ಕಳೆದ ವಾರ ಬೆಂಗಳೂರಿಗೆ ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥರಾದ ಎಸ್.ವೈ. ಖುರೇಶಿ ಬಂದಿದ್ದರು. ಅವರ ಜತೆ ಕೆಲಕಾಲ ಕಳೆಯುವ ಅವಕಾಶ ಸಿಕ್ಕಿತ್ತು. ಇತ್ತೀಚೆಗೆ ತಾವು ಬರೆದ ಪುಸ್ತಕದ ಬಗ್ಗೆ ಅವರು ಮಾತಾಡಿದರು. ಕುತೂಹಲದಿಂದ ಅವರು ಬರೆದ An Undocumented Wonder: The Great Indian Election ಎಂಬ ಪುಸ್ತಕವನ್ನು ಅಂದೇ ಖರೀದಿಸಿ ಓದಲಾರಂಭಿಸಿದೆ. ಚುನಾವಣಾ ಆಯೋಗದ ಬಗ್ಗೆ, ನಮ್ಮ ವ್ಯವಸ್ಥೆ ಬಗ್ಗೆ, ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಅತೀವ ಹೆಮ್ಮೆ ಅಭಿಮಾನ ಮೂಡಿತು.
ನೀವು ಮೂರ್ನಾಲ್ಕು ಸಾವಿರ ಜನರನ್ನು ಸೇರಿಸಿ ಮನೆ ಕಾರ್ಯಕ್ರಮ ಮಾಡಬಹುದು. ಹತ್ತಾರು ಸಾವಿರ ಜನರನ್ನು ಸೇರಿಸಿ ಊರಿನ ಜಾತ್ರೆಯನ್ನೋ ಸಾರ್ವಜನಿಕ ಕಾರ್ಯಕ್ರಮವನ್ನೋ ಏರ್ಪಡಿಸಬಹುದು ಅಥವಾ ಒಂದೆರಡು ಲಕ್ಷ ಜನರನ್ನು ಸೇರಿಸಿ ಚುನಾವಣಾ ರ್ಯಾಲಿಯನ್ನು ಸಂಘಟಿಸಬಹುದು. ಅದನ್ನೇ 'ಮಹಾನ್ ಸಾಧನೆ'ಯೆಂದು ಬೀಗಬಹುದು. ಆದರೆ ಒಂದು ನೂರ ಇಪ್ಪತ್ತೈದು ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಸುಮಾರು ಎಂಬತ್ತೈದು ಕೋಟಿ ಮತದಾರರಿಗೆ ಮತ ಹಾಕಲು ಅವಕಾಶ ಮಾಡಿಕೊಟ್ಟು, ಅವರನ್ನು ಮತಗಟ್ಟೆಗೆ ಕರೆತಂದು, ಇಡೀ ಚುನಾವಣೆಯನ್ನು ಅತ್ಯಂತ ದಕ್ಷತೆಯಿಂದ, ಶಾಂತಿಯುತವಾಗಿ ನಡೆಸುವುದಿದೆಯಲ್ಲ Hats off to Election Commission!
ಇಡೀ ವಿಶ್ವದಲ್ಲಿ ಇದಕ್ಕಿಂತ ದೊಡ್ಡದಾದ, ಬೃಹತ್ exercise ಮತ್ತೊಂದಿಲ್ಲ. ಭಾರತದಂಥ ದೇಶದಲ್ಲಿ ಚುನಾವಣೆಯನ್ನೂ ಅಚ್ಚುಕಟ್ಟಾಗಿ ನಡೆಸಿದವನು ಜಗತ್ತಿನಲ್ಲಿ ಯಾವುದೇ ಕೆಲಸವನ್ನಾದರೂ ಮಾಡಬಹುದು. ಇದರ ಮುಂದೆ ಅದೆಂಥ ಕೆಲಸವೇ ಇರಲಿ ಅದು ಚಿಕ್ಕದೇ. ಒಂದು ಸೂಚನೆ ಅಥವಾ ಆದೇಶವನ್ನು ದೇಶಕ್ಕೆ ದೇಶವೇ ಪಾಲಿಸುವುದಿದೆಯಲ್ಲ, ಅದೇನು ಸಣ್ಣ ಮಾತಲ್ಲ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ಫಲಿತಾಂಶ ಪ್ರಕಟಿಸಿ, ಗೆದ್ದ ಅಭ್ಯರ್ಥಿಗೆ ಸರ್ಟಿಫಿಕೇಟ್ ಕೊಡುವ ತನಕ, ಆನಂತರ ಚುನಾವಣಾ ಸಂಬಂಧಿ ತಕರಾರುಗಳನ್ನು ಇತ್ಯರ್ಥಪಡಿಸುವ ತನಕ ಚುನಾವಣಾ ಆಯೋಗ ನಿರ್ವಹಿಸುವ ಕೆಲಸ-ಕಾರ್ಯಗಳು ಅಕ್ಷರಶಃ 'ಗೌರಿಶಂಕರ ಶಿಖರ'ಕ್ಕೆ ಸಮ! ಒಂದು ದಿನ ನಡೆಯುವ ಚುನಾವಣೆ ಹಿಂದೆ ಮೂರು ವರ್ಷಗಳ ಸತತ ಚಿಂತನೆ, ಯೋಚನೆ, ಅನುಷ್ಠಾನ, ಸಿದ್ಧತೆಯಿರುತ್ತದೆ. ಅದು ಏಕಾಏಕಿ ಆಗುವಂಥದ್ದಲ್ಲ. ಚುನಾವಣೆ ಘೋಷಣೆಯಾದರೆ ಸಾಕು, ಇಡೀ ದೇಶ ಆಯೋಗದ ಮಾರ್ಗದರ್ಶಿ ಸೂತ್ರದಂತೆ ನಡೆಯುತ್ತದೆ. ನೀತಿ-ಸಂಹಿತೆ ಎಂಬ ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಮುಖ್ಯಮಂತ್ರಿಯೇ ಇರಲಿ, ಪ್ರಧಾನಿಯೇ ಇರಲಿ, ಎಲ್ಲರೂ ಈ ನೀತಿ ಸಂಹಿತೆಗೆ ತಲೆಬಾಗಲೇಬೇಕು. ಚುನಾವಣಾ ಆಯೋಗವೇ ಸಾರ್ವಭೌಮ. ಒಂದು ರೀತಿಯಲ್ಲಿ ಆಯೋಗ ಚುನಾವಣೆಯೊಂದನ್ನಷ್ಟೇ ಅಲ್ಲ. ಆ ಒಂದು-ಒಂದೂವರೆ ತಿಂಗಳವರೆಗೆ ಇಡೀ ದೇಶಕ್ಕೇ ಮಾರ್ಗದರ್ಶನ ಮಾಡುತ್ತದೆ.
ಈ ಕೃತಿಯಲ್ಲಿ ಖುರೇಶಿಯವರು ಆರಂಭದಲ್ಲಿ 2009ರ ಜೂನ್ 2ರ ಸಂಚಿಕೆಯಲ್ಲಿ 'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆ ತನ್ನ ವರದಿಗಾರ ವಿ. ಮಿಚೆಲ್ ಬರೆದ ವಿಸ್ತೃತ ವರದಿಯನ್ನು ಪ್ರಸ್ತಾಪಿಸಿದ್ದಾರೆ.
'ಭಾರತದಲ್ಲಿ ಲೋಕಸಭಾ ಚುನಾವಣೆಯೆಂದರೆ ಅದು the greatest Show on Earth. ಸುಮಾರು ಎಂಟು ನೂರು ದಶಲಕ್ಷ ಜನ ಮತ ಹಾಕುವುದಿದೆಯಲ್ಲ, ಅದು ಮಾನವತೆಯೇ ಎದ್ದು ಬಂದಂತೆ. ಇದಕ್ಕಿಂತ ದೊಡ್ಡ ಕಸರತ್ತು ಮತ್ತೊಂದಿಲ್ಲ.
ಈ ವರದಿಯಲ್ಲಿ ಮಿಚೆಲ್ ಅವರು ಭಾರತದ ಭವ್ಯತೆ, ವೈಶಾಲ್ಯದ ಪರಿಚಯ ಮಾಡಿಸುತ್ತಾರೆ. ಭಾರತದ ಚುನಾವಣೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ಮೊದಲು ಭಾರತವನ್ನು ಅರ್ಥಮಾಡಿಕೊಳ್ಳಬೇಕು ಅಂತಾರೆ. ಆಗಲೇ ಚುನಾವಣೆಯ ಆಗಾಧತೆ, ಮಜಕೂರು ಅರ್ಥವಾಗುತ್ತದೆಂದು ಹೇಳುತ್ತಾರೆ-'ಜಗತ್ತಿನ ಪ್ರಮುಖ ಧರ್ಮಗಳ ಪೈಕಿ ನಾಲ್ಕು ಧರ್ಮಗಳಾದ ಹಿಂದು, ಬೌದ್ಧ, ಜೈನ ಹಾಗೂ ಸಿಖ್ ಭಾರತದಲ್ಲಿಯೇ ಜನ್ಮತಾಳಿದ್ದು. ಜಗತ್ತಿನಲ್ಲಿ ಮುಸ್ಲಿಮರ ಜನಸಂಖ್ಯೆ ಅತಿ ಹೆಚ್ಚಿರುವ ದೇಶಗಳ ಪೈಕಿ ಭಾರತ ಎರಡನೆಯದು. ಕಳೆದ ಎರಡು ಸಾವಿರ ವರ್ಷಗಳಿಂದ ಕ್ರಿಶ್ಚಿಯಾನಿಟಿ ಸಹ ಭಾರತದಲ್ಲಿ ಅಸ್ತಿತ್ವದಲ್ಲಿದೆ. ರೋಮನ್ರು ತಮ್ಮ ಎರಡನೆಯ ದೇಗುಲವನ್ನು ನಾಶಪಡಿಸುವುದಕ್ಕಿಂತ ಮೊದಲೇ ಭಾರತದಲ್ಲಿ ಯಹೂದಿಯರ ಸಮುದಾಯ ಭವನಗಳು, ಕಾಲನಿಗಳು ಇದ್ದವು. ಟಿಬೆಟ್ ಸರ್ಕಾರ ದಲೈಲಾಮ ಅವರನ್ನು ತಾಯ್ನಾಡಿನಿಂದ ಹೊರಹಾಕಿದರೂ ಭಾರತ ಅವರಿಗೆ ಆಶ್ರಯ ಕೊಟ್ಟಿದೆ. ಅದೇ ರೀತಿ ಪರ್ಶಿಯಾದಿಂದ ಜೊರಾಸ್ಟ್ರಿಯನ್ರನ್ನು ಓಡಿಸಿದಾಗ ಅವರು ಬಂದು ನೆಲೆ ಕಂಡುಕೊಂಡಿದ್ದು ಭಾರತದಲ್ಲಿ. ಆರ್ಮೇನಿಯನ್ರಿಗೆ, ಸಿರಿಯನ್ರಿಗೆ ಸಹ ಇಂಥದೇ ಸ್ಥಿತಿ ಬಂದೊದಗಿದಾಗ ಭಾರತ ಅವರಿಗೆ ಗೌರವದಿಂದ ಆಶ್ರಯ ಕೊಟ್ಟಿದೆ. ಭಾರತ ಅದೆಂಥ ಸೆಕ್ಯುಲರ್ ದೇಶ ಅಂದ್ರೆ ಮೂವರು ಮುಸ್ಲಿಮರು ಈ ದೇಶದ ರಾಷ್ಟ್ರಪತಿಗಳಾಗಿದ್ದರು. ಅಲ್ಪಸಂಖ್ಯಾತ ಸಿಖ್ ಕೋಮಿನ ಡಾ. ಮನಮೋಹನಸಿಂಗ್ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದರು. ಹತ್ತು ವರ್ಷಗಳ ಕಾಲ ದೇಶವನ್ನು ಆಳಿದ ಪಕ್ಷದ ಅಧ್ಯಕ್ಷೆ ಇಟಲಿಯ ಕ್ಯಾಥೋಲಿಕ್ ಕ್ರಿಶ್ಚಿಯನ್ ಮಹಿಳೆ! ಮೂವರು ಮುಸ್ಲಿಂ ರಾಷ್ಟ್ರಪತಿಗಳ ಪೈಕಿ ಒಬ್ಬರು ರಾಕೆಟ್ ವಿಜ್ಞಾನಿ. ಭಾರತ ಅದೆಂಥ booming economy ಹೊಂದಿರುವ ದೇಶವೆಂದರೆ ಪ್ರತಿವರ್ಷ ನಲವತ್ತು ದಶಲಕ್ಷ ಮಂದಿ ಬಡತನದಿಂದ ಮೇಲಕ್ಕೇರಿ ಸುಧಾರಣೆ ಕಾಣುತ್ತಿದ್ದಾರೆ. 2025ರ ಹೊತ್ತಿಗೆ ಭಾರತದ ಮಧ್ಯಮವರ್ಗ ಅಮೆರಿಕದ ಇಡೀ ಜನಸಂಖ್ಯೆಯನ್ನು ಮೀರಲಿದೆ. ಕಷ್ಟ-ಕೋಟಲೆ, ಸವಾಲಿನ ನಡುವೆಯೂ ಭಾರತ ಜಗತ್ತಿನಲ್ಲಿಯೇ ದೈತ್ಯ ಹಾಗೂ ಪ್ರಭಾವಿ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಜಗತ್ತಿನ ಹತ್ತು ಮತದಾರರ ಪೈಕಿ ಒಬ್ಬ ಮತದಾರ ಭಾರತದಲ್ಲಿದ್ದಾನೆ. ಇಂಥ ವೈಶಿಷ್ಟ್ಯ, ಗುಣ, ಗಾತ್ರ, ಲಕ್ಷಣ ಹೊಂದಿರುವ ದೇಶ ಮತ್ತೊಂದಿಲ್ಲ. ಹಾಗೆ ನೋಡಿದರೆ ಇಡೀ ವಿಶ್ವ ಭಾರತದಿಂದ ಸ್ಫೂರ್ತಿ, ಪ್ರೇರಣೆ ಪಡೆಯಬೇಕು.'
ಸುಮಾರು 120 ವಿಶೇಷ ರೈಲಿನ 3060 ಬೋಗಿಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಸೈನಿಕರು, ಅರೆಸೈನಿಕರು, ಪೊಲೀಸರು, ಭದ್ರತಾ ಸಿಬ್ಬಂದಿ, ಚುನಾವಣಾ ಅಧಿಕಾರಿಗಳು, ಲಕ್ಷಾಂತರ ಬಸ್ಸುಗಳಲ್ಲಿ ಚುನಾವಣೆ ಸಿಬ್ಬಂದಿ, ಹನ್ನೊಂದು ದಶಲಕ್ಷ ಜನ ಒಂದು ಗಡಿಯಿಂದ ಮತ್ತೊಂದು ಗಡಿಭಾಗದತ್ತ ಹೊರಟರೆ ಭಾರತ ಯುದ್ಧಕ್ಕೆ ಸನ್ನದ್ಧವಾಗಿದೆಯೆಂದು ಭಾವಿಸಬಹುದು. ನಿಜಕ್ಕೂ ಇದೊಂದು ರೀತಿಯಲ್ಲಿ ಯುದ್ಧವೇ. ಆದರೆ ಇದು ದೇಶದ ಪ್ರತಿಯೊಬ್ಬ ಮತದಾನದ ಹಕ್ಕನ್ನು ಪಡೆದ ನಾಗರಿಕನೂ ಪಾಲ್ಗೊಳ್ಳುವ ಬದಲಾವಣೆ ಬಯಸಿ, ಹೊಸ ವ್ಯವಸ್ಥೆ, ಸುಧಾರಣೆ ನಿರೀಕ್ಷಿಸಿ ನಡೆಸುವ ಶಾಂತಿಯುತ ಯುದ್ಧ. ಸುಮಾರು 1200 ದಶಲಕ್ಷ ಪ್ರಜೆಗಳು ಹಾಗೂ 864 ದಶಲಕ್ಷ ಮತದಾರರು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಸುವ ಯುದ್ಧ. ಹಾಗೆ ನೋಡಿದರೆ ಇಷ್ಟು ಮಂದಿ ಪಾಲ್ಗೊಳ್ಳುವ 'ಯುದ್ಧ' ಜಗತ್ತಿನ ಇತಿಹಾಸದಲ್ಲಿಯೇ ನಡೆದದ್ದಿಲ್ಲ. ಆದರೆ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ -ಒಮ್ಮೊಮ್ಮೆ ಅದಕ್ಕೂ ಮೊದಲು- ನಡೆಯುತ್ತದೆ. ಇದರ ಅಗಾಧತೆಯನ್ನು ಬಣ್ಣಿಸುವುದಕ್ಕಿಂತ ನೋಡಿಯೇ ಕಣ್ಣೊಳಗೆ ತುಂಬಿಕೊಳ್ಳಬೇಕು.
ಗೊತ್ತಿರಲಿ, ನಿಮಗೆ ಅಚ್ಚರಿಯೆನಿಸಬಹುದು, ಭಾರತದಲ್ಲಿ ಲೋಕಸಭಾ ಚುನಾವಣೆಯಲ್ಲಿನ ಮತದಾರರ ಸಂಖ್ಯೆ ಯುರೋಪ್, ದಕ್ಷಿಣ ಹಾಗೂ ಕೇಂದ್ರ ಅಮೆರಿಕ ಮತ್ತು ಆಸ್ಟ್ರೇಲಿಯಾಗಳ ಜನಸಂಖ್ಯೆಯನ್ನು ಒಟ್ಟಿಗೆ ಸೇರಿಸಿದ್ದಕ್ಕಿಂತ ಹೆಚ್ಚು. 2009ರ ಲೋಕಸಭಾ ಚುನಾವಣೆಯನ್ನು ನೋಡಿ, 'ದಿ ಎಕನಾಮಿಸ್ಟ್' ಪತ್ರಿಕೆ 'ಜಂಬೋ ಇಲೆಕ್ಷನ್' ಎಂದು ಕರೆದಿತ್ತು. ಆಗ 543 ಲೋಕಸಭಾ ಕ್ಷೇತ್ರಗಳಲ್ಲಿ 300 ರಾಜಕೀಯ ಪಕ್ಷಗಳ 4600 ಅಭ್ಯರ್ಥಿಗಳು ಸ್ಪರ್ಧಿಸಿದ್ದರು!
ಮಳೆಯಿರಲಿ, ಬಿಸಿಲಿರಲಿ, ಚಳಿಯಿರಲಿ, ಕಾಡಿರಲಿ, ಗುಡ್ಡವಿರಲಿ, ಪರ್ವತ ಶ್ರೇಣಿಗಳಿರಲಿ, ಚುನಾವಣಾ ಆಯೋಗಕ್ಕೆ ಅವ್ಯಾವವೂ ಲೆಕ್ಕಕ್ಕಿಲ್ಲ. ಲಡಖ್ನಲ್ಲಿ ಬರೀ ಮೂವತ್ತೇಳು ಮತದಾರರಿಗಾಗಿ ಚುನಾವಣಾ ಆಯೋಗ ಮತಗಟ್ಟೆಯನ್ನು ಸ್ಥಾಪಿಸಿತು. ಅದಕ್ಕಾಗಿ ಚುನಾವಣೆ ಸಿಬ್ಬಂದಿ ಹಿಮಗಡ್ಡೆಗಳ ಮೇಲೆ 45 ಕಿಮಿ ನಡೆದು ಹೋದರು. ಕೇರಳದಲ್ಲಿ ಕೇವಲ ಇಬ್ಬರು ಮತದಾರರಿಗಾಗಿ ಹನ್ನೆರಡು ಜನರಿರುವ ಮತಗಟ್ಟೆಯನ್ನು ತೆರೆಯಲಾಯಿತು. ಅದಕ್ಕಾಗಿ ಚುನಾವಣಾ ಸಿಬ್ಬಂದಿ ಎಂಟು ಕಿಮಿ ಕಾಲ್ನಡಿಗೆಯಲ್ಲಿ ತೆರಳಿದರು. ನಾಗರಿಕತೆ ಆರಂಭವಾದಂದಿನಿಂದ ಯಾವ್ಯಾವ ರೀತಿಯ ಸಾರಿಗೆ ಪ್ರಕಾರಗಳಿವೆಯೋ ಅವೆಲ್ಲವನ್ನೂ ಇಂದಿಗೂ ಬಳಸಿಕೊಳ್ಳಲಾಗುತ್ತದೆ. ಆನೆ, ಒಂಟೆ, ಕುದುರೆ, ಕತ್ತೆ, ಕೋಣ, ದೋಣಿ, ಸೈಕಲ್, ಬೈಕ್, ಕಾರು, ಲಾರಿ, ಬಸ್ಸು, ಜೀಪು, ಹೆಲಿಕಾಪ್ಟರ್, ಟ್ರೇನು, ವಿಮಾನಗಳ ಮೂಲಕ ಮತದಾರರನ್ನು ತಲುಪುವ ಎಲ್ಲ ಪ್ರಯತ್ನವನ್ನು ಮಾಡುತ್ತದೆ. ಮರುಭೂಮಿ, ಪರ್ವತ, ಕಣಿವೆ, ಪ್ರಪಾತ, ಗುಡ್ಡ, ಬೆಟ್ಟ ಎಲ್ಲಾದರೂ ಸೈ, ಮತಗಟ್ಟೆ ತೆರೆದು ಮತದಾನಕ್ಕೆ ಅನುವು ಮಾಡಿಕೊಡುತ್ತದೆ. ಇದಕ್ಕಾಗಿ ಆಯೋಗ ಒಂದು ದಿನದ ಮತದಾನಕ್ಕಾಗಿ ಒಂದು ವರ್ಷದ ಸಿದ್ಧತೆ ನಡೆಸುತ್ತದೆ. ಒಬ್ಬನೇ ಒಬ್ಬ ಪ್ರಜೆಯೂ ಮತದಾನದಿಂದ ವಿಮುಖನಾಗಬಾರದೆಂಬುದು ಆಶಯ. ಅದಕ್ಕಾಗಿ ಎಂಥ ಕ್ರಮಕೈಗೊಳ್ಳಲು ಸಹ ತಯಾರು.
ಪ್ರಜಾಪ್ರಭುತ್ವ ಹಾಗೂ ಚುನಾವಣೆಗಳೆಂದರೆ ಸಯಾಮಿ ಅವಳಿಗಳಿದ್ದಂತೆ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ಅವೆರಡನ್ನು ಬೇರ್ಪಡಿಸಲಾಗದು. ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಕರೆಯಿಸಿಕೊಳ್ಳುವ ಭಾರತದ ಚುನಾವಣೆಯೂ ಅಷ್ಟೇ ದೊಡ್ಡದು. ಇದನ್ನು ಬೇರೊಂದು ವ್ಯವಸ್ಥೆಗೆ ಹೋಲಿಸೋಣ ಅಂದ್ರೆ ಅಂಥ ವ್ಯವಸ್ಥೆ, mechanism ಇಲ್ಲವೇ ಇಲ್ಲ. ಅದಕ್ಕೆ ಅದೇ ಹೋಲಿಕೆ. ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ನಮಗಿಂತ ಹೆಚ್ಚಿರುವ ಚೀನಾಕ್ಕೆ ಚುನಾವಣೆಯ ತಲೆನೋವು ಇಲ್ಲವೇ ಇಲ್ಲ. 1950ರಿಂದ ಒಂದೇ ಪಕ್ಷ ಅಧಿಕಾರದಲ್ಲಿದೆ. ಅಲ್ಲಿ ಒಂದು ರಾಜಕೀಯ ಪಕ್ಷದ ಸ್ಥಳೀಯ ಘಟಕಗಳೇ ಚುನಾವಣೆ ಮಾಡಿ ಮುಗಿಸಿಬಿಡುತ್ತದೆ. ಇನ್ನು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಹೇಗಿದೆ ಹಾಗೂ ಚುನಾವಣೆ ಯಾವ ರೀತಿ ನಡೆಯುತ್ತದೆಂಬುದನ್ನು ವಿವರಿಸಬೇಕಿಲ್ಲ. ಅಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯದೇ ಅವೆಷ್ಟೋ ವರ್ಷಗಳಾದವು.
1951ರಲ್ಲಿ ಮೊದಲ ಲೋಕಸಭಾ ಚುನಾವಣೆ ನಡೆದಾಗ 489 ಕ್ಷೇತ್ರಗಳಿದ್ದವು. ಆ ಚುನಾವಣೆಯಲ್ಲಿ 14 ರಾಷ್ಟ್ರೀಯ ಪಕ್ಷಗಳ ಹಾಗೂ 39 ಪ್ರಾದೇಶಿಕ ಪಕ್ಷಗಳ ಸುಮಾರು 2833 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸೋಜಿಗದ ಅಂಶವೆಂದರೆ, ಆ ಚುನಾವಣೆಯಲ್ಲಿ ಒಬ್ಬಳೇ ಒಬ್ಬಳು ಮಹಿಳಾ ಅಭ್ಯರ್ಥಿಯೂ ಸ್ಪರ್ಧಿಸಿರಲಿಲ್ಲ. ಅಲ್ಲದೇ ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ಕ್ಷೇತ್ರಗಳನ್ನು ಮೀಸಲಿಟ್ಟಿರಲಿಲ್ಲ. ಪರಿಶಿಷ್ಟ ವರ್ಗದವರಿಗೆ ಮಾತ್ರ ಎಂಟು ಕ್ಷೇತ್ರಗಳನ್ನು ಮೀಸಲಾಗಿಡಲಾಗಿತ್ತು. ಆ ಚುನಾವಣೆಯಲ್ಲಿ ಶೇ. 61.17 ರಷ್ಟು ಮತದಾನವಾಗಿತ್ತು. ಮೊದಲ ಚುನಾವಣೆಯಲ್ಲಿ 51 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದವು. ಆದರೆ 2009ರಲ್ಲಿ ನಡೆದ ಚುನಾವಣೆಯಲ್ಲಿ ಈ ಪಕ್ಷಗಳ ಸಂಖ್ಯೆ 41ಕ್ಕೆ ಇಳಿದಿತ್ತು. ಅಂದರೆ ಮೊದಲ ಚುನಾವಣೆಯಲ್ಲಿಯೇ ರಾಜಕೀಯ ನಾಯಕರ ಉತ್ಸಾಹ ಎಷ್ಟಿತ್ತು ಎಂಬುದನ್ನು ಊಹಿಸಬಹುದು.
ಮೊದಲ ಚುನಾವಣೆ ನಡೆಯುವ ಸಂದರ್ಭದಲ್ಲಿ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದು ಕೇವಲ ಹತ್ತು ತಿಂಗಳುಗಳಾಗಿದ್ದವು. ಐಪಿಎಸ್ ಅಧಿಕಾರಿಯಾಗಿದ್ದ ಸುಕುಮಾರ್ ಸೇನ್ ಮೊದಲ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡರು. ಅವರು ಅಂದು ಹಾಕಿದ ಬುನಾದಿಯನ್ನು ಇಂದಿಗೂ ಅಲುಗಾಡಿಸಲಾಗುತ್ತಿಲ್ಲ.
ಚುನಾವಣಾ ಆಯೋಗ ಚುನಾವಣಾ ಸಂದರ್ಭದಲ್ಲಿ ಅದೂ ಒಂದೆರಡು ತಿಂಗಳು ಮಾತ್ರ ಹೆಸರು, ಸುದ್ದಿ, ಗದ್ದಲ ಮಾಡಿ ಸುಮ್ಮನಾಗುತ್ತಿತ್ತು. ಅದಾದ ಬಳಿಕ ತನ್ನಿಂದ ತಾನೆ ನೇಪಥ್ಯಕ್ಕೆ ಸರಿದು ಬಿಡುತ್ತಿತ್ತು. ಅದರ ಮುಖ್ಯಸ್ಥರು ಯಾರು, ಅವರ ಹಿನ್ನೆಲೆಯೇನು, ಅವರ ಖದರುಗಳೇನೆಂಬುದು ಸಹ ಗೊತ್ತಾಗುತ್ತಿರಲಿಲ್ಲ. ಆದರೆ ಟಿ.ಎನ್. ಶೇಷನ್ ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕಗೊಂಡ ಬಳಿಕ ಚುನಾವಣಾ ಆಯೋಗ ಎಂಬುದಿದೆ, ಅದಕ್ಕೆ ಈ ಪರಿ ಅಧಿಕಾರವಿದೆ, ಅದು ಮನಸ್ಸು ಮಾಡಿದರೆ ರಾಜಕಾರಣಿಗಳಿಗೆ ಚುನಾವಣಾ ಸಂದರ್ಭದಲ್ಲಿ, ಮೂಗುದಾರ ಹಾಕಿ ನಿಯಂತ್ರಿಸಬಹುದೆಂಬುದನ್ನು ತೋರಿಸಿಕೊಟ್ಟರು. 'ಶೇಷನ್ ಪರಿಣಾಮ' ಅದೆಷ್ಟು ಪರಿಣಾಮಕಾರಿಯಾಗಿತ್ತು ಅಂದ್ರೆ ಅವರು ಗುಟುರು ಹಾಕಿದರೆ ರಾಜಕಾರಣಿಗಳು ಥರಗುಟ್ಟುತ್ತಿದ್ದರು. ಜಾತ್ರೆಯಂತಿದ್ದ ಚುನಾವಣೆಯನ್ನು ಶಿಸ್ತಿನ, ಅಚ್ಚುಕಟ್ಟಾದ ಪ್ರಜಾತಾಂತ್ರಿಕ ಕ್ರಿಯೆಯನ್ನಾಗಿ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟವರು ಶೇಷನ್. ಭಾರತದಲ್ಲಿ ಚುನಾವಣೆ ಎಲ್ಲ ಅಕ್ರಮ, ಅವ್ಯವಹಾರಗಳಿಗೆ ಮೂಲವಾಗಿತ್ತು. ಮತಗಟ್ಟೆ ಲೂಟಿ, ಮತ ಪೆಟ್ಟಿಗೆ ಅಪಹರಣ, ಮತ ಕೇಂದ್ರಗಳ ಮೇಲೆ ದಾಳಿ, ಮತ ಚಲಾಯಿಸಲು ಬರುವವರಿಗೆ ಬೆದರಿಕೆ... ಇವೆಲ್ಲ ಸರ್ವೇ
ಸಾಮಾನ್ಯವಾಗಿತ್ತು. ಚುನಾವಣೆ ಸಂಬಂಧಿ ಗಲಭೆ, ಸುಲಿಗೆ, ಕೊಲೆಗಳು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿದ್ದವು. 1991ರಲ್ಲಿ ಉತ್ತರ ಪ್ರದೇಶದಲ್ಲೊಂದೇ ನೂರಕ್ಕೂ ಹೆಚ್ಚು ಜನರು ಚುನಾವಣೆ ಸಂಬಂಧಿ ಗಲಭೆಯಲ್ಲಿ ಸತ್ತಿದ್ದರು. ಶೇಷನ್ ಈ ಎಲ್ಲ ಅಕ್ರಮ ಅಪಸವ್ಯಗಳಿಗೆ ಪೂರ್ಣ ವಿರಾಮ ಹಾಕಿದರು. 1993ರಲ್ಲಿ ನಡೆದ ಚುನಾವಣೆ ಹಿಂಸಾಚಾರದಿಂದ ಮುಕ್ತವಾಗಿತ್ತು. ಅಧಿಕಾರ ವಹಿಸಿಕೊಂಡ ಒಂದು ವರ್ಷದೊಳಗೆ ಅವರು ಇಡೀ ವ್ಯವಸ್ಥೆಯನ್ನು ಜಾಲಾಡಿಸಿಬಿಟ್ಟರು.
ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಒಂದೇ ಒಂದು ಅಹಿತಕರ ಘಟನೆ ನಡೆಯಲಿಲ್ಲ. ಚುನಾವಣೆ ಪ್ರಚಾರ ಮುಗಿದ ನಂತರ ಮತದಾರರಲ್ಲದವರು ಕ್ಷೇತ್ರದಲ್ಲಿ ಇರಬಾರದೆಂಬ ನಿಯಮದಂತೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಜಾಗ ಖಾಲಿ ಮಾಡುವಂತೆ ಜಿಲ್ಲಾ ಚುನಾವಣೆ ಅಧಿಕಾರಿಗಳು ಹೇಳಿದರು. ರಾಜ್ಯದ ಮುಖ್ಯಮಂತ್ರಿ ದೂಸರಾ ಮಾತಾಡದೇ ಕಾಲ್ಕಿತ್ತರು. ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಹ ಒಬ್ಬ ಸಾಮಾನ್ಯ ಪ್ರಜೆಯೇ.
ಚುನಾವಣೆಯ ಫಲಿತಾಂಶ ಏನೇ ಆಗಲಿ, ರಾಜಕೀಯ ಪಕ್ಷಗಳು ಎಷ್ಟೇ ಸ್ಥಾನಗಳನ್ನು ಗಳಿಸಲಿ, ಕೊನೆಯಲ್ಲಿ ಗೆಲ್ಲುವುದು ಮಾತ್ರ ಚುನಾವಣಾ ಆಯೋಗವೇ!
- ವಿಶ್ವೇಶ್ವರ ಭಟ್
vbhat@me.com