ಓದುಗರ ಮಾತಿಗೆ ಬೆಲೆ ನೀಡಿದ್ದಕ್ಕೆ ಖುಷಿಯಾಗಿದೆ
ದಿ. 31.1.2014ರಂದು ತಮ್ಮ ಪತ್ರಿಕೆಯಲ್ಲಿ ಪ್ರಕಾಶ ಮಂಡೋತ್ ಅವರು ಬರೆದಿರುವ ಲೇಖನ ಓದಿ ಈ ಕೆಳಗಿನಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಈ ಹಿಂದಿನ ಉದಾಹರಣೆಯಂತೆ ಕೇಂದ್ರ ಯಾವಾಗಲೂ ರೈಲ್ವೆ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದುದು ಸರ್ವವಿದಿತವಾಗಿದೆ. ನಮ್ಮವರು ರೈಲ್ವೆ ಮಂತ್ರಿಗಳಾದರೂ ನಮಗೆ ದಕ್ಕಬೇಕಾದುದು ದಕ್ಕಲಿಲ್ಲ. ಪ್ರತಿ ಸಲ ಬಜೆಟ್ ಮಂಡನೆ ಆಗುವ ಮುನ್ನ ಕಂಠ ಶೋಷಣೆ ಮಾಡಿಕೊಂಡಿದ್ದಷ್ಟೇ ಬಂತು.
ನೀವು ಶಿರಾಡಿಘಾಟ್ ರಸ್ತೆ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿ ಒತ್ತಡ ತಂದುದಕ್ಕೆ ಮಂತ್ರಿಗಳು ಕಣ್ತೆರೆದು ತಿಂಗಳೊಳಗೆ ದುರಸ್ತಿ ಕಾಣುವಂತಾದುದು. ಈಗ ಕೇಂದ್ರ ರೈಲ್ವೆ ಮಂತ್ರಿಗಳಾದ ಮಲ್ಲಿಕಾರ್ಜುನ ಖರ್ಗೆಯವರು ಕಲಬುರ್ಗಿಯವರು ಸಮರ್ಥ ಆಡಳಿತಗಾರರು. ಇವರ ಅವಧಿ ಇನ್ನು ಕೆಲವೇ ತಿಂಗಳು ಉಳಿದಿರುವುದರಿಂದ ಅಷ್ಟರೊಳಗಾಗಿ ಕರ್ನಾಟಕಕ್ಕೆ ಅಗತ್ಯವಾಗಿರುವ ಗುಲಬರ್ಗಾ ಹಾಗೂ ಮಂಗಳೂರು ಎರಡು ವಿಭಾಗಗಳನ್ನು ರಚಿಸುವಂತೆ ಸಮಗ್ರ ವರದಿ ತಯಾರಿಸಿ ಒತ್ತಡ ಹೇರಿದರೆ ಶಿರಾಡಿಯಂತೆ ಇಲ್ಲೂ ನಮ್ಮ ಕೆಲಸ ಆಗಬಹುದು ಎಂದು ನನ್ನ ನಂಬಿಕೆ.
- ರಾಘವೇಂದ್ರ ಮನಸಬ್ದಾರ, ಯಲಹಂಕ ಉಪನಗರ
ದಿ. 02.02.14ರ ಭಾನುವಾರದ ಖುಷಿಯಲ್ಲಿ ಸುಮಿತ್ರಾ ದೇವಿ ಒಡಲಾಳದಿಂದ ದೇವನೂರು ಮಹಾದೇವಿ ದೇವಲೋಕ ಪ್ರೇಮಲೋಕ, ಖ್ಯಾತ ಸಾಹಿತಿ ದೇವನೂರು ಮಹಾದೇವರ ಸ್ಥೂಲ ಪರಿಚಯಾತ್ಮಕ ಲೇಖನ ಮೆಚ್ಚುಗೆಯಾಯಿತು. ಮಹದೇವರವರು ಮಾಧ್ಯಮದವರ ಕೈಗೆ ಸಿಗುವುದಿಲ್ಲವೆಂಬ ಮಾತಿದೆ. ಅವರ ಕುಟುಂಬ ಸಂದರ್ಶಿಸಿ ಉತ್ತಮವಾಗಿ ಬರಹ ಕಟ್ಟಿದ ಅಂಶಿ ಪ್ರಸನ್ನಕುಮಾರ್ರವರಿಗೂ ಕನ್ನಡಪ್ರಭ ಖುಷಿ ವಾರದ ಪುರವಣಿ ಪತ್ರಿಕಾ ಬಳಗಕ್ಕೂ ಹೃದಯಪೂರ್ವಕ ಅಭಿನಂದನೆಗಳು. ಇಂತಹ ಪ್ರಸಿದ್ಧ, ಪ್ರಬುದ್ಧ ವ್ಯಕ್ತಿಗಳ ಕುರಿತ ಲೇಖನಗಳು ಮತ್ತಷ್ಟು ಖುಷಿಯಲ್ಲಿ ಬರಲಿ.
- ಎಂ.ಬಿ.ಕೃಷ್ಣಮೂರ್ತಿ, ಚಾಮರಾಜನಗರ,ಮೊ. 94491-30531
ಓದುಗನೇ ದೊರೆ ಎನ್ನುವುದನ್ನು ನೀವು ನಿರೂಪಿಸಿದ್ದೀರಿ. ಗೋಡೆಬರಹಕ್ಕೆ ಪತ್ರ ಬರೆದ ಓದುಗರು 'ಬೆಡ್ಜಾಮ್' ಅಂಕಣ ನಿಲ್ಲಿಸುವಂತೆ ಕೋರಿರುವುದನ್ನು ನೀವು ತಕ್ಷಣಕ್ಕೆ ಮನ್ನಿಸಿ ಬೆಲೆ ಕೊಟ್ಟಿದ್ದೀರಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಮಾತಿಗೆ ಕವಡೆ ಕಿಮ್ಮತ್ತೂ ಇಲ್ಲದಿರುವಾಗ ನೀವು ನಮ್ಮ ವಿಶ್ವಾಸ ಗಳಿಸಿದ್ದೀರಿ.
-ಸಂಜಯ ಕುಮಾರ ಸಿ., ಚಿತ್ರದುರ್ಗ 918105365937
ಸಾಹಿತ್ಯ ಚರ್ಚೆಗಳು ಗಂಭೀರ ಸ್ವರೂಪದ್ದೇ ಆಗಿರಬೇಕಿಲ್ಲ. ಲಹರಿ ಮೂಲಕವೂ ಆಗಿರಬಹುದೆಂದು (31 ಜನವರಿ ಕ.ಪ್ರ.) ಹರಿಹರಪ್ರಿಯರ ಲೇಖನದ ಮೂಲಕ ನಿರೂಪಿಸಿದ್ದಕ್ಕಾಗಿ ಧನ್ಯವಾದಗಳು. ಮುಂದಿನ ರಾಷ್ಟ್ರಕವಿ ಯಾರಾಗಬಹುದೆಂಬ ಎಲ್ಲರ ಕುತೂಹಲದ ಜೊತೆಗೆ ರಾಜಕಾರಣಿಗಳು ಯೋಚಿಸುವ, ಯೋಚಿಸಬೇಕಾದ ಎಲ್ಲ ರೀತಿಯ ಮಾನದಂಡಗಳ ವಿಶ್ಲೇಷಣೆ ಒಂದು ಅದ್ಭುತ ವಿಡಂಬನೆಯಾಗಿ ಹರಿದಿದೆ.
-ಕೃಷ್ಣ ಸುಬ್ಬರಾವ್, 114, 2ನೇ ಮುಖ್ಯರಸ್ತೆ, ಕಮಲಾನಗರ, ಬೆಂಗಳೂರು, ಮೊ. 9980 139931
ಶಿರಾಡಿ ಘಾಟ್ ಎಂಬ ಸಾವಿನ ರಸ್ತೆಗೆ ಕನ್ನಡಪ್ರಭ ಸರಣಿ ಸುದ್ದಿ ಪ್ರಕಟ ಮಾಡಿ ಸರ್ಕಾರವನ್ನು ಬಡಿದೆಬ್ಬಿಸಿ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸುವಂತೆ ಮಾಡಿದ ತಮಗೆ ಪತ್ರಿಕೆಗೆ ಅನಂತ ವಂದನೆಗಳು. 3 ತಿಂಗಳಿನ ಹಿಂದೆ ಧರ್ಮಸ್ಥಳಕ್ಕೆ ಬಸ್ನಲ್ಲಿ ಹೋಗಿದ್ದೆ. ಆ ಯಮದಾರಿಯಲ್ಲಿ ಮರಳಿ ನಾ ಮನೆಗೆ ಬಂದುದೇ ಪವಾಡ. ಈಗ ಒಂದು ವಾರದ ಹಿಂದೆ ಮತ್ತೆ ಧರ್ಮಸ್ಥಳಕ್ಕೆ ಹೋಗಿ ಬಂದಾಗ ಕನ್ನಡಪ್ರಭ ಪತ್ರಿಕೆಯ ಪರಿಣಾಮಕಾರಿ ವರದಿಯ ಪರಿಣಾಮ ನನಗೆ ಎದ್ದು ಕಂಡಿತು. ಆಳುದ್ದ ಗುಂಡಿಗಳನ್ನು ಮುಚ್ಚಿ, ತಾತ್ಕಾಲಿಕವಾದರೂ ಹಗಲು ರಾತ್ರಿ ರಸ್ತೆ ಕಾಮಗಾರಿ ನಡೆಯುತ್ತಿರುವ ಪರಿಣಾಮ ಸ್ವಲ್ಪ ರಸ್ತೆಯು ಸುಧಾರಿಸಿದೆ. ಆಗ ಪತ್ರಿಕೆಯ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸಿತು. ಈಗ ನಡೆಯುತ್ತಿರುವುದು ತಾತ್ಕಾಲಿಕ ಕಾಮಗಾರಿಯಾದರೂ ಮುಂದಿನ ತಿಂಗಳಿನಿಂದ ಸಂಪೂರ್ಣ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವರೆಂಬ ಆಶಾಭಾವನೆ ಮೂಡಿದೆ. ರಾಜ್ಯದ ಇಂತಹ ನೂರಾರು ಯಮದಾರಿಗಳು ಸಹ ಸ್ವರ್ಗ ಮಾರ್ಗವಾಗುವಂತಾಗಲು ಪತ್ರಿಕೆ ಮನಸು ಮಾಡಲಿ.
- ಪಟ್ಟಸೋಮನಹಳ್ಳಿ ಗಾನಾ ಸುಮಾ, ಪಾಂಡವಪುರ, ಮಂಡ್ಯ ಜಿಲ್ಲೆ, ಮೊ. 876 22 73686
ದಿ. 02.02.14ರ ಕ.ಪ್ರ.ದಲ್ಲಿ ಮುಖಪುಟದ ಸುದ್ದಿ 'ಕುರ್ಚಿಗಾಗಿ ಕಸರತ್ತು ಮಾಡುವ ಬಿಜೆಪಿ ಬಣ್ಣದ ಮಾತು ನಂಬದಿರಿ' ಗುಲ್ಬರ್ಗಾದಲ್ಲಿ ಸೋನಿಯಾ ವಾಗ್ದಾಳಿ ವಿಷದ ಬೀಜ ಬಿತ್ತುವ ಬಿಜೆಪಿಯನ್ನು ಅಧಿಕಾರಕ್ಕೆ ಏರಲು ಅವಕಾಶ ನೀಡಬೇಡಿ ಎಂಬೀ ವರದಿ ಪ್ರಕಟವಾಗಿದೆ. ಇಂಥ ರಾಜಕೀಯ ಸುದ್ದಿಗಳನ್ನು ಅತಿರಂಜಿತವಾಗಿ ಪ್ರಕಟಿಸುವ ಅಗತ್ಯವಿತ್ತೆ? ಸೋನಿಯಾ ಗಾಂಧಿ ವಾಗ್ದಾಳಿ ಅಂತ ಇದ್ದರೆ ಸಾಕಾಗುತ್ತಿತ್ತು.
- ಮೊಳಕಾಲ್ಮೂರು ಸುರೇಶ, ಸಿದ್ಧಾಥ ಕಾಲೋನಿ, ಬಳ್ಳಾರಿ.
ನೀವು ಏನ್ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.