ಅಂಕಣಗಳು

ಗಾದೆಯನ್ನು ಅವರೇಕೆ ಸುಳ್ಳು ಮಾಡುತ್ತಿಲ್ಲ?

ಶಾಂತಲಕ್ಷ್ಮಿಯ ಕಥೆಯನ್ನು ಮರೆಯಲು ಸಾಧ್ಯವೇ ಇಲ್ಲ. ಅವಳಿಗೆ ಪಿಯುಸಿ ಮುಗಿಯುತ್ತಿದ್ದಂತೆಯೇ ಮದುವೆಯಾಯಿತು. ಇಷ್ಟು ಬೇಗ ನಂಗೆ ಮದುವೆ ಬೇಡಾ...ಡಿಗ್ರಿ ಮುಗಿದ ನಂತರ ಮದುವೆ ಆಗ್ತೇನೆ ಎಂದು ಆಕೆ ಗೋಳಾಡಿದ್ದು ನಿಜ. ಆದರೆ, ಪೋಷಕರು ಅವಳ ಮನವಿಗೆ ಕ್ಯಾರೇ ಅನ್ನಲಿಲ್ಲ. ಶ್ರೀಮಂತರ ಮನೆಯ ಸಂಬಂಧ ತಾನಾಗೇ ಹುಡುಕಿಕೊಂಡು ಬಂದಿದೆ. ಹುಡುಗ-ಮೂವರು ಸೋದರಿಯರ ಜೊತೆಗಿರುವ ಒಬ್ಬನೇ ಗಂಡು ಸಂತಾನ. ತೋಟವಿದೆ. ಆಳೂ ಕಾಳುಗಳಿದ್ದಾರೆ. ಇಂಥಾ ಸಂಬಂಧವನ್ನು ಯಾರಾದ್ರೂ ಬೇಡ ಅಂತಾರಾ! ಇಷ್ಟಕ್ಕೂ ನೀನು ಡಿಗ್ರಿ ಓದಿ ಯಾರನ್ನು ಸಾಕಬೇಕಾಗಿದೆ ಎಂದೆಲ್ಲಾ ಜೋರು ಮಾಡಿ ಶಾಂತಲಕ್ಷ್ಮಿಯ ಬಾಯಿ ಮುಚ್ಚಿಸಿದ್ದರು. ಆನಂತರ, ತುಂಬ ಅದ್ಧೂರಿಯಾಗಿ ಆಕೆ ಮದುವೆ ನಡೆದಿತ್ತು.
ಶ್ರೀಮಂತ ಕುಟುಂಬಕ್ಕೆ ಸೊಸೆಯಾಗಿ ಹೋದ ಶಾಂತಲಕ್ಷ್ಮಿ, ಒಂದೇ ವರ್ಷಕ್ಕೆ ತವರಿಗೆ ವಾಪಸಾದಳು. ಅತ್ತೆಯ ಕಿರುಕುಳ ಎಂದಳು. ನಾದಿನಿಯರ ಉಪಟಳವೇ ಜಾಸ್ತಿ ಅಂದಳು. ಗಂಡನ ಮಾತಿಗೆ ಬೆಲೆಯೇ ಇಲ್ಲ, ಎಲ್ಲವೂ ಅತ್ತೆಯ ಆದೇಶದಂತೆಯೇ ನಡೆಯುತ್ತದೆ ಎಂದಳು. ಗಂಡನ ಮನೆಯಲ್ಲಿ ತನ್ನ ಮೇಲೆ ಹಲ್ಲೆಯಾಯ್ತು ಅಂದಳು. ಅದಕ್ಕೆ ಸಾಕ್ಷಿಯನ್ನೂ ತೋರಿಸಿದಳು. ಶಾಂತಲಕ್ಷ್ಮಿಯ ಮನೆಯವರು ಮಗಳಿಗೆ ಸಮಾಧಾನ ಹೇಳಿದರು. ರಾಜಿ ಪಂಚಾಯ್ತಿ ಮಾಡಿ ಗಂಡನ ಮನೆಗೆ ಕಳಿಸಿದರು. ಆದರೂ ಸಂಬಂಧ ಸುಧಾರಿಸಲಿಲ್ಲ. ಆರು ತಿಂಗಳ ನಂತರ ಶಾಂತಲಕ್ಷ್ಮಿ ಸೀದಾ ಪೊಲೀಸ್ ಠಾಣೆಗೆ ಹೋಗಿ ಅತ್ತೆಯ ವಿರುದ್ಧ ವರದಕ್ಷಿಣೆ ಕೇಸು ದಾಖಲಿಸಿಬಿಟ್ಟಳು. ಪ್ರತಿಯಾಗಿ ಗಂಡನ ಮನೆಯವರಿಂದ ಶಾಂತಲಕ್ಷ್ಮಿಯ ಮೇಲೂ ದೂರುಗಳು ದಾಖಲಾದವು. ಆಗಲೇ ರಾಜಿ ಪಂಚಾಯ್ತಿ ತಂಡದಲ್ಲಿದ್ದ ಒಬ್ಬರು ಮಾರ್ಮಿಕವಾಗಿ ಹೇಳಿದರು: 'ಅತ್ತೆಯಾದವಳು ತಾಯಿ ಆಗೋದಿಲ್ಲ. ಸೊಸೆ ಯಾವತ್ತೂ ಮಗಳಾಗೋದಿಲ್ಲ ಎಂಬ ಗಾದೆ ಮಾತು ಯಾವತ್ತಾದ್ರೂ ಸುಳ್ಳಾಗುವುದುಂಟಾ?'
ಶಾಂತಲಕ್ಷ್ಮಿಯ ಹೆಸರು, ಅವಳ ಪಾತ್ರ, ಆಕೆ ಅನುಭವಿಸಿದ ಕಿರುಕುಳ, ಗಂಡನ ಮನೆಯಿಂದ ಹೊರಬಂದ ನಂತರ ಆಕೆ ಅನುಭವಿಸುವ ತಬ್ಬಲಿತನ, ಅವಳನ್ನು ಕುರಿತು ಸಮಾಜ ಹೊಂದುವ 'ಅಯ್ಯೋ ಪಾಪಿ' ಎಂಬಂಥ ಮನೋಭಾವ... ಇದೆಲ್ಲವೂ ಇಲ್ಲಿ ಕೇವಲ 'ಸಂಕೇತ' ವಷ್ಟೆ. ಬಹುಶಃ ಗಂಡನ ಮನೆಗೆ ಹೋಗುವ ಶೇಕಡಾ 70ರಷ್ಟು ಹೆಣ್ಣು ಮಕ್ಕಳು ಅತ್ತೆಯ ಕಾಟದಿಂದ ನಲುಗಿರುತ್ತಾರೆ. ಹಾಗೆಯೇ ಶೇಕಡಾ 70ರಷ್ಟು ಅತ್ತೆಯರು, ಸೊಸೆಯಂದಿರ ಅಸಂಬದ್ಧ ವರ್ತನೆ, ಹಿಂತಿರುಗಿ ಮಾತಾಡುವಂಥ, ಮನೆಯ ಮರ್ಯಾದೆಯನ್ನು ಹರಾಜು ಹಾಕುವಂಥ ಮಾತುಗಳಿಂದ ಕಂಗಾಲಾಗಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಮೌನವಾಗಿ ಕಂಬನಿ ಹರಿಸಿರುತ್ತಾರೆ. ಯಾವುದೇ ಮನೆಯಲ್ಲಿ, ಸೊಸೆ ಸ್ಟ್ರಾಂಗ್ ಆಗಿದ್ದರೆ, ಅವಳ ಕಿರುಕುಳ ತಡೆಯಲಾಗದೆ ಅತ್ತೆ ವೃದ್ಧಾಶ್ರಮದ ದಾರಿ ಹಿಡಿದಿರುತ್ತಾಳೆ. ಅತ್ತೆಯೇ ಸ್ಟ್ರಾಂಗ್ ಆಗಿರುವ ಮನೆಯಲ್ಲಿ, ಆಕೆಯ ಹಿಂಸೆಯಿಂದ ಬೇಸತ್ತು ಸೊಸೆಯಾದವಳು ತನ್ನ ತವರಿನ ಹಾದಿ ಹಿಡಿದಿರುತ್ತಾಳೆ! ಒಂದು ಸ್ವಾರಸ್ಯ ಕೇಳಿ: ಸೊಸೆಯಂದಿರ ವಿಷಯದಲ್ಲಿ ಹೆಚ್ಚಿನ ಸಂದರ್ಭದಲ್ಲಿ ತಪ್ಪುಗಳನ್ನು ಹುಡುಕುವ ಅತ್ತೆಯರು ಕೂಡಾ, ಒಂದು ಕಾಲದಲ್ಲಿ 'ಸೊಸೆ'ಯಾಗಿಯೇ ತಾವು ಉಳಿದಿರುವ ಮನೆಗೆ ಬಂದವರು! 'ಹಿಂದಿದ್ದ' ಅತ್ತೆಯ ಬಿರುಮಾತುಗಳಿಗೆ ಹೆದರಿಕೊಂಡೇ ತಿರುಗಾಡಿದವರು. ಆದರೆ ಕಾಲ ಬದಲಾಗಿ, ಅತ್ತೆಯ ಪಟ್ಟವೆಂಬುದು ತನಗೇ ದಕ್ಕಿದ ಮೇಲೆ-'ಛೆ, ಹಿಂದೊಮ್ಮೆ ಅತ್ತೆಯಿಂದ ಅನುಭವಿಸಿದಂಥ ಕಷ್ಟವನ್ನು ಈಗ ನನ್ನ ಸೊಸೆ ಅನುಭವಿಸುವುದು ಬೇಡ' ಎಂದು ತಮಾಷೆಗೂ ಯೋಚಿಸುವುದಿಲ್ಲ. ಬದಲಾಗಿ, ಸೊಸೆಯನ್ನು 'ವೈರಿ' ಎಂದೇ ಪರಿಗಣಿಸುತ್ತಾಳೆ. ಸಮಯ ಸಿಕ್ಕಾಗಲೆಲ್ಲ ಅವಳ ಮೇಲೆ ಅಧಿಕಾರ ಚಲಾಯಿಸಲು ನೋಡುತ್ತಾಳೆ. ಹೆಚ್ಚಿನ ಸಂದರ್ಭದಲ್ಲಿ ಅತ್ತೆಯರ ಈ ವರ್ತನೆ 'ದಬ್ಬಾಳಿಕೆ' ಅನ್ನಿಸಿಕೊಳ್ಳುತ್ತದೆ. ಸಂಸಾರದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಏಕಕಾಲಕ್ಕೆ ತಾಯಿಯೂ, ಅತ್ತೆಯೂ ಆದವರ ಮಾತು ಎಷ್ಟೊಂದು ವಿಚಿತ್ರವಾಗಿರುತ್ತದೆ ಎಂಬುದಕ್ಕೆ ಈ ಉದಾಹರಣೆ ಗಮನಿಸಬೇಕು. ಆ ತಾಯಿಯ ಮಗ-ಮಗಳು, ಇಬ್ಬರಿಗೂ ಮದುವೆಯಾಗಿತ್ತು. ಈ ಹೆಂಗಸು, ಮಕ್ಕಳ ಸಂಸಾರವನ್ನು ಬಣ್ಣಿಸುತ್ತಿದ್ದುದು ಹೀಗೆ: ನನ್ನ ಅಳಿಯ, ದೇವರಂಥ ಮನುಷ್ಯ ನನ್ನ ಮಗಳು ಹಾಕಿದ ಗೆರೇನ ದಾಟೋದಿಲ್ಲ. ಆದ್ರೆ ಸೊಸೆ ಇದ್ದಾಳಲ್ಲ, ಅವಳು ಮಾಟಗಾತಿ. ಗಂಡನಿಗೆ ಮಂಕುಬೂದಿ ಎರಚಿಬಿಟ್ಟಿದ್ದಾಳೆ..'
ಅತ್ತೆ-ಸೊಸೆ ಮಧ್ಯೆ ತಾಯಿ-ಮಗಳ ಸಂಬಂಧ ಸಾಧ್ಯವಾಗುವುದೇ ಇಲ್ಲವೇಕೆ ಎಂಬುದು, ಬಹುಶಃ ಮನುಕುಲ ಸೃಷ್ಟಿಯಾದಾಗಿನಿಂದ ಉತ್ತರವೇ ಸಿಗದಿರುವ ಪ್ರಶ್ನೆಯಾಗಿಯೇ ಉಳಿದಿದೆ ಅನ್ನಬಹುದೇನೋ. ನನಗೆ ಅರ್ಥವಾದ ಮಟ್ಟಿಗೆ ಹೇಳಬಹುದಾದರೆ, ಹೆಂಡತಿ ಜೊತೆಯಾದ ಕ್ಷಣದಿಂದಲೇ ಮಗ ತನ್ನನ್ನು ನಿರ್ಲಕ್ಷಿಸಬಹುದು, ಕ್ರಮೇಣ ಈ ಮನೆಯಲ್ಲಿ ತನ್ನ ಅಸ್ತಿತ್ವವೇ ಇಲ್ಲವಾಗಬಹುದು ಎಂಬ ಆತಂಕವೇ ಸೊಸೆಯ ಮೇಲೆ ಸವಾರಿ ಮಾಡುವಂತೆ ಅತ್ತೆಯನ್ನು ಪ್ರೇರೇಪಿಸುತ್ತದೆ. ಹಾಗೆಯೇ, ಹೊಸದೊಂದು ಪರಿಸರದಲ್ಲಿ, ಪ್ರತಿ ಸಂದರ್ಭದಲ್ಲೂ ತಪ್ಪು ಹುಡುಕುತ್ತಾ ತನ್ನನ್ನು ನಿಂದಿಸುವ, ಆಗಿಂದಾಗ್ಗೆ ಆರ್ಡರ್‌ಗಳನ್ನು ಮಾಡುವ ಅತ್ತೆಯದು 'ಸರ್ವಾಧಿಕಾರ' ಎಂಬ ಭಾವನೆ ಸೊಸೆಗೂ ಬಂದುಬಿಡುತ್ತದೆ. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಮುಖ ಮಾಡಿ ನಡೆಯುತ್ತಾರೆ. ಗಾದೆ ಮಾತು ಮತ್ತೆ ನಿಜವಾಗುತ್ತದೆ!
ವಾರದ ಹಿಂದೆ, ಗೆಳತಿ ಅನುಶ್ರೀ ಕೂಡ ಮದುವೆಯಾದಳು. ಆಕೆಯದು ಲವ್ ಮ್ಯಾರೇಜ್. ಹುಡುಗನ ತಾಯಿಗೆ ಈ ಮದುವೆ ಇಷ್ಟವಿಲ್ಲ. ಹುಡುಗನಿಗೋ- ಈ ಹುಡುಗಿಯನ್ನು ಬಿಡಲು ಮನಸ್ಸಿಲ್ಲ. ಅಮ್ಮ-ಮಗನ ಹಠದ ಮಧ್ಯೆ ನಾನು ಬಡವಾಗಬಾರದು ಎಂದು ನಿರ್ಧರಿಸಿದ ಅನುಶ್ರೀ, ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ನಿಮ್ಮ ತಾಯಿಯ ಮನೆಗೆ ಹೋಗೋಣ. ಅದೂ ಎರಡು ದಿನಗಳ ಮಟ್ಟಿಗೆ ಮಾತ್ರ ಎಂಬ ಷರತ್ತು ಹಾಕಿ, ಹುಡುಗ ಅದಕ್ಕೆ ಒಪ್ಪಿದ ನಂತರವೇ ಮದುವೆಗೆ ಸಮ್ಮತಿಸಿದಳು!
ಬದಲಾವಣೆಯ ಹೆಸರಲ್ಲಿ ಏನೇನೆಲ್ಲಾ ಬದಲಾಗಿದೆ. ಆದರೆ ಈ ಅತ್ತೆ-ಸೊಸೆ ಯಾಕೆ ಬದಲಾಗಲಿಲ್ಲ? ಅತ್ತೆ ತಾಯಿಯಾಗೋದಿಲ್ಲ, ಸೊಸೆ ಮಗಳಾಗೋದಿಲ್ಲ ಎಂಬ ಗಾದೆಯನ್ನು ಸುಳ್ಳು ಮಾಡಲು ಅವರೇಕೆ ಪ್ರಯತ್ನಿಸಲಿಲ್ಲ. ಈ ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ಪ್ಲೀಸ್ ತಿಳಿಸಿ...

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ