ಅಂಕಣಗಳು

ನೀರು ಕೊಟ್ಟರೆ ಸಾಲದು, ಕೊಯ್ಲೂ ಬೇಕು

ಸಚಿವ ಎಚ್.ಕೆ.ಪಾಟೀಲ ಅವರಿಗೆ, ನೀರಿನ ವಿಚಾರದಲ್ಲಿ ನಿಮಗಿರುವ ಕಾಳಜಿ ಪ್ರಶ್ನಾತೀತ.

ಸನ್ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ ಅವರಿಗೆ,
ನೀರಿನ ವಿಚಾರದಲ್ಲಿ ನಿಮಗಿರುವ ಕಾಳಜಿ ಪ್ರಶ್ನಾತೀತ. ಅಧಿಕಾರ ಇರಲಿ, ಇಲ್ಲದಿರಲಿ, ನಿಮ್ಮ ಬದ್ಧತೆ ಬಗ್ಗೆ ಎರಡು ಮಾತಿಲ್ಲ. ಅದು ನೀರಾವರಿ ವಿಚಾರಗಳೇ ಇರಬಹುದು, ಕುಡಿಯುವ ನೀರಿನ ವಿಚಾರವೇ ಇರಬಹುದು. ಒಬ್ಬ ರಾಜಕಾರಣಿ ಎನ್ನುವುದಕ್ಕಿಂತ ಜಲತಜ್ಞನಾಗಿ ಸರ್ಕಾರಗಳಿಗೆ ಮಾರ್ಗದರ್ಶನ ಮಾಡುತ್ತಲೇ ಬಂದಿದ್ದೀರಿ. ಹಿಂದೆ ಜಲ ಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯದ ನೀರಾವರಿ ಯೋಜನೆಗಳ ವಿಚಾರದಲ್ಲಿ ತಾವು ತೋರಿಸಿದ ಕಾಳಜಿ ಮರೆಯಲಾಗದು. ವಿಶೇಷತಃ ಉತ್ತರ ಕರ್ನಾಟಕ ಭಾಗದಲ್ಲಿ ನನೆಗುದಿಗೆ ಬಿದ್ದಿದ್ದ ಬಹಳಷ್ಟು ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದಿರಿ. ಬ್ಯಾರೇಜ್‌ಗಳ ನಿರ್ಮಾಣ ಕೈಗೊಂಡಿರಿ. ಈಗ ಗ್ರಾಮೀಣಾಭಿವೃದ್ಧಿ ಖಾತೆ ವಹಿಸಿಕೊಂಡ ಬಳಿಕವೂ ಗ್ರಾಮೀಣ ನೈರ್ಮಲ್ಯ, ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮೊದಲಾದ ವಿಚಾರಗಳ ಬಗ್ಗೆ ಆದ್ಯತೆ ನೀಡಿದ್ದೀರಿ. ನಿಮ್ಮ ಕ್ಷೇತ್ರದಲ್ಲಂತೂ ಈಗ 'ನೀರಿನ ಪಾಟೀಲ'ರೇ ಆಗಿಬಿಟ್ಟಿದ್ದೀರಿ. ನೀವು ಸ್ಥಾಪಿಸಿದ 'ಎನಿ ಟೈಮ್ ವಾಟರ್‌' (ಎಟಿಡಬ್ಲ್ಯೂ) ಕಲ್ಪನೆ ಈಗ ರಾಜಧಾನಿ ಬೆಂಗಳೂರಿನ ಕೆಲವು ಜನಪ್ರತಿನಿಧಿಗಳ ಕಣ್ಣು ತೆರೆಸಿದೆ; ಹೇಗೆ ನೀವು ಎರಡು ರುಪಾಯಿ ನಾಣ್ಯ ಹಾಕಿದರೆ 20 ಲೀಟರ್ (ಪ್ರತಿ ಲೀಟರ್‌ಗೆ ಹತ್ತು ಪೈಸೆ) ನೀರು ಸಿಗುವ ವ್ಯವಸ್ಥೆ ಮಾಡಿದ್ದೀರೊ, ಅದೇ ರೀತಿ ಇಲ್ಲಿಯೂ ಕಡಿಮೆ ದರದಲ್ಲಿ ಮಿನರಲ್ ವಾಟರ್ ಒದಗಿಸುವ ವ್ಯವಸ್ಥೆ ಜಾರಿಗೆ ತಂದಿದ್ದಾರೆ ಎಂದರೆ ಅದರ ಶ್ರೇಯ ಮೊದಲು ನಿಮಗೇ ಸಲ್ಲಬೇಕು.
ಆದರೆ, ನಿಮ್ಮ ಗದಗ ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಾರ್ಯ ಆರಂಭಿಸಿರುವ ಎಟಿಡಬ್ಲ್ಯೂಗಳ ವಿಚಾರದಲ್ಲಿ ಒಂದಷ್ಟು ಸಂಗತಿಗಳನ್ನು ನಿಮ್ಮ ಗಮನಕ್ಕೆ ತರಬೇಕಾದದ್ದು ನನ್ನ ಕರ್ತವ್ಯ ಎಂದುಕೊಳ್ಳುತ್ತೇನೆ. ನಿಮ್ಮ ನೀರಿನ ಕಾಳಜಿಯನ್ನು ಗಮನದಲ್ಲಿ ಇಟ್ಟುಕೊಂಡೇ ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ.
ಕೆ.ಎಚ್. ಪಾಟೀಲ ಪ್ರತಿಷ್ಠಾನವು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ಥಾಪಿಸಿರುವ ಎಟಿಡಬ್ಲ್ಯೂಗಳಿಗಾಗಿ ಅಳವಡಿಸಿಕೊಂಡಿರುವುದು ರಿವರ್ಸ್ ಒಸ್ಮೊಸಿಸ್ (ಆರ್‌ಒ) ತಂತ್ರಜ್ಞಾನವನ್ನು. ಜಗತ್ತಿನಾದ್ಯಂತ ಮಿನರಲ್ ವಾಟರ್ ಹೆಸರಿನಲ್ಲಿ ಬಾಟಲಿಯಲ್ಲಿ ನೀರು ಮಾರಾಟ ಮಾಡುವ ಕಂಪನಿಗಳು ಅಳವಡಿಸಿಕೊಂಡಿರುವುದೂ ಇದೇ ತಾಂತ್ರಿಕತೆಯನ್ನು. ಸತ್ಯ ಎಂದರೆ 'ಮಿನರಲ್ ವಾಟರ್‌'ನಲ್ಲಿ ಖನಿಜಗಳೇ ಇರುವುದಿಲ್ಲ ಎನ್ನುವುದು. ಆರ್‌ಒ ಪ್ರಕ್ರಿಯೆಯಲ್ಲಿ ನೀರಿನಲ್ಲಿರುವ ಕ್ಯಾಲ್ಶಿಯಂ, ಮ್ಯಾಗ್ನೇಶಿಯಂ ಮೊದಲಾದ ಮಹತ್ವದ ಖನಿಜಗಳೂ ನೀರಿನಿಂದ ಬೇರ್ಪಡುತ್ತವೆ. ಇದರಿಂದ ಜನರಿಗೆ ಖನಿಜ ರಹಿತ ನೀರು ಸಿಗುತ್ತಿದೆ ಮತ್ತು ಇದು ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತರಬಹುದು ಎನ್ನುವ ಕೂಗು ಈಗ ವಿಶ್ವದಾದ್ಯಂತ ಎದ್ದಿದೆ. ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೂ ನೀರನ್ನು ಶುದ್ಧೀಕರಿಸಿದ ಬಳಿಕ ಅದಕ್ಕೆ ಪುನಃ ಖನಿಜಾಂಶಗಳನ್ನು (ಮಿನರಲೈಸೇಶನ್ ಆಫ್ ವಾಟರ್) ಸೇರಿಸಿ ಪೂರೈಸುವುದು ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ. ಇದು ನಿಮ್ಮ ಗಮನಕ್ಕೆ ಅಷ್ಟೆ.
ಮುಖ್ಯವಾಗಿ ಆರ್‌ಒ ಸ್ಥಾವರಗಳ ಕುರಿತಾಗಿ ಆಕ್ಷೇಪವೊಂದಿದೆ. ಅದೆಂದರೆ ಇಲ್ಲಿ ನೀರು ಅಧಿಕ ಪ್ರಮಾಣದಲ್ಲಿ ಪೋಲಾಗುತ್ತದೆ ಎನ್ನುವುದು. ನೀರಿನ ಟಿಡಿಎಸ್ (ಟೋಟಲ್ ಡಿಸಾಲ್ವಡ್ ಸಾಲಿಡ್ಸ್- ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇದು ಪ್ರತಿ ಲೀಟರ್‌ಗೆ 1000 ಎಂಜಿ ಇದ್ದರೆ ಕುಡಿಯಲು ಯೋಗ್ಯ. ಅದಕ್ಕಿಂತ ಹೆಚ್ಚಿದ್ದರೆ ಕುಡಿಯಲು ಬಳಸಬಾರದು) ಮಟ್ಟ ಆಧರಿಸಿ ಈ ಪ್ರಮಾಣ ಶೇ. 60ರಿಂದ 70ರವರೆಗೂ ಇರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಉತ್ತರ ಕರ್ನಾಟಕ ಭಾಗದಲ್ಲಿ ಟಿಡಿಎಸ್ ಸ್ವಲ್ಪ ಹೆಚ್ಚೇ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅಲ್ಲಿ ಅಂತರ್ಜಲ ಮಟ್ಟವೂ ಗಣನೀಯವಾಗಿ ಕುಸಿದಿದೆ. ಹೀಗಾಗಿ ಆರ್‌ಒ ಸ್ಥಾವರಗಳಿಗೆ ಬಹಳ ಆಳದಿಂದ ನೀರನ್ನು ಎತ್ತಬೇಕು ಮತ್ತು ಅದಕ್ಕೆ ಅಧಿಕ ಪ್ರಮಾಣದ ವಿದ್ಯುತ್ ವ್ಯಯವಾಗುತ್ತದೆ. ಹೀಗಾಗಿ ಜಲ ಸಂರಕ್ಷಣೆಯ ತತ್ವವೇ ಇಲ್ಲಿ ನೀರುಪಾಲಾದಂತೆ ಆಗುವುದಿಲ್ಲವೆ? ಒಂದು- ವ್ಯರ್ಥವಾಗುವ ನೀರಿನ ಪ್ರಮಾಣ. ಎರಡು- ಕೊಳವೆ ಬಾವಿಗಳ ಮೂಲಕ ಬಹಳ ಆಳದಿಂದ ನೀರನ್ನು ಎತ್ತುವುದರಿಂದ ಅಂತರ್ಜಲಕ್ಕೆ ಧಕ್ಕೆ. ಈ ಎರಡೂ ನಿಟ್ಟಿನಿಂದ ಯೋಚಿಸಿದರೂ ಇದು ನಿಜ ಅನ್ನಿಸುವುದಿಲ್ಲವೆ?
ಅಲ್ಪಾವಧಿಗೆ ಆರ್‌ಒ ಸ್ಥಾವರಗಳು ಸರಿ. ಆದರೆ ದೀರ್ಘಾವಧಿಯಲ್ಲಿ ಇವುಗಳ ನಿರ್ವಹಣೆ ಕಷ್ಟ. ಸ್ಥಾವರಗಳು ಚೆನ್ನಾಗಿ ನಡೆಯಬಹುದು. ಆದರೆ, ಅವುಗಳಿಂದ ಹೊರಹೊಮ್ಮುವ ರಾಸಾಯನಿಕ ತ್ಯಾಜ್ಯಗಳ ನಿರ್ವಹಣೆ? ಅದು ಅಂದುಕೊಂಡಷ್ಟು ಸುಲಭವಲ್ಲ. ಸದ್ಯಕ್ಕೆ ನಿಮಗೆ ಈ ಸಮಸ್ಯೆ ಅಷ್ಟಾಗಿ ಬಾಧಿಸಿರಲಿಕ್ಕಿಲ್ಲ. ಆದರೆ ಎಟಿಡಬ್ಲ್ಯೂಗಳ ಸಂಖ್ಯೆ ಹೆಚ್ಚಿದಂತೆಲ್ಲ ತ್ಯಾಜ್ಯದ ಪ್ರಮಾಣವೂ ಹೆಚ್ಚುತ್ತದೆ. ಅಲ್ಲಲ್ಲಿ ಸ್ಥಳೀಯವಾಗಿ ಪಂಚಾಯಿತಿಗಳು ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಸ್ಥಾವರಗಳು ಇರುವುದರಿಂದ ಇದು ಗಂಭೀರ ಸಮಸ್ಯೆ ಅಂತ ಅನ್ನಿಸದೆಯೂ ಇರಬಹುದು. ಆಯಾ ಗ್ರಾಮಗಳವರು ಏನು ಮಾಡಬಹುದು? ಇಂಥ ತ್ಯಾಜ್ಯವನ್ನೆಲ್ಲ ಸಮೀಪದ ಹೊಲಗಳಲ್ಲಿಯೊ, ಖಾಲಿ ಜಾಗಗಳಲ್ಲಿಯೊ ಸುರಿಯುತ್ತಾರೆ. ಅದರಿಂದ ವಿಷಕಾರಕ ಪದಾರ್ಥಗಳು ಮತ್ತೆ ಭೂಮಿಯ ಒಡಲನ್ನೇ ಸೇರುತ್ತವೆ. ಹೊಲಗಳು ನಿಧಾನವಾಗಿ ಸತ್ವ ಕಳೆದುಕೊಂಡು ಬರಡಾಗಲೂಬಹುದು. ಎಲ್ಲೆಲ್ಲಿ ಇಂಥ ಸ್ಥಾವರಗಳು ಇವೆಯೊ ಅಲ್ಲೆಲ್ಲ ವರ್ಷಗಳ ನಂತರ ನೀರು ಶುದ್ಧೀಕರಣ ಪ್ರಕ್ರಿಯೆಯಲ್ಲಿ ಉತ್ಪನ್ನವಾದ ಅಪಾಯಕಾರಿ, ವಿಷಯುಕ್ತ ರಾಸಾಯನಿಕಗಳ ರಾಶಿ ಎಷ್ಟು ದೊಡ್ಡದಾಗಬಹುದು ಎನ್ನುವ ಸಣ್ಣ ಕಲ್ಪನೆ ಮಾಡಿಕೊಂಡರೂ ಮೈ ನಡುಗುತ್ತದೆ.
ಅಂತರ್ಜಲ ಮತ್ತು ಪರಿಸರದ ಮೇಲೆ ಬೀರುವ ಈ ವ್ಯತಿರಿಕ್ತ ಪರಿಣಾಮಗಳ ಹೊರತಾಗಿ ನೀರಿನ ಸರಿಯಾದ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೂ ಒಂದು ಸಮಸ್ಯೆಯೇ. ಅಗ್ಗದ ದರದಲ್ಲಿ ನೀರು ಸಿಗುತ್ತದೆ ಎನ್ನುವ ಕಾರಣದಿಂದಲೊ, ದೂರದಿಂದ ನೀರು ತರುವ ತಾಪತ್ರಯದಿಂದ ಮುಕ್ತಿ ಸಿಗುತ್ತದೆ ಎನ್ನುವ ಕಾರಣದಿಂದಲೊ 'ಮಿನರಲ್ ವಾಟರ್‌' ಅನ್ನೇ ಸ್ನಾನ, ಶೌಚ, ಪಾತ್ರೆ ತೊಳೆಯುವುದು ಇತ್ಯಾದಿ ಉದ್ದೇಶಗಳಿಗಾಗಿಯೂ ಬಳಸುವ ಅಪಾಯ ಇದ್ದೇ ಇರುತ್ತದೆ (ಬಹುತೇಕ ಕಡೆ ಅಡುಗೆ ಮತ್ತು ಕುಡಿಯುವ ಉದ್ದೇಶಕ್ಕಿಂತ ಇಂಥ ಕಾರಣಗಳಿಗಾಗಿಯೇ ಅಧಿಕ ನೀರು ಬಳಕೆಯಾಗುತ್ತಿದೆ ಎನ್ನುವುದು ಕೆಲವು ಸ್ವಯಂ ಸೇವಾ ಸಂಸ್ಥೆಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದಾಗ ಕಂಡುಬಂದಿದೆ ಎಂದು ಓದಿದ ನೆನಪು). ನಿಮ್ಮ ಉದ್ದೇಶ ಅಥವಾ ನಿಮ್ಮ ಕಾಳಜಿಯ ಪ್ರಾಮಾಣಿಕತೆ ಬಗ್ಗೆ ಅನುಮಾನವಿಲ್ಲ. ಮುಂದೆ ಎದುರಾಗಬಹುದಾದ ಅಪಾಯಗಳ ಬಗ್ಗೆ ಗಮನ ಸೆಳೆಯುವುದಷ್ಟೇ ನನ್ನ ಉದ್ದೇಶ.
ಈಗಾಗಲೇ ಪ್ರಸ್ತಾಪಿಸಿರುವಂತೆ ರಿವರ್ಸ್ ಒಸ್ಮೊಸಿಸ್ ಮೂಲಕ ಶುದ್ಧ ನೀರು ಪೂರೈಸುವುದು ತಾತ್ಕಾಲಿಕ ಪರಿಹಾರವಷ್ಟೇ. ಶಾಶ್ವತ ಕ್ರಮ ಎಂದರೆ ನಮ್ಮ ಸಾಂಪ್ರದಾಯಿಕ ವಿಧಾನಗಳಾದ ಮಳೆ ನೀರು ಕೊಯ್ಲು ಮತ್ತು ಜಲಮರುಪೂರಣಗಳಂಥ ವಿಧಾನಗಳ ಮೂಲಕ ನೀರಿಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು. ಅದರಿಂದ ತತ್‌ಕ್ಷಣದಲ್ಲಿ ಅಲ್ಲದಿದ್ದರೂ ಭವಿಷ್ಯದಲ್ಲಿ ಕುಡಿಯುವ ನೀರೂ ಸೇರಿದಂತೆ ಎಲ್ಲ ಅನಿವಾರ್ಯತೆಗಳನ್ನೂ ನೀಗಿಸಿಕೊಳ್ಳುವುದು ಸಾಧ್ಯವಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬರ ಸಾಮಾನ್ಯ ಎನ್ನುವುದು ನಿಜವಾದರೂ ಮಳೆ ಬಂದಾಗ ಆ ನೀರನ್ನು ವ್ಯರ್ಥ ಮಾಡದೇ ಮನೆ ಅಂಗಳದಲ್ಲಿ, ಹೊಲಗಳಲ್ಲಿ ಹಿಡಿದಿಟ್ಟುಕೊಳ್ಳುವುದನ್ನು ಕಲಿಸಿದರೆ; ಜಲಮರುಪೂರಣದ ಅನುಕೂಲಗಳನ್ನು ಮನವರಿಕೆ ಮಾಡಿಕೊಟ್ಟರೆ ಬರವನ್ನು ಸಮರ್ಥವಾಗಿ ಎದುರಿಸುವುದು ಕಷ್ಟ ಆಗಲಾರದು. ವಲಸೆ ಇತ್ಯಾದಿಗಳನ್ನು ತಪ್ಪಿಸುವ ಮೂಲಕ ಜನರ ಆರ್ಥಿಕ, ಸಾಮಾಜಿಕ ಮಟ್ಟ ಹೆಚ್ಚಿಸಲೂ ಸಾಧ್ಯವಾಗುತ್ತದೆ.
ಇಂತಹ ವಿಷಯಗಳ ಬಗ್ಗೆ ಒಂದು ಪ್ರಾತ್ಯಕ್ಷಿಕೆಯಿಂದಲೊ, ಒಂದು ಸಾಕ್ಷ್ಯಚಿತ್ರ ಪ್ರದರ್ಶನದಿಂದಲೊ ಅರಿವು ಮೂಡಿಸುವುದು ಸಾಧ್ಯವಿಲ್ಲ ಎನ್ನುವುದು ನಿಜ. ನೀರೆಚ್ಚರ ಮೂಡಿಸುವುದು ನಿರಂತರ ಪ್ರಕ್ರಿಯೆ. ಅದಕ್ಕಾಗಿ ನಿಮ್ಮ ಎಟಿಡಬ್ಲ್ಯೂಗಳ ಪಕ್ಕದಲ್ಲಿಯೊ, ಗ್ರಾಮದ ಕೇಂದ್ರ ಸ್ಥಳದಲ್ಲಿಯೋ ಪುಟ್ಟ ಜಾಗದಲ್ಲಾದರೂ ಕಾಯಂ ಜಾಗೃತಿ ಕೇಂದ್ರಗಳನ್ನು ತೆರೆಯಬಹುದು. ಜಲಮರುಪೂರಣ, ನೀರಿಂಗಿಸುವುದು, ಮಳೆ ನೀರು ಕೊಯ್ಲು ಇತ್ಯಾದಿಗಳ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ನಿಯಮಿತವಾಗಿ ಅಲ್ಲಿ ಹಮ್ಮಿಕೊಳ್ಳಬಹುದು. ಆ ಮೂಲಕವಾಗಿ ನೀರೆಚ್ಚರದ ಅರಿವು ಮೂಡಿಸುವ, ನೀರಿನ ಬಗ್ಗೆ ಸಮಗ್ರ ಮಾಹಿತಿ ನೀಡುವ ಕೆಲಸ ಮಾಡಬಹುದು. ಅಲ್ಲಿ ನೀರು ಸಂರಕ್ಷಣೆ ವಿಚಾರದಲ್ಲಿ ನಮ್ಮ ಹಿರಿಯರು ಹೊಂದಿರುವ ಪಾರಂಪರಿಕ ಜ್ಞಾನವನ್ನೂ ಬಳಸಿಕೊಳ್ಳಬಹುದು.  ಯುವ ಸಮುದಾಯ ಮತ್ತು ಸರ್ಕಾರೇತರ ಸಂಸ್ಥೆಗಳ ನೆರವನ್ನು ಇದಕ್ಕಾಗಿ ಪಡೆದುಕೊಳ್ಳಬಹುದು.
ಕೊನೆಯದಾಗಿ ಇಂಥ ಜಾಗೃತಿ ಕೇಂದ್ರಗಳು ಎಂಥ ಪರಿವರ್ತನೆ ತರಬಲ್ಲದು ಎನ್ನುವುದನ್ನು ಹೇಳಲೇಬೇಕು. ಗುಜರಾತ್‌ನ ಬರಪೀಡಿತ ಸುರೇಂದ್ರನಗರ ಜಿಲ್ಲೆಯ ಹಳ್ಳಿ ಸಾಯ್ಲಾ. ಅದೂ ಥೇಟ್ ನಮ್ಮ ಉತ್ತರ ಕರ್ನಾಟಕದ ಜಿಲ್ಲೆಗಳಂಥದ್ದೇ ಒಂದು ಜಿಲ್ಲೆ. ಸದಾ ಬರಗಾಲ. ಮಳೆ ಅನಿಶ್ಚಿತ. ಅಂತರ್ಜಲ ಪಾತಾಳ ಸೇರಿದೆ. ಇಂಥ ಸನ್ನಿವೇಶದಲ್ಲಿ ಅಲ್ಲಿ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್ ಕೆಲವರ್ಷಗಳ ಹಿಂದೆ ನೀರಿನ ಅರಿವು ಮೂಡಿಸುವ ಕೇಂದ್ರ ಆರಂಭಿಸಿತು. ಈಗ ಅಲ್ಲಿನ ಜನರ ಬಾಳು ಬಂಗಾರ. ವಲಸೆ ಹೋದವರು ಊರಿಗೆ ಮರಳಿದ್ದಾರೆ. ಹೊಲದಲ್ಲಿ ಹಸಿರು ನಳನಳಿಸುತ್ತಿದೆ. ಬರ ಬಂದರೂ ನೀರಿಗಾಗಿ ಜನ ಪರಿತಪಿಸುವುದಿಲ್ಲ.
ಇಂಥದ್ದೊಂದು ಪರಿವರ್ತನೆಯನ್ನು ನಮ್ಮ ರಾಜ್ಯದಲ್ಲೂ ತರುವ ಸಾಮರ್ಥ್ಯ ಖಂಡಿತವಾಗಿಯೂ ನಿಮಗೆ ಇದೆ ಎನ್ನುವ ಆಶಯ ನನ್ನೊಬ್ಬನದು ಮಾತ್ರವಲ್ಲ, ಸಮಸ್ತ ಕನ್ನಡಿಗರದ್ದು.

-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!