ಅಂಕಣಗಳು

ಭ್ರಷ್ಟರ ಹಾಗೆ ಪ್ರಜಾಸತ್ತೆಗೆ ಮತಭ್ರಷ್ಟರೂ ಅಪಾಯಕಾರಿ!

ನಮ್ಮ ಬೆಂಗಳೂರಿಗರಿಗೆ ಏನಾಗಿದೆ? ಅರ್ಧದಷ್ಟು ಜನ ಮತವನ್ನೇ ಹಾಕಿಲ್ಲ.

ನಮ್ಮ ಬೆಂಗಳೂರಿಗರಿಗೆ ಏನಾಗಿದೆ?  ಅರ್ಧದಷ್ಟು ಜನ ಮತವನ್ನೇ ಹಾಕಿಲ್ಲ. ಇವರು ಪ್ರವೀಣಶೆಟ್ಟಿಯವರಂತೆ ಹಣವನ್ನೂ ಖರ್ಚು ಮಾಡಬೇಕಿರಲಿಲ್ಲ. ಸಮಯವನ್ನೂ ವ್ಯಯಿಸಬೇಕಿರಲಿಲ್ಲ. ಅರ್ಧ ಕಿಮೀನೊಳಗೆ ಮತಗಟ್ಟೆಯಿತ್ತು. ಮತ ಚಲಾಯಿಸಲು ಅನುವಾಗಲೆಂದು ರಜಾ ಘೋಷಿಸಲಾಗಿತ್ತು.

ದುಬೈಯಲ್ಲಿರುವ ಹೋಟೆಲ್ ಉದ್ಯಮಿ ಹಾಗೂ ಸ್ನೇಹಿತರಾದ ಪ್ರವೀಣ ಶೆಟ್ಟಿಯವರು ತಮ್ಮ ಊರಾದ ಕುಂದಾಪುರದಿಂದ ಗುರುವಾರ ಫೋನ್ ಮಾಡಿದ್ದರು. ಅವರು ಕೆಲ ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದರು. 'ಏನು ಶೆಟ್ರೇ ಸಮಾಚಾರ? ನೀವು ಮಂಗಳೂರು- ದುಬೈ ಸೀಸನ್ ಟಿಕೆಟ್ ಖರೀದಿಸಿದಂತಿದೆ' ಎಂದು ತಮಾಷೆ ಮಾಡಿದೆ. ಅದಕ್ಕೆ ಪ್ರವೀಣ ಶೆಟ್ಟಿಯವರು, 'ಹಾಗೇನಿಲ್ಲ. ಚುನಾವಣೆಗೆ ಮತ ಹಾಕಲೆಂದು ಪತ್ನಿಯೊಂದಿಗೆ ಬಂದೆ. ಇಂದು ರಾತ್ರಿ ವಾಪಸ್ ಹೋಗುತ್ತಿದ್ದೇನೆ' ಎಂದು ಬಂದ ಕಾರಣವನ್ನು ವಿವರಿಸಿದರು. 'ಒಂದು ಮತ ಹಾಕುವುದಕ್ಕಾಗಿ ಬಂದ್ರಾ?' ಎಂದು ಕೇಳಿದಾಗ, 'ಸಾರ್, ನಾನು ದುಬೈನಲ್ಲಿದ್ದಿರಬಹುದು. ಆದರೆ ಈ ದೇಶದ ಪ್ರಜೆಯಾಗಿ ನಾನು ಮಾಡಲೇಬೇಕಾದ ಕೆಲಸ ಅಂದ್ರೆ ಮತದಾನ. ಅದನ್ನು ನನ್ನ ಹಕ್ಕು ಹಾಗೂ ಕರ್ತವ್ಯ. ದುಬೈ ಅಲ್ಲ, ಜಗತ್ತಿನ ಯಾವುದೇ ಭಾಗದಲ್ಲಿದ್ದರೂ, ಭಾರತೀಯರಾದ ನಾವು ಮತ ಹಾಕದಿದ್ದರೆ ಹೇಗೆ? ಹೀಗಾಗಿ ನಾನು ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುತ್ತೇನೆ.' ಅಂದರು. ನನಗೆ ಪ್ರವೀಣಶೆಟ್ಟಿ ಅವರ ಬಗ್ಗೆ ಅಭಿಮಾನ ಮತ್ತಷ್ಟು ಹೆಚ್ಚಿತು.
ಹಿಂದಿನ ದಿನ ಅವರು ಪತ್ನಿಯೊಂದಿಗೆ ದುಬೈನಿಂದ ಮಂಗಳೂರಿಗೆ ಬಂದು ಅಲ್ಲಿಂದ ಕಾರಿನಲ್ಲಿ ಕುಂದಾಪುರಕ್ಕೆ ಆಗಮಿಸಿ ಮರುದಿನ ಮತದಾನ ಮಾಡಿ, ಅದೇ ರಾತ್ರಿ ಮಂಗಳೂರಿನಿಂದ ದುಬೈಗೆ ಹೋದರು. ಎರಡು ನಿಮಿಷದ ಕಾರ್ಯಕ್ಕೆ ಏನಿಲ್ಲವೆಂದರೂ ಎರಡು ದಿನ ಹಾಗೂ ಕನಿಷ್ಠ ಎರಡೂವರೆ ಮೂರು ಲಕ್ಷ ರೂಪಾಯಿ ವ್ಯಯಿಸಿದ್ದರು. ಅಲ್ಲದೇ ದೈನಂದಿನ ಕೆಲಸ ಕಾರ್ಯಗಳೆಲ್ಲ ಗಾಳುಮೇಳು. ಇವೆಲ್ಲವುಗಳಿಗಿಂತ ಮತ ಹಾಕಬೇಕೆಂಬ ಉತ್ಕಟ ಆಸೆ. ಅದಮ್ಯ ಕರ್ತವ್ಯ ಪಾಲನೆಯ ಜವಾಬ್ದಾರಿ ಭಾವ ಅವರನ್ನು ಹಾಗೆ ಮಾಡುವಂತೆ ಪ್ರೇರೇಪಿಸಿತ್ತು. ಅವರು ಮತ ಹಾಕದಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಒಂದು ಮತ ಹಾಕಲು ಅಷ್ಟು ದೂರದಿಂದ ಬಂದೆನೆಂಬ ಸಮಾಧಾನ, ಅಭಿಮಾನ ಅವರಲ್ಲಿತ್ತು. 'ಭಟ್ರೇ, ನಮ್ಮ ದೇಶದ ಚುನಾವಣೆಯಲ್ಲಿ ನಾವು ಮತ ಚಲಾಯಿಸದೇ, ಅಮೆರಿಕದವರು, ಬ್ರಿಟನ್‌ನವರು ಬಂದು ಮತ ಹಾಕಲು ಸಾಧ್ಯವಾ? ಹೀಗಿರುವಾಗ ಇದರಲ್ಲಿ ಟೈಮಿಲ್ಲ. ಹಣ ಖರ್ಚಾಗುತ್ತದೆ ಎಂಬ ಮಾತೆಲ್ಲಿ ಬಂತು?' ಎಂದರು ಪ್ರವೀಣಶೆಟ್ಟಿಯವರು.
ಒಂದು ಮತ ಚಲಾಯಿಸುವುದಕ್ಕಾಗಿ ಅವರು ತೆಗೆದುಕೊಂಡ ಶ್ರಮ, ವ್ಯಯಿಸಿದ ಹಣ ಹಾಗೂ ಸಮಯದ ಜತೆಗೆ ಅವರ ಆಲೋಚನಾಕ್ರಮ, ನನಗೆ ಇಷ್ಟವಾಯಿತು. 'ನಾನು ಮತ ಚಲಾಯಿಸಿದ್ದರಿಂದ ದುಬೈನಲ್ಲಿದ್ದರೂ ಇಲ್ಲಿನ ವ್ಯವಸ್ಥೆ ಬಗ್ಗೆ ನನಗೆ ಮಾತಾಡಲು ನೈತಿಕ ಹಕ್ಕು ಬರುತ್ತದೆ. ಅದಿಲ್ಲದೇ ನಾನು ಮಾತಾಡಿದರೆ ಅದು ಶುದ್ಧ ಬೊಗಳೆಯಾಗುತ್ತದೆ. ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸದೇ ನಮ್ಮ ವ್ಯವಸ್ಥೆಯನ್ನು ದೂಷಿಸಲು ನನಗೆ ಯಾವ ನೈತಿಕತೆಯಿದೆ? ಈ ಪ್ರಜ್ಞೆ ನನ್ನನ್ನು ಇಲ್ಲಿಗೆ ಬರುವಂತೆ ಉತ್ತೇಜಿಸಿತು. ಅದರ ಮುಂದೆ ಖರ್ಚಾದ ಹಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದರು ಪ್ರವೀಣಶೆಟ್ಟಿ.
ನಮ್ಮ ಬೆಂಗಳೂರಿಗರಿಗೆ ಏನಾಗಿದೆ?
ಅರ್ಧದಷ್ಟು ಜನ ಮತವನ್ನೇ ಹಾಕಿಲ್ಲ. ಇವರು ಪ್ರವೀಣಶೆಟ್ಟಿಯವರಂತೆ ಹಣವನ್ನೂ ಖರ್ಚು ಮಾಡಬೇಕಿರಲಿಲ್ಲ. ಸಮಯವನ್ನೂ ವ್ಯಯಿಸಬೇಕಿರಲಿಲ್ಲ. ಅರ್ಧ ಕಿಮೀನೊಳಗೆ ಮತಗಟ್ಟೆಯಿತ್ತು. ಮತ ಚಲಾಯಿಸಲು ಅನುವಾಗಲೆಂದು ರಜಾ ಘೋಷಿಸಲಾಗಿತ್ತು.
ಅದೇ ತಪ್ಪಾಯಿತು. ಗುರುವಾರ ಮತದಾನ ರಜಾ. ಶುಕ್ರವಾರ ಗುಡ್‌ಫೈಡೇ. ಶನಿವಾರವೊಂದು ರಜೆ ಹಾಕಿದರೆ ಆಫೀಸಿಗೆ ಹೋಗುವುದು ಸೋಮವಾರ ತಾನೆ? ನಾಲ್ಕು ದಿನ ಕಾಲ ರಜೆ ಸಿಗುವುದೆಂದು ಎಲ್ಲರೂ ಊರುಬಿಟ್ಟು ಟೂರು ಹೋಗಿಬಿಟ್ಟರು. ತನ್ನದೊಂದು ಮತ ಹಾಕಿದರೆಷ್ಟು, ಬಿಟ್ಟರೆಷ್ಟು? ತನ್ನ ಒಂದು ಮತದಿಂದ ಆಗುವುದಾದರೂ ಏನು? ಹೇಗಿದ್ದರೂ ಬೇರೆಯವರು ಚಲಾಯಿಸುತ್ತಾರಲ್ಲ. ಅವರು ಚಲಾಯಿಸಲಿ ಬಿಡಿ. ತನಗೆ ಹೆಂಡತಿ-ಮಕ್ಕಳೊಂದಿಗೆ ಟೂರೇ ಇರಲಿ. ಈ ಚುನಾವಣೆ, ಮತದಾನ ಕಟ್ಟಿಕೊಂಡು ತಮಗೇನಾಗಬೇಕು? ಆರಿಸಿ ಬಂದವರು ಉದ್ಧಾರ ಮಾಡುವುದು ಅಷ್ಟರಲ್ಲಿಯೇ ಇದೆ ಎಂದು ಭಾವಿಸಿಬಿಟ್ಟರಾ?
ಇಲ್ಲದಿದ್ದರೆ ಮತದಾನ ಶೇ.50ರಷ್ಟಾಗುತ್ತಿತ್ತಾ?
ಈ ಸಲದ ಚುನಾವಣೆಯಲ್ಲಿ ಮತದಾರರನ್ನು ಮತಗಟ್ಟೆಗೆ ಕರೆ ತರಲೆಂದು ಚುನಾವಣಾ ಆಯೋಗ ಇನ್ನಿಲ್ಲದ ಕಸರತ್ತನ್ನು ಮಾಡಿತ್ತು. ಚುನಾವಣೆ ಘೋಷಣೆಯಾದ ಹದಿನೈದು ದಿನಗಳವರೆಗೂ ಮತಪಟ್ಟಿಯಲ್ಲಿ ಹೆಸರು ಸೇರಿಸಲು ಅನುವು ಮಾಡಿಕೊಟ್ಟಿತ್ತು. ಆನ್‌ಲೈನ್‌ನಲ್ಲೂ ಹೆಸರು ದಾಖಲಿಸಲು ಅವಕಾಶ ಕಲ್ಪಿಸಿತ್ತು. ಒಂದೆರಡು ದಾಖಲೆ ಪತ್ರಗಳನ್ನೂ ಮನೆಯಲ್ಲಿಯೇ ಕಂಪ್ಯೂಟರ್ ಮುಂದೆ ಕುಳಿತು ಕಳಿಸಿದರೂ ಸಾಕಾಗಿತ್ತು, ಅವರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಳ್ಳುತ್ತಿತ್ತು.
ಅದಾದ ನಂತರ, ಮತದಾರರಲ್ಲಿ ಜಾಗೃತಿ ಮೂಡಿಸಲು ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿತು. ಅಲ್ಲದೇ ಈ ಸಲ ಮತದಾರರ ಮನೆ ಬಾಗಿಲಿಗೇ ಮತದಾರರ ಗುರುತಿನ ಪತ್ರವನ್ನು ತಲುಪಿಸುವ ವ್ಯವಸ್ಥೆಯನ್ನೂ ಮಾಡಿತು. ಮನೆಯಿಂದ ಹೊರಬಂದು ನಾಲ್ಕು ಮಾರು ನಡೆದು ಮತ ಚಲಾಯಿಸುವುದಷ್ಟೇ ಕೆಲಸವನ್ನು ಬಾಕಿ ಬಿಟ್ಟಿತು.
ಆದರೂ ಬೆಂಗಳೂರಿನ ಮತದಾರ ಮತಗಟ್ಟೆ ಕಡೆ ಸುಳಿಯಲಿಲ್ಲ. ಅಂದ್ರೆ ಇದಕ್ಕೆ ಏನೆನ್ನಬೇಕೋ ತಿಳಿಯುವುದಿಲ್ಲ. ಇದು ಬೇಜವಾಬ್ದಾರಿತನದ ಪರಮಾವಧಿ!
ಬೆಂಗಳೂರಿನಲ್ಲಿ ಕ್ರಿಕೆಟ್ ಮ್ಯಾಚ್ ನಡೆದರೆ ವಾರದ ಮುಂಚೆ ಕ್ಯೂನಲ್ಲಿ ತಾಸುಗಟ್ಟಲೆ ನಿಂತು ಟಿಕೆಟ್ ಖರೀದಿಸಿ, ಇಡೀ ದಿನ ನೋಡುತ್ತೇವೆ. ಕ್ರಿಕೆಟ್ ಮ್ಯಾಚ್ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದರೂ ಟಿವಿ ಮುಂದೆ ಜಮಾ ಆಗಿರುತ್ತೇವೆ. ನಮಗಿಷ್ಟದ ನಟ-ನಟಿಯರ ಸಿನಿಮಾ ನೋಡಲು ಅರ್ಧ ದಿನ ವ್ಯಯಿಸುತ್ತೇವೆ. ವಾರಕ್ಕೊಮ್ಮೆ ಮಾಲ್‌ಗೋ, ಹೋಟೆಲ್ಲಿಗೋ ಹೋಗದಿದ್ದರೆ ಸಮಾಧಾನವಾಗುವುದಿಲ್ಲ.
ಇವ್ಯಾವುದನ್ನೂ ಮಾಡಬೇಡಿ ಎನ್ನುವುದಿಲ್ಲ, ದಯವಿಟ್ಟು ಮಾಡಿ. ಅಷ್ಟಕ್ಕೂ ಇವೆಲ್ಲ ನಿಮ್ಮ ವೈಯಕ್ತಿಕ ವಿಷಯ. ಆದರೆ ಐದು ವರ್ಷಕ್ಕೆ ಒಂದು ಸಲ ಬರುವ ಚುನಾವಣೆಯಲ್ಲಿ ಅರ್ಧ ಗಂಟೆ ಪುರುಸೊತ್ತು ಮಾಡಿಕೊಂಡು ನಮ್ಮ ಹಕ್ಕನ್ನು ಚಲಾಯಿಸಲು ಕರ್ತವ್ಯವನ್ನು ನಿಭಾಯಿಸಲು ಸಮಯ, ಸವುಡು ಇಲ್ಲವೆಂದರೆ ಇದನ್ನು ಬೇಜವಾಬ್ದಾರಿತನದ ಪರಮಾವಧಿ ಎಂದು ಕರೆಯದೇ ಬೇರೆ ಏನಂತ ಕರೆಯುವುದು?
ಒಂದು ಮತ ಹಾಕುವಷ್ಟು ಸೀರಿಯಸ್‌ನೆಸ್ ನಮ್ಮಲ್ಲಿ ಇಲ್ಲ ಅಂತಾದರೆ, ನಮ್ಮ ವ್ಯವಸ್ಥೆ, ರಾಜಕಾರಣಿಗಳು, ಸರ್ಕಾರದ ಬಗ್ಗೆ ಮಾತಾಡಲು ಯಾವ ನೈತಿಕ ಹಕ್ಕಿದೆ? ಮತದಾನ ಪರಮ ಪವಿತ್ರ ಕಾರ್ಯ ಎಂದಾದರೆ, ಮತದಾನ ಮಾಡದಿರುವುದೇನು? ಅದು ಪರಮ ಪಾಪದ ಕಾರ್ಯವಲ್ಲವಾ? ತನ್ನ ಕ್ಷೇತ್ರದ ಜನತೆಯ ಮತ ಪಡೆದು ಭ್ರಷ್ಟಾಚಾರವೆಸಗುವ ರಾಜಕಾರಣಿಗೂ, ಮತವನ್ನೇ ಹಾಕದ ಪ್ರಜೆಗೂ ಇರುವ ಸಾಮ್ಯತೆಯೆಂದರೆ ಸಮಾಜದ ಬಗ್ಗೆ ತಿರಸ್ಕಾರ, ದೇಶದ ಬಗ್ಗೆ ಅಸಡ್ಡೆ ಹಾಗೂ ವ್ಯವಸ್ಥೆ ಬಗ್ಗೆ ದಿವ್ಯ ಅಗೌರವ.
ಈ ಹಿನ್ನೆಲೆಯಲ್ಲಿ ಮತದಾನ ಮಾಡದವರನ್ನು 'ಮತಭ್ರಷ್ಟ' ಎಂದು ಕರೆದರೆ ತಪ್ಪೇನಿಲ್ಲ! ಕಾರಣ ಇದೂ ಒಂದು ರೀತಿಯಲ್ಲಿ ಭ್ರಷ್ಟಾಚಾರವೇ. ಪ್ರಜಾಪ್ರಭುತ್ವಕ್ಕೆ ಬಗೆದ ಅಪಚಾರವೇ.
ಬೆಂಗಳೂರಿಗರಿಗಿಂತ ಮಂಗಳೂರಿಗರೇ ಎಷ್ಟೋ ವಾಸಿ. ಅವರು ಬಲು ಉತ್ಸಾಹದಿಂದ ಮತ ಚಲಾಯಿಸಿದರು. ಶೇ.75ರಷ್ಟು ಮತದಾನವಾಯಿತು. ಪುತ್ತೂರಿನಂಥ ಊರಿನಲ್ಲಿ ಶೇ.88ರಷ್ಟು ಮತದಾನವಾಗಿದ್ದನ್ನು ಗಮನಿಸಿದರೆ ಅಲ್ಲಿನ ಜನರ ಕಾಳಜಿ, ಕಳಕಳಿ ಬಗ್ಗೆ ಹೆಮ್ಮೆಯೆನಿಸುತ್ತದೆ. ವಿಧಾನಸೌಧದ ಗಾಳಿ ಕುಡಿದು ಬದುಕುವ ಬೆಂಗಳೂರಿಗರಿಗೆ, ಸುಶಿಕ್ಷಿತರೆನಿಸಿಕೊಂಡವರಿಗೆ, ರಾಜ್ಯದ ರಾಜಧಾನಿಯಲ್ಲಿ ವಾಸಿಸುವವರಿಗೆ ಜಿಲ್ಲಾ, ತಾಲ್ಲೂಕು ಕೇಂದ್ರಗಳ ಜನರಷ್ಟೂ ಕಾಳಜಿಯಿಲ್ಲವೆಂದರೆ ಏನು? ಇದು ಖಂಡಿತವಾಗಿಯೂ ನಾಗರಿಕತೆಯ ಲಕ್ಷಣವಂತೂ ಅಲ್ಲ. ರಾಜಕಾರಣಿ-ಸರ್ಕಾರ ಹಾಗೂ ವ್ಯವಸ್ಥೆ ಬಗ್ಗೆ ಗಂಟಲು ಹರಿದುಕೊಳ್ಳುವವರು ಎದುರಾದರೆ, ಅಂಥವರ ಮಾತುಗಳನ್ನು ಕೇಳುವ ಮೊದಲು, 'ಅಣ್ಣಾ ನೀನು ಮತ ಹಾಕಿದ್ದೀಯಾ?' ಎಂದು ವಿಚಾರಿಸಿಕೊಳ್ಳಬೇಕು. ಇಲ್ಲ ಎಂದಾದರೆ 'ಬಾಯಿಮುಚ್ಚು' ಎಂದು ನಿರ್ದಾಕ್ಷಿಣ್ಯವಾಗಿ ಹೇಳಬೇಕು.
ಅಂಥವರು ಯಾವ ಮುಖ ಇಟ್ಟುಕೊಂಡು ವ್ಯವಸ್ಥೆಯನ್ನು ದೂರುತ್ತಾರೆ? ನಮ್ಮ ರಾಜಕೀಯ ವ್ಯವಸ್ಥೆ, ರಾಜಕಾರಣಿಗಳ ಬಗ್ಗೆ ಅತೀವ ತಾತ್ಸಾರವಿದ್ದರೆ, ಈ ಸಲ 'ನೋಟಾ' ಆಯ್ಕೆಯೂ ಇತ್ತು. ಅದನ್ನಾದರೂ ಹೇಳಿ ಎಲ್ಲ ಅಭ್ಯರ್ಥಿಗಳನ್ನೂ ತಿರಸ್ಕರಿಸಬಹುದಿತ್ತು. ಇವ್ಯಾವುವೂ ಇಲ್ಲದೇ ಚುನಾವಣೆ ದಿನದಂದು ಟೂರಿಗೆ ಹೊರಟವರಿಗೆ, ಮತಗಟ್ಟೆ ಬಳಿ ಸುಳಿಯದವರಿಗೆ, ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ಭಾಗಿಯಾಗದವರಿಗೆ, ಸದೃಢ ವ್ಯವಸ್ಥೆ ರೂಪಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡವರಿಗೆ ಯಾವ ನೈತಿಕತೆಯಿದೆ? ಹಾಗೆಂದು ಪ್ರಶ್ನಿಸಲೇಬೇಕಿದೆ.

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ