ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸೆಲ್ಯೂಟ್ ಮೇಜರ್!

ಜಮ್ಮು- ಕಾಶ್ಮೀರ ರಾಜಕೀಯ ವಾಗ್ಯುದ್ಧಗಳಿಂದ ಸುದ್ದಿಯಾಯಿತು. ಜಾತ್ಯತೀತವಲ್ಲದ...

Mainashree
Updated On : 30 Apr 2014, 10:11 am

ಜಮ್ಮು- ಕಾಶ್ಮೀರ ರಾಜಕೀಯ ವಾಗ್ಯುದ್ಧಗಳಿಂದ ಸುದ್ದಿಯಾಯಿತು. ಜಾತ್ಯತೀತವಲ್ಲದ ಭಾರತದಲ್ಲಿ ಕಾಶ್ಮೀರ ಉಳಿದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಎಂಬಂಥ ಮಾತುಗಳೂ ಫಾರುಖ್ ಅಬ್ದುಲ್ಲಾ ಅವರಿಂದ ಬಂದದ್ದಾಯಿತು. ಹೀಗೆಲ್ಲ ಸರಿ-ತಪ್ಪುಗಳ ವಿಶ್ಲೇಷಣೆ ನಡೆಯುತ್ತಿರಬೇಕಾದರೆ ಇತ್ತ ಚೆನ್ನೈನಿಂದ ಹೋದ ಯೋಧ ಕಾಶ್ಮೀರದ ನೆಲದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತ ಪ್ರಾಣಾರ್ಪಣೆ ಮಾಡಿದ್ದಾರೆ. ಏಪ್ರಿಲ್ 28ರಂದು ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಅಂಥವರಿಗೆ ಶ್ರದ್ಧಾಂಜಲಿ ಅರ್ಪಿಸುವುದೆಂದರೆ ಈ ದೇಶವನ್ನು ಹಾಗೂ ನಮ್ಮನ್ನು ನಾವು ಗೌರವಿಸಿಕೊಂಡಂತೆ. ರಾಜಕೀಯ ರಾಡಿ ಹುಟ್ಟುಹಾಕಿದ ಸಿನಿಕತೆಯಿಂದಲೂ ಪಾರಾಗುವ ಮಾರ್ಗವೆಂದರೆ ಇಂಥವರನ್ನು ಗೌರವದಿಂದ ನೆನಪಿಸಿಕೊಳ್ಳುವುದು.
ದಕ್ಷಿಣ ಕಾಶ್ಮೀರದ ಶೊಪಿಯಾನ್ ಪ್ರಾಂತ್ಯದಲ್ಲಿ ಅಡಗಿದ್ದ ಉಗ್ರರನ್ನು ಸಂಹರಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಮೇಜರ್ ಮುಕುಂದ್ ವರದರಾಜನ್. 44 ರಾಷ್ಟ್ರೀಯ ರೈಫಲ್ಸ್ ಪಡೆಗೆ ಸೇರಿದ್ದ ಮೇಜರ್ ಮುಕುಂದ್ರ ವಯಸ್ಸಿನ್ನೂ 31 ಅಷ್ಟೆ. ಆ ಕಾರ್ಯಾಚರಣೆಯಲ್ಲಿ ಯೋಧರ ಪಡೆ ಸುತ್ತುವರಿದಿದ್ದ ಮೂವರು ಉಗ್ರರಲ್ಲಿ ಇಬ್ಬರ ಬಗ್ಗೆ ಮುಕುಂದ್ ಒಂದು ವರ್ಷದಿಂದ ಮಾಹಿತಿ ಕಲೆಹಾಕಿದ್ದರು. ಅವರ ಚಲನವಲನಗಳನ್ನು ಅಭ್ಯಸಿಸಿದ್ದರು ಎಂಬ ಮಾಹಿತಿಯನ್ನು ಆ ಕಾರ್ಯಾಚರಣೆ ಮೇಲುಸ್ತುವಾರಿ ವಹಿಸಿದ್ದ ಹಿರಿಯ ಅಧಿಕಾರಿಗಳು ಹೇಳುತ್ತಾರೆ. 'ಈ ಮೂವರು ಉಗ್ರರನ್ನು ಮುಗಿಸಿಯಾದ ಮೇಲೆ ನನಗೆ ಸದ್ಯಕ್ಕೆ ಮತ್ತೇನೂ ಕೆಲಸವಿಲ್ಲ. ಕೆಲಸ ಬಿಡುವ ಕುರಿತೂ ಯೋಚಿಸಬಹುದು' ಎಂದಿದ್ದರಂತೆ ಮುಕುಂದ್. ವಿಧಿಯ ಲೆಕ್ಕಾಚಾರ ಬೇರೆಯೇ ಇತ್ತು. ಕಾರ್ಯಾಚರಣೆಯಲ್ಲಿ ಮೂವರು ಉಗ್ರರೇನೋ ಸತ್ತರು. ಆದರೆ, ಮೇಜರ್ ಮುಕುಂದ್ ವರದರಾಜನ್ ಬಲಿದಾನವೂ ಆಯಿತು. ಚಿಕ್ಕ ಮಗಳು, ಹೆಂಡತಿ, ತಂದೆ-ತಾಯಿ, ಇಬ್ಬರೂ ಸಹೋದರಿಯರನ್ನು ಅಗಲಿದ್ದಾರೆ ಮುಕುಂದ್.
2009ರಲ್ಲಿ ಇಂದು ರೆಬೆಕ್ಕಾ ವರ್ಗೀಸ್ರನ್ನು ಮದುವೆಯಾಗಿದ್ದರು ಮುಕುಂದ್. ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ನ ವ್ಯಾಸಂಗದ ದಿನಗಳಲ್ಲಿ ಒಲಿದ ಗೆಳತಿ. ಬಿಕಾಮ್ ಮುಗಿಸಿ ಅಲ್ಲಿ ಪತ್ರಿಕೋದ್ಯಮದ ಡಿಪ್ಲೊಮೊ ಮಾಡಿದ್ದರು ಮುಕುಂದ್. ಅಪ್ಪ ಎಂಬಿಎ ಮಾಡು ಎನ್ನುತ್ತಿದ್ದಾಗಲೇ ಚೆನ್ನೈನ 'ಆಫಿಸರ್ಸ್ ಟ್ರೇನಿಂಗ್ ಅಕಾಡೆಮಿ' ಸೇರಿಕೊಂಡ ಮುಕುಂದ್ ವರದರಾಜನ್, 2004ರಲ್ಲಿ ಅಲ್ಲಿಂದ ಉತ್ತೀರ್ಣರಾದರು. ವಿಶ್ವಸಂಸ್ಥೆಯ ಮಿಷನ್ನಲ್ಲಿ ಭಾಗವಹಿಸಿ ಲೆಬನಾನ್ನಲ್ಲಿ ಸೇವೆ ಸಲ್ಲಿಸಿ ಬಂದರು. ನಂತರದ ಪೋಸ್ಟಿಂಗ್ ಕಾಶ್ಮೀರದಲ್ಲಿ ಸಿಕ್ಕಿತ್ತು. ಏಪ್ರಿಲ್ 12ರ ತಮ್ಮ ಜನ್ಮದಿನದಂದು ಮನೆಗೆ ಫೋನ್ ಮಾಡಿದ್ದ ಮುಕುಂದ್, 'ಮಗಳ ಆರೋಗ್ಯ ಪರೀಕ್ಷೆಗೆ ಸದ್ಯದಲ್ಲೇ ರಜೆ ಹಾಕಿ ಬರುವೆ. ಇಂದುಗೆ ಹೇಳಬೇಡಿ. ಸರ್ಪ್ರೈಸ್ ಕೊಡೋಣ ಎಂದಿದ್ದರಂತೆ.' ಸರ್ಪ್ರೈಸ್ ಜಾಗದಲ್ಲಿ ಆಘಾತವೇ ಅಪ್ಪಳಿಸಿತು. ಸೋಮವಾರ ತಂಬಾರಮ್ನ ಮನೆಯಿಂದ ವಸಂತ್ನಗರದ ವಿದ್ಯುತ್ ಚಿತಾಗಾರಕ್ಕೆ ಅವರ ದೇಹವನ್ನು ಒಯ್ಯುವ ಸಂದರ್ಭದಲ್ಲಿ ಮೂರು ವರ್ಷದ ಮಗಳು ಶವಪೆಟ್ಟಿಗೆ ಎದುರು ನಿಂತು, 'ಗುಡ್ನೈಟ್ ಆ್ಯಂಡ್ ಗುಡ್ಬೈ ಪಪ್ಪಾ' ಅಂದಾಗ ಅಲ್ಲಿದ್ದವರ ದುಃಖದ ಕಟ್ಟೆ ಒಡೆದಿತ್ತು.
ಫೇಸ್ಬುಕ್ ಪುಟದಲ್ಲಿ ತಮ್ಮ ಪತಿಯ ಬಗ್ಗೆ ಇಂದು ಹೀಗೆ ದಾಖಲಿಸಿದರು- 'ಅವನೊಬ್ಬನಿದ್ದ, ನನ್ನ ಹೃದಯ ತುಂಬಿ ಪ್ರೀತಿಸಿದ್ದ. ಮುದ್ದು ಮಗುವಿನ ತಂದೆ, ಪ್ರಾಮಾಣಿಕತೆಯನ್ನು ಧ್ಯೇಯವಾಗಿರಿಸಿ, ವೃತ್ತಿಯನ್ನು ಪ್ರೀತಿಸಿದವ. ಅವನೆದೆಯಲ್ಲಿ ಔದಾರ್ಯವೇ ತುಂಬಿತ್ತು. ಏನನ್ನೂ ಮುಚ್ಚಿಡಲಿಲ್ಲ ನನ್ನಿಂದ... ಆದರೀಗ.. ಆತ ದೇವರೊಂದಿಗಿದ್ದಾನೆ. ಒಂದು ದಿನ ನಾನವನನ್ನು ಭೇಟಿಯಾಗುವೆನೆಂಬ ಬಗ್ಗೆ ನನಗೆ ಖಾತ್ರಿಯಿದೆ. ಖಚಿತವಾಗಿ ಹೇಳಬಲ್ಲೆ, ಆತ ನನ್ನನ್ನು ಬರಸೆಳೆದು ಅಪ್ಪುತ್ತಾನೆ. ಉಸಿರಾಡುವುದಕ್ಕೆ ಕಷ್ಟವಾಗುತ್ತಿದೆ ಅಂತ ನಾನೇನೂ ದೂರುವುದಿಲ್ಲ. ಅಪ್ಪಿಕೋ ಮನದಣಿಯುವವರೆಗೆ....'
ಮೇಜರ್ ಮುಕುಂದ್ ನೆನಪಲ್ಲಿ ನಾವು ವಿನಮ್ರರಾಗೋಣ. ಇಂಥವರ ತ್ಯಾಗಕ್ಕೆ ಅಪಚಾರವಾಗದಂತೆ ಬದುಕೋಣ. ಅಪ್ಪನಿಗೆ ವಿದಾಯ ಹೇಳುತ್ತಿರುವ ಈ ಮೂರು ವರ್ಷದ ಕೂಸಿಗೆ ನಾವು ಇನ್ನೇನು ತಾನೇ ಕೊಡಬಲ್ಲೆವು?

= ಚೈತನ್ಯ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments