು ಹೊಡೆದು ನಿಂತಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕೂಡ ಈ ಬಾರಿಯ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡುವ ಸಾಧ್ಯತೆಯಿದೆ.
ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿ ಇಲ್ಲವೆಂದು ಹೇಳುತ್ತಾ ಬಂದಿವೆ. ಆದರೂ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿಕೂಟ ಚುನಾವಣೆಯಲ್ಲಿ 11 ಸ್ಥಾನಗಳನ್ನು ಪಡೆಯಲಿದ್ದರೆ, ಜೆಡಿಯುಗೆ ಕೇವಲ ಐದು ಸ್ಥಾನಗಳು ಸಿಗಲಿವೆ ಎಂದು ಹಲವು ಸುದ್ದಿವಾಹಿನಿಗಳ ಸಮೀಕ್ಷೆಗಳು ಭವಿಷ್ಯ ನುಡಿದಿವೆ. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ 40 ಸ್ಥಾನಗಳ ಪೈಕಿ 32 ಸ್ಥಾನಗಳನ್ನು ಗೆದ್ದುಕೊಂಡದ್ದು ಈಗ ನೆನಪು ಮಾತ್ರ.
ಹಾಗಿದ್ದರೆ ನರೇಂದ್ರ ಮೋದಿಯವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರ ಪರಿಣಾಮವಾಗಿ 'ಜಾತ್ಯತೀತ ಶಕ್ತಿ'ಗಳು ಜೆಡಿಯುನ ಪಕ್ಷಾತೀತ ನಾಯಕ ನಿತೀಶ್‌ಕುಮಾರ್ ಬಳಿ ನಿಂತವೇ ಎಂಬ ಪ್ರಶ್ನೆಗಳು ಒಡಮೂಡಿವೆ.
ನಿತೀಶ್‌ಕುಮಾರ್ ಎಷ್ಟೇ ಹೇಳಿಕೊಳ್ಳಲಿ ಇತ್ತೀಚೆಗೆ ಅವರಿಗೆ ಮುಜುಗರವಾಗುವಂಥ ವಿಚಾರಗಳೇ ನಡೆಯುತ್ತಿವೆ. ಪಕ್ಷದ ಹಿರಿಯ ನಾಯಕ ಶಿವಾನಂದ ತಿವಾರಿ ಜೆಡಿಯು ನಾಯಕರ ಎದುರಲ್ಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿದ್ದರು. ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡದ್ದಕ್ಕೆ ನಿತೀಶ್ ಅವರನ್ನು ತೆಗಳಿದ್ದರು. ಇದಕ್ಕಾಗಿಯೇ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ಇದು ಕೊಂಚ ಹಳೆಯ ವಿಚಾರ. ಅದಕ್ಕಿಂತ ಮುಖ್ಯವಾದ ವಿಚಾರ ಮಂಗಳವಾರ ನಡೆದಿದೆ. ಕಿಶನ್‌ಗಂಜ್ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿರುವ ಅಖ್ತರುಲ್ ಇಮ್ರಾನ್ ಕಾಂಗ್ರೆಸ್‌ಗೆ ಅನುಕೂಲವಾಗುವಂತೆ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಇವೆರಡು ವಿಚಾರಗಳು ದೇಶಾದ್ಯಂತ ಮಾಧ್ಯಮಗಳಲ್ಲಿ ವರದಿಯಾಗಿರುವಂಥದ್ದು.
ಹಿಂದಿನ ಚುನಾವಣೆಗಳು ಅಂದರೆ 2009 ಮತ್ತು 2010ರಲ್ಲಿ ನಿತೀಶ್ ಕುಮಾರ್ ಪ್ರತಿಪಾದಿಸಿಕೊಂಡು ಬಂದಿದ್ದ 'ಅಭಿವೃದ್ಧಿ' ಮಂತ್ರ ಕೆಲಸ ಮಾಡಿತ್ತು. ಆದರೆ 2014ರ ಚುನಾವಣೆಯಲ್ಲಿ ಅದು ಕೈಕೊಟ್ಟಂತಿದೆ. ಈ ಬಗ್ಗೆ ಪತ್ರಕರ್ತರು ಕೇಳಿದಾಗ ಅವರು ಹಾರಿಕೆಯ ಉತ್ತರವೇ ಕೊಟ್ಟದ್ದು ಹೆಚ್ಚು. ಇಲ್ಲದಿದ್ದರೆ ಬಿಜೆಪಿ ಮತ್ತು ಆರ್‌ಜೆಡಿ ಜನರ ಗಮನ ಬೇರೆಡೆಗೆ ಸೆಳೆಯಲು ಇನ್ನಿಲ್ಲದ ತಂತ್ರ ಮಾಡುತ್ತಿವೆ ಎಂದು ಉತ್ತರಿಸುತ್ತಿದ್ದಾರೆ ನಿತೀಶ್‌ಕುಮಾರ್.
ಬಿಹಾರ ಮುಖ್ಯಮಂತ್ರಿಯ ಅತ್ಯಂತ ಆಪ್ತರೊಬ್ಬರು ಹೇಳುವ ಪ್ರಕಾರ ಬಿಜೆಪಿ ಜತೆಗಿನ ಮೈತ್ರಿ ಮುರಿಯದೇ ಇರುತ್ತಿದ್ದರೆ ಪ್ರಸಕ್ತ ಚುನಾವಣೆಯಲ್ಲಿ 40 ಸ್ಥಾನಗಳ ಪೈಕಿ 38 ಸ್ಥಾನಗಳನ್ನೂ ಮೈತ್ರಿಕೂಟ ಗೆಲ್ಲುತ್ತಿತ್ತಂತೆ. ಆದರೆ ಗೆಳೆತನ ಮುರಿದು ಬಿದ್ದಿರುವುದರ ಅನುಕೂಲ ಆರ್‌ಜೆಡಿ ಮತ್ತು ಕಾಂಗ್ರೆಸ್‌ಗೆ ಆಗಲಿದೆ. ಜತೆಗೆ ಬಿಜೆಪಿ ಮತ್ತು ಎಲ್‌ಜೆಪಿ ಮೈತ್ರಿಕೂಟಕ್ಕೂ ಲಭಿಸಲಿದೆ. ನಿತೀಶ್‌ಕುಮಾರ್ 'ಜಾತ್ಯತೀತತೆ'ಯ ಬೆನ್ನು ಬಿದ್ದ ಕಾರಣ ಈ ಬಾರಿಯ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಇಳಿಯುವುದು ಖಚಿತ ಎನ್ನುತ್ತಾರೆ ಬಿಹಾರ ಜನತೆ. ಸದ್ಯ ಜೆಡಿಯು ಪ್ರಬಲವಾಗಿರುವ ಕ್ಷೇತ್ರಗಳಲ್ಲಿನ ಮತದಾರರು ಹೇಳುವುದೇ ಹಾಗೆ. 'ನಮ್ಮ ಮುಖ್ಯಮಂತ್ರಿ ರಾಮನನ್ನು ಬಿಟ್ಟು ರಹೀಮನ ಹಿಂದೆ ಹೊರಟರು. ಇಬ್ಬರೂ ಅವರ ಕೈಬಿಟ್ಟಂತೆ ಕಾಣುತ್ತಿದೆ. ಅಂದರೆ ಮೂರನೇ ಸ್ಥಾನಕ್ಕೆ ಜೆಡಿಯು ತೃಪ್ತಿಪಟ್ಟುಕೊಳ್ಳಬೇಕಾಗಿದೆ' ಎನ್ನುವುದು ಅಭಿಪ್ರಾಯವಾಗಿದೆ.
ಎಂಬಲ್ಲಿಗೆ ಹನ್ನೊಂದು ತಿಂಗಳ ಹಿಂದೆ ಬಿಜೆಪಿ ಜತೆಗಿನ ಮೈತ್ರಿ ಮುರಿಯದೇ ಇರುತ್ತಿದ್ದರೆ ಹಾಲಿ ಗೆದ್ದಿರುವ ಸ್ಥಾನಗಳ ಸಂಖ್ಯೆ ಉಳಿಯುತ್ತಿತ್ತು ಇಲ್ಲವೇ ಹೆಚ್ಚಾಗುತ್ತಿತ್ತು ಎನ್ನುವ ಅಂಬೋಣ ಹಲವರದ್ದು.  ಕಳೆದ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ಕ್ರಮವಾಗಿ ಶೇ.24.04 ಮತ್ತು ಶೇ.13.97 ಮತಗಳನ್ನು, ಆರ್‌ಜೆಡಿ ಶೇ.19.31 ಮತಗಳನ್ನು, ಎಲ್‌ಜೆಪಿ ಶೇ.6.55, ಕಾಂಗ್ರೆಸ್ ಶೇ.10.26 ಮತಗಳನ್ನು ಪಡೆದುಕೊಂಡಿದ್ದವು.
ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಿತೀಶ್ ಬಿಜೆಪಿ ಹೊರತಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಅತಿ ಹಿಂದುಳಿದವರ ವರ್ಗಕ್ಕೆ (ಓಬಿಸಿ) ಮತ್ತು ಮುಸ್ಲಿಮರಿಗಾಗಿ 'ಮಹಾದಲಿತರು' ವಿಶೇಷವಾದ ಕಲ್ಯಾಣ ಯೋಜನೆಗಳನ್ನು ಆರಂಭಿಸಿದ್ದರು. ಅದು ಜೆಡಿಯು ಸರ್ಕಾರಕ್ಕೆ ಮತಗಳನ್ನು ತಂದುಕೊಡಲಿದೆಯೇ ಎನ್ನುವುದು ಮೇ 16ಕ್ಕೆ ಗೊತ್ತಾಗಲಿದೆ.  ಅತಿ ಹಿಂದುಳಿದ ವರ್ಗಕ್ಕೆ 130ಕ್ಕೂ ಹೆಚ್ಚು ಜಾತಿಗಳು ಸೇರಿವೆ. ಇವುಗಳಿಗೆ ಸಮಾನವಾದ ಮತಹಂಚಿಕೆ ಎಂಬುದು ಇಲ್ಲ. ಇದು ಜೆಡಿಯುಗೆ ತಲೆನೋವಾಗಲಿದೆ. ಇದರಿಂದಾಗಿ ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ಪಕ್ಷಕ್ಕೆ ಸಿಗುವ ಮತಗಳ ಸಂಖ್ಯೆಗೆ ಕತ್ತರಿ ಬೀಳಲಿದೆ. ಭೌಗೋಳಿಕವಾಗಿ ಒಂದು ಕಾರಣವಿದ್ದರೆ, ಈ ಸಮುದಾಯಕ್ಕೆ ಪ್ರಬಲ ನಾಯಕನಿಲ್ಲ.
ಬಿಹಾರದಲ್ಲಿನ ಮುಸ್ಲಿಮರ ಅಭಿಪ್ರಾಯ ಹೇಗಿದೆ ಎಂದರೆ ನರೇಂದ್ರ ಮೋದಿಯವರನ್ನು ತಡೆಯುವ ಯಾವುದೇ ಪಕ್ಷಕ್ಕೆ ಅವರದು ಮತ. ಅದು ಆರ್‌ಜೆಡಿ ಆದರೂ ಅಡ್ಡಿಯಿಲ್ಲ, ಜೆಡಿಯೂ ಆದರೆ ತೊಂದರೆ ಇಲ್ಲ. ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿಗೆ ಯಾದವ ಸಮುದಾಯದ ಬೆಂಬಲದ ಜತೆಗೆ ಮುಸ್ಲಿಂ ಸಮುದಾಯದ ಬೆಂಬಲವೂ ಇದೆ. ಹೀಗಾಗಿ ಅವರಿಗೆ ನಮ್ಮ ಮತ ಕೊಡಬಹುದು ಎನ್ನುವುದು ಮುಸ್ಲಿಂ ಸಮುದಾಯದವರ ಅನಿಸಿಕೆ.
ಜೆಡಿಯುನಲ್ಲಿ ಬಿಜೆಪಿ ಮೈತ್ರಿ ಸಾಕು ಎನ್ನುವವರೂ ಇದ್ದಾರೆ. ಬೇಕು ಎನ್ನುವವರೂ ಇದ್ದಾರೆ. ಬಿಜೆಪಿ ಜತೆಗಿನ ಮೈತ್ರಿ ಮುರಿದು ಬೀಳುವ ಬಗ್ಗೆ ಸಂಕೇತಗಳು ಆರಂಭವಾಗುವವರೆಗೆ ನಿತೀಶ್‌ಕುಮಾರ್ ಹೋದಲ್ಲೆಲ್ಲ 'ಅಭಿವೃದ್ಧಿ'ಯ ಮಂತ್ರ ಜಪಿಸುತ್ತಿದ್ದರು. ಆದರೆ ಈಗ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರೇ ಈಗ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದಾರೆ. ಜೆಡಿಯು ನಾಯಕರೆಲ್ಲ ಕೋಮು ಗಲಭೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಜೆಡಿಯು ಬೆಂಬಲಿರು ತಮ್ಮಲ್ಲೇ ಚರ್ಚಿಸುತ್ತಿದ್ದಾರೆ. ಹೀಗಾಗಿ, ಮೈತ್ರಿ ಕಡಿದುಕೊಂಡಿರುವುದು ನಿಜಕ್ಕೂ ತಿರುಗುಬಾಣವಾಗಲಿದೆ ಎನ್ನುವುದು ಅವರ ಅಂಬೋಣ. ಬಿಹಾರದಲ್ಲಿ ನಿತೀಶ್ ಕಾಲಮಾನ ಆರಂಭವಾದಾಗ ಅವರ ಬಗ್ಗೆ ಯುವಕರಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ, ಮೋದಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಅಲ್ಲಿನ ಯುವಕರಲ್ಲಿ ನಿತೀಶ್‌ಕುಮಾರ್ ಬಗ್ಗೆ ಭ್ರಮ ನಿರಸನವಾಗಿ ಮೋದಿಯವರತ್ತ ಯುವ ಜನತೆ ಹೊಸ ಆಶೆಗಳನ್ನು ಹೊಂದಿದೆ. ಇಲ್ಲಿನ ಯುವಜನತೆ ಪ್ರಶ್ನಿಸುವುದೆಂದರೆ 2009ರಲ್ಲಿ ಬಿಜೆಪಿಯಿಂದ ಎಲ್.ಕೆ.ಆಡ್ವಾಣಿ ಪ್ರಧಾನಿ ಅಭ್ಯರ್ಥಿಯಾಗಿದ್ದರು. ಅವರೂ ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದರು. ಆಗ ಇಲ್ಲದಿದ್ದ 'ಜಾತ್ಯತೀತ' ನಿಲುವು ಈಗ ಏಕೆ ನಿತೀಶ್ ಅವರಿಗೆ ಬಂತು ಎನ್ನುವುದು.
2009ರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ಗೆ ಲಾಲು ಕೈಗೊಂಡಿದ್ದ ಅಕ್ರಮಗಳು ಜೆಡಿಯುಗೆ ಆಯುಧವಾಗಿದ್ದವು. ಇದಾದ ಬಳಿಕ ಅವರಿಗೆ ಬೇರೆ ಯಾವುದೇ ವಿಚಾರಗಳು ಕಂಡುಬರಲಿಲ್ಲ ಎನ್ನುವುದು ಗಮನಾರ್ಹ. ಈಗ ನಿತೀಶ್ ಅವರಿಗೆ ಕೂಡ ಆಡಳಿತ ವಿರೋಧಿ ಅಲೆಯ ಅನುಭವ ನಿಧಾನಕ್ಕೆ ಗೊತ್ತಾಗುತ್ತಿದೆ. ಈ ಅಂಶ ಮೊದಲೇ ಇದ್ದಿದ್ದರೂ ಅದರ ನೇರ ಬಿಸಿ ತಟ್ಟಿದ್ದು ಹನ್ನೊಂದು ತಿಂಗಳ ಹಿಂದೆ ಬಿಜೆಪಿ ಜತೆಗಿನ ಸಖ್ಯ ಮುರಿದು ಬಿದ್ದ ಮೇಲೆ. ಜೆಡಿಯು ನಾಯಕರೊಬ್ಬರೇ ಒಪ್ಪಿಕೊಂಡಂತೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೊಳಿಸಲು ನಿತೀಶ್‌ಗೆ ಯಾವುದೇ ರೀತಿಯಿಂದಲೂ ಸಾಧ್ಯವಿಲ್ಲ ಎನ್ನುವುದೂ ಅವರಿಗೆ ಗೊತ್ತಿದೆ. ಹೀಗಾಗಿ ನರೇಂದ್ರ ಮೋದಿಯವರನ್ನು ಎದುರಿಸಲು ಅವರಲ್ಲಿ ಯಾವುದೇ ರೀತಿಯ ಯೋಚನೆ ಇಲ್ಲದಾಗಿದೆ.

-ಸದಾಶಿವ ಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement