ವಿ.ಆರ್. ಭಟ್‌ರನ್ನು ಬಂಧಿಸಿದವರು ಪ್ರಭಾ ಬೆಳವಂಗಲರನ್ನು ವಿಚಾರಿಸದಿರುವುದೇಕೆ?
ವಿ.ಆರ್. ಭಟ್‌ರನ್ನು ಬಂಧಿಸಿದವರು ಪ್ರಭಾ ಬೆಳವಂಗಲರನ್ನು ವಿಚಾರಿಸದಿರುವುದೇಕೆ?
ಮನೆ ಕಟ್ಟಿಸಿದವರ ಬಳಿ ಪುರೋಹಿತರು ಬಂದು ಸ್ವಾಮಿ ನಿಮ್ಮ ಮನೆ ಗೃಹಪ್ರವೇಶ ಮಾಡಿಸಿ ಇಲ್ಲಾಂದ್ರೆ ಎಕ್ಕುಟ್ಟಿ ಹೋಗುತ್ತೀರಿ ಅಂತ ಹೇಳ್ತಾರಾ? ಫ್ಲೈಓವರ್ ಉದ್ಘಾಟನೆಗೆ ಪೂಜೆ ಮಾಡಿಸದೇ ಇದ್ದರೆ ಫ್ಲೈಓವರ್ ಉದುರಿ ಹೋಗುತ್ತೆ ಅಂತ ಪುರೋಹಿತರು ಶಾಪ ಹಾಕಿದ್ದಿದೆಯಾ? ನಮ್ಮ ಬಳಿ ಬಾರದೇ ಇದ್ದರೆ ಕ್ಷಿಪಣಿ ಗುರಿಮಟ್ಟಲ್ಲ. ಅದಕ್ಕಾಗಿ ನಮ್ಮ ಬಳಿ ಬಂದು ಪೂಜೆ ಮಾಡಿಸಿ ಅಂತ ವಿಜ್ಞಾನಿಗಳಿಗೆ ಯಾರಾದರೂ ಹೇಳಿದ್ದರಾ? ಅಥವಾ ಯಾವುದಾದರೂ ಪುರೋಹಿತರು ನಮಗೇ ಹೆಚ್ಚು ಗೌರವ ಕೊಡಬೇಕು. ದುಡಿಯುವ ವರ್ಗ, ಕೆಳವರ್ಗದವರಿಗೆ ಕಡಿಮೆ ಗೌರವ ನೀಡಬೇಕು ಅಂದೇನಾದರೂ ಒತ್ತಾಯಿಸಿದ್ದಾರಾ?
ಇವಿಷ್ಟು ಪ್ರಶ್ನೆಗೂ ಇಲ್ಲ ಎಂಬ ಉತ್ತರವನ್ನೇ ನೀಡಬೇಕಾಗುತ್ತದೆ. ಹೌದು ಎಂಬುದಕ್ಕೇನಾದರೂ ದಾಖಲೆ ಇದ್ದರೆ ಫೇಸ್‌ಬುಕ್ ವೀರರು ದಾಖಲೆ ಹಾಜರುಪಡಿಸಲಿ.
ಬೆಂಗಳೂರಿನ ನನ್ನ ಮನೆಯಲ್ಲಿ ನಾನು ಒಂದು ವರ್ಷದಿಂದ ಯಾವುದೇ ಪೂಜೆ ಮಾಡಿಸಿಲ್ಲ. ಹಾಗಂತ ಯಾವುದೇ ಪುರೋಹಿತರು ಬಂದು ನೀನು ಪೂಜೆ ಮಾಡಿಸದೇ ಇದ್ದರೆ ಕೆಟ್ಟದ್ದಾಗುತ್ತದೆ ಎಂದು ಹೇಳಿಲ್ಲ. ಬಹಳ ದಿನಗಳ ಕಾಲ ಚರ್ಚ್‌ಗೆ, ಮಸೀದಿಗೆ ಹೋಗದಿದ್ದರೆ ಯಾಕೆ ಬಂದಿಲ್ಲ ಎಂದು ಕೇಳುವವರಿದ್ದಾರೆ. ಬನ್ನಿ ಎಂದು ಕರೆಯುವವರಿದ್ದಾರೆ. ಹಾಗಂತ ವರ್ಷಗಟ್ಟಲೆ ದೇವಸ್ಥಾನಕ್ಕೆ ಹೋಗದಿದ್ದರೂ ಯಾರೂ ಕೇಳುವುದಿಲ್ಲ.
ಯಾಕೆಂದರೆ ಇವೆಲ್ಲ ಸ್ವ ಇಚ್ಛೆ. ದೇವಸ್ಥಾನಕ್ಕೆ ಬಂದರೆ ತೀರ್ಥಕೊಡುತ್ತಾರೆ. ಪೂಜೆ ಮಾಡಿಸಬೇಕು ಅಂತ ಪುರೋಹಿತರ ಬಳಿ ಹೋದರೆ ಪೂಜೆ ಮಾಡಿಸುತ್ತಾರೆ. ದಾರಿಯಲ್ಲಿ ಹೋಗುವವರನ್ನೆಲ್ಲ ಕರೆದು, ಒತ್ತಾಯದಿಂದ ತೀರ್ಥಕುಡಿಸುವುದಿಲ್ಲ. ಕಷ್ಟದಲ್ಲಿರುವವರು ನಂಬಿಕೆಯಿಂದ ಬಂದರೆ ಅವರಿಗೆ ಹೀಗೆ ಮಾಡಿಸಿ ಎಂದು ಸಲಹೆ ಕೊಡುತ್ತಾರೆ ಹೊರತು ಕಷ್ಟದಲ್ಲಿರುವವರನ್ನು ಹುಡುಕಿಕೊಂಡು ಹೋಗಿ, ನೀವು ಹೀಗೆ ಮಾಡಿ, ನನಗೆ ಇಷ್ಟು ದಕ್ಷಿಣೆ ಕೊಡಿ, ನಿಮ್ಮ ಕಷ್ಟ ಪರಿಹಾರವಾಗುತ್ತದೆ ಎಂದು ಹೇಳುವುದಿಲ್ಲ. ಹಾಗಾಗಿ ಯಾರಾದರೂ ಪೂಜೆ, ಹೋಮ ಮಾಡಿಸಿದ್ದರೆ ಅದು ಮಾಡಿಸಿದವರ ನಂಬಿಕೆಯಿಂದಲೇ ಹೊರತು ಪುರೋಹಿತರ ಒತ್ತಾಯದಿಂದಲ್ಲ.
ಅವರವರ ನಂಬಿಕೆ. ಪೂಜೆ ಮಾಡಿಸಬೇಕು ಅನ್ನಿಸಿದರೆ ಪುರೋಹಿತರನ್ನು ಕರೆಯಿಸಿ ಮಾಡಿಸಬೇಕು. ಇಲ್ಲವಾದಲ್ಲಿ ಸುಮ್ಮನಿರಬಹುದು. ಗೃಹಪ್ರವೇಶ ಪೂಜೆಯನ್ನೇ ಮಾಡದೇ ವಾಸ ಮಾಡುವವರಿದ್ದಾರೆ. ಗೃಹಪ್ರವೇಶಕ್ಕೊಂದು ಪೂಜೆ ಮಾಡಿಸಿ ನಂತರ ಮನೆಯಲ್ಲಿ ಪೂಜೆಯನ್ನೇ ಮಾಡಿಸದವರಿದ್ದಾರೆ. ಪೂಜೆ ಮಾಡಿಸಿದವರೆಲ್ಲ ಉದ್ಧಾರವಾಗಿಲ್ಲ. ಪೂಜೆ ಮಾಡಿಸದೇ ಇದ್ದವರೆಲ್ಲರೂ ನೆಮ್ಮದಿಯಿಂದೇನೂ ಇಲ್ಲ.
ಇವೆಲ್ಲ ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟ ವಿಚಾರ. ಆದರೆ ಒಬ್ಬರು ಪೂಜೆ ಮಾಡಿಸಿದ್ದನ್ನು ಪ್ರಶ್ನಿಸುವ ಹಕ್ಕು ಇನ್ನೊಬ್ಬರಿಗಿಲ್ಲ.
ಭಾರೀ ಬುದ್ಧಿಜೀವಿಯಾಗುವ ಕುರುಹು ತೋರುತ್ತಿರುವ ಪ್ರಭಾ ಎನ್. ಬೆಳವಂಗಲ 'ಅನುತ್ಪಾದಕ ಪುರೋಹಿತರು' ಎಂಬ ಹೊಸ ಶಬ್ದ ಸಂಶೋಧನೆ ಮಾಡಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿ, ಅದಕ್ಕೆ ಕೆಟ್ಟದಾಗಿ ಕಮೆಂಟಿಸಿದ್ದೇ ಕಾರಣವಾಗಿ ಒಬ್ಬರ ಬಂಧನವೂ ಆಗಿದೆ. ವಿ.ಆರ್. ಭಟ್ ಅವರು ಫೇಸ್‌ಬುಕ್‌ನಲ್ಲಿ ಹಾಕಿದ ಕಾಮೆಂಟ್ ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಫೇಸ್‌ಬುಕ್‌ನಲ್ಲಿ ಸಿಕ್ಕಸಿಕ್ಕವರ ಬಗ್ಗೆ ಸಿಕ್ಕಸಿಕ್ಕಹಾಗೆ ಕಾಮೆಂಟ್ ಮಾಡುವವರಿಗೆಲ್ಲ ಇದೊಂದು ಪಾಠವಾಗಲಿ. ಆದರೆ ಅವರ ಕಾಮೆಂಟಿಗೆ ಮೂಲವಾದ ಕಾಮೆಂಟಿನ ಬಗ್ಗೆ ಅಥವಾ ಲೇಖನದ ಬಗ್ಗೂ ಚರ್ಚೆಯಾಗಬೇಕಲ್ಲವೇ?
ವಿ.ಆರ್. ಭಟ್ ಅವರು ತಮ್ಮ ಕೆಟ್ಟ ಕಾಮೆಂಟಿಗೆ ಕೆಲ ಹೊತ್ತಿನ ಬಳಿಕ ಫೇಸ್‌ಬುಕ್‌ನಲ್ಲೇ ಕ್ಷಮೆ ಕೇಳಿದ್ದಾರೆ ಕೂಡ. ಗೂಂಡಾ ಕಾಯಿದೆಯ ಗುಮ್ಮನನ್ನೇ ಎಲ್ಲದಕ್ಕೂ ತೋರಿಸಿ ಭಯಹುಟ್ಟಿಸಲು ಹೊರಟಿರುವ ನಮ್ಮ ಸರ್ಕಾರದ ಸಚಿವೆ ಉಮಾಶ್ರಿ, ವಿ.ಆರ್. ಭಟ್ಟರ ಮೇಲೂ ಗೂಂಡಾ ಕಾಯಿದೆ ಹಾಕಬೇಕು ಎಂಬ ಫರ್ಮಾನು ಹೊರಡಿಸಿದ್ದಾರೆ. ಅದನ್ನು ಪಾಲಿಸಲು ಪೊಲೀಸರು ತುದಿಗಾಲಲ್ಲಿ ನಿಂತಿದ್ದಾರೆ.
ಆದರೆ ಅದೇ ಫೇಸ್‌ಬುಕ್ಕಲ್ಲಿ ವಿ.ಆರ್. ಭಟ್ಟರ ಕಾಮೆಂಟ್ ನೋಡಿ ಸಿಟ್ಟಿಗೆದ್ದು ಕಾಮೆಂಟ್ ಮಾಡಿದವರಿಗೇನು ಶಿಕ್ಷೆ ಇಲ್ವಾ ಸಿದ್ದರಾಮಯ್ಯನವರೇ? ಪ್ರತಿ ಪ್ರಕರಣವನ್ನೂ ಜಾತಿ ದೃಷ್ಟಿಯಿಂದಲೇ ನೋಡಬೇಕು ಎಂದು ನಿಮ್ಮ ಸರ್ಕಾರ ತೀರ್ಮಾನ ಮಾಡಿಬಿಟ್ಟಿದೆಯಾ? ವಿ.ಆರ್. ಭಟ್ ಅವರು ಹೇಳಿದ ಮಾತಿಗೆ ಗೌರವಾನ್ವಿತ ಮಹಿಳೆಗೆ ಅವಮಾನವಾಯಿತು ಎಂಬುದನ್ನು ಒಪ್ಪಿಕೊಳ್ಳೋಣ. ಹಾಗೆಯೇ ವಿ.ಆರ್. ಭಟ್‌ಗೆ ಬಯ್ಯುವ ಭರದಲ್ಲಿ ಅವರ ಮನೆಯ ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಮೆಂಟಿಸಿದವರಿದ್ದಾರೆ. ಹಾಗೆ ಬೈಸಿಕೊಂಡ ಮಹಿಳೆಯರಿಗೂ ಮರ್ಯಾದೆ ಇದೆ ಎಂಬುದನ್ನು ಅವಮಾನ ಮಾಡಿಸಿಕೊಂಡ ಮಹಿಳೆ ಸೇರಿದಂತೆ ಅವರ ಬೆಂಬಲಿಗರು ಒಪ್ಪಿಕೊಳ್ಳಬೇಕಲ್ಲವೇ? ಹಾಗಾದರೆ ವಿ.ಆರ್. ಭಟ್ಟರ ಮನೆಯ ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಾಮೆಂಟಿಸಿದವರ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ? ಅವರ ವಿರುದ್ಧವೂ ಗೂಂಡಾ ಕಾಯಿದೆ ಹಾಕಬೇಕಾದ್ದು ನ್ಯಾಯವಲ್ಲವೇ? ಇಲ್ಲವಾದಲ್ಲಿ ಸರ್ಕಾರ ಕೂಡ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಮಿಗೆ ಸುಣ್ಣ ನೀತಿ ಅನುಸರಿಸುತ್ತಿದೆ ಎಂಬ ಅನುಮಾನ ಸತ್ಯವಾದಂತಾಗುವುದಿಲ್ಲವೇ?
ಮಹಿಳೆಯರ ಗೌರವದ ಬಗ್ಗೆ ಅಪಾರ ಕಾಳಜಿ ಇರುವವರು ಈ ಬಗ್ಗೆ ಸುಮ್ಮನಿರುವುದೇಕೆ? ಅವರ ದೃಷ್ಟಿಯಲ್ಲಿ ವಿ.ಆರ್. ಭಟ್ ಅವರ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಇಲ್ಲವೇ? ಅವರೂ ಮಹಿಳೆಯರೇ ಅಲ್ಲವೇ? ಫೇಸ್‌ಬುಕ್‌ನಲ್ಲಿ ವಿ.ಆರ್. ಭಟ್ ಕೆಟ್ಟದಾಗಿ ಕಮೆಂಟ್ ಹಾಕಿದರು ಎಂದಾಕ್ಷಣ ಅವರ ಮನೆಯ ಮಹಿಳೆಯರ ಗೌರವವನ್ನೂ ಕಳೆಯುವ ಅಧಿಕಾರ ನಮಗಿದೆಯೇ? ಮಹಿಳೆಯರ ಮೇಲಿನ ಗೌರವ ಅಂದರೆ ಕೆಲವೇ ಕೆಲವು ನಮಗೆ ಪರಿಚಯ ಇರುವ, ನಮ್ಮ ಸಿದ್ಧಾಂತಕ್ಕೆ ಬೆಂಬಲ ಸೂಚಿಸುವ ಮಹಿಳೆಯರ ಗೌರವ ಎಂದರ್ಥವೇ?
ಇವೆಲ್ಲ ಪ್ರಶ್ನೆಗಳನ್ನು ಯಾಕೆ ಕೇಳಬೇಕಾಗಿದೆಯೆಂದರೆ ವಿ.ಆರ್. ಭಟ್ಟರನ್ನು ಕೆಟ್ಟದಾಗಿ ಕಮೆಂಟಿಸುವಂತೆ ಪ್ರೇರೇಪಿಸಿದ ಲೇಖನ ಬರೆದವರ ಬಗ್ಗೆ ನಮ್ಮ ಸರ್ಕಾರ ಮತ್ತು ಬುದ್ಧಿಜೀವಿಗಳು ಏನೂ ಮಾತನಾಡುತ್ತಿಲ್ಲ. ಆದರೆ ಅದೇ ಪ್ರಭಾ ಎನ್. ಬೆಳವಂಗಲ ಅವರ ದೂರು ಆಧರಿಸಿ ವಿ.ಆರ್. ಭಟ್ಟರನ್ನು ಬಂಧಿಸಲಾಗಿದೆ. ಅದೇ ಮಹಿಳೆ ವಿರುದ್ಧ ದಾಖಲಾದ ದೂರಿನ ಬಗ್ಗೆ ಯಾಕೆ ಯಾವುದೇ ಕ್ರಮಜರುಗಿಸಿಲ್ಲ? ಅವರು ಬೇಕಾದ್ದು ಬರೆದರೂ ನಡೆಯುತ್ತದಾ? ಒಂದು ಜಾತಿಯ ಬಗ್ಗೆ ಮಾತನಾಡಿದರೂ ಜಾತಿನಿಂದನೆ ಹಾಕಬಹುದು. ಅದೇ ಬ್ರಾಹ್ಮಣರ ಬಗ್ಗೆ, ಪುರೋಹಿತರ ಬಗ್ಗೆ ಏನು ಬೇಕಾದರೂ ಬರೆಯಬಹುದಾ? ಯಾಕೆ? ಬ್ರಾಹ್ಮಣರಿಗೆ ಮರ್ಯಾದೆ ಇಲ್ಲವಾ? ಪುರೋಹಿತ ವೃತ್ತಿ ಅಷ್ಟು ಕೀಳು ಮಟ್ಟದ್ದಾ? ಒಂದು ವೃತ್ತಿಯನ್ನು ಹೀಗೂ ಹೀಗಳೆಯಬಹುದಾ? ಬ್ರಾಹ್ಮಣ ಜಾತಿಗೆ ಮರ್ಯಾದೆ ಇಲ್ಲ, ಯಾರು ಏನು ಬೇಕಾದರೂ ಅನ್ನಬಹುದು ಅಂತ ಸರ್ಕಾರ ಆದೇಶ ಏನಾದರೂ ಹೊರಡಿಸಿದೆಯಾ? ಅಥವಾ ಹಾಗಂತ ಮುಖ್ಯಮಂತ್ರಿ ಸಿದ್ದರಾಮಯ್ಯನ ಜತೆಗಿರುವ ಕೆಲವು 'ಎಡ'ಬಿಡಂಗಿಗಳು ತೀರ್ಮಾನಿಸಿದ್ದಾರಾ?
ಇಂತಹ ಯಾವುದೇ ತೀರ್ಮಾನವಾಗಿಲ್ಲ ಎಂದಾದರೆ, ಸರ್ಕಾರ ಸಮಾಜದ ಎಲ್ಲ ಜಾತಿ, ವರ್ಗದವರನ್ನು ಸಮಾನವಾಗಿ ಕಾಣುತ್ತಿದೆ ಎಂಬುದು ಸತ್ಯವೇ ಆಗಿದ್ದಲ್ಲಿ ಪುರೋಹಿತರನ್ನು ಅವಮಾನ ಮಾಡಿದ, ಜನರ ನಂಬಿಕೆಗಳಿಗೆ ಧಕ್ಕೆಯಾಗುವಂತೆ ಬರೆದವರ ಮೇಲೂ ಕ್ರಮ ಕೈಗೊಳ್ಳಬೇಕು. ಕೆಟ್ಟ ಕಾಮೆಂಟು ಹಾಕಿದವರನ್ನು ಬಯ್ಯುವ ನೆಪದಲ್ಲಿ ಅವರ ಮನೆಯ ಮಹಿಳೆಯರನ್ನು ಕೀಳಾಗಿ ಟೀಕಿಸಿದವರ ಮೇಲೂ ಕ್ರಮಕೈಗೊಂಡರೆ ಮಾತ್ರ ಅದಕ್ಕೊಂದು ಅರ್ಥ. ಯಾಕೆಂದರೆ ವಿ.ಆರ್. ಭಟ್ ಕ್ಷಮೆ ಕೇಳಿದ ನಂತರ ಅವರಿಗೆ ಬೈದವರಾರೂ ಕ್ಷಮೆ ಕೇಳಿದ್ದು ಕಣ್ಣಿಗೆ ಬಿದ್ದಿಲ್ಲ. ಅವರ ಕಾಮೆಂಟುಗಳೆಲ್ಲ ಸಿಟ್ಟಿನ ಭರದಲ್ಲಿ ಹಾಕಿದ್ದು, ಇವರು ಮಾತ್ರ ಬೇಕಂತಲೇ ಕಾಮೆಂಟ್ ಹಾಕಿದ್ದಾ?
ಇತ್ತೀಚಿನ ಅತ್ಯಾಚಾರ ಪ್ರಕರಣಗಳು ಯಾವ ಪರಿ ವಾತಾವರಣ ನಿರ್ಮಿಸಿದೆಯೆಂದರೆ ಮಹಿಳೆಯರ ವಿರುದ್ಧ ಮಾತನಾಡುವುದೇ ತಪ್ಪು ಎಂಬಂತಾಗಿದೆ. ಮಹಿಳೆಯರನ್ನು ಬೆಂಬಲಿಸುವ ಆತುರದಲ್ಲಿ ಅವರು ಮಾಡಿರುವ, ಮಾಡುವ ತಪ್ಪುಗಳು ಲೆಕ್ಕಕ್ಕೇ ಇಲ್ಲದಂತಾಗುತ್ತಿದೆ. ಮೊನ್ನೆ ಉದ್ಧವ್ ಠಾಕ್ರೆ ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬರೆದಾಗಲೂ ಇದೇರೀತಿ ಪ್ರತಿಕ್ರಿಯೆಗಳು ವ್ಯಕ್ತವಾದವು. ಪೊಲೀಸ್ ಅಧಿಕಾರಿ ವಿರುದ್ಧ ಮಾಡೆಲ್ ಒಬ್ಬಳು ನೀಡಿದ ಅತ್ಯಾಚಾರದ ದೂರನ್ನು ಉದಾಹರಿಸಿ 'ಅತ್ಯಾಚಾರ ದೂರು ನೀಡುವುದು ಕೂಡ ಫ್ಯಾಷನ್ ಆಗುತ್ತಿದೆ' ಎಂದು ಸಾಮ್ನಾದಲ್ಲಿ ಬರೆಯಲಾಗಿತ್ತು.
ಇತ್ತೀಚೆಗೆ ಬೆಂಗಳೂರಿನಲ್ಲಿಯೇ ಒಬ್ಬರು 2 ವರ್ಷದಿಂದ ಅತ್ಯಾಚಾರ ಮಾಡುತ್ತಿದ್ದರು ಎಂಬ ದೂರು ದಾಖಲಾಗಿದೆ. ಹಾಗಂತ ಆ ಯುವತಿಯನ್ನು ಅವರೇನೂ ಕೂಡಿ ಹಾಕಿರಲಿಲ್ಲ. ಆದರೂ ಆಕೆಗೆ 2 ವರ್ಷ ತನ್ನ ಮೇಲೆ ನಡೆಯುತ್ತಿರುವುದು ಅತ್ಯಾಚಾರ ಎಂಬುದು ಗೊತ್ತಾಗಲೇ ಇಲ್ಲ!
ಇಂತಹ ನಕಲಿ ಅತ್ಯಾಚಾರ ಮತ್ತು ನಿಜವಾದ ಅತ್ಯಾಚಾರದ ನಡುವಿನ ವ್ಯತ್ಯಾಸ ಗುರುತಿಸಲು ನಾವು ವಿಫಲವಾದರೆ ಜಾತಿನಿಂದನೆ, ವರದಕ್ಷಿಣೆ ಕಾನೂನಿನಂತೆ ಅತ್ಯಾಚಾರ ಮತ್ತು ಗೂಂಡಾ ಕಾಯಿದೆಗಳೂ ಅತ್ಯಂತ ಹೆಚ್ಚು ದುರ್ಬಳಕೆಯಾಗುವ ದಿನಗಳು ದೂರವಿಲ್ಲ. ನಮ್ಮ ರಾಜ್ಯ ಸರ್ಕಾರವಂತೂ ಎಲ್ಲ ಅಪರಾಧಗಳಿಗೂ ಗೂಂಡಾ ಕಾಯಿದೆಯೊಂದೇ ಪರಿಹಾರ ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಗೂಂಡಾ ಕಾಯಿದೆ ಅಳವಡಿಸಿಬಿಟ್ಟರೆ ಮತ್ಯಾರೂ ಅತ್ಯಾಚಾರ ಮಾಡುವುದೇ ಎಂಬ ಭಾವನೆಯಲ್ಲಿ ಜನರಲ್ಲಿ ಮೂಡಿಸುತ್ತಿದೆ.
ಇದರ ಪರಿಣಾಮವಾಗಿಯೇ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಹಾಕಿದವರ ಮೇಲೂ ಗೂಂಡಾ ಕಾಯಿದೆ ಗುಮ್ಮ ಕುಣಿಯುತ್ತಿದೆ. ನಿಜವಾಗಿ ಅತ್ಯಾಚಾರ ಮಾಡಿದವರಿಗೂ, ಸಿಟ್ಟಿನಲ್ಲಿ ಅತ್ಯಾಚಾರ ಮಾಡಬೇಕು ಎಂದು ಕಾಮೆಂಟಿಸಿದವರಿಗೂ ವ್ಯತ್ಯಾಸವಿಲ್ಲದಂತಾಗಿದೆ. ಅವರು ಕಾಮೆಂಟ್ ಹಾಕಿದ್ದು ಸರಿಯಿದೆ ಅಂತಲ್ಲ, ಆದರೆ ಕಾಮೆಂಟಿಸಿದ ನಂತರ ತೆಗೆದುಕೊಂಡ ಕ್ರಮಗಳು ನಿಷ್ಪಕ್ಷವಾಗಿಲ್ಲ. ಅವರು ಮಾಡಿದ ಕಾಮೆಂಟ್ ತಪ್ಪು ಎಂದಾದರೆ ಅವರಿಗೆ ಬೈದು ಹಾಕಿದ ಕಾಮೆಂಟ್‌ಗಳು ಕೂಡ ತಪ್ಪು. ಅವರ ಮೇಲೂ ಕ್ರಮಕೈಗೊಳ್ಳುವ ತಾಕತ್ತು ಸರ್ಕಾರಕ್ಕಿದೆಯೇ? ಅಥವಾ ಅವಮಾನಕ್ಕೀಡಾದ ಮಹಿಳೆಯಂತೆ ಅವರೂ ಮುಖ್ಯಮಂತ್ರಿಗಳನ್ನು ಭೇಟಿಮಾಡಿದರೆ, ಕೆಲವರ ಮೂಲಕ ಭೇಟಿಮಾಡಿದರೆ ಮಾತ್ರ ಈ ರಾಜ್ಯದಲ್ಲಿ ನ್ಯಾಯ ಸಿಗೋದಾ? ಭೇಟಿ ಮಾಡಲು ಆಗದವರ ಧ್ವನಿಗೆ ಬೆಲೆಯೇ ಇಲ್ಲವಾ? ಸರ್ಕಾರಕ್ಕೆ ನಿಜವಾಗಿಯೂ ಈ ಪ್ರಕರಣವನ್ನು ನಿಷ್ಪಕ್ಷವಾಗಿ ಬಗೆಹರಿಸುವ ಉದ್ದೇಶವಿದ್ದಿದ್ದರೆ ಒಂದು ವೃತ್ತಿ ಮತ್ತು ಆ ಮೂಲಕ ಜಾತಿಯನ್ನು ಕೀಳಾಗಿ ಟೀಕಿಸಿದ, ಭಾವನೆಗಳನ್ನು ನೋಯಿಸಿದ ಪ್ರಭಾ ಎನ್. ಬೆಳವಂಗಲ ಅವರ ಮೇಲೂ ಕ್ರಮಕೈಗೊಳ್ಳಬೇಕಿತ್ತು. ಹಾಗೆಯೇ ವಿ.ಆರ್. ಭಟ್ ಅವರ ಮನೆಯ ಮಹಿಳೆಯರ ಬಗ್ಗೆ ಕೀಳಾಗಿ ಕಮೆಂಟ್ ಹಾಕಿದವರನ್ನೂ ಬಂಧಿಸಬೇಕು. ಇಲ್ಲವಾದಲ್ಲಿ ಸರ್ಕಾರಕ್ಕೆ ರವೀಂದ್ರನಾಥ ಪ್ರಕರಣವೇ ಇರಲಿ ಫೇಸ್‌ಬುಕ್ ಪ್ರಕರಣವೇ ಇರಲಿ ನಿಷ್ಪಕ್ಷ ನಿಲುವೇ ಇಲ್ಲ ಎಂಬ ತೀರ್ಮಾನಕ್ಕೆ ಜನ ಬರಬೇಕಾಗುತ್ತದೆ. ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ.
- ವಿನಾಯಕ ಭಟ್ಟ ಮೂರೂರು
vakradanta@gmail.com