ಮೌನ ಬಂಗಾರವೆಂಬ ಮಾತನ್ನು ಯಾವ ಪುಸ್ತಕವೂ ಬದಲಿಸಲಾರದು
ವಿದಾಯದ ಸಂದರ್ಭದಲ್ಲಿ ತಮ್ಮ ಮೇಲಿನ ಟೀಕೆಗಳು ಅತಿಯಾಗುತ್ತಿರುವುದಕ್ಕೆ ಪ್ರಧಾನಿ ಮನಮೋಹನ ಸಿಂಗ್ ಅವರ ಸ್ವಗತ ಹೀಗಿದ್ದಿರಬಹುದೇ?
ಈ ದೇಶವನ್ನು ಅರ್ಥ ಮಾಡಿಕೊಳ್ಳೋಕೆ ಆಗಿಲ್ಲ. ಈ ಮಾತನ್ನು ಮತ್ಯಾರು ಹೇಳಿದರೂ ಸಹಜ ಅಲವತ್ತುಕೊಳ್ಳುವಿಕೆ ಎನಿಸಬಹುದೇ ಹೊರತು ಇನ್ನೇನಿಲ್ಲ. ಆದರೆ, ಹತ್ತು ವರ್ಷ ಪ್ರಧಾನಿಯಾಗಿಯೂ ನನಗೆ ಜನರ ಮನಸ್ಥಿತಿ ಅರ್ಥಮಾಡಿಕೊಳ್ಳಲಾಗಿಲ್ಲ ಅಂತಂದ್ರೆ, ಅದು ನಮಗೆ ಗೊತ್ತೇ ಇದೆ ಅಂತ ನೀವು ಕುಹಕವಾಡಬಾರದು!
ಮನೆಯಲ್ಲಿ ವಯಸ್ಸಾದವರು ಹೆಚ್ಚು ಮಾತನಾಡುತ್ತಿದ್ದರೆ ನಮ್ಮ ಸಮಾಜಕ್ಕೆ ಹಿತವಾಗುವುದಿಲ್ಲ. ವಟವಟ ಅನ್ನದೇ ಸುಮ್ಮನೇ ಕುಳಿತುಕೊಳ್ಳೋಕ್ಕಾಗಲ್ವಾ ಅಂತ ಗದರುತ್ತಾರೆ. ನಾನೂ ಇದೇ ಸೂತ್ರವನ್ನು ಅನುಸರಿಸಿ ಈ ಹತ್ತು ವರ್ಷಗಳಲ್ಲಿ ಆದಷ್ಟೂ ಮೌನ ಕಾಪಾಡಿಕೊಂಡೆ. ಆದರೆ ಜನ ಅದಕ್ಕೇ ಏನೆಲ್ಲ ದೂರುತ್ತಿದ್ದಾರೆ ನೋಡಿ? 'ಮಾತು ಬೆಳ್ಳಿ, ಮೌನ ಬಂಗಾರ' ಅಂತ ನನಗೆ ಶಾಲೆಯಲ್ಲಿ ಕಲಿಸಿದ ಮೇಷ್ಟ್ರೇನಾದರೂ ಈಗಲೂ ಇದ್ದರೆ ಅವರನ್ನು ಜಾಡಿಸಿಬಿಡುವ ಆಸೆಯಾಗುತ್ತಿದೆ.
ಹಿರಿ ಮನುಷ್ಯನ ಜಾಗವನ್ನು ಸಮರ್ಥವಾಗಿ ನಿಭಾಯಿಸಿದ್ದರೂ ಹೀಗೆಲ್ಲ ಟೀಕೆಗಳು ಬರುತ್ತಿರುವುದು ಸರಿಯಲ್ಲ. ನಿಮ್ಮ ಮನೆಗಳಲ್ಲಿ ಹೆಚ್ಚಿನ ಹಿರಿಯರು ಹೇಗಿರುತ್ತಾರೆ? ಹಕ್ಕುಪತ್ರಗಳೆಲ್ಲ ಅವರ ಹೆಸರಲ್ಲೇ ಇರುತ್ತದಾದ್ದರಿಂದ ಸಹಿ ಹಾಕುವ ಸಮಯದಲ್ಲಿ ಮಕ್ಕಳು ಅವರನ್ನು ತಪ್ಪದೇ ನೆನಪಿಸಿಕೊಳ್ಳುತ್ತಾರೆ. ಉಳಿದಂತೆ ಕಾರುಬಾರು ನಿಭಾಯಿಸುವವರು ಪ್ರಾಯದವರೇ ಅಲ್ಲವೇ? ಯಾವಾಗಾದರೂ 'ಅದು ಹಂಗಲ್ಲ, ಹಿಂಗೆ ಮಾಡಬೇಕಿತ್ತು' ಅಂತ ಅವರೂ ಚಿಕ್ಕದಾದ ಧ್ವನಿಯಲ್ಲಿ ಮಾತು ಒಗಾಯಿಸಿರುತ್ತಾರೆ. ಆದರೆ ಉಳಿದವರ್ಯಾರೂ ಅದನ್ನು ಕಿವಿಗೆ ಹಾಕಿಕೊಂಡಿರುವುದಿಲ್ಲ. ಖರೆ ಮಾತು ಏನೆಂದರೆ, ಅವರು ಅದನ್ನು ಆಲಿಸುತ್ತಾರೆ, ತನ್ನ ಮಾತು ನಡೆಯುತ್ತದೆ ಎಂಬ ನಿರೀಕ್ಷೆಯಿಂದೇನೂ ಉದುರಿಸಿದ ನುಡಿಗಳಲ್ಲ ಅವು. ದಾಖಲೆಗೆ ಇರಲಿ ಅಂತಷ್ಟೇ. ಉಳಿದ ದಿನ ಮನೆಯಲ್ಲಿ ಯಾವ ಮೂಲೆಯಲ್ಲಾದರೂ ಹಾಸಿಗೆ ಹಿಡಿದುಕೊಂಡಿರಲಿ, ಪೂಜೆ- ಶುಭಕಾರ್ಯಗಳು ನಡೆಯುವ ಸಂದರ್ಭದಲ್ಲಿ ಮುಖ್ಯ ಆಸನದಲ್ಲೇ ಕೂರಿಸಿ ಎಲ್ಲರೂ ಆಶೀರ್ವಾದ ತೆಗೆದುಕೊಳ್ಳುವುದಿಲ್ಲವೇ? ಹಾಗೆಯೇ ನಾನು ಸರ್ಕಾರದ ಮೀಟಿಂಗ್ಗಳ ದಾಖಲೆಯಲ್ಲಿ ಟೇಬಲ್ಗೆ ಅಭಿಮುಖವಾಗಿರುವ ಮುಖ್ಯ ಕುರ್ಚಿಯಲ್ಲೇ ಕುಳಿತಿರುವ ಕುರಿತು ನಿಖರ ದಾಖಲೆಗಳಿವೆ. ಈಗ ನೋಡಿ, ಈ ಸಂಜಯ್ ಬಾರು ಮತ್ತಿತರರು ಪುಸ್ತಕ ಬರೆದು, ಸರ್ಕಾರದಲ್ಲಿ ನನ್ನ ಮಾತೇ ನಡೆಯುತ್ತಿರಲಿಲ್ಲ ಎಂದಿರುವಾಗ ನಮ್ಮ ಕಾರ್ಯಾಲಯದಲ್ಲಿ ಇದಕ್ಕೆ ಪ್ರತ್ಯುತ್ತರ ನೀಡಲು ಎಷ್ಟೊಂದು ದಾಖಲೆಗಳಿವೆ ಗೊತ್ತೇ? ಪ್ರತಿ ಮೂರು ದಿನಕ್ಕೊಮ್ಮೆ ನಾನು ಮಾತಾಡಿದ್ದೇನೆ ಎಂಬ ದಾಖಲೆಗಳನ್ನು ನನ್ನ ಕಾರ್ಯಾಲಯ ತೆರೆದಿರಿಸಿದೆ. ಸಾವಿರ ಭಾಷಣಗಳನ್ನು ನಾನು ಮಾಡಿದ್ದೇನಂತೆ. ಕೇಳಿದವರು ಯಾರು ಅಂತ ಪ್ರಶ್ನಿಸಬೇಡಿ. ಆದರೆ ನಮ್ಮಲ್ಲಿ ದಾಖಲೆಗಳಿವೆ...ಹಾಂ!
ನಾನು ಮಾತೇ ಆಡೋದಿಲ್ಲ, ಕಾಂಗ್ರೆಸ್ನಲ್ಲಿ ಹೊಸರಕ್ತ ಸಂಚಾರವಾದರೆ ಮಾತ್ರ ಉದ್ಧಾರ ಎಂಬ ಅಭಿಪ್ರಾಯ ಬಹಳ ಹಿಂದೆಯೇ ವ್ಯಕ್ತವಾಗಿತ್ತು. ಆಗಲೇ ನಾನು, ರಾಹುಲ್ಗೆ ಯಾವತ್ತಾದರೂ ಕುರ್ಚಿ ಬಿಟ್ಟುಕೊಡುವುದಕ್ಕೆ ಸಿದ್ಧ ಎಂದು ಹೇಳಿದ್ದೆ. ನಾನು ಅರ್ಥಶಾಸ್ತ್ರಜ್ಞ, ಓದಿದವ ಎಂಬೆಲ್ಲ ಇಮೇಜ್ ಇರುವ ವ್ಯಕ್ತಿ. ಓದಿಕೊಂಡವರಿಗೆ ಇತಿಹಾಸಪ್ರಜ್ಞೆ ಇರುವುದಿಲ್ಲವೇ? ಸಿಂಗ್, ನರಸಿಂಹ, ಶಾಸ್ತ್ರಿ, ನಂದಾ ಹೀಗೆ ಏನೇ ಹೆಸರುಗಳಿದ್ದರೂ ಅವೆಲ್ಲ ಮಧ್ಯಂತರ ವ್ಯವಸ್ಥೆಗಳಷ್ಟೆ. ನೆಹರು ಮನೆತನಕ್ಕೆ ಮಾತ್ರವೇ ದೇಶವನ್ನು ಆಳುವ ಅರ್ಹತೆಯಿದೆ ಅಂತ ಕಾಂಗ್ರೆಸ್ ನಂಬುತ್ತದೆ. ಕಾಂಗ್ರೆಸ್ನಂಥ ದೊಡ್ಡಪಕ್ಷದ ಧೋರಣೆ ಬದಲಿಸುವುದಕ್ಕೆ ಯಾರು ನಾನು? ಹೀಗಾಗಿ ಅಖಂಡ ಹತ್ತು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿ ನೆಹರು ಕುಟುಂಬಕ್ಕೆ ಹೊರತಾದ ವ್ಯಕ್ತಿಯೊಬ್ಬ ಆಡಳಿತ ನಡೆಸಿದ್ದು ಪ್ರಾಯಶಃ ನನ್ನ ಹೆಸರಲ್ಲೇ ದಾಖಲೆಯಾಗಿ ಉಳಿಯಲಿದೆ. ಆಕ್ಸ್ಫರ್ಡ್ನಲ್ಲಿ ಅರ್ಥಶಾಸ್ತ್ರ ಓದಿದವನೆಂಬ ಗತ್ತನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ತೋರಿಸಿದರೆ ಸರಿಯೇ ವಿನಃ ಸೋನಿಯಾ ಸರ್ಕಾರದಲ್ಲಿ ತೋರಲಾದೀತೆ? ಅತಿಸಣ್ಣ ಸಮಯದಲ್ಲಿ ಹಲವು ಕೋಟಿಗಳಿಗೆ ಒಡೆಯನಾಗುವ ಅರ್ಥಶಾಸ್ತ್ರದ ಪಾಠವನ್ನು ರಾಬರ್ಟ್ ವಾದ್ರಾ ನನಗೇ ಕಲಿಸಿಯಾರು! ಬೋಫೋರ್ಸ್ ಪಾಠಶಾಲೆಯಲ್ಲಿ ಕಲಿತವರಿಗೆ ನನ್ನ ಆಕ್ಸ್ಫರ್ಡ್ ಪದವಿ ಯಾವ ಲೆಕ್ಕ? ಹೀಗಾಗಿ ಮೌನದಲ್ಲೇ ನನ್ನ ಶ್ರೇಯಸ್ಸಿತ್ತು ಎಂಬ ನಿಲವಿಗೆ ನಾನೀಗಲೂ ಬದ್ಧ. ನನಗಿಂತ ಭಿನ್ನವಾಗುವುದಕ್ಕೆ ಹೋಗಿ ಮಾತಾಡಿ ಪೇಚಿಗೀಡಾಗುತ್ತಿರುವ ರಾಹುಲ್ ಗಾಂಧಿಯವರನ್ನು ನೋಡಿಯೂ ನನ್ನ ಧೋರಣೆ ಒಪ್ಪಿಕೊಳ್ಳದಿದ್ದರೆ ನಿಮ್ಮಿಷ್ಟ.
-ಅಶ್ವಹೃದಯ