ಕೈಮಗ್ಗ ನೇಕಾರರ ಚಳವಳಿ ಏತಕ್ಕಾಗಿ?
2014ರ ಸಂಕ್ರಾಂತಿಯಂದು ಅಖಿಲ ಭಾರತ ಕೈಮಗ್ಗ ಸತ್ಯಾಗ್ರಹ ಆರಂಭವಾಯಿತು. 15ರಿಂದ 27ರವರೆಗೆ ದಿನಕ್ಕೆ 5ರಿಂದ 20 ಕಿ.ಮೀ. ವರೆಗೆ ರಿಲೇ ಪಾದಯಾತ್ರೆ ಹಾಗೂ ಸಂಜೆ ಆಯಾ ಊರುಗಳಲ್ಲಿ ಪಂಚಾಯತ್ ಸಭೆಗಳು ನಡೆದವು. ಗದಗ ಕೊಪ್ಪಳ ಬಾಗಲಕೋಟೆ ಜಿಲ್ಲೆಗಳನ್ನೊಳಗೊಂಡ ಈ ಕಾರ್ಯಕ್ರಮದ ಕೊನೆಗೆ ಬಾದಾಮಿಯ ಬನಶಂಕರಿ ದೇವಸ್ಥಾನದಲ್ಲಿ ಬೃಹತ್ ಸಭೆ ನಡೆದು ತಮ್ಮ ಊರುಗಳಿಂದ ನೇಕಾರರು ತಂದಿದ್ದ ನೂಲಿನ ಬತ್ತಿಗಳಿಂದ ಕುಲ/ಕಸುಬಿನ ದೇವತೆ ಬನಶಂಕರಿಗೆ ದೀವಿಗೆಗಳನ್ನು ಬೆಳಗಿಸಿದರು. ಇತರ ಜಿಲ್ಲೆಗಳಲ್ಲೂ ರಾಷ್ಟ್ರದ ಇತರ ರಾಜ್ಯಗಳಲ್ಲೂ ಬೇರೆ ಬೇರೆ ಬಗೆಯ ಚಳವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದಲ್ಲಿ ಎರಡನೇ ಹಂತವಾಗಿ ಜನವರಿ 20ರಂದು ಸರ್ವೋದಯ ಆಚರಣೆಯೊಂದಿಗೆ ರಂಗಕರ್ಮಿ, ಗಾಂಧೀವಾದಿ ಶ್ರಮಜೀವಿ ಆಶ್ರಮದ ಸಂತ ಪ್ರಸನ್ನ ಅನಿರ್ದಿಷ್ಟ ಉಪವಾಸ ಆರಂಭಿಸಿದರು. ರಾಜ್ಯದ ಇತರೆಡೆಗಳಲ್ಲಿಯೂ ಒಂದು ದಿನದ ಸಾಂಕೇತಿಕ ಉಪವಾಸ ನಡೆಯಿತು. ಹೆಗ್ಗೋಡಿನಲ್ಲಿ ಪ್ರಸನ್ನರೊಂದಿಗೆ ಸರದಿಯ ಮೇಲೆ ಇಬ್ಬರಿಂದ ಆರಂಭವಾಗಿ ಐವತ್ತು ಜನರು ತಲಾ ಎರಡು/ ಒಂದು ದಿನ ಉಪವಾಸ ನಡೆಸಿದರು. ಮುಖ್ಯಮಂತ್ರಿಗಳು ನೀಡಿದ ಆಶ್ವಾಸನೆಯ ಮೇಲೆ ಫೆ.2ರ ಬೆಳಿಗ್ಗೆ ಉಪವಾಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಈ ಚಳವಳಿಗೆ ನಾಡಿನ ರೈತ ಸಂಘಗಳು, ನಾನಾ ಸಂಘ ಸಂಸ್ಥೆಗಳು, ಬರಹಗಾರರು, ಕಲಾವಿದರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಚಳವಳಿ ಯಾಕಾಗಿ? ಯಾರಿಗಾಗಿ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳದಿದ್ದರೆ ಸಂಬಂಧ ಪಡದವರ ಅಸಂಬದ್ಧ ಹೇಳಿಕೆಗಳಿಂದ, ರಾಜಕಾರಣದ ದಾಸ್ಯದಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವ ಅಪ್ರಬುದ್ಧ ಪ್ರಲಾಪಗಳಿಂದ ಚಸಾರ್ವಜನಿಕರು ತಬ್ಬಿಬ್ಬಾಗುವುದು ಸಾಧ್ಯವಿದೆ. ಉದಾಹರಣೆಗೆ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ರಾಜ್ಯ ನೇಕಾರರ ಒಕ್ಕೂಟದ ಅಧ್ಯಕ್ಷ ಕೆ.ಸಿ. ಕೊಂಡಯ್ಯ ಅವರ ಮಾತನ್ನೇ ಗಮನಿಸಬಹುದು. 'ಸ್ವಾತಂತ್ರ್ಯಾನಂತರ ಆಧುನೀಕರಣ ಭರಾಟೆಯಲ್ಲಿ ಕೈಮಗ್ಗ ಕಣ್ಮರೆಯಾಗುತ್ತಿದೆ. ಕೈಮಗ್ಗ ನಂಬಿ ನೇಕಾರರು ಕೈಮಗ್ಗ ಕೈ ಬಿಟ್ಟು ಆಧುನೀಕರಣದತ್ತ ಮುಖ ಮಾಡುವ ಆವಶ್ಯಕತೆ ಇದೆ. ಪರಿಸರ ದೃಷ್ಟಿಯಲ್ಲೂ ಕೈಮಗ್ಗವನ್ನು ಹೆಚ್ಚಿಸಬೇಕು ವಿದ್ಯುತ್ ಮಗ್ಗಗಳನ್ನು ನಿರ್ಮೂಲನ ಮಾಡಬೇಕು ಎಂದು ಪ್ರಸನ್ನ ಪಾದಯಾತ್ರೆ ಮಾಡುತ್ತಿದ್ದಾರೆ. ನೇಕಾರರು ಮಗ್ಗಗಳಲ್ಲಿ ಆಧುನೀಕರಣ ಅಳವಡಿಸಿಕೊಳ್ಳಬೇಕು.' ನೇಕಾರರ ಒಕ್ಕೂಟದ ಅಧ್ಯಕ್ಷರೇ ಈ ರೀತಿ ಅಪ್ಪಣೆ ಕೊಡಿಸಿದ ಮೇಲೆ ಇನ್ನು ಹುಲುಸಾಮಾನ್ಯರ ಗತಿಯೇನು? ಚಳವಳಿಯ ಕರಪತ್ರವನ್ನು ಓದದೇ ನೀಡಿರಬಹುದೆಂಬ ಅನುಮಾನ ಬರುವ ಹೇಳಿಕೆಗಳಿವು!
ಕೈಮಗ್ಗ ಸಾಯುತ್ತಿರುವ ಉದ್ದಿಮೆಯಲ್ಲ. ಬೇಸಾಯದ ನಂತರ ಅತೀ ಅಗತ್ಯವೂ ಅತ್ಯಂತ ವ್ಯಾಪಕವೂ ಆಗಿರುವ ವಸ್ತ್ರನಿರ್ಮಾಣ ಉದ್ದಿಮೆ ಹಲವಾರು ರೂಪಾಂತರ, ಬೆಳವಣಿಗೆಗಳನ್ನು ಕಂಡಿದ್ದರೂ ಇಂದಿಗೂ ಜೀವಂತವಾಗಿರುವ, ಸಾವಿಲ್ಲದ ಉದ್ಯಮ. ಕೈಮಗ್ಗ ಒಂದೆರಡು ಜಾತಿಗೆ ಸಂಬಂಧಿಸಿದ ಕಸುಬಲ್ಲ. ಇಡೀ ಭಾರತದಲ್ಲಿ ನೇಕಾರಿಕೆಯಲ್ಲಿ ತೊಡಗಿರುವ ಜನ ಎಲ್ಲಾ ಜಾತಿ, ಪಂಗಡ, ಧರ್ಮಗಳಿಗೂ ಸೇರಿದವರಿದ್ದಾರೆ. ಹಿಂದೂ, ಕ್ರೈಸ್ತ, ಮುಸಲ್ಮಾನ ಎಲ್ಲರ ಜೀವನೋಪಾಯ ಮಾರ್ಗವಿದು. ಇದರಲ್ಲಿ ತೊಡಗಿರುವವರಲ್ಲಿ ಶೇ. 28 ಮಹಿಳೆಯರೂ, ಶೇ.27 ಪರಿಶಿಷ್ಟ ಜಾತಿ, ಪಂಗಡಗಳವರೂ ಶೇ. 45 ಹಿಂದುಳಿದ ವರ್ಗದವರೂ ಇದ್ದಾರೆ. ಸುತ್ತಲಿನ ಆಘಾತಗಳ ನಡುವೆಯೂ ಭಾರತದಲ್ಲಿ ಸುಮಾರು 24 ಲಕ್ಷ ಕೈಮಗ್ಗಗಳಿವೆ. ಈ ಸಂಖ್ಯೆಯು ಜಗತ್ತಿನ ಇನ್ನುಳಿದ ದೇಶಗಳಲ್ಲಿರುವ ಒಟ್ಟು ಕೈ ಮಗ್ಗಗಳ ಸಂಖ್ಯೆಗಿಂತ ಅಧಿಕವಾದುದಾಗಿದೆ.
ಕೈಮಗ್ಗ ನಮ್ಮ ದೇಶದ ಮಹತ್ವದ ರಾಷ್ಟ್ರೀಯ ಸಂಪತ್ತು. ಇದನ್ನು ಸಮರ್ಪಕವಾಗಿ ದುಡಿಸಿಕೊಂಡರೆ ಭಾರತದ ಪ್ರಗತಿ ಅಧಿಕವಾಗುತ್ತದೆ. ಪರಿಸರವನ್ನು ಹಾಳು ಮಾಡದೆ, ಹಳ್ಳಿಗಳನ್ನು ಬರಡಾಗಿಸದೆ, ಬಡವ-ಬಲ್ಲಿದ ನಡುವಿನ ಅಂತರವನ್ನು ಹೆಚ್ಚಿಸದೆ ಆತ್ಮಘನತೆಯಿಂದ ಆರ್ಥಿಕ ಪ್ರಗತಿ ಸಾಧಿಸುವುದು ಸಾಧ್ಯವಾಗುತ್ತದೆ.
ಸರ್ಕಾರ ಮಾಡುತ್ತಿರುವುದಾದರೂ ಏನು? ಅಧಿಕಾರಿಗಳು ಕೈಮಗ್ಗಗಳಿರುವ ಮನೆ ಮನೆಗೆ ಹೋಗಿ ಕೈಮಗ್ಗ ತೊರೆದು ವಿದ್ಯುತ್ ಮಗ್ಗಗಳಿಗೆ ಜೋತು ಬೀಳಿ ಎಂದು ದುಡ್ಡಿನ ಆಮಿಷ ಒಡ್ಡುತ್ತಿದ್ದಾರೆ. ಪರಂಪರಾಗತ ಇಳಕಲ್ ಸೀರೆಗಳು ಉಡುಪಿಯ/ ಮೇಲುಕೋಟೆ ಪಂಚೆ, ಅಂಗವಸ್ತ್ರಗಳು, ಚಳ್ಳಕೆರೆಯ ಕಂಬಳಿಗಳು ವಿದ್ಯುತ್ ಮಗ್ಗಗಳ ನಕಲಿ, ಕಲಬೆರಕೆ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು ಕೈಮಗ್ಗದ ಉತ್ಪನ್ನಗಳೆಂದು ಮೋಸದಿಂದ ಬಿಂಬಿಸಿ ಸಾರ್ವಜನಿಕರನ್ನು ನಂಬಿಸಿ ಅವರಿಗೆ ಸುಲಭವಾಗಿ ಮಾರುತ್ತಾ, ಸರ್ಕಾರಗಳ ಸವಲತ್ತನ್ನು ಮೋಸದಿಂದ ಪಡೆದುಕೊಳ್ಳುತ್ತಾ ನಿಜವಾದ ಕೈಮಗ್ಗದ ಅಸಲಿ ಉತ್ಪನ್ನಗಳ ಮಾರುಕಟ್ಟೆಯನ್ನು ಹಾಳುಗೆಡವಿವೆ.
ಖಾದಿ ಮತ್ತು ಕೈಮಗ್ಗದ ಉತ್ಪನ್ನಗಳಿಗೆ ಬೇಡಿಕೆಯಿದೆ. ಅವುಗಳ ಬಳಕೆಯಿಂದ ಗ್ರಾಹಕರು ಹೆಮ್ಮೆ-ಧನ್ಯತಾಭಾವಗಳನ್ನು ಹೊಂದುತ್ತಾರೆ. ನಮ್ಮ ನಾಡಿನ ಉತ್ಪನ್ನವೆಂಬ ಹೆಮ್ಮೆ ಶ್ರಮಜೀವಿಗಳ ಜೀವನ ನಿರ್ವಹಣೆಗೆ ನೆರವಾಗುತ್ತಿರುವ ಬಗ್ಗೆ ಧನ್ಯತಾಭಾವಗಳನ್ನು ಅನುಸರಿಸುತ್ತಿರುವ ಗ್ರಾಹಕರ ಭಾವನೆಗಳಿಗೂ ಪ್ರಸಕ್ತ ಕಲಬೆರಕೆ ಉತ್ಪನ್ನಗಳು ಲಗ್ಗೆಯಿಟ್ಟಿರುವುದರಿಂದ ತಬ್ಬಿಬ್ಬಾಗುತ್ತಿದ್ದಾರೆ. ಒಂದು ಅಂದಾಜಿನಂತೆ ಕೈಮಗ್ಗದ ಹೆಸರಿನಲ್ಲಿ ಶೇ. 60-70ರಷ್ಟು ಯಾಂತ್ರೀಕೃತ ಮಗ್ಗಗಳ ಉತ್ಪನ್ನಗಳಾಗಿವೆ! ಇದನ್ನು ಪ್ರೋತ್ಸಾಹಿಸಲು ಕೈಮಗ್ಗ ಮೀಸಲಾತಿ ಅಧಿನಿಯಮವನ್ನೇ ಬದಲಿಸಲು ಹೊರಟಿದ್ದಾರೆ. ವಸ್ತ್ರೋತ್ಪನ್ನ ಪ್ರಕ್ರಿಯೆಗಳಲ್ಲಿ ಯಾವುದೇ ಒಂದು ಹಂತವನ್ನು ಕೈಯಿಂದ ಕೈಗೊಂಡಿದ್ದರೂ ಅದನ್ನು ಕೈಮಗ್ಗದ ಉದ್ದಿಮೆ ಎಂದು ಅರ್ಥೈಸಲು ಹೊರಟಿದ್ದಾರೆ. ಇದೆಲ್ಲವನ್ನೂ ಸಹಿಸಿಕೊಳ್ಳಬೇಕೇ? ವಿದ್ಯುತ್ ಮಗ್ಗಗಳಿಗೆ ಅನುಮತಿ ಕೊಡಲಾಗಿರುವ ಮುಖ್ಯ ಆಧಾರ ನಿಬಂಧನೆಯೆಂದರೆ ಅವುಗಳಿಂದ ಕೇವಲ ಬಿಳಿ ಬಟ್ಟೆ-ಪ್ಲೇನ್ ಬಟ್ಟೆಯನ್ನು ತಯಾರಿಸತಕ್ಕದ್ದು. ಕೈಮಗ್ಗದ ಉತ್ಪನ್ನಗಳಾದ ಸೀರೆ, ಪಂಚೆ, ರವಿಕೆ, ಅಂಗವಸ್ತ್ರ ಮುಂತಾದವುಗಳನ್ನು ತಯಾರಿಸುವಂತಿಲ್ಲ . ಇದನ್ನು ಪಾಲಿಸುತ್ತಲೇ ಇಲ್ಲವೆಂಬುದು ಯಾರಿಗೂ ಗೊತ್ತಿಲ್ಲ.
ಕೈಮಗ್ಗ ಮೀಸಲಾತಿ ಅಧಿನಿಯಮ 1905 ಪೂರಕವಾಗಿ 1958ರ ಅಧಿನಿಯಮಗಳು ಇರುವುದು ಜವಳಿ ಇಲಾಖೆಯ ಅತ್ಯುನ್ನತ ಅಧಿಕಾರಿಗಳಿಗೇ ತಿಳಿದಿಲ್ಲವಿರುವ ಸರ್ಕಾರಿ ವ್ಯವಸ್ಥೆಯೇ ನಮ್ಮದು! ಇದಕ್ಕೆ ಶಾಮೀಲಾಗಿ ನಿಯಮಗಳನ್ನರಿತು ನಿಷ್ಠೆಯಿಂದ ಕಾನೂನನ್ನು ಜಾರಿಗೆ ತರುವ ಅಧಿಕಾರಿಗಳಿಗೆ ಮಂಡ್ಯ ಜಿಲ್ಲೆಯ ಮರಳು ದಂಧೆಯ ಅವ್ಯವಹಾರ ತಡೆಯಲು ಹೋದ ತಹಸೀಲ್ದಾರರು ಎದುರಿಸಿದಂಥಹ ಪರಿಸ್ಥಿತಿ ಬೇರೆ!
ನೂರಿಪ್ಪತ್ತು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಾರಿದ ಅಹಿಂಸಾ ಸಮರದಲ್ಲಿ ಅವರು ಬಳಸಿದ ಸ್ವರಕ್ಷಣಾ ಸಾಧನಗಳಲ್ಲಿ ಮುಖ್ಯವಾದುದು ತಕಲಿ. ತಕಲಿಯು ಹಿಂಜಿದ ಹತ್ತಿಯಿಂದ ನೂಲನ್ನೆಳೆದು ಸುತ್ತಿಕೊಳ್ಳುವ ಸಾಧನ. ಗಾಂಧೀಜಿ ಇದರ ವಿಸ್ತೃತ ರೂಪವಾದ ಚರಕವನ್ನು ಇಂಗ್ಲೆಂಡಿನ ಹತ್ತಿ ಗಿರಣಿಗಳಿಗೆ ಮುಖಾಮುಖಿಯಾಗಿ ನಿಲ್ಲಿಸಿದರು. ಹಾಗೆಯೇ ಅನ್ಯಾಯದ ಶೋಷಣೆಯ ಆಡಳಿತ, ಕರ ಹೇರಿಕೆಗಳ ವಿರುದ್ಧ ಚಿಟಿಕೆ ಉಪ್ಪನ್ನು ಬಳಸಿದರು. ಉಪ್ಪಿನ ಸತ್ಯಾಗ್ರಹದ ಮುಂಚೂಣಿಯಲ್ಲಿದ್ದ ಸರೋಜಿನಿ ನಾಯ್ಡುರವರ ತಲೆಗೆ ಲೋಹ ಕವಚವಿದ್ದ ಲಾಠಿಯ ಪೆಟ್ಟು ಬಿದ್ದಿತು. ಈ ಘಟನೆಯ ಬಗ್ಗೆ ಟೈಂಸ್ ಪತ್ರಿಕೆ - ಈ ದಿನ ಇಡಿ ಪಾಶ್ಚಾತ್ಯ ದೇಶಗಳು ತಲೆ ತಗ್ಗಿಸುವ ಅತಿ ಹೀನ ಘಟನೆಯೆಂದು ಬರೆಯಿತು.
ಸತ್ಯಾಗ್ರಹ -ಉಪವಾಸ ಸತ್ಯಾಗ್ರಹಗಳನ್ನು ಬ್ರಿಟಿಷರ ದಮನ ನೀತಿಯನ್ನು ಹತ್ತಿಕ್ಕಲು ಬಳಸಲಾಯಿತು. ಕಾಲ ಕ್ರಮೇಣ ಈ ವಿಧಾನಗಳ ಮೂಲಕ ಭಾರತ ಸ್ವಾತಂತ್ರ್ಯ ಗಳಿಸಿತೇನೋ ನಿಜ. ಎರಡು ಶತಮಾನಗಳ ಕಾಲ ತಕ್ಕಡಿಯ ಮೂಲಕ ನಮ್ಮನ್ನಾಳಿದ ಇಂಗ್ಲೆಂಡಿನ ಈಸ್ಟ್ ಇಂಡಿಯಾ ಕಂಪನಿಯು ಭಾರತವನ್ನಷ್ಟೇ ಅಲ್ಲದೇ ಏಷ್ಯದ ಅನೇಕ ವಸಾಹತುಗಳನ್ನು ತೆರವುಗೊಳಿಸಿತು. ಬಿಳಿ ದೊರೆಯ ಬದಲು ದೇಶೀಯ ಕಪ್ಪು ದೊರೆಗಳು ಮೆರೆಯ ತೊಡಗಿದರು. ತಮ್ಮ ಖಾಸಗಿ ಬೊಕ್ಕಸಗಳನ್ನು ತುಂಬಿಸಿಕೊಳ್ಳಲಾರಂಭಿಸಿದರು. ತಮ್ಮ ವಂಶಗಳ ಹತ್ತಾರು ತಲೆಮಾರುಗಳಿಗೆ ಸಾಕಾಗುವಷ್ಟು ಸಂಪತ್ತನ್ನು ನೆಲ ಜಲ ಭೂಗರ್ಭ ಕಾಡು ಬಂಡೆ ನದಿಗಳನ್ನು ಎಗ್ಗಿಲ್ಲದೇ ದೋಚುತ್ತಾ ರಾಜಕೀಯ ಅಧಿಕಾರವನ್ನು ವಂಶಪಾರಂಪರ್ಯವನ್ನಾಗಿಸಿಕೊಂಡರು.
ಈ ಸನ್ನಿವೇಶದಲ್ಲಿ ನಮಗೆ ಪ್ರಸ್ತುತವೆನಿಸಿರುವುದು ಈ ಬಹುರಾಷ್ಟ್ರೀಯ ಕಂಪನಿಗಳು ಸೃಷ್ಟಿಸಿದ ಸಂವಹನ ಕ್ರಾಂತಿಯ ದುಷ್ಪರಿಣಾಮಗಳಲ್ಲಿ ಮುಖ್ಯವಾಗಿ ಕೊಳುಬಾಕ ವಿಕೃತಿಯನ್ನು ಸಂಸ್ಕೃತಿಯೆಂದು ಬಿಂಬಿಸಿ ಜನರ ಉಸಿರಾಟದೊಂದಿಗೆ ಬೆರೆಸಿರುವುದು ಕೊರಳು ಕುಯ್ಯುವ ಪೈಪೋಟಿಯ ದುಷ್ಟ ಪ್ರವೃತ್ತಿ. ಇವುಗಳಿಂದಾಗಿ ಕೈಮಗ್ಗದ ಉತ್ಪನ್ನಗಳೊಂದಿಗೆ ಅನೈತಿಕ ಪೈಪೋಟಿಗೆ ಇಳಿದಿವೆ. ಮೊದಲನೆಯದಾಗಿ ವಿದ್ಯುತ್ ಮಗ್ಗಗಳು ಕೇವಲ ಪ್ಲೆಯಿನ್ ಬಟ್ಟೆ ತಯಾರಿಸಬೇಕೆಂಬ ಕಾನೂನಿದೆ. ಸಾಂಪ್ರದಾಯಿಕ, ಕೈಮಗ್ಗಗಳಿಗೇ ಮೀಸಲಾದ ಸೀರೆ, ಪಂಚೆ ಇತ್ಯಾದಿಗಳನ್ನು ಅವು ತಯಾರಿಸುವಂತೆಯೇ ಇಲ್ಲ. ಹಾಗೆ ತಯಾರಿಸುವುದೂ ಶಿಕ್ಷಾರ್ಹ. ಅಂತಹ ತಯಾರಕರ ಮಗ್ಗಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಕಾನೂನಿದೆ. ಆದರೂ ವಿದ್ಯುತ್ ಮಗ್ಗಗಳು ಈ ಉತ್ಪನ್ನಗಳನ್ನು ತಯಾರಿಸುವುದೇ ಅಲ್ಲದೇ ಅದನ್ನು ಕೈಮಗ್ಗದ ಉತ್ಪನ್ನಗಳು ಎಂದು ಮಾರಾಟ ಕುತಂತ್ರಗಳ ಮೂಲಕ ಬಿಂಬಿಸುತ್ತಾ ಮಾರುಕಟ್ಟೆಯನ್ನು ಆಕ್ರಮಿಸುತ್ತಿರುವುದು ಕೈಮಗ್ಗದವರಿಗೆ ಆಘಾತ ತಂದಿದೆ. ಕೈಮಗ್ಗ ಖಾದಿಗಳ ಸೌಂದರ್ಯವಿರುವುದೇ ಅವುಗಳ ಮೂಲಭೂತ ಮಿತಿಗಳಲ್ಲಿ. ಪ್ರತಿ ಮೀಟರ್ ಬಟ್ಟೆಯೂ ಒಂದು ಡಿಸೈನರ್ ಬಟ್ಟೆಯೆಂದು ಭಾಸವಾಗುತ್ತದೆ. ಏಕತಾನತೆಯಿರುವ ಮಿಲ್ ಬಟ್ಟೆಗಳಲ್ಲಿರುವ ನಿಷ್ಠುರ ಕ್ವಾಲಿಟಿ ಇಲ್ಲಿ ಕಾಣಸಿಗುವುದಿಲ್ಲ. ಕೈಯಿಂದ ನಿರ್ಮಾಣವಾದ ವಸ್ತುಗಳಲ್ಲಿ ನಯಗಾರಿಕೆಯಿರುವುದಿಲ್ಲ. ಅದೇ ಅವುಗಳ ವಿಶಿಷ್ಟ ಹೆಗ್ಗಳಿಕೆ. ಯಂತ್ರ ಮಗ್ಗಗಳು ಬೇಕೆಂದೇ ಇಂಥ ಅಸಮರ್ಪಕತೆಗಳನ್ನು ತಮ್ಮ ಉತ್ಪನ್ನಗಳಲ್ಲಿ ನುಗ್ಗಿಸಿ ಅವನ್ನು ಕೈ ಮಗ್ಗದ ಉತ್ಪನ್ನವೆಂದು ಮೋಸದಿಂದ ಮಾರಲಾರಂಭಿಸಿವೆ. ಇದನ್ನು ತಡೆಯಲು ಹೋರಾಟವು ಅನಿವಾರ್ಯವಾಗಿದೆ. ಇಂಥ ವಿದ್ಯುತ್ ಮಗ್ಗಗಳ ನೆರವಿಗೆ ಸರ್ಕಾರ ಬದಲಿಕೆಯಿಂದ ಅಕ್ರಮ-ಸಕ್ರಮದಂಥ ಕಪಟ ನಾಟಕವಾಡಲು ತೊಡಗಿತ್ತು. ವಸ್ತ್ರ ಉತ್ಪನ್ನದ ಮೂರು ಮುಖ್ಯ ಹಂತಗಳಲ್ಲಿ ಯಾವುದೇ ಒಂದು ಹಂತವನ್ನು ಕೈಯಲ್ಲಿ ನೆರವೇರಿಸಿದರೂ ಆ ಉದ್ದಿಮೆಯ ಉತ್ಪನ್ನವನ್ನು ಕೈಮಗ್ಗದ ಉದ್ಯಮ ಎಂಬ ವ್ಯಾಖ್ಯೆಯನ್ನು ಜಾರಿಗೆ ತರಲಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಅಖಿಲ ಭಾರತ ಕೈಮಗ್ಗ ಸಂಘ ಸಂಸ್ಥೆಗಳ ಶ್ರಮದಿಂದ ತಡೆ ಹಿಡಿಯಲಾಯಿತು. ಇದು ಈ ಕೈಮಗ್ಗ ಚಳವಳಿಯ ಮೊದಲ ಯಶಸ್ಸು ಎನ್ನಬಹುದು.
ನೇಕಾರರ ಬೇಡಿಕೆಗಳು ಇವು: ಕೈಮಗ್ಗ ಉದ್ದಿಮೆಯ ಯಾಂತ್ರೀಕರಣ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಿ. ಕೈಮಗ್ಗ ಕ್ಷೇತ್ರಗಳಲ್ಲಿ ವಿದ್ಯುತ್ ಮಗ್ಗಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಿ. ಕೈಮಗ್ಗ ಮೀಸಲಾತಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಕೈ ಮಗ್ಗ ಕ್ಷೇತ್ರಗಳಲ್ಲಿ ಅಕ್ರಮವಾಗಿ ಅಳವಡಿಸಲಾಗಿರುವ ವಿದ್ಯುತ್ಮಗ್ಗಗಳಿಗೆ ಇತರೇ ವಸ್ತ್ರಗಳನ್ನು ತಯಾರಿಸಲು ನೂಲು ಒದಗಿಸಿ ಅವರ ಉತ್ಪನ್ನಗಳನ್ನು ವಿದ್ಯುತ್ ಮಗ್ಗ ಅಭಿವೃದ್ಧಿ ನಿಗಮಗಳ ಮೂಲಕ ಖರೀದಿಸಿ ಮತ್ತು ನೆನೆಗುದಿಗೆ ಬಿದ್ದಿರುವ ವಿವಿಧ ಕೈ ಮಗ್ಗ ಯೋಜನೆಗಳು. ಗ್ರಾಮೀಣ ಫಲಾನುಭವಿಗಳಿಗೆ ತಲುಪುವಂತೆ ವ್ಯವಸ್ಥೆ ಮಾಡಿ. ಈ ಮೇಲಿನ ಐದು ಬೇಡಿಕೆಗಳಲ್ಲಿ ಮೊದಲನೆಯದು ಕೇಂದ್ರ ಸರ್ಕಾರಕ್ಕೆ, ಎರಡನೇ ಮತ್ತು ನಾಲ್ಕನೆಯದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದರೆ ಉಳಿದ ಎರಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಸಂಬಂಧಪಟ್ಟವು. ಈ ಬೇಡಿಕೆಗಳನ್ನು ಈಡೇರಿಸಲು ಯಾವುದೇ ಹೊಸ ಕಾನೂನನ್ನು ರೂಪಿಸುವ ಅಗತ್ಯವಿಲ್ಲ. ಸರ್ಕಾರಗಳ ಬೊಕ್ಕಸಕ್ಕೆ ಹೊಸದಾದ ಹೊರೆಯೂ ಬೀಳುವುದಿಲ್ಲ. ಈ ಬೇಡಿಕೆಗಳು ಕರ್ನಾಟಕದ ಸಕಲ ಹತ್ತಿ ನೇಕಾರರ, ಉಣ್ಣೆ ನೇಕಾರರ, ರೇಷ್ಮೆ ನೇಕಾರರ, ಖಾದಿ ನೇಕಾರರ, ಬಣ್ಣಕಾರರ ಹಾಗೂ ವಿದ್ಯುತ್ ಮಗ್ಗಗಳ ಕಾರ್ಮಿಕರ ಪರವಾದ ಬೇಡಿಕೆಗಳಾಗಿವೆ.
-ದೇನಾ ಶ್ರೀನಿವಾಸಮೂರ್ತಿ