ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಮಾಜದಲ್ಲಿ ಬುದ್ಧಿಜೀವಿಯೊಬ್ಬನ ಪ್ರಾಮುಖ್ಯ ಮತ್ತು ಪಾತ್ರವೇನು?

Srinivasa Murthy VN
Updated On : 18 Apr 2014, 9:26 am

ಬುದ್ಧಿಜೀವಿ ಅಂದರೆ ಯಾರು? ನಮ್ಮ ನಿರ್ದಿಷ್ಟ ಉದ್ದೇಶಗಳಿಗಾಗಿ ನಾವು, "ತೀಕ್ಷ್ಣ- ವಿಶಾಲ ಬುದ್ಧಿಮತ್ತೆಯುಳ್ಳ ಮತ್ತು ಅದನ್ನು ಜನತೆಯ ಹಿತಾಸಕ್ತಿಗಾಗಿ ಬಳಸುವ ವ್ಯಕ್ತಿಯೇ ಬುದ್ಧಿಜೀವಿ" ಎಂದು ಉಲ್ಲೇಖಿಸಬಲ್ಲೆವೇನೋ? ಆದರೆ ವಿನಾಶಕಾರಿ ಬುದ್ಧಿಜೀವಿಗಳೂ ಇದ್ದಾರೆ. ಸದ್ಯಕ್ಕೆ ನಮ್ಮ ಉಲ್ಲೇಖದಿಂದ ಅಂಥವರನ್ನು ಹೊರಗಿಡೋಣ.
-ಹಾಗಿದ್ದರೆ ಬುದ್ಧಿಜೀವಿಯ ಪ್ರಮುಖ ಗುಣಗಳೇನು?
ಆತ ಅಥವಾ ಆಕೆಯ ಅಧ್ಯಯನ ಕ್ಷೇತ್ರ ವಿಶಾಲವಾಗಿರಬೇಕು. ಕೇವಲ ಯಾವುದಾದರೊಂದು ವಸ್ತು ಅಥವಾ ವಿಷಯಕ್ಕಷ್ಟೇ ಆತನ ಪರಿಣತಿ ಸೀಮಿತವಾಗಿರಬಾರದು. ಬದಲಾಗಿ ಆತನ ಬರಹ/ ಮಾತುಗಳಲ್ಲಿ ಸರಸ್ವತಿಯ ವಾಸವಿರಬೇಕು. ಸ್ವತಂತ್ರವಾಗಿ ಯೋಚಿಸುವ ಶಕ್ತಿ, ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳಲ್ಲಿ ತನ್ನತನವನ್ನು ತೋರಿಸುವ ವ್ಯಕ್ತಿತ್ವ ಆತನದ್ದಾಗಿರಬೇಕು. ಉತ್ತಮ ಸಂವಹನಕಾರನಾಗಿರಬೇಕು, ಹಾಗಂತ ದೊಡ್ಡ ದೊಡ್ಡ ಪದಪುಂಜಗಳನ್ನು ಉದುರಿಸುವ, ಆಡಂಬರದ ಶಬ್ದಗಳನ್ನು ಪೋಣಿಸಿ ಅಬ್ಬರಿಸುವ ಅಥವಾ ಅರ್ಥವಾಗದ ಬೆರಗುಹುಟ್ಟಿಸುವ ಭಾಷೆಯನ್ನೇ ಬಳಸುವ ವ್ಯಕ್ತಿಯಾಗಿರಬಾರದು. ಭ್ರಷ್ಟ ಸಂಪಾದಕೀಯ ಬರಹಗಾರನೊಬ್ಬ ನಮ್ಮ ವ್ಯಾಖ್ಯಾನದ ಪರಿಧಿಯೊಳಗೆ ಬರುತ್ತಾನೆ ಎಂದು ನನಗನ್ನಿಸುವುದಿಲ್ಲ. ಬುದ್ಧಿಜೀವಿಯದ್ದು ಬಗ್ಗಿಸಲಾಗದ ಪೆಡಸು ಗುಣವಾಗಿರಬಾರದು, ಆತ ಪೂರ್ವಾಗ್ರಹಪೀಡಿತನಾಗಿರಬಾರದು. ಯಾವುದೋ ಒಂದು ಶೈಕ್ಷಣಿಕ ಸಂಸ್ಥೆಯ ಬೋಧನಾಂಗದ ಭಾಗವಾಗಿದ್ದರೆ ಅಥವಾ ಅಕಾಡೆಮಿಕ್ ಪರಿಣತನಾಗಿರುವ ಮಾತ್ರಕ್ಕೆ "ಬುದ್ಧಿಜೀವಿ" ಎಂಬ ಅಭಿದಾನಕ್ಕೆ ಆತ ಅರ್ಹನಾಗಲಾರ. ಅದರಂತೆಯೇ ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಕೆಲವು ಮಾಸ್ಟರ್ ಡಿಗ್ರಿಗಳು ಇಲ್ಲವೇ ಪಿಎಚ್‌ಡಿ ಪಡೆದಾಕ್ಷಣವೂ ಒಬ್ಬ ವ್ಯಕ್ತಿಯನ್ನು ಬುದ್ಧಿಜೀವಿ ಎನ್ನಲಾಗದು. ತೀಕ್ಷ್ಣ ಮತಿಯ, ಮುಕ್ತ ಮತ್ತು ಪ್ರಾಂಜಲ ಮನಸ್ಸಿನ, ಹೊಸ ಸನ್ನಿವೇಶಗಳು ಮತ್ತು ಸತ್ಯವನ್ನು ಅರ್ಥಮಾಡಿಕೊಳ್ಳುವ, ಪ್ರಾಯೋಗಿಕ ಅನುಭವ ಮತ್ತು ನಿರ್ಮಲ ಅಭಿವ್ಯಕ್ತಿಯ, ಸಾಮಾಜ ವಿಜ್ಞಾನದಲ್ಲಿ ವಿಶಾಲ ಜ್ಞಾನ, ಅದರಲ್ಲೂ ಮುಖ್ಯವಾಗಿ ರಾಷ್ಟ್ರಗಳ, ಸಮಾಜಗಳ ವಿವಿಧ ಅಂಶಗಳ ಬಗ್ಗೆ ತಿಳಿವಳಿಕೆ ಮಾತ್ರ ಬುದ್ಧಿಜೀವಿಯ ಬೌದ್ಧಿಕ ಪ್ರಸಾರಕ್ಕೆ ಹೆಚ್ಚಿನ ಫಲ ಒದಗಿಸುತ್ತದೆ. ಬುದ್ಧಿಜೀವಿಯೆಂದು ಒಬ್ಬ ವ್ಯಕ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದರೆ, ಯಾರನ್ನು ಉದ್ದೇಶಿಸಿ ಆತ ಬರೆಯುತ್ತಾನೋ/ ಮಾತನಾಡುತ್ತಾನೋ ಆ ಜನರ ರೀತಿ ರಿವಾಜು ಮತ್ತು ಸಾಂಸ್ಕೃತಿಕ ಗುರುತಿನ ಬಗ್ಗೆ ಆತನಿಗೆ ಅರಿವಿರಬೇಕು.
= ದೇಶದ ಸದ್ಯದ ಸನ್ನಿವೇಶದಲ್ಲಿ ಯಾರನ್ನು ಬುದ್ಧಿಜೀವಿಯೆಂದು ಪರಿಗಣಿಸಬೇಕು?
ಅ) ನಮ್ಮ ದೇಶವಾಸಿಗಳದ್ದು ಒಂದು ಪರಿಕಲ್ಪನೆಯನ್ನು ದುರುಪಯೋಗವಾಡಿಕೊಳ್ಳುವುದರಲ್ಲಿ, ಅಪಾರ್ಥ ಕಲ್ಪಿಸುವುದರಲ್ಲಿ ಎತ್ತಿದ ಕೈ. "ಸೆಕ್ಯುಲರಿಸಂ" ಎನ್ನುವ ಪದಕ್ಕೆ ನಮ್ಮಲ್ಲಿ ನಿರ್ದಿಷ್ಟವಾಗಿ 'ಹಿಂದುಯೇತರ' ಅಥವಾ 'ಹಿಂದು ವಿರೋಧಿ' ಎಂಬ ಅರ್ಥಕೊಡಲಾಗುತ್ತದೆ. ಅದರಂತೆಯೇ ಬುದ್ಧಿಜೀವಿ ಪದಕ್ಕೆ ಸಮಾನಾರ್ಥಕವಾಗಿ ವಿದ್ಯಾವಂತ ಕಮ್ಯುನಿಸ್ಟ್ ಅಥವಾ ಒಂದು ಸ್ಥಾಪನೆಯ ಕಡು ವಿರೋಧಿ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದೆ. ಒಂದು ವೇಳೆ ನೀವು ಆರ್‌ಎಸ್‌ಎಸ್ ಅಥವಾ ವಿಎಚ್‌ಪಿಯಲ್ಲಿದ್ದು, ನಿಮ್ಮಲ್ಲಿ ಎಲ್ಲಾ ಅರ್ಹತೆಯಿದ್ದರೂ ನೀವು ಬುದ್ಧಿಜೀವಿಗಳೆಂದು ಕರೆಸಿಕೊಳ್ಳಲಾರಿರಿ. ಒಂದು ವೇಳೆ ಅಸ್ತಿತ್ವದಲ್ಲಿರುವ ಸರ್ಕಾರದ ವಿರುದ್ಧ ನಿಮಗೇನಾದರೂ ರಾಜಕೀಯ ಅಜೆಂಡಾ ಇದ್ದರೆ, ನೀವು ಒಬ್ಬ ಆ್ಯಕ್ಟಿವಿಸ್ಟ್ ಆಗಿದ್ದರೆ, ಬುದ್ಧಿಜೀವಿಯೆಂಬ ಸೋಗುಹಾಕಬಹುದು. ಅದರ ಆಧಾರದ ಮೇಲೆ ನಿಮಗೆ ಅಧಿಕಾರದ 'ಮೊಗಸಾಲೆ'ಯಲ್ಲಿ (ವ್ಯಂಗ್ಯವೆಂದರೆ ಇದು ಸ್ಥಾಪನೆಯ ಹಿಡಿತದಲ್ಲೇ ಇದೆ!) ಭಯಂಕರ ಗೌರವ ಗಳಿಸಲು ಮತ್ತು ಪ್ರಭಾವ ಬೀರಲು ಸಾಧ್ಯವಾಗುತ್ತದೆ. ನಿಮಗೆ ಯಾವ ವಿಷಯದಲ್ಲೂ ಗಹನ ಜ್ಞಾನವಿಲ್ಲದಿದ್ದರೂ ನಡೆಯುತ್ತದೆ ಬಿಡಿ!
ಆ) ನಮ್ಮಲ್ಲಿನ ಬುದ್ಧಿಜೀವಿಗಳ ವಲಯದ ಒಂದು ಪ್ರಸಿದ್ಧ ಗುಣವೆಂದರೆ, ಬಡತನದ ಅರ್ಥ ಅಥವಾ ಬಡವರು ಚಿರಂತನವಾಗಿ ದಾರಿದ್ರ್ಯದಲ್ಲೇ ಇರುವುದಕ್ಕೆ ಕಾರಣವೇನು ಎನ್ನುವುದು ತಿಳಿಯದಿದ್ದರೂ ಪರವಾಗಿಲ್ಲ, ಬಾಯ್ತೆರೆದರೆ 'ತುಳಿತಕ್ಕೊಳಗಾದವರು', 'ಬಡವರು' ಎಂಬ ಪದಪ್ರಯೋಗ ಮಾಡುವುದು. ಮೀನು ತಿನ್ನುವ ಒಬ್ಬ ಬಡವನಿಗೆ ಮೀನು ಹಿಡಿಯುವುದು ಹೇಗೆ ಎನ್ನುವುದನ್ನು ಕಲಿಸಿಕೊಡದೆ, "ಆತನಿಗೆ ದಿನಕ್ಕೊಂದು ಪುಕ್ಕಟೆ ಮೀನು ಕೊಡಬೇಕು" ಎಂದು ವಾದಿಸಿದರೆ ನೀವು ಭಾರತದ ಅತ್ಯಂತ ಗೌರವಸ್ಥ ಮತ್ತು ಪ್ರಖ್ಯಾತ ಬುದ್ಧಿಜೀವಿ ಎಂದೆನಿಸಿಕೊಳ್ಳುತ್ತೀರಿ.
ಇ) ನಮ್ಮ ದೇಶದ ಬುದ್ಧಿಜೀವಿ ಸಾಮಾನ್ಯವಾಗಿ 'ಭೂತ ವಿದ್ಯೆ'ಯಲ್ಲಿ ಪರಿಣತನಾಗಿರುತ್ತಾನೆ; ಅಂದರೆ ಆತ ಸಮಾಜದ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ದೆವ್ವ ಹಿಡಿದಿದೆಯೆಂದು ಹೇಳಬಲ್ಲ. ಇಂಥ 'ಪಿಶಾಚವಿದ್ಯಾ ಪಾರಂಗತ'ರಿಗೆ ಭಾರತದ ಕಮಿಷನ್‌ಗಳಲ್ಲಿ ಅಥವಾ ಸಮಿತಿಗಳಲ್ಲಿ ಬಹಳ ಬೇಡಿಕೆಯಿದೆ. ಅಲ್ಲಿ ಕುಳಿತುಕೊಳ್ಳುವ ಇವರ ಉದ್ದೇಶ, ತಿರುಚಿದ ಆರ್ಥಿಕ/ಸಾಮಾಜಿಕ ಅಂಕಿ ಅಂಶಗಳನ್ನು ಮುಂದಿಟ್ಟು ತಮ್ಮನ್ನು ಆ ಸ್ಥಾನದಲ್ಲಿ ಕೂರಿಸಿದವರಿಗೆ ತೃಪ್ತಿಪಡಿಸುವುದೇ ಆಗಿರುತ್ತದೆ.
ಈ) ರೋಗವನ್ನು ಹುಡುಕುವುದು ಮತ್ತು ಅದನ್ನು ದೊಡ್ಡದು ಮಾಡಿ ಬಣ್ಣಿಸಿ, ಗಾಯಕ್ಕೆ ಇನ್ನಷ್ಟು ಉಪ್ಪು ಹಚ್ಚುವುದು, ಇಲ್ಲವೇ ಸಮಾಜದಲ್ಲಿ ಯಾವುದು ಸರಿಯಾಗಿದೆ ಯಾವುದು ಸರಿಯಿಲ್ಲ ಎಂದು ಭಾಷಣ ಹೊಡೆಯುವವರು ಮಾತ್ರ ನಮ್ಮಲ್ಲಿ ಬುದ್ಧಿಜೀವಿಯಾಗಿ ತೇರ್ಗಡೆಗೊಳ್ಳುತ್ತಾರೆ. ಹೊಸ ಯೋಚನೆಗಳಿಗೆ/ದೃಷ್ಟಿಕೋನಕ್ಕೆ/ ಮಾಹಿತಿಗಳಿಗೆ ಅವರ ಮನಸ್ಸು ಮುಕ್ತವಾಗಿರುವುದಿಲ್ಲ. ಸಮಸ್ಯೆಗೆ ಪರಿಹಾರವನ್ನು ಅವರಿಂದ ನಿರೀಕ್ಷಿಸುವಂತಿಲ್ಲ! ಉದಾಹರಣೆಗೆ, ನೀವು ಪರಮಾಣು ಶಕ್ತಿ ಉತ್ಪಾದನೆಯನ್ನು, ಕಾಶ್ಮೀರದಲ್ಲಿ ಉಗ್ರವಾದವನ್ನು ತಡೆಯಲು ಅಸ್ತಿತ್ವದಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು (ಆಋಕಿಖಆ) ವಿರೋಧಿಸುವವರಾದರೆ ಬುದ್ಧಿಜೀವಿ ಸ್ಥಾನದಲ್ಲಿ ಕೂರುತ್ತೀರಿ. ಇನ್ನು ಇಂಗ್ಲಿಷ್ ಭಾಷೆಯನ್ನು ಅರೆದು ಕುಡಿದವರಾಗಿದ್ದು ನಿಮ್ಮ ಭಾಷಣದಲ್ಲಿ ಮತ್ತು ಬರಹಗಳಲ್ಲಿ ಕಾಲಕಾಲಕ್ಕೆ ಅತಿರೇಕದ ಆಕ್ಷೆಪಣೆ ಎತ್ತುವವರಾಗಿದ್ದರೆ ಇನ್ನೂ ಓಕೆ(ಉದಾ- ಭಾರತ ಸರ್ಕಾರ ಉಗ್ರವಾದಿ ನಿಲುವನ್ನು ಹೊಂದಿದೆ, ಅಧಿಕಾರವರ್ಗವೆಲ್ಲ ಭ್ರಷ್ಟವಾಗಿದೆ, ಎಲ್ಲಾ ರಾಜಕಾರಣಿಗಳೂ ಕೊಳೆತು ನಾರುತ್ತಿದ್ದಾರೆ...ಇತ್ಯಾದಿ). ಒಂದು ವೇಳೆ ಬುಕರ್ ಪ್ರಶಸ್ತಿ, ಮ್ಯಾಗ್ಸೆಸೆ, ನ್ಯೂರೆಂಬರ್ಗ್, ಮಾನವಹಕ್ಕುಗಳಂಥ ವಿದೇಶಗಳ ಬುರುಡೆ ಪ್ರಶಸ್ತಿಗಳನ್ನು ಪಡೆಯಲು ಸಫಲರಾದಿರೆಂದರೆ ನಿಮಗೆ ಊಟ್ಝಟಿಜಟಿಡಿ ಐಟಿಡಿಜಟಟಜ್ಛಡ್ಡಿಛಟ ಪಟ್ಟ ಪಕ್ಕಾ ಸಿಗುತ್ತದೆ.
ಉ) ಭಾರತದಲ್ಲಿಂದು ಬುದ್ಧಿಜೀವಿಯೆಂಬ ಗೌರವ ಪಡೆಯಬೇಕಾದರೆ ಇಬ್ಬಗೆಯ ಗುಣವಿರಬೇಕಾಗುತ್ತದೆ. ಅಂದರೆ ಒಬ್ಬರಿಗೆ ಅನ್ವಯವಾಗುವ ನೀತಿ ಎಲ್ಲರಿಗೂ ಅನ್ವಯವಾಗಬೇಕು ಎನ್ನುವವರು ನೀವಾಗಿರಬಾರದು. ತಸ್ಲೀಮಾ ನಸ್ರೀನ್ ಮತ್ತು ಸಲ್ಮಾನ್ ರಶ್ದಿಯನ್ನು ವಾಚಮಾಗೋಚರ ಖಂಡಿಸಿ, ಅವರನ್ನು ಹ್ಯೇಯ ವ್ಯಕ್ತಿಗಳಾಗಿ ಚಿತ್ರಿಸಬೇಕು. ಆದರೆ ಎಮ್.ಎಫ್ ಹುಸೇನ್‌ರಂಥವರನ್ನಲ್ಲ!(ಹಾಗೆ ನೋಡಿದರೆ ಇವರೆಲ್ಲರ ವಿಷಯದಲ್ಲೂ ಧಾರ್ಮಿಕ ಭಾವನೆಗಳೇ ಪ್ರಮುಖ ಪಾತ್ರ ವಹಿಸಿವೆಯಲ್ಲವೇ?)
ಊ) ಇನ್ನು ಬರವಣಿಗೆಯ ಮೂಲಕ ಬುದ್ಧಿಜೀವಿಯೆಂದು ಕರೆಸಿಕೊಳ್ಳಬೇಕಾದರೆ ಈ ರಾಷ್ಟ್ರದ ಜನತೆಯ ಶತಶತಮಾನಗಳಿಂದ ನೆಚ್ಚಿಕೊಂಡು ಬಂದಿರುವ ನಂಬಿಕೆಗಳನ್ನು ಹಂಗಿಸಬೇಕು ಅಥವಾ ಅಸಭ್ಯವಾಗಿ ಚಿತ್ರಿಸಬೇಕು. ಅಂಥ ಮನಸ್ಸ ನೋಯಿಸಬಲ್ಲ ಪುಸ್ತಕವನ್ನು ಬರೆಯುವುದರಲ್ಲಿ ಪರಿಣತರಾದಿರೆಂದರೆ, ನಿಮ್ಮ ಬರವಣಿಗೆಯನ್ನು ವಿದೇಶದಲ್ಲಿ ಮೆಚ್ಚಿ ಕೊಂಡಾಡಲಾಯಿತೆಂದರೆ, ವಿದೇಶದ ಪ್ರಭಾವಿ ವ್ಯಕ್ತಿಗಳು ಭಾರತಕ್ಕೆ ಬಂದಾಗ ಅವರೊಂದಿಗೆ ಕಾಲಕಳೆಯಲು ನಿಮಗೆ ಪ್ರಧಾನಿಗಳಿಂದ ಅಥವಾ ರಾಷ್ಟ್ರಪತಿಗಳಿಂದ ಕರೆ ಬರಬಹುದು!
= ಎಲ್ಲದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಬುದ್ಧಿಜೀವಿಯೊಬ್ಬನ ಪ್ರಾಮುಖ್ಯ ಮತ್ತು ಪಾತ್ರವೇನು? ಸಮಾಜಕ್ಕೆ ಉಪಯೋಗವಾಗಬಲ್ಲ ಸಮೂಹದ ಯೋಚನಾಕ್ರವುಕ್ಕೆ ಶಕ್ತಿ ತುಂಬುವ ಕೆಲಸವನ್ನು ಬುದ್ಧಿಜೀವಿ ಮಾಡಬೇಕು. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ನೀತಿ ನಿರೂಪಣೆಯಲ್ಲಿ ಜನತೆಯ ಪಾತ್ರ ಪ್ರಮುಖವಾಗಿರುತ್ತದೆ. ಅಳಲೇಕಾಯಿ ರಾಜಕೀಯ ಪಂಡಿತರು ಜನಾಭಿಪ್ರಾಯವನ್ನು ತಮ್ಮ ಚತುರ ಮಾತುಗಾರಿಕೆಯ ಮೂಲಕ ಬುಡಮೇಲು ಮಾಡುವುದರಲ್ಲಿ, ಅಸೂಯೆ, ಸಣ್ಣತನ ಮತ್ತು ಹಿಂಸೆಗೆ ಪ್ರಚೋದನೆ ನೀಡುವುದರಲ್ಲಿ ಸಿದ್ಧಹಸ್ತರು. ಈ ರೀತಿಯ ಪ್ರಚೋದನೆಗಳ ಹೆಡೆಮುರಿಕಟ್ಟಿ, ಜನಾಭಿಪ್ರಾಯದ ಅಭಿವೃದ್ಧಿ ಮಾಡುವ ಜವಾಬ್ದಾರಿ ಬುದ್ಧಿಜೀವಿಗಿರುತ್ತದೆ. ಭಾರತದಂಥ ಬೃಹತ್ ರಾಷ್ಟ್ರದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಕೆಲವು ಜನಪ್ರಿಯ ವೇದಿಕೆಗಳಿಂದಲೇ ಖಚಿತಪಡಿಸುವುದಕ್ಕೆ ಸಾಧ್ಯವಿಲ್ಲ. ಪ್ರಶ್ನಾರ್ಹವಾದ ಪ್ರಶ್ನೆಗಳನ್ನೊಳಗೊಂಡ ಜನಾಭಿಪ್ರಾಯಗಳು ಸಾರ್ವಜನಿಕ ಆಡಳಿತ ನೀತಿಯನ್ನು ನಿರ್ಧರಿಸಬಾರದು. ನೀತಿ ನಿರೂಪಕರು ಸಾಮಾಜಿಕ ಪರಿಸರದ ಭಾಗವಾಗಿರುವ ಬುದ್ಧಿಜೀವಿಗಳ ಅಭಿಪ್ರಾಯವನ್ನು ಪರಿಗಣಿಸಬೇಕು. ಆ ಬುದ್ಧಿಜೀವಿಯನ್ನು ಆತನ ಅರ್ಹತೆಯ ಮೇಲೆ ಆಯ್ಕೆ ಮಾಡಬೇಕೇ ಹೊರತಾಗಿ, ಆತನ ಸಂಪರ್ಕ ವಲಯವನ್ನೋ ಅಥವಾ ಯಾವುದೋ ಅಜೆಂಡಾವನ್ನು ಈಡೇರಿಸಿಕೊಳ್ಳಲು ಹಾತೊರೆಯುವ ಆತನ ಮನಸ್ಥಿತಿಗಲ್ಲ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ತಜ್ಞರು(ಥಿಂಕ್ ಟ್ಯಾಂಕ್‌ಗಳು) ಈ ಸನ್ನಿವೇಶದಲ್ಲಿ ಪ್ರಮುಖವಾಗಿ ಪರಿಗಣನೆಗೆ ಬರುತ್ತಾರೆ.
= ನಮ್ಮ ದೇಶದಲ್ಲಿ ಥಿಂಕ್ ಟ್ಯಾಂಕ್‌ಗಳು (ನಿರ್ದಿಷ್ಟ ರಾಜಕೀಯ ಅಥವಾ ಆರ್ಥಿಕ ಸಮಸ್ಯೆಗಳಿಗೆ ಸಲಹೆ ನೀಡುವ ತಜ್ಞರ ಗುಂಪು) ಇಂದು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಅಲ್ಲದೆ ಇರುವ ಅಂಥ ಕೆಲವೇ ಕೆಲವು ವಿವೇಕಯುತ ಗುಂಪುಗಳಿಗೆ ಆರ್ಥಿಕ ಬೆಂಬಲ ನೀಡುವುದು ನಮ್ಮ ದೇಶದಲ್ಲಿ ಇಂದಿಗೂ ಸಮಸ್ಯೆಯಾಗೇ ಉಳಿದಿದೆ. ಪಶ್ಚಿಮ ರಾಷ್ಟ್ರಗಳಲ್ಲಿನ ಥಿಂಕ್ ಟ್ಯಾಂಕ್‌ಗಳಿಗೆ ಧರ್ಮ ಪ್ರೇರಿತ ಬೆಂಬಲ ಮತ್ತ ಶ್ರೀಮಂತ ಕುಟುಂಬಗಳಿಂದ ದಾನ ಸಿಗುತ್ತಿರುವುದರಿಂದ ಅವರು ಬಲಿಶಾಲಿಯಾಗುತ್ತಾ ಸಾಗಿದ್ದಾರೆ. ಆದರೆ ನಮ್ಮಲ್ಲಿನ ಥಿಂಕ್‌ಟ್ಯಾಂಕ್‌ಗಳಿಗೆ ಸ್ವತಂತ್ರ ಮತ್ತು ಸಮರ್ಪಕ ಆರ್ಥಿಕ ಸಹಾಯ ಸಿಗುತ್ತಿಲ್ಲ. ಇಂಥ ಕಾರಣಗಳಿಂದ ಅವರು ಇನ್ನೊಬ್ಬರ ಕೈಗೊಂಬೆಯಾಗುವ ಅಪಾಯ ಹೆಚ್ಚಿರುತ್ತದೆ. ಥಿಂಕ್‌ಟ್ಯಾಂಕ್‌ಗಳಿಗೆ ಕಾನೂನು ವಿಷಯದಲ್ಲಿ ಪರಿಣತಿ ಇರಬೇಕು. ಅವರ ಅಧ್ಯಯನಕ್ಕೆ, ತಿರುಗಾಟಕ್ಕೆ ಒಂದು ವೇಳೆ ಹಣ ಒದಗಿಸಿದರೂ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಡೆಗಣಿಸುವಂತಿಲ್ಲ. ಆದರೆ ದೇಶದಲ್ಲಿ ಒಟ್ಟಾರೆ ಪರಿಸರ, ಅವರ ಯೋಚನೆಯ ವ್ಯಾಪ್ತಿಯನ್ನು ವಿಸ್ತರಿಸುವಂಥ, ಜವಾಬ್ದಾರಿಯುತ ಚರ್ಚೆಗಳಿಗೆ ಕಾರಣವಾಗುವಂತೆ ಬದಲಾಗಬೇಕಾಗಿದೆ. ಥಿಂಕ್‌ಟ್ಯಾಂಕ್‌ಗಳ ಯಶಸ್ಸು ಮತ್ತು ಉಪಯುಕ್ತತೆಯನ್ನು, ಅವರ ಬರಹಗಳು ಮತ್ತು ಅವರ ಯೋಚನೆಗಳು ಎಷ್ಟು ಪರಿಣಾಮಕಾರಿಯಾಗಿ ಅರ್ಥಮಾಡಿಸಲು, ಸಾರ್ವಜನಿಕ ನೀತಿಗಳನ್ನು ರೂಪಿಸಲು ಯಶಸ್ವಿಯಾಗುತ್ತವೆ ಎನ್ನುವುದರ ಮೇಲೆಯೇ ನಿಂತಿದೆ.
(ಇಂಡಿಯನ್ ಪಾಲಿಸಿ ಫೌಂಡೇಷನ್‌ನ 'ಇಂಟಲೆಕ್ಚುವಲ್ಸ್ ಇನ್ ಕಂಟೆಂಪರರಿ ಸೊಸೈಟಿ'(ಸಮಕಾಲೀನ ಸಮಾಜದಲ್ಲಿ ಬುದ್ಧಿಜೀವಿಗಳು) ಕಿರುಹೊತ್ತಿಗೆಯಿಂದ ಆಯ್ದ ಲೇಖನ)

-ಆರ್.ವೆಂಕಟನಾರಾಯಣನ್
ಮಾಜಿ ಕಾರ್ಯದರ್ಶಿ, ಭಾರತ ಸರ್ಕಾರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement