ಅಂಕಣಗಳು

ಮೈಸೂರು 'ಅರಸೊತ್ತಿಗೆ' ವಿರುದ್ಧ ಪ್ರತಿ ರಣತಂತ್ರ..!

ರಾಜಕೀಯದಲ್ಲಿ ಯಾವಾಗಲೂ ಪರೋಕ್ಷ ಯುದ್ಧದ್ದೇ ಪಾರುಪತ್ಯ...

ರಾಜಕೀಯದಲ್ಲಿ ಯಾವಾಗಲೂ ಪರೋಕ್ಷ ಯುದ್ಧದ್ದೇ ಪಾರುಪತ್ಯ. ತೆರೆಮರೆಯಲ್ಲಿ ನಿಂತು ಅಸ್ತ್ರ ಪ್ರಯೋಗಿಸಿ ವೈರಿಯನ್ನು ಮಣಿಸುವುದರಲ್ಲಿ ನಿಷ್ಣಾತರಾಗುವ ಪ್ರಯತ್ನ ಸದಾ ನಡೆಯುತ್ತಿರುತ್ತದೆ. ಏಕೆಂದರೆ ನೇರವಾಗಿ ಹಣಾಹಣಿ ನಡೆಸುವುದರಿಂದ ಆಗುವ ನಷ್ಟ-ನೋವುಗಳು ಇಲ್ಲಿಲ್ಲ. ನೇರ ಯುದ್ಧದಲ್ಲಾದರೆ ಮಾಡು ಇಲ್ಲವೇ ಮಡಿ ಸೂತ್ರವಿರುತ್ತದೆ. ಬಹುತೇಕ ರಾಜಕಾರಣಿಗಳಿಗೆ ಇದು ಬೇಕಿಲ್ಲ. ಹೋರಾಡುತ್ತಾರೆ, ಆದರೆ ಮಡಿಯಲು ಯಾರೂ ರೆಡಿ ಇಲ್ಲ. ಹೀಗಾಗಿ ತಮ್ಮ ಗುರಿ ಸಾಧನೆಗಾಗಿ ಕುತಂತ್ರಗಳ ಮೊರೆ ಹೋಗುತ್ತಾರೆ. ಆದರೆ ಇದಕ್ಕೆ 'ತಂತ್ರ' ಎಂದು ವ್ಯಾಖ್ಯಾನ ಮಾಡುತ್ತಾರೆ. ಇದಕ್ಕಾಗಿ ಅನ್ಯರನ್ನು ಅಸ್ತ್ರ, ಗುರಾಣಿಯಾಗಿ ಮಾಡಿಕೊಳ್ಳುತ್ತಾರೆ.
ಸದ್ಯ ರಾಜ್ಯ ರಾಜಕೀಯ ರಣಾಂಗಣದಲ್ಲಿ ಇದೇ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ ಆಡಳಿತರೂಢ ಸಿದ್ದರಾಮಯ್ಯವರ ಸರಕಾರದಲ್ಲಿ ಈಗ 'ಗೆರಿಲ್ಲಾ' ಯುದ್ಧಗಳ ಸರಣಿ ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಈ ಯುದ್ಧ ನಡೆಯುತ್ತಿರುವುದು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಅಲ್ಲ. ಬದಲಿಗೆ ಆಡಳಿತ ಪಕ್ಷದ ಒಳಗೇ, ಎರಡು ಗುಂಪಿನ ನಾಯಕರು ತೆರೆಮರೆಯಲ್ಲಿ ನಿಂತು ಪಕ್ಷದ ಒಳಗಿನ ಹಾಗೂ ಹೊರಗಿನ ಅಸ್ತ್ರಗಳನ್ನು ಬಳಸಿಕೊಂಡು ಇಂಥ ಯುದ್ಧ ಮಾಡುತ್ತಿದ್ದಾರೆ. ಸರಕಾರ ಹಾಗೂ ಪಕ್ಷದ ಮಟ್ಟಿಗೆ ಪ್ರತಿಕೂಲವಾದ ಈ ಬೆಳವಣಿಗೆಯನ್ನು ಪ್ರತಿಷ್ಠೆ ಹಾಗೂ ಅಧಿಕಾರ ಲಾಲಸೆ ಆಳುತ್ತಿದೆ.
ಮೊನ್ನೆ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ವೊಂದರಲ್ಲಿ ಮೊದಲ ಬಾರಿಗೆ ಆಯ್ಕೆಗೊಂಡ ಕಾಂಗ್ರೆಸ್ನ ಸುಮಾರು 30 ಶಾಸಕರು ಸಭೆ ನಡೆಸಿದ್ದಾರೆ. ಔತಣಕೂಟದ ನೆಪದಲ್ಲಿ ಸೇರಿದ ಈ ಸಭೆಯ ಮುಖ್ಯ ಅಜೆಂಡಾ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತ ಬಳಗ ಸಚಿವರ ಆಳ್ವಿಕೆ ಶೈಲಿಯ ಪರಾಮರ್ಶೆ. ಸಿದ್ದರಾಮಯ್ಯ ವಿರೋಧಿ ಬಣದ ಹಿರಿಯ ನಾಯಕರು ತೆರೆಮರೆಯಲ್ಲಿ ನಿಂತು ಆಯೋಜಿಸಿದ್ದ ಈ ಸಭೆಯಲ್ಲಿ ಸರಕಾರದ ಕಾರ್ಯಶೈಲಿಯ ಬಗ್ಗೆ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ.
ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಏರ್ಪಡಿಸಿದ್ದ ಈ ಔತಣ ಕೂಟದಲ್ಲಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ಅಜಯ್ಸಿಂಗ್, ಕೇಂದ್ರದ ಹಾಲಿ ಸಚಿವ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ, ರಾಜ್ಯದ ಹಾಲಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ, ಮಾಜಿ ಸಚಿವ ದಿವಂಗತ ಕಾಶಪ್ಪನವರ ಪುತ್ರ ವಿಜಯಾನಂದ ಕಾಶಪ್ಪನವರ್ ಮೊದಲಾದವರು ಭಾಗವಹಿಸಿದ್ದರು. ಸುಧಾಕರ್ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಆಪ್ತರು. ಈ ಶಾಸಕರುಗಳ ಹೆಸರಿನ ಹಿಂದೆ - ಮುಂದಿರುವ ಹಿರಿಯ ನಾಯಕರನ್ನು ನೋಡಿದರೆ ಸಾಕು ಸಭೆ / ಔತಣ ಕೂಟದ ಹಿಂದಿನ ಉದ್ದೇಶ, ಗುರಿ ಎಲ್ಲವೂ ಸ್ಪಷ್ಟವಾಗುತ್ತದೆ. ಈ ಎಲ್ಲ ಹಿರಿಯ ನಾಯಕರು ಒಂದಲ್ಲ ಒಂದು ರೀತಿ ಸಿದ್ದರಾಮಯ್ಯನವರ ಆಡಳಿತ ವೈಖರಿ ಹಾಗೂ ರಾಜಕೀಯ ತಂತ್ರಗಳ ವಿರುದ್ಧ ಕ್ರೋಢೀಕೃತರಾದವರು ಎಂಬುದು ಗಮನಿಸಬೇಕಾದ ಅಂಶ.
ಹೌದು. ಈ ಹೊಸ ಶಾಸಕರನ್ನು ಒಂದು ಗುಂಪಾಗಿ ವಿಂಗಡಿಸಿ, ಅಥವಾಗಿ ಒಂದಾಗಿ ಕಾಣಿಸಿಕೊಳ್ಳುವಂತೆ ಮಾಡುತ್ತಿರುವ ಹಾಗೂ ಇವರನ್ನು ಸಿದ್ದರಾಮಯ್ಯ ಬಣದಿಂದ ಪ್ರತ್ಯೇಕವಾಗಿ ನೋಡುತ್ತಿರುವ ಹಿರಿಯ ನಾಯಕರೆಲ್ಲರೂ ಮೂಲ ಕಾಂಗ್ರೆಸ್ಸಿಗರು. ರಾಜ್ಯ ಸರಕಾರದಲ್ಲಿ ಪಾರುಪತ್ಯೆ ನಡೆಸುತ್ತಿರುವ ಸಿದ್ದರಾಮಯ್ಯ ಬಣದ ನಾಯಕರೆಲ್ಲರೂ ವಲಸಿಗರು. ಅದರಲ್ಲೂ ವಿಶೇಷವಾಗಿ 'ಮೈಸೂರು ಸಂಸ್ಥಾನ'ದವರು. ಅದು ಸಿದ್ದರಾಮಯ್ಯ ಇರಲಿ, ಸಚಿವರಾದ ಮಹದೇವಪ್ಪ ಇರಲಿ, ಮಹದೇವ ಪ್ರಸಾದ್ ಇರಲಿ, ಶ್ರೀನಿವಾಸ ಪ್ರಸಾದ್ ಇರಲಿ - ಇವರೆಲ್ಲರೂ ಮೈಸೂರು ವಿಭಾಗದವರು. ಮಂತ್ರಿ ಮಂಡಲದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿರುವವರು. ಇವರೆಲ್ಲರೂ ಸೇರಿ ರಾಜ್ಯ ಸರಕಾರಕ್ಕೆ 'ಮೈಸೂರಿನ ಅರಸೊತ್ತಿಗೆ' ಎಂಬ ಪರ್ಯಾಯ ನಾಮವನ್ನು ತಂದಿದ್ದಾರೆ. ಜೊತೆಗೆ ಒಂದು ಕಾಲದ 'ಮೈಸೂರಿನ ಅರಸೊತ್ತಿಗೆ'ಯನ್ನು ನೆನಪಿಗೆ ತಂದಿದ್ದಾರೆ. ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಗೊಂಡ ಮರುಕ್ಷಣದಿಂದಲೇ ಈ ಪಾರುಪತ್ಯೆ ಆರಂಭವಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಿದ್ದರಾಮಯ್ಯನವರ ಮೊದಲ ಪತ್ರಿಕಾಗೋಷ್ಠಿ ಮೈಸೂರು ಜಿಲ್ಲಾ ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿಯಂತಿತ್ತು ಎಂಬ ವ್ಯಾಖ್ಯಾನದೊಂದಿಗೆ ಈ ಪ್ರತ್ಯೇಕತೆ ಆರಂಭಗೊಂಡಿದೆ.
ಇದು ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಸಿದ್ದರಾಮಯ್ಯ ಮತ್ತು ಅವರ ಆಪ್ತ ಬಳಗ ಸರಕಾರವನ್ನು ತಮ್ಮ ಕಬ್ಜಾದಲ್ಲಿರಿಸಿಕೊಂಡು, ಅನ್ಯರನ್ನು ಅನತಿ ದೂರದಲ್ಲಿರಿಸಿದ ಪರಿಣಾಮವಾಗಿ ಹೊಸ ಶಾಸಕರ ಗುಂಪೊಂದು ಸೃಷ್ಟಿಯಾಗಿದೆ. ಮಾತ್ರವಲ್ಲ ಸಿದ್ದರಾಮಯ್ಯ ಅವರ ವಿರೋಧಿ ನಾಯಕರ 'ಗೆರಿಲ್ಲಾ ಯುದ್ಧ'ಕ್ಕೆ ಶಸ್ತ್ರಾಸ್ತ್ರವಾಗಿ ಪರಿಣಮಿಸಿದೆ.
ಹೌದು, ಯಾಕಾಗಿ ಇದೆಲ್ಲ? ಇಂಥದೊಂದು ಗುಂಪು ಸೃಷ್ಟಿಯಾಗಿದ್ದು ಏಕೆ? ಏನು ಈ ಗುಂಪಿನ ಉದ್ದೇಶ? ಎಂಬ ಪ್ರಶ್ನೆಗಳಿಗೆ ಉತ್ತರ ಬಹಳ ಸರಳ. ಸಿದ್ದರಾಮಯ್ಯ ಅವರು ಈ ಹಿಂದೆ ಹಾಗೂ ಪ್ರಸ್ತುತ ಬಳಸುತ್ತಿರುವ 'ತೆರೆಮರೆ ತಂತ್ರ'ಕ್ಕೆ ಪ್ರತಿತಂತ್ರವಾಗಿ ಈ ಚಟುವಟಿಕೆ ಗರಿಗೆದರಿದೆ. ಸಿದ್ದರಾಮಯ್ಯ ಅಸ್ತ್ರಕ್ಕೆ ಪ್ರತ್ಯಸ್ತ್ರವಾಗಿದೆ.
ಈ ಹಿಂದೆ ಸಿದ್ದರಾಮಯ್ಯನವರು ಏಕಮುಖ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಂಡಾಗ ಮಂತ್ರಿ ಮಂಡಲದ ಒಳಗೆ ಮತ್ತು ಹೊರಗೆ ಒಂದಷ್ಟು ಅಸಮಾಧಾನ ವ್ಯಕ್ತವಾಗಿತ್ತು. ಇವರೆಲ್ಲರೂ ಸಿದ್ದರಾಮಯ್ಯ ವಿರೋಧಿಗಳು ಎಂಬುದು ಬೇರೆ ಮಾತು. ಅದೇ ರೀತಿ ಮಂತ್ರಿ ಮಂಡಲ ವಿಸ್ತರಣೆ, ಖಾತೆ ಹಂಚಿಕೆ, ಸಂದರ್ಭದಲ್ಲಿ ಹಾಗೂ ಆಡಳಿತ ಶೈಲಿ ಬಗ್ಗೆ ಆಗಾಗ್ಗೆ ಅಪಸ್ವರ ಕೇಳಿ ಬರುತ್ತಿತ್ತು. ಆಗೆಲ್ಲ ಸಿದ್ದರಾಮಯ್ಯನವರು ನೇರವಾಗಿ ತಾವೇ ಉತ್ತರ ಕೊಡಲು ಹೋಗುತ್ತಿರಲಿಲ್ಲ. ಬದಲಿಗೆ ಬೇರೆಯವರಿಂದ ಉತ್ತರ, ಹೇಳಿಕೆ ಕೊಡಿಸುತ್ತಿದ್ದರು. ಮಂತ್ರಿ ಮಂಡಲಕ್ಕೆ ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ತೆಗೆದುಕೊಳ್ಳಬಾರದು ಎಂದು ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಕೊಟ್ಟ ಹೇಳಿಕೆಗಳ ಹಿಂದೆ ಖಂಡಿತವಾಗಿಯೂ ಸಿದ್ದರಾಮಯ್ಯನವರ ಬಳಗದ ಧ್ವನಿ ಇದೆ.
ಅದೇ ರೀತಿ ಸಿದ್ದರಾಮಯ್ಯ ಅವರು ಚೀನಾ ಪ್ರವಾಸಕ್ಕೆ ತೆರಳಿದ್ದಾಗ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸಚಿವರ ಮೌಲ್ಯಮಾಪನ ನಡೆಸುವ ಹೇಳಿಕೆ ನೀಡಿದ್ದರು. ಇದಕ್ಕೆ ಎಐಸಿಸಿಯ ಒಪ್ಪಿಗೆ ಇತ್ತು ಎಂಬುದು ಬೇರೆ ಮಾತು. ಆದರೆ ಇಷ್ಟು ಬೇಗ ತಮ್ಮ ಸಚಿವರ 'ಮೌಲ್ಯ'ವನ್ನು 'ಮಾಪನ'ಕ್ಕೆ ಇಡುವುದು ಸಿದ್ದರಾಮಯ್ಯನವರಿಗೆ ಬೇಕಿರಲಿಲ್ಲ. ಏಕೆಂದರೆ ಈ ರೀತಿ ಪರೀಕ್ಷೆಯ ನಿಕಷಕ್ಕೆ ಒಡ್ಡಿಕೊಳ್ಳುವ ತಮ್ಮ ಆಪ್ತಬಳಗದ ಸಚಿವರಿಗೆ ತೊಂದರೆಯಾಗಬಹುದೆಂಬ ಚಿಂತನೆ ಅವರಲ್ಲಿತ್ತು. ಹೀಗಾಗಿ ಎರಡನೇ ಬಾರಿಗೆ ಗೆರಿಲ್ಲಾ ಯುದ್ಧ ನೀತಿಗೆ ಶರಣಾದ ಅವರು, ಮತ್ತೆ ಸಾಹಿತಿಗಳ ಮೂಲಕ ಮೌಲ್ಯಮಾಪನ ಪ್ರಕ್ರಿಯೆಗೆ ಅಡ್ಡಿ ಹಾಕಿದರು.
ಅದೇ ರೀತಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಕೆ.ಬಿ. ಕೋಳಿವಾಡ ಅವರು ಸಚಿವರಾಗುವ ಆಸೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದರ ಜತೆಗೆ  ಸಿದ್ದರಾಮಯ್ಯ ಆಳ್ವಿಕೆಯನ್ನು ಸಮರ್ಥಿಸಿಕೊಂಡು ಕೊಟ್ಟ ವೀರಾವೇಶದ ಹೇಳಿಕೆಗಳ ಹಿಂದೆಯೂ 'ಪರೋಕ್ಷ ಯುದ್ಧ'ದ ತಂತ್ರವಿದೆ. ಮಾತು ಇವರದೇ ಆದರೂ ಭಾವ ಮಾತ್ರ ಸಿದ್ದರಾಮಯ್ಯ ಬಳಗದ್ದೇ ಆಗಿತ್ತು.
ಈಗ ಹೊಸ ಶಾಸಕರ ಸಭೆ ಸೇರಿರುವುದರ ಹಿಂದೆಯೂ ಇದೇ ತಂತ್ರ ಅಡಗಿದೆ. ಅವರು ಹಿಂದೆ ಪ್ರಯೋಗಿಸಿದ ಗೆರಿಲ್ಲಾ ತಂತ್ರಕ್ಕೆ ವಿರೋಧಿ ಬಣ ಮೊರೆ ಹೋಗಿದೆ. ಅದರ ಪ್ರತಿಫಲವೇ ಹೊಸ ಶಾಸಕರ ಸಭೆ ಹಾಗೂ ಅಸಮಾಧಾನ.
ಶಾಸಕರ ಅಸಮಾಧಾನಕ್ಕೆ ವ್ಯಕ್ತಿಗತ ಕಾರಣಗಳೂ ಇದೆ. ಸಿದ್ದರಾಮಯ್ಯನವರು ಶಾಸಕರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದಿಲ್ಲ, ಅವರ ಕೆಲಸ - ಕಾರ್ಯಗಳಿಗೆ ಆದ್ಯತೆ ಕೊಡುತ್ತಿಲ್ಲ ಎಂಬ ಆಪಾದನೆ ಇದೆ. ಇದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪದೇ ಪದೇ ಅನಾವರಣವಾಗುತ್ತಿದೆ. ಅಷ್ಟೇ ಏಕೆ ಎ.ಎಸ್.ಪಾಟೀಲ್ ನಡಹಳ್ಳಿ ಎಂಬ ಶಾಸಕರು ರಾಜೀನಾಮೆಯ ಬೆದರಿಕೆಯನ್ನೂ ಹಾಕಿದ್ದಾರೆ. ಶಾಸಕರ ಈ ಅತೃಪ್ತಿಗೆ ಕಾರಣಗಳೂ ಇಲ್ಲದಿಲ್ಲ. ವಾಸ್ತವವಾಗಿ ಪ್ರಮುಖ ಖಾತೆಗಳೆಲ್ಲ ಸಿದ್ದರಾಮಯ್ಯ ಬಳಗದ ಬಳಿಯೇ ಇವೆ. ಹಣಕಾಸು, ನಗರಾಭಿವೃದ್ಧಿ, ಲೋಕೋಪಯೋಗಿ, ಕಂದಾಯದಂಥ 'ಕೆಲಸ' ಬಯಸುವ ಖಾತೆಗಳೆಲ್ಲ ಅಲ್ಲಿಯೇ ಇವೆ. ಹೀಗಾಗಿ ಶಾಸಕರು ಇವರ ಬಳಿ ಎಡತಾಕುವುದು ಸಹಜ. ಆದರೆ ಅವರು ಶಾಸಕರ ಕೆಲಸ ಮಾಡಿಕೊಡುತ್ತಿಲ್ಲ. ಕಡತ ಇಟ್ಟು ಹೋಗಿ, ಮತ್ತೆ ನೋಡುವಾ? ಎಂದು ಕಾರ್ಯಕರ್ತರಿಗೆ ಭರವಸೆ ನೀಡುವ ರೀತಿ ಸಾಗಹಾಕುತ್ತಿದ್ದಾರೆ.
ಇದು ಶಾಸಕರ ಅಸಮಾಧಾನಕ್ಕೆ ಮೂಲ ಕಾರಣ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಸಿಕ್ಕಲ್ಲಿ ಕಡತ ಮುಂದಿಟ್ಟು ಸಹಿ ಮಾಡಿಸಿಕೊಳ್ಳುವುದು ಎಲ್ಲರಿಗೂ ಅಭ್ಯಾಸವಾಗಿಬಿಟ್ಟಿದೆ. ಕಳೆದೊಂದು ದಶಕದಿಂದ ಈ ಪರಂಪರೆ ಬೆಳೆದು ಬಂದಿದೆ. ಏಕೆಂದರೆ ಈ ಅವಧಿಯಲ್ಲಿ ಅಧಿಕಾರದಲ್ಲಿದ್ದ ಸರ್ಕಾರಕ್ಕೆ ಸಂಖ್ಯಾಬಲದ ಕೊರತೆ ಇತ್ತು. ಇರುವಷ್ಟು ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ಸವಾಲಿನ ಕೆಲಸವಾಗಿತ್ತು. ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎನ್.ಧರ್ಮಸಿಂಗ್, ಕೂತಲ್ಲಿ, ನಿಂತಲ್ಲಿ, ಸಿಕ್ಕಲ್ಲಿ ಶಾಸಕರ ಕಡತಕ್ಕೆ ಸಹಿ ಹಾಕುವ ಅಭ್ಯಾಸವನ್ನು ರೂಢಿ ಮಾಡಿಸಿಬಿಟ್ಟರು. ಮುಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರೂ ಈ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ.
ಹೆಚ್ಚಿನ ಸ್ಥಾನದಲ್ಲಿ ಗೆದ್ದರೂ ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಆಪರೇಷನ್ ಕಮಲದಂತ ಹೊಸ ರಾಜಕಾರಣಕ್ಕೆ ಭಾಷ್ಯ ಬರೆದ ಬಿ.ಎಸ್.ಯಡಿಯೂರಪ್ಪನವರೂ ತಮ್ಮ ಅಧಿಕಾರಾವಧಿಯಲ್ಲಿ ಶಾಸಕರಿಗೆ ಇದೇ ರೀತಿ ಕೆಲಸ ಮಾಡಿಸಿಕೊಟ್ಟರು. ನಂತರ ಬಂದ ಡಿ.ವಿ.ಸದಾನಂದ ಗೌಡ ಈ ಪರಂಪರೆಗೆ ತಡೆಯೊಡ್ಡುವ ಪ್ರಯತ್ನ ನಡೆಸಿದರೂ ಅವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಇನ್ನೂ ಚುನಾವಣೆ ಹತ್ತಿರವಾಗುತ್ತಿದ್ದಾಗ ಮುಖ್ಯಮಂತ್ರಿಯಾದ ಜಗದೀಶ್ ಶೆಟ್ಟರ್, ಶಾಸಕರ ಕೆಲಸ ಮಾಡಿಕೊಡುವುದಕ್ಕೆ ಹೆಚ್ಚು ಚೌಕಾಸಿ ಮಾಡಲಿಲ್ಲ.
ಆದರೆ ಸಿದ್ದರಾಮಯ್ಯನವರು ಹಾಗಲ್ಲ. ಅವರ ಆಡಳಿತ ಶೈಲಿಯೇ ಭಿನ್ನ. ರಾಮಕೃಷ್ಣ, ಬೊಮ್ಮಾಯಿ, ದೇವೇಗೌಡ, ಜೆ.ಎಚ್.ಪಟೇಲ್, ಧರ್ಮಸಿಂಗ್ ಸೇರಿದಂತೆ ಐವರು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಅವರು, ಕಡತ ಓದದೇ ಯಾವುದಕ್ಕೂ ಸಹಿ ಹಾಕುತ್ತಿಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ಇದು ಸರಿ. ಆದರೆ ಉಳಿದ ಸಚಿವರು ಸಣ್ಣಪುಟ್ಟ ಕೆಲಸಕ್ಕೂ ಇದೇ ಮಾರ್ಗ ಅನುಸರಿಸುವುದು ಶಾಸಕರಿಗೆ ಸಹ್ಯವಾಗುತ್ತಿಲ್ಲ. ಎಲ್ಲವನ್ನೂ ಪರಾಂಬರಿಸಿ ಸಿದ್ದರಾಮಯ್ಯನವರು ಕಡತಕ್ಕೆ ಸಹಿ ಮಾಡುವವರೆಗೆ ತಾಳ್ಮೆ ವಹಿಸುವುದಕ್ಕೆ ಶಾಸಕರು ಸಿದ್ದರಿಲ್ಲ. ಹಿಂದೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಸಕರು ಅವರೆದುರು ಕೈಕಟ್ಟಿ ನಿಲ್ಲುತ್ತಿದ್ದರು. ಈಗ ಕೋಟಿ ಕೋಟಿ ಸುರಿದು ಶಾಸಕರಾಗಿ ಆಯ್ಕೆಗೊಂಡವರು ವಿಧೇಯ ವಿದ್ಯಾರ್ಥಿಯಂತಿರಲು ಬಯಸುತ್ತಿಲ್ಲ.
ಈ ರೀತಿ ಅಸಮಾಧಾನಕ್ಕೆ ಪಕ್ಕಾದ ಶಾಸಕರನ್ನು ಗುರುತಿಸಿರುವ ಸಿದ್ದರಾಮಯ್ಯನವರ ವಿರೋಧಿ ಬಣ ಅವರನ್ನೇ ತಮ್ಮ ಹೋರಾಟದ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಇದರಿಂದ ತಕ್ಷಣಕ್ಕೆ ಸರ್ಕಾರದ ಅಸ್ಥಿತ್ವಕ್ಕೆ ಅಥವಾ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಯಾವುದೇ ಭಂಗವಾಗದೇ ಇರಬಹುದು. ಆದರೆ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಹೇಗೆ ಬೇಕಾದರೂ ಬದಲಾಗಬಹುದು. ಸರ್ಕಾರದ ಹೊರಗಿರುವ ವ್ಯಕ್ತಿಗಳನ್ನು ಬಳಸಿಕೊಂಡು ಸಿದ್ದರಾಮಯ್ಯನವರು ತಮ್ಮ ಶತ್ರುಗಳನ್ನು ಹಣಿದ ರೀತಿಯಲ್ಲೇ, ಸರ್ಕಾರದ ಹೊರಗಿರುವ ಸಿದ್ದರಾಮಯ್ಯನವರ ವಿರೋಧಿಗಳು, ಸರ್ಕಾರದ ಒಳಗಿರುವ ಅಸ್ತ್ರಗಳನ್ನೇ ಪ್ರಯೋಗಿಸಬಹುದು.
ಲಗೋರಿ: ದಾರ ಹರಿದರೆ ಬಿಲ್ಲು ಬಾಗಿಸಿದಕ್ಕಿಂತ ಹೆಚ್ಚು ವೇಗದಲ್ಲಿ ನೇರವಾಗುತ್ತದೆ.


-ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ