ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬಜೆಟ್‌ನಲ್ಲಿ ವಿದ್ಯುತ್‌ಗೆ ಸಿಗಲಿ ಇನ್ನಷ್ಟು ಉತ್ತೇಜನ

ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಪ್ರಸ್ತುತ ಬಜೆಟ್ ಚುನಾವಣಾ ವರ್ಷದ ಪೂರ್ಣ ಪ್ರಮಾಣದ ಪ್ರಥಮ ಬಜೆಟ್ ಆಗಿದೆ.

Srinivasa Murthy VN
Updated On : 14 Feb 2014, 1:04 am

ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಪ್ರಸ್ತುತ ಬಜೆಟ್ ಚುನಾವಣಾ ವರ್ಷದ ಪೂರ್ಣ ಪ್ರಮಾಣದ ಪ್ರಥಮ ಬಜೆಟ್ ಆಗಿದೆ. ದೂರದೃಷ್ಟಿಯುಳ್ಳ ನಾಯಕ ಸಿದ್ದರಾಮಯ್ಯ ಅವರು ಕಳೆದ ಪರಿಷ್ಕೃತ ಬಜೆಟ್ ಮಂಡಿಸಿದ್ದರಾದರೂ, ಸರ್ಕಾರದ ನಿಲುವು, ಪ್ರಗತಿಯ ಸಂಕೇತ ಹಾಗೂ ಜನರ ನಿರೀಕ್ಷೆಯನ್ನು ತಲುಪುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಬಜೆಟ್ ಅತ್ಯಂತ ಪ್ರಧಾನ ಪಾತ್ರ ವಹಿಸುತ್ತದೆ.
ರಾಜ್ಯದ ಪ್ರಗತಿಯನ್ನು ಭಿನ್ನವಾಗಿ ರೂಪಿಸುವ ಹಾಗೂ ಆ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕಿರುವ ಸಿದ್ದರಾಮಯ್ಯನವರು ಸಮಾಜ ಕಲ್ಯಾಣ ಕಾರ್ಯಕ್ರಮಗಳ ಜತೆಗೆ ದೂರದೃಷ್ಟಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ಜಾರಿಗೆ ತರುವತ್ತ ಗಂಭೀರ ಚಿಂತನೆ ನಡೆಸಬೇಕಿದೆ. ತಕ್ಷಣದ ಬಾಯಾರಿಕೆ ನೀಗಿಸುವ ಕಾರ್ಯ ಈ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಂದ ಆಗುತ್ತದೆ. ಆದರೆ ಜನರ ಆಶೋತ್ತರಗಳು ನಿಜವಾಗಿ ಈಡೇರುವುದು ದೀರ್ಘಾವಧಿ ಯೋಜನೆಗಳನ್ನು ಜಾರಿಗೆ ತರುವುದರಿಂದ ಮಾತ್ರ ಸಾಧ್ಯ. ಅದಕ್ಕೆ ಈ ಆಯವ್ಯಯ ಬಳಕೆ ಆಗಬೇಕು.
ದೀರ್ಘಾವಧಿ ಯೋಜನೆಗಳು ಯಾವುವು ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುವುದು ಸಹಜ. ಸಾವಿರಾರು ಮಂದಿಗೆ ಉದ್ಯೋಗ ನೀಡಬಲ್ಲ, ರಾಜ್ಯದ ಆದಾಯ ಹೆಚ್ಚಿಸುವ, ರಾಜಸ್ವ ಹರಿದು ರಾಜ್ಯದ ಬೊಕ್ಕಸ ತುಂಬಿಸುವ ಮಾದರಿಯ ಕಾರ್ಯಕ್ರಮಗಳು ದೀರ್ಘಾವಧಿ ಲಾಭ ತರುವಂಥವು. ಹಾಗಾಗೇ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಹಾಗೂ ವಿದ್ಯುತ್ ಕ್ಷೇತ್ರಕ್ಕೆ ಒತ್ತು ಕೊಡಬೇಕಿರುವುದಾಗಿದೆ.
ರೈತರಿಗೆ ಅದರಲ್ಲೂ ವಿಶೇಷವಾಗಿ ರಾಜ್ಯದ ಹಳೆ ಮೈಸೂರು ಹಾಗೂ ಬಯಲುಸೀಮೆ ಭಾಗದವರಿಗೆ ವಿದ್ಯುತ್ ಅನಿವಾರ್ಯವಾಗಿದೆ. ಫೆಬ್ರವರಿ ಆರಂಭಕ್ಕೆ ಮುನ್ನವೇ ರಾಜ್ಯದಲ್ಲಿ ಬೇಸಿಗೆ ವಾತಾವರಣ ಕೊಂಚ ಗಂಭೀರವಾಗಿಯೇ ಗೋಚರಿಸುತ್ತಿದೆ. ಈಗಾಗಲೇ ರಾಜ್ಯದಲ್ಲಿ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಮಟ್ಟ ಮೀರುತ್ತಿದೆ. ಹವಾಮಾನ ಇಲಾಖೆ ಕೂಡ ಪ್ರಸಕ್ತ ಸಾಲಿನ ಬೇಸಿಗೆ ಅತ್ಯಂತ ತೀವ್ರವಾಗಿರಲಿದೆ ಎಂದು ಹೇಳಿದೆ. ಈ ಎಲ್ಲಾ ಅಂಶವನ್ನೂ ಗಮನದಲ್ಲಿಟ್ಟು ನೋಡಿದಾಗ, ಈ ಬೇಸಿಗೆ ಬಯಲುಸೀಮೆ ರೈತರನ್ನು ಅಪಾರವಾಗಿ ಕಾಡಲಿದೆ ಎನ್ನುವುದು ಸ್ಪಷ್ಟ. ಈ ಭಾಗದಲ್ಲಿ ಅಂತರ್ಜಲ ಮಟ್ಟ ಅತ್ಯಂತ ಕುಸಿದಿದ್ದು, ಕುಡಿಯಲು, ಕೃಷಿ ಬಳಕೆಗೆ ಉಪಯೋಗಿಸಲು ಆಧರಿಸಿರುವ ನೀರನ್ನು ಮೇಲೆತ್ತಲು ವಿದ್ಯುತ್ ಬಳಕೆ ಅನಿವಾರ್ಯ. ಇಂತ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯುತ್ ಕೈಕೊಟ್ಟರೆ ನೀರಿಗಾಗಿ ಈ ಜನ ಪರಿತಪಿಸುವ ಸ್ಥಿತಿ ಎದುರಾಗಲಿದೆ.
ವಿದ್ಯುತ್ ಅವಲಂಬನೆ, ಬೇಡಿಕೆ ಹಾಗೂ ಅಗತ್ಯವನ್ನು ಗಮನದಲ್ಲಿಟ್ಟು ಯೋಚಿಸಿದಾಗ ರಾಜ್ಯ ಸರ್ಕಾರ ಇದಕ್ಕೊಂದು ಸ್ಪಷ್ಟ ನೀತಿ ಪ್ರಕಟಿಸುವುದು ಅಗತ್ಯವಾಗಿದೆ. ಪರಿಸರ ಸ್ನೇಹಿ ಹಾಗೂ ನವಿಕರಿಸಬಹುದಾದ ಇಂಧನಕ್ಕೆ ಉತ್ತೇಜನ ನೀಡುವ ಮೂಲಕ ರಾಜ್ಯದಲ್ಲಿ ಹಸಿರು ಕ್ರಾಂತಿಗೆ ಅವಕಾಶ ಮಾಡಿಕೊಡಬೇಕಿದೆ. ಆಗ ಮಾತ್ರ ಈ ಕಾರ್ಯ ದೇಶಕ್ಕೇ ಮಾದರಿಯಾಗಿ ಪರಿವರ್ತನೆಯಾಗುವಲ್ಲಿ ಸಂಶಯವಿಲ್ಲ. ಪವನ ಹಾಗೂ ಸೌರ ಶಕ್ತಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಹಸಿರು ಕ್ರಾಂತಿಯ ರಾಜ್ಯ ಎಂಬ ಹೆಗ್ಗಳಿಗೆಗೂ ಕರ್ನಾಟಕ ಪಾತ್ರವಾಗಲಿ ಎನ್ನುವುದು ನನ್ನ ಪ್ರಾಮಾಣಿಕ ಆಶಯ. ಅಲ್ಲದೇ ವಿದ್ಯುತ್ ಉತ್ಪಾದನೆ ವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಕೋರುವುದು ಅತ್ಯಂತ ಮುಖ್ಯ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ರಾಜ್ಯದ ವಿದ್ಯುತ್ ಉತ್ಪಾದನೆ ವೃದ್ಧಿಗೆ ಹೆಚ್ಚುವರಿ ಕಲ್ಲಿದ್ದಲು ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಈಗಾಗಲೇ ಮನವಿ ಮಾಡಿದ್ದಾರೆ. ಅದೇ ರೀತಿ ನಮ್ಮ ಮುಖ್ಯಮಂತ್ರಿಗಳು ಕೂಡ ಕರ್ನಾಟಕಕ್ಕೆ ಹೆಚ್ಚುವರಿ ಕಲ್ಲಿದ್ದಲು ಹಂಚಿಕೆ ಮಾಡುವಂತೆ ಮನವಿ ಸಲ್ಲಿಸಿದರೆ ಭವಿಷ್ಯದಲ್ಲಿ ಇದು ಫಲದಾಯಕವಾಗಲಿದೆ. ಅಲ್ಲದೇ ಅನ್ಯ ರಾಷ್ಟ್ರಗಳಿಂದ ಕಲ್ಲಿದ್ದನ್ನು ಹೆಚ್ಚಾಗಿ ಆಮದು ಮಡಿಕೊಂಡು ರಾಜ್ಯದಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯ ಮಾಡಬೇಕು. ಈ ಕಾರ್ಯ ಆದಾಗ ಮಾತ್ರ ರಾಜ್ಯ ವಿದ್ಯುತ್ ಸ್ವಾವಲಂಬಿ ಆಗಲು ಸಾಧ್ಯ.
ಪ್ರಸ್ತುತ ರಾಷ್ಟ್ರದ ಪ್ರಮುಖ ಮಹಾನಗರಗಳಾದ ದಿಲ್ಲಿ, ಚೆನ್ನೈ, ಮುಂಬಯಿಗಳು ವಿದ್ಯುತ್ ಸ್ವಾವಲಂಬಿಗಳಾಗಿವೆ. ಇದೇ ನಿಟ್ಟಿನಲ್ಲಿ ಬೆಂಗಳೂರು ಕೂಡ ಇಂಥದ್ದೊಂದು ಪ್ರಮುಖ ನಗರಗಳ ಪಟ್ಟಿಗೆ ಸೇರ್ಪಡೆ ಆಗಲು ಹೆಚ್ಚು ಕಾಲಾವಕಾಶ ಬೇಕಿಲ್ಲ. ಸೌರ, ಪವನ ಹಾಗೂ ಜಲವಿದ್ಯುತ್ ಉತ್ಪಾದನೆಗೆ ರಾಜ್ಯದಲ್ಲಿ ಪ್ರಸ್ತುತ ಒತ್ತು ಸಿಗುತ್ತಿದೆ. ಅದೇ ರೀತಿ ಇದೀಗ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಧಾಬೋಲ್‌ನಿಂದ ಕರ್ನಾಟಕದ ರಾಮನಗರ ಜಿಲ್ಲೆಯ ಬಿಡದಿಗೆ ಗ್ಯಾಸ್ ಪೈಪ್ ಲೈನ್ ಅಳವಡಿಸುವ ಕಾರ್ಯ ಬಹುತೇಕ ಪೂರೈಸಿದೆ. ಇದು ಪೂರ್ಣ ಪ್ರಮಾಣದಲ್ಲಿ ಲಭ್ಯವಾದರೆ ನಗರದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ತನ್ಮೂಲಕ ವಿದ್ಯುತ್ ಸ್ವಾವಲಂಬನೆ ಕೂಡ ಅತ್ಯಂತ ಸುಲಭವಾಗಿ ಆಗಲಿದೆ.
ರಾಜ್ಯದಲ್ಲಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ ಪ್ರಮಾಣದ ಗುರಿ ಸದ್ಯ 2400 ಮೆಗಾವ್ಯಾಟ್ ಇದೆ. ಇದು 2014ಕ್ಕೆ 6600 ಮೆಗಾ ವ್ಯಾಟ್‌ಗೆ ಹೆಚ್ಚಳವಾಗಲಿದೆ ಎನ್ನುವ ಮಾಹಿತಿ ಇದೆ. ಎಲ್ಲಾ ವಿಭಗಗಳಿಂದಲೂ ಸೇರಿಸಿ ಒಟ್ಟು 900 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ 2014ರ ಹೊತ್ತಿಗೆ ಆಗಲಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿನ ನವೀಕರಿಸಬಹುದಾದ ವಿದ್ಯುತ್‌ನ ಗುರಿ 2009-2014ಕ್ಕೆ ಹಮ್ಮಿಕೊಂಡಿರುವ ವಿವರ ಗಮನಿಸಿದಾಗ ನಮ್ಮ ಸಾಧನೆ ಇನ್ನಷ್ಟು ಆಗಬೇಕು ಅನ್ನಿಸುತ್ತದೆ. ಪವನ ವಿದ್ಯುತ್ ಕ್ಷೇತ್ರದಲ್ಲಿ ನಮ್ಮ ಸಂಭವನೀಯ ಗುರಿ 12,950 ಮೆಗಾವ್ಯಾಟ್ ಆಗಿದ್ದು, ಅಳವಡಿಸಿರುವ ಸಾಮರ್ಥ್ಯ 1,368 ಮೆಗಾವ್ಯಾಟ್ ಅಗಿದೆ. 2014ಕ್ಕೆ ಹೆಚ್ಚುವರಿಯಾಗಿ ಅಳವಡಿಸಲು ನಿರ್ಧರಿಸಿರುವ ಗುರಿ 2969 ಮೆಗಾವ್ಯಾಟ್ ಆಗಲಿದೆ. ಸಣ್ಣ ಹಾಗೂ ಕಿರು ಜಲ ವಿದ್ಯುತ್ ಕ್ಷೇತ್ರದಲ್ಲಿ ನಮ್ಮ ಸಂಭವನೀಯ ಗುರಿ 3,000 ಮೆಗಾವ್ಯಾಟ್ ಆಗಿದ್ದು, ಅಳವಡಿಸಿರುವ ಸಾಮರ್ಥ್ಯ 416 ಮೆಗಾವ್ಯಾಟ್ ಅಗಿದೆ. 2014ಕ್ಕೆ ಹೆಚ್ಚುವರಿಯಾಗಿ ಅಳವಡಿಸಲು ನಿರ್ಧರಿಸಿರುವ ಗುರಿ 600 ಮೆಗಾವ್ಯಾಟ್ ಆಗಲಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ ಕ್ಷೇತ್ರದಲ್ಲಿ ನಮ್ಮ ಸಂಭವನೀಯ ಗುರಿ 1,500 ಮೆಗಾವ್ಯಾಟ್ ಆಗಿದ್ದು, ಅಳವಡಿಸಿರುವ ಸಾಮರ್ಥ್ಯ 535 ಮೆಗಾವ್ಯಾಟ್ ಅಗಿದೆ. 2014ಕ್ಕೆ ಹೆಚ್ಚುವರಿಯಾಗಿ ಅಳವಡಿಸಲು ನಿರ್ಧರಿಸಿರುವ ಗುರಿ 281 ಮೆಗಾವ್ಯಾಟ್ ಆಗಲಿದೆ. ಸಾವಯವ ಅನಿಲ ವಿದ್ಯುತ್ ಕ್ಷೇತ್ರದಲ್ಲಿ ನಮ್ಮ ಸಂಭವನೀಯ ಗುರಿ 1,000 ಮೆಗಾವ್ಯಾಟ್ ಆಗಿದ್ದು, ಅಳವಡಿಸಿರುವ ಸಾಮರ್ಥ್ಯ 81 ಮೆಗಾವ್ಯಾಟ್ ಅಗಿದೆ. 2014ಕ್ಕೆ ಹೆಚ್ಚುವರಿಯಾಗಿ ಅಳವಡಿಸಲು ನಿರ್ಧರಿಸಿರುವ ಗುರಿ 300 ಮೆಗಾವ್ಯಾಟ್ ಆಗಲಿದೆ. ತ್ಯಾಜ್ಯ ವಿದ್ಯುತ್ ಕ್ಷೇತ್ರದಲ್ಲಿ ನಮ್ಮ ಸಂಭವನೀಯ ಗುರಿ 135 ಮೆಗಾವ್ಯಾಟ್ ಆಗಿದ್ದು, ಅಳವಡಿಸಿರುವ ಸಾಮರ್ಥ್ಯ ಶೂನ್ಯವಾಗಿದೆ. 2014ಕ್ಕೆ ಹೆಚ್ಚುವರಿಯಾಗಿ ಅಳವಡಿಸಲು ನಿರ್ಧರಿಸಿರುವ ಗುರಿ 50 ಮೆಗಾವ್ಯಾಟ್ ಆಗಲಿದೆ.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹಾದು ಬರುವ ಗ್ಯಾಸ್ ಪೈಪ್‌ಲೈನ್ ರಾಜ್ಯದ ಪ್ರಮುಖ ನಗರಗಳಾದ ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ ಮಾರ್ಗವಾಗಿ ಬರಲಿದೆ. ಈ ಎಲ್ಲಾ ತಾಣಗಳಲ್ಲೂ ಪ್ರತ್ಯೇಕ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಿ ಇಲ್ಲಿಯೇ ವಿದ್ಯುತ್ ಉತ್ಪಾದಿಸಿ ಇಲ್ಲಿ ಸ್ಥಾಪನೆಗೊಳ್ಳುವ ಕೈಗಾರಿಕೆಗಳಿಗೆ ನೇರವಾಗಿ ನೀಡಬಹುದಾಗಿದೆ. ಈ ಮೂಲಕ ಬೆಂಗಳೂರು ಕೇಂದ್ರಿತವಾಗುತ್ತಿರುವ ಕೈಗಾರಿಕಾ ಬೆಳವಣಿಗೆ, ಒತ್ತಡ ಹಾಗೂ ಪ್ರಗತಿ ರಾಜ್ಯದ ಇತರೆ ನಗರಗಳಿಗೂ ವಿಸ್ತರಣೆ ಆಗಲಿದೆ. ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಟ್ಟರೆ ರಾಜ್ಯದ ರಾಜಧಾನಿ ಬೆಂಗಳೂರಿನ ಮೇಲೆ ಹೆಚ್ಚುತ್ತಿರುವ ಹಲವು ಒತ್ತಡಗಳು ಕಡಿಮೆ ಆಗಲಿವೆ. ಕೈಗಾರಿಕಾ ವಿಕೇಂದ್ರೀಕರಣವಾಗಿ ರಾಜ್ಯದ ಪ್ರಗತಿ ಇನ್ನಷ್ಟು ವಿಸ್ತಾರವಾಗಲಿದೆ.
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಗೇಲ್ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿ.(ಕೆಪಿಟಿಸಿಎಲ್) ಒಪ್ಪಂದ ಮಾಡಿಕೊಂಡಿವೆ. ಈ ಮೂಲಕ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪೈಪ್‌ಲೈನ್ ಮೂಲಕ ನಿತ್ಯ 16 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯುಬಿಕ್ ಮೀಟರ್ ಎಲ್‌ಎನ್‌ಜಿ ಅನಿಲ ನಿತ್ಯ ಲಭ್ಯವಾಗಲಿದೆ. ಇದನ್ನು ಬಳಸಿಕೊಂಡು ಬಿಡದಿಯಲ್ಲಿ 1400 ಮೆಗಾವ್ಯಾಟ್ ವಿದ್ಯುತ್ ಹಾಗೂ ಯಲಹಂಕದಲ್ಲಿ 350 ಮೆಗಾವ್ಯಾಟ್ ವಿದ್ಯುತ್‌ನ್ನು ಕೆಪಿಟಿಸಿಎಲ್ ಉತ್ಪಾದಿಸಲಿದೆ. ಒಟ್ಟು ರಾಜ್ಯದಲ್ಲಿ ಪ್ರಸ್ತುತ 1500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಪೂರ್ಣಪ್ರಮಾಣದಲ್ಲಿ ಇಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾದಾಗ ರಾಜ್ಯಕ್ಕೆ 1750 ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗಲಿದೆ. ಆದರೆ ಇದಕ್ಕೆ ನಾವು ಕಾಯಬೇಕು. ಹಲವು ವರ್ಷವಲ್ಲ, ಅಂದಾಜಿನ ಪ್ರಕಾರ ಮುಂದಿನ ಎರಡು ವರ್ಷಗಳು ಅಂತ ಹೇಳಲಾಗುತ್ತಿದೆ. ಕೇಂದ್ರ ಇಂಧನ ಇಲಾಖೆ ಮೂಲಗಳ ಪ್ರಕಾರ ಇದಕ್ಕೆ ತಗಲುವ ವೆಚ್ಚ 2,800 ಕೋಟಿ ರು. ಇದು ದೊಡ್ಡ ಮೊತ್ತ ಎನಿಸಿದರೂ, ವಿದ್ಯುತ್ ಸ್ವಾವಲಂಬನೆ, ರಾಜ್ಯದ ಪ್ರಗತಿ ಹಾಗೂ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಲ್ಲಿ ಯೋಚಿಸಿದಾಗ ಅಷ್ಟೇನು ದೊಡ್ಡ ಮೊತ್ತವಾಗಿ ಗೋಚರಿಸದು. ಈಗಾಗಲೇ ಬಿಡದಿಯಲ್ಲಿ ಈ ಯೋಜನೆಗಾಗಿ 170 ಎಕರೆ ಭೂಮಿ ಕೂಡ ನೀಡಲಾಗಿದ್ದು, ಬೆಸ್ಕಾಂ ವತಿಯಿಂದ ನೀರಿನ ಪೂರೈಕೆ ಆಗಲಿದೆ.
ವಿಶೇಷ ಅಂದರೆ ರಾಜ್ಯದಲ್ಲಿ ದ್ರವರೂಪದ ಅನಿಲದಿಂದ ವಿದ್ಯುತ್ ಉತ್ಪಾದನೆ ಮಾಡುವುದರಿಂದ ವಿದ್ಯುತ್ ಉತ್ಪಾದನೆ ವೆಚ್ಚ ಕೂಡ ಕಡಿಮೆ ಆಗಿ ಇಂಧನ ಇಲಾಖೆಗೆ 800 ಕೋಟಿ ರೂ. ಉಳಿತಾಯ ಆಗಲಿದೆ ಎನ್ನುವುದು ಸಂತಸದ ಸಂಗತಿ. ಉಳಿತಾಯದ ಜತೆಗೆ ಹಸಿರು ಇಂಧನ ಬಳಕೆಯೂ ಸಾಧ್ಯವಾಗಲಿದೆ. ಅಲ್ಲದೇ ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಆಗುವ ಮೂಲಕ ಪರಿಸರವೂ ಶುದ್ಧವಾಗಲಿದೆ. ಅನಿಲ ಮಾರ್ಗ ಕೂಡ ಸುರಕ್ಷಿತ ಅನ್ನುವುದು ಸಮಾಧಾನಕರ ಸಂಗತಿ. ಸುಮಾರು 850 ಕಿ.ಮೀ. ದೂರದ ಈ ಪೈಪ್‌ಲೈನ್ ಅಳವಡಿಕೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ನೆಲದಿಂದ ಐದು ಅಡಿ ಆಳದಲ್ಲಿ ಸುರಕ್ಷಿತವಾಗಿ ಅಳವಡಿಸಿ ತರಲಾಗಿದೆ. ಈ ಕಾರ್ಯದಿಂದಾಗಿ ಭೂ ಒತ್ತುವರಿ, ಕಾನೂನು ಪ್ರಕಾರ ಪರಿಹಾರ ನೀಡುವುದು ಹಾಗೂ ಇತರೆ ಕಾರ್ಯಗಳಿಗೆ ಎದುರಾಗುವ ಕೆಲ ತೊಡಕುಗಳೂ ನಿವಾರಣೆ ಆಗಿವೆ.
ಯಲಹಂಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ 350 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಹೊಸದಲ್ಲ. ಬದಲಾಗಿ ಇಲ್ಲಿರುವ ಡೀಸೆಲ್ ಚಾಲಿತ 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕದ ಬದಲಾದ ರೂಪ ಆಗಲಿದೆ. ಈ ಮೂಲಕ ರಾಜ್ಯದಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆ ಆಗಲಿ, ಅದರ ಲಾಭ ನಮ್ಮ ರಾಜ್ಯಕ್ಕೆ ಮಾತ್ರವಲ್ಲ, ವಿದ್ಯುತ್ ಕೊರತೆ ಎದುರಿಸುತ್ತಿರುವ ಅಕ್ಕಪಕ್ಕದ ರಾಜ್ಯಕ್ಕೂ ನೀಡುವಷ್ಟು ಅನುಕೂಲ ಒದಗಿ ಬರಲಿ ಎನ್ನುವುದು ನನ್ನ ಆಶಯ.
ಇದಲ್ಲದೇ ನಗರ ಪ್ರದೇಶದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಹೇರಳ ಅವಕಾಶ ಇರುತ್ತದೆ. ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಅವಕಾಶ ಇದೆ. ಗುಜರಾತ್‌ನಲ್ಲಿ ಕೂಡ ಎಂಒಯು ಮಾದರಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈ ಎಲ್ಲಾ ಮಾದರಿಗಳು ಅನ್ವಯವಾದರೆ ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ನಾವು ದೊಡ್ಡ ಹೆಸರು ಮಾಡಲು ಸಾಧ್ಯ. ಸಾಕಷ್ಟು ಖಾಸಗಿ ವಿದ್ಯುತ್ ಉತ್ಪಾದನಾ ಸಂಸ್ಥೆಗಳು ಕರ್ನಾಟಕಕ್ಕೆ ಬರಲು ಸಿದ್ಧವಿವೆ. ರಾಜ್ಯದಲ್ಲಿಯೂ ಒಂದಿಷ್ಟು ಭೂಮಿ ಗುರುತಿಸಿ ಅವಕಾಶ ಕಲ್ಪಿಸಿದರೆ ಭವಿಷ್ಯದಲ್ಲಿ ವಿದ್ಯುತ್ ಸ್ವಾವಲಂಬನೆ ಹಾಗೂ ಬೇರೆ ರಾಜ್ಯಗಳಿಗೆ ವಿದ್ಯುತ್ ಪೂರೈಸುವ ನಮ್ಮ ಆಶಯಕ್ಕೆ ಬಲ ಬರಲಿದೆ. ವಿದ್ಯುತ್ ಉತ್ಪಾದನೆ ಹೆಚ್ಚು ಕಷ್ಟದ ಕೆಲಸ ಅಲ್ಲ, ಆರ್ಥಿಕವಾಗಿ ದುಬಾರಿಯೂ ಎನಿಸದು. ಯೂನಿಟ್ ಮೇಲಿನ ದರ ಕೊಂಚ ಹೆಚ್ಚಾಗಬಹುದು, ಆದರೂ ಹಸಿರು ವಿದ್ಯುತ್ ಸಿಗುವಾಗ ಅದು ಪ್ರಮುಖ ಎನಿಸದು. ಭವಿಷ್ಯದ 25 ವರ್ಷದ ಬೇಡಿಕೆ ಆಧರಿಸಿ ಅದಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದಿಸುವ ಹಾಗೂ ಅದಕ್ಕೆ ಬೇಕಾದ ನವೀಕರಿಸಬಹುದಾದ ಇಂಧನ ಮೂಲ ಹುಡುಕುವ ಕಾರ್ಯ ಈಗಿನಿಂದಲೇ ಆಗಬೇಕಿದೆ.  
ವಿದ್ಯುತ್ ಖರೀದಿ ಒಪ್ಪಂದ (ಪಿಪಿಎ) ಮೂಲಕ ರಾಜ್ಯದಲ್ಲೂ ಹೇರಳ ಹಸಿರು ವಿದ್ಯುತ್ ಉತ್ಪಾದಿಸುವ ಅವಕಾಶ ಇದೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಏನಿಲ್ಲವೆಂದರೂ 3ರಿಂದ 4 ಸಾವಿರ ಮೆಗಾವ್ಯಾಟ್ ಉತ್ಪಾದಿಸುವ ಗುರಿ ಸಾಧಿಸುವುದು ಕಷ್ಟವಾಗದು. ಐದು ವರ್ಷ ಆಡಳಿತಾವಧಿ ಪೂರ್ಣಗೊಳ್ಳುವುದರೊಳಗೆ 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿ ಆ ನಿಟ್ಟಿನಲ್ಲಿ ಸಾಗಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಒಂದು ಮಹತ್ವದ ನಿಲುವು ಕೈಗೊಂಡು ಆದಷ್ಟು ಶೀಘ್ರ ಆಚರಣೆಗೂ ತರಬೇಕಿದೆ. ಆಗ ಮಾತ್ರ ನಾವು ಭವಿಷ್ಯದಲ್ಲಿ ವಿದ್ಯುತ್ ಸ್ವಾವಲಂಬಿ ಬೆಂಗಳೂರು ಮಹಾನಗರವನ್ನು ಕಾಣಲು ಸಾಧ್ಯ.

-ಡಾ. ಸುಧಾಕರ್ ಕೆ.
mlachickballapur@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement