ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ತೃತೀಯ ರಂಗ, ಇದು ಎಂಥವರ ಸಂಗ?

Srinivasa Murthy VN
Updated On : 10 Feb 2014, 10:46 am

ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಕೆಲವು ರಾಜಕೀಯ ಪಕ್ಷಗಳು ಮುಖ್ಯವಾಗಿ ಪ್ರಾದೇಶಿಕ ಪಕ್ಷಗಳು ತೃತೀಯ ರಂಗವೆಂಬ ಒಕ್ಕೂಟವೊಂದನ್ನು ರಚಿಸಿಕೊಂಡು 2014ರ ಸಂಸತ್ ಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿರುವ ಪ್ರಸ್ತಾಪ ದಿನಪತ್ರಿಕೆಗಳಲ್ಲಿ ಓದಿ ಆಶ್ಚರ್ಯವಾಯಿತು. ಅಚ್ಚರಿ ಏಕೆಂದರೆ ನಮ್ಮ ದೇಶದ ರಾಜಕಾರಣಿಗಳು ಮತದಾರರನ್ನು ನೋಡುವ ಬಗೆಗೆ. ಸಾರ್ವಜನಿಕರನ್ನು ಸುಲಭದಲ್ಲಿ ಮರುಳುಗೊಳಿಸಬಹುದೆಂಬ ನಂಬಿಕೆಯ ಮೇಲೆ ಚುನಾವಣಾ ಸೌಧವನ್ನು ಕಟ್ಟುತ್ತಾರೆ. ಇಲ್ಲಿಯ ತನಕ ಈ ತಂತ್ರಗಾರಿಕೆ ಫಲನೀಡಿರಬಹುದು. ಮುಂದೆಯೂ ಫಲ ಕೊಟ್ಟೀತೇ? ಒಕ್ಕೂಟ ರಚಿಸಲು ಉತ್ಸುಕರಾದ ಪಕ್ಷಗಳ ನೇತಾರರು ಆಲೋಚಿಸಬೇಕಾದ ಅಗತ್ಯವಿದೆ. ಕಾರಣವೇನೆಂದರೆ ಈ ಚಿಲ್ಲರೆ ಪಕ್ಷಗಳು ಒಂದಾಗುವ ಪ್ರಯತ್ನಗಳು ಹಿಂದೆ ಅನೇಕ ಬಾರಿ ನಡೆದಿದೆ. ಆದರೆ ಯಾವ ಸಂದರ್ಭದಲ್ಲಿಯೂ ಅದು ನಿರೀಕ್ಷಿತ ಫಲ ನೀಡಲಿಲ್ಲ. ಅಂದರೆ ಅವುಗಳು ಒಂದಾಗಿ ಉಳಿದು ಮುಂದುವರಿಯಲೂ ಇಲ್ಲ. ಸಾರ್ವಜನಿಕರಿಗೆ ಕಿಂಚಿತ್ ಪ್ರಯೋಜನವೂ ಆಗಲಿಲ್ಲ.
ಉದಾಹರಣೆ ಎಂದರೆ ತುರ್ತು ಪರಿಸ್ಥಿತಿಯ ಅಂತ್ಯದ ವೇಳೆ ಜನ್ಮ ತಾಳಿದ ಜನತಾಪಾರ್ಟಿ. ತುರ್ತು ಪರಿಸ್ಥಿತಿ ಹೇರಿಕೆಯಿಂದ ದಯನೀಯ ಸ್ಥಿತಿಯನ್ನು ಅನುಭವಿಸಿದ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳು ತಾವು ಒಂದಾಗಿ ಹೋರಾಡಿದರೆ ಮಾತ್ರ ಬಲಿಷ್ಟ ಕಾಂಗ್ರೆಸ್ಸನ್ನು ಸದೆ ಬಡಿಯಬಹುದು ಹಾಗೂ ಸಾರ್ವಜನಿಕ ಕ್ಷೇಮವನ್ನು ಮರಳಿ ಸ್ಥಾಪಿಸಬಹುದು ಎಂಬ ತೀರ್ಮಾನಕ್ಕೆ ಬಂದವು. ಹೀಗೆ ಒಂದಾದವುಗಳಲ್ಲಿ ಪ್ರಮುಖವಾದವುಗಳೆಂದರೆ ಭಾರತೀಯ ಲೋಕದಳ, ಕ್ರಾಂತಿದಳ, ಸ್ವತಂತ್ರಪಾರ್ಟಿ, ಪ್ರಜಾಸೋಶಲಿಸ್ಟ್ ಪಾರ್ಟಿ, ಸೋಶಲಿಸ್ಟ್ ಪಾರ್ಟಿ, ಸಂಯುಕ್ತ ಸೋಶಲಿಸ್ಟ್ ಪಾರ್ಟಿ, ಭಾರತೀಯ ಜನಸಂಘ, ಕಾಂಗ್ರೆಸ್(ಒ), ಕಾಂಗ್ರೆಸ್(ಆರ್), ದೇವರಾಜ್ ಅರಸು ಅವರ ಕಾಂಗ್ರೆಸ್ ಹೀಗೆ ಹನ್ನೆರಡು ಪಕ್ಷಗಳು ಸೇರಿ ಜನತಾಪಾರ್ಟಿ 1977ರಲ್ಲಿ ಉದಯಕ್ಕೆ ಬಂತು. ಆ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನೂ ಸಾಧಿಸಿತು. ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಪ್ರಯತ್ನವನ್ನೂ ಮಾಡಿತು.
ಅತ್ಯುತ್ಕೃಷ್ಟ ಆರ್ಥಿಕ ಸುಧಾರಣೆ ಹಾಗೂ ಪ್ರಗತಿಪರ ವಿದೇಶಿ ಧೋರಣೆಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನದಲ್ಲಿದ್ದಾಗಲೇ ಪಕ್ಷದೊಳಗೆ ಆಂತರಿಕ ಕಲಹ ಆರಂಭವಾಯಿತು. ಪರಿಣಾಮವಾಗಿ 1979ರ ಮಧ್ಯಭಾಗದಲ್ಲಿಯೇ ಸರಕಾರ ಪತನಗೊಂಡಿತು. ತುರ್ತು ಪರಿಸ್ಥಿತಿಯ ಕಹಿಯನ್ನನುಭವಿಸಿದ ಜನ ಹರಸಿದ ಜನತಾಪಾರ್ಟಿ ಸರ್ಕಾರ ಎರಡು ವರ್ಷ ಪೂರ್ತಿಗೊಳಿಸುವ ಮೊದಲೇ ಪತನವಾಗಲು ಎದ್ದುಕಾಣುವ ಕಾರಣ ಅಂತಕಲಹ. ಇದರ ವೈಫಲ್ಯ ಹೇಗಿತ್ತೆಂದರೆ, ತುರ್ತು ಪರಿಸ್ಥಿತಿಯ ಕರಾಳತೆಗೆ ಬೆಚ್ಚಿ ಇನ್ನೆಂದೂ ಕಾಂಗ್ರೆಸ್‌ಗೆ ಮತ ಹಾಕಲಾರೆವು ಎಂಬಂಥ ನಿರ್ಧಾರಕ್ಕೆ ಬಂದಿದ್ದ ಜನ, ಇವರ ಜಗಳದಿಂದ ಬೇಸತ್ತು ಮತ್ತೆ ಅದನ್ನೇ ಆರಿಸಿ ತರುವಷ್ಟು!
ಅದರ ವೈಫಲ್ಯದ ಕಾರಣ ಇಂದಿಗೂ ಪ್ರಸ್ತುತವೇ. ಅನೇಕ ರಾಜಕೀಯ ಪಕ್ಷಗಳು ವಿಲೀನಗೊಂಡು ಒಂದು ಹೊಸ ರಂಗ ಹುಟ್ಟಿಕೊಳ್ಳುತ್ತದಾದರೂ ಅದರಲ್ಲಿರುವ ಸದಸ್ಯರು ವಿವಿಧ ರಾಜಕೀಯ ಸಿದ್ಧಾಂತ ಹಾಗೂ ಸೀಮಿತ ಉದ್ದೇಶವುಳ್ಳವರಾಗಿರುತ್ತಾರೆ ಎಂಬುದನ್ನು ಅಲ್ಲಗಳೆಯಲಾಗದು. ಆದಾಗ್ಯೂ ವಿಲೀನಗೊಳ್ಳುವಾಗ ತಾತ್ವಿಕವಾಗಿ ಸಮರೂಪದ ಪಾಕವಾಗಿ ಒಂದಾಗ ತಕ್ಕದ್ದು. ಅದು ನೈಜ ವಿಲೀನ. ಆದರೆ ಜನತಾಪಾರ್ಟಿಯ ಪ್ರಕರಣದಲ್ಲಿ ಹಾಗಾಗಲಿಲ್ಲವೆಂಬುದು ಖಚಿತ. ನಮ್ಮ ದೇಶದ ರಾಜಕಾರಣಿಗಳಿಗೆ ಅಧಿಕಾರವೇ ಪ್ರಧಾನ. ದೇಶದ ಬಗೆಗಿನ ಸ್ಪಂದನ ಎಂಬುದು ಬರೇ ಸೋಗು. ಇದನ್ನು ಜನತಾ ಪಾರ್ಟಿ ಪ್ರಯೋಗವೇ ಸಾಬೀತು ಮಾಡಿದೆ. ಒಂದಾಗುವಾಗ ಎಷ್ಟು ಹೋಳುಗಳು ಸೇರಿದ್ದವೋ ಒಡೆಯುವಾಗ ಒಂದು ಹೋಳು ಜಾಸ್ತಿ. ಅದುವೆ ಜನತಾಪಾರ್ಟಿ.
ಪ್ರಸಕ್ತ ಭಾರತೀಯ ರಾಜಕೀಯದಲ್ಲಿ ಸಂಚಲನವನ್ನುಂಟು ಮಾಡಲು ಆಸಕ್ತಿ ತೋರಿಸುತ್ತಿರುವ ಈ ತೃತೀಯ ರಂಗವೂ ಅಧಿಕಾರಕ್ಕೆ ಬಂದಲ್ಲಿ ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವ ಭರವಸೆ ಇಲ್ಲ. ಈಗಿರುವ ಒಕ್ಕೂಟ ಸರ್ಕಾರದ ಕಾರ್ಯವೈಖರಿಯನ್ನು ಗಮನಿಸುವಾಗ ಮೇಲಿನ ಅಭಿಪ್ರಾಯ ಸ್ವಯಂ ವೇದ್ಯವಾದೀತು. ಈಗಿನ ಯುಪಿಎ ಹಾಗೂ ಹಿಂದಿನ ಎನ್‌ಡಿಎ ಸರ್ಕಾರಗಳಲ್ಲಿ ಒಂದು ರಾಷ್ಟ್ರೀಯ ಪಕ್ಷವಾದರೂ ಮುಂಚೂಣಿಯಲ್ಲಿದೆ. ಆದರೆ ಪ್ರಕೃತ ಹುಟ್ಟು ಹಾಕಿದ ತೃತೀಯ ರಂಗದಲ್ಲಿ ಒಂದು ರಾಷ್ಟ್ರೀಯ ಪಕ್ಷದ ಪ್ರಾತಿನಿಧ್ಯವೂ ಇಲ್ಲ. ಈ ರಂಗ ಪ್ರಾದೇಶಿಕ ಪಕ್ಷಗಳ ಒಕ್ಕೂಟ. ಹೆಚ್ಚು ಸ್ಥಾನ ಗಳಿಸಿದ ಪ್ರಾದೇಶಿಕ ಪಕ್ಷವೊಂದು ಈ ದೇಶವನ್ನು ಮುನ್ನಡೆಸುವ ಕಾಲ ಪ್ರಾಪ್ತವಾಗಬಹುದು. ಪ್ರಾದೇಶಿಕ ಹಾಗೂ ಚಿಲ್ಲರೆ ಪಕ್ಷಗಳು ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವುದಿಲ್ಲ. ಅವುಗಳು ಜನ್ಮ ತಳೆದಿರುವುದೇ ಸೀಮಿತ ಉದ್ದೇಶಗಳನ್ನು ಹೊತ್ತು. ಮುಖ್ಯವಾಗಿ ಸ್ಥಳೀಯ ಸಮಸ್ಯೆಗಳ ನಿವಾರಣೆಗಾಗಿ ಹುಟ್ಟಿಕೊಂಡು ಕ್ರಮೇಣ ರಾಜಕೀಯ ಪಕ್ಷಗಳಾಗಿ ಪರಿವರ್ತನೆಗೊಂಡವುಗಳು. ಹೀಗೆ ವಿವಿಧ ಹಿನ್ನೆಲೆಗಳಿರುವ ರಾಜಕೀಯ ಪಕ್ಷಗಳು ತಮ್ಮ ಮೂಲ ಅಸ್ತಿತ್ವ ಉಳಿಸಿಕೊಂಡೇ ತೃತೀಯ ರಂಗದ ರಚನೆ; ವಿಲೀನವಲ್ಲ. ಅರ್ಥಾತ್ ಕೇವಲ ಚುನಾವಣಾ ಹೊಂದಾಣಿಕೆ. ಹಾಗಾಗಿ ಮುಂದೆ ತಾತ್ವಿಕವಾಗಿ ದೀರ್ಘಕಾಲ ಸಮನ್ವಯತೆಯನ್ನು ಸಾಧಿಸಲು ವಿಫಲವಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಗೆದ್ದರೆ ಅಧಿಕಾರ. ಒಂದಷ್ಟು ದಿನ ಸಾಮರಸ್ಯದ ಸೋಗಿನಲ್ಲಿ ಆದಷ್ಟು ಲೂಟಿ ಮಾಡಬಹುದೆಂಬ ಲೆಕ್ಕಾಚಾರ ಅಷ್ಟೆ.
ಚುನಾವಣೆಗೋಸ್ಕರ ಒಂದಾಗುವುದೆಂದರೆ ಕೇವಲ ಅಧಿಕಾರಕ್ಕಾಗಿ ಎಂಬುದು ಕನ್ನಡಿಯಲ್ಲಿ ಮುಖ ನೋಡಿದಂತೆ ಸ್ಪಷ್ಟ. ಸಾರ್ವಜನಿಕ ಹಿತಾಸಕ್ತಿಯ ಲೇಶವೂ ಇರುವುದಿಲ್ಲ. ಇಲ್ಲೊಂದು ಅಲಿಖಿತ ಒಪ್ಪಂದ ಇರಬಹುದಾದರೂ ಒಪ್ಪಂದ ಮುರಿದರೆ ಯಾರಿಗೂ ಸಜೆ ಇಲ್ಲ. ನಷ್ಟವಾದರೆ ದೇಶಕ್ಕಾದೀತು. ಭಾರತೀಯ ಪ್ರಜಾಸತ್ತೆಯಲ್ಲಿ ಇದೊಂದು ಅಪಾಯಕಾರಿ ಬೆಳವಣಿಗೆ. ಈ ವ್ಯವಸ್ಥೆ ಉತ್ತಮ ಫಲಿತಾಂಶ ನೀಡಲಾರದು ಹಾಗೂ ಈ ತನಕ ನೀಡಿರುವುದಿಲ್ಲವೆನ್ನುವುದು ನಮ್ಮ ಅನುಭವ. ಇದು ಬಹುಪಕ್ಷೀಯ ವ್ಯವಸ್ಥೆಯ ದುರುಪಯೋಗ ಎಂದರೆ ತಪ್ಪಾಗಲಾರದು. ಈ ದೃಷ್ಟಿಯಲ್ಲಿ ಕೇವಲ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವ ರಾಜಕೀಯ ಪಕ್ಷಗಳ ಭಾವಶುದ್ಧಿಯನ್ನು ಪ್ರಶ್ನಿಸುವ ಕಾಲ ಸನ್ನಿಹಿತವಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರು ರಾಷ್ಟ್ರೀಯ ಪಕ್ಷಗಳ ಬಲವರ್ಧನೆಗೆ ಒತ್ತು ಕೊಡಬೇಕಾದ ಅನಿವಾರ್ಯತೆ ಇದೆ.
ರಾಜಕೀಯ ಪಕ್ಷವನ್ನು ಸಂಘಟಿಸುವುದು ನಮ್ಮ ಸಾಂವಿಧಾನಿಕ ಹಕ್ಕು ಎಂಬ ವಾದವಿದೆ. ಅದಕ್ಕೆ ವಿರೋಧವಿಲ್ಲ. ಆದರೆ ಇದು ಅನಿರ್ಬಂಧಿತ ಹಕ್ಕಲ್ಲ. ಸಂಘಟನೆಯೊಂದು ಈ ದೇಶದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತ್ವವನ್ನು ಎತ್ತಿ ಹಿಡಿದು ರಾಷ್ಟ್ರೀಯತೆಯನ್ನು ಪ್ರತಿಪಾದಿಸುವುದಾದರೆ ಮಾತ್ರ ರಾಜಕೀಯ ಪಕ್ಷವೆಂಬ ಮಾನ್ಯತೆ ನೀಡಬೇಕೆಂಬ ಷರತ್ತು ಚುನಾವಣಾ ಕಾನೂನಿನಲ್ಲಿದೆ. ಆದರೆ ಅದರ ಪರಾಮರ್ಶೆ ನಡೆಸಲು ವಿಶಿಷ್ಟ ಮಾನದಂಡ ಅಥವಾ ಪ್ರತ್ಯೇಕ ವ್ಯವಸ್ಥೆ ಸದ್ಯ ಇಲ್ಲದಿರುವುದು ವಿಷಾದಕರ. ಹಾಗಾಗಿ ನಾಯಿಕೊಡೆಗಳಂತೆ ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುತ್ತಿವೆ. ಇದು ದೇಶದ ಅಖಂಡತೆಗೆ ಧಕ್ಕೆ ತಂದೀತೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಇಂಥ ವಿದ್ಯಮಾನದಲ್ಲಿ ಮತದಾರರ ಪಾತ್ರ ಮಹತ್ವ ಪೂರ್ಣವಾದದ್ದು. ರಾಜಕೀಯ ಸಂಘಟನೆಯನ್ನು ರಚಿಸುವ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸದೆ ಅನುಚಿತ ಸಂಘಟನೆಗಳ ಹುಟ್ಟನ್ನು ನಿಯಂತ್ರಿಸುವ  ಅವಕಾಶವಿರುವುದು ಸದ್ಯ ಮತದಾರರಿಗೆ ಮಾತ್ರ. ಅಂಥ ಪಕ್ಷಗಳನ್ನು ಬೆಂಬಲಿಸುವ ಬದಲು ರಾಷ್ಟ್ರೀಯ ಪಕ್ಷವನ್ನು ಮುಖ್ಯವಾಗಿ ಸಾರ್ವತ್ರಿಕ ಚುನಾವಣೆಯಲ್ಲಿ  ಬೆಂಬಲಿಸಿ ಪ್ರಾದೇಶಿಕ ಪಕ್ಷಗಳು ಮಾಡುವ ಬಹು ಪಕ್ಷೀಯ ವ್ಯವಸ್ಥೆಯ ದುರುಪಯೋಗವನ್ನು ತಡೆಯಲು ಮತದಾರರು ಮುಂದಾಗಬೇಕು.

 ಬೇಳೂರು ರಾಘವ ಶೆಟ್ಟಿ, ಉಡುಪಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement