ಇದು, ಅಮೆರಿಕದಲ್ಲಿ, 130 ವರ್ಷಗಳ ಹಿಂದೆ ನಡೆದ ಪ್ರಸಂಗ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, 1869ರಲ್ಲಿ ಆರಂಭವಾಗಿ, ನಂತರದ ಹದಿನೈದು ವರ್ಷಗಳ ಅವಧಿಯಲ್ಲಿ ಮುಗಿದು ಹೋದ, ಈ ಅವಧಿಯಲ್ಲಿ ಮೂವರು ಅಪ್ರತಿಮ ಸಾಹಸಿಗಳ ಪರಿಶ್ರಮ ಮತ್ತು ತ್ಯಾಗವನ್ನು ಒಟ್ಟಾಗಿ ಪಡೆದುಕೊಂಡ ಮಹಾ ಸೇತುವೆ ನಿರ್ಮಾಣವೊಂದರ ಸಾಹಸಗಾಥೆ.
ಅವನ ಹೆಸರು ಜಾನ್ ಅಗಸ್ಟಿನ್ ರಾಬ್ಲಿಂಗ್. ಮೂಲತಃ ಜರ್ಮನಿಯವನು. ಯಾವುದಾದರೂ ಸಾಹಸಕ್ಕೆ ಮುಂದಾಗಬೇಕು, ಅದರಲ್ಲಿ ಯಶಸ್ಸು ಕಾಣಬೇಕು ಎಂಬುದೇ ರಾಬ್ಲಿಂಗ್‌ನ ಹಂಬಲವಾಗಿತ್ತು. ಬರ್ಲಿನ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿದ ರಾಬ್ಲಿಂಗ್, ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ ಅವನ ಗುರುಗಳಾದ ಪ್ರೊಫೆಸರ್ ಹೇಗಲ್ ಹೇಳಿದರಂತೆ: 'ನಿನ್ನೊಳಗೆ ಉತ್ಸಾಹವಿದೆ, ಛಲವಿದೆ, ಕನಸುಗಳಿವೆ, ಕನಸುಗಾರನೂ ಇದ್ದಾನೆ, ಜರ್ಮನಿಯಲ್ಲೇ ಉಳಿದುಕೊಂಡರೆ ಹತ್ತರಲ್ಲಿ ಹನ್ನೊಂದನೆಯವನಾಗುತ್ತೀಯೆ. ಹಾಗಾಗುವುದು ಬೇಡ. ಸೀದಾ ಅಮೆರಿಕಕ್ಕೆ ಹೋಗು. ಸಾಹಸಿಗರಿಗೆ ಅಲ್ಲಿ ನೂರರ ಲೆಕ್ಕದಲ್ಲಿ ಅವಕಾಶಗಳು ಸಿಗುತ್ತವೆ...'
ಗುರುಗಳ ಮಾತಿನಂತೆ, ಅಮೆರಿಕದ ನ್ಯೂಯಾರ್ಕ್ ಮಹಾನಗರಕ್ಕೆ ಬಂದ ರಾಬ್ಲಿಂಗ್, ಮೊದಲಿಗೆ ಸಣ್ಣ ಪುಟ್ಟ ಕಾಲುವೆ ನಿರ್ಮಾಣದ ಕಾಮಗಾರಿಯ ಕಂಟ್ರಾಕ್ಟರ್ ಆದ. ಆ ಸಂದರ್ಭದಲ್ಲಿ ಅವನಿಗೆ ತೂಗುಸೇತುವೆಗಳ ನಿರ್ಮಾಣದಲ್ಲಿ ವಿಶೇಷ ಆಸಕ್ತಿ ಬೆಳೆಯಿತು. ಏನಾದರೂ ಹೊಸದನ್ನು ಕಲಿಯಬೇಕು, ವಿನೂತನ ಸಾಹಸ ಮಾಡಬೇಕು ಎಂದು ಸದಾ ಕನವರಿಸುತ್ತಿದ್ದ ಆಗಸ್ಟಿನ್ ರಾಬ್ಲಿಂಗ್, ನೀರಿನಾಳದಲ್ಲಿ ಅಡಿಪಾಯ ಹಾಕಿ, ನೀರು ಒಸರದಂತೆ ಸೇತುವೆ ನಿರ್ಮಾಣ ಮಾಡುವುದು ಹೇಗೆ ಎಂಬುದರಲ್ಲಿ ವಿಶೇಷ ತರಬೇತಿ ಪಡೆದ. ಅನಂತರದಲ್ಲಿ ಸನ್‌ಸಿನಾಟಿ ನಗರದಲ್ಲಿ 320 ಮೀಟರ್ ಉದ್ದದ ತೂಗು ಸೇತುವೆಗಳ ನಿರ್ಮಾಣಕ್ಕೆ ಕೈ ಹಾಕಿ ಅಲ್ಲಿ ಯಶಸ್ಸು ಪಡೆದ. ಮುಂದಿನ ಕೆಲವೇ ದಿನಗಳಲ್ಲಿ ಸೇತುವೆ ನಿರ್ಮಾಣದ ಹಿಂದಿರುವ ಪಟ್ಟುಗಳು ಮತ್ತು ಗುಟ್ಟುಗಳು ಅವನಿಗೆ ಅರ್ಥವಾಗಿ ಹೋದವು. ಆನಂತರದ ಕೆಲವೇ ದಿನಗಳಲ್ಲಿ, ನ್ಯಾಯಾರ್ಕ್ ಮಹಾನಗರದ ನಂಬರ್ ಒನ್ ಕಂಟ್ರಾಕ್ಟ್‌ರ್ ಎಂಬ ಹೆಗ್ಗಳಿಕೆಗೂ ರಾಬ್ಲಿಂಗ್ ಪಾತ್ರನಾದ.
ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ (ಇದಕ್ಕೆ ಬ್ರೂಕ್‌ಲೈನ್ ಸಿಟಿ ಎಂಬ ಹೆಸರೂ ಇದೆ) ನಗರಗಳ ಮಧ್ಯೆ ಒಂದು ಮಹಾಸಾಗರದಷ್ಟೇ ದೊಡ್ಡದಾದ, ಈಸ್ಟ್ ರಿವರ್ ಹೆಸರಿನ ನದಿ ಹರಿಯುತ್ತದೆ. ಈ ನದಿಯ ಅಗಲವೇ ಎರಡೂವರೆ ಕಿಲೋಮೀಟರ್‌ಗಳಷ್ಟಿದೆ. ಇಷ್ಟು ದೂರದವರೆಗೆ ಸೇತುವೆ ನಿರ್ಮಾಣ ಅಸಾಧ್ಯವಾಗಿದ್ದ ಕಾರಣದಿಂದ, ಅವತ್ತಿನ ಸಂದರ್ಭದಲ್ಲಿ ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರದ ಮಧ್ಯೆ ರಸ್ತೆ ಸಂಪರ್ಕವೇ ಇರಲಿಲ್ಲ. ಅನಿವಾರ್ಯವಾಗಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗಲೇಬೇಕಾಗಿ ಬಂದಾಗ ದೋಣಿ, ಹಡಗು ಅಥವಾ ವಿಮಾನವನ್ನೇ ಅವಲಂಬಿಸಬೇಕಿತ್ತು.
ಸಂದರ್ಭ ಹೀಗಿದ್ದಾಗಲೇ ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರದ ಮಧ್ಯೆ ಸಂಪರ್ಕ ಕಲ್ಪಿಸಲು ಒಂದು ತೂಗುಸೇತುವೆಯನ್ನೇಕೆ ನಿರ್ಮಿಸಬಾರದು ಎಂದು ರಾಬ್ಲಿಂಗ್ ಯೋಚಿಸಿದ. ಅದನ್ನೇ ತನ್ನ ಗೆಳೆಯರಿಗೆ, ಜೊತೆಗಾರರಿಗೆ ಹಾಗೂ ಬಂಧುಗಳಿಗೆ ಹೇಳಿದ. ಎಲ್ಲರೂ ಅವನನ್ನು ಅನುಕಂಪದಿಂದ ನೋಡಿ, ಹೀಗೆಂದರು: "ನಿನ್ನದು ಹುಚ್ಚು ಆಲೋಚನೆ ಕಣಯ್ಯ. ಯಾಕೆ ಅಂತೀಯಾ? ಈಸ್ಟ್ ರಿವರ್‌ನ ಆಳ-ಅಗಲ ಬಲ್ಲವರಿಲ್ಲ. ಅದು ವರ್ಷವಿಡೀ ತುಂಬಿ ಹರಿಯುತ್ತದೆ. ತೂಗುಸೇತುವೆ ನಿರ್ಮಿಸುವಾಗ ನದಿಯ ಈ ತುದಿಯಿಂದ ಆ ತುದಿಯವರೆಗೂ ಅಲ್ಲಲ್ಲಿ ಪಿಲ್ಲರ್‌ಗಳನ್ನು ಹಾಕಬೇಕಲ್ಲವೆ? ಅಂಥ ಸಂದರ್ಭದಲ್ಲಿ ನದಿಯ ಆಳವೇ ಗೊತ್ತಾಗದಿದ್ದರೆ ಗತಿ ಏನು? ಪಿಲ್ಲರ್‌ಗೆ ಒಂದು ಆಧಾರವೇ ಸಿಕ್ಕದಿದ್ದಾಗ ಅದನ್ನು ನಿಲ್ಲಿಸುವುದಾದರೂ ಹೇಗೆ? ಅಲ್ಲಿ ಕೆಲಸ ಮಾಡುವಾಗ ಅಕಸ್ಮಾತ್ ಆಯತಪ್ಪಿದರೂ ಕೆಲಸಗಾರರು ನೀರಿಗೆ ಬೀಳುತ್ತಾರೆ. ಹಾಗಾಗಿ ಇದು ವಿಪರೀತ ರಿಸ್ಕೀ ಸಾಹಸ. ಎಲ್ಲಕ್ಕಿಂತ ಮುಖ್ಯವಾಗಿ, ಇಂಥದೊಂದು ಮಹಾ ಸೇತುವೆಯ ನಿರ್ಮಾಣಕ್ಕೆ ದಶಕಗಳ ಕಾಲ ಆಗಬಹುದು. ಅದುವರೆಗೂ ನೀನು ಬದುಕಿರುತ್ತೀಯ ಎಂಬುದಕ್ಕೆ ಗ್ಯಾರಂಟಿ ಏನಿದೆ? ಸುಮ್ಮನೇ ಹಗಲಗನಸು ಕಾಣ್ಬೇಡ. ಇಲ್ಲದ ರಿಸ್ಕ್‌ಗೆ ಕೈ ಹಾಕ್ಬೇಡ ಎಂದೆಲ್ಲಾ ಬುದ್ಧಿ ಹೇಳಿದರು.
ಆದರೆ, ರಾಬ್ಲಿಂಗ್‌ನ ಎದೆಯೊಳಗೆ ಕನಸಿತ್ತು. ತೂಗುಸೇತುವೆಯನ್ನು ನಿರ್ಮಿಸಲೇಬೇಕು ಎಂಬ ಹಠವಿತ್ತು. ನಿರ್ಮಿಸಬಲ್ಲೆ ಎಂಬ ಆತ್ಮವಿಶ್ವಾಸವಿತ್ತು. ಈ ಕಾರಣದಿಂದಲೇ, ಎಲ್ಲರ ಬುದ್ಧಿ ಮಾತನ್ನೂ ನಿರ್ಲಕ್ಷಿಸಿ ಆತ ಹೆಜ್ಜೆ ಮುಂದಿಟ್ಟ. ತೂಗುಸೇತುವೆ ನಿರ್ಮಾಣದಲ್ಲಿ ತನಗಿರುವ ಅನುಭವ, ತಾನು ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ತೂಗುಸೇತುವೆ, ಅದಕ್ಕೆ ತಗುಲಬಹುದಾದ ಅಂದಾಜು ವೆಚ್ಚ, ಸೇತುವೆ ನಿರ್ಮಾಣದಿಂದ ಆಗಲಿರುವ ಅನುಕೂಲದ ಸಮಗ್ರ ಮಾಹಿತಿಯನ್ನು ಅಮೆರಿಕ ಸರ್ಕಾರದ ಮುಂದಿಟ್ಟು, ಸೇತುವೆ ನಿರ್ಮಾಣಕ್ಕೆ ಒಪ್ಪಿಗೆಯನ್ನೂ ಪಡೆದು ಬಿಟ್ಟ. ಸೇತುವೆ ನಿರ್ಮಾಣದ ಕಾಮಗಾರಿ ಆರಂಭಿಸುವ ಮುನ್ನ, ತನ್ನ ಕನಸು, ಕಲ್ಪನೆ, ಕನವರಿಕೆ, ಆಕಸ್ಮಿಕವಾಗಿ ಎದುರಾಗಬಹುದಾದ ಸವಾಲುಗಳು ಹಾಗೂ ಅದಕ್ಕೆ ಇರುವ ಪರಿಹಾರಗಳು.. . ಇತ್ಯಾದಿ ವಿಷಯವನ್ನೆಲ್ಲ ಹೇಳಿಕೊಳ್ಳಲು ಒಂದು ಆಪ್ತ ಜೀವದ ಅಗತ್ಯ ರಾಬ್ಲಿಂಗ್‌ಗೆ ಇತ್ತು. ಆಗ, ಅವನ ಕಣ್ಮುಂದೆ ನಿಂತ ಚಿತ್ರವೇ ವಾಷಿಂಗ್ಟನ್ ರಾಬ್ಲಿಂಗ್‌ನದ್ದು.
ಈ ವಾಷಿಂಗ್ಟನ್ ಬೇರೆ ಯಾರೂ ಅಲ್ಲ. ಆತ, ರಾಬ್ಲಿಂಗ್‌ನ ಏಕೈಕ ಪುತ್ರ. ರಾಬ್ಲಿಂಗ್ ಒಂದು ಮಹಾಯಾತ್ರೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆಯಲ್ಲಿ ವಾಷಿಂಗ್ಟನ್, ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾದ ಕಡೆಯ ವರ್ಷದಲ್ಲಿದ್ದ. ಅಪ್ಪನ ಮಾತು, ಮನಸು ಎರಡೂ ಅವನಿಗೆ ಅರ್ಥವಾಗುತ್ತಿತ್ತು. ತಂದೆ ಹೇಳಿದ್ದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಂಡ ನಂತರ ಆತ- 'ಅಪ್ಪಾ, ನಿನ್ನ ಬೆಂಬಲಕ್ಕೆ ನಾನಿರುತ್ತೇನೆ. ಧೈರ್ಯವಾಗಿ ಮುನ್ನುಗ್ಗು' ಎಂದ.
ನೋಡ ನೋಡುತ್ತಲೇ, ಅಪಾರ ಉತ್ಸಾಹ ಹಾಗೂ ಭಾರೀ ಪ್ರಚಾರದೊಂದಿಗೆ ತೂಗುಸೇತುವೆಯ ನಿರ್ಮಾಣ ಕಾಮಗಾರಿ ಆರಂಭವಾಯಿತು. ಈ ಸಂದರ್ಭದಲ್ಲಿಯೇ ಮ್ಯಾನ್‌ಹಟನ್ ನಗರದ ಮೀನುಗಾರರು ಪ್ರತಿಭಟನೆ ಆರಂಭಿಸಿದರು. ತೂಗುಸೇತುವೆಯ ನಿರ್ಮಾಣದಿಂದ ತಮ್ಮ ಮೂಲ ಆದಾಯಕ್ಕೆ ಹೊಡೆತ ಬೀಳುತ್ತದೆ. ಹಾಗಾಗಿ ಬಿಟ್ಟರೆ, ತಾವು ಬದುಕುವುದಕ್ಕೇ ಕಷ್ಟವಾಗುತ್ತದೆ ಎಂಬ ವಾದ ಅವರದಿತ್ತು. ತಕ್ಷಣವೇ ಆ ಜನರ ಮುಂದೆ ಹೋಗಿ ನಿಂತ ರಾಬ್ಲಿಂಗ್, ತನ್ನದು ಜನೋಪಯೋಗಿ ಕೆಲಸವೇ ಹೊರತು ಜನವಿರೋಧಿ ಯೋಜನೆಯಲ್ಲ ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟ.
ಈ ಮೊದಲೇ ಹೇಳಿದಂತೆ, ನ್ಯೂಯಾರ್ಕ್ ಮತ್ತು ಮ್ಯಾನ್‌ಹಟನ್ ನಗರಗಳ ಮಧ್ಯೆ ಹರಿಯುತ್ತಿದ್ದ ಈಸ್ಟ್ ರಿವರ್‌ನ ಅಗಲವೇ ಎರಡು ಕಿಲೋ ಮೀಟರ್ ಉದ್ದವಿತ್ತಲ್ಲ? ರಾಬ್ಲಿಂಗ್, ಅಷ್ಟೂ ಉದ್ದದ ತೂಗು ಸೇತುವೆ ನಿರ್ಮಿಸಬೇಕಿತ್ತು. ಮೊದಲ ಐದು ತಿಂಗಳ ಕಾಲ ರಾಬ್ಲಿಂಗ್‌ನ ಲೆಕ್ಕಾಚಾರದ ಪ್ರಕಾರವೇ ಎಲ್ಲವೂ ನಡೆಯಿತು. ಆದರೆ, ಆರನೇ ತಿಂಗಳ ಮೊದಲ ವಾರ, ಆಗಬಾರದ್ದು ಆಗಿಹೋಯಿತು.
ಅದು ಮಳೆಗಾಲದ ಸಂದರ್ಭ. ಅವತ್ತು ಸೇತುವೆಯ ಕಾಮಗಾರಿ ಕೆಲಸದ ಪರಿಶೀಲನೆಗೆಂದು ರಾಬ್ಲಿನ್ -ವಾಷಿಂಗ್ಟನ್‌ಗೆ ಇಬ್ಬರೂ ಬಂದಿದ್ದರು. ಅವರು ಅಧಿಕಾರಿಗಳೊಂದಿಗೆ ಮಾತಾಡುತ್ತ ನಿಂತಿದ್ದಾಗಲೇ, ಸೇತುವೆಯ ಒಂದು ಭಾಗ ದಿಢೀರನೆ ಕುಸಿಯಿತು. ಈ ದುರಂತದಲ್ಲಿ ತೀವ್ರವಾಗಿ ಗಾಯಗೊಂಡ ರಾಬ್ಲಿಂಗ್ ಕೆಲವೇ ದಿನಗಳಲ್ಲಿ ಸತ್ತು ಹೋದ. ಈ ಕಡೆ, ವಾಷಿಂಗ್ಟನ್‌ಗೂ ತೀವ್ರ ತರದ ಗಾಯಗಳಾಗಿದ್ದವು. ತಂದೆಯ ಕನಸಿನ ಸೇತುವೆ ದಿಢೀರನೆ ಕುಸಿದಿದ್ದು ಹಾಗೂ ತನ್ನ ಕಣ್ಮುಂದೆಯೇ ತಂದೆ ಸತ್ತು ಹೋದದ್ದನ್ನು ಕಂಡು ವಾಷಿಂಗ್ಟನ್ ಆತಂಕಗೊಂಡ. ನಂತರದ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡು ಸೇತುವೆ ನಿರ್ಮಾಣದ ಕೆಲಸವನ್ನು ಮತ್ತೆ ಆರಂಭಿಸಿದ. ತಂದೆಯ ಕನಸನ್ನು ನನಸು ಮಾಡಬೇಕು ಎಂಬ ಅದಮ್ಯ ಹಂಬಲ ಅವನದಾಗಿತ್ತು. ಮುಂದೆ ನೀರಿನಾಳದಲ್ಲಿ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಉಂಟಾದ ವಾತಾವರಣದ ತೊಂದರೆಯಿಂದಾಗಿ ಅವನ ಆರೋಗ್ಯ ಹದಗೆಟ್ಟಿತು. ಮೆದುಳಿಗೆ ಆಮ್ಲಜನಕ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದ್ದರಿಂದ ಸ್ಟ್ರೋಕ್ ಆಯಿತು. ಮಾತು ನಿಂತು ಹೋಯಿತು. ಕೈ-ಕಾಲುಗಳು ಚಲನೆ ಕಳೆದುಕೊಂಡವು. ಈ ಸಂದರ್ಭದಲ್ಲಿ ವಾಷಿಂಗ್ಟನ್‌ನನ್ನು ಮತ್ತೆ ಮತ್ತೆ ಪರೀಕ್ಷಿಸಿದ ವೈದ್ಯರು, ಕಡೆಗೆ ಅವನ ಹೆಂಡತಿ ಎಮಿಲಿಯನ್ನು ಕರೆದು ಹೇಳಿದರು: 'ಮುಂದಿನ ದಿನಗಳಲ್ಲಿ ಇವರಿಗೆ ಮಾತು ಬರುತ್ತದೋ ಇಲ್ಲವೋ ಹೇಳಲಾಗುವುದಿಲ್ಲ. ಬಹುಶಃ ಸಾಯುವವರೆಗೂ ಇವರು ಇದೇ ಸ್ಥಿತಿಯಲ್ಲಿ ಇರುತ್ತಾರೆ ಅನಿಸುತ್ತೆ. ಹುಷಾರಾಗಿ ನೋಡಿಕೊಳ್ಳಿ...'
ಈ ಘಟನೆಯ ನಂತರ ಅಮೆರಿಕದ ಜನ ತಲೆಗೊಂದು ಮಾತಾಡಿದರು. ಕೆಲವರು, ಸೇತುವೆ ನಿರ್ಮಾಣದ ಪ್ಲಾನ್ ಸರಿಯಿಲ್ಲ ಅಂದರು. ಕೆಲವರು, ಕಳಪೆ ಗುಣಮಟ್ಟದ ಕಾಮಗಾರಿಯಿಂದ ಹೀಗೆಲ್ಲಾ ಅನಾಹುತವಾಗಿದೆ ಎಂದರು. ಮತ್ತೊಂದಷ್ಟು ಜನ-ಇದೆಲ್ಲಾ ದೇವರ ಶಾಪ ಎಂದರು. ಇನ್ನು ಕೆಲವರು- ಇದೆಲ್ಲಾ ಭೂತದ ಕಾಟ ಎಂದು ಹುಯಿಲೆಬ್ಬಿಸಿದರು. ಈ ವೇಳೆಗಾಗಲೇ ಸೇತುವೆ ನಿರ್ಮಾಣದ ಕೆಲಸ ಅರ್ಧದಷ್ಟು ಮುಗಿದಿತ್ತು. ಹಾಗಾಗಿ ಅದನ್ನು ಅರ್ಧಕ್ಕೆ ನಿಲ್ಲಿಸುವಂತೆಯೂ ಇರಲಿಲ್ಲ. ಆದರೆ, ಈ ಮಹಾ ಯೋಜನೆಯನ್ನು ಕೈಗೆತ್ತಿಕೊಳ್ಳಲು ಯಾರೊಬ್ಬರೂ ಮುಂದೆ ಬರಲಿಲ್ಲ.
ಪರಿಸ್ಥಿತಿ ಹೀಗಿರುವಾಗಲೇ, ಮ್ಯಾನ್‌ಹಟನ್ ನಗರದ ಒಂದು ಆಸ್ಪತ್ರೆಯಲ್ಲಿ ವಾಷಿಂಗ್ಟನ್ ರಾಬ್ಲಿಂಗ್ ಚಿಕಿತ್ಸೆ ಪಡೆಯುತ್ತಿದ್ದ. ತನ್ನನ್ನು ನೋಡಲು ಬಂದವರೊಂದಿಗೆ, ಅರ್ಧಕ್ಕೇ ನಿಂತು ಹೋದ ಕನಸಿನ ಬಗ್ಗೆ ಹೇಳಿಕೊಳ್ಳಬೇಕೆಂಬ ಆಸೆ ಅವನದಿತ್ತು. ಆದರೆ ಮಾತೇ ಹೊರಡುತ್ತಿರಲಿಲ್ಲ. ಕೈ-ಕಾಲುಗಳ ಚಲನೆಯೂ ಇರಲಿಲ್ಲ. ಇಂಥ ಸಂದರ್ಭದಲ್ಲಿ ಆತ ಕಣ್ಸನ್ನೆಯಿಂದಲೇ ಏನೇನೋ ಹೇಳುತ್ತಿದ್ದ. ಆದರೆ ಅದು ಯಾರಿಗೂ ಅರ್ಥವಾಗುತ್ತಿರಲಿಲ್ಲ.
ಇಂಥ ಸಂದರ್ಭದಲ್ಲಿಯೇ ಪವಾಡ ನಡೆದುಹೋಯಿತು. ಅದೊಂದು ಮುಂಜಾನೆ, ವಾಷಿಂಗ್ಟನ್‌ನ ಕೈಯಲ್ಲಿ ಚಲನೆ ಕಂಡು ಬಂತು. ಈ ವೇಳೆಗೆ, ಗಂಡನನ್ನು ಉಳಿಸಿಕೊಳ್ಳಲೇಬೇಕು ಎಂಬ ಹಠಕ್ಕೆ ಬಿದ್ದಿದ್ದ ಎಮಿಲಿ, ಅವನೊಂದಿಗೆ ಮಾತನಾಡಬೇಕೆಂಬ ಆಸೆಯಿಂದಲೇ 'ಮೂಗರ ಭಾಷೆ' ಕಲಿತಿದ್ದಳು. ಅದೊಂದು ದಿನ, ಸಂಜ್ಞೆಗಳ ಮೂಲಕ ಮಾತನಾಡುತ್ತಿದ್ದಾಗಲೇ ಅವಳ ಕೈ ಹಿಡಿದುಕೊಂಡ ವಾಷಿಂಗ್ಟನ್, ಆಕೆಯ ಹಸ್ತ, ಮುಂಗೈ ಹಾಗೂ ತೋಳಿನ ಮೇಲೆ ಚಿತ್ರ ಬರೆಯುವಂತೆ ಕೈ ಆಡಿಸುತ್ತಾ, ತನ್ನ ಆಸೆಯನ್ನು ಕೋಡ್ ಭಾಷೆಯ ಮೂಲಕವೇ ಹೇಳಿಕೊಂಡ. ಗಂಡ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂದು ಗೊತ್ತಾದ ತಕ್ಷಣ, ಕೋಡ್ ಮೂಲಕ ಸಂಭಾಷಿಸುವ 'ವಿದ್ಯೆ'ಯನ್ನೂ ಎಮಿಲಿ ಕಲಿತುಬಿಟ್ಟಳು. ಮರುದಿನ ತುಂಬ ಸಂಭ್ರಮದಿಂದ ಗಂಡನ ಮುಂದೆ ನಿಂತಾಗ, ಆತನಿಂದ ಸಂಜ್ಞೆಯ ಭಾಷೆಯಲ್ಲಿ ಬಂದ ಮಾತಿದು: 'ನಾನು ಹೇಳಿದ್ದನ್ನೆಲ್ಲ ಅರ್ಥ ಮಾಡಿಕೊಂಡು, ನೋಟ್ಸ್ ಮಾಡಿಕೊಂಡು ಅದನ್ನೇ ಅಧಿಕಾರಿಗಳಿಗೆ ಹೇಳಲು ಸಾಧ್ಯವಾ?'
ಎಮಿಲಿ 'ನೋ' ಅನ್ನಲಿಲ್ಲ. ಖಂಡಿತ ನಿಮ್ಮ ಮಾತು ನಡೆಸಿಕೊಡ್ತೇನೆ ಎಂದು ಕಣ್ಣ ಭಾಷೆಯಲ್ಲೇ ಹೇಳಿದಳು. ಮುಂದೆ ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಸೇರಿಕೊಂಡಳು. ಕೋರ್ಸ್ ಮುಗಿಸುವ ಹೊತ್ತಿಗೆ, ಸೇತುವೆ ನಿರ್ಮಾಣದ ಒಳಗುಟ್ಟು ಹಾಗೂ ಅಲ್ಲಿ ಬಳಕೆಯಾಗುವ ತಂತ್ರಜ್ಞಾನದ ಬಗ್ಗೆ ಅವಳಿಗೆ ಪ್ರತಿಯೊಂದು ಸೂಕ್ಷ್ಮವೂ ಅರ್ಥವಾಗಿ ಹೋಗಿತ್ತು.
1874ರಲ್ಲಿ ಎಮಿಲಿಯ ಮುಂದಾಳತ್ವದಲ್ಲಿ ಮಹಾ ಸೇತುವೆಯ ನಿರ್ಮಾಣ ಕಾರ್ಯ ಮತ್ತೆ ಶುರುವಾಯಿತು. ಆಸ್ಪತ್ರೆಯ ಬೆಡ್‌ನಲ್ಲಿ ಅಂಗಾತ ಮಲಗಿಕೊಂಡೇ ವಾಷಿಂಗ್ಟನ್ ದಿನವೂ ಕಾಮಗಾರಿ ಕೆಲಸ ಹೇಗೆ ನಡೆಯಬೇಕು ಎಂಬುದನ್ನು ಸಂಜ್ಞೆಯ ಭಾಷೆಯಲ್ಲಿ ತಿಳಿಸುತ್ತಿದ್ದ. ಎಮಿಲಿ ಅದನ್ನು ತನ್ನ ಕೈ ಕೆಳಗಿನ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳಿಗೆ ದಾಟಿಸುತ್ತಿದ್ದಳು. ಹೀಗೆ ಶುರುವಾದ ಕೆಲಸ, ಸತತ 11 ವರ್ಷ ನಡೆದು ಕಡೆಗೂ ಮುಕ್ತಾಯವಾಯಿತು. ರಾಬ್ಲಿಂಗ್ ಕಂಡಿದ್ದ ಕನಸು, ಅವನ ಸೊಸೆಯ ಮೂಲಕ ನನಸಾಗಿತ್ತು. ಈ ಸ್ಮರಣೀಯ ಸಂದರ್ಭಕ್ಕೆ ಸಾಕ್ಷಿಯಾಗಲು ನ್ಯೂಯಾರ್ಕ್ ಹಾಗೂ ಮ್ಯಾನ್‌ಹಟನ್ ನಗರದ ಮೇಯರ್‌ಗಳು ಬಂದಿದ್ದರು. ಸೇತುವೆಯ ಮೇಲೆ ನ್ಯೂಯಾರ್ಕ್‌ನಿಂದ ಮ್ಯಾನ್‌ಹಟನ್ ಸಿಟಿ ತಲುಪುವ ಮೊದಲ ಅವಕಾಶವನ್ನು ಎಮಿಲಿಗೇ ನೀಡಲಾಯಿತು. ಆಕೆ ಯಶಸ್ವಿಯಾಗಿ ಗಮ್ಯ ತಲುಪಿದ ನಂತರ, ಒಂದೇ ದಿನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ವ್ಯಾನ್, ಕಾರು, ಬಸ್ಸು ಹಾಗೂ ಬೈಕ್‌ಗಳಲ್ಲಿ ಪ್ರಯಾಣ ಮಾಡಿ ಖುಷಿಪಟ್ಟರು.
ನನನ
ಕಥೆ ಇಲ್ಲಿಗೇ ಮುಗಿಯಲಿಲ್ಲ. ಉದ್ಘಾಟನೆಯಾದ ಆರೇ ದಿನಗಳಲ್ಲಿ ಈ ಮಹಾಸೇತುವೆಯ ಒಂದು ಭಾಗ ಮತ್ತೆ ಕುಸಿಯಿತು. ಪರಿಣಾಮವಾಗಿ ಟೀಕೆ, ಅವಹೇಳನ, ಕೊಂಕುಮಾತು, ಬೆದರಿಕೆಗಳು ಎಮಿಲಿಯ ಬೆನ್ನು ಬಿದ್ದವು. ಆಕೆ ಇದಕ್ಕೆಲ್ಲಾ ಹೆದರಲಿಲ್ಲ. ಎಂಜಿನಿಯರ್‌ಗಳು ಹಾಗೂ ಕಾರ್ಮಿಕರೊಂದಿಗೆ ನಡೆದು ಹೋಗಿ, ನಾಲ್ಕೇ ದಿನಗಳಲ್ಲಿ ಕುಸಿದು ಬಿದ್ದಿದ್ದ ಭಾಗವನ್ನು ರಿಪೇರಿ ಮಾಡಿಸಿಬಿಟ್ಟಳು. ಈ ಬಾರಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿದ ಅಮೆರಿಕ ಸರ್ಕಾರ ಸೇತುವೆಯ ಗಟ್ಟಿತನದ ಬಗ್ಗೆ ಪರೀಕ್ಷೆ ಮಾಡಲು ನಿರ್ಧರಿಸಿತು. ಅದರಂತೆ ಸರ್ಕಸ್ ಕಂಪನಿಯಿಂದ 21 ಆನೆಗಳನ್ನು ತರಿಸಿ, ಅವುಗಳನ್ನು ಏಕಕಾಲಕ್ಕೆ ಸೇತುವೆಯ ಈ ತುದಿಯಿಂದ ಆ ತುದಿಯವರೆಗೂ ಓಡಿಸಿ ನೋಡಿತು. ಏನೂ ತೊಂದರೆಯಿಲ್ಲ ಎಂದು ಎರಡೆರಡು ಬಾರಿ ಗ್ಯಾರಂಟಿ ಮಾಡಿಕೊಂಡಿತು. ನಂತರ, 1915ರಲ್ಲಿ ಈ ಮಹಾಸೇತುವೆಗೆ ಬ್ರೂಕ್‌ಲೈನ್ ಬ್ರಿಡ್ಜ್ ಎಂದು ಹೆಸರಿಡಲಾಯಿತು.
ರಾಬ್ಲಿಂಗ್‌ನ ಕನಸು, ವಾಷಿಂಗ್ಟನ್‌ನ ದೂರದೃಷ್ಟಿ ಹಾಗೂ ಎಮಿಲಿಯ ತ್ಯಾಗದ ಫಲವಾಗಿ ಈಗಲೂ ಗಟ್ಟಿಮುಟ್ಟಾಗಿ ನಿಂತಿದೆ ಬ್ರೂಕ್‌ಲೈನ್ ಬ್ರಿಡ್ಜ್. ಅಮೆರಿಕ ಸರ್ಕಾರ, ಈ ಸೇತುವೆಯನ್ನು ರಾಷ್ಟ್ರೀಯ ಐತಿಹಾಸಿಕ ಸ್ಮಾರಕ ಎಂದು ಘೋಷಿಸಿದೆ. ಈ ಸೇತುವೆಯ ಮೇಲೆ ಓಡಾಡದಿದ್ದರೆ ಏನನ್ನೋ ಮಿಸ್ ಮಾಡಿಕೊಂಡ ಭಾವ ನಮ್ಮನ್ನು ಕಾಡುತ್ತದೆ ಎಂದು ಅಮೆರಿಕದ ಜನ ಅಭಿಮಾನದಿಂದ ಹೇಳುತ್ತಾರೆ.
ಈಗ ಹೇಳಿ: ಸಾಧನಗೆ ಅಸಾಧ್ಯವಾದುದು ಈ ಜಗತ್ತಿನಲ್ಲಿ ಏನಾದರೂ ಇದೆಯಾ?
- ಎ.ಆರ್. ಮಣಿಕಾಂತ್
armanikanth@gmail.com