ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ದಿನ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲ ಪಕ್ಷಗಳೂ ಮೈ ಕೊಡವಿ ಮೇಲೇಳುತ್ತಿವೆ. ಪಕ್ಷ, ಪಕ್ಷಗಳ ನಡುವಣ ಚುನಾವಣೆ ಯುದ್ಧ ಒತ್ತಟ್ಟಿಗಿರಲಿ, ಟಿಕೆಟ್ ಗಿಟ್ಟಿಸುವುದೇ ಮಹಾಸಮರ ಸದೃಶವಾಗಿದೆ. ತಮಗೆ ಟಿಕೆಟ್ ಗಿಟ್ಟಿಸಿಕೊಳ್ಳುವುದು ಒಂದು ಕಡೆಯಾದರೆ, ತಮಗೆ ಆಗದವರಿಗೆ ಟಿಕೆಟ್ ತಪ್ಪಿಸುವುದು ಮತ್ತೊಂದೆಡೆ. ಹೀಗಾಗಿ ಈ ಚುನಾವಣೆ ನಿಜ ಅರ್ಥದಲ್ಲಿ ಕದನ ಕುತೂಹಲ ಮೂಡಿಸಿದೆ.
ಒಂದೊಂದು ಪಕ್ಷಕ್ಕೆ ಒಂದೊಂದು ಬಾಧೆ. ಟಿಕೆಟ್ ಸಮರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆಕಾಂಕ್ಷಿಗಳು ಬಹಳ ಮುಂದು. ದಿಲ್ಲಿ ಮತ್ತು ಬೆಂಗಳೂರು ನಡುವೆ ಅವರ ಓಡಾಟಕ್ಕೆ ಪಾರವೇ ಇಲ್ಲ. ಇಲ್ಲಿನ ನಾಯಕರು ಹಾಗೂ ಅದೇ ವೇಳೆಗೆ ದಿಲ್ಲಿಯ ವರಿಷ್ಠರನ್ನು ಓಲೈಸುವುದು ಚುನಾವಣೆಗಿಂದಲೂ ಮಿಗಿಲಾದ ಕೆಲಸ. ಆದರೆ ಈ ವಿಚಾರದಲ್ಲಿ ಜೆಡಿಎಸ್ ಆಕಾಂಕ್ಷಿಗಳು ಪುಣ್ಯ ಮಾಡಿದ್ದಾರೆ. ಏಕೆಂದರೆ ಹೈಕಮಾಂಡ್ ಬೆಂಗಳೂರಿನಲ್ಲೇ ಇದೆ. ಹೀಗಾಗಿ ದಿಲ್ಲಿ ಓಡಾಟದ ಶ್ರಮ ಹಾಗೂ ವಿಮಾನಯಾನ ಖರ್ಚು ಎರಡೂ ಉಳಿತಾಯ. ಆದರೆ ಟಿಕೆಟ್ ಗಳಿಕೆ ಕಸರತ್ತು ಇದ್ದೇ ಇದೆ. ಉಳಿದೆರಡು ಪಕ್ಷಗಳಷ್ಟು ಅಲ್ಲದಿದ್ದರೂ ಅವರ ಪಾಡು ಅವರದೇ.
ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಂತೂ ಟಿಕೆಟ್ ಗಲಾಟೆ ಚುನಾವಣೆ ಗೌಜನ್ನು ಮೀರಿಸಿದೆ. ಹಾಗೆ ನೋಡಿದರೆ ಕಾಂಗ್ರೆಸ್‌ಗಿಂತಲೂ ಬಿಜೆಪಿಯಲ್ಲಿ ಟಿಕೆಟ್ ಜಗಳ ಮೇರೆ ಮೀರಿದೆ. ನರೇಂದ್ರ ಮೋದಿ ಅಲೆ ಚುಂಗು ಹಿಡಿದಿರುವ ಬಿಜೆಪಿ ಮುಖಂಡರಿಗೆ ಈಗಾಗಲೇ ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಂತೆ, ಅ ಸರಕಾರದಲ್ಲಿ ತಾವು ಮಂತ್ರಿಯಾದಂತೆ ಕನಸು ಕುಣಿಯುತ್ತಿದೆ. ಹೀಗಾಗಿ ಶತಾಯ-ಗತಾಯ ಟಿಕೆಟ್ ಗಿಟ್ಟಿಸಲು ಇನ್ನಿಲ್ಲದ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ಈಗಿನ ಸಂಸತ್ ಚುನಾವಣೆ ಬಿಜೆಪಿ ಪಾಲಿಗೆ ಎಷ್ಟು ಮುಖ್ಯ ಹಾಗೂ ಅಧಿಕಾರದ ಅಭೀಪ್ಸೆ ಅದಕ್ಕಿಂತಲೂ ಎಷ್ಟು ಪ್ರಖರ ಎಂಬುದನ್ನು ಸಾರುತ್ತಿದೆ. ಹೀಗಾಗಿ ಬಿಜೆಪಿಯ ಹೋರಾಟ ಉಳಿದೆರಡು ಪಕ್ಷಗಳ ಗದ್ದಲವನ್ನು ಹಿಂದಿಕ್ಕಿದೆ.
ಜೆಡಿಎಸ್‌ನಲ್ಲಿ ಎಲ್ಲವೂ ಸಪಾಟು. ಏಕೆಂದರೆ ಪೈಪೋಟಿ ಕಡಿಮೆ. ಜತೆಗೆ ಹಿಂದಿನ ವಿಧಾನ ವಿಧಾನಸಭೆ ಹಾಗೂ ಎರಡು ಲೋಕಸಭೆ ಕ್ಷೇತ್ರಗಳ ಮರುಚುನಾವಣೆ ಸಾಕಷ್ಟು ಪಾಠ ಕಲಿಸಿದೆ. ಈ ಎರಡು ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿಯನ್ನು ಪಕ್ಷದ ಆಗಿನ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಹಿಸಿಕೊಂಡಿದ್ದರು. ಅದೂ ಬಲವಂತವಾಗಿಯೇ. ಇದರ ಫಲಿತಾಂಶ ಇದೀಗ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಹೊಣೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡರ ಹೆಗಲಿಗೆ ವರ್ಗಾಯಿಸಿದೆ. ಇದು ಸಹಜವಾಗಿಯೇ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮೂಗು ತೂರಿಸಬಾರದು ಎಂದು ದೇವೇಗೌಡರು ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಮೂರನೇ ಶಕ್ತಿ ಕಟ್ಟಲು ನಡೆದಿರುವ ಪ್ರಯತ್ನದಲ್ಲಿ ಗೌಡರು ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಹನ್ನೊಂದು ಪಕ್ಷಗಳ ಮುಖಂಡರು ದಿಲ್ಲಿಯಲ್ಲಿ ಸಭೆ ನಡೆಸಿದ್ದಾರೆ. ಇಲ್ಲೆಲ್ಲ ಲಗುಬಗೆಯಿಂದ ಓಡಾಡುತ್ತಿರುವ ಗೌಡರಿಗೆ ಕರ್ನಾಟಕದಲ್ಲಿ ಎಲ್ಲ 28 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು ಸವಾಲಿನ ಕೆಲಸವಾಗಿದೆ. ಈಗಾಗಲೇ ಪಕ್ಷದ ಪಾಲಾದ ಹತ್ತು ಗಂಭೀರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ. ಮೂರನೇ ಶಕ್ತಿಯ ಬಗ್ಗೆ ತಮ್ಮದೇ ಆದ ವಿಶ್ವಾಸ ಹಾಗೂ ಲೆಕ್ಕಾಚಾರಗಳನ್ನು ಹೊಂದಿರುವ ಗೌಡರು ಹಾಸನ ಅಥವಾ ಬೆಂಗಳೂರಿನ ಗ್ರಾಮಾಂತರ ಈ ಎರಡರ ಪೈಕಿ ಎಲ್ಲಿ ನಿಂತರೆ ಉತ್ತಮ ಎಂದು ವಿಚಾರ ಮಾಡುತ್ತಿದ್ದಾರೆ. ಎರಡೂ ಕಡೆ ನಿಂತರೆ ಹೇಗೆ ಎಂಬುದೂ ಮನಸ್ಸಿನಲ್ಲಿ ಸುಳಿದು ಹೋಗಿದೆ. ಅಭ್ಯರ್ಥಿಗಳು ಹಾಗೂ ಆರ್ಥಿಕ ಸಂಪನ್ಮೂಲ ಸದ್ಯಕ್ಕೆ ಆ ಪಕ್ಷದ ಮುಂದಿರುವ ದೊಡ್ಡ ಪ್ರಶ್ನೆ.
ಇನ್ನು ಕಾಂಗ್ರೆಸ್ ವಿಚಾರ. ಇಲ್ಲಿ ಮಿಶ್ರ ಗುಣಗಳ ನಡುವೆಯೇ ತಾಕಲಾಟ. ಸಂಪನ್ಮೂಲವೇನೋ ದಂಡಿಯಾಗಿದೆ. ಆದರೆ ವರ್ಚಸ್ಸು ಬರ್ಬಾದಾಗಿದೆ. ಕೇಂದ್ರ ಸರಕಾರದಲ್ಲಿ ಒಂದರ ಮೇಲೊಂದರಂತೆ ಬೆಳಕಿಗೆ ಬಂದ ಸಾವಿರಾರು, ಲಕ್ಷಾಂತರ ಕೋಟಿ ರುಪಾಯಿಗಳ ಹಗರಣಗಳು ಪಕ್ಷ ಹಾಗೂ ಪಕ್ಷದ ನಾಯಕರನ್ನು ಸಂಪದ್ಭರಿತವಾಗಿಸಿವೆ. ಆದರೆ ಹೆಸರು ಹರಾಜಾಗಿದೆ. ಆರ್ಥಿಕ ಬಲದಿಂದಲೂ ಚುನಾವಣೆ ಗೆಲ್ಲುವ ಪರಿಪಾಠ ಇದೆಯಾದರೂ, ಅದು ಎಲ್ಲ ಕಡೆ, ಎಲ್ಲ ಕಾಲದಲ್ಲೂ ಸಲ್ಲುತ್ತದೆ ಎಂದು ಹೇಳುವಂತಿಲ್ಲ. ಹೀಗಾಗಿ ಒಂದು ಕಡೆ ನಾಯಕರಿಗೆ ಅಭ್ಯರ್ಥಿಗಳ ಆಯ್ಕೆ ಕೆಲಸ ಕೊಟ್ಟಿದ್ದರೆ, ಇನ್ನೊಂದೆಡೆ ಈ ಚುನಾವಣೆಯಲ್ಲಿ ಸ್ಪರ್ಧಿಸುವುದು ಲಾಭವೇ, ನಷ್ಟವೇ ಎಂಬ ಲೆಕ್ಕಾಚಾರದ ಕೆಲಸವನ್ನು ಅಭ್ಯರ್ಥಿಗಳೇ ಕೈಗೆತ್ತಿಕೊಂಡಿದ್ದಾರೆ. ಇದು ಹೊಸ ಪ್ರಯೋಗಗಳಿಗೂ ಆಸ್ಪದ ಕೊಟ್ಟಿದೆ.
ಕೇಂದ್ರ ಸರ್ಕಾರದ ವೈಫಲ್ಯಗಳು ಒಂದು ಕಡೆ ಪಕ್ಷವನ್ನು ಬಾಧಿಸುತ್ತಿವೆ. ಅದೇ ಕಾಲಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿ ಇರುವುದು ಆಕಾಂಕ್ಷಿಗಳಲ್ಲಿ ಆಶಾಕಿರಣ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ಕಾಯ್ದುಕೊಳ್ಳಲು ಪಕ್ಷದ ಗೆಲುವಿಗೆ ಇನ್ನಿಲ್ಲದ ಶ್ರಮ ಹಾಕುತ್ತಾರೆ ಎಂಬ ವಿಶ್ವಾಸವೂ ಜತೆಗಿದೆ. ಹೀಗಾಗಿಯೇ ಈ ಚುನಾವಣೆ ಅಭ್ಯರ್ಥಿಗಳ ಪಾಲಿಗೆ ಮಿಶ್ರಗುಣಗಳ ಎರಕವಾಗಿದೆ.
ಈಗಾಗಲೇ ಒಂಬತ್ತು ಹಾಲಿ ಸಂಸದರು ಹಾಗೂ ಬೆಂಗಳೂರು ದಕ್ಷಿಣಕ್ಕೆ 'ಆಧಾರ' ಯೋಜನೆ ಹರಿಕಾರ ನಂದನ್ ನಿಲೇಕಣಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಪ್ರದೇಶ ಕಾಂಗ್ರೆಸ್ ಚುನಾವಣೆ ಸಮಿತಿ ಸಭೆ ಕಳುಹಿಸಿ ಕೊಟ್ಟಿರುವ ಅಭ್ಯರ್ಥಿಗಳ ಪಟ್ಟಿ ದಿಲ್ಲಿಯಲ್ಲಿ ವಯಲಾರ್ ರವಿ ನೇತೃತ್ವದ ಪರಿಶೀಲನಾ ಸಮಿತಿ ಸಭೆಯಲ್ಲಿ ಪರಾಮರ್ಶೆಗೆ ಒಳಗಾಗಿದೆ. ಆದರೆ ಸೋನಿಯಾ ಗಾಂಧಿ ಅಧ್ಯಕ್ಷತೆಯ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಪಟ್ಟಿಯನ್ನು ಅಂತಿಮಗೊಳಿಸಲಿದ್ದು ಅಲ್ಲಿಯವರೆಗೂ ಏನನ್ನೂ ಹೇಳುವಂತಿಲ್ಲ.
ಈ ಮಧ್ಯೆ ಹೊಸಬರಿಗೆ ಅದರಲ್ಲೂ ಯುವಕರಿಗೆ ಆದ್ಯತೆ ನೀಡಬೇಕೆಂಬ ಸೂಚನೆಯನ್ನು ಪಕ್ಷದ 'ಯುವರಾಜ' ರಾಹುಲ ಗಾಂಧಿ ನೀಡಿದ್ದಾರೆ. ಜತೆಗೆ ಬೆಂಗಳೂರು ಉತ್ತರ ಹಾಗೂ ಮಂಗಳೂರಿನಲ್ಲಿ ಪಕ್ಷದ ಸಾಂಸ್ಥಿಕ ಪ್ರತಿನಿಧಿಗಳ ಮತದಾನದ ಆಧಾರದ ಮೇರೆಗೆ ಆಯ್ಕೆ ಮಾಡಲಾಗುತ್ತಿದೆ. ಈ ಹೊಸ ಪ್ರಯೋಗಕ್ಕೆ ರಾಹುಲ ಗಾಂಧಿ ಅವರದೇ ಸೂಚನೆ. ಈ ಎಲ್ಲ ಕಾರಣಗಳಿಂದ ರಾಜ್ಯ ಮುಖಂಡರು ತಮ್ಮ ಮಕ್ಕಳು ಹಾಗೂ ಬೆಂಬಲಿಗರನ್ನು ಕಣಕ್ಕಿಳಿಸಲು ಹೋರಾಡುತ್ತಿದ್ದಾರೆ.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಪುತ್ರ ಹರ್ಷ ಮೊಯ್ಲಿ, ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಅವರ ಪುತ್ರಿ ನಿವೇದಿತ್ ಆಳ್ವ, ರಾಜ್ಯದ ಸಚಿವ ಆರ್.ವಿ. ದೇಶಪಾಂಡೆ ಅವರ ಪುತ್ರ ಪ್ರಶಾಂತ್ ದೇಶಪಾಂಡೆ, ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್, ಮತ್ತಿತರರ ಹೆಸರು ತೇಲಿ ಬಂದಿರುವುದು ಇದೇ ಕಾರಣಕ್ಕಾಗಿಯೇ. ಈ ಬಾರಿ ಗೆಲ್ಲದಿದ್ದರೂ ಮುಂದಿನ ಬಾರಿಗೆ ಸಜ್ಜಾಗುತ್ತಾರೆ ಎಂಬ ಮಾತಿನೊಂದಿಗೆ ಹೊಸಬರಿಗೆ ಅವಕಾಶ ನೀಡಲು ರಾಹುಲ್ ಗಾಂಧಿ ಇಚ್ಛಿಸಿರುವುದರಿಂದ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ತೀರಾ ಕಷ್ಟ ಅಲ್ಲದಿದ್ದರೂ ಒಂದು ಹಂತಕ್ಕೆ ಶ್ರಮ ಕೊಟ್ಟಿರುವುದು ಸುಳ್ಳಲ್ಲ. ಇದರ ನಡುವೆ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ತಮ್ಮ ಬೆಂಬಲಿಗರ ಬನ್ನಿಗೆ ನಿಂತಿರುವುದರಿಂದ ಯಥಾಪ್ರಕಾರ ಪ್ರತಿಷ್ಠೆಯ ಸಮರ ಚಾಲ್ತಿಯಲ್ಲಿರುತ್ತದೆ.
ಇನ್ನು ಬಿಜೆಪಿ ವಿಚಾರ. ರಗಳೇ ಇರುವುದೇ ಇಲ್ಲಿ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂಬ ನಿರೀಕ್ಷೆ ರಾಜ್ಯದಲ್ಲಿ ಆಕಾಂಕ್ಷಿಗಳ ನಡುವೆ 'ರಾಮಾಯಣ', 'ಮಹಾಭಾರತ' ಯುದ್ಧವೇ ನಡೆಯುತ್ತಿದೆ. ಹಳಬರು 'ಹಿರಿತನ' ಬಿಟ್ಟು ಕೊಡಲು ಬಿಲ್‌ಕುಲ್ ಒಪ್ಪುತ್ತಿಲ್ಲ. ಹೊಸಬರು ಅವಕಾಶ ಕಳೆದುಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಇಲ್ಲಿ ವರಿಷ್ಠರಿಗೆ ಅಭ್ಯರ್ಥಿಗಳ ಆಯ್ಕೆಗಿಂತ ಆಕಾಂಕ್ಷಿಗಳ ನಡುವಣ 'ಕಾದಾಟ'ವನ್ನು ಸಂಭಾಳಿಸುವುದೇ ದೊಡ್ಡ ಸಮಸ್ಯೆಯಾಗಿದೆ.
ಒಂದು ಕಡೆ ಮೂರ್ನಾಲ್ಕು ಬಾರಿ ಗೆದ್ದಿರುವ ಪ್ರಹ್ಲಾದ್ ಜೋಷಿ, ಅನಂತ ಕುಮಾರ್, ಅನಂತ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಸಿದ್ದೇಶ್ ಅವರಂಥ ನಾಯಕರಿಗೆ ಪಾರಮ್ಯ ಉಳಿಸಿಕೊಳ್ಳುವ ಹವಾಹಪಿ. ಇನ್ನೊಂದೆಡೆ ಪ್ರತಿಪಕ್ಷ ಸ್ಥಾನವನ್ನು 'ನಿರುದ್ಯೋಗ ಸಮಸ್ಯೆ' ಎಂಬಂತೆ ಭಾವಿಸಿರುವ ಅಶೋಕ್, ಯಡಿಯೂರಪ್ಪ, ಸದಾನಂದಗೌಡ, ಅವರಂಥವರಿಗೆ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಯಾವುದಾದರೂ ಅಧಿಕಾರ ಹಿಡಿಯಬೇಕೆಂಬ ಹಂಬಲ. ಇವರು ಗೆದ್ದು ಬಂದರೆ ತಮಗೆಲ್ಲಿ ಅಡ್ಡಗಾಲಾಗುತ್ತಾರೋ ಎಂಬ ಚಿಂತೆ ಹಳಬರದು. ಹೀಗಾಗಿ ಒಬ್ಬರ ಕಾಲು ಎಳೆಯಲು ಮತ್ತೊಬ್ಬರು ಮುಂದಾಗಿದ್ದಾರೆ. ಇದರಿಂದ ಟಿಕೆಟ್ ಗಳಿಕೆಯೇ ಕದನಸದೃಶವಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರಕ್ಕೆ ನಡೆದಿರುವ ಪೈಪೋಟಿ ಇದಕ್ಕೊಂದು ಉತ್ತಮ ಉದಾಹರಣೆ. ಸದ್ಯಕ್ಕೇನೋ ಅಲ್ಲಿಗೆ ಅಶೋಕ್ ಅವರ ಹೆಸರನ್ನೇ ಅಖೈರು ಮಾಡಲಾಗಿದೆಯಾದರೂ ಹಗ್ಗ ಜಗ್ಗಾಟ ತೆರೆಮರೆಯಲ್ಲಿ ಮುಂದುವರಿದಿದ್ದು, ಕೊನೆಕ್ಷಣದ ಬದಲಾವಣೆಗಳಾದರೆ ಅಚ್ಚರಿ ಇಲ್ಲ. ಸಂಸದ ಅನಂತ ಕುಮಾರ್ ಬೆಂಬಲಿತ ಮಾಜಿ ಡಿಸಿಎಂ ಅಶೋಕ್ ಹಾಗೂ ಮಾಜಿ ಸಿ.ಎಂ. ಸದಾನಂದ ಗೌಡರ ನಡುವೆ ಸಮರವೇ ನಡೆದಿತ್ತು. ಬೆಂಗಳೂರನ್ನು ತಮ್ಮ ಕಬ್ಜದಲ್ಲಿ ಇಟ್ಟುಕೊಳ್ಳಲು ಅನಂತಕುಮಾರ್ ಹಾಗೂ ಅಶೋಕ್ ಹವಣಿಸುತ್ತಿದ್ದಾರೆ ಎಂದು ಸದಾನಂದ ಗೌಡ ಪಕ್ಷದ ಸಭೆಯಲ್ಲಿ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಅದೂ ಏಕವಚನದಲ್ಲಿ. ಇವರ ಹೋರಾಟದ ಕಾವು ಹೇಗಿದೆಯೆಂದರೆ ಇದೇ ಕ್ಷೇತ್ರದ ಹಾಲಿ ಸಂಸದ ಡಿ.ಬಿ.ಚಂದ್ರೇಗೌಡ ಪಕ್ಷ ತ್ಯಜಿಸಲು ಮುಂದಾಗಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಜಗಳ ಎಷ್ಟು ತಾರಕಕ್ಕೇರಿದೆ ಎಂದರೆ, ಅಭ್ಯರ್ಥಿ ಘೋಷಣೆ ಆದ ಮೇಲೂ ಸೆಣಸಾಟ ಮುಂದುವರಿದರೆ ಅಶೋಕ ಹಾಗೂ ಡಿ.ವಿ. ಸದಾನಂದಗೌಡ ಇಬ್ಬರನ್ನೂ ಬಿಟ್ಟು ಮೂರನೇಯವರಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂದು ಮುಖಂಡರು ಆಲೋಚನೆ ನಡೆಸುತ್ತಿದ್ದಾರೆ. ಇಲ್ಲಿಯೂ ಒಂದು ವಿಶೇಷ. ಮೂರನೇ ವ್ಯಕ್ತಿಗೆ ಕೊಡುವುದಾದರೆ ತಾವು ಹೇಳಿದವರಿಗೇ ಆಗಬೇಕು ಎಂಬ ಹಠಕ್ಕೆ ಅಶೋಕ ಹಾಗೂ ಸದಾನಂದಗೌಡರು ಬಿದ್ದಿದ್ದಾರೆ. ನನಗೆ ಟಿಕೆಟ್ ಸಿಗದಿದ್ದರೂ ಚಿಂತೆ ಇಲ್ಲ. ಆದರೆ, ನನ್ನ ಎದುರಾಳಿಗಾಗಲಿ ಅಥವಾ ಆತನ ಬೆಂಬಲಿಗರಿಗಾಗಲಿ ಟಿಕೆಟ್ ಸಿಗಬಾರದು ಎಂಬ ಧೋರಣೆ ಅವರದು. ಎಂಥ ಹೃದಯ ವೈಶಾಲ್ಯ?!
ಇದಕ್ಕೆ ಕಾರಣಗಳು ಇಲ್ಲದಿಲ್ಲ. ಬೆಂಗಳೂರಿನಲ್ಲಿ ಅನಂತಕುಮಾರ್ ಹಾಗೂ ಅಶೋಕ ಕಾಂಬಿನೇಷನ್ ಮೊದಲಿನಿಂದಲೂ ಕೆಲಸ ಮಾಡಿಕೊಂಡೇ ಬರುತ್ತಿದೆ. ಮಹಾನಗರ ಪಾಲಿಕೆಯಿಂದ ಲೋಕಸಭೆ ಚುನಾವಣೆವರೆಗೂ ಯಾರಿಗಾದರೂ ಟಿಕೆಟ್ ಕೊಡುವುದಿರಲಿ ಅಥವಾ ಟಿಕೆಟ್ ತಪ್ಪಿಸುವುದಿರಲಿ ಇಬ್ಬರದು ಜಂಟಿ ಕಾರ್ಯಾಚರಣೆ. ಸದಾನಂದಗೌಡರು ಬೆಂಗಳೂರಿನಲ್ಲಿ ಸ್ಪರ್ಧಿಸಿ ಗೆದ್ದರೆ ಇಲ್ಲಿ ತಮ್ಮದೇಯಾದ ಪ್ರಭಾವ ವಲಯ ಸೃಷ್ಟಿಸಿಕೊಳ್ಳಬಹುದು ಎಂಬ ಚಿಂತೆ ಈ ಇಬ್ಬರು ನಾಯಕರದ್ದು. ಹೀಗಾಗಿ ಅವರಿಗೆ ಟಿಕೆಟ್ ತಪ್ಪಿಸಲು ಸಂಘಟಿತ ಪ್ರಯತ್ನ ನಡೆಸಿದ್ದಾರೆ. ಆದರೆ, ಇದು ಸದಾನಂದಗೌಡರ ಬಾಯಲ್ಲಿ ಬೈಗುಳವಾಗಿ ಚಿಮ್ಮುತ್ತಿದ್ದು, ಸಾರ್ವಜನಿಕರ ಸೆಳೆಯಲು ಕಾರಣವಾಗಿದೆ.
ರಾಜ್ಯದ ಬಿಜೆಪಿ ನಾಯಕರು ಜಿಲ್ಲೆಯ ವರಿಷ್ಠ ಮಟ್ಟದಲ್ಲಿ ಸಾಧಿಸಿರುವ ಸಂಪರ್ಕ ಕೂಡ ಇಲ್ಲಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಲಾಲಕೃಷ್ಣ ಆಡ್ವಾಣಿಯವರ ನಾಯಕತ್ವ ಬದಲಾಗಿ ನರೇಂದ್ರ ಮೋದಿಯವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿದ್ದಂತೆ ರಾಜ್ಯದ ಲೆಕ್ಕಾಚಾರಗಳು ಕೂಡ ಅದಲು ಬದಲಾಗಿವೆ. ಹಿಂದೆ ಆಡ್ವಾಣಿಯವರಿಗೆ ಹತ್ತಿರವಾಗಿದ್ದ ನಾಯಕರನ್ನು ಪಕ್ಕಕ್ಕೆ ಸರಿಸಿ ನರೇಂದ್ರ ಮೋದಿಯವರಿಗೆ ಹತ್ತಿರವಾಗಲು ರಾಜ್ಯದ ಅನೇಕ ನಾಯಕರು ಶತಪ್ರಯತ್ನ ನಡೆಸಿದ್ದಾರೆ. ಅದು ಕೂಡ ಈ ಟಿಕೆಟ್ ಗಳಿಕೆ ಪ್ರಕ್ರಿಯೆಯ ಮೇಲೆ ಗಂಭೀರ ಪ್ರಭಾವ ಬೀರಿದೆ. ಈ ಪ್ರಭಾವದ ಹಿಂದೆ ಅಧಿಕಾರ ಗಳಿಕೆಯ ಉದ್ದೇಶ ಅಡಗಿದೆ. ಒಟ್ಟಾರೆ ಲೋಕಸಭೆ ಚುನಾವಣೆ ದಿನ ಘೋಷಣೆಗೆ ಮೊದಲೇ ರಾಜ್ಯದ ಪ್ರಮುಖ ಪಕ್ಷಗಳಲ್ಲಿ 'ಆಂತರಿಕ ಚಟುವಟಿಕೆ' ಗರಿಗೆದರಿದೆ. ಟಿಕೆಟ್ ಸಿಕ್ಕರಲ್ಲವೇ ಚುನಾವಣೆ? ಹೀಗಾಗಿ ಟಿಕೆಟ್ ಗಳಿಕೆ ಪ್ರಕ್ರಿಯೆ ಆಕಾಂಕ್ಷಿಗಳನ್ನು ಹಿಡಿದು ಅಲ್ಲಾಡಿಸುತ್ತಿದೆ. ಚುನಾವಣೆ ಮೊದಲ ಹಂತದಲ್ಲೇ ಇಷ್ಟೆಲ್ಲಾ ಆದರೆ ಚುನಾವಣೆ ಮುಗಿಯುವುದರೊಳಗೆ ರಾಜ್ಯ ಅದೆಂತಹ, ಅದೆಷ್ಟು ನಾಟಕಗಳಿಗೆ ಸಾಕ್ಷಿಯಾಗಬಹುದು ಊಹಿಸಿ.
ಲಗೋರಿ: ಕನಸನ್ನು ಯಾರು ಬೇಕಾದರೂ ಕಾಣಬಹುದು. ಆದರೆ, ಕಂಡವರೆಲ್ಲರಿಗೂ ಅದು ನನಸಾಗುವುದಿಲ್ಲ.
- ಪಿ. ತ್ಯಾಗರಾಜ್
thyagarjun@gmail.com