ಫ್ಲೋರೈಡ್ ಮತ್ತು ಆರ್ಸೆನಿಕ್ ಇವೆರಡೂ ಅಂತರ್ಜಲವನ್ನು ಕಲುಷಿತಗೊಳಿಸುವ ರಾಸಾಯನಿಕಗಳೇ. ಬರೀ ರಾಸಾಯನಿಕಗಳಲ್ಲ, ನಿಧಾನ ವಿಷ. ಜೀವ ತೆಗೆಯುವುದೂ ಇಲ್ಲ, ಆರೋಗ್ಯವಂತರಾಗಿ ಬದುಕಲೂ ಬಿಡುವುದಿಲ್ಲ.
'ಕುಡಿಯಲು ಫ್ಲೋರೈಡ್‌ಯುಕ್ತ ನೀರು ಪೂರೈಸುವುದು ಎಂದರೆ ಅದು ಸಾಮೂಹಿಕ ನರಮೇಧದ ಇನ್ನೊಂದು ರೂಪ'
- ಈ ಮಾತನ್ನು ಹೇಳಿದ್ದು ಅಮೆರಿಕದ ಜೀವವಿಜ್ಞಾನಿ ಡೀನ್ ಬರ್ಕ್. ಅವರು ಕಂಪನಿಯೊಂದರಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು. ನಿವೃತ್ತಿಯ ನಂತರವೂ ಬೇರೆಡೆಗಳಿಂದ ಆಫರ್‌ಗಳಿಗೆ ಬರವಿರಲಿಲ್ಲ. ಮನಸ್ಸು ಮಾಡಿದ್ದರೆ ಬೇಕಾದಷ್ಟು ಸಂಪಾದಿಸಬಹುದಿತ್ತು. ಆದರೆ ಅವರಲ್ಲಿದ್ದ ತುಡಿತವೇ ಬೇರೆ ಆಗಿತ್ತು. ಫ್ಲೋರೈಡ್‌ಯುಕ್ತ ನೀರು ಕುಡಿದು ಆರೋಗ್ಯ ಹಾಳು ಮಾಡಿಕೊಂಡಿದ್ದವರ ನರಳಾಟ ಅವರ ಕಣ್ಣಮುಂದೆ ಸದಾ ಕಾಡುತ್ತಿತ್ತು. ನಿವೃತ್ತಿ ನಂತರದ ತಮ್ಮ ಜೀವನ ಏನಿದ್ದರೂ ಇದಕ್ಕೇ ಮುಡಿಪು ಎಂದು ಎಂದೋ ನಿರ್ಧರಿಸಿಕೊಂಡೂ ಆಗಿತ್ತು. ತಮ್ಮ ಕೊನೆಯ ಉಸಿರು ಇರುವ ತನಕವೂ ಅದೇರೀತಿ ಕಳೆದರು ಕೂಡ. ಫ್ಲೋರೈಡ್‌ಯುಕ್ತ ನೀರು ಪೂರೈಕೆ ವಿರುದ್ಧ ಹಲವು ಹೋರಾಟಗಳನ್ನು ಮಾಡಿದರು. ಜನರಲ್ಲಿ ಜಾಗೃತಿ ಮೂಡಿಸುವ ಚಳವಳಿಗಳನ್ನು ನಡೆಸಿದರು. 1970-80ರ ದಶಕದಲ್ಲಿ ಬರ್ಕ್ ಹಚ್ಚಿದ ಕೆಚ್ಚು ಇನ್ನೂ ಆರಿಲ್ಲ. ಇವತ್ತಿಗೂ ಅಮೆರಿಕದ ಹಲವು ನ್ಯಾಯಾಲಯಗಳಲ್ಲಿ ಫ್ಲೋರೈಡ್ ವಿರುದ್ಧ ಹೋರಾಟಗಾರರು ಕಾನೂನು ಹೋರಾಟ ಮುಂದುವರಿಸಿದ್ದಾರೆ.
ಬರ್ಕ್ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ತಿಳಿಯಲು ನಾವೇನು ಅಮೆರಿಕಕ್ಕೇ ಹೋಗಬೇಕಾಗಿಲ್ಲ. ನಮ್ಮ ರಾಜ್ಯದ ಉತ್ತರ ಕರ್ನಾಟಕ ಭಾಗ ಅಥವಾ ಹಳೇ ಮೈಸೂರು ಕಡೆಯ ಕೋಲಾರ, ತುಮಕೂರು ಜಿಲ್ಲೆಗಳ ಹಳ್ಳಿಗಳಲ್ಲಿ ಒಂದು ಸುತ್ತು ಹೋಗಿಬಂದರೂ ಸಾಕು. ನರಕದಲ್ಲಿ ಇರುವವರಾದರೂ ಇವರಿಗಿಂತ ಸುಖದ ಬಾಳು ಬಾಳುತ್ತಿದ್ದಾರೇನೋ. ಫ್ಲೋರೈಡ್‌ಯುಕ್ತ ನೀರು ಕುಡಿಯುತ್ತಿರುವವರ ಗೋಳು, ಸಂಕಟಗಳನ್ನು ನೋಡಿದವರು ಸಾಂತ್ವನ ಹೇಳಲು ಮಾತುಗಳೂ ಹೊರಡುವುದಿಲ್ಲ. ಅದಕ್ಕಿಂತಲೂ ಘೋರ ಜೀವನವನ್ನು ಊಹಿಸಿಕೊಳ್ಳಲಿಕ್ಕೂ ಸಾಧ್ಯ ಆಗುವುದಿಲ್ಲ. ಶಾಲೆಗೆ ಹೋಗಬೇಕಾದ ಪುಟ್ಟಪುಟ್ಟ ಮಕ್ಕಳ ಕೈಕಾಲುಗಳು ಅಂಕುಡೊಂಕು. ಇಪ್ಪತ್ತರ ತರುಣ- ತರುಣಿಯರ ನಡು ಸೊಟ್ಟ. ನೆಟ್ಟಗೆ ನಡೆಯುವವರು ಹುಡುಕಿದರೂ ಸಿಗುವುದಿಲ್ಲ. ನೆಟ್ಟಗೆ ಹಸ್ತಲಾಘವ ನೀಡುವುದೂ ಅವರಿಂದ ಸಾಧ್ಯವಿಲ್ಲ. ಏಕೆಂದರೆ ಅವರ ಕೈ ಎಲುಬಿನಲ್ಲಿ ಕಸುವೇ ಇಲ್ಲ. ಕೂತರೆ ಏಳಲು ಸಾಧ್ಯವಿಲ್ಲ, ಎದ್ದರೆ ನೆಟ್ಟಗೆ ನಿಲ್ಲಲಾಗುವುದಿಲ್ಲ. ಎಲ್ಲರ ಬೆನ್ನೂ ಗೂನು. ಅಕಾಲ ವೃದ್ಧಾಪ್ಯ ಆ ಹಳ್ಳಿಗಳಲ್ಲಿ ಕ್ರೂರನರ್ತನ ಮಾಡುತ್ತಿದೆ. ಬಹುತೇಕರ ಹಲ್ಲು ಉದುರಿ ಬಾಯಿ ಬೊಜ್ಜಾಗಿದೆ. ಹಲ್ಲು ಉಳಿದವರಲ್ಲಿ ಬಣ್ಣ ಕೆಂಪಗಾಗಿದೆ. ನೋವು, ನರಳಾಟ, ಮೂಳೆ ಕ್ಯಾನ್ಸರ್, ವಾಂತಿ-ಬೇಧಿ ಅಲ್ಲಿ ಸಾಮಾನ್ಯ. ವಯಸ್ಸಿದೆ, ಆದರೆ ದುಡಿದು ತಿನ್ನುವ ಶಕ್ತಿ ಇಲ್ಲ. ಇರುವ ಅಲ್ಪಸ್ವಲ್ಪ ಜಮೀನೂ ಇವರಂತೆಯೇ ರೋಗಗ್ರಸ್ತ. ಏನೇ ಬಿತ್ತಿದರೂ ಫಸಲು ಬಾರದು. ಹೊತ್ತಿನ ಕೂಳಿಗೇ ಗತಿ ಇಲ್ಲದಿರುವಾಗ ತಮ್ಮ ಹೊಲವನ್ನು ಫಲವತ್ತು ಮಾಡುವ ಬಗ್ಗೆಯಾಗಲೀ, ತಮ್ಮನ್ನೆಲ್ಲ ಕಾಡುತ್ತಿರುವ ಕಾಯಿಲೆ ಬಗ್ಗೆಯಾಗಲೀ ತಲೆ ಕೆಡಿಸಿಕೊಳ್ಳುವುದಾದರೂ ಹೇಗೆ? ಇದು ಸುಲಭದಲ್ಲಿ ಗುಣವಾಗುವ ಕಾಯಿಲೆ ಅಲ್ಲ ಎನ್ನುವುದು ಅವರಿಗೂ ಗೊತ್ತು. ಉಸಿರು ನಿಂತಿಲ್ಲ ಎನ್ನುವ ಕಾರಣಕ್ಕೊ ಅಥವಾ ವೈದ್ಯರುಗಳು ಇವರು 'ಮರಣ ಹೊಂದಿದ್ದಾರೆ' ಎಂದು ಪ್ರಮಾಣ ಪತ್ರ ನೀಡಿಲ್ಲವಾದ್ದರಿಂದಲೋ ದಾಖಲೆಗಳಲ್ಲಿ ಅವರೆಲ್ಲ ಬದುಕಿದ್ದಾರೆ ಅಷ್ಟೆ. ವಾಸ್ತವದಲ್ಲಿ ಅವರೆಲ್ಲ ಜೀವಚ್ಛವಗಳು! ಅವರನ್ನು ಹಿಂಡುತ್ತಿರುವುದು ಫ್ಲೋರೋಸಿಸ್ ಮಾರಿ. ಅದು ಅಂತರ್ಜಲದಲ್ಲಿ ಅತಿಯಾಗಿ ವ್ಯಾಪಿಸಿರುವ ಫ್ಲೋರೈಡ್ ಪ್ರಭಾವ.
ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು, ಕೋಲಾರಗಳು ಎಷ್ಟೋ ವಾಸಿ. ಹಾಗಂತ ಅಲ್ಲೂ ಸಮಸ್ಯೆ ಗಂಭೀರವಾಗಿಲ್ಲ ಅಂತಲ್ಲ, ಉತ್ತರ ಕರ್ನಾಟಕದಷ್ಟು ತೀವ್ರವಾಗಿಲ್ಲ. ರಾಜ್ಯದ ಉತ್ತರ ಭಾಗದವರದ್ದು ನೀರಿನ ವಿಚಾರದಲ್ಲಿ 'ಸಮುದ್ರರಾಜನ ನೆಂಟಸ್ತನ, ಉಪ್ಪಿಗೆ ಬಡತನ' ಎನ್ನುವಂಥ ಸ್ಥಿತಿ. ಅಲ್ಲಿ ಕೃಷ್ಣಾ, ತುಂಗಭದ್ರಾ, ಭೀಮಾದಂಥ ನದಿಗಳು ಹರಿಯುತ್ತಿವೆ. ಮಳೆಗಾಲದಲ್ಲಿ ಉಕ್ಕೇರಿ ರೌದ್ರಾವತಾರವನ್ನೂ ತೋರುತ್ತವೆ. ಇವುಗಳಿಗೆ ಕಟ್ಟಿರುವ ಅಣೆಕಟ್ಟು ಲಕ್ಷಾಂತರ ಎಕರೆ ಜಮೀನಿಗೆ ನೀರುಣ್ಣಿಸುತ್ತಿವೆ. ಆದರೆ ಜನರಿಗೆ ಅಗತ್ಯವಿರುವ ಕುಡಿಯುವ ನೀರಿಗೆ ತತ್ವಾರ. ಎಷ್ಟೋ ಹಳ್ಳಿಗಳಲ್ಲಿ ಕೊಳವೆ ಬಾವಿಗಳೇ ನೀರಿನ ಮೂಲ. ಅದರಲ್ಲಿ ನೀರು ಬಂದರೂ ಕುಡಿಯಲು ಯೋಗ್ಯವಲ್ಲ. ಏಕೆಂದರೆ ಭೂಗರ್ಭದಿಂದ ಕೊಳವೆಗಳ ಮೂಲಕ ಬರುವುದು ಫ್ಲೋರೈಡ್‌ಯುಕ್ತ ನೀರು. ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಸುತ್ತಮುತ್ತ ಆರ್ಸೆನಿಕ್ ಎನ್ನುವ ಇನ್ನೊಂದು ವಿಷಕಾರಿ ರಾಸಾಯನಿಕ ಅಧಿಕವಾಗಿದೆ. ಅದರದ್ದು ಇನ್ನೊಂದು ಗೋಳು. ಫ್ಲೋರೈಡ್ ಮತ್ತು ಆರ್ಸೆನಿಕ್ ಇವೆರಡೂ ಅಂತರ್ಜಲವನ್ನು ಕಲುಷಿತಗೊಳಿಸುವ ರಾಸಾಯನಿಕಗಳೇ. ಬರೀ ರಾಸಾಯನಿಕಗಳಲ್ಲ, ನಿಧಾನ ವಿಷ. ಜೀವ ತೆಗೆಯುವುದೂ ಇಲ್ಲ, ಆರೋಗ್ಯವಂತರಾಗಿ ಬದುಕಲೂ ಬಿಡುವುದಿಲ್ಲ.
ಫ್ಲೋರೈಡ್ ಭೂಮಿಯ ಮಧ್ಯಭಾಗದಲ್ಲಿ ಹೇರಳವಾಗಿರುತ್ತದೆ. ವಸುಂಧರೆ ಗರ್ಭದಲ್ಲಿ ಯಥೇಚ್ಛವಾಗಿ ಸಿಗುವ 13ನೇ ರಾಸಾಯನಿಕ ಎಂದು ಭೂಗರ್ಭ ಶಾಸ್ತ್ರಜ್ಞರು ಗುರುತಿಸುತ್ತಾರೆ. ಮಣ್ಣು, ನೀರು, ಆಹಾರ, ಕೆಲವು ಖನಿಜಗಳು ಎಲ್ಲದರಲ್ಲೂ ಫ್ಲೋರೈಡ್ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆದರೆ ಅದು ಅಲ್ಪಪ್ರಮಾಣದಲ್ಲಿರುತ್ತದೆ. ಮೌತ್‌ವಾಶ್, ಟೂಥ್‌ಪೇಸ್ಟ್‌ಗಳಲ್ಲೂ ಫ್ಲೋರೈಡ್ ಬಳಸುವುದುಂಟು. ದಂತಕ್ಷಯ ತಡೆಯಲು ಇದು ರಾಮಬಾಣ ಎಂದು ನಂಬಲಾಗಿತ್ತು. ದಶಕಗಳ ಹಿಂದೆ ನೀರಿನ ಶುದ್ಧೀಕರಣಕ್ಕೆ ಇದೇ ರಾಸಾಯನಿಕ ಬಳಸಲಾಗುತ್ತಿತ್ತು ಮತ್ತು ಕೆಲವು ದೇಶಗಳಲ್ಲಿ ಈಗಲೂ ಬಳಸಲಾಗುತ್ತಿದೆ! ಈಗ ಅವೆಲ್ಲವುಗಳ ವಿರುದ್ಧವೂ ಜಾಗತಿಕ ಮಟ್ಟದಲ್ಲಿ ಧ್ವನಿ ಎದ್ದಿದೆ.
ಸಮುದ್ರ ನೀರಿನಲ್ಲಿ ಫ್ಲೋರೈಡ್ ಪ್ರಮಾಣ 1.3 ಪಿಪಿಎಂ (ಪಾರ್ಟ್ಸ್ ಪರ್ ಮಿಲಿಯನ್) ಇದ್ದರೆ, ಸ್ವಾಭಾವಿಕವಾಗಿ ಸಿಗುವ ನೀರಿನಲ್ಲಿ ಈ ಪ್ರಮಾಣ 0.01ರಿಂದ 0.03 ಪಿಪಿಎಂ. ಅಂತರ್ಜಲದಲ್ಲಿ ಸೇರಿಕೊಂಡು ಕುಡಿಯುವ ನೀರನ್ನು ಕಲುಷಿತಗೊಳಿಸುವ ಫ್ಲೋರೈಡ್ ಬಹಳ ಅಪಾಯಕಾರಿ. ಕುಡಿಯುವ ನೀರಿನಲ್ಲಿ ಗರಿಷ್ಠ ಫ್ಲೋರೈಡ್ ಮಟ್ಟ 1.5 ಮಿಲಿಗ್ರಾಂ/ಲೀ. ದಾಟಬಾರದು. ಆದರೆ ಉತ್ತರ ಕರ್ನಾಟಕದಲ್ಲಿ ಈ ಪ್ರಮಾಣ 7.40 ಮಿಲಿಗ್ರಾಂ/ಲೀ. ವರೆಗೂ ಇದೆ. ಅಂದರೆ ಎಷ್ಟರಮಟ್ಟಿಗೆ ಅಪಾಯಕಾರಿ ಎನ್ನುವುದನ್ನು ಸುಲಭವಾಗಿ ಊಹಿಸಬಹುದು. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಏರುತ್ತಲೇ ಇದೆಯೇ ವಿನಾ ಇಳಿಮುಖವಾಗುತ್ತಿಲ್ಲ. ಉತ್ತರ ಕರ್ನಾಟಕದ ಭೂಸಂರಚನೆಯೇ ಅಲ್ಲಿನ ಅಂತರ್ಜಲದಲ್ಲಿ ಫ್ಲೋರೈಡ್ ಸೇರಿಕೊಳ್ಳಲು ಕಾರಣ ಎನ್ನುವುದು ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯ. ಫ್ಲೋರೈಡ್ ಸಣ್ಣಪುಟ್ಟ ರಂಧ್ರ, ಬಿರುಕುಗಳ ಮೂಲಕ ಬಹಳ ಸುಲಭವಾಗಿ ಭೂಮಿಯ ಆಳ ತಲುಪಬಲ್ಲದು. ಇಲ್ಲಿನ ರಚನೆಗಳನ್ನು ಪೆನಿನ್ಸುಲರ್ ನೈಸ್, ಡೆಕ್ಕನ್ ಟ್ರಾಪ್ಸ್, ಬೆಣಚು ಕಲ್ಲು, ಸಂಚಿತ ಶಿಲಾ ಪದರ, ಜಂಬುಮಣ್ಣು, ನೆರೆಮಣ್ಣು ಎಂದು ಗುರುತಿಸಲಾಗಿದೆ. ಇಂಥ ಸಂರಚನೆಗಳಲ್ಲಿನ ಕ್ಯಾಲ್ಷಿಯಂ ಮತ್ತು ಮೆಗ್ನೀಷಿಯಂ ಕಾರ್ಬೊನೇಟ್‌ಗಳು ಉತ್ಪಾದನೆಯಾಗಿ, ಫ್ಲೋರೈಡ್ ಅಯಾನುಗಳು ಆಳಕ್ಕೆ ಇಳಿಯಲು ಇನ್ನಷ್ಟು ಅವಕಾಶ ಕಲ್ಪಿಸುತ್ತವೆ. ಆ ಭಾಗದಲ್ಲಿ ಕೊಳವೆ ಬಾವಿ, ಕೈಪಂಪುಗಳೂ ಅಧಿಕ. ಫ್ಲೋರೈಡ್ ಅಂತರ್ಜಲ ತಲುಪಲು ಇದೂ ಸಹಾಯ ಕಲ್ಪಿಸುತ್ತದೆ.
ಅಂತರ್ಜಲದಲ್ಲಿ ಫ್ಲೋರೈಡ್ ನೈಸರ್ಗಿಕ ಸಮಸ್ಯೆ ಅಂತಾದರೆ ಅದಕ್ಕೆ ಪರಿಹಾರ ಇಲ್ಲವೇ? ಪರಿಹಾರ ಇಲ್ಲದ ಸಮಸ್ಯೆ ಜಗತ್ತಿನಲ್ಲಿ ಯಾವುದಿದೆ ಹೇಳಿ? ಫ್ಲೋರೈಡ್ ಅಂಶವನ್ನು ರಿವರ್ಸ್ ಆಸ್ಮೊಸಿಸ್ ಎನ್ನುವ ತಂತ್ರಜ್ಞಾನದಿಂದ ತೆಗೆಯಬಹುದು. ನಮ್ಮ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲರು ಗದಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲೀಟರ್‌ಗೆ ಹತ್ತು ಪೈಸೆ ದರದಲ್ಲಿ ಮಿನರಲ್ ವಾಟರ್ ನೀಡುತ್ತಿದ್ದಾರಲ್ಲ, ಅಲ್ಲಿ ಬಳಸುತ್ತಿರುವುದು ಇದೇ ತಂತ್ರಜ್ಞಾನ. ಆದರೆ ಇಲ್ಲಿಯೂ ಸಮಸ್ಯೆಗಳಿವೆ. ನೀರಿನಿಂದ ಹೊರತೆಗೆದ ವಿಷ ಮತ್ತೆ ಭೂಮಿಯನ್ನೇ ಸೇರುತ್ತದೆ. ಹೀಗಾಗಿ ಅದು ಕೂಡ ಶಾಶ್ವತ ಪರಿಹಾರ ಅಲ್ಲ. ಅಲ್ಯುಮಿನಾ ಡಿಫ್ಲೋರಿನೇಶನ್ ಫಿಲ್ಟರ್‌ಗಳನ್ನು ಬಳಸಬಹುದು. ಸಾರ್ವಜನಿಕ ನೀರು ಪೂರೈಕೆ ವ್ಯವಸ್ಥೆಗೆ ಅಷ್ಟು ಉಪಯುಕ್ತವಲ್ಲ. ಏಕೆಂದರೆ ಪದೇಪದೆ ಫಿಲ್ಟರ್‌ಗಳನ್ನು ಬದಲಾಯಿಸುತ್ತಿರಬೇಕು. ಇವನ್ನು ಬಿಟ್ಟರೆ ಇನ್ನೊಂದಿದೆ. ಅದು 'ನಲಗೊಂಡ ತಾಂತ್ರಿಕತೆ'. ಆಂಧ್ರಪ್ರದೇಶದ ನಲಗೊಂಡದಲ್ಲಿ ಈ ತಂತ್ರಜ್ಞಾನವನ್ನು ಮೊದಲ ಸಲ ಬಳಸಿದ್ದರಿಂದ ಊರಿನ ಹೆಸರೇ ಬಂದಿದೆ. ಇದು ಸುಲಭ, ಪರಿಣಾಮಕಾರಿ ಮತ್ತು ಆರ್ಥಿಕವಾಗಿಯೂ ಕಾರ್ಯಸಾಧು ಆಗಬಲ್ಲ ವಿಧಾನ. ಒಂದು ರೀತಿಯಲ್ಲಿ ನೀರನ್ನು ಸೋಸಿ ಶುದ್ಧೀಕರಿಸುವ ತಂತ್ರಜ್ಞಾನವಿದು. ನೀರಿನಲ್ಲಿರುವ ರಾಸಾಯನಿಕ, ಕಲ್ಮಶಗಳು ಕೆಸರಿನ ರೀತಿಯಲ್ಲಿ ಸ್ಥಾವರದ ಕೆಳಭಾಗದಲ್ಲಿ ಶೇಖರಗೊಳ್ಳುತ್ತವೆ. ಅವುಗಳನ್ನು ಬೇರೆಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಮತ್ತು ಸುಲಭವಾಗಿ ಸಾಗಿಸಬಹುದು. ಹೀಗಾಗಿ ನೀರಿನಿಂದ ಹೊರತೆಗೆಯಲಾದ ವಿಷ ಮತ್ತೆ ಭೂಮಿಯನ್ನೇ ಸೇರುತ್ತದೆ ಎನ್ನುವ ಅಪಾಯವಿಲ್ಲ.
ಸಮಸ್ಯೆ ಇರುವುದು ಸರ್ಕಾರದ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯಲ್ಲಿ. ಫ್ಲೋರೈಡ್ ಸಮಸ್ಯೆ ತೀವ್ರವಾಗಿರುವ ಕೆಲವು ಹಳ್ಳಿಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನೇನೋ ಸ್ಥಾಪಿಸಲಾಗಿದೆ. ಮಂತ್ರಿಗಳಿಂದಲೋ, ಶಾಸಕರಿಂದಲೊ ಉದ್ಘಾಟನೆಗೊಳ್ಳುವಷ್ಟಕ್ಕೇ ಅವು ಸೀಮಿತವಾಗಿವೆ. ಇದರಲ್ಲಿ ಅಧಿಕಾರಶಾಹಿಯ ನಿರ್ಲಕ್ಷ್ಯವೂ ಇದೆ ಎನ್ನಿ. ಇಂಥ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಫ್ಲೋರೈಡ್ ಸಂತ್ರಸ್ತರ ಆರ್ತನಾದ ಪ್ರಭುತ್ವದ ಕಿವಿಗೆ ಕೇಳಿಸೀತೇ ಎನ್ನುವುದೇ ಪ್ರಶ್ನೆ.
-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in