ಈತನ ಹೆಸರು ರವಿ ಗುಲಾಟಿ. ಈತ ಎಂಬಿಎ ಪದವೀಧರ. 1990ರ ದಶಕದಲ್ಲಿಯೇ ಈತನಿಗೆ ಕೆನಡಾದಲ್ಲಿ ದೊಡ್ಡ ಸಂಬಳದ ನೌಕರಿಯಿತ್ತು. ಆದರೆ, ಯಂತ್ರದಂತೆ ದುಡಿಯಲು ನಿರಾಕರಿಸಿದ ಈತ ರಾಜೀನಾಮೆ ಬಿಸಾಕಿ ದೆಹಲಿಗೆ ವಾಪಸಾದ. ಆನಂತರದಲ್ಲಿ ಕೃಷಿಕ ಆಗಬೇಕು ಅಂದುಕೊಂಡಿದ್ದವನು 'ಅಕ್ಷರ ಹಂಚುವ' ಕಿಂದರ ಜೋಗಿಯಾದ. ಹಲವರಿಂದ Extraordinary Indian ಅನ್ನಿಸಿಕೊಂಡ. ಇದೆಲ್ಲಾ ಹೇಗಾಯಿತು ಎಂಬುದನ್ನು ಆತನ ಮಾತುಗಳಲ್ಲೇ ಕೇಳಿ:
'ನಾನು ಹುಟ್ಟಿದ್ದು, ಬೆಳೆದಿದ್ದೆಲ್ಲಾ ದೆಹಲಿಯ ಖಾನ್ ಮಾರ್ಕೆಟ್ ಪ್ರದೇಶದಲ್ಲಿ. ನಮ್ಮದು ಮಧ್ಯಮ ವರ್ಗದ ಕುಟುಂಬ. ನಮ್ಮ ತಾಯಿಯ ಹೆಸರು ಇಂದಿರಾ ಗುಲಾಟಿ. ನನಗೆ ಬುದ್ಧಿ ತಿಳಿದಾಗಿನಿಂದಲೂ ಅಮ್ಮ, ಅಂಗವಿಕಲ ಮಕ್ಕಳ ಏಳಿಗೆಗಾಗಿ ದುಡಿಯುವ ಎನ್‌ಜಿಒ ಒಂದರಲ್ಲಿ ಸ್ವಯಂ ಸೇವಕಿ ಆಗಿದ್ದರು. 'ನಮಗೆ ಇನ್ನೊಂದು ಜನ್ಮ ಎಂಬುದು ಇದೆಯೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ, ಈ ಜನ್ಮದಲ್ಲಿಯೇ ಸಾಧ್ಯವಾದಷ್ಟೂ ಮಟ್ಟಿಗೆ ಅಸಹಾಯಕರಿಗೆ ನೆರವಾಗಬೇಕು. ಆತ್ಮತೃಪ್ತಿಗಾಗಿ ಸಹಾಯ ಮಾಡಬೇಕೇ ವಿನಃ ಪ್ರತಿಫಲಾಪೇಕ್ಷೆಯಿಂದ ಸಹಾಯ ಮಾಡಬಾರದು' ಎಂಬುದು ಅಮ್ಮನ ನಿಲುವಾಗಿತ್ತು. ಭವಿಷ್ಯದಲ್ಲಿ ನೀನೂ ಹೀಗೆಯೇ ಬದುಕಬೇಕು ಎಂದು ಅಮ್ಮ ಆಗಿಂದಾಗ್ಗೆ ಹೇಳುತ್ತಲೇ ಇದ್ದಳು.
1994ರಲ್ಲಿ, ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ನನ್ನ ಎಂಬಿಎ ಮುಗಿಯಿತು. ಕ್ಯಾಂಪಸ್ ಇಂಟರ್‌ವ್ಯೂ ಕಾರಣದಿಂದ ಕೆನಡಾದ ಬಹುರಾಷ್ಟ್ರೀಯ ಕಂಪನಿಯಲ್ಲಿ ನೌಕರಿಯೂ ಸಿಕ್ಕಿತು. ಕಾರ್ಪೋರೇಟ್ ಕಂಪನಿ, ದೊಡ್ಡ ಸಂಬಳ ಮತ್ತು ವಿದೇಶದಲ್ಲಿ ಕೆಲಸ. ಮಧ್ಯಮ ವರ್ಗದಿಂದ ಬಂದ ಮಕ್ಕಳಿಗೆ ಇದಕ್ಕಿಂತ ಖುಷಿಯ ಸಂಗತಿ ಬೇರೇನಿದೆ? ನೌಕರಿಯ ಆದೇಶ ಪತ್ರ ಬಂದಾಗ ನಾನೂ ಜಿಗಿಜಿಗಿದು ಕುಣಿದಾಡಿದ್ದೆ. ಸಂಭ್ರಮದಿಂದಲೇ ಕೆನಡಾಕ್ಕೆ ಹೋಗಿದ್ದೆ.
ನಾಲ್ಕೇ ತಿಂಗಳಲ್ಲಿ ಭ್ರಮನಿರಸನವಾಯಿತು. ನನಗೆ ದೊರಕಿದ್ದ ನೌಕರಿಯಲ್ಲಿ ವಿಪರೀತ ಎಂಬಂಥ ಸಂಬಳವಿತ್ತು. ಮೋಜಿಗೆ ವೀಕೆಂಡ್ ಪಾರ್ಟಿಗಳಿದ್ದವು. ಬೋನಸ್, ಅಲೋಯನ್ಸ್‌ನಂಥ ಹಲವು ಅನುಕೂಲಗಳಿದ್ದವು. ಒಂದೇ ಮಾತಿನಲ್ಲಿ ಹೇಳುವುದಾದರೆ, ಬಾಸ್‌ಗಳು ಹೇಳಿದಂತೆಯೇ ಕೆಲಸ ಮಾಡಿಕೊಂಡು ಹೋಗಿದ್ದರೆ, ಹತ್ತೇ ವರ್ಷದ ಅವಧಿಯಲ್ಲಿ ಕೋಟ್ಯಾಧಿಪತಿಯಾಗುವ ಅವಕಾಶವಿತ್ತು. ಆದರೆ, ಕೆಲಸದಲ್ಲಿ 'ಸ್ವಾತಂತ್ರ್ಯ' ಎಂಬುದೇ ಇರಲಿಲ್ಲ. ನಮ್ಮ ನೆತ್ತಿಯ ಮೇಲೆ ಸದಾ ಡೆಡ್‌ಲೈನ್ ಹಾಗೂ ಟಾರ್ಗೆಟ್‌ನ ತೂಗುಗತ್ತಿ ನೇತಾಡುತ್ತಲೇ ಇತ್ತು. ಅವಧಿಗೆ ಮೊದಲೇ ಪ್ರಾಜೆಕ್ಟ್ ಮುಗಿಸಬೇಕಾದ ಸಂದರ್ಭದಲ್ಲಿ ಯಂತ್ರದ ಹಾಗೆ ದುಡಿಯಬೇಕಿತ್ತು. ಕೆಲವು ಸಂದರ್ಭಗಳಲ್ಲಿ ನಮ್ಮ ಜ್ಯೂನಿಯರ್‌ಗಳೊಂದಿಗೆ ಒರಟಾಗಿ ನಡೆದುಕೊಳ್ಳಬೇಕಿತ್ತು. ಅಂಥ ಸಂದರ್ಭದಲ್ಲೆಲ್ಲ ನನಗೆ ಹಿಂಸೆಯಾಗುತ್ತಿತ್ತು. ಆತ್ಮ ಸಂತೋಷವೇ ಇಲ್ಲವೆಂದ ಮೇಲೆ ಎಷ್ಟು ಸಂಪಾದಿಸಿದರೂ ವ್ಯರ್ಥ ಎಂದು ನನ್ನ ಒಳಮನಸ್ಸು ಪಿಸುಗುಡುತ್ತಿತ್ತು. ಮುಂದೆ, ಮನಸ್ಸಿಲ್ಲದ ಮನಸ್ಸಿನಿಂದಲೇ ಮತ್ತೆ ನಾಲ್ಕು ತಿಂಗಳು ಕೆಲಸ ಮಾಡಿದೆ. ನಂತರ ಗಟ್ಟಿ ಮನಸ್ಸು ಮಾಡಿ, ಕಾಪೋರೇಟ್ ಕಂಪನಿಯ ನೌಕರಿಗೆ ಮತ್ತು ಕೆನಡಾಕ್ಕೆ ಗುಡ್‌ಬೈ ಹೇಳಿ ದೆಹಲಿಗೆ ಬಂದು ಬಿಟ್ಟೆ. 'ಕೆನಡಾದಲ್ಲಿ, ನನಗಿಷ್ಟ ಬಂದಂತೆ ಕೆಲಸ ಮಾಡುವ ಸ್ವಾತಂತ್ರ್ಯವಿರಲಿಲ್ಲ. ಸದಾ ಯಂತ್ರದಂತೆ ದುಡಿಯುವುದು ನನಗೆ ಇಷ್ಟವಾಗಲಿಲ್ಲ. ಮುಂದೆ ಹಳ್ಳಿಗೆ ಹೋಗಿ, ಸ್ವಲ್ಪ ಜಮೀನು ಖರೀದಿಸಿ ಅಲ್ಲಿ ಬೇಸಾಯ ಮಾಡಿಕೊಂಡು ಬದುಕಬೇಕು ಎಂಬುದು ನನ್ನಾಸೆ ಎಂದು ಘೋಷಿಸಿದೆ. ಈ ಮಾತು ಕೇಳಿದ ತಂದೆಯವರು ಹಾಗೂ ಬಂಧುಗಳು ಬೆಚ್ಚಿ ಬಿದ್ದರು. ಲಕ್ಷಾಂತರ ರೂಪಾಯಿ ಸಂಬಳದ ನೌಕರಿಯನ್ನು ಬಿಟ್ಟು ಬಂದದ್ದೇ ತಪ್ಪು ಎಂದು ಬುದ್ಧಿ ಹೇಳಿದರು. ಈ ಸಂದರ್ಭದಲ್ಲಿ ನನ್ನ ನೆರವಿಗೆ ಬಂದಾಕೆ ಅಮ್ಮ. 'ಅವನಿಗೆ ಹೇಗೆ ಸರಿ ಅನಿಸುತ್ತೋ ಹಾಗೆ ಬದುಕಲಿ. ಯಾರೂ, ಯಾವ ರೀತಿಯಲ್ಲೂ ಅವನ ಮೇಲೆ ಒತ್ತಡ ಹಾಕಬೇಡಿ' ಎಂದಾಕೆ ಸ್ಪಷ್ಟವಾಗಿ ಹೇಳಿಬಿಟ್ಟಳು.
ನೌಕರಿ ತ್ಯಜಿಸಿ ದೆಹಲಿಗೆ ಬಂದ ನಂತರ, ವಿಪರೀತ ಎನ್ನುವಷ್ಟು ಬಿಡುವು ಸಿಕ್ಕಿತು. ನಮ್ಮ ಮನೆಯಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಭಾರೀ ಶ್ರೀಮಂತರು, ಆಫೀಸರ್‌ಗಳು, ವರ್ತಕರು ಹಾಗೂ ಉದ್ಯಮಿಗಳ ಮನೆಗಳಿದ್ದವು. ನಾವು ವಾಸವಿದ್ದ ಖಾನ್‌ಮಾರ್ಕೆಟ್, ಬಡವರು ಹಾಗೂ ಮಧ್ಯಮ ವರ್ಗದವರೇ ವಾಸವಿದ್ದ ಪ್ರದೇಶವಾಗಿತ್ತು. ಕ್ಷೌರಿಕರು, ಕಾರ್ ಡ್ರೈವರ್‌ಗಳು, ಸೆಕ್ಯುರಿಟಿ ಗಾರ್ಡ್‌ಗಳು, ಶ್ರೀಮಂತರ ಮನೆಗಳಲ್ಲಿ ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ, ತೋಟದ ಉಸ್ತುವಾರಿ ನೋಡಿಕೊಳ್ಳುವ ಜನರೇ ಈ ಪ್ರದೇಶದಲ್ಲಿ ವಾಸಿಸುತ್ತಾರೆ. ಮೇಲೆ ವಿವರಿಸಿದ ಎಲ್ಲ ಬಗೆಯ ನೌಕರರಿಗೂ ಕಡಿಮೆ ಸಂಬಳವಿರುತ್ತದೆ ಎಂದು ವಿವರಿಸಬೇಕಿಲ್ಲ ತಾನೆ? ಈ ನೌಕರರ ಮಕ್ಕಳೆಲ್ಲ ಖಾನ್ ಮಾರ್ಕೆಟ್‌ನ ಆಸುಪಾಸಿನಲ್ಲಿದ್ದ ಸರ್ಕಾರಿ ಶಾಲೆಗಳಿಗೆ ಹೋಗುತ್ತಿದ್ದರು. ಕೆಲವು ಮಕ್ಕಳು, ಸಂಜೆಯ ಹೊತ್ತು ನಮ್ಮ ಮನೆಗೆ ಬಂದು, ಅಮ್ಮನಿಂದ ಪಾಠ ಹೇಳಿಸಿಕೊಳ್ಳುತ್ತಿದ್ದರು.
ಹೀಗಿರುವಾಗಲೇ, ಅನಾರೋಗ್ಯದ ಕಾರಣದಿಂದ ತಂದೆ ತೀರಿಕೊಂಡರು. ಇದು ನಮ್ಮ ಕುಟುಂಬದ ಪಾಲಿಗೆ ದೊಡ್ಡ ಶಾಕ್. ದೆಹಲಿಯಿಂದ ದೂರವಿರುವ ಹಳ್ಳಿಗೆ ಹೋಗಿ ಜಮೀನು ಖರೀದಿಸಿ ಹೊಸ ಬದುಕು ಆರಂಭಿಸಬೇಕು ಎಂಬ ನಿರ್ಧಾರ ಮತ್ತಷ್ಟು ಗಟ್ಟಿಯಾದ ಸಂದರ್ಭ ಅದು. ಆಗ ಏನಾಯಿತೆಂದರೆ, ನಮ್ಮ ಮನೆಯ ಆಸುಪಾಸಿನಲ್ಲಿಯೇ ಇದ್ದ ದೋಬಿಯ ಮಗ ಹೇಮಂತ್ ಹಾಗೂ ತೋಟದ ಮಾಲಿಯ ಮಗ ಪ್ರಮೋದ್ ಮನೆಗೆ ಬಂದರು. ಅವರು 8ನೇ ತರಗತಿಯಲ್ಲಿದ್ದರು. ನನ್ನ ತಾಯಿಯಿಂದ ಗಣಿತದ ಪಾಠ ಹೇಳಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ನಾನು ಫ್ರೀ ಇದ್ದುದನ್ನು ಗಮನಿಸಿದ ಅಮ್ಮ, ಈ ಮಕ್ಕಳಿಗೆ ಪಾಠ ಹೇಳಿಕೊಡು ಅಂದರು. ಒಪ್ಪಿಕೊಂಡೆ. ಎಂಟನೇ ತರಗತಿಯಲ್ಲಿದ್ದ ಆ ಮಕ್ಕಳ ತಿಳಿವಳಿಕೆ ಗಮನಿಸಿದಾಗ ಶಾಕ್ ಆಯಿತು. ಏಕೆಂದರೆ, 5ರಲ್ಲಿ 2ನ್ನು ಕಳೆದರೆ ಬರುವ ಉತ್ತರ ಎಷ್ಟು ಎಂದೇ ಅವರಿಗೆ ಗೊತ್ತಿರಲಿಲ್ಲ! ಕೂಡುವ, ಕಳೆಯುವ ಲೆಕ್ಕವೇ ಬರುವುದಿಲ್ಲ ಅಂದ ಮೇಲೆ ಗುಣಾಕಾರದ ಬಗ್ಗೆ ವಿವರಿಸಬೇಕೆ? ಸರ್ಕಾರಿ ಶಾಲೆಯ ಶಿಕ್ಷಕರು ಸರಿಯಾಗಿ ಪಾಠ ಹೇಳಿ ಕೊಡದೆ ಪ್ರತಿ ವರ್ಷವೂ 'ಪಾಸ್' ಮಾಡಿ ಕೈತೊಳೆದುಕೊಂಡಿದ್ದರು. ಹೀಗೇ ಬಿಟ್ಟರೆ, ಹತ್ತನೇ ತರಗತಿಯಲ್ಲಿ ಈ ಹುಡುಗರು ಡುಮ್ಕಿ ಹೊಡೆಯುತ್ತಾರೆ. ಆನಂತರದಲ್ಲಿ, ಹರೆಯದ ಕಾರಣದಿಂದ ಮನಸ್ಸು ಚಂಚಲವಾಗುವುದರಿಂದ ಬಹುಶಃ ಇವರಿಬ್ಬರೂ ಓದುವುದೇ ಇಲ್ಲವೇನೋ ಅನಿಸಿಬಿಟ್ಟಿತು. ಈ ಮಕ್ಕಳಿಗೆ ಹತ್ತನೇ ತರಗತಿಯನ್ನು ಪಾಸ್ ಮಾಡುವಂಥ ಮಟ್ಟಕ್ಕೆ ಟ್ಯೂಷನ್ ನೀಡಿ ನಂತರ ಹಳ್ಳಿಗೆ ಹೋದರಾಯ್ತು ಅಂದುಕೊಂಡೆ. ಈ ನಿರ್ಧಾರಕ್ಕೆ ಅಮ್ಮನೂ ಸಮ್ಮತಿ ಸೂಚಿಸಿದಳು.
ಮರುದಿನದಿಂದಲೇ ಪಾಠ ಶುರುವಾಯಿತು. ಇದೆಲ್ಲಾ 1996ರ ಮಾತು. ಇಬ್ಬರೂ ಅದೆಷ್ಟು ಚುರುಕಿದ್ದರೆಂದರೆ, ಎರಡೇ ವಾರದಲ್ಲಿ ಗಣಿತದ ಪ್ರಾಥಮಿಕ ಪಾಠಗಳನ್ನು ಕಲಿತುಬಿಟ್ಟರು. ಆನಂತರದಲ್ಲಿ ಈ ಹುಡುಗರ ಸ್ನೇಹಿತರೂ ಕ್ಲಾಸ್‌ಗೆ ಬರತೊಡಗಿದರು. ಈ ಕಡೆ ಶಾಲೆಯಲ್ಲದ, ಆ ಕಡೆಗೆ ಟ್ಯೂಷನ್ ಕೇಂದ್ರವೂ ಆಗಿರದ ಕಲಿಕಾ ಕೇಂದ್ರವೊಂದನ್ನು ಆರಂಭಿಸಬೇಕು. ಅಲ್ಲಿ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬೇಕು ಎಂಬ ಯೋಚನೆ ಬಂದಿದ್ದೇ ಆಗ. ಇದರ ಪರಿಣಾಮವಾಗಿ ಶುರುವಾಗಿದ್ದೇ 'ಮಂಜಿಲ್' (ಮಂಜಿಲ್ ಎಂದರೆ ಮನೆ ಎಂದು ಅರ್ಥ). ಉಚಿತ ಕಲಿಕಾ ಕೇಂದ್ರಕ್ಕೆ ಮಂಜಿಲ್ ಎಂಬ ಹೆಸರು ಸೂಚಿಸಿದ್ದು ನನ್ನ ತಾಯಿ ಮತ್ತು ನಮ್ಮ ಕುಟುಂಬದ ಹಿತೈಷಿಯಾಗಿರುವ ಡಾ॥ ಗೀತಾ ಚೋಪ್ರಾ.
ಮೊದಲ ವರ್ಷ 20 ವಿದ್ಯಾರ್ಥಿಗಳೊಂದಿಗೆ ನಮ್ಮ ಕಲಿಕಾ ಪ್ರಯೋಗ ಮುಂದುವರಿಯಿತು. ಆ ವರ್ಷದ ಪರೀಕ್ಷೆಯಲ್ಲಿ ನಮ್ಮಿಂದ ಪಾಠ ಹೇಳಿಸಿಕೊಂಡವರೆಲ್ಲ ಹೆಚ್ಚು ಅಂಕ ಪಡೆದಿದ್ದರು. ಮರುವರ್ಷ, ಸಹಜವಾಗಿಯೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತು. ಕೆನಡಾದಲ್ಲಿ ದುಡಿದಿದ್ದ ಹಣ, ಫಿಕ್ಸೆಡ್ ಡೆಪಾಸಿಟ್‌ನ ರೂಪದಲ್ಲಿ ಇದ್ದುದರಿಂದ ಹಾಗೂ ಎನ್‌ಜಿಒ ಒಂದರಲ್ಲಿ ಸ್ವಯಂ ಸೇವಕಿಯಾಗಿದ್ದ ಕಾರಣ, ಅಮ್ಮನಿಗೆ ಪುಟ್ಟ ಮೊತ್ತದ ಸಂಬಳ ಸಿಗುತ್ತಿದ್ದರಿಂದ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆಯೇ 'ಪಾಠಶಾಲೆ' ಆಗಿದ್ದುದರಿಂದ ಖರ್ಚುಗಳ ಹೊಡೆತವಾಗಲಿ, ಹಣದ ಸಮಸ್ಯೆಯಾಗಲಿ ನಮ್ಮನ್ನು ಬಾಧಿಸಲಿಲ್ಲ. ಒಂದು ಬಾರಿ ಏನಾಯಿತೆಂದರೆ, ಒಂದು ಲೆಕ್ಕವನ್ನು ಎರಡನೇ ಬಾರಿ ಹೇಳಿಕೊಡಲು ಹೋದಾಗ ನನ್ನ ಮೊದಲ ವಿದ್ಯಾರ್ಥಿ ಹೇಮಂತ್ ಆಕ್ಷೇಪಿಸಿದ. ಸರ್, ಆಗಲೇ ಇದನ್ನು ಹೇಳಿಕೊಟ್ಟಿದ್ದೀರಿ. ಹೊಸದನ್ನು ಹೇಳಿಕೊಡಿ ಎಂದು ಒತ್ತಾಯಿಸಿದ. ಅವನ ತಿಳಿವಳಿಕೆಯನ್ನು ಪರೀಕ್ಷಿಸಬೇಕೆಂಬ ಉದ್ದೇಶದಿಂದ, ನಿನಗೆ ತುಂಬಾ ಚೆನ್ನಾಗಿ ಗೊತ್ತಿದೆ ಅಂದಮೇಲೆ ಅದನ್ನು ನೀನೇ ಉಳಿದೆಲ್ಲರಿಗೂ ಹೇಳಿಕೊಡು ಅಂದೆ. ಹೇಮಂತನಿಗೆ ಅದೆಂಥ ಕಾನ್ಫಿಡೆನ್ಸ್ ಇತ್ತು ಅಂದರೆ, ಆತ ಕಿಂಚಿತ್ತೂ ಅಳುಕದೆ ನನಗಿಂತ ಚೆನ್ನಾಗಿ ಪಾಠ ಹೇಳಿಬಿಟ್ಟ. ಈ ಘಟನೆ, ಹೊಸದೊಂದು ಪ್ರಯೋಗಕ್ಕೆ ನಾಂದಿಯಾಯಿತು. 'ಮಂಜಿಲ್‌ನಲ್ಲಿ ಎಲ್ಲರೂ ಶಿಕ್ಷಕರು ಮತ್ತು ಎಲ್ಲರೂ ವಿದ್ಯಾರ್ಥಿಗಳು' ಎಂಬ ಘೋಷವಾಕ್ಯದೊಂದಿಗೆ, ಯಾವುದೇ ವಿಷಯವನ್ನು ಚೆನ್ನಾಗಿ ತಿಳಿದಿದ್ದವರು, ಅದನ್ನು ಉಳಿದವರಿಗೆ ಹೇಳಿಕೊಡುವ ಸಂಪ್ರದಾಯ ಆರಂಭಿಸಿದೆವು. ಇದರಿಂದಾಗಿ, 10ನೇ ತರಗತಿಯ ಪಾಠ ಕಲಿಯಲು ಬರುವ ಜಾಣನೊಬ್ಬ, 9ನೇ ತರಗತಿಯ 'ಟೀಚರ್' ಆಗುವುದೂ ಸಾಧ್ಯವಾಯಿತು. ಸರ್ಕಾರಿ ಶಾಲೆಗಳ ಅವಧಿ ಮುಗಿದ ನಂತರ, ಅಂದರೆ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ 'ಮಂಜಿಲ್'ನ ಶಾಲೆಗಳು ನಡೆಯುತ್ತಿದ್ದುವು.
ಹೀಗೇ ವರ್ಷಗಳು ಉರುಳತೊಡಗಿದ್ದವು. 'ಮಂಜಿಲ್'ನ ಉಚಿತ ಶಾಲೆಯ ಸುದ್ದಿ ಒಬ್ಬರಿಂದ ಒಬ್ಬರಿಗೆ ತಲುಪಿ ದಿಲ್ಲಿಯಾದ್ಯಂತ ಸುದ್ದಿಯಾಯಿತು. ಪ್ರತಿ ವರ್ಷವೂ ಹೊಸ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದರು. 'ರ್ಯಾಂಕ್ ವಿಜೇತರನ್ನು ಸೃಷ್ಟಿಸಬೇಕು' ಎಂಬುದು ನನ್ನ ಗುರಿಯಾಗಿರಲೇ ಇಲ್ಲ. ಮೂರು ಹೊತ್ತಿನ ಅನ್ನ ಸಂಪಾದನೆಗೆ, ಸ್ವಾವಲಂಬಿ ಬದುಕಿಗೆ ನೆರವಾಗುವ ಗುಟ್ಟನ್ನು ತಿಳಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ಹಾಗಾಗಿ, ಶಾಲೆಗೆ ಹೋಗುತ್ತಿರುವವರು ಮಾತ್ರ ನಮ್ಮ ಕಲಿಕಾ ಕೇಂದ್ರಕ್ಕೆ ಬನ್ನಿ ಅನ್ನಲಿಲ್ಲ. ಬದಲಾಗಿ, ಕಲಿಯುವ ಆಸೆ ಇರುವವರೆಲ್ಲಾ ಬನ್ನಿ ಎಂದಷ್ಟೇ ಹೇಳಿದೆ. ಪರಿಣಾಮ, 28 ವರ್ಷದ ತಾಯಿಯೂ, ಆರು ವರ್ಷದ ಮಗುವೂ ಒಟ್ಟಿಗೇ ಬಂದು ಇಂಗ್ಲಿಷ್ ಕಲಿತರು. ಆನಂತರದ ದಿನಗಳಲ್ಲಿ ಡ್ಯಾನ್ಸ್, ಸಂಗೀತ, ನಾಟಕ, ಗೃಹಕೈಗಾರಿಕೆಯ ಕೆಲಸ ಹೇಳಿಕೊಡುವ ತರಗತಿಗಳೂ ಆರಂಭವಾದವು. ಪಾಠ ಹೇಳಿದ್ದಕ್ಕೆ ಶುಲ್ಕವಿರಲಿಲ್ಲ. ಆದರೆ ಶಿಸ್ತು ಕಲಿಸಬೇಕೆಂಬ ಉದ್ದೇಶದಿಂದ ಶಾಲೆಗೆ ತಡವಾಗಿ ಬಂದರೆ 'ದಂಡ' ವಿಧಿಸುವ ನಿಯಮವನ್ನು ಜಾರಿಗೆ ತರಲಾಯಿತು.
ನೀನು ಇಂಥದನ್ನೇ ಓದಬೇಕು ಎಂದು ಯಾವ ವಿದ್ಯಾರ್ಥಿಯನ್ನು ಒತ್ತಾಯಿಸಬಾರದು. ಆಯ್ಕೆಯನ್ನು ಅವರಿಗೇ ಬಿಡಬೇಕು. ಅಂಕ ಗಳಿಕೆಯ ಜೊತೆ ಜೊತೆಗೇ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಕಾರ್ಪೋರೇಟ್ ಸಂಸ್ಕೃತಿಯಿಂದ ದೂರವಿದ್ದು ನೆಮ್ಮದಿಯಿಂದ ಬದುಕಬಹುದು ಎಂಬ ಸಂಗತಿಯನ್ನು ಎಲ್ಲರಿಗೂ ಮನದಟ್ಟು ಮಾಡಿಸಬೇಕು ಎಂಬುದು ನನ್ನ ಸದಾಶಯ. ಈ ಉದ್ದೇಶದಿಂದಲೇ 'ಮಂಜಿಲ್'ನಲ್ಲಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್, ಕಂಪ್ಯೂಟರ್ ಲರ್ನಿಂಗ್ ಕೋರ್ಸ್ ಆರಂಭಿಸಲಾಗಿದೆ. ನಮ್ಮಲ್ಲಿ ಕಲಿಯಲು ಬಂದವರಿಗೆ ನಾನು ಹೇಳುವುದಿಷ್ಟೆ: 'ನಾವು ನಿಮ್ಮಿಂದ ಫೀ ಪಡೆಯುವುದಿಲ್ಲ. ನೀವು ಕಲಿತಿದ್ದನ್ನು ನಾಲ್ಕು ಜನರಿಗೆ ಉಚಿತವಾಗಿ ಹೇಳಿಕೊಡಿ. ಕಷ್ಟದಲ್ಲಿ ಇದ್ದವರಿಗೆ ಪ್ರತಿಫಲ ಬಯಸದೇ ಸಹಾಯ ಮಾಡಬೇಕು. ನಿಮ್ಮ ನೆಪದಲ್ಲಿ ನಾವು ಒಂದು ದೀಪ ಹಚ್ಚಿದ್ದೇವೆ. ನೀವು, ನಾಲ್ಕು ದೀಪಗಳು ಬೆಳಗಲು ಕಾರಣರಾಗಿ. ಮುಂದೆ ಆ ನಾಲ್ಕು ದೀಪಗಳು ಎಂಟಾಗಲಿ. ಮುಂದೆ, ದೀಪಗಳ ಸಂಖ್ಯೆ ಹೆಚ್ಚುತ್ತಲೇ ಹೋಗಲಿ...'
ನನ್ನ ಹೆಮ್ಮೆ ಏನೆಂದರೆ, ಮಂಜಿಲ್‌ನಲ್ಲಿ ಪಾಠ ಹೇಳಿಸಿಕೊಂಡ ನೂರಾರು ಮಂದಿ, ತಮ್ಮ ನೆರೆಹೊರೆಯಲ್ಲಿರುವ ಹತ್ತಾರು ಮಂದಿಗೆ ಹಲವು ಬಗೆಯಲ್ಲಿ ನೆರವಾಗಿದ್ದಾರೆ. ನಮ್ಮಲ್ಲಿ ಪಾಠ ಹೇಳಿಸಿಕೊಂಡ ಡ್ರೈವರ್‌ಗಳ, ಸೆಕ್ಯೂರಿಟಿಯವರ, ದೋಬಿಗಳ ಮಕ್ಕಳು ಆಫೀಸರ್‌ಗಳಾಗಿದ್ದಾರೆ. ನಮ್ಮ ಈ ಬೆಳವಣಿಗೆಗೆ ಮುಖ್ಯ ಕಾರಣ 'ಮಂಜಿಲ್'ನಲ್ಲಿ ಕಲಿತ ಪಾಠ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಉತ್ತಮ ಸ್ಥಿತಿಯಲ್ಲಿರುವ ಕೆಲವರು-ಸ್ವಯಂ ಸೇವಕರಾಗಿ ಬಂದು ಪಾಠ ಮಾಡಿದ್ದಾರೆ. ನಮ್ಮ ಸಂಸ್ಥೆಯ ಕೆಲಸ ಗುರುತಿಸಿದ ಹಲವರು ದೇಣಿಗೆ ನೀಡಿ, ನಿಮ್ಮ 'ಸೇವೆಯಲ್ಲಿ' ನಮ್ಮದೂ ಚಿಕ್ಕಪಾಲು ಸೇರಿಸಿಕೊಳ್ಳಿ ಎಂದು ವಿನಂತಿಸಿದ್ದಾರೆ.
ಮೊದಲೇ ವಿವರಿಸಿದಂತೆ-'ಮಂಜಿಲ್' ಒಂದು ಕಲಿಕಾ ಕೇಂದ್ರ. ನಾನು, ಅಮ್ಮ ಮತ್ತು ಡಾ. ಗೀತಾ ಚೋಪ್ರಾ, ಕೇವಲ ಆತ್ಮಸಂತೋಷಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಅಥವಾ ವಿದೇಶಿ ಫಂಡ್‌ನ ನೆರವು ನಮಗಿಲ್ಲವೇ ಇಲ್ಲ. ಆ ಬಗ್ಗೆ ನಾವು ಕನಸಿನಲ್ಲೂ ಯೋಚಿಸಿಲ್ಲ. ದೆಹಲಿಯ ಖಾನ್ ಮಾರ್ಕೆಟ್ ಪ್ರದೇಶದಲ್ಲಿದ್ದ ನಮ್ಮ ಮನೆಯಲ್ಲೇ 14 ವರ್ಷಗಳ ಕಾಲ 'ಮಂಜಿಲ್'ನ ಶಾಲೆ ನಡೆಸಿದ್ದಾಯ್ತು. ಈಗ ಸೂಜನ್‌ಸಿಂಗ್ ಪಾರ್ಕ್ ಬಡಾವಣೆಯ ಬಾಡಿಗೆ ಕಟ್ಟಡದಲ್ಲಿ ಮಂಜಿಲ್ ಕಲಿಕಾ ಕೇಂದ್ರ ಕೆಲಸ ನಿರ್ವಹಿಸುತ್ತಿದೆ. ಈಗ ನಮ್ಮೊಂದಿಗೆ ಏಳು ಮಂದಿ ಶಿಕ್ಷಕರಿದ್ದಾರೆ. ಮಂಜಿಲ್‌ನ ಬಗ್ಗೆ ತಿಳಿದಿರುವ ಕೆಲವರು, ನಮ್ಮ ಹಳೆಯ ವಿದ್ಯಾರ್ಥಿಗಳು ಕೊಡುವ ದೇಣಿಗೆಯಿಂದ ಶಿಕ್ಷಕರಿಗೆ ಸಂಬಳ ಹಾಗೂ ಕಟ್ಟಡದ ಬಾಡಿಗೆ ಪಾವತಿಸಲಾಗುತ್ತಿದೆ.
'ಸರ್ವರಿಗೂ ಶಿಕ್ಷಣ ಲಭಿಸಬೇಕು ಎಂಬುದನ್ನು ವಿಶಿಷ್ಟ ರೀತಿಯಲ್ಲಿ ನಿಜ ಮಾಡಿರುವವರು ನೀವು. ದೆಹಲಿಯಿಂದಾಚೆಗೂ ಮಂಜಿಲ್‌ನ ಶಾಖೆಗಳನ್ನು ಆರಂಭಿಸಿ' ಎಂದು ಹಲವರು ಹೇಳುತ್ತಿದ್ದಾರೆ. ಇಂಥ ಕೆಲಸ ನನಗೆ ಮಾತ್ರ ಸೀಮಿತವಾಗಬಾರದು. ನಮ್ಮ ಕೆಲಸ ನೋಡಿ ಹತ್ತಾರು ಮಂದಿ ಇಂಥದೇ 'ಜ್ಞಾನದ ದೀಪ' ಹಚ್ಚುವ ಕೆಲಸಕ್ಕೆ ಮುಂದಾಗಲಿ ಎಂದು ನನ್ನ ಅಪೇಕ್ಷೆ. ಈಗಾಗಲೇ ದೆಹಲಿಯಲ್ಲಿ ಅಧ್ಯಯನ್ ಹಾಗೂ ಪ್ರೇಮ್ ಎಂಬ ಹೆಸರಿನ ಕಲಿಕಾ ಕೇಂದ್ರಗಳು ಆರಂಭವಾಗಿವೆ. ಇಂಥವುಗಳ ಸಂಖ್ಯೆ ದೇಶದ ಉದ್ದಗಲಕ್ಕೂ ಆರಂಭವಾದರೆ ನನಗೆ ದೊಡ್ಡ ಖುಷಿಯಾಗುತ್ತದೆ. ಈವರೆಗಿನ 18 ವರ್ಷಗಳ ಸೇವೆಯಲ್ಲಿ 500ಕ್ಕೂ ಹೆಚ್ಚು ಮಂದಿಗೆ ಪಾಠ ಹೇಳಿದ್ದೇನೆ. ಅವರೆಲ್ಲಾ ನೌಕರಿ ಪಡೆದಿದ್ದಾರೆ. ಆ ನೆಪದಲ್ಲಿ 500 ಕುಟುಂಬಗಳು ಆರ್ಥಿಕವಾಗಿ ಭದ್ರತೆ ಕಂಡುಕೊಂಡಿವೆ. ಇಂಥದೊಂದು ಬೆಳವಣಿಗೆಗೆ ಪರೋಕ್ಷವಾಗಿ ಕಾರಣನಾದ ಹೆಮ್ಮೆ ನನ್ನದು. ಜೀವಿತಾವಧಿಯ ಉದ್ದಕ್ಕೂ ಉಚಿತವಾಗಿ ಪಾಠ ಹೇಳುತ್ತಲೇ ಇರಬೇಕು ಎಂಬ ಹಿರಿಯಾಸೆಯೂ ನನ್ನದು' ಎನ್ನುತ್ತಾ ನಸುನಕ್ಕು ಮಾತು ನಿಲ್ಲಿಸಿದರು ರವಿ ಗುಲಾಟಿ.
ನೂರು ಮಂದಿಗೆ ಆದರ್ಶವಾಗುವಂತೆ ಬದುಕುತ್ತಿರುವ ರವಿ ಗುಲಾಟಿ ಅವರನ್ನು ಅಭಿನಂದಿಸಬೇಕು ಅನ್ನಿಸಿದರೆ: mail@manzil.in
-ಎ.ಆರ್. ಮಣಿಕಾಂತ್
armanikanth@gmail.com