ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬಲಿಷ್ಠ ಭಾರತದ ಮುನ್ಸೂಚನೆ ಪಡೆದು ಹಲ್ಲು ಗಿಂಜುತ್ತಿದೆ ಅಮೆರಿಕ!

Srinivasa Murthy VN
Updated On : 18 Apr 2014, 9:27 am

ಕೆಲವು ದಿನಗಳ ಹಿಂದೆ ಹೈದ್ರಾಬಾದ್, ಗೋರಖ್‌ಪುರ್, ಪ್ರಯಾಗ, ವಾರಾಣಸಿ ಮತ್ತು ಪಠಾನ್‌ಕೋಟದಲ್ಲಿ ಚುನಾವಣಾ ಪ್ರಚಾರ ಕೈಗೊಂಡ ನಂತರ ಅಚಾನಕ್ಕಾಗಿ ಎರಡು ದಿನದ ಸಭೆಗಾಗಿ ಅಮೆರಿಕದ ಟೈಂಪಾ, ಫ್ಲೋರಿಡಾ ಮತ್ತು ವಾಶಿಂಗ್‌ಟನ್‌ಗೆ ಹೋಗಬೇಕಾಗಿ ಬಂತು. ಅಲ್ಲಿ ಎರಡು ದಿನಗಳ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. ಅದೇ ವೇಳೆಯಲ್ಲೇ ಅಲ್ಲಿನ ಸ್ವಾಮಿ ನಾರಾಯಣ ಮಂದಿರಕ್ಕೆ ಹೋಗಿ ದರ್ಶನ ಪಡೆಯುವ ಭಾಗ್ಯವೂ ಸಿಕ್ಕಿತು. ವಾಶಿಂಗ್‌ಟನ್‌ನಲ್ಲಿ ಅಮೆರಿಕ-ಭಾರತ ಬಿಸ್ನೆಸ್ ಕೌನ್ಸಿಲ್‌ನ ಶೃಂಗಸಭೆಯಿತ್ತು. ಅದರಲ್ಲಿ ನಾನು ಭಾರತದ ಅರ್ಥವ್ಯವಸ್ಥೆ ಮತ್ತು ಅಮೆರಿಕದೊಂದಿಗಿನ ಅದರ ಮುಂಬರುವ ನೀತಿಗಳು ಹೇಗಿರಬಹುದು ಎನ್ನುವುದರ ಬಗ್ಗೆ ಮಾತನಾಡುವವನಿದ್ದೆ. ಈ ಕಾರ್ಯಕ್ರಮದಲ್ಲಿ ಅಜಮಾಸು 1500 ಅನಿವಾಸಿ ಭಾರತೀಯರು, ಅಮೆರಿಕದ 100 ಪ್ರಸಿದ್ಧ ಉದ್ಯೋಗಪತಿಗಳು ಮತ್ತು ಹಲವು ಥಿಂಕ್‌ಟ್ಯಾಂಕ್‌ನ ಸದಸ್ಯರೊಂದಿಗೆ ಒಡನಾಡುವ ಅವಕಾಶ ದೊರಕಿತು. ಆ ಕಾರ್ಯಕ್ರಮ ವರ್ತಮಾನ ಭೂದೃಶ್ಯದಲ್ಲಿ ಭವಿಷ್ಯದ ಬಗ್ಗೆ ಮಹತ್ವಪೂರ್ಣ ಮಾಹಿತಿ ನೀಡುವಲ್ಲಿ ಯಶಸ್ವಿಯಾಯಿತು.
ಅಮೆರಿಕದಲ್ಲಿಂದು ಸಹಜವಾಗಿ, ಭಾರತದ ಬಗ್ಗೆ ಹೊಸ ಆತಂಕ ಮತ್ತು ಕುತೂಹಲದ ಭಾವವಿದೆ. ಅಲ್ಲಿನ ಭಾರತೀಯ ಮೂಲದ ಅಮೆರಿಕದ ಜನತೆ ಮೋದಿ ಅಲೆಯ ಬಗ್ಗೆ ತಿಳಿದು ಆಶ್ಚರ್ಯ ಮತ್ತು ಆನಂದಪಡುತ್ತಿದ್ದಾರೆ. 10-15 ಪ್ರತಿಶತ ಕಟ್ಟರ್ ಜಿಹಾದಿ ಮನಸ್ಥಿತಿಯವರನ್ನು ಬಿಟ್ಟರೆ, ಬಹುತೇಕ ಅನಿವಾಸಿ ಭಾರತೀಯರು ಮೋದಿಯವರನ್ನು ಭವಿಷ್ಯದ ಭವ್ಯ ಭಾರತದ ಪ್ರತೀಕ ಎಂದೇ ಭಾವಿಸುತ್ತಾರೆ. ಇವರೆಲ್ಲ 2 ವಾರದಿಂದ-1 ತಿಂಗಳ ವರೆಗೆ ರಜೆ ತೆಗೆದುಕೊಂಡು, ದೊಡ್ಡ ಸಂಖ್ಯೆಯಲ್ಲಿ ತಮ್ಮ ತಮ್ಮ ಹಳ್ಳಿ-ನಗರಗಳಿಗೆ ತೆರಳಿ, ಅಲ್ಲಿ ನರೇಂದ್ರ ಮೋದಿಯವರ ಪರವಾಗಿ ಕೆಲಸ ಮಾಡಿಬಂದಿದ್ದಾರೆ. ಯಾರಿಗೆ ಭಾರತಕ್ಕೆ ಬರಲಾಗಲಿಲ್ಲವೋ ಅವರೆಲ್ಲ ರಾತ್ರಿಯಿಡೀ ನಿದ್ದೆಗೆಟ್ಟು, ಭಾರತದಲ್ಲಿರುವ ತಮ್ಮವರಿಗೆಲ್ಲ ಫೋನ್ ಮಾಡಿ, ಮೋದಿಯವರ ಗೆಲುವು ಭಾರತಕ್ಕೇಕೆ ಅವಶ್ಯಕ ಎನ್ನುವುದನ್ನು ಮನದಟ್ಟುಮಾಡಿಕೊಟ್ಟಿದ್ದಾರೆ.   
ಭಾರತವೆಂದರೆ ಅತ್ಯಂತ ಹಿಂದುಳಿದ, ಬಡ ರಾಷ್ಟ್ರ ಎಂಬ ವಿದೇಶಿಯರ ದೃಷ್ಟಿಕೋನವನ್ನು ಗಮನಿಸಿ ತಾವೆಲ್ಲ ಚಿಂತಿತರಾಗಿದ್ದೆವು ಎಂದವರು ಹೇಳುತ್ತಾರೆ. ಅವರಿಗೆ ಬಿಜೆಪಿಯನ್ನು ಬೆಂಬಲಿಸುವ ಮನಸ್ಸಿದೆಯೋ ಇಲ್ಲವೋ ತಿಳಿಯದು, ಆದರೆ ನರೇಂದ್ರ ಮೋದಿಯವರನ್ನು ನೋಡಿದಾಗ ಮಾತ್ರ, ಈ ವ್ಯಕ್ತಿ ಭಾರತದ ಅರ್ಥವ್ಯವಸ್ಥೆಯನ್ನು ಸುಧಾರಿಸಬಲ್ಲ, ಪ್ರಪಂಚದ ದೃಷ್ಟಿಯಲ್ಲಿ ಭಾರತವನ್ನು ಶಕ್ತಿಶಾಲಿ ಮತ್ತು ಸಮೃದ್ಧ ದೇಶವನ್ನಾಗಿ ಮಾಡಬಲ್ಲ ಶಕ್ತಿ ಹೊಂದಿದ್ದಾನೆ ಎನ್ನುವ ನಂಬಿಕೆ ಅವರಿಗಿದೆ.  
ಭಾರತೀಯ ಮೂಲದ ನಾಗರಿಕರು ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ, ಯಾವುದೇ ದೇಶದ ಪಾಸ್‌ಪೋರ್ಟ್‌ಹೊಂದಿರಲಿ, ಅವರ ಹೃದಯ ಮಾತ್ರ ಭಾರತಕ್ಕಾಗಿಯೇ ಮಿಡಿಯುತ್ತಿರುತ್ತದೆ. ಭಾರತದ ಏಳಿಗೆ ಮತ್ತು ಕುಸಿತ ಕ್ರಮವಾಗಿ ಅವರ ತಲೆಯನ್ನು ಮೇಲಕ್ಕೆ ಮತ್ತು ಕೆಳಕ್ಕೆ ಇಳಿಸುತ್ತದೆ. ಯಾವಾಗ ಅಟಲ್ ಬಿಹಾರಿ ವಾಜಪೇಯಿಯವರು ಪೋಕ್ರಾನ್-2ರ ಪರೀಕ್ಷೆ ನಡೆಸಿದರೋ, ಕಾರ್ಗಿಲ್‌ನಲ್ಲಿ ಗೆಲುವು ತಂದು ಕೊಟ್ಟರೋ, ರಾಜಮಾರ್ಗ ಮತ್ತು ಸಂಚಾರ ವ್ಯವಸ್ಥೆಯನ್ನು ಸುಧಾರಿಸಿದರೋ, ಆಗೆಲ್ಲ ಪ್ರಪಂಚದ ನಕಾಶೆಯಲ್ಲಿ ಭಾರತದ ಧ್ವಜವೂ ಎತ್ತರಕ್ಕೆ ಹಾರಿತು, ಅದರ ಅನುಪಾತದಲ್ಲೇ ಅನ್ಯ ದೇಶದಲ್ಲಿರುವ ಅನಿವಾಸಿ ಭಾರತೀಯರ ಸ್ವಾಭಿಮಾನವೂ ಎತ್ತರಕ್ಕೇರಿತ್ತು. ಪ್ರಪಂಚದ ವಿವಿಧ ಪತ್ರಿಕೆಗಳು, ಸುದ್ದಿವಾಹಿನಿಗಳು ಭಾರತವನ್ನು ಅತ್ಯಂತ ಭ್ರಷ್ಟ ಮತ್ತು ಬಡ ರಾಷ್ಟ್ರ ಎಂದು ಕರೆದಾಗಲೆಲ್ಲ, ಅಲ್ಲಿನ ಭಾರತೀಯರ ದೃಷ್ಟಿ ಹತಾಶೆಯಿಂದ ನೆಲನೋಡುತ್ತದೆ. ಆ ಹತಾಶೆಯಲ್ಲಿ ಅವರು ಮುಷ್ಠಿ ಬಿಗಿ ಹಿಡಿದು ಸಿಟ್ಟಿನಿಂದ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ-"ಈ ಮಹಾನ್ ದೇಶದ ನೇತೃತ್ವವೇಕೆ ವೈಫಲ್ಯ ಅನುಭವಿಸುತ್ತಿದೆ?" ಎಂದು.
ಇದೇ ಕಾರಣಕ್ಕಾಗಿಯೇ ಈ ಬಾರಿಯ ಲೋಕಸಭಾ ಚುನಾವಣೆಗಳು ಪ್ರಪಂಚದ ಮೂಲೆಮೂಲೆಯಲ್ಲಿ ಹರಡಿರುವ ಭಾರತೀಯರನ್ನು ಆಕರ್ಷಿಸುತ್ತಿರುವುದು.  ಕಳೆದ ಹತ್ತು ವರ್ಷಗಳಿಂದ ಭಾರತದ ಕಟ್ಟರ್ ಜಿಹಾದಿಗಳು, ವಾಮಪಂಥಿಗಳ ಮೂಲಕ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಮೋದಿಯ ಹೆಸರಿಗೆ ಎಷ್ಟು ವಿಷಲೇಪನ ಮಾಡಲಾಯಿತೆಂದರೆ, ಅದರಿಂದಾಗಿಯೇ ಭಾರತದ ಹೆಸರು ಕೆಡುವಂತಾಯಿತು. ಮನೆಯಲ್ಲಿನ ಜಗಳವನ್ನು ಇವರು ವಿದೇಶಿಯರ ಬಳಿ ತೆಗೆದುಕೊಂಡು ಹೋಗುತ್ತಾರೆ. ಶತಮಾನಗಳ ಹಿಂದೆ ವಿದೇಶಿ ದಾಳಿಕೋರರಿಗೆ ಭಾರತದ ಸ್ವಾರ್ಥಿ ಸಹಾಯಕರರು ಸಿಕ್ಕಂತೆ,  ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಿಗೆ ಈ ಸಹಾಯಕರು ದೊರಕಿದ್ದರು. ನಮ್ಮಲ್ಲಂತೂ ಅಮೆರಿಕ ಮತ್ತು ಯುರೋಪ್‌ಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಡಾಲರ್‌ಗಳನ್ನು ದಾನವಾಗಿ ಪಡೆದ ಸಂಘಟನೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ರಾಜ್ಯಸಭೆಯ ಒಬ್ಬ ಮುಸ್ಲಿಂ ಸಂಸದರಂತೂ, ಮೋದಿಯವರಿಗೆ ವೀಸಾ ಕೊಡಬಾರದೆಂದು ಕೋರಿ ಪತ್ರವೊಂದನ್ನು ಬರೆದು, ಅದಕ್ಕೆ ಕೆಲವು ತಥಾಕಥಿಕ ಸಂಸದರ ಹಸ್ತಾಕ್ಷರ ಮಾಡಿಸಿ, ಅಮೆರಿಕಾ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದರು. ನಾವು ನಮ್ಮ ದೇಶದ ವ್ಯಕ್ತಿಯ ವಿರುದ್ಧದ ಸಿಟ್ಟನ್ನು ಪರದೇಶಗಳಿಗೆ ಹೊತ್ತೊಯ್ಯುವುದು ಅದೆಂಥಾ ದೇಶಭಕ್ತಿಯೋ ತಿಳಿಯದು. ಒಟ್ಟಿನಲ್ಲಿ ಇವೆಲ್ಲಾ ಕಾರಣಗಳಿಂದಾಗಿ, ಭಾರತೀಯರ ಬಗ್ಗೆ ವಿದೇಶಿಯರಲ್ಲಿ ಕೆಟ್ಟ ಭಾವನೆ ಮನೆಮಾಡಿಬಿಟ್ಟಿತು.
ಅಮೆರಿಕ ಅಂತೂ ನರೇಂದ್ರ ಮೋದಿಯವರಿಗೆ ತಾನು ವೀಸಾ ಕೊಡದೇ ಇರಲು ನಿರ್ಧರಿಸಿದ ವಿಷಯವನ್ನು ದೊಡ್ಡ ಸುದ್ದಿ ಮಾಡಿ ತನ್ನ ಬೆನ್ನು ತಾನೇ ಚಪ್ಪರಿಸಿಕೊಂಡು ಕುಣಿದಾಡಿತು. ಆದರೆ ಸತ್ಯವೇನೆಂದರೆ, ಮೋದಿಯವರು ವೀಸಾ ಕೊಡಬೇಕೆಂದು ಅಮೆರಿಕಕ್ಕೆ ಎಂದೂ ನಿವೇದನೆ ಮಾಡಿರಲೇ ಇಲ್ಲ. ಯಾವಾಗ ಇಡೀ ಪ್ರಪಂಚಕ್ಕೆ ಮೋದಿ ವಿಕಾಸ ಪುರುಷ, ಮುಂದಿನ ಸರ್ಕಾರ ಅವರದ್ದೇ ಬರಲಿದೆ ಎನ್ನುವುದು ಖಾತ್ರಿಯಾಯಿತೋ, ಆಗ ಅಮೆರಿಕ ತನ್ನ ರಾಜತಾಂತ್ರಿಕ ಅಧಿಕಾರಿ ನ್ಯಾನ್ಸಿ ಪೊವೆಲ್‌ರನ್ನು ಮೋದಿಯ ಬಳಿ ಕಳುಹಿಸಿತು. ಬಹುಶಃ ಅಮೆರಿಕಕ್ಕೆ ತನ್ನ ತಪ್ಪಿನ ಅರಿವಾಗಿದೆ ಎಂದನಿಸುತ್ತದೆ, ಆದರೂ ಹಠಾತ್ ಆಗಿ ಅದು ತನ್ನ ಬಿಗಿ ನಿಲುವನ್ನು ಸಡಿಲಿಸಿಕೊಂಡದ್ದಕ್ಕೆ ಕಾರಣವೇನು ಎನ್ನುವುದು ಮಾತ್ರ ತಿಳಿಯದು. ಈ ಘಟನೆಯ ನಂತರ ನ್ಯಾನ್ಸಿ ಪೋವೆಲ್ ರಾಜಿನಾಮೆ ಸಲ್ಲಿಸಿ ಮನೆಗೆ ಹೆಜ್ಜೆ ಹಾಕಿದರು.   ಮೋದಿಗೆ ವೀಸಾ ಕೊಡುವುದಿಲ್ಲ ಎಂದು ಕುಣಿದಾಡಿದ್ದ ದೇಶವೇ ಈಗ ಅವರಿಗೆ ವೀಸಾ ಕೊಡಲು ಕ್ಯೂನಲ್ಲಿ ನಿಂತಿದೆ. ಅಮೆರಿಕದ ಅಹಂಕಾರ ಮತ್ತು ಭಾರತದ ನಾಯಕನೊಬ್ಬನನ್ನು ಕೀಳಾಗಿ ಚಿತ್ರಿಸುವ ಕೆಲವು ಸಹ ಭಾರತೀಯರ ಪ್ರಯತ್ನ ಬೋರಲಾಗಿ ಬಿದ್ದಿದೆ. ಈಗ ಇದೇ ಅಮೆರಿಕ ಮುಂಬರುವ ಸರ್ಕಾರದ ಬಗ್ಗೆ ತಮ್ಮ ನೀತಿಗಳು ಹೇಗಿರಬೇಕು,ಅದರ ಜೊತೆಗೆ ಸರಳ, ಸಹಜ ಮತ್ತು ಸಫಲ ಸಂಬಂಧವನ್ನು ಹೇಗೆ ಬೆಳೆಸಬೇಕು ಎನ್ನುವ ಬಗ್ಗೆ ಯೋಚಿಸತೊಡಗಿದೆ.
ಯಾವ ರೀತಿ ಅದು ಭಾರತದ ಪ್ರತಿ- ವಿದೇಶಾಂಗ ನೀತಿಗಳನ್ನು ರಚಿಸುತ್ತದೆ, ರಚಿಸದು ಎನ್ನುವುದು ಆ ದೇಶಕ್ಕೆ ಬಿಟ್ಟ ವಿಷಯ. ಆದರೆ ಅಲ್ಲಿರುವ ಭಾರತೀಯರಂತೂ ಮೋದಿಯವರನ್ನು ಭಾರತದ ಭಾಗ್ಯಪುರುಷನೆಂದೇ ಭಾವಿಸುತ್ತಿದ್ದಾರೆ. ಅಮೆರಿಕ-ಭಾರತ ಬಿಜನೆಸ್ ಕೌನ್ಸಿಲ್, ಏಶಿಯಾ ಸೊಸೈಟಿ ಮತ್ತು ಸಿಎಸ್‌ಐಎಸ್‌ನಂಥ ಥಿಂಕ್ ಟ್ಯಾಂಕ್‌ಗಳ ವರಿಷ್ಠ ಸದಸ್ಯರು ಈಗ ತಮ್ಮ ದೃಷ್ಟಿಕೋನವನ್ನು ಪರೀಕ್ಷಿಸಿಕೊಳ್ಳತೊಡಗಿದ್ದಾರೆ! ಭಾರತದ ಜೆಎನ್‌ಯು ಸಂತತಿಗಳು ಮತ್ತು ಪೂರ್ವಾಗ್ರಹ ಪೀಡಿತ ಕ್ರಿಶ್ಚಿಯನ್ ಮತ್ತು ಅಲ್ಪಸಂಖ್ಯಾತ ಸಂಘಟನೆಗಳು ಕೇವಲ ಸುಳ್ಳು ಮತ್ತು ತರ್ಕಹೀನ ಆರೋಪಗಳ ಆಧಾರದ ಮೇಲೆ ಮೋದಿಯವರ ಮೇಲೆ ವಿಷಮಯ ಆಕ್ರಮಣವನ್ನು ನಡೆಸಿ, ಭಾರತಕ್ಕೂ ಹಾನಿ ಮಾಡಿದವು. ದೆಹಲಿಯಲ್ಲಿ ಈಗ ಬಲಿಷ್ಠ, ಪಾರದರ್ಶಕ ಮತ್ತು ನಿಷ್ಠಾವಂತವಷ್ಟೇ ಅಲ್ಲದೇ, ಅಮೆರಿಕ ಮತ್ತು ಯುರೋಪ್ ಒಳ ಗೊಂಡು ಒಟ್ಟಾರೆ ವಿಶ್ವಶಾಂತಿಗೆ ತುಡಿಯುವ, ದುಡಿಯುವ ಸರ್ಕಾರ ಬರಲಿದೆ ಎನ್ನುವುದು ಆ ದೇಶಗಳಿಗೂ ಈಗ ಅರ್ಥವಾಗಿದೆ. ಅಮೆರಿಕದ ಉದ್ಯೋಗ ವರಿಷ್ಠರೆಲ್ಲ ಮೋದಿ ನೇತೃತ್ವದ ಮೇಲೆ ನಂಬಿಕೆಯಿಡತೊಡಗಿದ್ದಾರೆ. ಮೋದಿಯವರ ಅರ್ಥನೀತಿಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಇರುವ ಎಲ್ಲಾ ಸಾಧ್ಯತೆಗಳನ್ನೂ ಹುಡುಕುತ್ತಿದ್ದಾರೆ. ಯಾವ ದೇಶ ಮೋದಿಯವರಿಗೆ ವೀಸಾ ಕೊಡಲು ನಿರಾಕರಿಸಿತ್ತೋ, ಇಂದು ಅದೇ ಮುಂದೆ ಬಂದು ಹಲ್ಲು ಗಿಂಜುತ್ತಿರುವುದು ಬಲಿಷ್ಠವಾಗಲಿರುವ ಭಾರತದ ಝಲಕನ್ನು ಮುಂಚಿತವಾಗಿಯೇ ತೋರಿಸುತ್ತಿದೆ!

-ತರುಣ್ ವಿಜಯ್
tarunvijay2@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement