ಹೊಸ ಅಕಾಡೆಮಿಗಳು ಬೇಕಿಲ್ಲ ಎಂದು ವಾದಿಸುವ ಮುನ್ನ...
ದಿನಾಂಕ 25. 7. 14ರಂದು ಅಕಾಡೆಮಿಗಳ ಕುರಿತು ಪ್ರಕಟವಾದ ಮಂಜುನಾಥ್ ಅವರ ಪತ್ರದ ಹಿನ್ನೆಲೆಯಲ್ಲಿ ಈ ಲೇಖನವನ್ನು ಬರೆಯುತ್ತಿದ್ದೇನೆ. ರಾಜ್ಯದಲ್ಲಿ ಈಗಾಗಲೇ ವಿವಿಧ ವಿಷಯಗಳಿಗೆ ಅಕಾಡೆಮಿಗಳು ಇವೆ. ಇದರಲ್ಲಿ ಹಲವು ಸರ್ಕಾರದ ಅಡಿಯಲ್ಲಿದ್ದರೆ ಮಿಕ್ಕವು ಖಾಸಗಿ ವಲಯದ್ದಾಗಿವೆ. ಗುಣಮಟ್ಟದ ಕಾರ್ಯನಿರ್ವಹಣೆಯು ಆಯಾ ಕಾಲದ ಅಧ್ಯಕ್ಷ ಹಾಗೂ ಸದಸ್ಯರ ಗುಣ, ಉದ್ದೇಶಗಳನ್ನು ಅವಲಂಬಿಸಿರುತ್ತದೆ. ಹೀಗಾಗಿ, ಕೆಲವು ಸರ್ಕಾರಿ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆ ಸದಾ ಆಕ್ಷೇಪಗಳು ಕೇಳಿಬರುತ್ತಿರುತ್ತವೆ. ಕಾರಣ, ಅದು ಸರ್ಕಾರದ ಮೂಲಕ ಸಾರ್ವಜನಿಕರ ಹಣಕಾಸನ್ನು ಪಡೆವ ಸಂಸ್ಥೆಯಾಗಿರುತ್ತದೆ. ಹಾಗಾಗಿ, ನಾಗರಿಕರು ಅದರ ಕಾರ್ಯವೈಖರಿ ಮೇಲೆ ಸದಾ ಕಣ್ಣಿಡಲು ಬಯಸುತ್ತಿರುತ್ತಾರೆ. ಅಂತೆಯೇ, ಅವುಗಳ ತಪ್ಪುಗಳು ಸುಲಭವಾಗಿ ಕಾಣಿಸುತ್ತವೆ. ಅಕಾಡೆಮಿಗಳು ಸರ್ಕಾರದಿಂದಲೇ ಜನ್ಮ ಪಡೆದಿದ್ದರೂ, ಸರ್ಕಾರ ನೀಡುವ ಅನುದಾನದಿಂದಲೇ ಉಸಿರಾಡುತ್ತಿದ್ದರೂ, ನೀತಿ ನಿರೂಪಣೆ, ಕಾರ್ಯನಿರ್ವಹಣೆ ಹಾಗೂ ಹಣಕಾಸು ವೆಚ್ಚದ ವಿಷಯದಲ್ಲಿ ತಾನು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಸರ್ಕಾರ ತನ್ನನ್ನು ಪ್ರಶ್ನಿಸಬಾರದು ಎಂಬರ್ಥದಲ್ಲಿ ಅಕಾಡೆಮಿಗಳು ವರ್ತಿಸುತ್ತೂ ಇದೆ. ಆದರೆ, ಇದನ್ನು ಒಪ್ಪಲಾಗುವುದಿಲ್ಲ. ಏಕೆಂದರೆ ಸ್ವಾಯತ್ತತೆಯ ರಕ್ಷಣೆಯಲ್ಲಿ ಅಕಾಡೆಮಿಗಳ ಪದಾಧಿಕಾರಿಗಳು, ಅಲ್ಲಿನ ಸಿಬ್ಬಂದಿ ಹಣಕಾಸು ಮತ್ತಿತರ ವಿಷಯಗಳಲ್ಲಿ ಸ್ವೇಚ್ಛಾಚಾರಿಗಳಾಗುವ ಸಾಧ್ಯತೆಗಳಿರುತ್ತವೆ. ಈ ಬಗೆಯ ಅನುಮಾನ ಎಷ್ಟು ಸರಿ ಎಂಬುದು ತಿಳಿಯಬೇಕಾದರೆ ಈವರೆಗೆ ಬಂದಿರುವ ಕೆಲ ಆರೋಪಗಳ ಬಗೆಗಾಗಲೀ ಅಥವಾ, ಸುವಾ ಮೋಟೋ ಆಗಿ, ಬಹು ವಿಶ್ವಸನೀಯವೆನಿಸಿದ ಮೂರನೇ ವ್ಯಕ್ತಿಗಳಿಂದಾಗಲೀ ಆಮೂಲಾಗ್ರ ತನಿಖೆ ನಡೆಸಬೇಕಾಗುತ್ತದೆ. ಇದಾಗದೆ, "ಅಕಾಡೆಮಿಗಳೇ ಸರಿಯಿಲ್ಲ, ಹೊಸಾ ಅಕಾಡೆಮಿಗಳೇ ಬೇಕಿಲ್ಲ" ಎಂದು ಅಕ್ಷೇಪಿಸುವುದು ಸರಿಯಲ್ಲ. (ವಾಸ್ತವವಾಗಿ, ಚಲನಚಿತ್ರ ಅಕಾಡೆಮಿ ಬಹಳ ಉತ್ತಮವಾಗಿಯೇ ಕಾರ್ಯಾರಂಭ ಮಾಡಿತ್ತು. ಆದರೆ, ಅದಕ್ಕೆ ಸರ್ಕಾರ ಸರಿಯಾಗಿ ಅಧ್ಯಕ್ಷರನ್ನೇ ನೇಮಿಸುತ್ತಿಲ್ಲ. ಹೀಗಾದಾಗ, ಅಕಾಡೆಮಿಗಳು ಕೇವಲ ಲೆಕ್ಕಕ್ಕೆ ಮಾತ್ರ ಆದಂತಾಗುತ್ತವೆ). ಅಕಾಡೆಮಿಗಳು ಏಕೆ ಹುಟ್ಟಿಕೊಳ್ಳುತ್ತವೆ-ಎಂದರೆ, ಸರ್ಕಾರಕ್ಕೆ "ತನ್ನ ಇಲಾಖೆಗಳ ಮೂಲಕ ಕೆಲವೊಂದು ವಿಶೇಷ ಆದ್ಯತೆಯ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ" ಎಂದು ತಿಳಿದಿರುವುದರಿಂದ ಮತ್ತು ಆ ಕ್ಷೇತ್ರದ ತಜ್ಞರ ಮೂಲಕವೇ ಅದನ್ನು ಮಾಡಿಸುವ ಸದುದ್ದೇಶದಿಂದ.
ಯಾವುದೇ ಸರ್ಕಾರ ತನ್ನ ಹೆಸರುಳಿಸಲು ಏನಾದರೊಂದು ಮಾಡಬೇಕೆಂಬ ಹಿತಾಸಕ್ತಿಯಿಂದಲೂ ಹೊಸ ಅಕಾಡೆಮಿ, ವಿವಿ ಇತ್ಯಾದಿ ಸ್ಥಾಪಿಸಲು ಒಲವು ತೋರುತ್ತದೆ. ಕೆಲವು ಅಕಾಡೆಮಿಗಳ ಕಾರ್ಯವ್ಯಾಪ್ತಿಯ ನಿರ್ಧಾರದಲ್ಲಾಗಿರುವ ಲೋಪಗಳಿಂದಾಗಿ ಪ್ರಾತಿನಿಧ್ಯವಂಚಿತರಾದ ಕಲಾವಿದರು ತಮ್ಮ ಕಲಾಪ್ರಕಾರದ ಅಭಿವೃದ್ಧಿಗಾಗಿಯೇ ಪ್ರತ್ಯೇಕ ಅಕಾಡೆಮಿ ಬೇಕೇಬೇಕೆಂದು ಸರ್ಕಾರದ ಮೇಲೆ ಸಹಜವಾಗಿಯೇ ಒತ್ತಡ ಹಾಕುತ್ತಿರುತ್ತಾರೆ. ಜಾನಪದದೊಡನೆ ಅವಿನಾಭಾವ ಸಂಬಂಧ ಹೊಂದಿದ ಘಟಕಗಳೇ ಆಗಿರುವ ಯಕ್ಷಗಾನ ಬಯಲಾಟ, ಗೊಂಬೆಯಾಟಗಳು, ಹಗಲು ವೇಷ, ಸಣ್ಣಾಟಾದಿಗಳಿಗೆ ಸಮಾನ ಪ್ರಾತಿನಿಧ್ಯ ಮತ್ತು ಸಂಪನ್ಮೂಲ ಒದಗಿಸಿದ್ದರೆ, ಈಗ ಯಕ್ಷಗಾನಕ್ಕೇ ಬೇರೆ ಅಕಾಡೆಮಿ ರಚನೆಯ ಅಗತ್ಯ ಬರುತ್ತಿರಲಿಲ್ಲ. ಆದಾಗ್ಯೂ ಸಮಸ್ಯೆ ಬಗೆಹರಿಯದ್ದರಿಂದಲೇ ಗೊಂಬೆಯಾಟದವರು ಅತಂತ್ರರಾಗಿದ್ದಾರೆ. ಮುಂದೊಂದು ದಿನ ಅವರಿಗೇ ಪ್ರತ್ಯೇಕ ಅಕಾಡೆಮಿ ಮಾಡಬೇಕಾಗುತ್ತದೆ.
ಇನ್ನು, ಲಲಿತಕಲೆಗಳಲ್ಲಿ ರೇಖಾಚಿತ್ರ, ವರ್ಣಚಿತ್ರಾದಿಗಳಲ್ಲದೆ, ಛಾಯಾಚಿತ್ರ, ವ್ಯಂಗ್ಯಚಿತ್ರ ಕಲೆಗಳೂ ಸೇರುತ್ತವೆ ಎಂಬುದು ಸಾಮಾನ್ಯನಿಗೂ ತಿಳಿದಿದೆ. ಆದರೆ, ಇದನ್ನೊಪ್ಪದ ಕೆಲವರು ಗ್ರಾಫಿಕ್ಸ್ ಮಾತ್ರ ಚಿತ್ರಕಲೆ ಎಂದೂ, ಈ ಅಕಾಡೆಮಿಗೆ ಲಲಿತಕಲಾ ಅಕಾಡೆಮಿ ಎಂದು ಹೆಸರಿಟ್ಟಿರುವುದೇ ತಪ್ಪೆಂದೂ ವಾದ ಮಾಡಿದ್ದೂ ಇದೆ. ಹೀಗಾಗಿಯೇ, ಲಲಿತಕಲಾ ಅಕಾಡೆಮಿಯಲ್ಲಿ ಇವರಿಗೆ ಸೂಕ್ತ ಪ್ರಾತಿನಿಧ್ಯ ದೊರೆಯದಾಗಿದೆ. ಕೊನೇ ಪಕ್ಷ ಮಾಧ್ಯಮ ಅಕಾಡೆಮಿ ಯಲ್ಲಾದರೂ ಈ ಪ್ರಕಾರಗಳನ್ನು ಪುರಸ್ಕರಿಸಬೇಕಾಗಿತ್ತು.
ಛಾಯಾಚಿತ್ರ ಮತ್ತು ವ್ಯಂಗ್ಯಚಿತ್ರ ಪ್ರಕಾರಗಳೆರಡೂ ಅಂತಾರಾಷ್ಟ್ರೀಯ ಮಾನ್ಯತೆಯ ಕಲಾ ವಿಶೇಷಗಳೆನಿಸಿವೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಅಥವಾ ಆ ಮಟ್ಟದ ಪ್ರತಿಷ್ಟಿತ ಪ್ರಶಸ್ತಿ, ಗೌರವಗಳನ್ನು ಪಡೆದು ಹೆಸರಾದ ಅನೇಕ ಛಾಯಾಚಿತ್ರ ಮತ್ತು ವ್ಯಂಗ್ಯಚಿತ್ರ ಕಲಾ ಪರಿಣಿತರು ಕರ್ನಾಟಕದಲ್ಲಿದ್ದಾರೆ. ಆದರೆ, ಅವರಿಗೆ ಸಿಗಬೇಕಾದ ಮಾನ್ಯತೆ ದೊರೆಯದಾಗಿದ್ದು ವಿಷಾದನೀಯವಾಗಿದೆ. ಆದ್ದರಿಂದ, ಸರ್ಕಾರ ಈಗಲಾದರೂ ಮನೆಯ ಯಜಮಾನನಂತೆ ಎಲ್ಲರನ್ನೂ ಕಾಣುವ, ಕಷ್ಟ ಸುಖ ವಿಚಾರಿಸುವ ಜವಾಬ್ದಾರಿಯನ್ನು ಹೊರಬೇಕಾಗಿದೆ.
ಅಂದರೆ ಛಾಯಾಚಿತ್ರ ಹಾಗೂ ವ್ಯಂಗ್ಯಚಿತ್ರಗಳಂತಹ ಅವಕಾಶ ವಂಚಿತ ಪ್ರಕಾರಗಳಿಗೂ ಕೂಡಲೇ ಪ್ರತ್ಯೇಕ ಅಕಾಡೆಮಿಗಳನ್ನು ಸ್ಥಾಪಿಸಿ, ಮಾನ್ಯತೆ ನೀಡಲಿ. ಒಂದು ವೇಳೆ, ಇತರ ರಾಜ್ಯಗಳಲ್ಲಿ ಇಷ್ಟೆಲ್ಲಾ ಅಕಾಡೆಮಿ, ಪ್ರಾಧಿಕಾರ ಗಳೇ ಇಲ್ಲ, ನಮ್ಮಲ್ಲಿ ಈಗ ಆಗಿರುವುದೇ ಹೆಚ್ಚು. ಇರುವ ಅಕಾಡಮಿಗಳೇ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಸುಮ್ಮನೇ ಹಣ ಪೋಲು ಇತ್ಯಾದಿ ಆಕ್ಷೇಪಗಳು ಬರುವುದಾದರೆ, ಈಗಿರುವ ಅಕಾಡೆಮಿಗಳನ್ನೇ ಪುನರ್ರಚನೆ ಮಾಡಿ, ಅವುಗಳ ಸಂಖ್ಯೆಯನ್ನೂ ಕಡಿಮೆ ಮಾಡಿ, ಆದರೆ, ಎಲ್ಲಾ ಅರ್ಹ ಕಲಾ ಪ್ರಕಾರಗಳಿಗೆ ಗೌರವ ದೊರೆಯುವಂತೆ ಕ್ರಮ ಕೈಗೊಳ್ಳಲಿ.
ಈ ಯಾವ ಉಸಾಬರಿಯೂ ಬೇಡವೆಂದಿದ್ದರೆ, ಎಲ್ಲಾ ಅಕಾಡೆಮಿ, ಪ್ರಾಧಿಕಾರಗಳನ್ನೂ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿಯೇ ಅಡಕಗೊಳಿಸಿ, ಯೋಜನೆಗಳ ಪುನರಾವರ್ತನೆ ಮೂಲಕ ಈಗ ಕೆಲವೆಡೆ ಪೋಲಾಗುತ್ತಿರುವ ಹಣ ಉಳಿಸಿ, ನೇರವಾಗಿ ಸಾರ್ವಜನಿಕ ಕಲ್ಯಾಣ ಕಾರ್ಯಕ್ಕೆ ವಿನಿಯೋಗಿಸಲಿ.
-ಡಾ. ಟಿ. ಗೋವಿಂದರಾಜು
ಬೆಂಗಳೂರು